Raghava Sharma Nidle Column: ತುಳು ಅಸ್ತ್ರ: ಡಿಕೆಶಿ ಹೊಸ ರಾಜಕೀಯ ಲೆಕ್ಕಾಚಾರ ?
ಸೆ.18ರಂದು ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳುವಿಗೆ ಎರಡನೇ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡಲು ನಿರ್ಧರಿಸಲಾಯಿತು. ಇದರ ಜತೆಗೆ ಮಂಗಳೂರಿನ ಮೀನುಗಾರಿಕಾ ದಕ್ಕೆಗೆ ಮುಖ್ಯಮಂತ್ರಿ ಸ್ವತಃ ಭೇಟಿ ನೀಡಿ ಮೀನುಗಾರರು, ಕಾರ್ಮಿಕರು, ಮಹಿಳೆಯರು ಮತ್ತು ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಿರುವುದು ರಾಜಕೀಯವಾಗಿ ಮತ್ತೊಂದು ಗಮನಾರ್ಹ ಹೆಜ್ಜೆ.
-
ಜನಪಥ
ಮೋದಿಯವರನ್ನು ಜನ ಇಷ್ಟಪಡಲು ಅವರ ಮಾಸ್ ಕನೆಕ್ಟ್ ಕಾರ್ಯತಂತ್ರವೇ ಕಾರಣ. ಮೋದಿ ನಮ್ಮವರು ಎಂಬ ಭಾವನೆ ಜನರಲ್ಲಿ ಬೇರೂರಿರುವುದು ಇದೇ ಕಾರಣಕ್ಕೆ. ಇದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅರ್ಥಮಾಡಿಕೊಳ್ಳದಿದ್ದರೂ, ಡಿ.ಕೆ. ಶಿವಕುಮಾರ್ ಚೆನ್ನಾಗಿ ಅರಿತುಕೊಂಡಿದ್ದಾರೆ. ಬರೀ ಮೋದಿ ವಿರೋಧಿ ಮಾತು ಮತಗಳನ್ನು ತಂದುಕೊಡುವುದಿಲ್ಲ ಎನ್ನುವುದು ಡಿಕೆಗೆ ಗೊತ್ತಿದೆ.
ಕರಾವಳಿಯ ರಾಜಕೀಯದಲ್ಲಿ ಹಿಂದುತ್ವ, ಸಂಘಟನೆ ಮತ್ತು ಧಾರ್ಮಿಕ ವಿಚಾರಗಳು ದಶಕ ಗಳಿಂದ ಪ್ರಮುಖ ರಾಜಕೀಯ ಅಂಶಗಳಾಗಿವೆ. ಆದರೆ ಇದೇ ಕರಾವಳಿಯಲ್ಲಿ ಜನರ ದೈನಂದಿನ ಬದುಕಿಗೆ, ಸಂಸ್ಕೃತಿಗೆ ಮತ್ತು ಅಸ್ಮಿತೆಗೆ ಹತ್ತಿರವಾದ ಮತ್ತೊಂದು ಬಲವಾದ ಅಂಶವಿದೆ. ಅದು- ತುಳು ಭಾಷೆ. ಇದೀಗ ತುಳುವಿಗೆ ಆಡಳಿತಾತ್ಮಕ ಮಾನ್ಯತೆ, ಸ್ಥಳೀಯ ಜನರ ಆಕಾಂಕ್ಷೆಗಳು, ಮೀನುಗಾರರ ಸಮಸ್ಯೆಗಳಿಗೆ ನೇರ ಸ್ಪಂದನೆ ಮತ್ತು ಕರಾವಳಿ ಅಭಿವೃದ್ಧಿಯ ಬಗ್ಗೆ ವಿಶೇಷ ಆಸಕ್ತಿ ತೋರಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರಾವಳಿಯ ರಾಜಕೀಯದಲ್ಲಿ ಹೊಸ ನಿರೂಪಣೆಯನ್ನು ಕಟ್ಟಲು ಪ್ರಯತ್ನಿಸುತ್ತಿದ್ದಾರೆ.
ಸೆ.18ರಂದು ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳುವಿಗೆ ಎರಡನೇ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡಲು ನಿರ್ಧರಿಸಲಾಯಿತು. ಇದರ ಜತೆಗೆ ಮಂಗಳೂರಿನ ಮೀನುಗಾರಿಕಾ ದಕ್ಕೆಗೆ ಮುಖ್ಯಮಂತ್ರಿ ಸ್ವತಃ ಭೇಟಿ ನೀಡಿ ಮೀನುಗಾರರು, ಕಾರ್ಮಿಕರು, ಮಹಿಳೆಯರು ಮತ್ತು ವ್ಯಾಪಾರಿಗಳ ಸಮಸ್ಯೆ ಗಳನ್ನು ಆಲಿಸಿರುವುದು ರಾಜಕೀಯವಾಗಿ ಮತ್ತೊಂದು ಗಮನಾರ್ಹ ಹೆಜ್ಜೆ.
ಇದನ್ನೂ ಓದಿ: Raghava Sharma Nidle Column: ಮೋದಿ ಬಿಡಿ, ನಿಮ್ಮ ಪರ್ಯಾಯ ಮಾದರಿ ಏನು ರಾಹುಲ್ ?
ಹೀಗಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರ ಕರಾವಳಿ ಪ್ರವಾಸವನ್ನು ಕೇವಲ ಆಡಳಿತಾತ್ಮಕ ಭೇಟಿ ಎನ್ನುವುದಕ್ಕಿಂತ, ಭಾಷೆ-ಜೀವನೋಪಾಯ-ಅಭಿವೃದ್ಧಿ ಎಂಬ ಮೂರು ಭಾವನಾತ್ಮಕ ಮತ್ತು ಪ್ರಾಯೋಗಿಕ ವಿಚಾರಗಳನ್ನು ಒಟ್ಟಿಗೆ ಮುಟ್ಟುವ ರಾಜಕೀಯ ಪ್ರಯತ್ನ ಎಂದು ವಿಶ್ಲೇಷಿಸ ಬಹುದು. ತುಳುನಾಡಿನ ಜನರಿಗೆ ತುಳು ಎಂದರೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ಯಕ್ಷಗಾನದಿಂದ ಭೂತಾರಾಧನೆವರೆಗೆ, ಜನಪದದಿಂದ ಕುಟುಂಬ ಸಂಬಂಧಗಳವರೆಗೆ, ಆಚರಣೆ ಗಳಿಂದ ಬದುಕಿನ ಶೈಲಿವರೆಗೆ ಹರಡಿರುವ ಸಾಂಸ್ಕೃತಿಕ ಅಸ್ಮಿತೆ. ದೇಶದಾದ್ಯಂತ ತುಳು ಭಾಷಿಕರನ್ನು ಒಗ್ಗೂಡಿಸಿರುವುದೇ ಈ ಸಾಂಸ್ಕೃತಿಕ ಅಸ್ಮಿತೆ.
ದೇಶದ ಯಾವ ಭಾಗದಲ್ಲಿ ತುಳುವರನ್ನು ನೀವು ನೋಡಿ; ಅವರು ತಮ್ಮದೇ ಆದ ವಿಶಿಷ್ಟವಾದ ಒಗ್ಗಟ್ಟಿನ ಕೂಟವೊಂದನ್ನು ನಿರ್ಮಾಣ ಮಾಡಿಕೊಂಡಿರುತ್ತಾರೆ. ಹೀಗಾಗಿ ತುಳುವಿಗೆ ಆಡಳಿತಾತ್ಮಕ ಮಾನ್ಯತೆ ದೊರೆತಿರುವುದು ಜನರ ಮಧ್ಯೆ ಭಾವನಾತ್ಮಕ ಪರಿಣಾಮ ಉಂಟು ಮಾಡುವ ಸಾಧ್ಯತೆ ಯಿದೆ. ಅದರಲ್ಲೂ ಈ ನಿರ್ಧಾರವನ್ನು ಮಂಗಳೂರಿನ ಸಚಿವ ಸಂಪುಟ ಸಭೆ ನಡೆಸಿ ಘೋಷಿಸಿರು ವುದು ರಾಜಕೀಯ ಸಂದೇಶವನ್ನೂ ಒಳಗೊಂಡಿದೆ.
ಕರಾವಳಿಯನ್ನು ಕೇವಲ ಬೆಂಗಳೂರಿನಿಂದ ಆಡಳಿತ ನಡೆಸುವ ಪ್ರದೇಶವಾಗಿ ನೋಡುವುದಲ್ಲ. ಅಲ್ಲಿನ ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಅಭಿವೃದ್ಧಿ ವಿಚಾರಗಳಿಗೆ ನೇರವಾಗಿ ಸ್ಪಂದಿಸುವ ಪ್ರಯತ್ನ ಎಂಬ ಸಂದೇಶ ನೀಡಬೇಕು ಎನ್ನುವುದು ಡಿ.ಕೆ. ಶಿವಕುಮಾರರ ಕರಾವಳಿ ರಾಜಕೀಯ ತಂತ್ರದ ಭಾಗ. ತುಳುವನ್ನು ಆಡಳಿತ ಭಾಷೆಯನ್ನಾಗಿ ಮಾಡಿ, ತನ್ನ ಜವಾಬ್ದಾರಿ ನಿಭಾಯಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಚೆಂಡನ್ನು ಈಗ ಕೇಂದ್ರ ಸರ್ಕಾರದ ಮುಂದಿಟ್ಟಿದೆ. ನಿರ್ದಿಷ್ಟ ಭಾಷೆಗೆ ರಾಜ್ಯವೊಂದರಲ್ಲಿ ಅಧಿಕೃತ ಭಾಷೆಯ ಸ್ಥಾನಮಾನ ಸಿಗದೆ ಸಾಂವಿಧಾನಿಕ ಮಾನ್ಯತೆ ನೀಡಲು ಸ್ವಯಂಪ್ರೇರಿತ ನಿರ್ಧಾರ ತೆಗೆದುಕೊಳ್ಳುವುದು ಕೇಂದ್ರ ಸರ್ಕಾರಕ್ಕೆ ಕಷ್ಟವಾಗುತ್ತದೆ.
ಆದರೆ, ಇದೀಗ ತುಳುವನ್ನು 2 ಜಿಲ್ಲೆಗಳ ಆಡಳಿತ ಭಾಷೆಯನ್ನಾಗಿ ಮಾಡಿರುವುದರಿಂದ ಸಾಂವಿ ಧಾನಿಕ ಮಾನ್ಯತೆ (8ನೇ ಪರಿಚ್ಛೇದಕ್ಕೆ ಸೇರ್ಪಡೆ) ನೀಡಲು ಕೇಂದ್ರದ ಮುಂದಿದ್ದ ಒಂದು ಅಡೆ-ತಡೆ ತೆರವಾದಂತಾಗಿದೆ. ಹೀಗಿದ್ದರೂ ಆಡಳಿತ ಭಾಷೆ ಮತ್ತು ಅಧಿಕೃತ ಭಾಷೆ ನಡುವಿನ ವ್ಯತ್ಯಾಸವನ್ನು ಕೇಂದ್ರ ಹೇಗೆ ಗಮನಿಸುತ್ತದೋ ಗೊತ್ತಿಲ್ಲ.
ತುಳು ಪೂರ್ಣ ಪ್ರಮಾಣದಲ್ಲಿ ಬೆಳೆಯಲು ಹಾಗೂ ಅಗತ್ಯ ಅನುದಾನಗಳನ್ನು ಪಡೆಯಬೇಕೆಂದರೆ ಅದಕ್ಕೆ ಸಾಂವಿಧಾನಿಕ ಮಾನ್ಯತೆ ಅತ್ಯಗತ್ಯ. ಇಲ್ಲವಾದಲ್ಲಿ, ಕೇವಲ 2 ಜಿಲ್ಲೆಗಳ ಆಡಳಿತ ವ್ಯವಹಾರಗಳಿಗೆ ಸೀಮಿತವಾಗಿಬಿಡಲಿದೆ. ಈ ಕಾರಣದಿಂದಾಗಿಯೇ, ಈ ಬೆಳವಣಿಗೆ ಕಾಂಗ್ರೆಸ್ಸಿಗೆ ರಾಜಕೀಯವಾಗಿ ಲಾಭಕರ. ನಾವು ನಮ್ಮ ಕೆಲಸ ಮಾಡಿದ್ದೇವೆ, ದಶಕಗಳ ಬೇಡಿಕೆ ಈಡೇರಿಸಿದ್ದೇವೆ.
ಕೇಂದ್ರದಲ್ಲಿ ಬಿಜೆಪಿ ತನ್ನ ಕರ್ತವ್ಯ ಮಾಡಲಿ ಎನ್ನುತ್ತಿರುವ ಕಾಂಗ್ರೆಸ್, ಬಿಜೆಪಿ ಮುಖಂಡರನ್ನು ರಾಜಕೀಯವಾಗಿ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಈ ಹಿಂದೆ ಬಿಜೆಪಿ ಸರ್ಕಾರ ಡಾ.ಮೋಹನ್ ಆಳ್ವ ನೇತೃತ್ವದ ತಜ್ಞರ ಸಮಿತಿ ರಚನೆ ಮಾಡಿ, ವರದಿಯನ್ನೂ ಪಡೆದುಕೊಂಡಿತ್ತು.
ಅಧಿಕಾರವಧಿಯ ಅಂತ್ಯದದರೂ ತುಳುವಿಗೆ ಆಡಳಿತ ಅಥವಾ ಅಧಿಕೃತ ಭಾಷೆಯ ಮಾನ್ಯತೆ ನೀಡುವ ಘೋಷಣೆಯನ್ನು ಬಿಜೆಪಿ ಸರ್ಕಾರ ಮಾಡಿದ್ದಿದ್ದರೆ ಬಹುಶಃ ಇಂದು ಬಿಜೆಪಿ ಮುಖಂಡರು ಪೆಚ್ಚು ಮೋರೆ ಹಾಕಿ ಕೂರುವ ಸನ್ನಿವೇಶ ನಿರ್ಮಾಣವಾಗುತ್ತಿರಲಿಲ್ಲ. ಆದರೆ, ಕರಾವಳಿಗರ ನಾಡಿ ಮಿಡಿತ ಅರ್ಥ ಮಾಡಿಕೊಂಡ ಸಿಎಂ ಡಿ.ಕೆ. ಶಿವಕುಮಾರ್, ಅಲ್ಲಿಗೇ ಹೋಗಿ ತಾವು ಪೊಲಿಟಿಕಲಿ ಸ್ಮಾರ್ಟ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಡಿಕೆಶಿ ಅವರ ಕರಾವಳಿ ರಾಜಕೀಯ ಪ್ರಯೋಗದಲ್ಲಿ ಮೀನುಗಾರ ಸಮುದಾಯದ ವಿಚಾರವೂ ಪ್ರಮುಖ ವಾದುದು. ಸೆ.19ರ ಬೆಳಗ್ಗೆ (ಪೂರ್ವನಿಗದಿತ ಸಾರ್ವಜನಿಕ ಕಾರ್ಯಕ್ರಮವಾಗಿರಲಿಲ್ಲ) ಮಂಗಳೂರಿನ ಮೀನುಗಾರಿಕಾ ದಕ್ಕೆಗೆ ಭೇಟಿ ನೀಡಿ, ಮೀನುಗಾರರು ಮತ್ತು ಅಲ್ಲಿನ ಕಾರ್ಮಿಕರೊಂದಿಗೆ ನೇರವಾಗಿ ಮಾತನಾಡಿದರು.
ಮಹಿಳೆಯರು ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ ಕೊರತೆಯನ್ನು ಮುಖ್ಯಮಂತ್ರಿಯ ಗಮನಕ್ಕೆ ತಂದರು. ಇದಕ್ಕಿಂತ ಗಮನ ಸೆಳೆದದ್ದು ಅಧಿಕಾರಿಗಳ ವಿರುದ್ಧ ಅವರು ತೋರಿದ ಅಸಮಾಧಾನ. ಭೇಟಿ ವೇಳೆ ದಕ್ಕೆಯ ವ್ಯಾಪಾರ ಚಟುವಟಿಕೆಗಳು ಸ್ಥಗಿತಗೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಂದ ತನಿಖಾ ವರದಿ ಕೇಳಿದರು. ಅಧಿಕಾರಿಗಳೇ ಇಂತಹ ಆದೇಶ ನೀಡಿದ್ದರೆ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಯೊಬ್ಬರು ಬೆಳಗಿನ ಜಾವ ನೇರವಾಗಿ ದಕ್ಕೆಗೆ ತೆರಳಿ, ಮೀನುಗಾರರ ನಡುವೆ ನಿಂತು ಅವರ ಸಮಸ್ಯೆಗಳನ್ನು ಕೇಳಿ, ಅಧಿಕಾರಿಗಳನ್ನೇ ಪ್ರಶ್ನಿಸುವುದು ಆಡಳಿತಾತ್ಮಕವಾಗಿ ಒಂದು ಸಾಮಾನ್ಯ ಘಟನೆಯೇನಲ್ಲ. ಏಕೆಂದರೆ ಇದರ ರಾಜಕೀಯ ಸಂದೇಶ ಇನ್ನೂ ದೊಡ್ಡದಿದೆ. ದಕ್ಕೆಗೆ ಭೇಟಿ ನೀಡುವ ಮೂಲಕ ಅವರು ಮಂಗಳೂರಿನಿಂದ ಹಿಡಿದು ಉಡುಪಿ, ಉತ್ತರ ಕನ್ನಡದ ಮೀನುಗಾರ ಸಮುದಾಯ ಹಾಗೂ ಅವರೊಂದಿಗೆ ಪ್ರತ್ಯಕ್ಷ/ಪರೋಕ್ಷವಾಗಿ ವ್ಯಾವಹಾರಿಕ ಸಂಪರ್ಕ ಇಟ್ಟುಕೊಂಡಿರುವವರನ್ನು ಸೆಳೆಯುವ ಯತ್ನ ಮಾಡಿದ್ದಾರೆ.
ರಾಜ್ಯದ ಹಿಂದಿನ ಮುಖ್ಯಮಂತ್ರಿಗಳು ಬಿಡಿ, ಕರಾವಳಿ ಭಾಗದ ಬಿಜೆಪಿ/ಕಾಂಗ್ರೆಸ್ ಪಕ್ಷಗಳ ಜನಪ್ರತಿನಿಧಿ ಅಥವಾ ಸಚಿವರೇ ಈ ರೀತಿ ಮಾಡಿರುವ ಉದಾಹರಣೆ ಇರಲಿಕ್ಕಿಲ್ಲ. ಜನರಿಗೆ ತಮ್ಮ ನಾಯಕನ ಬಗ್ಗೆ ನಂಬಿಕೆ ಮೂಡಬೇಕೆಂದರೆ ಅದು ನೇರವಾಗಿ ಕನೆಕ್ಟ್ ಆಗುವುದರಿಂದ ಮಾತ್ರ ಸಾಧ್ಯ.
ದೇಶದಲ್ಲಿ ಮೋದಿಯವರನ್ನು ಜನ ಇಷ್ಟಪಡಲು ಅವರ ಮಾಸ್ ಕನೆಕ್ಟ್ ಕಾರ್ಯತಂತ್ರವೇ ಕಾರಣ. ಮೋದಿ ನಮ್ಮವರು ಎಂಬ ಭಾವನೆ ಜನರಲ್ಲಿ ಬೇರೂರಿರುವುದು ಇದೇ ಕಾರಣಕ್ಕೆ. ಇದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅರ್ಥಮಾಡಿಕೊಳ್ಳದಿದ್ದರೂ, ಡಿ.ಕೆ. ಶಿವಕುಮಾರ್ ಚೆನ್ನಾಗಿ ಅರಿತುಕೊಂಡಿದ್ದಾರೆ.
ಬರೀ ಮೋದಿ ವಿರೋಧಿ ಮಾತು ಮತಗಳನ್ನು ತಂದುಕೊಡುವುದಿಲ್ಲ ಎನ್ನುವುದು ಡಿಕೆಗೆ ಗೊತ್ತಿದೆ. ವಿಶೇಷ ಎಂದರೆ ಡಿ.ಕೆ. ಶಿವಕುಮಾರರ ರಾಜಕೀಯ ಕಾರ್ಯಶೈಲಿ, ನಡೆ/ನುಡಿಯಲ್ಲಿ ಮೋದಿ ಮಾದರಿ ಸ್ಪಷ್ಟ ಗೋಚರಿಸುತ್ತಿದೆ. ಕರಾವಳಿಯ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುವ ಮೀನುಗಾರ ಸಮುದಾಯದೊಂದಿಗೆ ನೇರ ಸಂಪರ್ಕ ಬೆಳೆಸುವ ಪ್ರಯತ್ನದಲ್ಲೂ ಮೋದಿ ಮಾದರಿಯ ಛಾಯೆಯಿದೆ. ಅವರು ಮೀನುಗಾರರ ಸಮಸ್ಯೆ ಕೇಳುವುದಕ್ಕಷ್ಟೇ ಸೀಮಿತವಾಗಲಿಲ್ಲ.
ಬಂದರು ಮತ್ತು ಸಮುದ್ರಾಧಾರಿತ ಆರ್ಥಿಕತೆಯನ್ನು ‘ಬ್ಲೂ ಎಕಾನಮಿ’ಯೊಂದಿಗೆ ಜೋಡಿಸುವ ಬಗ್ಗೆ ಮಾತನಾಡಿದ್ದಾರೆ. ಮಂಗಳೂರಿನ ದಕ್ಕೆಗೆ ಸಂಬಂಧಿಸಿದ ಡ್ರೆಜ್ಜಿಂಗ್, ಮೀನುಗಾರರ ಮೂಲ ಸೌಕರ್ಯ, ಮಹಿಳೆಯರಿಗೆ ಶೌಚಾಲಯ, ಆಸ್ಪತ್ರೆ ಮತ್ತು ತುರ್ತು ಸೇವೆಗಳಂತಹ ಸಮಸ್ಯೆಗಳನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.
ಅಳಿವೆ ಬಾಗಿಲಿನ ಡ್ರೆಜ್ಜಿಂಗ್‌ಗೂ ತಾಂತ್ರಿಕ ವರದಿ ಪಡೆಯುವ ಬಗ್ಗೆ ತಿಳಿಸಿದ್ದಾರೆ. ಇದರಿಂದ ಮೀನುಗಾರಿಕೆ ಎಂದರೆ ಕೇವಲ ಒಂದು ವೃತ್ತಿಯಲ್ಲ; ಕರಾವಳಿಯ ಆರ್ಥಿಕತೆಯ ಪ್ರಮುಖ ಶಕ್ತಿ ಎಂಬ ರಾಜಕೀಯ ಸಂದೇಶವನ್ನು ನೀಡುವ ಪ್ರಯತ್ನ ಕಾಣುತ್ತಿದೆ. ಕರಾವಳಿ ಅಭಿವೃದ್ಧಿಯ ಚರ್ಚೆಯಲ್ಲಿ ಮೀನುಗಾರ ಸಮುದಾಯವನ್ನು ಪ್ರತ್ಯೇಕ ಮತಬ್ಯಾಂಕ್‌ನಂತೆ ನೋಡುವುದಕ್ಕಿಂತ, ಅಭಿವೃದ್ಧಿಯ ಪಾಲುದಾರರನ್ನಾಗಿ ತೋರಿಸುವುದು ಕಾಂಗ್ರೆಸ್‌ಗೆ ರಾಜಕೀಯವಾಗಿ ಹೊಸ ನಿರೂಪಣೆಯಾಗಬಹುದು.
ಮತ್ತೊಂದು ವಿಶೇಷತೆ ಎಂದರೆ, ಕರಾವಳಿಯ ಉಳಿದು ಸ್ಥಳೀಯ ವಿಚಾರಗಳನ್ನು ನೇರವಾಗಿ ಪರಿಶೀಲಿಸುವ ಅವರ ಶೈಲಿ. ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸುವುದಕ್ಕೂ ಮುನ್ನವೇ ಅವರು ಬಂದರು, ಮೀನುಗಾರಿಕೆ, ಮೂಲಸೌಕರ್ಯ, ಪ್ರವಾಸೋದ್ಯಮ, ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳ ಕುರಿತು ಸ್ಥಳೀಯ ಅಗತ್ಯಗಳನ್ನು ಆಲಿಸಿದರು.
ಕಳೆದ ಜನವರಿಯಲ್ಲಿಯೇ ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುವ ಬಗ್ಗೆ ಅವರು ಮಾತನಾಡಿದ್ದರು. ಕರಾವಳಿಯ ನೈಸರ್ಗಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಸ್ಥಳೀಯ ಉದ್ಯೋಗ ಸೃಷ್ಟಿಸಬೇಕೆಂದು ಒತ್ತಿ ಹೇಳಿದ್ದರು. ಈಗ ಮುಖ್ಯಮಂತ್ರಿಯಾದ ನಂತರ ಅದೇ ವಿಚಾರಕ್ಕೆ ಇನ್ನಷ್ಟು ಆಡಳಿತಾತ್ಮಕ ಒತ್ತು ಸಿಕ್ಕಿದೆ.
ಕರಾವಳಿಯಲ್ಲಿ 3 ದಿನ ಉಳಿದು ಸ್ಥಳೀಯ ಸಮಸ್ಯೆಗಳನ್ನು ನೇರವಾಗಿ ಆಲಿಸುವ ಶೈಲಿ ಬೆಂಗಳೂರು ಕೇಂದ್ರಿತ ಆಡಳಿತ ಎಂಬ ಭಾವನೆಗೆ ವಿರುದ್ಧವಾದ ರಾಜಕೀಯ ಚಿತ್ರಣ ಕಟ್ಟಲು ಸಹಾಯ ಮಾಡಬಹುದು. ಬೆಂಗಳೂರಿನಲ್ಲಿ ನಡೆದ ತುಳುನಾಡು ಸಂಸ್ಕೃತಿಗೆ ಸಂಬಂಧಿಸಿದ ಅಸ್ಟೆಮಿದ ಐಸಿರಿ ಕಾರ್ಯಕ್ರಮದಲ್ಲೂ ಡಿ.ಕೆ. ಶಿವಕುಮಾರ್ ತುಳುನಾಡಿನ ಜನರೊಂದಿಗೆ ಬೆರೆತು ಮಾತನಾಡಿದ್ದಾರೆ.
ತುಳು ಭಾಷೆ-ಸಂಸ್ಕೃತಿಯ ಬಗೆಗಿನ ಅವರ ಸಂದೇಶ ನಾನು ನಿಮ್ಮ ಸಮಸ್ಯೆಗಳನ್ನು ಕೇಳುವವನು; ನಿಮ್ಮ ಭಾಷೆ ಮತ್ತು ಬದುಕನ್ನು ಗೌರವಿಸುವವನು ಎಂಬ ಭಾವನಾತ್ಮಕ ಸಂಪರ್ಕ ನಿರ್ಮಿಸುವ ಪ್ರಯತ್ನ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಂತಹ ಸಕ್ರಿಯ ಶಾಸಕ (ಹಿಂದೆ ಬಿಜೆಪಿಯಲ್ಲಿದ್ದರು) ಕೂಡ ಈ ಭಾಗದಲ್ಲಿ ಸಿಕ್ಕಿರುವುದು ಶಿವಕುಮಾರ್‌ಗೆ ಪ್ಲಸ್ ಪಾಯಿಂಟ್. ಹಿಂದುತ್ವ ರಾಜಕಾರಣಕ್ಕೆ ಮುಳುವೇ? ಕರಾವಳಿ ಭಾಗದಲ್ಲಿ ಇದು ಬಿಜೆಪಿ ಪಾಲಿಗೆ ಅತ್ಯಂತ ಪ್ರಮುಖ ಪ್ರಶ್ನೆ. ಇಲ್ಲಿ ಬಿಜೆಪಿಯ ರಾಜಕೀಯ ಬಲ ಕೇವಲ ಒಂದು ವಿಷಯದ ಮೇಲೆ ನಿಂತಿಲ್ಲ.
ಹಿಂದುತ್ವ, ಸಂಘಟನಾ ಜಾಲ, ಸ್ಥಳೀಯ ನಾಯಕತ್ವ, ಧಾರ್ಮಿಕ-ಸಾಮಾಜಿಕ ಸಂಘಟನೆಗಳ ಸಂಪರ್ಕ ಹಾಗೂ ಹಲವು ವರ್ಷಗಳ ರಾಜಕೀಯ ನೆಲೆ... ಎಲ್ಲವೂ ಬಿಜೆಪಿಯೊಂದಿಗೆ ಹಲವು ವರ್ಷಗಳಿಂದ ಜೋಡಿಸಿಕೊಂಡಿದೆ. ಹೀಗಾಗಿ ಮುಖ್ಯಮಂತ್ರಿಯವರ ಬಂಧುತ್ವ ರಾಜಕಾರಣದಿಂದ ಬಿಜೆಪಿಯ ಹಿಂದುತ್ವ ರಾಜಕಾರಣ ತಕ್ಷಣವೇ ದುರ್ಬಲವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಕರಾವಳಿಯಲ್ಲಿ ರಾಜಕೀಯ ಚರ್ಚೆಯ ಅಜೆಂಡಾವನ್ನು ಅದು ವಿಸ್ತರಿಸುವ ಸಾಧ್ಯತೆ ಹೆಚ್ಚಿಸಿದೆ.
ಇಲ್ಲಿಯವರೆಗೆ ಕರಾವಳಿಯಲ್ಲಿ ಚುನಾವಣೆ ಎಂದರೆ ಹಿಂದುತ್ವ, ಕೋಮು ವಿಚಾರಗಳು ಮತ್ತು ರಾಷ್ಟ್ರೀಯ ರಾಜಕೀಯ ಪ್ರಮುಖ ಚರ್ಚೆಗಳಾಗಿದ್ದರೆ, ಕಾಂಗ್ರೆಸ್ ಈಗ ಭಾಷೆ, ಸಂಸ್ಕೃತಿ, ಮೀನುಗಾರರ ಜೀವನೋಪಾಯ, ಸ್ಥಳೀಯ ಉದ್ಯೋಗ, ಪ್ರವಾಸೋದ್ಯಮ ಮತ್ತು ಕರಾವಳಿ ಅಭಿವೃದ್ಧಿಯನ್ನು ಅದಕ್ಕೆ ಸಮಾನಾಂತರವಾಗಿ ಮುಂದಿಡಲಿದೆ. ಇದು ಬಿಜೆಪಿಗೆ ಹೊಸ ರಾಜಕೀಯ ಸವಾಲು ಸೃಷ್ಟಿಸಿದೆ. ಕರಾವಳಿಯಲ್ಲಿ ಕಾಂಗ್ರೆಸ್ ಎದುರಿಸುತ್ತಿದ್ದ ಮತ್ತೊಂದು ರಾಜಕೀಯ ಪ್ರಶ್ನೆ ವ್ಯಕ್ತಿತ್ವದ್ದು.
ಕರಾವಳಿಯ ಕೆಲ ವಲಯಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಶೈಲಿಯ ಬಗ್ಗೆ ಇರುವ ಟೀಕೆಗಳು ಕಾಂಗ್ರೆಸ್‌ಗೆ ಪ್ರತಿಕೂಲ ವಾತಾವರಣ ನಿರ್ಮಿಸಿದ್ದವು. ವಿಶೇಷವಾಗಿ ಧಾರ್ಮಿಕ ವಿಚಾರಗಳಲ್ಲಿ ಸಿದ್ದರಾಮಯ್ಯರ ಹೇಳಿಕೆ-ರಾಜಕೀಯ ನಿಲುವುಗಳಿಂದಾಗಿ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತಿತ್ತು. ಹಾಗಂತ ಸಿದ್ದರಾಮಯ್ಯ ತಾವು ನಾಸ್ತಿಕರಲ್ಲ, ಮೂಢನಂಬಿಕೆಗೆ ವಿರೋಧಿ ಎಂದು ಹೇಳಿಕೊಂಡಿದ್ದರು. ಸಿದ್ದರಾಮಯ್ಯರ ಕಾರಣಕ್ಕಾಗಿಯೇ ಬಿಜೆಪಿ ಹಿಂದುತ್ವ ಕ್ರೋಢೀಕರಣದ ಮತಬ್ಯಾಂಕ್ ಇಲ್ಲಿ ಮಜಬೂತ್ ಆಗುತ್ತಿತ್ತು ಎನ್ನುವುದು ಅವಾಸ್ತವಿಕವೇನಲ್ಲ.
ಆದರೆ, ಡಿಕೆಶಿ ರಾಜಕೀಯ ಶೈಲಿ ವಿಭಿನ್ನವಾಗಿ ಕಾಣುತ್ತಿದೆ. ದೇವಾಲಯಗಳು ಮತ್ತು ಧಾರ್ಮಿಕ ಮುಖಂಡರನ್ನು ಭೇಟಿ ಮಾಡುವುದರ ಜೊತೆಗೆ, ಕರಾವಳಿಯನ್ನು ಎಲ್ಲಾ ಸಮುದಾಯಗಳ ಪ್ರದೇಶವೆಂದು ಹೇಳಿದ್ದಾರೆ. 2025ರಲ್ಲಿ ಅವರು ಕರಾವಳಿಯನ್ನು ಕೇವಲ ಹಿಂದುತ್ವದ ಭದ್ರಕೋಟೆ ಎಂದು ನೋಡುವ ನಿರೂಪಣೆಯನ್ನು ಪ್ರಶ್ನಿಸಿದ್ದರು ಮತ್ತು ಎಲ್ಲ ಧರ್ಮಗಳ ಜನರ ರಕ್ಷಣೆಯ ಬಗ್ಗೆ ಮಾತನಾಡಿದ್ದರು. ಹೀಗಾಗಿ ಸಿದ್ದರಾಮಯ್ಯರೊಂದಿಗೆ ಹೋಲಿಸಿದಾಗ ಶಿವಕುಮಾರ್ ಅವರ ಧಾರ್ಮಿಕ-ಸಾಂಸ್ಕೃತಿಕ ಅಭಿವ್ಯಕ್ತಿ ಹೆಚ್ಚು ಜನಸ್ನೇಹಿ ರೀತಿಯಲ್ಲಿದೆ ಎಂಬ ಮಾತುಗಳೀಗ ಇಲ್ಲಿ ಕೇಳಿ ಬರುತ್ತಿವೆ.
ಸದ್ಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ 19 ವಿಧಾನಸಭಾ ಸೀಟುಗಳಲ್ಲಿ 13 ಬಿಜೆಪಿ ಮತ್ತು 6 ಕಾಂಗ್ರೆಸ್ ತೆಕ್ಕೆಯಲ್ಲಿದೆ. ಶಿವಕುಮಾರ್‌ರಿಂದಾಗಿ ಕರಾವಳಿ ಜನರ ರಾಜಕೀಯ ಮನೋ ಭಾವ, ಮತದಾನದ ಮಾದರಿ ಸಂಪೂರ್ಣ ಬದಲಾಗುತ್ತದೆ ಎಂದು ಈಗಲೇ ಹೇಳಲಾಗದು. ಏಕೆಂದರೆ, ಹಿಂದು-ಮುಸ್ಲಿಂ ನಡುವಿನ ಸಣ್ಣ ಸಂಘರ್ಷದ ಘಟನೆಯೂ ಈ ಭಾಗದ ಜನರ ಮನಸ್ಸನ್ನು ವಿಚಲಿತಗೊಳಿಸಬಲ್ಲದು. ಆದರೆ ಒಂದು ಸಂಗತಿ ಮಾತ್ರ ಸ್ಪಷ್ಟ.
ಕರಾವಳಿಯ ರಾಜಕೀಯ ಸಂಭಾಷಣೆಯನ್ನು ಹಿಂದುತ್ವದ ಚೌಕಟ್ಟಿನಿಂದ ಹೊರತೆಗೆದು, ತುಳು-ಮೀನುಗಾರಿಕೆ-ಅಭಿವೃದ್ಧಿ-ಸ್ಥಳೀಯ ಅಸ್ಮಿತೆಯ ಕಡೆಗೆ ವಿಸ್ತರಿಸುವ ಪ್ರಯತ್ನವನ್ನು ಡಿ.ಕೆ. ಶಿವಕುಮಾರ್ ಆರಂಭಿಸಿದ್ದಾರೆ. ಇವೆಲ್ಲವೂ ಕಾಂಗ್ರೆಸ್‌ನ ಬಗ್ಗೆ ಕೆಲವರಲ್ಲಿರುವ ಹಳೆಯ ಕಲ್ಪನೆ ಗಳನ್ನು ಮರು ಪರಿಶೀಲಿಸುವ ಅವಕಾಶವನ್ನು ಸೃಷ್ಟಿಸಬಹುದೇ ಎನ್ನುವುದನ್ನು ಕಾದು ನೋಡಬೇಕು.