ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಮುಸ್ಸೊಲಿನಿಯ ಮೊದಲ ಮಡದಿ ಮತ್ತು ಮಗನ ಮರುಕಗಾಥೆ

ಒಂದೆರಡು ಬಾರಿ ಸಿಟ್ಟಿನಿಂದ ಸಹಪಾಠಿಗಳನ್ನು ಇರಿದ ಘಟನೆಗಳೂ ನಡೆದಿದ್ದವು. ಒಟ್ಟಾರೆಯಾಗಿ ಇತ್ತ ಅಷ್ಟೇನೂ ಜನಬಲವೂ ಇಲ್ಲದ, ಅತ್ತ ಧನಬಲವೂ ಇಲ್ಲದ, ಆದರೆ ಕಂಗಳಲ್ಲಿ ಸಾಕಷ್ಟು ಕನಸುಗಳಿದ್ದ ವ್ಯಕ್ತಿತ್ವ ಆತನದು. ಆ ಸಮಯದಲ್ಲಿ ಮುಸ್ಸೊಲಿನಿಗೆ ಒಬ್ಬಳು ಪ್ರೇಯಸಿಯಿದ್ದಳು. ಇಡಾ ಡೆಲ್ಸರ್ ಎಂದು ಆಕೆಯ ಹೆಸರು.

ಮುಸ್ಸೊಲಿನಿಯ ಮೊದಲ ಮಡದಿ ಮತ್ತು ಮಗನ ಮರುಕಗಾಥೆ

ತಿಳಿರು ತೋರಣ

srivathsajoshi@yahoo.com

ಅವಂಟಿ!’ ಎಂಬ ಹೆಸರಿನ ಇಟಾಲಿಯನ್ ವೃತ್ತಪತ್ರಿಕೆಯ ಸಂಪಾದಕನಾಗಿ ನೇಮಕಗೊಂಡಾಗ ಬೆನಿಟೊ ಮುಸ್ಸೊಲಿನಿಯ ವಯಸ್ಸು 30ರ ಆಸುಪಾಸು. ಆಗಿನ್ನೂ ಆತ ಸಮಾಜವಾದಿ ಧೋರಣೆ ಯವನೇ ಆಗಿದ್ದನು. ಆತ ಸೇರಿಕೊಂಡಿದ್ದ ಪತ್ರಿಕೆಯೂ ಇಟಲಿಯ ಸೋಷಿಯಲಿಸ್ಟ್ ಪಕ್ಷದ ಮುಖ ವಾಣಿಯೇ ಆಗಿತ್ತು. ಇಟಾಲಿಯನ್ ಭಾಷೆಯಲ್ಲಿ Avanti ಎಂದರೆ ಇಂಗ್ಲಿಷ್‌ನಲ್ಲಿ Forward ಎಂಬ ಅರ್ಥವಂತೆ. ಪುರೋಗಾಮಿ ಪ್ರಜಾಪ್ರಭುತ್ವದ ಚಿಂತನೆ ಆ ಪಾರ್ಟಿಯದೂ, ಪತ್ರಿಕೆಯದೂ ಮತ್ತು ಅಲ್ಲಿಯವರೆಗೆ ಮುಸ್ಸೊಲಿನಿಯದೂ. 1914ರಲ್ಲಿ ಮೊದಲ ಪ್ರಪಂಚಯುದ್ಧ ಆರಂಭವಾಗು ವವರೆಗೂ ಮುಸ್ಸೊಲಿನಿ ಅವಂಟಿ ಪತ್ರಿಕೆಗೆ ಕೆಲಸ ಮಾಡಿದ್ದನು. ಯುದ್ಧದ ಬಗೆಗೆ ಸೋಷಿಯಲಿಸ್ಟ್ ಪಾರ್ಟಿಯದು ತಟಸ್ಥ ಧೋರಣೆಯಾದರೆ ಮುಸ್ಸೊಲಿನಿಗೆ ಎಲ್ಲಿಲ್ಲದ ಸಮರೋತ್ಸಾಹ.

ಇಟಲಿ ದೇಶವೂ ಯುದ್ಧದಲ್ಲಿ ಸೇರಿಕೊಳ್ಳಬೇಕೆಂಬುದು ಆತನ ಉತ್ಕಟ ಇಚ್ಛೆ. ಆ ಭಿನ್ನಾಭಿಪ್ರಾಯ ದಿಂದಾಗಿಯೇ ಆತ ಅವಂಟಿ ಪತ್ರಿಕೆಯನ್ನು ಬಿಡಬೇಕಾಯಿತು. ಯುದ್ಧಕ್ಕೆ ಪ್ರಚೋದನೆ ನೀಡುತ್ತ ತನ್ನದೇ ಮಾಲೀಕತ್ವದ ಹೊಸದೊಂದು ಪತ್ರಿಕೆಯನ್ನು ಆರಂಭಿಸಬೇಕೆಂದು ಮುಸ್ಸೊಲಿನಿ ಯೋಜನೆ ಹಾಕಿಕೊಂಡನು. ಅದಕ್ಕೆಂದೇ Il Popolo d’Italia ಎಂದು ಪತ್ರಿಕೆಗೆ ಹೆಸರಿಟ್ಟನು.

ಇಂಗ್ಲಿಷ್‌ನಲ್ಲಿ ಆ ಹೆಸರಿನ ಅರ್ಥ The People of Italy ಎಂದು. ಸ್ವಂತ ಪತ್ರಿಕೆ ನಡೆಸುವು ದೆಂದರೆ ಬಂಡವಾಳ ಬೇಕಲ್ಲ? ಮುಸ್ಸೊಲಿನಿ ಆಗರ್ಭ ಶ್ರೀಮಂತನೇನಲ್ಲ. ಆತನ ತಂದೆ ಒಬ್ಬ ಕಮ್ಮಾರ ವೃತ್ತಿಯವನಾಗಿದ್ದನು. ಶಾಲಾಬಾಲಕನಾಗಿದ್ದಾಗಲೇ ಮುಸ್ಸೊಲಿನಿಯದು ಉಗ್ರ, ಮುಂಗೋಪಿ ಸ್ವಭಾವ.

ಒಂದೆರಡು ಬಾರಿ ಸಿಟ್ಟಿನಿಂದ ಸಹಪಾಠಿಗಳನ್ನು ಇರಿದ ಘಟನೆಗಳೂ ನಡೆದಿದ್ದವು. ಒಟ್ಟಾರೆಯಾಗಿ ಇತ್ತ ಅಷ್ಟೇನೂ ಜನಬಲವೂ ಇಲ್ಲದ, ಅತ್ತ ಧನಬಲವೂ ಇಲ್ಲದ, ಆದರೆ ಕಂಗಳಲ್ಲಿ ಸಾಕಷ್ಟು ಕನಸುಗಳಿದ್ದ ವ್ಯಕ್ತಿತ್ವ ಆತನದು. ಆ ಸಮಯದಲ್ಲಿ ಮುಸ್ಸೊಲಿನಿಗೆ ಒಬ್ಬಳು ಪ್ರೇಯಸಿಯಿದ್ದಳು. ಇಡಾ ಡೆಲ್ಸರ್ ಎಂದು ಆಕೆಯ ಹೆಸರು.

ಮಿಲಾನ್ ನಗರದಲ್ಲಿ ಆಕೆ ಒಂದು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ಮುಸ್ಸೊಲಿನಿ ಮತ್ತು ಇಡಾ ಪರಸ್ಪರ ಪ್ರೀತಿಸಿ ಮದುವೆಯಾದರು. ಇಡಾ ತನ್ನ ಬ್ಯೂಟಿ ಪಾರ್ಲರನ್ನು ಮಾರಿದಳು. ತನ್ನಲ್ಲಿದ್ದ ಆಭರಣಗಳನ್ನೂ ಗಿರವಿಗೆ ಇಟ್ಟಳು. ಬಂದ ದುಡ್ಡನ್ನು ಪತ್ರಿಕೆ ಆರಂಭಿಸುವುದಕ್ಕೆ ಬಂಡವಾಳ ವೆಂದು ಮುಸ್ಸೊಲಿನಿಯ ಕೈಗಿತ್ತಳು. ಪತ್ರಕರ್ತ ಮುಸ್ಸೊಲಿನಿ 1915ರಲ್ಲಿ ಪುತ್ರಕರ್ತನೂ ಆದನು. ಮಗುವಿಗೆ ಬೆನಿಟೊ ಅಲ್ಬಿನೊ ಮುಸ್ಸೊಲಿನಿ ಎಂದೇ ಹೆಸರಿಟ್ಟರು.

ಇದನ್ನೂ ಓದಿ: Srivathsa Joshi Column: ಕಬ್ಬಿಗರ ರಚನೆ ಕಬ್ಬಿಣದ ಕಡಲೆಯಾಗದೆ ಕಬ್ಬಿನ ರಸವಾದಾಗ...

ಹೆಸರಿನ ಗೊಂದಲ ಅನಿಸಿದರೆ ‘ಜೂನಿಯರ್ ಮುಸ್ಸೊಲಿನಿ’ ಎನ್ನಿ. ಅಂದಹಾಗೆ ಸೀನಿಯರ್ ಮುಸ್ಸೊಲಿನಿಯ ಪೂರ್ಣ ಹೆಸರು ಬೆನಿಟೊ ಎಮಿಲ್‌ಕೇರ್ ಆಂಡ್ರಿಯಾ ಮುಸ್ಸೊಲಿನಿ ಎಂಬು ದಾಗಿತ್ತು. ಯಾವ ಕೆಟ್ಟ ಗಳಿಗೆಯಲ್ಲಿ ಹುಟ್ಟಿತ್ತೋ ಪಾಪ, ಆ ಪಾಪುವಿಗೆ ಒಂದು ತಿಂಗಳಾಗುವು ದರೊಳಗೆ ಹಿರಿಯ ಮುಸ್ಸೊಲಿನಿ ಒಂದು ದಿನ ಇದ್ದಕ್ಕಿದ್ದಂತೆ- ಅಥವಾ ಸಿದ್ಧಾರ್ಥಬುದ್ಧನಂತೆ ಎನ್ನೋಣ- ಮಡದಿ ಮತ್ತು ಮಗನನ್ನು ಬಿಟ್ಟು ಎದ್ಹೋದನು!

ಎಲ್ಲಿಗೆ? ಅದಾಗಲೇ ಅವನಿಗೆ ಪರಿಚಯವಾಗಿದ್ದ ರಚೆಲ್ ಗಿಯ್ಡಿ ಎಂಬ ಮಹಿಳೆಯಿದ್ದಲ್ಲಿಗೆ! ಆಮೇಲೆ ಮುಸ್ಸೊಲಿನಿ ಆಕೆಯನ್ನೇ ಮದುವೆಯೂ ಆದನು, ಇಡಾ ಡೆಲ್ಸರ್‌ಗೆ ವಿಚ್ಛೇದನ ಕೊಡದೆಯೇ. ಅಲ್ಲಿಂದ ಶುರುವಾಯ್ತು ನೋಡಿ ಆ ನತದೃಷ್ಟ ಅಮ್ಮ-ಮಗನ ಕರುಣಾಜನಕ ಕಥೆ. ಇಟಲಿಯು ಕೊನೆಗೂ 1915ರಲ್ಲಿ ಪ್ರಪಂಚಯುದ್ಧದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿತು.

ಸಮರೋತ್ಸಾಹಿ ಮುಸ್ಸೊಲಿನಿ ಇಟಲಿಯ ಸೈನ್ಯವನ್ನು ಸೇರಿಕೊಂಡನು. ಯುದ್ಧ ಮುಗಿದ ಮೇಲೆ ರಾಜಕೀಯ ಪ್ರವೇಶಿಸಿ 1921ರಲ್ಲಿ ನ್ಯಾಷನಲ್ ಫ್ಯಾಸಿಸ್ಟ್ ಪಾರ್ಟಿಯನ್ನು ಆರಂಭಿಸಿದನು. ನಿರಂಕುಶ ಪ್ರಭುತ್ವ ಎಂದು ಪಾರ್ಟಿಯ ಹೆಸರಿನಲ್ಲೇ ಸೂಚನೆಯಿತ್ತು. ಅದೇ ವರ್ಷ ಆತ ಇಟಲಿಯ ಸಂಸತ್ಸದಸ್ಯನಾಗಿಯೂ ಚುನಾಯಿತನಾದನು.

62 R

ಬರೀ ಸಂಸತ್ಸದಸ್ಯನಾಗಿದ್ದು ಏನು ಪ್ರಯೋಜನ ಪ್ರಧಾನಮಂತ್ರಿಯೇ ಆಗುವೆನು ಎಂದುಕೊಂಡ ಮುಸ್ಸೊಲಿನಿ 1922ರಲ್ಲಿ ಸುಮಾರು 25000 ಸೇನಾಸದೃಶ ಯೋಧರೊಡನೆ (ಕಪ್ಪಂಗಿ ದಳ ಎಂದೇ ಪ್ರಸಿದ್ಧಿ) ರೋಮ್ ನಗರಕ್ಕೆ ಮುತ್ತಿಗೆ ಹಾಕಿದನು. ಆಶ್ಚರ್ಯವೆಂಬಂತೆ ಅಲ್ಲಿ ರೋಮ್ ಚಕ್ರವರ್ತಿ ಯಿಂದ ಯಾವೊಂದು ಪ್ರತಿರೋಧವೂ ಕಂಡುಬರಲಿಲ್ಲ!

ಇಟಲಿಯ ಪ್ರಧಾನಿ ಹುದ್ದೆಗೆ ಮುಸ್ಸೊಲಿನಿಗೆ ಒಪ್ಪಿಗೆಯ ಮುದ್ರೆ ಸಿಕ್ಕಿತು. ಅಧಿಕಾರದ ಗದ್ದುಗೆ ಯೇರಿದ ಮೇಲೆ ದಿನಕಳೆದಂತೆಲ್ಲ ಮುಸ್ಸೊಲಿನಿಯ ‘ಮುಸ್ಸೊಲಿನಿತ್ವ’ ಜಾಹೀರಾಗತೊಡಗಿತು. ಇಟಲಿಯ ಪ್ರಜಾಪ್ರಭುತ್ವದ ಸ್ತಂಭಗಳೆಲ್ಲ ಬಲಹೀನವಾಗತೊಡಗಿದವು. ಇಟಾಲಿಯನ್ ಭಾಷೆ ಯಲ್ಲಿ Il Duce , ಅಂದರೆ ಇಂಗ್ಲಿಷ್‌ನಲ್ಲಿ The Leader ಎಂದು ಕರೆಸಿಕೊಂಡ ಮುಸ್ಸೊಲಿನಿ ಸರ್ವಾಧಿಕಾರಿಯಾದನು.

ಸರಿಸುಮಾರು ಅದೇ ಹೊತ್ತಿಗೆ ರಷ್ಯಾದಲ್ಲಿ ಜೊಸೆಫ್ ಸ್ಟಾಲಿನ್ ಮತ್ತು ಜರ್ಮನಿಯಲ್ಲಿ ಅಡಾಲ್ ಹಿಟ್ಲರ್ ಸಹ ಅಽಕಾರದಲ್ಲಿದ್ದರು ‌ಅಥವಾ ಸರ್ವಾಧಿಕಾರದತ್ತ ದಾಪುಗಾಲಿಟ್ಟಿದ್ದರು. ಒಂದು ನಮೂನೆಯ ಕ್ರೂರ ವರ್ಚಸ್ಸಿನ ವ್ಯಕ್ತಿತ್ವದಲ್ಲಿ ಆ ಮೂವರಿಗೂ ಪೈಪೋಟಿಯೂ ಇತ್ತು. ಹಿಟ್ಲರ್ ಮುಸ್ಸೊಲಿನಿಯನ್ನು ತನ್ನ ಆದರ್ಶ ಎಂದು ತಿಳಿದುಕೊಂಡಿದ್ದೂ ಇತ್ತು. ಆದರೂ ಇಟಲಿಯ ಮಟ್ಟಿಗೆ ಮುಸ್ಸೊಲಿನಿ, ಅವನ ಎರಡನೆಯ ಹೆಂಡತಿ ರಚೆಲ್ ಗಿಯ್ಡಿ ಮತ್ತು ಆಕೆಯಿಂದ ಹುಟ್ಟಿದ ಮಕ್ಕಳನ್ನು ನಿರಂಕುಶ ಪ್ರಭುತ್ವದ ಶಿಖರಬಿಂದು ಎಂಬ ಭಯವನ್ನೂ ಭ್ರಮೆಯನ್ನೂ ಜನ ಸಾಮಾನ್ಯರಲ್ಲಿ ತುಂಬುವ ಪ್ರಯತ್ನ ನಡೆಯಿತು.

ಅದಕ್ಕಿದ್ದ ಒಂದೇ ತೊಂದರೆ ಅಥವಾ ಅಡ್ಡಗಾಲೆಂದರೆ ಮುಸ್ಸೊಲಿನಿಯ ಮೊದಲ ಮಡದಿ ಇಡಾ ಡೆಲ್ಸರ್. ಆಕೆ ಸಾಧ್ಯವಾದಲ್ಲೆಲ್ಲ ಜನರನ್ನು ಒಟ್ಟುಗೂಡಿಸಿ ತಾನೇ ಮುಸ್ಸೊಲಿನಿಯ ಅಧಿಕೃತ ಪತ್ನಿ, ತನಗೆ ಹುಟ್ಟಿದ ಬೆನಿಟೊ ಅಲ್ಬಿನೊ ಮುಸ್ಸೊಲಿನಿಯೇ ಹಿರಿಯ ಮುಸ್ಸೊಲಿನಿಯ ಉತ್ತರಾಧಿಕಾರಿ ಎಂದು ತಿಳಿಹೇಳಲು ಯತ್ನಿಸುತ್ತಿದ್ದಳು.

ಕೆಲ ವೊಮ್ಮೆ ಅವಳ ಪ್ರಯತ್ನಗಳು ಗಲಭೆ ದೊಂಬಿಯ ರೂಪವನ್ನೂ ತಾಳುತ್ತಿದ್ದವಂತೆ. ಆದರೆ ಮುಸ್ಸೊಲಿನಿ ತನ್ನ ಮೊದಲ ಹೆಂಡತಿಯನ್ನು ಮಗು ಹುಟ್ಟಿದ ಒಂದು ತಿಂಗಳೊಳಗೇ ಬಿಟ್ಟು ಹೋಗಿದ್ದರಿಂದ ಆ ಮಗುವಿನ ಬಗ್ಗೆ ದೇಶದ ಪ್ರಜೆಗಳಿಗೆ ಗೊತ್ತೇ ಇರಲಿಲ್ಲ. ಇಡಾ ಹೇಳಿದ್ದನ್ನು ನಂಬುವವರ ಸಂಖ್ಯೆ ಹೆಚ್ಚಿರಲಿಲ್ಲ. ಮುಸ್ಸೊಲಿನಿ ಮೊದಲ ಮದುವೆಯಿಂದ ವಿಚ್ಛೇದನ ಪಡೆಯ ದೆಯೇ ಎರಡನೆಯ ಮದುವೆಯಾಗಿದ್ದಾನೆ, ಮೊದಲ ಹೆಂಡತಿ ಮತ್ತು ಮಗುವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪವೇ ಸಾಕಾಗುತ್ತಿತ್ತೇನೋ ಅವನನ್ನು ಅಧಿಕಾರದಿಂದ ಇಳಿಸಲಿಕ್ಕೆ. ಆದರೆ ವಿರೋಧಿಗಳಲ್ಲಿ ಒಗ್ಗಟ್ಟಿರಲಿಲ್ಲ.

ಅಲ್ಲದೇ ಅದು ತೀರಾ ವ್ಯಕ್ತಿಗತ ವಿಚಾರವಾದ್ದರಿಂದ ಇಡೀ ದೇಶದಲ್ಲಿ ಸಂಚಲನ ಉಂಟು ಮಾಡು ವುದು ಕಷ್ಟವೇ ಇತ್ತು. ಹಾಗಾಗಿ ಇಡಾ ಡೆಲ್ಸರ್‌ಳ ಆ ಹೋರಾಟ ಅರಣ್ಯರೋದನವೇ ಆಯಿತು. ಆದರೆ ಆಕೆಯ ಬಳಿ ಮುಸ್ಸೊಲಿನಿಯ ಬಗ್ಗೆ ಇನ್ನೊಂದು ಘನತರ ಆರೋಪವೂ ಇತ್ತು. ಅದೇ ನೆಂದರೆ, ಮೊದಲನೆಯ ಪ್ರಪಂಚಯುದ್ಧದಲ್ಲಿ ಇಟಲಿಯೂ ಪಾಲ್ಗೊಳ್ಳುವಂತೆ ಮುಸ್ಸೊಲಿನಿ ಅಷ್ಟೆಲ್ಲ ಪ್ರಚಾರ-ಪ್ರಭಾವ ಬೀರಲು ಯತ್ನಿಸಿದ್ದು ಹಾಗೆ ಮಾಡಲಿಕ್ಕೆ ಆತನಿಗೆ ಫ್ರೆಂಚ್ ಸರಕಾರವು ಲಂಚ ಕೊಟ್ಟಿದ್ದರಿಂದ ಎಂದು.

ಅದರಲ್ಲೇನಾದರೂ ಸತ್ಯಾಂಶ ಹೊರಬಂದಿದ್ದರೆ ಮುಸ್ಸೊಲಿನಿಯ ಅಧಿಕಾರಕ್ಕೆ ಸಂಚಕಾರ ಬರುತ್ತಿತ್ತು. ಆದರೂ ಒಟ್ಟಾರೆಯಾಗಿ ಇಡಾಳಿಂದ ಕಿರಿಕಿರಿ ತಪ್ಪಿದ್ದಲ್ಲ ಎಂದುಕೊಂಡ ಮುಸ್ಸೊಲಿನಿ ಆಕೆಯ ಮೇಲೆ ಮತ್ತು ಮಗ ಜ್ಯೂನಿಯರ್ ಮುಸ್ಸೊಲಿನಿಯ ಮೇಲೆ ಕಣ್ಗಾವಲು ಇಡುವುದಕ್ಕೆ ತನ್ನ ಫ್ಯಾಸಿಸ್ಟ್ ಪಾರ್ಟಿಯ ಏಜೆಂಟರನ್ನು ನೇಮಿಸಿದನು.

ಆ ಏಜೆಂಟರು ಇಡಾ ಡೆಲ್ಸರ್ ಮಗನೊಂದಿಗೆ ವಾಸವಾಗಿದ್ದ ಮನೆಗೆ ನುಗ್ಗಿ ಮ್ಯಾರೇಜ್ ಸರ್ಟಿಫಿ ಕೇಟ್, ಜನನ ಪ್ರಮಾಣಪತ್ರ ಮತ್ತು ಅಂಥ ಇತರ ದಾಖಲೆಪತ್ರಗಳನ್ನು ನಾಶಪಡಿಸಿದರು. ಮುಸ್ಸೊ ಲಿನಿಗೂ ಇಡಾಗೂ ಏನೂ ಸಂಬಂಧವಿಲ್ಲವೆಂದು ಸ್ಥಾಪಿಸುವುದು ಅವರ ಗುರಿಯಾಗಿತ್ತು. ಆದರೂ ಕೆಲವು ದಾಖಲೆಪತ್ರಗಳು ಆ ಏಜೆಂಟರ ಕಣ್ತಪ್ಪಿಸಿ ಉಳಿದುಕೊಂಡವು.

1915ರ ಆರಂಭದಲ್ಲಿ ಮುಸ್ಸೊಲಿನಿ ಸಹಿ ಮಾಡಿದ್ದ ಒಂದು ಅಫಿಡವಿಟ್- ಅದರಲ್ಲಿ ಇಡಾ ಡೆಲ್ಸರ್ ಮುಸ್ಸೊಲಿನಿಯ ಪತ್ನಿ, ಮತ್ತು ಬೆನಿಟೊ ಅಲ್ಬಿನೊ ಮುಸ್ಸೊಲಿನಿ ಹಿರಿಯ ಮುಸ್ಸೊಲಿನಿಯ ಪುತ್ರ ಎಂದು ಸ್ಪಷ್ಟವಾಗಿ ಬರೆದದ್ದಿತ್ತು. ಅವರಿಬ್ಬರಿಗೆ ಜೀವನಾಂಶ ಒದಗಿಸುವುದು ಮುಸ್ಸೊಲಿನಿಯ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಕೂಡ ಇತ್ತು.

1916ರ ಇನ್ನೊಂದು ದಾಖಲೆಪತ್ರದಲ್ಲಿ ಈ ಹಿಂದಿನ ಅಫಿಡವಿಟ್ಟನ್ನು ಮುಸ್ಸೊಲಿನಿ ಸದಾ ಮಾನ್ಯ ಮಾಡಬೇಕೆಂಬ ಆದೇಶವೂ ಇತ್ತು. ಆದರೆ ಆ ರೀತಿ ಆತ ನಡೆದುಕೊಂಡಿರಲಿಲ್ಲ ಎನ್ನುವುದು ಬೇರೆ ಮಾತು. ಅಷ್ಟಾದರೂ ಇಡಾ ಡೆಲ್ಸರ್ ತನ್ನ ಹೋರಾಟವನ್ನು ನಿಲ್ಲಿಸಲಿಲ್ಲ. ಮುಸ್ಸೊಲಿನಿಯ ಸರಕಾರದ ಮತ್ತು ಆತನ ಫ್ಯಾಸಿಸ್ಟ್ ಪಾರ್ಟಿಯ ಬೇರೆಬೇರೆ ಅಧಿಕಾರಿಗಳ ಕಾಲು ಹಿಡಿದು ತನಗೆ ನ್ಯಾಯ ಒದಗಿಸುವಂತೆ ಗೋಗರೆದಳು.

ಇದು ಸುಮಾರು 1926ವರೆಗೂ ಮುಂದುವರಿಯಿತು. ಆ ವರ್ಷ ಆಕೆಯನ್ನು ಬಂಧಿಸಲಾಯಿತು. ಮಾಮೂಲಿ ಸೆರೆಮನೆಯಲ್ಲಲ್ಲ, ಹುಚ್ಚಾಸ್ಪತ್ರೆಯಲ್ಲಿ ಸೇರಿಸಲಾಯಿತು! 1937ರಲ್ಲಿ ನಿಧನ ಹೊಂದು ವವರೆಗೂ ಇಡಾ ಅಲ್ಲೇ ಇದ್ದಳು. ಆಕೆ ಸತ್ತಾಗ ಮಿದುಳಿನ ರಕ್ತಸ್ರಾವವೇ ಕಾರಣ ಎಂದು ಹೇಳಿ ಜನರನ್ನು ನಂಬಿಸಲಾಯಿತು.

ಜೂನಿಯರ್ ಮುಸ್ಸೊಲಿನಿಯ ಪರಿಸ್ಥಿತಿ ಅಮ್ಮನಿಗಾದಷ್ಟು ದಾರುಣವಲ್ಲದಿದ್ದರೂ ಹೂವಿನ ಹಾಸಿಗೆಯಂತೂ ಖಂಡಿತ ಆಗಿರಲಿಲ್ಲ. ಅಮ್ಮನನ್ನು ಬಂಧಿಸಿ ಹುಚ್ಚಾಸ್ಪತ್ರೆಗೆ ಸೇರಿಸಿದಾಗ ಆ ಬಾಲಕನಿಗಿನ್ನೂ 11 ವರ್ಷ ವಯಸ್ಸು. ಅಮ್ಮ ಸತ್ತುಹೋಗಿದ್ದಾಳೆಂದು ಆತನ ಬಳಿ ಸುಳ್ಳು ಹೇಳಲಾಗಿತ್ತು. ದಿವ್ಯಾಂಗರ ವಸತಿಯೊಂದಕ್ಕೆ ಆತನನ್ನು ಸೇರಿಸಲಾಗಿತ್ತು. ಆತನಿಗೆ 15 ವರ್ಷ ಪ್ರಾಯವಾದಾಗ ಫ್ಯಾಸಿಸ್ಟ್ ಪಕ್ಷದವನೇ ಒಬ್ಬ ಅಧಿಕಾರಿ ಆತನನ್ನು ದತ್ತು ತೆಗೆದುಕೊಂಡು ಆತನ ಹೆಸರಿನಲ್ಲಿದ್ದ ಮುಸ್ಸೊಲಿನಿ ಎಂಬ ಭಾಗಕ್ಕೆ ಬದಲಾಗಿ ಬೇರೊಂದು ಹೆಸರನ್ನಿಟ್ಟನು.

ಪ್ರಾಥಮಿಕ ಶಿಕ್ಷಣವಷ್ಟೇ ಅಲ್ಲದೇ ಕಾಲೇಜಿಗೆ ಪ್ರವೇಶ ಪಡೆಯುವ ಅವಕಾಶವೂ ಆತನಿಗೆ ದೊರಕಿತು. ಅಷ್ಟುಹೊತ್ತಿಗೆ ಎರಡನೆ ಪ್ರಪಂಚಯುದ್ಧದ ಕಾರ್ಮೋಡ ಕವಿಯತೊಡಗಿತ್ತು. ಇಟಾಲಿಯನ್ ನೌಕಾದಳವನ್ನು ಆ ಯುವಕ ಸೇರಿಕೊಂಡನು. ಹಿರಿಯ ಮುಸ್ಸೊಲಿನಿಯ ಮಗ ತಾನು ಎಂದು ಎಲ್ಲಿಯೂ ಹೇಳಿಕೊಳ್ಳದಂತೆ ಆತನಿಗೆ ತಾಕೀತು ಮಾಡಲಾಗಿತ್ತು. ಆತ ಎಲ್ಲಿಯೂ ಹೇಳಿಕೊಳ್ಳದೇ ಇದ್ದರೂ ಹಿರಿಯ ಮುಸ್ಸೊಲಿನಿಗೆ ಆ ಹೆದರಿಕೆ ಇದ್ದೇಇತ್ತು.

ಹಾಗಾಗಿ ಅವನನ್ನೂ ಬಂಧಿಸಿ ಹುಚ್ಚಾಸ್ಪತ್ರೆಗೆ ಸೇರಿಸಲಾಯಿತು. 1942ರ ಜುಲೈಯಲ್ಲಿ, 27 ವರ್ಷ ದವನಾಗಿದ್ದಾಗ ಆತ ಸತ್ತು ಹೋದನು. ಕೋಮಾ ಸ್ಥಿತಿಗೆ ತಳ್ಳುವ ಇಂಜೆಕ್ಷನ್ ಕೊಟ್ಟು ಸಾಯಿಸಿ ದ್ದೆಂದು ಕೆಲವರು ಹೇಳಿದರೆ ವಿದ್ಯುದಾಘಾತ ಕೊಟ್ಟು ಕೊಂದದ್ದೆಂದು ಇನ್ನು ಕೆಲವರು ಹೇಳು ತ್ತಿದ್ದರು. ಆತನನ್ನು ದತ್ತು ತೆಗೆದುಕೊಂಡಿದ್ದ ಪೋಷಕರಿಗೆ ಮಾತ್ರ ಆತ ಯುದ್ಧದಲ್ಲಿ ಸತ್ತು ಹೋದನು ಎಂದೇ ತಿಳಿಸಲಾಗಿತ್ತಂತೆ. ಚರಿತ್ರೆಯ ಪುಟಗಳಿಂದ ಅವನನ್ನು ಸಂಪೂರ್ಣ ಅಳಿಸಿ ಬಿಡುವ ಕೊನೆಯ ಹಂತವಾಗಿ ಅನಾಥರ ಶವಸಂಸ್ಕಾರದಂತೆ ಅವನ ಶವವನ್ನು ಹೂಳಿದ ಜಾಗದಲ್ಲಿ ಹೆಸರಿಲ್ಲದ ಸಮಾಧಿ ಕಲ್ಲನ್ನು ನೆಡಲಾಯಿತು.

ಹಿರಿಯ ಮುಸ್ಸೊಲಿನಿ ಆಮೇಲೆ ಹೆಚ್ಚು ವರ್ಷಗಳ ಕಾಲವೇನೂ ಬದುಕುಳಿಯಲಿಲ್ಲ. ಜುಲೈ 1943ರಲ್ಲಿ ಎದುರಾಳಿ ಮಿತ್ರಕೂಟದ ಪಡೆಗಳು ಇಟಲಿಯ ಸಿಸಿಲಿ ನಗರಕ್ಕೆ ಮುತ್ತಿಗೆ ಹಾಕಿದ ಒಂದೆರಡು ವಾರಗಳೊಳಗೆ ಮುಸ್ಸೊಲಿನಿಯನ್ನು ಅಧಿಕಾರದ ಗದ್ದುಗೆಯಿಂದಿಳಿಸಿ ಬಂಧಿಸ ಲಾಯಿತು.

ಶತ್ರುವಿನೆದುರು ಶರಣಾಗುವುದೇ ಒಳಿತೆಂದುಕೊಂಡಿತು ಇಟಲಿಯ ಸರಕಾರ. ಹಿಟ್ಲರನಿಗೆ ಮುಸ್ಸೊ ಲಿನಿಯ ಬಗ್ಗೆ ಅಭಿಮಾನವಿದ್ದುದರಿಂದ ನಾತ್ಸಿ ಕಮಾಂಡೊಗಳು ಮುಸ್ಸೊಲಿನಿಯನ್ನು ಬಂಧನ ದಿಂದ ಬಿಡಿಸಿ ಜರ್ಮನ್ ಆಕ್ರಮಿತ ಇಟಲಿಯ ಉತ್ತರ ಭಾಗವೊಂದರ ಮುಖ್ಯಸ್ಥನೆಂದು ಸ್ಥಾಪಿಸಿ ದರು. ಅದೂ ಹೆಚ್ಚು ಕಾಲ ಉಳಿಯಲಿಲ್ಲ.

1945ರ ಏಪ್ರಿಲ್‌ನಲ್ಲಿ ಎದುರಾಳಿ ಪಡೆಗಳು ಇಟಲಿಯಲ್ಲಿ ಚಿಕ್ಕಪುಟ್ಟ ಪ್ರಮಾಣದಲ್ಲಿದ್ದ ಜರ್ಮನ್ ಸೇನೆಯನ್ನೆಲ್ಲ ನೆಲಸಮಗೊಳಿಸಿದಾಗ ಮುಸ್ಸೊಲಿನಿಯ ಪುಟಗೋಸಿ ರಾಜ್ಯವೂ ನಿರ್ನಾಮ ವಾಯಿತು. ಮುಸ್ಸೊಲಿನಿ ತಾನು ‘ಇಟ್ಟುಕೊಂಡಿದ್ದ’ ಹೆಂಗಸು ಕ್ಲಾರಾ ಪೆಟಾಸ್ಸಿ ಎಂಬುವ ವಳೊಂದಿಗೆ ಸ್ವಿಜರ್ಲೆಂಡ್‌ಗೆ ಪಲಾಯನಗೈಯುವವನಿದ್ದನು. ಆವತ್ತು 28 ಏಪ್ರಿಲ್ 1945. ಕೊಮೊ ಸರೋವರದ ಬಳಿ ಮುಸ್ಸೊಲಿನಿ, ಕ್ಲಾರಾ ಪೆಟಾಸ್ಸಿ ಮತ್ತು ಅವರೊಂದಿಗಿದ್ದ ಕೆಲವು ಫ್ಯಾಸಿಸ್ಟ ರನ್ನು ಇಟಲಿಯ ಗೆರಿಲ್ಲಾ ಯೋಧರ ಗುಂಪೊಂದು ಅಡ್ಡಗಟ್ಟಿತು.

ಅವರನ್ನೆಲ್ಲ ವಾಹನದಿಂದ ಕೆಳಕ್ಕೆ ಇಳಿಸಿ ಒಂದು ಗೋಡೆಗೆ ಒರಗಿ ನಿಲ್ಲುವಂತೆ ಹೇಳಲಾಯಿತು. ಈಗಿಂದೀಗಲೇ ಗುಂಡಿಕ್ಕಿ ಅವರ ಕೊಲೆ ಆಗಲಿದೆಯೆಂದು ತಿಳಿಸಲಾಯಿತು. ಮುಸ್ಸೊಲಿನಿಯನ್ನು ತಬ್ಬಿಕೊಂಡ ಕ್ಲಾರಾ ಪೆಟಾಸ್ಸಿ ಅಳುತ್ತ ‘ದಯವಿಟ್ಟು ಆತನನ್ನು ಸಾಯಿಸಬೇಡಿ!’ ಎಂದು ಬೇಡಿದಳು.

ಗೆರಿಲ್ಲಾಗಳು ಅದ್ಯಾವುದಕ್ಕೂ ಕಿವಿಗೊಡದೆ ಮೊದಲು ಅವಳನ್ನೇ ಗುಂಡಿಟ್ಟು ಕೊಂದರು. ಮುಸ್ಸೊ ಲಿನಿ ಅಂಗಿ ಬಿಚ್ಚಿ ತೆರೆದೆದೆಗೆ ಗುಂಡಿಕ್ಕುವಂತೆ ಕೇಳಿಕೊಂಡನು. ಗೆರಿಲ್ಲಾಗಳು ಹಾಗೆಯೇ ಮಾಡಿದರು. ಉಳಿದ ಫ್ಯಾಸಿಸ್ಟ್‌ಗಳನ್ನೂ ಕೊಂದರು. ಶವಗಳನ್ನೆಲ್ಲ ವಾಹನದಲ್ಲಿ ಪೇರಿಸಿ ಮಿಲಾನ್ ನಗರದ ಪಿಯಾಜೆಲ್ ಲೊರೆಟೊ ಎಂಬಲ್ಲಿಗೆ ಒಯ್ದರು. ಕಾಲಿನಿಂದ ಒದ್ದು, ಅವುಗಳ ಮೇಲೆ ಉಚ್ಚೆ ಹೊಯ್ದು ವಿಕೃತಿ ಮೆರೆದರು. ಅಲ್ಲೇ ಹತ್ತಿರದ ಪೆಟ್ರೋಲ್ ಬಂಕ್ ನ ಬಳಿ ಎತ್ತರದ ತೊಲೆ ಯೊಂದಕ್ಕೆ ಆ ಶವಗಳನ್ನು ತಲೆಕೆಳಗಾಗಿ ನೇತಾಡಿಸಿದರು.

ಸಾರ್ವಜನಿಕರೂ ಸೇರಿ ಅವುಗಳ ಮೇಲೆ ಮನಬಂದಂತೆ ಉಗುಳಿ ತಮ್ಮ ಸೇಡನ್ನು ತೀರಿಸಿಕೊಂಡರು. ಮುಸ್ಸೊಲಿನಿ ನಿಜವಾಗಿಯೂ ಸತ್ತಿದ್ದಾನೆಂದು ದೃಢಪಡಿಸಿಕೊಂಡರು. ಇದಾದ ಎರಡು ದಿನಗಳ ಬಳಿಕ ಜರ್ಮನಿಯ ಬರ್ಲಿನ್‌ನಲ್ಲಿ ಅಡಾಲ್ಫ್‌ ಹಿಟ್ಲರ್ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡನು. ತನ್ನ ಆದರ್ಶನೆನಿಸಿದ್ದ ಮುಸ್ಸೊಲಿನಿಗಾದ ದಾರುಣ ಅವಸ್ಥೆ ತನಗಾಗದಿರಲಿ ಎಂಬ ಕಾರಣಕ್ಕೆ ಹಿಟ್ಲರ್ ಹಾಗೆ ಮಾಡಿದ್ದನು. ಯುರೋಪ್‌ನಲ್ಲಿ ಯುದ್ಧ ಕೊನೆಗೊಂಡಿತು.

ಕಥೆ ಅಲ್ಲಿಗೇ ಮುಗಿಯುವುದಿಲ್ಲ. 1924ರಲ್ಲಿ ಬಂಧನಕ್ಕೊಳಗಾಗುವ ಮುನ್ನ ಇಡಾ ಡೆಲ್ಸರ್ ಒಂದಿಷ್ಟು ಕಾಗದಪತ್ರಗಳನ್ನು ತನ್ನ ಸೋದರಿಗೆ ಕೊಟ್ಟಿದ್ದಳು. ಅದರಲ್ಲಿ ಮುಸ್ಸೊಲಿನಿ ಇಡಾಗೆ ಬರೆದಿದ್ದ ಪ್ರೇಮಪತ್ರಗಳೂ ಇದ್ದುವು. ಆ ಸೋದರಿಯಾದರೋ ಅವುಗಳನ್ನು ಒಂದು ಪಕ್ಷಿರೂಪದ ಚೀಲದಲ್ಲಿ, ಮತ್ತೊಂದಿಷ್ಟನ್ನು ಒಂದು ಪಾಳುಬಾವಿಯಲ್ಲಿ ಅಡಗಿಸಿಟ್ಟಿದ್ದಳು.

ಅವಳ ನಂತರ ಅವಳ ಮಗಳಿಗೆ ಅವು ವರ್ಗಾವಣೆಯಾಗಿ ಬಂದಿದ್ದವು. 2001ರಲ್ಲಿ ಮಾರ್ಕೊ ಝೆನಿ ಎಂಬ ಪತ್ರಕರ್ತನೊಬ್ಬ ಇಡಾ ಡೆಲ್ಸರ್‌ಳ ಸೋದರಿಯ ಮಗಳನ್ನು, 88 ವರ್ಷಗಳ ಹಣ್ಣುಹಣ್ಣು ಮುದುಕಿಯನ್ನು, ಭೇಟಿಯಾದನು. ಆಕೆ ಕಾಗದಪತ್ರಗಳಿದ್ದ ಆ ಪಕ್ಷಿಚೀಲವನ್ನು ಮಾರ್ಕೊ ಝೆನಿಗೆ ಹಸ್ತಾಂತರಿಸಿದಳು.

ಮುಸ್ಸೊಲಿನಿಯ ಪ್ರೇಮಪತ್ರಗಳಷ್ಟೇ ಅಲ್ಲದೇ, ಆತನ ಏಜೆಂಟರು ನಾಶಪಡಿಸಲಾಗದಿದ್ದ ಕೆಲವು ದಾಖಲೆಪತ್ರಗಳೂ ಅದರಲ್ಲಿ ಸಿಕ್ಕಿದವು. ಇಡಾ ಡೆಲ್ಸರ್ ಮತ್ತು ಜೂನಿಯರ್ ಮುಸ್ಸೊಲಿನಿಗೆ ಹಿರಿಯ ಮುಸ್ಸೊಲಿನಿ ಯಾವ ನಮೂನೆಯಲ್ಲಿ ಚಿತ್ರಹಿಂಸೆ ನೀಡಿದ್ದನೆಂಬುದಕ್ಕೆ ಆ ದಾಖಲೆಪತ್ರ ಗಳಲ್ಲಿ ಸುಳಿವು ಮತ್ತು ಸಾಕ್ಷಿಗಳಿದ್ದವು. ಅದಾದ ಮೇಲೆ ಇಡಾ ಡೆಲ್ಸರ್ ಮತ್ತು ಬೆನಿಟೊ ಅಲ್ಬಿನೊ ಮುಸ್ಸೊಲಿನಿಯ ಬದುಕು-ಬವಣೆಗಳು ಅನೇಕ ಲೇಖನಗಳಿಗೆ, ಪುಸ್ತಕಗಳಿಗೆ, ಟೆಲಿವಿಷನ್ ಸಾಕ್ಷ್ಯ ಚಿತ್ರಗಳಿಗೆ, ಒಂದು ಚಲನಚಿತ್ರಕ್ಕೂ ವಸ್ತುವಾದುವು.

ಮುಸ್ಸೊಲಿನಿಯ ಎರಡನೆಯ ಹೆಂಡತಿ ರಚೆಲ್ ಗಿಯ್ಡಿ ಏನಾದಳು? ಆಕೆ ಪ್ರಪಂಚಯುದ್ಧಗಳೆರಡರ ಬಳಿಕವೂ ಬದುಕುಳಿದಿದ್ದಳು. 1960ರಲ್ಲಿ ಇಟಲಿಯ ಪ್ರೆಡಾಪಿಯೊ ಎಂಬಲ್ಲಿ ಒಂದು ಪಾಸ್ತಾ ರೆಸ್ಟೊರೆಂಟ್ ತೆರೆದಿದ್ದಳಂತೆ. 1979ರಲ್ಲಿ ಆಕೆಯ ನಿಧನದವರೆಗೂ ಅದು ಪ್ರವಾಸಿಗರ ಮತ್ತು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿತ್ತಂತೆ.

ನಮಗೆ ಪ್ರೌಢಶಾಲೆಯಲ್ಲಿ ಒಂಬತ್ತನೆಯ ತರಗತಿಯ ಸಮಾಜ ಪರಿಚಯ ಪಠ್ಯಪುಸ್ತಕದಲ್ಲಿ ಯುರೋಪ್‌ನ ಚರಿತ್ರೆ ಮತ್ತು ದಂಗೆಗಳ ಬಗೆಗೆ ಇದ್ದ ಪಾಠದಲ್ಲಿ ‘ಮುಸ್ಸೊಲಿನಿಯನ್ನು ಅವನ ಜನರೇ ಹಿಡಿದು ಕೊಂದರು’ ಎಂಬ ವಾಕ್ಯ ನನಗೆ ಆಗಾಗ ನೆನಪಾಗುವುದಿದೆ. ಯಾವಾಗಾದರೂ ಒಮ್ಮೆ ‘ತಿಳಿರುತೋರಣ’ದಲ್ಲಿ ಮುಸ್ಸೊಲಿನಿಯ ಕಥೆಯನ್ನು ಬರೆಯಬೇಕು ಎಂದುಕೊಂಡಿದ್ದೂ ಇದೆ.

ಮೊನ್ನೆ ಇಲ್ಲಿಯ ಗ್ರಂಥಾಲಯದಿಂದ ಎರವಲು ತಂದಿದ್ದ ಪುಸ್ತಕವೊಂದರಲ್ಲಿ ಇಡಾ ಡೆಲ್ಸರ್ ಮತ್ತು ಜೂನಿಯರ್ ಮುಸ್ಸೊಲಿನಿಯ ಕರುಣಾಜನಕ ಕಥೆ ಓದಲಿಕ್ಕೆ ಸಿಕ್ಕಿತು. ಅದನ್ನೇ ಮುಖ್ಯ ಆಧಾರವಾಗಿಟ್ಟುಕೊಂಡು, ಸರ್ವಾಧಿಕಾರಿಯೊಬ್ಬನ ಕ್ರೌರ್ಯ ಮತ್ತು ಅವನ ದಾರುಣ ಅಂತ್ಯಕ್ಕೆ ಕನ್ನಡಿಯೆಂಬಂತೆ ಇಲ್ಲಿ ಕನ್ನಡೀಕರಿಸಿದ್ದೇನೆ. ‘ಮುಸ್ಸೊಲಿನಿಯನ್ನು ಅವನ ಜನರೇ ಹಿಡಿದು ಕೊಂದರು’ ವಿವರಣೆಯ ಪಕ್ಕದಲ್ಲೇ ಆ ಪುಸ್ತಕದಲ್ಲಿ ಮುಸ್ಸೊಲಿನಿ, ಕ್ಲಾರಾ ಪೆಟಾಸ್ಸಿ ಮತ್ತು ಇನ್ನೂ ಮೂವರ ಶವಗಳನ್ನು ತಲೆಕೆಳಗಾಗಿ ನೇತಾಡಿಸಿಟ್ಟ ಚಿತ್ರವನ್ನು ನೋಡಿದಾಗ ಮಾತ್ರ ನನಗೊಮ್ಮೆ ಮೈ ಝುಮ್ಮೆಂದಿತು!