ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Lokesh Kayarga Column: ಅಂದು-ಇಂದು, ಎಂದೆಂದೂ ‘ಲೋಪ’ವೇ ಸೇವೆ !

ಕಳೆದ ಮೂರು ದಶಕಗಳಲ್ಲಿ ತನ್ನ ಮೇಲಿನ ಹಗರಣಗಳನ್ನು ಮುಚ್ಚಿಹಾಕಲು ಮತ್ತು ತನ್ನ ಪರ ವಕಾಲತ್ತು ವಹಿಸಲು ಕರ್ನಾಟಕ ಲೋಕಸೇವಾ ಆಯೋಗ ಎಷ್ಟು ಕೋಟಿ ಹಣ ಖರ್ಚು ಮಾಡಿದೆ ಎಂಬ ಮಾಹಿತಿ ಕಲೆ ಹಾಕಿದರೆ, ಅದೂ ಒಂದು ದೊಡ್ಡ ಹಗರಣವಾಗಬಹುದು!

ಅಂದು-ಇಂದು, ಎಂದೆಂದೂ ‘ಲೋಪ’ವೇ ಸೇವೆ !

-

ಲೋಕಮತ

ಬುದ್ಧ ಕಿಸಾಗೌತಮಿಗೆ ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಹೇಳಿದ್ದ ಕಥೆ ನಮಗೆಲ್ಲರಿಗೂ ಗೊತ್ತಿದೆ. ಕರ್ನಾಟಕದಲ್ಲಿ ಗಜೆಟೆಡ್ ಹುದ್ದೆಗಳಿಗೆ ನೇಮಕಾತಿ ಹೊಣೆ ಹೊತ್ತ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪರೀಕ್ಷೆಗಳಲ್ಲಿ ಅಕ್ರಮ ನಡೆಯದ ಒಂದಾದರೂ ಪರೀಕ್ಷೆ ಗಳಿವೆಯೇ ಎಂದು ಕೇಳಿದರೆ ಬುದ್ಧನ ಹಳೆಯ ಮಾತನ್ನೇ ಮತ್ತೆ ನೆನಪಿಸಿಕೊಳ್ಳಬೇಕಾಗುತ್ತದೆ.

ಕರ್ನಾಟಕದ ಲಕ್ಷಾಂತರ ಯುವಜನರ ಪಾಲಿಗೆ ಆಶಾಕಿರಣವಾಗಬೇಕಿದ್ದ ಸಾಂವಿಧಾನಿಕ ಸಂಸ್ಥೆ ಯೊಂದು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಹಗರಣಗಳ ಕೂಪವಾಗಿ ‘ಲೋಪಸೇವಾ ಆಯೋಗ’ವೆಂದು ಕುಖ್ಯಾತಿ ಪಡೆದಿರುವುದು ನಮ್ಮ ವ್ಯವಸ್ಥೆಯ ದೊಡ್ಡ ದುರಂತ. ಇಲ್ಲಿ ತಪ್ಪು ಮಾಡಿ ಸಿಕ್ಕಿಬಿದ್ದ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಅಥವಾ ಅಡ್ಡದಾರಿಯಿಂದ ಆಯ್ಕೆಯಾದ ಅಭ್ಯರ್ಥಿಗಳು ಶಿಕ್ಷೆಗೆ ಗುರಿಯಾದ ನಿದರ್ಶನಗಳೇ ವಿರಳ.

ಹಗರಣಗಳಲ್ಲಿ ಸಿಲುಕಿದವರನ್ನು ರಕ್ಷಿಸಲು ಆಡಳಿತ ಯಂತ್ರ ಹಾಗೂ ರಾಜಕೀಯ ನಾಯಕರು ಪಕ್ಷ ಭೇದ ಮರೆತು ಕೈಜೋಡಿಸುವ ವಿಚಿತ್ರ ವಿದ್ಯಮಾನಕ್ಕೆ ನಾವು ಒಂದಲ್ಲ, ಹಲವು ಬಾರಿ ಸಾಕ್ಷಿ ಯಾಗಿದ್ದೇವೆ. ಹೀಗಾಗಿಯೇ, ಸ್ವತಃ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ ಪ್ರಕರಣಗಳಲ್ಲೂ ತಪ್ಪಿತಸ್ಥರು ಕಾನೂನಿನ ಕುಣಿಕೆಯಿಂದ ನುಣುಚಿಕೊಳ್ಳುತ್ತಾರೆ.

ಇದನ್ನೂ ಓದಿ: Lokesh Kayarga Column: ಗಿರೀಶ್ ಭಾರದ್ವಾಜರ ‘ಎಂಜಿನಿಯರಿಂಗ್’ ನಮಗೇಕೆ ಸಿದ್ಧಿಸದು ?

ಇದೀಗ ಅಪರೂಪಕ್ಕೆಂಬಂತೆ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರನ್ನು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪದಡಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ಅವರು ಅಮಾನತುಗೊಳಿಸಿದ್ದಾರೆ. ರಾಜ್ಯ ಸಚಿವ ಸಂಪುಟವೂ ರಾಜ್ಯಪಾಲರ ಈ ಕ್ರಮವನ್ನು ಅನುಮೋದಿಸಿದೆ. ನಕಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸೃಷ್ಟಿಸಿ ತಮ್ಮ ಮಗಳಿಗೆ ಹುದ್ದೆ ಕೊಡಿಸಲು ಹೊರಟ ಪ್ರಕರಣದಲ್ಲಿ ಸಾಹುಕಾರ್ ಅವರ ’ಪುತ್ರಿ ವ್ಯಾಮೋಹ’ ಮೇಲ್ನೋಟಕ್ಕೆ ಸ್ಪಷ್ಟ ವಾಗಿ ಗೋಚರಿಸಿದೆ. ಆದರೆ, ಇಂತಹ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿದವರಿಗೆ ಕಾನೂನಿನ ಸಂಕೋಲೆಯನ್ನು ಬಿಡಿಸಿಕೊಳ್ಳುವುದು ತೀರಾ ಕಷ್ಟದ ಕೆಲಸವೇನೂ ಅಲ್ಲ.

ಲೋಕಸೇವಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾದ ಕಾರಣ ರಾಜ್ಯಪಾಲರು ಅಧ್ಯಕ್ಷರನ್ನು ಕೇವಲ ಅಮಾನತುಗೊಳಿಸಬಹುದಷ್ಟೇ. ಅವರನ್ನು ವಜಾಗೊಳಿಸಬೇಕಾದರೆ ಸುಪ್ರೀಂಕೋರ್ಟ್‌ ನಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಗಬೇಕು. ಆನಂತರ ಸುಪ್ರೀಂಕೋರ್ಟ್ ಸಲಹೆ ಮೇರೆಗೆ ರಾಷ್ಟ್ರಪತಿಗಳು ಮಾತ್ರ ಆಯೋಗದ ಅಧ್ಯಕ್ಷರನ್ನು ವಜಾಗೊಳಿಸಲು ಸಾಧ್ಯ. ಈ ಪ್ರಕ್ರಿಯೆ ಅತ್ಯಂತ ದೀರ್ಘವಾದದ್ದು. ಹೀಗಾಗಿ, ಮೇಲ್ನೋಟಕ್ಕೆ ತಪ್ಪು ಕಾಣುತ್ತಿದ್ದರೂ ಮುಂದೊಂದು ದಿನ ತಾಂತ್ರಿಕ ಕಾರಣಗಳಿಂದ ಪ್ರಕರಣ ಬಿದ್ದುಹೋದರೆ ಅಚ್ಚರಿಯೇನೂ ಇಲ್ಲ.

ಸ್ವಾನುಭವ ಮತ್ತು ಸತ್ಯದ ಗೆಲುವು

ಎರಡು ದಶಕಗಳ ಹಿಂದೆ (ಡಿಸೆಂಬರ್ 2006) ನಾನು ‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿದ್ದಾಗ ಆಯೋಗದ ಎಡವಟ್ಟುಗಳ ಬಗ್ಗೆ ‘ಕೆಪಿಎಸ್‌ಸಿ ಕರ್ಮಕಾಂಡ’ ಹೆಸರಿನಲ್ಲಿ ಸರಣಿ ಲೇಖನಗಳನ್ನು ಬರೆದಿದ್ದೆ. ಈ ವರದಿಗಳಲ್ಲಿ 1998 ಮತ್ತು 2004ರ ಗಜೆಟೆಡ್ ಪ್ರೊಬೆಷನರಿ ಪರೀಕ್ಷೆಗಳಲ್ಲಿ ನಡೆದಿದ್ದ ಅವ್ಯವಹಾರಗಳನ್ನು ಎಳೆಎಳೆಯಾಗಿ ಬಿಚ್ಚಿಡಲಾಗಿತ್ತು. ಆದರೆ, ತನ್ನ ತಪ್ಪನ್ನು ತಿದ್ದಿಕೊಳ್ಳಬೇಕಿದ್ದ ಕೆಪಿಎಸ್‌ಸಿ, ಪತ್ರಿಕೆಯ ವರದಿಗಳಿಂದ ತನ್ನ ‘ಮಾನನಷ್ಟ’ವಾಗಿದೆ ಎಂದು ಆರೋಪಿಸಿ ನ್ಯಾಯಾಲ ಯದ ಮೆಟ್ಟಿಲೇರಿತು. ಪತ್ರಿಕೆಯ ಅಂದಿನ ಮಾಲೀಕರಾಗಿದ್ದ ವಿಜಯ ಸಂಕೇಶ್ವರ, ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮತ್ತು ನನ್ನ ವಿರುದ್ಧ (OS 2504/2007) ಮೊಕದ್ದಮೆ ಹೂಡಿತು. ಸತತ 12 ವರ್ಷಗಳ ಕಾಲ ನಾವು ಈ ಪ್ರಕರಣಕ್ಕಾಗಿ ಕಾನೂನು ಹೋರಾಟ ನಡೆಸಿದ ನೆನಪು ಇನ್ನೂ ಹಸಿರಾಗಿದೆ.

ಅಂತಿಮವಾಗಿ ಸೆಪ್ಟೆಂಬರ್ 11, 2018ರಂದು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ( CCH-41) ಈ ಪ್ರಕರಣವನ್ನು ವಜಾಗೊಳಿಸಿತು. ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿ ದಂತೆ, ‘ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದವು. ಆಯೋಗದ ನೇಮಕಾತಿ ಪ್ರಕ್ರಿಯೆಗಳಲ್ಲಿನ ಲೋಪಗಳನ್ನು ಸಾರ್ವಜನಿಕರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಸದುದ್ದೇಶದಿಂದ ಈ ವರದಿಗಳನ್ನು ಪ್ರಕಟಿಸಲಾಗಿತ್ತು. ವರದಿಗಳು ಯಾವುದೇ ದ್ವೇಷಭಾವ ಅಥವಾ ಮಾನನಷ್ಟ ಮಾಡುವ ಉದ್ದೇಶ ಹೊಂದಿರಲಿಲ್ಲ.’

ಕೇವಲ 15,000 ರೂ.ಗಳ ‘ಮಾನ’ನಷ್ಟ ಕೋರಿ ಅರ್ಜಿ ಹಾಕಿದ್ದ ಆಯೋಗವು, ಅಂದಿನ ಆಡಳಿತ ಮಂಡಳಿಯ ಪ್ರತಿಷ್ಠೆಗೆ ಬಿದ್ದು ಸಾರ್ವಜನಿಕರ ಲಕ್ಷಾಂತರ ರೂಪಾಯಿ ತೆರಿಗೆ ಹಣವನ್ನು ವ್ಯರ್ಥ ಕಾನೂನು ಹೋರಾಟಕ್ಕೆ ಖರ್ಚು ಮಾಡಿತ್ತು. ಕಳೆದ ಮೂರು ದಶಕಗಳಲ್ಲಿ ತನ್ನ ಮೇಲಿನ ಹಗರಣಗಳನ್ನು ಮುಚ್ಚಿಹಾಕಲು ಮತ್ತು ತನ್ನ ಪರ ವಕಾಲತ್ತು ವಹಿಸಲು ಆಯೋಗ ಎಷ್ಟು ಕೋಟಿ ಹಣ ಖರ್ಚು ಮಾಡಿದೆ ಎಂಬ ಮಾಹಿತಿ ಕಲೆ ಹಾಕಿದರೆ, ಅದೂ ಒಂದು ದೊಡ್ಡ ಹಗರಣವಾಗ ಬಹುದು!

ಹಗರಣಗಳ ಸರಮಾಲೆ

ಕರ್ನಾಟಕ ಲೋಕಸೇವಾ ಆಯೋಗದ ಕಳೆದ ಮೂರು ದಶಕಗಳ ಇತಿಹಾಸವನ್ನು ಗಮನಿಸಿದರೆ, ಯಾವುದೇ ನೇಮಕಾತಿಯೂ ಕೆಎಟಿ, ಹೈಕೋರ್ಟ್ ಇಲ್ಲವೇ ಸುಪ್ರೀಂಕೋರ್ಟ್ ಮೆಟ್ಟಿಲೇರದೆ ಪೂರ್ಣಗೊಂಡಿಲ್ಲ. ಒಂದು ಅಧಿಸೂಚನೆ ಹೊರಬಿದ್ದು ಫಲಿತಾಂಶ ಪ್ರಕಟವಾಗುವ ವೇಳೆಗೆ ಕನಿಷ್ಠ 2 ರಿಂದ 3 ವರ್ಷಗಳು ಕಳೆದುಹೋಗುತ್ತವೆ. ಅಲ್ಲಿಂದ ಕಾನೂನು ಹೋರಾಟ ಆರಂಭವಾಗಿ ಅಂತಿಮ ವಾಗಿ ಆಯ್ಕೆ ಪಟ್ಟಿ ಪ್ರಕಟವಾದಾಗ ಪ್ರಾಮಾಣಿಕ ಅಭ್ಯರ್ಥಿಗಳು ಬಸವಳಿದು ಹೋಗಿರುತ್ತಾರೆ.

1998ರ 383 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯು ಕೆಪಿಎಸ್‌ಸಿ ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲ ನಡೆದ ಕಾನೂನು ಸಮರ. ಇತ್ತೀಚಿಗಿನ ನೀಟ್ ಪರೀಕ್ಷೆಯಲ್ಲಿ ಒಂದೇ ಕುಟುಂಬದ ನಾಲ್ವರು ಪರೀಕ್ಷೆಯಲ್ಲಿ ತೇರ್ಗಡೆಯಾದಂತೆ ಈ ಪರೀಕ್ಷೆಯಲ್ಲೂ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಎದುರಿಸಿದ ನಾಲ್ವರು ಸಂಬಂಧಿಕರು ಆಯ್ಕೆಯಾಗಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾಗಿ ಇದೀಗ ನಿವೃತ್ತಿಯಾಗಿರುವ ಡಾ.ಕೆ.ರಾಮೇಶ್ವರಪ್ಪ ಅವರು ಅಂದು ಮೊದಲ ರ್ಯಾಂಕ್ ಪಡೆದಿದ್ದರು. ಅವರ ಮೈದುನ ಎರಡನೇ ರ್ಯಾಂಕ್ ಗಳಿಸಿದ್ದರು. ಇವರದ್ದೇ ಕುಟುಂಬದ ಇನ್ನಿಬ್ಬರೂ ಆಯ್ಕೆಯಾಗಿದ್ದರು. ಅಭ್ಯರ್ಥಿಗಳ ಅಂಕಗಳನ್ನು ಮೌಲ್ಯಮಾಪನ ಸಮಯದಲ್ಲಿ ಹೆಚ್ಚಿಸಲಾಗಿತ್ತು ಎಂಬ ಆರೋಪಗಳು ಬಂದ ಬಳಿಕ ಮರು ಮೌಲ್ಯಮಾಪನಕ್ಕೆ ಆದೇಶಿಸಲಾಯಿತು.

ಆದರೆ ಆಯೋಗವು ತನ್ನದೇ ‘ಸೂತ್ರ’ದಡಿ ನಡೆಸಿದ ಆಯ್ದ ಪ್ರಶ್ನೆ ಪತ್ರಿಕೆಗಳ ಮರು ಮೌಲ್ಯ ಮಾಪನವು ಇನ್ನಷ್ಟು ಭ್ರಷ್ಟಾಚಾರಕ್ಕೆ ನಾಂದಿ ಹಾಡಿತ್ತು. ಮರುಮೌಲ್ಯಮಾಪನದ ಬಳಿಕ 200ಕ್ಕೂ ಹೆಚ್ಚು ಪ್ರತಿಭಾವಂತ ಅಭ್ಯರ್ಥಿಗಳು ಸೊನ್ನೆ ಅಂಕ ಪಡೆದಿದ್ದರು. ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿ ಗಳ ಪ್ರಶ್ನೆಪತ್ರಿಕೆಗಳನ್ನು ಮರುಮೌಲ್ಯಮಾಪನ ನಡೆಸುವ ಆಯೋಗದ ಕಾರ್ಯದರ್ಶಿ ಹರೀಶ್ ಗೌಡರ ಸಲಹೆಯನ್ನು ಅಂದಿನ ಆಯೋಗದ ಸದಸ್ಯರು ಗಣನೆಗೆ ತೆಗೆದುಕೊಂಡಿರಲಿಲ್ಲ. ವಿಭಾಗಾ ಧಿಕಾರಿ ಹುದ್ದೆಗೆ ಆಯ್ಕೆಯಾಗಬೇಕಿದ್ದ ಹತ್ತಾರು ಅಭ್ಯರ್ಥಿಗಳ ಕೈಯಲ್ಲಿ, ಜಾತಿ ಪ್ರಮಾಣಪತ್ರ ಕಳೆದುಹೋಗಿದೆ ಎಂದು ಪ್ರಮಾಣ ಪತ್ರ ಬರೆಸಿಕೊಂಡು ಕೆಳ ಹಂತದ ಹುದ್ದೆಗಳನ್ನು ನೀಡಲಾ ಯಿತು. ಅಂಕಗಳ ತಿದ್ದುವಿಕೆ, ಮೀಸಲು ನಿಯಮಗಳ ಉಲ್ಲಂಘನೆ ಜತೆಗೆ ಕೆಲವರಿಗೆ ‘ಕಲ್ಯಾಣ ಭಾಗ್ಯ’ದೊಂದಿಗೆ ಹುದ್ದೆ ದಯಪಾಲಿಸಿದ ಆರೋಪಗಳು ಕೇಳಿ ಬಂದವು.

ತನಿಖೆ ವೇಳೆ ಅಂದಿನ ಕೆಪಿಎಸ್‌ಸಿ ಅಧ್ಯಕ್ಷ ಎಚ್.ಎನ್. ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸಂದರ್ಶನದ ವೇಳೆ ಅರ್ಹರಿಗೆ ಕಡಿಮೆ ಅಂಕ, ತಮಗೆ ಬೇಕಾದವರಿಗೆ ಅತಿ ಹೆಚ್ಚು ಅಂಕ ನೀಡಿದ ಆರೋಪ ಅವರ ಮೇಲಿತ್ತು. ಆದರೆ ಸಿಐಡಿ ಮುಂದೆ ಹೇಳಿಕೆ ನೀಡಿದ ಕೆಲವು ಅಭ್ಯರ್ಥಿಗಳೇ ಮುಂದೆ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷ್ಯ ನುಡಿದರು. ನಂತರದ ದಿನಗಳಲ್ಲಿ ಆಧ್ಯಕ್ಷರನ್ನು, ಸದಸ್ಯರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದು ಬೇರೆಯದೇ ಕಥೆ.

ಇದೇ ಪ್ರಕರಣ ಸಂಬಂಧ 20 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ 2019ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ 36 ಕೆಎಎಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲು ಆದೇಶಿಸಿತು. ಇವರಲ್ಲಿ 12 ಅಧಿಕಾರಿಗಳು ಅದಾಗಲೇ ಐಎಎಸ್ ಹುದ್ದೆಗೆ ಮುಂಬಡ್ತಿ ಪಡೆದಿದ್ದರು. ಕೆಲವರು ಮುಖ್ಯಮಂತ್ರಿ ಕಚೇರಿಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು. ಸುಪ್ರೀಂ ಸೂಚನೆಯಂತೆ ಕೆಲಸ ವಂಚಿತರಾಗಿದ್ದ 28 ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವೇನೋ ದೊರಕಿತು. ಆದರೆ ಅಡ್ದ ದಾರಿಯಲ್ಲಿ ಆಯ್ಕೆಯಾದವರ ಕೂದಲೂ ಕೊಂಕಲಿಲ್ಲ. ಇವರಲ್ಲಿ ಕೆಲವರು ಈಗಾಗಲೇ ನಿವೃತ್ತಿ ಪಡೆದು ಪಿಂಚಣಿ, ಭತ್ಯೆ ಪಡೆಯುತ್ತಿದ್ದಾರೆ.

ಭ್ರಷ್ಟರಿಗೆ ’ಸುಗ್ರೀವಾಜ್ಞೆ’ಯ ರಕ್ಷಣೆ

2011ರ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ಹುದ್ದೆಗಳನ್ನು ಅಕ್ಷರಶಃ ಬಿಕರಿಗಿಡಲಾಗಿತ್ತು. ಈ ಕುರಿತು ಸಿಐಡಿ 10,500ಕ್ಕೂ ಹೆಚ್ಚು ಪುಟಗಳ ವರದಿ ಸಲ್ಲಿಸಿ, ಅಂದಿನ ಅಧ್ಯಕ್ಷ ಗೋನಾಳ ಭೀಮಪ್ಪ ಮತ್ತು ಒಂಬತ್ತು ಸದಸ್ಯರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿತ್ತು. ಸಿದ್ದರಾಮಯ್ಯ ನೇತೃತ್ವದ ಅಂದಿನ ಸರಕಾರ ಅಧಿಸೂಚನೆಯನ್ನೇ ರದ್ದುಪಡಿಸಿತ್ತು. ಆದರೆ, ನಂತರ ಬಂದ ಬಸವರಾಜ ಬೊವ್ಮಾಯಿ ನೇತೃತ್ವದ ಸರ್ಕಾರ ‘ವಿಶೇಷ ಪ್ರಕರಣ’ ಎಂದು ಪರಿಗಣಿಸಿ, ಸುಗ್ರೀವಾಜ್ಞೆ ತಂದು ಅಂತಿಮ ಪಟ್ಟಿಯಲ್ಲಿದ್ದ ಕಳಂಕಿತರಿಗೂ ಹುದ್ದೆ ದಯಪಾಲಿಸುವ ಔದಾರ‌್ಯ ಪ್ರದರ್ಶಿಸಿತು.

2015ರ 428 ಹುದ್ದೆಗಳ ಮುಖ್ಯ ಪರೀಕ್ಷೆಯಲ್ಲಿ ಡಿಜಿಟಲ್ ಮೌಲ್ಯಮಾಪನದ ಅಂಕಗಳನ್ನೇ ತಿರುಚಲಾಯಿತು. ಒಬ್ಬರ ಅಂಕಗಳನ್ನು ಮತ್ತೊಬ್ಬರಿಗೆ ಅದಲು ಬದಲು ಮಾಡಲಾಯಿತು. ಸರಿಯಾದ ಉತ್ತರ ಬರೆದವರಿಗೆ ‘ಶೂನ್ಯ’ ಅಂಕ ನೀಡಿ, ಉತ್ತರವನ್ನೇ ಬರೆಯದವರಿಗೆ ಅಂಕ ನೀಡಿದ ಪ್ರಕರಣಗಳು ಆರ್‌ಟಿಐ ಅರ್ಜಿಯಲ್ಲಿ ಬಹಿರಂಗವಾದವು. 52 ವಂಚಿತ ಅಭ್ಯರ್ಥಿಗಳು, ಅಂಕ ತಿರುಚುವಿಕೆ ಮತ್ತು ಒಬ್ಬರ ಅಂಕಗಳನ್ನು ಮತ್ತೊಬ್ಬರ ಅಂಕಗಳಿಗೆ ಅದಲು ಬದಲು ಮಾಡಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ.

ಪ್ರಶ್ನೆಪತ್ರಿಕೆ ಸೋರಿಕೆ

2021ರ ಜನವರಿ 24ರಂದು ನಡೆಯಬೇಕಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಯ ಪ್ರಶ್ನೆಪತ್ರಿಕೆ ಯನ್ನು ಆಯೋಗದ ಕಚೇರಿಯ ಸಿಬ್ಬಂದಿಗಳೇ ಲಕ್ಷಾಂತರ ರೂಪಾಯಿಗಳಿಗೆ ಮಾರಿಕೊಂಡಿದ್ದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ( ಎಇಇ) ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದಿದ ಹಗರಣ ಬೆಳಕಿಗೆ ಬಂದು, ಹೈಕೋರ್ಟ್ ಮರುಪರೀಕ್ಷೆಗೆ ಆದೇಶಿಸಿತ್ತು.

2024ರಲ್ಲಿ ನಡೆದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಮತ್ತೆ ಭಾರಿ ಅಕ್ರಮದ ವಾಸನೆ ಬಡಿದಿದೆ. ಭಾಷಾಂತರದ ಯಡವಟ್ಟಿನಿಂದಾಗಿ ಕೋರ್ಟ್ ಮೆಟ್ಟಿಲೇರಿದ್ದ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆ ಪಾಸಾಗದಿದ್ದರೂ ಮುಖ್ಯ ಪರೀಕ್ಷೆ ಬರೆದಿದ್ದರು. ಇದೀಗ ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನ) ಆಯ್ಕೆಯಾದವರ ಪಟ್ಟಿಯಲ್ಲಿ ಒಂದೇ ಪರೀಕ್ಷಾ ಕೇಂದ್ರದ 15ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಒಂದೇ ಕುಟುಂಬದ ನಾಲ್ವರ ಹೆಸರು ಪಟ್ಟಿಯಲ್ಲಿದೆ.

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಈ ಸಂಬಂಧ ವಿವರಣೆ ಕೇಳಿ ಆಯೋಗಕ್ಕೆ ಬರೆದ ಪತ್ರಕ್ಕೆ ಕೆಪಿಎಸ್‌ಸಿ ಕಾರ್ಯದರ್ಶಿಯವರು ಅತ್ಯಂತ ದಿಟ್ಟತನದ ಉತ್ತರ ನೀಡಿದ್ದಾರೆ. ಅವರ ಪ್ರಕಾರ, ಕೆಪಿಎಸ್‌ಸಿ ಇತಿಹಾಸದಲ್ಲೇ ಒಂದೇ ಕೊಠಡಿಯಲ್ಲಿ ಇಷ್ಟು ಹೆಚ್ಚಿನ ಸಂಖ್ಯೆಯ ಅಭ್ಯರ್ಥಿ ಗಳು ಪಾಸಾಗಿರುವುದು ಇದೇ ಮೊದಲು. ಇದು ಭ್ರಷ್ಟಾಚಾರವಲ್ಲ, ಇತಿಹಾಸ..!

ಛೀಮಾರಿ ಲೆಕ್ಕಕ್ಕಿಲ್ಲ

ಅಕ್ರಮವಾಗಿ ಆಯ್ಕೆಯಾದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವ ಬದಲು ಎಲ್ಲ ಸರಕಾರಗಳು ರಕ್ಷಿಸುತ್ತಲೇ ಬಂದಿವೆ. 1998, 1999 ಮತ್ತು 2004ರ ಬ್ಯಾಚ್‌ನಲ್ಲಿ ಅಕ್ರಮವಾಗಿ ಆಯ್ಕೆಯಾಗಿದ್ದ ಅನೇಕರು ಇಂದು ಆಯಕಟ್ಟಿನ ಹುದ್ದೆಗಳಲ್ಲಿದ್ದಾರೆ. ಇವರಲ್ಲಿ ಹಲವರು ಈಗಲೂ ಲೋಕಾಯುಕ್ತ ಬಲೆಗೆ ಬೀಳುತ್ತಲೇ ಇದ್ದಾರೆ. ನ್ಯಾಯಾಲಯಗಳು ಕೆಪಿಎಸ್‌ಸಿಯ ಕಾರ್ಯವೈಖರಿ ಯನ್ನು ಪದೇ ಪದೇ ತರಾಟೆಗೆ ತೆಗೆದುಕೊಳ್ಳುತ್ತಿವೆ. ಎಲ್ಲವನ್ನೂ ನ್ಯಾಯಾಲಯದಲ್ಲೇ ಬಗೆಹರಿಸಿ ಕೊಳ್ಳುವುದಾದರೆ ಕೆಪಿಎಸ್‌ಸಿಯನ್ನು ಮುಚ್ಚುವುದು ಉತ್ತಮ ಎಂದು ಹೈಕೋರ್ಟ್ ಛೀಮಾರಿ ಹಾಕಿದ ಬಳಿಕವೂ ಆಯೋಗದ ನಡೆ, ಕಾರ‌್ಯವೈಖರಿ ಬದಲಾಗಿಲ್ಲ.

ಅಧ್ಯಕ್ಷರು ಸೇರಿದಂತೆ ಆಯೋಗದ ಎಲ್ಲ ಸದಸ್ಯರು ಪ್ರಾಮಾಣಿಕರಾಗಿದ್ದರೆ ಕೆಪಿಎಸ್‌ಸಿ ಕೂಡ ಕೇಂದ್ರ ಲೋಕಸೇವಾ ಆಯೋಗದಂತೆ ದಕ್ಷ ಸಂಸ್ಥೆಯಾಗಿ ಗುರುತಿಸಿಕೊಳ್ಳಲು ಸಾಧ್ಯವಿದೆ. ಇದು ಸಾಕಾರವಾಗಬೇಕಿದ್ದರೆ ಆಯೋಗಕ್ಕೆ ಅಧ್ಯಕ್ಷ, ಸದಸ್ಯರನ್ನು ಜಾತಿ, ರಾಜಕೀಯ ಪ್ರಭಾವ ಮತ್ತು ಹಣದ ಆಧಾರದ ಮೇಲೆ ನೇಮಿಸುವ ಪದ್ಧತಿ ನಿಲ್ಲಬೇಕು.

ಕಮರ್ಷಿಯಲ್ ಟ್ಯಾಕ್ಸ್‌ ಇಲಾಖೆಗೂ ಆಯೋಗಕ್ಕೂ ಸದಾ ನಿಕಟ ನಂಟು. ಇಲಾಖೆ ಹಿನ್ನೆಲೆಯಿಂದ ಬಂದ ಅಧಿಕಾರಿಗಳು ಅತಿ ಹೆಚ್ಚು ಬಾರಿ ಆಯೋಗದಲ್ಲಿ ಹುದ್ದೆ ಅಲಂಕರಿಸಿರುವುದು ಅಚ್ಚರಿಯ ಸಂಗತಿ. ಅಧ್ಯಕ್ಷರಾಗಿ ಆಯ್ಕೆಯಾದರಲ್ಲಿ ಹೆಚ್ಚಿನವರು ರಾಜ್ಯದ ಪ್ರಮುಖ ಮೂರ್ನಾಲ್ಕು ಜಾತಿಗಳಿಗೆ ಸೇರಿದವರು.

ಕೆಪಿಎಸ್‌ಸಿಯ ನಿರಂತರ ಅಕ್ರಮ ಮತ್ತು ವಿಳಂಬ ಧೋರಣೆಯಿಂದ ಬೇಸತ್ತಿರುವ ರಾಜ್ಯ ಸರಕಾರದ ವಿವಿಧ ಇಲಾಖೆಗಳು, ಈಗ ತಮ್ಮ ನೇಮಕಾತಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸು ತ್ತಿವೆ. ಕೆಪಿಟಿಸಿಎಲ್, ಕೆಎಸ್‌ಡಿಎಲ್, ಆರೋಗ್ಯ ಇಲಾಖೆಯ ನರ್ಸ್ ಹುದ್ದೆಗಳು, ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು, ಮತ್ತು ಬಿಬಿಎಂಪಿಯ ಎಂಜಿನಿಯರ್ ಹುದ್ದೆಗಳ ನೇಮಕಾತಿಯನ್ನು ಕೆಇಎ ಯಶಸ್ವಿಯಾಗಿ ಮತ್ತು ತ್ವರಿತವಾಗಿ ನಡೆಸಿಕೊಟ್ಟಿದೆ. ಆದರೆ ಪತ್ರಾಂಕಿತ ಅಧಿಕಾರಿಗಳಿಂದ ಹಿಡಿದು ಡಿ ದರ್ಜೆ ನೌಕರರ ತನಕ ಸ್ವತಂತ್ರವಾಗಿ, ಕಾನೂನು ಬದ್ಧವಾಗಿ ನೇಮಕ ಮಾಡಿಕೊಳ್ಳಬೇಕಿದ್ದ ಆಯೋಗವು ತನ್ನದೇ ಭಾನಗಡಿಯಲ್ಲಿ ಮುಳುಗಿ ಯಾರಿಗೂ ಬೇಡವಾಗಿರು ವುದು ದುರದೃಷ್ಟಕರ ವಿದ್ಯಮಾನ.

ಸಾಂವಿಧಾನಿಕ ಸಂಸ್ಥೆಯೊಂದು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಾಗ, ಅದು ಕೇವಲ ಒಂದು ಸಂಸ್ಥೆಯ ವೈಫಲ್ಯವಾಗಿ ಉಳಿಯುವುದಿಲ್ಲ; ಅದು ಲಕ್ಷಾಂತರ ಬಡ, ಪ್ರತಿಭಾವಂತ, ಮತ್ತು ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯದ ಕಗ್ಗೊಲೆಯಾಗುತ್ತದೆ. ಕೆಪಿಎಸ್‌ಸಿ ತನ್ನ ವೆಬ್‌ಸೈಟ್‌ನಲ್ಲಿ, ‘ಮಧ್ಯವರ್ತಿಗಳನ್ನು ನಂಬದಿರಿ’ ಎಂಬ ಬೋರ್ಡ್ ಹಾಕಿದರೆ ಸಾಲದು, ಆಯೋಗದ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಿರುವ ಮಧ್ಯವರ್ತಿಗಳನ್ನು ಮೊದಲು ಹೊರಹಾಕಬೇಕಿದೆ. ಇಲ್ಲವಾದರೆ, ‘ಲೋಪಸೇವಾ ಆಯೋಗ’ ಎಂಬ ಕಳಂಕ ಶಾಶ್ವತವಾಗಿ ಉಳಿಯಲಿದೆ.