Srivathsa Joshi Column: ಅಳಿಲಿನ ಬಾಲ ಅಳೆದ ಸೂರ್ಯನೂ, ಚಿತ್ರ ಬರೆದ ಪ್ರಣಮ್ಯಳೂ
ಕೆಲ ದಿನಗಳ ಹಿಂದೆ ಶಿವಮೊಗ್ಗದಿಂದ ಪ್ರಣಮ್ಯ ನನಗೊಂದು ವಾಟ್ಸ್ಯಾಪ್ ಸಂದೇಶದಲ್ಲಿ ಒಂದು ಪಿಡಿಎಫ್ ಕಳುಹಿಸಿದಳು. ಅದು, ಭರ್ತಿ ನಾಲ್ಕು ಪುಟಗಳಷ್ಟು ಅವಳದೇ ಕೈಬರಹದಲ್ಲಿ ಇಂಗ್ಲಿಷ್ ನಲ್ಲಿ ಬರೆದ ಪತ್ರ. ಚಂದದ ಕರ್ಸಿವ್ ಹ್ಯಾಂಡ್ ರೈಟಿಂಗ್. ಪ್ರಣಮ್ಯಳಿಗೆ ಈಗ ಪಿಯುಸಿ ಪರೀಕ್ಷೆಗಳ ಫಲಿತಾಂಶ, ಸಿಇಟಿ ಮತ್ತಿತರ ಪ್ರವೇಶಪರೀಕ್ಷೆಗಳ ಫಲಿತಾಂಶ ಎಲ್ಲ ಮುಗಿದು ಎಂಜಿನಿಯರಿಂಗ್ ಕಾಲೇಜುಗಳ ಆಯ್ಕೆ ಪ್ರಕ್ರಿಯೆಯೂ ಆಗಿ ಕೊಂಚ ಬಿಡುವು ಸಿಕ್ಕಿರುವುದರಿಂದ ಅಷ್ಟೊಂದು ಸುದೀರ್ಘ ಪತ್ರ.


ತಿಳಿರು ತೋರಣ
srivathsajoshi@yahoo.com
ಅಳಿಲಿನ ಬಾಲದ ಅಳತೆಗೆ ತಕ್ಕುದಾಗಿ ಹೊಳೆಯುವ ಬೇಗಡೆ ಅಂಟಿಸಿ ತಮಾಷೆ ನೋಡಿದ ಬಾಲಭಾಸ್ಕರ- ಇಂಥದೊಂದು ಕಲ್ಪನೆಯ ಚಿತ್ರಣ ಕೊಡುವ ತುಂಟ ಕವನ, ಮತ್ತು ಅದರ ಕವಯಿತ್ರಿ ‘ಸುಪ್ತದೀಪ್ತಿ’ (ಜ್ಯೋತಿ ಮಹಾದೇವ್) ಬಗ್ಗೆ ಏಳೆಂಟು ವಾರಗಳ ಹಿಂದಿನ ಅಂಕಣವೊಂದರಲ್ಲಿ ಪ್ರಸ್ತಾವಿಸಿದ್ದೆ. ‘ಅಳಿಲಿನ ಬಾಲಕೆ| ಹೊಳೆಯುವ ಬೇಗಡೆ| ಅಳತೆಯಲಂಟಿಸಿ| ಕುಳಿತ ಸುಪ್ರಭಾತ’ ಎಂದು ಇತ್ತು ಆ ಕವನ. ತಲಾ ಏಳು ಅಕ್ಷರೋಚ್ಚಾರ(ಸಿಲೆಬಲ್)ಗಳ ನಾಲ್ಕು ಸಾಲುಗಳುಳ್ಳ ಅಂಥ ಕವನಗಳನ್ನು ‘ತನಗ’ ಎನ್ನುತ್ತಾರಂತೆ.
ಅದೊಂದು ಫಿಲಿಪ್ಪಿನೊ ಕಾವ್ಯಪ್ರಕಾರವಾಗಿದ್ದು ಈಗ ಕನ್ನಡದಲ್ಲೂ ತನಗ ಕೃಷಿ ಮಾಡುವವರಿದ್ದಾರೆಂದು ಆಮೇಲೆ ಗೊತ್ತಾಯಿತು. ಆವತ್ತಿನ ಅಂಕಣದಲ್ಲಿ ವಿವರಿಸಿದ್ದಂತೆ ನನಗೆ ಆ ಕವನದಲ್ಲಿ ವಿಶೇಷ ಆಕರ್ಷಣೆ ಎನಿಸಿದ್ದು ಬೇಗಡೆ ಎಂಬ ಪದಬಳಕೆ, ಮತ್ತು ತುಂಟ ಹುಡುಗನೆಂಬಂತೆ ಬಾಲರವಿಯ ಚಿತ್ರಣ. ಆ ಅಂಕಣಬರಹದ ದ್ವಿತೀಯಾರ್ಧದಲ್ಲಿ ಮರ ಸುತ್ತುವ ಅಳಿಲು, ಅದರ ಫೋಟೊ ಕ್ಲಿಕ್ಕಿಸಲೆಂದು ಅಳಿಲನ್ನೂ ಮರವನ್ನೂ ಸುತ್ತುವ ಫೋಟೊಗ್ರಾಫರ್- ಎಂಬೊಂದು ವಿಜ್ಞಾನಮಂಥನದ ಪೀಠಿಕೆಯಾಗಿ ಯಷ್ಟೇ ಆ ಕವನವನ್ನು ಬಳಸಿದ್ದಾಗಿತ್ತು. ಆ ವಿಜ್ಞಾನಮಂಥನವಾದರೋ ಓದಿ ತಲೆಸುತ್ತಿ ಬವಳಿ ಬರುವಂತೆ ಇತ್ತೆಂದು ಕೆಲ ಓದುಗರು ಪ್ರತಿಕ್ರಿಯಿಸಿದ್ದರು. ನಾನೂ ಅಳಿಲನ್ನು ಅದರ ಪಾಡಿಗೇ ಬಿಟ್ಟು ಮುಂದಿನ ಅಂಕಣಗಳಿಗೆ ವಿಷಯಸಂಗ್ರಹದಲ್ಲಿ ತೊಡಗಿದ್ದೆ.
ಕೆಲ ದಿನಗಳ ಹಿಂದೆ ಶಿವಮೊಗ್ಗದಿಂದ ಪ್ರಣಮ್ಯ ನನಗೊಂದು ವಾಟ್ಸ್ಯಾಪ್ ಸಂದೇಶದಲ್ಲಿ ಒಂದು ಪಿಡಿಎಫ್ ಕಳುಹಿಸಿದಳು. ಅದು, ಭರ್ತಿ ನಾಲ್ಕು ಪುಟಗಳಷ್ಟು ಅವಳದೇ ಕೈಬರಹದಲ್ಲಿ ಇಂಗ್ಲಿಷ್ ನಲ್ಲಿ ಬರೆದ ಪತ್ರ. ಚಂದದ ಕರ್ಸಿವ್ ಹ್ಯಾಂಡ್ ರೈಟಿಂಗ್. ಪ್ರಣಮ್ಯಳಿಗೆ ಈಗ ಪಿಯುಸಿ ಪರೀಕ್ಷೆಗಳ ಫಲಿತಾಂಶ, ಸಿಇಟಿ ಮತ್ತಿತರ ಪ್ರವೇಶಪರೀಕ್ಷೆಗಳ ಫಲಿತಾಂಶ ಎಲ್ಲ ಮುಗಿದು ಎಂಜಿನಿಯರಿಂಗ್ ಕಾಲೇಜುಗಳ ಆಯ್ಕೆ ಪ್ರಕ್ರಿಯೆಯೂ ಆಗಿ ಕೊಂಚ ಬಿಡುವು ಸಿಕ್ಕಿರುವುದರಿಂದ ಅಷ್ಟೊಂದು ಸುದೀರ್ಘ ಪತ್ರ.
ಇದನ್ನೂ ಓದಿ: Srivathsa Joshi Column: ಆತ್ತಿಚ್ಚೂಡಿ: ತಮಿಳು ವರ್ಣಮಾಲೆಯಲ್ಲಿ ನೀತಿವಾಕ್ಯಗಳ ಸೂಡಿ
ಅದರಲ್ಲಿ ಅವಳ ವಿದ್ಯಾಭ್ಯಾಸ, ಹವ್ಯಾಸಗಳು, ಹೊಸ ಪುಸ್ತಕಗಳ ಓದು, ಅದೂಇದೂ ಎಲ್ಲ ಸಮಾಚಾರಗಳನ್ನು ಸೇರಿಸಿದ್ದಳು. ಒಂದು ಪ್ಯಾರಗ್ರಾ- ಹೀಗೆ ಇತ್ತು (ಪ್ರಣಮ್ಯ ಇಂಗ್ಲಿಷಲ್ಲಿ ಬರೆದಿದ್ದನ್ನು ನಾನಿಲ್ಲಿ ಕನ್ನಡಕ್ಕಿಳಿಸಿದ್ದು): “ಈ ದಿನಗಳಲ್ಲಿ ನಿಮ್ಮ ಅಂಕಣಬರಹಗಳನ್ನು ನಿಯತವಾಗಿ ಓದುತ್ತಿದ್ದೇನೆ. ಹಳೆಯವನ್ನು ಕೂಡ. ಕಳೆದ ವರ್ಷವಿಡಿಯ ಪೇಪರ್‌ಕಟ್ಟಿಂಗ್ಸ್ ನನಗೋಸ್ಕರ ಅಮ್ಮ ತೆಗೆದಿಟ್ಟಿದ್ದಾರೆ.
ಅದರಲ್ಲಿ ನನಗೆ ಹೆಚ್ಚು ಮೋಜೆನಿಸಿದ ಲೇಖನವೆಂದರೆ ಮೇ 4ರಂದು ಪ್ರಕಟವಾದದ್ದು. ಸೂರ್ಯದೇವನು ಅಳಿಲಿನ ಬಾಲಕ್ಕೆ ಬೇಗಡೆ ಅಂಟಿಸಲಿಕ್ಕೆಂದು ಟೇಪ್‌ನಿಂದ ಬಾಲ ಅಳೆಯು ತ್ತಿರುವ ದೃಶ್ಯ. ಎಂಥ ಮುದ್ದಾದ ಕಲ್ಪನೆ ಮಾಡಿದ್ದಾರೆ ಕವಯಿತ್ರಿ ಜ್ಯೋತಿ ಮೇಡಂ! ಅದಕ್ಕೆ ತಕ್ಕಂತೆ ನಿಮ್ಮ ವ್ಯಾಖ್ಯಾನವೂ ಬಲುಸೊಗಸು. ಎರಡೆರಡು ಸಲ ಓದಿದೆ.
ಅರ್ಥ ಆಗಲಿಲ್ಲ ಅಂತಲ್ಲ, ಮತ್ತೆಮತ್ತೆ ಖುಷಿಪಡಲಿಕ್ಕೆ. ಓದುತ್ತಿದ್ದಂತೆ ಅದರದೊಂದು ಚಿತ್ರ ಬಿಡಿಸೋಣ ಎಂದು ಕೈತುರಿಸಿತು. ಆದಷ್ಟು ಬೇಗ ಚಿತ್ರ ಬಿಡಿಸಿ ನಿಮಗೆ ತೋರಿಸುತ್ತೇನೆ". ಪ್ರಣಮ್ಯ ನನಗೆ ಜುಲೈ 2021ರಲ್ಲಿ ಗೀತಾಪರಿವಾರದ ಆನ್ ಲೈನ್ ಭಗವದ್ಗೀತೆ ಕಲಿಕೆ ತರಗತಿಗಳಲ್ಲಿ ಪರಿಚಯವಾದ ಪ್ರತಿಭಾನ್ವಿತ ಹುಡುಗಿ. ಕೋವಿಡ್ ಕರಿನೆರಳು ಇನ್ನೂ ಕವಿದಿದ್ದ ದಿನಗಳವು.

ಝೂಮ್ ಮೂಲಕ ಭಗವದ್ಗೀತೆ ಪಠನವೇ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಿ ಜನರು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುತ್ತಿದ್ದರು. ಭಾರತೀಯ ಸಮಯ ಬೆಳಗ್ಗೆ 7 ರಿಂದ 7:40ರವರೆಗೆ, ಅಂದರೆ ನನಗಿಲ್ಲಿ ಹಿಂದಿನ ರಾತ್ರಿ 9:30ರಿಂದ 10:00ರವರೆಗೆ, ಭಗವದ್ಗೀತೆಯ 12ನೆಯ ಮತ್ತು 15ನೆಯ ಅಧ್ಯಾಯಗಳ ಕಲಿಕೆ ತರಗತಿಗೆ ಪ್ರಶಿಕ್ಷಕನಾಗಿ ನಾನು ಸೇವೆ ಸಲ್ಲಿಸುತ್ತಿದ್ದೆ.
ನಮ್ಮ ತರಗತಿಯಲ್ಲಿದ್ದ ಸುಮಾರು 60 ಪ್ರಶಿಕ್ಷಾರ್ಥಿಗಳಲ್ಲಿ ಪ್ರಣಮ್ಯಳೂ ಒಬ್ಬಳು. ಪ್ರತಿದಿನವೂ ಉತ್ಸಾಹದಿಂದ ಭಾಗವಹಿಸುತ್ತಿದ್ದಳು. ಸ್ಪಷ್ಟ ಉಚ್ಚಾರದಿಂದ ಶ್ಲೋಕಗಳನ್ನು ಪಠಿಸುತ್ತಿದ್ದಳು. ಆಗ ಅವಳು ಶಿವಮೊಗ್ಗದ ಸಾಂದೀಪನಿ ಪ್ರೌಢಶಾಲೆಯಲ್ಲಿ ಒಂಬತ್ತನೆಯ ತರಗತಿಯಲ್ಲಿ ಓದುತ್ತಿದ್ದಳು. ಈ ಹುಡುಗಿ ಸಂಸ್ಕಾರಯುತ ಕುಟುಂಬದವಳಿರಬೇಕು, ಬಹುಶಃ ಸಂಗೀತಕಲಿಕೆಯ ಹಿನ್ನೆಲೆಯೂ ಇರಬಹುದೆಂದು ನಾನು ಸುಲಭವಾಗಿ ಅಂದಾಜಿಸಿದ್ದೆ.
ನನ್ನ ಊಹೆ ನಿಜವೂ ಆಯ್ತು. ಗೀತಾಪರಿವಾರದ ರಿವಾಜಿನಂತೆ ಎರಡಧ್ಯಾಯ ಕಲಿಕೆಯ ಸ್ತರ ಮುಗಿದ ಸಂದರ್ಭದಲ್ಲಿ ಝೂಮ್‌ನಲ್ಲಿಯೇ ‘ಆನಂದೋತ್ಸವ’ ಸಮಾರಂಭ ಇತ್ತು. ಪ್ರಣಮ್ಯ ಅದರಲ್ಲಿ ಹಿಂದೂಸ್ಥಾನಿ ಸಂಗೀತದ ಚಿಕ್ಕದೊಂದು ‘ಚೀಜ್’ ಪ್ರಸ್ತುತಪಡಿಸಿದ್ದಳು.
ಅದಕ್ಕಿಂತಲೂ ಮುಖ್ಯವಾಗಿ, ತನ್ನ ಚಿತ್ರಕಲೆಯ ಕೊಲಾಜ್ ಮಾಡಿ ಪ್ರದರ್ಶಿಸಿದ್ದಳು. ರವೀಂದ್ರನಾಥ ಟಾಗೋರ್, ಸುಭಾಶ್ಚಂದ್ರ ಬೋಸ್, ಸರ್ ಎಂ.ವಿಶ್ವೇಶ್ವರಯ್ಯ, ಬಾಲಗಂಗಾಧರ ತಿಲಕ್, ಡಿವಿಜಿ, ಮಾಸ್ತಿ, ಪುನೀತ್ ರಾಜಕುಮಾರ್ ಮುಂತಾದವರ ವ್ಯಕ್ತಿಚಿತ್ರಗಳು, ಜಲವರ್ಣದಲ್ಲಿ ಬಿಡಿಸಿದ ಪ್ರಕೃತಿ ಚಿತ್ರಗಳು, ಪ್ರಾಣಿ-ಪಕ್ಷಿಗಳ ಚಿತ್ರಗಳು... ಎಲ್ಲವೂ ಚಿತ್ತಾಕರ್ಷಕ. ಅನುಭವಿ ಕಲಾವಿದರು ಬಿಡಿಸಿದಂತೆ ಉತ್ಕೃಷ್ಟ. ಭಾಗವಹಿಸಿದ್ದವರೆಲ್ಲರಿಂದ ‘ವಾಹ್’ ಎಂಬ ಉದ್ಗಾರ.
ಗೀತಾಪರಿವಾರದಲ್ಲಿ ಭಗವದ್ಗೀತೆ ಕಲಿಕೆಯನ್ನು ಮುಂದುವರಿಸಿದ ಪ್ರಣಮ್ಯ ಆಮೇಲಿನ ಅಧ್ಯಾಯ ಗಳ ಕಲಿಕೆಗೆ ಇನ್ನೊಬ್ಬ ಪ್ರಶಿಕ್ಷಕ, ನನ್ನ ಸ್ನೇಹಿತ ಬಾಲಕೃಷ್ಣ ರಾನಡೆಯವರ ತರಗತಿಗೆ ಸೇರಿ ಕೊಂಡಳು. ಅವರಿಗೂ ನೆಚ್ಚಿನ ವಿದ್ಯಾರ್ಥಿನಿಯಾದಳು. ಪ್ರಣಮ್ಯಳ ಅಮ್ಮ ‘ತಿಳಿರುತೋರಣ’ದ ನಿಯತ ಓದುಗರಾದ್ದರಿಂದ ವಾಟ್ಸ್ಯಾಪ್‌ನಲ್ಲಿ ನನ್ನೊಡನೆ ಸಂಪರ್ಕದಲ್ಲಿದ್ದರು.
ಅಮ್ಮನ ಫೋನ್‌ನಿಂದ ಪ್ರಣಮ್ಯ ತನ್ನ ಕಲಿಕೆ ಪ್ರಗತಿಯ ಬಗ್ಗೆ, ಶಿವಮೊಗ್ಗದಲ್ಲಿ ಸಂಸ್ಕೃತಭಾರತಿ ಸಂಸ್ಥೆ ನಡೆಸಿದ ಗೀತಾಕಂಠಪಾಠ ಸ್ಪರ್ಧೆಯಲ್ಲಿ 12ನೆಯ ಅಧ್ಯಾಯ ಪಠಿಸಿ ಪ್ರಥಮ ಬಹುಮಾನ ಪಡೆದ ಬಗ್ಗೆಯೆಲ್ಲ ಬರೆದು ತಿಳಿಸುತ್ತಿದ್ದಳು. 11ನೆಯ ಅಧ್ಯಾಯ ಕಲಿಯುತ್ತಿದ್ದಾಗ ವಿಶ್ವರೂಪ ದರ್ಶನದ ಚಿತ್ರ ಬಿಡಿಸುತ್ತಿದ್ದೇನೆಂದು ತಿಳಿಸಿದ್ದಳು.
ಬಿಡಿಸಿ ಆದಮೇಲೆ ಅದ್ಭುತವಾದ ಆ ಚಿತ್ರವನ್ನು ವಾಟ್ಸ್ಯಾಪ್‌ನಲ್ಲಿ ನನಗೂ ಕಳುಹಿಸಿದ್ದಳು. ಕೆಲವೊಮ್ಮೆ ‘ತಿಳಿರುತೋರಣ’ ಅಂಕಣ ಓದಿ ವಾಯ್ಸ್ ಮೆಸೇಜಿನಲ್ಲಿ ಪ್ರತಿಕ್ರಿಯೆ ಕೊಡುತ್ತಿದ್ದಳು. ೨೦೨೨ರ ಏಪ್ರಿಲ್‌ನಲ್ಲಿ ಖ್ಯಾತ ಗಮಕಿ ಪದ್ಮಶ್ರೀ ಎಚ್.ಆರ್.ಕೇಶವಮೂರ್ತಿಯವರಿಗೆ ಶಿವಮೊಗ್ಗ ಕರ್ನಾಟಕ ಸಂಘದಿಂದ ಅಭಿನಂದನೆ ಕಾರ್ಯಕ್ರಮ ನಡೆದಾಗ ಶತಾವಧಾನಿ ಡಾ.ಆರ್.ಗಣೇಶರು ಅಭಿನಂದನಾ ಭಾಷಣಕಾರರಾಗಿ ಹೋಗಿದ್ದಾಗ, “ಶತಾವಧಾನಿಯವರನ್ನು ಭೇಟಿಯಾಗುತ್ತೇನೆ; ಅವರ ವ್ಯಕ್ತಿಚಿತ್ರ ಬಿಡಿಸಿ ಉಡುಗೊರೆಯಾಗಿ ನೀಡುತ್ತೇನೆ" ಎಂದಿದ್ದಳು.
ಚಿತ್ರವನ್ನು ರಚನಾಹಂತದಲ್ಲೇ ಒಂದೆರಡು ಸರ್ತಿ ನನಗೆ ತೋರಿಸಿದ್ದಳು. ಸಮಾರಂಭದ ದಿನ ಗಣೇಶರನ್ನು ಭೇಟಿಯಾಗಿ ನಮಸ್ಕರಿಸಿ ಆಶೀರ್ವಾದ ಪಡೆದು ಭಾವಚಿತ್ರ ಸಮರ್ಪಿಸಿದ -ಟೊ ನನಗೆ ಕಳುಹಿಸಿದಳು. ಪ್ರಣಮ್ಯಳ ಸಂಭ್ರಮವನ್ನು ಅದರಲ್ಲಿ ಕಾಣಬಹುದಾಗಿತ್ತು. ಚಿತ್ರಕಲೆಯಷ್ಟೇ ಅಲ್ಲದೆ ಪ್ರಣಮ್ಯ ಬಹುಮುಖಪ್ರತಿಭೆಯವಳು ಎಂದು ನನಗೆ ಗೊತ್ತಾದದ್ದು ಶಿವಮೊಗ್ಗದ ಸ್ಥಳೀಯ ಪತ್ರಿಕೆಯಲ್ಲಿ, ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಸುಂದರರಾಜ್ ಅವರು ಬರೆದ ‘ಪ್ರತಿಭೆಯ ಖನಿ ಪ್ರಣಮ್ಯ’ ಲೇಖನದಿಂದ.
“ಓದಿನಲ್ಲಿ ಚುರುಕು. ಪಠ್ಯೇತರ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ. ಚಿತ್ರಕಲೆ, ಚೆಸ್, ಹಿಂದೂಸ್ಥಾನಿ ಸಂಗೀತ, ಪರಿಸರ ಸಂರಕ್ಷಣೆ, ಪತ್ರಲೇಖನ, ಭಾಷಣ, ಸಾಹಿತ್ಯ- ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರಣಮ್ಯ ಗುರುಹಿರಿಯರಲ್ಲಿ ಗೌರವ ಮತ್ತು ಸೌಜನ್ಯಯುತ ನಡತೆಯವಳು.
ಚಿಕ್ಕಂದಿನಿಂದಲೇ, ಕಣ್ಣಿಗೆ ಕಂಡ ವಸ್ತುಗಳದೆಲ್ಲ ಚಿತ್ರ ಬಿಡಿಸುವ ಈಕೆಯ ಹವ್ಯಾಸವನ್ನು ಕಂಡ ತಂದೆ-ತಾಯಿ (ರಾಮು- ರಾಧಾಮಣಿ) ಈ ಬಾಲಕಿಯನ್ನು ರವಿವರ್ಮ ಚಿತ್ರಶಾಲೆಗೆ ಸೇರಿಸಿದರು. ಅಲ್ಲಿ ತುಂಬ ಆಸಕ್ತಿಯಿಂದ ಕಲಿತು ಸುಂದರವಾದ ಚಿತ್ರಗಳನ್ನು ಬಿಡಿಸಿ ಎಲ್ಲರನ್ನೂ ಬೆರಗುಗೊಳಿಸಿದ ಪ್ರಣಮ್ಯ ಜಿಲ್ಲಾ-ರಾಜ್ಯ-ರಾಷ್ಟ್ರ ಮಟ್ಟದ ಹಲವಾರು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗಳಿಸಿದ್ದಾಳೆ.
ಸ್ಕೂಲ್ ಆಫ್ ಇಂಡಿಯಾ ಚೆನ್ನೈ ಮತ್ತು ಮಾರುತಿ ಆರ್ಟ್ಸ್ ನವರು ನಡೆಸಿದ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಚಿನ್ನದ ಪದಕ ಗಳಿಸಿದ್ದಾಳೆ. ಶಿಮೊಪೆಕ್ಸ್ 2018 ವಿಭಾಗಮಟ್ಟದ ಪತ್ರಲೇಖನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಮೂರು ಬಾರಿ ಬಹುಮಾನ. ಪರಿಸರ ಅಧ್ಯಯನ ಕೇಂದ್ರದವರು ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮಸ್ಥಾನ. ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನದಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿದ್ದಾಳೆ.
ನಳಂದ ಚೆಸ್ ಅಕಾಡೆಮಿಯಿಂದ ಚೆಸ್ ಕಲಿತು ಈ ಆಟದಲ್ಲಿ ಪರಿಣತಿ ಹೊಂದುವ ಉತ್ಸಾಹದಲ್ಲಿದ್ದಾಳೆ. ಸ್ವರಗಂಗಾ ಹಿಂದೂಸ್ಥಾನಿ ಸಂಗೀತ ಶಾಲೆಯಲ್ಲಿ ಕಲಿಯುತ್ತ ಉತ್ತಮವಾಗಿ ಹಾಡಬಲ್ಲವಳಾಗಿದ್ದಾಳೆ. ಸಾಹಿತ್ಯಪ್ರಿಯೆಯಾಗಿದ್ದು ಸ್ವರಚಿತ ಕವನವಾಚನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡುತ್ತಾಳೆ. ಇಷ್ಟೆಲ್ಲ ಪ್ರತಿಭೆ ಹೊಂದಿ ಓದಿನಲ್ಲೂ ಮುಂದಿರುವ ಪ್ರಣಮ್ಯಳನ್ನು ‘ನಿನ್ನ ಚಟುವಟಿಕೆಗಳಿಗೆ ಸಮಯವನ್ನು ಹೇಗೆ ಹೊಂದಿಸಿಕೊಳ್ಳುತ್ತೀಯಾ?’ ಎಂದು ಪ್ರಶ್ನಿಸಿದರೆ ‘ಬೆಳಗ್ಗೆ ಸಂಜೆ ಒಂದು ಕ್ಷಣವೂ ವ್ಯರ್ಥ ಮಾಡದೆ, ಟಿವಿ-ಮೊಬೈಲ್‌ಗಳಿಂದ ದೂರವಿದ್ದು ನನ್ನ ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತಿದ್ದೇನೆ’ ಎನ್ನುತ್ತಾಳೆ.
ಈಕೆ ಇತರ ಮಕ್ಕಳಿಗೆಲ್ಲ ಆದರ್ಶವಾಗಿದ್ದಾಳೆ" ಎಂದು ಅವರು ಬರೆದಿದ್ದರು. ಪ್ರಣಮ್ಯ ಓದುತ್ತಿದ್ದ ಪ್ರೌಢಶಾಲೆಯಲ್ಲೇ ಅಧ್ಯಾಪಕರಾಗಿರುವ ಚೇತನ್ ರಾಯನಹಳ್ಳಿ ಅವರು ಶಿವಮೊಗ್ಗದ ಪತ್ರಿಕೆಯಲ್ಲಿ ಬರೆಯುವ ‘ಕ್ಲಾಸ್‌ರೂಂ ಡೈರೀಸ್’ ಅಂಕಣದಲ್ಲೂ ಪ್ರಣಮ್ಯಳ ಉಲ್ಲೇಖ ಕೆಲವೊಮ್ಮೆ ಬರುತ್ತಿತ್ತು.
ಶೌರ್ಯಚಕ್ರ ಪುರಸ್ಕೃತ ಯೋಧ ಲೂಯಿಸ್ ಪೆರಿಯನಾಯಗಂ ಅವರನ್ನು ಶಾಲೆಗೆ ಆಹ್ವಾನಿಸಿ ಸತ್ಕರಿಸಿದ ಸಂದರ್ಭದಲ್ಲಿ ಅವರ ವ್ಯಕ್ತಿಚಿತ್ರವನ್ನು ಪ್ರಣಮ್ಯ ಬಿಡಿಸಿ ಶಾಲೆಯ ವತಿಯಿಂದ ಅದನ್ನವರಿಗೆ ಸಮರ್ಪಿಸಿದ್ದು, “ಸರ್, ಇದು ಅತಿಥಿಗಳಿಗೆ ಅವರದ್ದೇ ಚಿತ್ರ ಅಂತ ಗೊತ್ತಾಗತ್ತೆ ಅಲ್ವಾ?" ಎಂದು ಪ್ರಣಮ್ಯ ಮುಗ್ಧತೆಯಿಂದ ಕೇಳಿದ್ದು, ಚಿತ್ರಕ್ಕೆ ಫ್ರೇಮ್ ಹಾಕುವ ದುಡ್ಡನ್ನು ತಾನೇ ಕೊಡುತ್ತೇನೆ ಎಷ್ಟಾಯ್ತು ಅಂತ ತಿಳಿಸಲಿಕ್ಕೆ ಹೇಳಿದ್ದಾರೆ ಅಮ್ಮ, ಇಲ್ಲವಾದರೆ ಪೆಟ್ಟು ಕೊಡುತ್ತಾರೆ ಎಂದಿದ್ದು... ಇದನ್ನೆಲ್ಲ ಒಮ್ಮೆ ಹೃದಯಂಗಮವಾಗಿ ಬಣ್ಣಿಸಿದ್ದರು.
ಪ್ರಣಮ್ಯ ತಾನಾಗಿ ಇವ್ಯಾವುದನ್ನೂ ನನ್ನ ಬಳಿ ಹೇಳಿಕೊಂಡಿದ್ದಿಲ್ಲ. ಅವಳಮ್ಮ ಹಂಚಿಕೊಳ್ಳುತ್ತಿದ್ದ ನ್ಯೂಸ್ ಪೇಪರ್ ಕ್ಲಿಪ್ಪಿಂಗ್‌ಗಳಿಂದಷ್ಟೇ ನನಗೆ ಗೊತ್ತಾಗಿದ್ದು. ಅವಳಾಗಿ ನನ್ನೊಡನೆ ಹಂಚಿಕೊಂಡಿದ್ದೆಂದರೆ ಒಂದು ಸಲ ಜೂನ್ ಮೂರನೆ ಭಾನುವಾರದ ‘ಅಪ್ಪಂದಿರ ದಿನ’ದಂದು ವಿಜಯಕರ್ನಾಟಕದಲ್ಲಿ ಪ್ರಕಟವಾದ ಅವಳದೊಂದು ಪುಟ್ಟ ಬರಹ, ಅಪ್ಪನ ಪ್ರೀತಿಯ ಬಗೆಗಿನದು.
ಇನ್ನೊಮ್ಮೆ ಶಂಕರಜಯಂತಿಯಂದು ‘ಶಂಕರ ಜೀವ ನಗಾಥೆ ಎಂದು ಒಂದೇ ಪುಟದಲ್ಲಿ ಶಂಕರಾಚಾರ್ಯರ ಬದುಕಿನ ವಿವಿಧ ಘಟ್ಟಗಳ ಒಟ್ಟು ಹನ್ನೊಂದು ಚಿತ್ರಗಳ ಕೊಲಾಜ್. ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದು ಫಲಿತಾಂಶ ಪ್ರಕಟವಾದ ದಿನ ಪ್ರಣಮ್ಯ ನನಗೊಂದು ವಾಯ್ಸ್ ಮೆಸೇಜ್ ಕಳಿಸಿದ್ದಳು.
625ರಲ್ಲಿ 623 ಅಂಕ ಗಳಿಸಿದ್ದವಳಿಗೆ ಎರಡು ಮಾರ್ಕ್ಸ್ ಕಳಕೊಂಡು ಸ್ವಲ್ಪ ನಿರಾಸೆಯಾಗಿತ್ತೆಂದು ಧ್ವನಿಯಲ್ಲೇ ಗೊತ್ತಾಗುತ್ತಿತ್ತು. ಆದರೆ ಅವಳು ಅದನ್ನೇ ಒಂದು ದೊಡ್ಡ ಚಿಂತೆಯಾಗಿ ಮಾಡಿಕೊಳ್ಳಲಿಲ್ಲ. “ಶತಾವಧಾನಿಗಳು ಡಿವಿಜಿ ಬಗ್ಗೆ ಬರೆದ ‘ಬ್ರಹ್ಮಪುರಿಯ ಭಿಕ್ಷುಕ’ ಪುಸ್ತಕ ಓದ್ಬೇಕು ಅಂದ್ಕೊಂಡಿದ್ದೆ, ಅದನ್ನೂ ಓದ್ತಾ ಇದ್ದೇನೆ.
ಆರ್.ಕೆ.ನಾರಾಯಣ್ ಅವ್ರದ್ದು ‘ಸ್ವಾಮಿ ಆಂಡ್ ಹಿಸ್ ಫ್ರೆಂಡ್ಸ್’ ಓದಿದ್ದೆ; ತುಂಬ ಇಷ್ಟ ಆಗಿತು, ಅದರ ಒಂದು ಕಥೆ ನಮಗೆ ಇಂಗ್ಲಿಷ್ ಟೆಕ್ಸ್ಟ್‌ಬುಕ್ಕಲ್ಲೂ ಇತ್ತು. ಅವ್ರದ್ದೇ ‘ಮ್ಯಾನ್ ಈಟರ್ ಆಫ್ ಮಾಲ್ಗುಡಿ’ ಮತ್ತು ‘ಗೈಡ್’ ಈಗ ಓದಿದೆ, ತುಂಬ ಚೆನ್ನಾಗಿದೆ.
ಕಾಲೇಜು ಶುರುವಾಗುವುದರೊಳಗೆ ‘ಚೆನ್ನಭೈರಾದೇವಿ’ನೂ ಓದ್ಬೇಕು ಅಂದ್ಕೊಂಡಿದ್ದೇನೆ. ಮತ್ತೆ, ಗೀತಾಪರಿವಾರದ ಗೀತಾಕ್ಲಾಸುಗಳಲ್ಲಿ ತಾಂತ್ರಿಕ ಸಹಾಯಕಿಯಾಗಿ ಸೇವೆ ಸಲ್ಲಿಸಲಿಕ್ಕೆ ನೋಂದಾಯಿಸಿಕೊಂಡಿದ್ದೇನೆ" ಎಂದಿದ್ದಳು. ಅವಳನ್ನು ಅಭಿನಂದಿಸುತ್ತ “ಪ್ರಣಮ್ಯ, ನಿನಗೆ ೬೨೫ಕ್ಕೆ 625 ಬರುತ್ತಿದ್ದರೆ ಇನ್ನೇನೂ ಸುಧಾರಣೆ ಸಾಧ್ಯವಿಲ್ಲ ಎಂದಾಗುತ್ತಿತ್ತು.
ಅದಕ್ಕಿಂತ, ಕಡಿಮೆ ಅಂಕ ಬಂದಿರುವುದನ್ನೂ ಧನಾತ್ಮಕವಾಗಿ ತಗೊಳ್ಳಬಹುದು. ಇನ್ನೂ ಚೆನ್ನಾಗಿ ಮಾಡಬಲ್ಲೆ/ಮಾಡುತ್ತೇನೆ ಎಂಬ ಛಲ ಬೆಳೆಸಿಕೊಳ್ಳಬಹುದು. ಜೀವನಮೌಲ್ಯದ ದೃಷ್ಟಿಯಿಂದ ಇದೇ ಒಳ್ಳೆಯದು" ಎಂದು ಬರೆದಿದ್ದು ಅವಳಿಗೆ ಒಪ್ಪಿಗೆಯಾಗಿತ್ತು. “ನನ್ನದೇ ಸಿಲ್ಲಿಮಿಸ್ಟೇಕ್‌ನಿಂದ ಎರಡು ಮಾರ್ಕ್ಸ್ ಕಳಕೊಂಡೆ.
ಇನ್ನುಮುಂದೆ ಎಚ್ಚರದಿಂದಿರುತ್ತೇನೆ" ಎಂದು ಉತ್ತರಿಸಿದ್ದಳು. ಕಳೆದವರ್ಷ ಮೇ ತಿಂಗಳಲ್ಲಿ ನಾನು ಭಾರತಪ್ರವಾಸದ ವೇಳೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿಕ್ಕೆ ಶಿವಮೊಗ್ಗಕ್ಕೂ ಭೇಟಿಯಿತ್ತಿದ್ದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ಹೋದ ನನ್ನನ್ನು ಸ್ವಾಗತಿಸಲಿಕ್ಕೆ ಪ್ರಣಮ್ಯ ಹೂಗುಚ್ಛ ಹಿಡಿದುಕೊಂಡು ತನ್ನ ಅಪ್ಪನೊಡನೆ ರೈಲುನಿಲ್ದಾಣಕ್ಕೆ ಬಂದಿದ್ದಳು. ಅಂದು ಮಧ್ಯಾಹ್ನದೂಟ ಅವರ ಮನೆಯಲ್ಲೇ. ಪ್ರಣಮ್ಯಳ ಅಕ್ಕ ಪ್ರಣತಿ ಈಗಾಗಲೇ ಎಂಜಿನಿಯರಿಂಗ್ ಓದು ಮುಗಿಸಿ ಬೆಂಗಳೂರಲ್ಲಿ ಐಟಿ ಉದ್ಯೋಗದಲ್ಲಿರುವವಳು ಸಹ ಬಂದಿದ್ದಳು.
ಪ್ರಣಮ್ಯಳ ಶಿಕ್ಷಕರಾಗಿದ್ದ ಚೇತನ್ ರಾಯನಹಳ್ಳಿ ಮಾತ್ರವಲ್ಲದೇ, ಅದುವರೆಗೆ ನನಗೆ ವಾಟ್ಸ್ಯಾಪ್ ಮೂಲಕವಷ್ಟೇ ಪರಿಚಿತರಾಗಿದ್ದ ಇನ್ನೂ ಕೆಲವರನ್ನು ಆಹ್ವಾನಿಸಿದ್ದರು. ಮನೆತುಂಬ ಪ್ರಣಮ್ಯಳ ಪೇಂಟಿಂಗ್‌ಗಳು, ಪ್ರಶಸ್ತಿಗಳು, ಪಾರಿತೋಷಕಗಳು. ಆದರೆ ದೊಡ್ಡಸ್ತಿಕೆ ಜಂಬ ಬಡಿವಾರ ಯಾರಲ್ಲೂ ಲವಲೇಶವೂ ಇಲ್ಲ. ಮಾರನೆಯ ದಿನ ಬೆಳಗ್ಗೆ ನಾನು ಶಿವಮೊಗ್ಗದಿಂದ ಬೆಂಗಳೂರಿಗೆ ರೈಲು ಹಿಡಿಯುವಾಗಲೂ ಪ್ರಣಮ್ಯ ಮತ್ತು ಅವಳ ತಂದೆ-ತಾಯಿ ನನ್ನನ್ನು ಬೀಳ್ಕೊಡಲಿಕ್ಕೆ ಬಂದಿದ್ದರು.
ಇಂಥ ಹಿನ್ನೆಲೆಯಿರುವ ಪ್ರಣಮ್ಯ ಆ ಪತ್ರದಲ್ಲಿ “ಅಳಿಲಿನ ಬಾಲ ಅಳೆಯುವ ಬಾಲರವಿಯ ಚಿತ್ರ ಬಿಡಿಸಿ ಕಳುಹಿಸುತ್ತೇನೆ" ಎಂದಾಗ ಎಂಥ ಮೋಹಕ ಚಿತ್ರವೊಂದು ಮೂಡಿಬರಲಿದೆ ಎಂದು ನನಗೆ ಅಂದಾಜಿತ್ತು. ಅದಾಗಿ ನಾಲ್ಕೈದು ದಿನಗಳಲ್ಲೇ ಪ್ರಣಮ್ಯ ಕಪ್ಪು-ಬಿಳುಪು ರೇಖಾಚಿತ್ರವೊಂದನ್ನು ಕಳುಹಿಸಿ “ಇದಕ್ಕಿನ್ನೂ ಬಣ್ಣ ತುಂಬಬೇಕಿದೆ. ಆದರೆ ಇದು ಜ್ಯೋತಿ ಮೇಡಂ ಬರೆದ ಕವನಕ್ಕೆ ಸರಿಹೊಂದುವಂತೆ ಇದೆಯೇ ಅಂತ ಮೊದಲಿಗೆ ನಿಮ್ಮನ್ನೊಮ್ಮೆ ಕೇಳುತ್ತಿದ್ದೇನೆ" ಎಂದು ಬರೆದಿದ್ದಳು.
“ಶತಪ್ರತಿಶತ ಹೊಂದುತ್ತದೆ!" ಎಂದು ಅವಳಿಗೆ ತಿಳಿಸಿದೆ. ಆಮೇಲೆ ಎರಡೇ ದಿನಗಳೊಳಗೆ ಬಂತು ವರ್ಣರಂಜಿತ ಚಿತ್ರ! ಹೆಗಲಮೇಲೆ ಅಳತೆಟೇಪು ಇಳಿಬಿಟ್ಟು ಪಕ್ಕಾ ಟೈಲರ್‌ನಂತೆ ಕಾಣುವ ಸೂರ್ಯದೇವ. ಕೊಂಬೆಯ ಮೇಲೆ ವಿಧೇಯನಾಗಿ ಕುಳಿತಿರುವ ಅಳಿಲು. ಹೆಚ್ಚೂಕಡಿಮೆ ಅದರ ದೇಹದಷ್ಟೇ ಗಾತ್ರದ ಪುಚ್ಛ. ಬೇಗಡೆ ಅಂಟಿಸಲಿಕ್ಕಾಗಿ ಬಾಲದ ಅಳತೆ ತಗೊಳ್ಳಲಾಗುತ್ತಿದೆ.
“ವಾಹ್ ಪ್ರಣಮ್ಯ ವಾಹ್!" ಎಂದಷ್ಟೇ ನನ್ನ ಪ್ರತಿಕ್ರಿಯೆ. ಅಷ್ಟರಲ್ಲಿ ಮತ್ತೊಂದಿಷ್ಟು ಪೂರಕ ಮಾಹಿತಿ ಬಂತು, ಪ್ರಣಮ್ಯಳ ಅಮ್ಮನಿಂದ: “ಪ್ರಣಮ್ಯ ಬಾಲರವಿ ಅಳಿಲಿನ ಬಾಲ ಅಳೆಯುವ ಚಿತ್ರ ಕಳಿಸಿದಳಷ್ಟೆ? ಆ ಚಿತ್ರ ಬರೆಯುವಾಗ ಮನೆಯಲ್ಲಿದ್ದ 88 ವರ್ಷದ ನಮ್ಮಮ್ಮ ಬಂದು ನೋಡಿ ಏನ್ಮಾಡ್ತಾ ಇದ್ದಿ ಅಂತ ಕೇಳಿದ್ದಾರಂತೆ.
ಪ್ರಣಮ್ಯ ಅವರಿಗೂ ಕುಂಚ ಕೊಟ್ಟು ಬಣ್ಣ ಹಚ್ಚಿಸಿ (ಸ್ವಲ್ಪ ತಪ್ಪಾಗಿದೆ ಎಂದು ಇಟ್ಟ ಚಿತ್ರಕ್ಕೆ) ದೊಡ್ಡಮ್ಮ ಎಷ್ಟು ಚೆನ್ನಾಗಿ ಬಣ್ಣ ಹಚ್ಚಿದ್ದಾರೆ ನೋಡಮ್ಮ ಅಂತ ತೋರಿಸಿದ್ಲು. ಅವರಿಗೆ ಹೇಗೆ ಇಷ್ಟು ಚೆನ್ನಾಗಿ ಬರುತ್ತದೆ ಅಂತ ಆಶ್ಚರ್ಯದ ಪ್ರಶ್ನೆ ಅವಳದು. 30-40 ವರ್ಷಗಳ ಹಿಂದೆ ನಮ್ಮನೆಯಲ್ಲಿ ದೇವರಮನೆ, ಅಡುಗೆಮನೆ ಗೋಡೆಗೆಲ್ಲಾ ಅಮ್ಮನೇ ಬಣ್ಣ ಹಚ್ಚುತ್ತಿದ್ದರು(ಮಡಿಯ ಕಾರಣವೂ ಇತ್ತು). ಅದೂ ಬಿಳಿಬಣ್ಣಕ್ಕೆ ಜೇಡಿಮಣ್ಣು, ಕೆಂಪುಬಣ್ಣಕ್ಕೆ ಕೆಮ್ಮಣ್ಣು, ತೋಟದಿಂದ ಕೆಂಪುಮಣ್ಣು ತಂದು ಅದಕ್ಕೆ ನಿಂಬೆರಸ, ಸ್ವಲ್ಪ ಬೆಲ್ಲ ಹಾಕಿ ಕಲಸಿ, ಕದಡಿ ಹಚ್ಚುತ್ತಿದ್ದರಂತೆ.
ಒಣಹುಲ್ಲಿನ ಸಿಂಬೆ ಮಾಡಿ ಬ್ರಷ್‌ನಂತೆ ಬಳಸುತ್ತಿದ್ದರಂತೆ. ಕಾಲಕ್ರಮೇಣ ಸುಣ್ಣ, ಬ್ರಷ್ ಬಂದವು. ಈಗಂತೂ ಥರಥರದ ಬಣ್ಣಗಳಿವೆ. ಒಟ್ಟಿನಲ್ಲಿ ಚಿತ್ರಬರೆಯಲು ಹೋಗಿ ಇಷ್ಟೆಲ್ಲ ಮಾಹಿತಿ ತಿಳಿದುಕೊಂಡಹಾಗಾಯಿತು.’
ಕವಯಿತ್ರಿ ಜ್ಯೋತಿ ಮಹಾದೇವ್‌ಗೆ ಇದನ್ನು ಒಳ್ಳೇ ಸ್ಟೈಲ್ ನಲ್ಲೇ ತೋರಿಸೋಣ ಅಂದ್ಕೊಂಡೆ. ಏನೆಂದರೆ, “ನೋಡಿ ನಿಮ್ಮ ತನಗ ಕವನಕ್ಕೆ ಶಿವಮೊಗ್ಗದ ಪ್ರಣಮ್ಯ ಎಂಬ ಪ್ರತಿಭಾನ್ವಿತ ಹುಡುಗಿ ಚಿತ್ರ ಬಿಡಿಸಿದ್ದಾಳೆ!" ಅಂತ. ಮರುಯೋಚನೆ ಬಂತು. ಅವರೊಬ್ಬರಿಗೇ ಏಕೆ, ಇದರದೊಂದು ವರ್ಲ್ಡ್ ಪ್ರೀಮಿಯರ್ ಪ್ರದರ್ಶನವೇ ಆಗಲಿ ಎಂದುಕೊಂಡು ‘ವಿಶ್ವವಾಣಿ’ಯ ಅಂಕಣವೇ ಸೂಕ್ತವೆಂದು ಕೊಂಡೆ. ಇಲ್ಲೀಗ ನಿಮಗೆಲ್ಲ ಈ ಚಿತ್ರವನ್ನು ನೋಡುವ ಭಾಗ್ಯ. ಅಂದ ಹಾಗೆ ಕುವೆಂಪು ಅವರ ಪ್ರಖ್ಯಾತ “ದೇವರು ರುಜು ಮಾಡಿದನು; ರಸವಶನಾಗುತ ಕವಿ ಅದ ನೋಡಿದನು!" ಕವನ ನಿಮಗೆ ನೆನಪಿರಬಹುದು. ಅದಕ್ಕೆ ಹೋಲಿಸಿದರೆ ಇದರಲ್ಲಿ ಇನ್ನೂ ಎರಡು ಹಂತಗಳು: ಸೂರ್ಯದೇವನು ಅಳಿಲಿನ ಬಾಲ ಅಳೆದನು; ಅದನ್ನು ಕಂಡು ಕವಯಿತ್ರಿ ತನಗ ಬರೆದಳು; ಅಂಕಣಕಾರ ಅದರ ವ್ಯಾಖ್ಯಾನ ಮಾಡಿದನು; ಚಿತ್ರಕಾರ್ತಿ ಹುಡುಗಿಯು ಕಲರ್ ಕಲರ್ ಚಿತ್ರ ಬಿಡಿಸಿದಳು!