ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಇವರು ಅತ್ಯುನ್ನತ ಹುದ್ದೆಯನ್ನು ಬೇಡವೆಂದರು !

ಆಗ ಅಧಿಕಾರದಲ್ಲಿದ್ದದ್ದು ಇಂದಿರಾ ಗಾಂಧಿಯವರ ನೇತೃತ್ವದ ಸರಕಾರ. ಜೆಪಿ ಅವರ ಪರಿಕಲ್ಪನೆಯ ಸಂಪೂರ್ಣ ಕ್ರಾಂತಿಯಲ್ಲಿ 7 ವಿಭಾಗಗಳಿದ್ದವು: ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ತಾತ್ವಿಕ, ಶೈಕ್ಷಣಿಕ ಮತ್ತು ಅಧ್ಯಾತ್ಮ- ಈ ಏಳೂ ವಿಭಾಗಗಳಲ್ಲಿ ವ್ಯಾಪಕ ಬದಲಾವಣೆ ತಂದು, ಸಂಪೂರ್ಣ ಕ್ರಾಂತಿಯನ್ನು ದೇಶದಲ್ಲಿ ಜಾರಿಗೊಳಿಸಬೇಕು ಮತ್ತು ಇವೆಲ್ಲವೂ ಸರ್ವೋದಯದ ಆಶಯಗಳಾಗಿವೆ ಎಂದು ಹೇಳುತ್ತಿದ್ದರು.

ಇವರು ಅತ್ಯುನ್ನತ ಹುದ್ದೆಯನ್ನು ಬೇಡವೆಂದರು !

ಶಶಿಧರ ಹಾಲಾಡಿ ಶಶಿಧರ ಹಾಲಾಡಿ Apr 18, 2025 7:53 AM

ಶಶಾಂಕಣ

ಇಂದು ನಮ್ಮ ದೇಶದಲ್ಲಿ ನಾನಾ ರೀತಿಯ ಬೆಳವಣಿಗೆಗಳು ಆಗುತ್ತಿವೆ. ಪ್ರಭುತ್ವವು ಪ್ರಜೆಗಳ ಮೇಲಿನ ತನ್ನ ಹಿಡಿತವನ್ನು ಬಲಗೊಳಿಸುತ್ತಿದೆ. ತಾನು ಹೇಳಿದ್ದೇ ನಡೆಯಬೇಕು ಎನ್ನುತ್ತಿರುವ ಪ್ರಭುತ್ವವು, ಅದಕ್ಕಾಗಿ ನಾನಾ ರೀತಿಯ ತಂತ್ರಗಳನ್ನು ಉಪಯೋಗಿಸುತ್ತಿದೆ. ಪ್ರಭುತ್ವದ ವಿರುದ್ಧ ಮಾತನಾಡು ವುದೇ ಕಷ್ಟ ಎಂಬ ಸ್ಥಿತಿ ಇಂದು ಇದೆ. ವಿಶೇಷವೆಂದರೆ, ನಮ್ಮ ದೇಶದಲ್ಲಿ ಪ್ರಭುತ್ವದ ವಿರುದ್ಧ ಮಾತನಾಡಿದವರು ಹಿಂದೆಯೂ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ ಹಲವು ಉದಾಹರಣೆಗಳಿವೆ. ಸ್ವತಂತ್ರ ಭಾರತದಲ್ಲಿ, ತಪ್ಪನ್ನು ತಪ್ಪು ಎಂದು ಪ್ರಭುತ್ವಕ್ಕೆ, ಅಧಿಕಾರಸೂತ್ರ ಹಿಡಿದವರಿಗೆ ನೇರವಾಗಿ ಹೇಳಿದವರಲ್ಲಿ ಜಯಪ್ರಕಾಶ್ ನಾರಾಯಣ್ ಒಬ್ಬರು.

“ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 27 ವರ್ಷಗಳ ನಂತರವೂ, ದೇಶದ ಜನರನ್ನು ಹಸಿವು ಕಾಡುತ್ತಿದೆ, ಏರುತ್ತಿರುವ ಬೆಲೆ, ಭ್ರಷ್ಟಾಚಾರ, ಎಲ್ಲಾ ರೀತಿಯ ಅನ್ಯಾಯಗಳು ಜನರ ಬದುಕನ್ನು ದುರ್ಭರಗೊಳಿಸಿವೆ. ಇದಕ್ಕೆ ಪರಿಹಾರವಾಗಿ ನಮಗೆ ಬೇಕಾಗಿರುವುದು ಸಂಪೂರ್ಣ ಕ್ರಾಂತಿ!"- ಈ ರೀತಿ ಘೋಷಣೆ ಮಾಡಿದವರು ಜಯಪ್ರಕಾಶ್ ನಾರಾಯಣ್. ಜೆಪಿ ಮತ್ತು ಲೋಕನಾಯಕ ಎಂದೇ ಹೆಸರಾಗಿದ್ದ ಅವರು ಸಂಪೂರ್ಣ ಕ್ರಾಂತಿಗೆ ಕರೆಕೊಟ್ಟು, 27 ವರ್ಷಗಳ ಕಾಂಗ್ರೆಸ್ ಆಡಳಿತಕ್ಕೆ (1974ರ ಸಮಯ) ನೇರ ಸವಾಲನ್ನು ಎಸೆದಿದ್ದರು.

ಆಗ ಅಧಿಕಾರದಲ್ಲಿದ್ದದ್ದು ಇಂದಿರಾ ಗಾಂಧಿಯವರ ನೇತೃತ್ವದ ಸರಕಾರ. ಜೆಪಿ ಅವರ ಪರಿಕಲ್ಪನೆಯ ಸಂಪೂರ್ಣ ಕ್ರಾಂತಿಯಲ್ಲಿ 7 ವಿಭಾಗಗಳಿದ್ದವು: ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ತಾತ್ವಿಕ, ಶೈಕ್ಷಣಿಕ ಮತ್ತು ಅಧ್ಯಾತ್ಮ- ಈ ಏಳೂ ವಿಭಾಗಗಳಲ್ಲಿ ವ್ಯಾಪಕ ಬದಲಾವಣೆ ತಂದು, ಸಂಪೂರ್ಣ ಕ್ರಾಂತಿಯನ್ನು ದೇಶದಲ್ಲಿ ಜಾರಿಗೊಳಿಸಬೇಕು ಮತ್ತು ಇವೆಲ್ಲವೂ ಸರ್ವೋದಯದ ಆಶಯಗಳಾಗಿವೆ ಎಂದು ಹೇಳುತ್ತಿದ್ದರು.

ಇದನ್ನೂ ಓದಿ: Shashidhara Halady Column: ತಿರುಳಿನ ಬಣ್ಣ ಆಕರ್ಷಕ: ಯಾವ ಹಣ್ಣಿದು ?

ಅದಕ್ಕಾಗಿ, ಯಾವ ಪಕ್ಷದಲ್ಲಿದ್ದುಕೊಂಡು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರೋ, ಅದೇ ಪಕ್ಷದ ವಿರುದ್ಧ ಅವರು ಯುದ್ಧ ಸಾರಿದ್ದರು- 1970ರ ದಶಕದಲ್ಲಿ! ಸ್ವಾತಂತ್ರ್ಯಪೂರ್ವ ಭಾರತದಲ್ಲಿ, ಕಾಂಗ್ರೆಸ್ ಪಕ್ಷ ನಡೆಸುತ್ತಿದ್ದ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಜೆಪಿ, 1942ರಲ್ಲಿ ನಡೆಸಿದ ಸಾಹಸವು ಅಭೂತಪೂರ್ವ. ಆದರೆ ಅದೇಕೋ, ಈಚಿನ ವರ್ಷಗಳಲ್ಲಿ ಸರಿಯಾದ ಪ್ರಚಾರ ಪಡೆದಿಲ್ಲ!

ಗಾಂಧೀಜಿ ಕರೆಯಂತೆ ‘ಕ್ವಿಟ್ ಇಂಡಿಯಾ’ ಚಳವಳಿ ಕಾವು ಪಡೆಯಿತು. ಜೆಪಿಯವರೂ ಹೋರಾಟ ದಲ್ಲಿ ಭಾಗವಹಿಸಿದ್ದರು. ಜಾರ್ಖಂಡ್‌ನ ಹಜಾರಿಬಾಗ್ ಜೈಲಿನಲ್ಲಿ ಜೆಪಿಯವರನ್ನು ಬಂಧನಕ್ಕೆ ಒಳಪಡಿಸಲಾಗಿತ್ತು. ಆ ಸಮಯದಲ್ಲಿ ಕಾಂಗ್ರೆಸ್‌ನ ಬಹುತೇಕ ನಾಯಕರು ಮತ್ತು ಪ್ರಮುಖ ಕಾರ್ಯಕರ್ತರು ವಿವಿಧ ಜೈಲುಗಳಲ್ಲಿದ್ದರು. ಇದೇ ರೀತಿ ಜೈಲಿನಲ್ಲೇ ಇದ್ದರೆ, ಹೋರಾಟವನ್ನು ಮುಂದುವರಿಸಲು ಆಗುವುದಿಲ್ಲ ಎಂದರಿತ ಜೆಪಿ ತಮ್ಮ ಸ್ನೇಹಿತರ ಜತೆ ಜೈಲಿನಿಂದ ಪರಾರಿ ಯಾದರು!

ಅದು ದೀಪಾವಳಿಯ ದಿನ. ನವೆಂಬರ್ 1942. ಜೈಲಿನ ಸಿಬ್ಬಂದಿ ಮತ್ತು ಇತರರು ದೀಪಾವಳಿ ಆಚರಿಸುತ್ತಿದ್ದಾಗ, 17 ಅಡಿ ಎತ್ತರದ ಜೈಲುಗೋಡೆಯನ್ನು ಐವರು ಗೆಳೆಯರೊಂದಿಗೆ ಏರಿ, ಹೊರಬಂದರು. ಜೆಪಿಯವರ ಜತೆಯಲ್ಲೇ ಯೋಗೇಂದ್ರ ಶುಕ್ಲಾ, ಸೂರಜ್ ನಾರಾಯಣ ಸಿಂಗ್, ಗುಲಾಬ್ ಚಂದ್ ಗುಪ್ತಾ, ಪಂಡಿತ್ ರಮಾನಂದನ್ ಮಿಶ್ರಾ, ಶಾಲಿಗ್ರಾಮ ಸಿಂಗ್ ಮೊದಲಾದವರು ಜೈಲಿನಿಂದ ಹೊರಬಂದು ಭೂಗತ ಕಾರ್ಯಾಚರಣೆಗೆ ಸಿದ್ಧರಾದರು.

oped R

ಜೈಲಿನಿಂದ ತಪ್ಪಿಸಿಕೊಂಡ ಜೆಪಿಯವರನ್ನು ಹಿಡಿಯಲು ಬ್ರಿಟಿಷರು ನಾನಾ ತಂತ್ರ ಹೂಡಿದರು, ಅವರ ತಲೆಗೆ ಬಹುಮಾನ ಘೋಷಿಸಲಾಯಿತು. ಅವರು ತಪ್ಪಿಸಿಕೊಂಡ ಸುದ್ದಿ ಎಲ್ಲೆಡೆ ಪ್ರಚಾರ ಕ್ಕೂ ಒಳಗಾಯಿತು. ಈ ಸುದ್ದಿಯೇ ಜನರಲ್ಲಿದ್ದ ಹೋರಾಟದ ಕಿಚ್ಚನ್ನು ಬಡಿದೆಬ್ಬಿಸಿತು. ಕ್ವಿಟ್ ಇಂಡಿಯಾ ಚಳವಳಿಗೆ ಇನ್ನಷ್ಟು ಬಲ ಬಂದಿತು.

ಭೂಗತರಾಗಿದ್ದುಕೊಂಡು ಬ್ರಿಟಿಷರ ವಿರುದ್ಧ ಹೋರಾಡಲು ಜೆಪಿಯವರ ಜತೆ, ರಾಮ ಮನೋಹರ ಲೋಹಿಯಾ, ಅರುಣಾ ಅಸಫ್ ಆಲಿ ಮೊದಲಾದವರು ಕೈಜೋಡಿಸಿದರು. ಈ ಹೊತ್ತಿಗಾಗಲೇ ಜೆಪಿ ನುರಿತ ಹೋರಾಟಗಾರರಾಗಿದ್ದರು; 1930ರ ಅಸಹಕಾರ ಚಳವಳಿಯ ಸಮಯದಲ್ಲಿ ಜೆಪಿಯ ವರನ್ನು ನಾಸಿಕ್ ಜೈಲಿನಲ್ಲಿ ಬಂಧನಕ್ಕೆ ಒಳಪಡಿಸಿದ್ದಾಗ, ರಾಮ ಮನೋಹರ ಲೋಹಿಯಾ, ಮಿನೂ ಮಸಾಣಿ ಮೊದಲಾದವರ ಗೆಳೆತನ ದೊರಕಿತ್ತು.

ಬ್ರಿಟಿಷರನ್ನು ದೇಶದಿಂದ ಒದ್ದೋಡಿಸಬೇಕು ಮತ್ತು ನಮ್ಮ ದೇಶದ ಎಲ್ಲಾ ಜನರೂ ಸುಖವಾಗಿ ಬಾಳಬೇಕು ಎಂಬುದು ಜೆಪಿಯವರ ಕನಸು. ಅದಕ್ಕೆಂದೇ ಅವರು ಸರ್ವೋದಯ ಪರಿಕಲ್ಪನೆಯನ್ನು ಪ್ರಚುರಗೊಳಿಸಿದ್ದರು. ಹಾಗೆ ನೋಡಿದರೆ, ಜೆಪಿ ಈ ರೀತಿ ಭೂಗತ ಕಾರ್ಯಾಚರಣೆ ನಡೆಸುತ್ತಾ, ತಮ್ಮ ಜೀವಕ್ಕೆ ಅಪಾಯ ತಂದೊಡ್ಡುವ ಸಂದರ್ಭಗಳನ್ನು ಎದುರಿಸುತ್ತಾ ಹೋರಾಟ ನಡೆಸ ಬೇಕಾಗಿರಲಿಲ್ಲ. ಉನ್ನತ ವಿದ್ಯಾಭ್ಯಾಸ ಪಡೆದಿದ್ದ ಅವರು, ಮನಸ್ಸು ಮಾಡಿದ್ದರೆ ಅಂದಿನ ಬ್ರಿಟಿಷ್ ಸರಕಾರದಲ್ಲಿ ಉತ್ತಮ ಉದ್ಯೋಗ ಪಡೆಯಬಹುದಿತ್ತು!

11.10.1902ರಂದು ಬಿಹಾರದ ಸೀತಾಬ್ದಿರ ಎಂಬ ಹಳ್ಳಿಯಲ್ಲಿ ಜನಿಸಿದ್ದ ಜೆಪಿ, ಮಾಧ್ಯಮಿಕ ಶಿಕ್ಷಣ ವನ್ನು ಪಟನಾದಲ್ಲಿ ಪೂರೈಸಿದರು. ಅವರ ತಂದೆಯು ಬ್ರಿಟಿಷ್ ಸರಕಾರದ ನೀರಾವರಿ ಇಲಾಖೆ ಯಲ್ಲಿ ಉದ್ಯೋಗ ಮಾಡುತ್ತಿದ್ದರು; ಜೆಪಿಯವರು 16ನೆಯ ವಯಸ್ಸಿನಲ್ಲಿ ಪ್ರಭಾವತಿ ಎಂಬುವವ ರನ್ನು ಮದುವೆಯಾದರು. ಸತಿ, ಪತಿ ಇಬ್ಬರಲ್ಲೂ ಸ್ವಾತಂತ್ರ್ಯ ಹೋರಾಟದ ಕಿಚ್ಚು!

1919ರಲ್ಲಿ ಗಾಂಧೀಜಿ ಅಸಹಕಾರ ಚಳವಳಿಗೆ ಕರೆಕೊಟ್ಟಾಗ, ಜೆಪಿ ತಮ್ಮ ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇತ್ತು, ಬಿಜಾರ್ ವಿದ್ಯಾಪೀಠದಲ್ಲಿ ಸೇರ್ಪಡೆಗೊಂಡು, ವಿದ್ಯಾಭ್ಯಾಸ ಮುಂದು ವರಿಸಿದರು. ನಂತರದ ದಿನಗಳಲ್ಲಿ ಅವರ ಪತ್ನಿ ಪ್ರಭಾವತಿ ಸಬರಮತಿ ಆಶ್ರಮದ ಸದಸ್ಯೆಯಾದರು. 1923ರಲ್ಲಿ ಜೆಪಿ ಅಮೆರಿಕಕ್ಕೆ ತೆರಳಿ, ಬಾರ್ಕಲಿಯಲ್ಲಿ ಉನ್ನತ ವ್ಯಾಸಂಗ ಮುಂದುವರಿಸಿದರು; ದ್ರಾಕ್ಷಿ ತೋಟ, ಗರಾಜುಗಳಲ್ಲಿ ಕೆಲಸ ಮಾಡಿದರು; ಪಾತ್ರೆ ತೊಳೆದಿದ್ದೂ ಉಂಟು. ಈ ನಡುವೆ, ವಿವಿಧ ಕಾಲೇಜುಗಳು ಶುಲ್ಕವನ್ನು ಹೆಚ್ಚಿಸಿದ್ದರಿಂದಾಗಿ, ಅವರು ಕಾಲೇಜುಗಳನ್ನು ಬದಲಿಸಿದರು; ಅಲ್ಲಿದ್ದಾಗ ಅವರು ಸಮಾಜವಾದವನ್ನು ಪ್ರಮುಖವಾಗಿ ಅಧ್ಯಯನ ಮಾಡಿದರು. ಈ ನಡುವೆ, ವಿಸ್ಕಾಸಿನ್ ನಲ್ಲಿದ್ದಾಗ, ಮಾರ್ಕ್ಸ್‌ನ ‘ದಾಸ್ ಕ್ಯಾಪಿಟಲ್’ ಪುಸ್ತಕದ ಸಂಪರ್ಕಕ್ಕೆ ಬಂದರು. ಅದೇ ಸಮಯದಲ್ಲಿ ರಷ್ಯಾದಲ್ಲಿ ರಕ್ತಸಹಿತ ಕ್ರಾಂತಿಯಾದ ವಿಚಾರವು (1917-1923) ಬಹಳ ಪ್ರಚಾರಕ್ಕೆ ಬಂದಿತ್ತು.

ಜನಸಾಮಾನ್ಯರ ಮತ್ತು ಬಡವರ ಸಂಕಷ್ಟಗಳಿಗೆ ‘ಮಾರ್ಕ್ಸಿಸಂ’ನಲ್ಲಿ ಉತ್ತರವಿದೆ ಎಂದು ಜೆಪಿ ಗಮನಿಸಿದರು. ವಿಸ್ಕಾಸಿನ್ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದು, 1929ರಲ್ಲಿ ಭಾರತಕ್ಕೆ ವಾಪಸಾದಾಗ ಜೆಪಿ ಮಾರ್ಕ್ಸಿಸ್ಟರಾಗಿದ್ದರು! ಆಗ ಭಾರತದಲ್ಲಿ ಗಾಂಧಿ, ನೆಹರು ಅವರ ಹವಾ; ಬ್ರಿಟಿಷರ ಬಂದೂಕಿನ ವಿರುದ್ಧ ಅಹಿಂಸಾತ್ಮಕ ಹೋರಾಟ ಮುಂಚೂಣಿಯಲ್ಲಿದ್ದ ಕಾಲ. ಜೆಪಿ ಭಾರತಕ್ಕೆ ಬಂದವರೇ, ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ತೀವ್ರವಾಗಿ ತೊಡಗಿಕೊಂಡರು.

ಅವರು ಅಮೆರಿಕದಿಂದ ವಾಪಸಾದ ಒಂದೇ ವರ್ಷದಲ್ಲಿ ಗಾಂಧೀಜಿ ಅಸಹಕಾರ ಚಳವಳಿಯನ್ನು (1930) ಘೋಷಿಸಿದರು. ಆ ಹೋರಾಟದಲ್ಲಿ ಪಾಲ್ಗೊಂಡ ಜೆಪಿ ಬಂಧನಕ್ಕೆ ಒಳಗಾದರು. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಜೆಪಿ ಕಾರ್ಮಿಕರ, ಜನಸಾಮಾನ್ಯರ ಪರವಾಗಿ ಹೋರಾಟವನ್ನು ಮುಂದುವರಿಸಿದರು. ಭಾರತೀಯ ರೈಲ್ವೆಯ ಕಾರ್ಮಿಕ ಸಂಘದ ಅಧ್ಯಕ್ಷರಾಗಿ, ಕಾರ್ಮಿಕರ ಹಿತಾಸಕ್ತಿ ಕಾಯುವಲ್ಲಿ ತೊಡಗಿಸಿಕೊಂಡರು.

ಹಿರಿಯ ಕಾಂಗ್ರೆಸ್ ಸದಸ್ಯ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಜೆಪಿ, ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ನಡೆಸಿದ ಹೋರಾಟ ಐತಿಹಾಸಿಕ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಹೊಸದರಲ್ಲಿ, ನೆಹರು ಹೇಳುತ್ತಿದ್ದರು: “ಎಂಥದೇ ಬಿರುಗಾಳಿ ಬೀಸಲಿ, ನಮ್ಮ ಸ್ವಾತಂತ್ರ್ಯದ ದೊಂದಿಯ ಬೆಳಕು ಆರಿಹೋಗಲು ಎಂದಿಗೂ ಬಿಡುವುದಿಲ್ಲ". ಆದರೆ, ನೆಹರು ಅವರ ಮಗಳು ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ, 26.6.1975ರಂದು ಸ್ವಾತಂತ್ರ್ಯದ ಬೆಳಕು ಮಸುಕಾಯಿತು,

ಆಂತರಿಕ ತುರ್ತುಪರಿಸ್ಥಿತಿಯನ್ನು ಹೇರಲಾಯಿತು, ಪತ್ರಿಕಾ ಸ್ವಾತಂತ್ರ್ಯ ಮತ್ತು ಜನರ ಮೂಲಭೂತ ಹಕ್ಕುಗಳ ದಮನವಾಯಿತು. ಜೆಪಿ ಜನಸಾಮಾನ್ಯರ ಪರವಾಗಿದ್ದರು. ಅದರಿಂದಾಗಿ ಅವರು ತಮ್ಮ ಹಿರಿಯ ಸ್ನೇಹಿತರಾಗಿದ್ದ ನೆಹರು ಮಗಳಾದ ಇಂದಿರಾರ ವೈರವನ್ನು ಕಟ್ಟಿಕೊಂಡಿದ್ದರು. 1970ರ ದಶಕದ ಹೊತ್ತಿಗೆ ನಮ್ಮ ದೇಶದ ಜನಸಾಮಾನ್ಯರ ಪರಿಸ್ಥಿತಿ ಬಿಗಡಾಯಿಸಿತ್ತು.

ನಿರುದ್ಯೋಗ, ಹೆಚ್ಚಿನ ಮಟ್ಟದ ಹಣದುಬ್ಬರ, ಅಗತ್ಯವಸ್ತುಗಳ ಕೊರತೆ ಮೊದಲಾದ ಸಂಕಟಗಳು ದೇಶವನ್ನು ಕಾಡುತ್ತಿದ್ದವು. 1974ರಲ್ಲಿ ಬಿಹಾರದ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಸರಕಾರದ ವಿರುದ್ಧ ಹೋರಾಟ ನಡೆಸಿದರು. ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಬಿಹಾರ ಪೊಲೀಸರು ಗುಂಡು ಹಾರಿಸಿದಾಗ 8 ಸಾವಾದವು. ಆಗ ಜೆಪಿಯವರಿಗೆ 72 ವರ್ಷ; ಆದರೆ ಜನರ ಮೇಲಾಗುತ್ತಿದ್ದ ದಬ್ಬಾಳಿಕೆಯನ್ನು ನೋಡುತ್ತಾ ಕೂರುವವರಾಗಿರಲಿಲ್ಲ ಜೆಪಿ. ಪಟನಾದಲ್ಲಿ ನಡೆದ ಮೌನಪ್ರತಿಭಟನೆಯ ನೇತೃತ್ವವನ್ನು ಜೆಪಿ ವಹಿಸಿದರು. ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಹೋರಾಟ ಮುಂದುವರಿಯಿತು.

ಪಟನಾದಲ್ಲಿ 5.6.1974ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ‘ಸಂಪೂರ್ಣ ಕ್ರಾಂತಿ’ಯ ಘೋಷಣೆ ಮಾಡಿದರು- “ಗೆಳೆಯರೆ, ಇದು ಸಂಪೂರ್ಣ ಕ್ರಾಂತಿಗೆ ಕರೆ. ವಿಧಾನಸಭೆಯನ್ನು ವಿಸರ್ಜಿಸಿದರೆ ಸಾಲದು, ಇದೊಂದು ಹೆಜ್ಜೆ ಮಾತ್ರ. ನಾವು ಇನ್ನೂ ಮುಂದೆ ಹೋಗಬೇಕು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 27 ವರ್ಷಗಳ ನಂತರವೂ, ದೇಶದ ಜನರನ್ನು ಹಸಿವು ಕಾಡುತ್ತಿದೆ, ಏರು ತ್ತಿರುವ ಬೆಲೆ, ಭ್ರಷ್ಟಾಚಾರ, ಎಲ್ಲಾ ರೀತಿಯ ಅನ್ಯಾಯಗಳು ಜನರ ಬದುಕನ್ನು ದುರ್ಭರಗೊಳಿಸಿವೆ.

ಇದಕ್ಕೆ ಪರಿಹಾರವಾಗಿ, ನಮಗೆ ಬೇಕಾಗಿರುವುದು ಸಂಪೂರ್ಣ ಕ್ರಾಂತಿ!". ಬಿಹಾರದ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟವು ನಿಧಾನವಾಗಿ ಇತರ ಭಾಗಗಳಿಗೆ ಹರಡಿತು. ಗುಜರಾತ್‌ನಲ್ಲೂ ಹೋರಾಟದ ಕಿಚ್ಚು. ತಮಗೆ ಹೋರಾಟದಲ್ಲಿ ಮಾರ್ಗದರ್ಶನ ನೀಡಲು ಅಲ್ಲಿನವರು ಜೆಪಿಯ‌ ವರನ್ನು ಕೇಳಿಕೊಂಡರು.

ಇದೇ ಸಮಯದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ಒಂದು ಐತಿಹಾಸಿಕ ತೀರ್ಪನ್ನು ನೀಡಿತು. ತಮ್ಮ ಚುನಾವಣಾ ಪ್ರಚಾರಕ್ಕೆ ಸರಕಾರಿ ಅಧಿಕಾರಿಗಳನ್ನು ಬಳಸಿಕೊಂಡ ಆರೋಪ ಸಾಬೀತಾಗಿದ್ದಕ್ಕಾಗಿ, ಲೋಕಸಭೆಗೆ ಆಗಿದ್ದ ಇಂದಿರಾರ ಆಯ್ಕೆಯನ್ನು ಅನರ್ಹಗೊಳಿಸಿತು. ತಕ್ಷಣ ರಾಜೀನಾಮೆ ನೀಡುವಂತೆ ಜೆಪಿ ಇಂದಿರಾರಿಗೆ ಕರೆ ನೀಡಿದರು.

ಇಂದಿರಾ ರಾಜೀನಾಮೆ ನೀಡಲಿಲ್ಲ; ಬದಲಿಗೆ ದೇಶದ ಸ್ವಾತಂತ್ರ್ಯದ ಬೆಳಕನ್ನು ಮಸುಕುಗೊಳಿಸುವ ಕ್ರಮ ಕೈಗೊಂಡರು. ಆಗ ಜಾರಿಗೆ ಬಂದದ್ದೇ ಆಂತರಿಕ ತುರ್ತುಪರಿಸ್ಥಿತಿ. ಯಾವುದೇ ಕಾರಣ ನೀಡದೇ ವಿರೋಧ ಪಕ್ಷದ ನಾಯಕರನ್ನು ಮತ್ತು ಸರಕಾರದ ವಿರುದ್ಧ ಮಾತನಾಡುತ್ತಿದ್ದವರನ್ನು ಸಾಮೂಹಿಕವಾಗಿ ಬಂಧಿಸಲಾಯಿತು. ಕೆಲವು ಪತ್ರಕರ್ತರನ್ನು ಬಂಧಿಸಲಾಯಿತು. ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸುದ್ದಿಗಳು ಸೆನ್ಸಾರ್‌ಗೆ ಒಳಪಟ್ಟಿದ್ದವು.

1975ರ ತುರ್ತುಪರಿಸ್ಥಿತಿಯ ಸಮಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ಬಂಧಿಸಲಾಗಿದ್ದು, ಅದೊಂದು ದಾಖಲೆ! ಬಂಧನಕ್ಕೆ ಒಳಗಾದ ಜಯಪ್ರಕಾಶ ನಾರಾಯಣರನ್ನು ಚಂಡಿಗಢ ಜೈಲಿನಲ್ಲಿ ಇರಿಸಲಾಗಿತ್ತು. ಒಮ್ಮೆಗೇ ಅವರ ಆರೋಗ್ಯ ಕ್ಷೀಣಿಸಿತು. ನವೆಂಬರ್ 12ರಂದು ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ, ಮೂತ್ರಪಿಂಡಗಳು ಸಂಪೂರ್ಣ ವಿಫಲಗೊಂಡದ್ದು ಪತ್ತೆಯಾಯಿತು.

ಆ ನಂತರ ಅವರು ಬದುಕಿರುವ ತನಕವೂ, ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಯಿತು. ಆದರೆ ಜೆಪಿಯವರ ಹೋರಾಟ ನಿಲ್ಲಲಿಲ್ಲ. 18.1.1977ರಂದು ತುರ್ತುಪರಿಸ್ಥಿತಿಯನ್ನು ಹಿಂಪಡೆದ ಇಂದಿರಾ, ಚುನಾವಣೆ ನಡೆಸಲು ಮುಂದಾದರು. ಬಹುಶಃ ದೇಶದಾದ್ಯಂತ ತಮ್ಮ ವಿರುದ್ಧ ಇದ್ದ ಅಲೆಯನ್ನು ಅವರು ಸರಿಯಾಗಿ ಅಂದಾಜಿಸಲಿಲ್ಲ ಎನಿಸುತ್ತದೆ. ತಮ್ಮ ಅನಾರೋಗ್ಯದ ನಡುವೆಯೂ ಜೆಪಿ ಹೋರಾಟಕ್ಕೆ ಧುಮುಕಿದರು; ಜನತಾ ಪಾರ್ಟಿಯ ಆಶ್ರಯದಲ್ಲಿ ಬಹುಪಾಲು ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ, ಚುನಾವಣಾ ಪ್ರಚಾರ ನಡೆಸಿದರು.

ಇಂದಿರಾರ ನೇತೃತ್ವದ ಕಾಂಗ್ರೆಸ್ ಸೋತಿತು. ಜನತಾಪಕ್ಷವು ಮಿತ್ರ ಪಕ್ಷಗಳ ಸಹಾಯದಿಂದ 330 ಸ್ಥಾನದಲ್ಲಿ ಗೆದ್ದಿತು, ಕೇಂದ್ರದಲ್ಲಿ ಅದೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷವೊಂದು ಅಧಿಕಾರದ ಚುಕ್ಕಾಣಿ ಹಿಡಿಯಿತು. ಮೊರಾರ್ಜಿ ದೇಸಾಯಿ ಪ್ರಧಾನಿಯಾದರು. ಅಂದು ಮೊದಲ ಕಾಂಗ್ರೆಸ್ಸೇತರ ಪಕ್ಷವಾಗಿ ಅಧಿಕಾರ ಹಿಡಿದ ಜನತಾಪಕ್ಷವು, ಕಾಂಗ್ರೆಸ್ ಇಲ್ಲದೆಯೂ ದೇಶ ಮುನ್ನಡೆಯಬಲ್ಲದು ಎಂದು ತೋರಿಸಿಕೊಟ್ಟು, ದಾಖಲೆ ಬರೆಯಿತು.

ಸಂಪೂರ್ಣ ಕ್ರಾಂತಿಗೆ ಕರೆ ನೀಡಿ, ದೇಶದಲ್ಲಿ ಮೊದಲ ಬಾರಿಗೆ ಜನತಾಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೆಪಿಯವರನ್ನು ರಾಷ್ಟ್ರಪತಿಯಾಗುವಂತೆ ಕೇಳಿಕೊಳ್ಳ ಲಾಯಿತು. ಆದರೆ, ಅದೇಕೋ ಜೆಪಿ ಅಂಥ ಪ್ರಮುಖ ಹುದ್ದೆಯನ್ನು ಅಲಂಕರಿಸಲು ಇಷ್ಟಪಡಲಿಲ್ಲ. ಆದ್ದರಿಂದ ನೀಲಂ ಸಂಜೀವ ರೆಡ್ಡಿ ರಾಷ್ಟ್ರಪತಿಯಾಗಿ ಆಯ್ಕೆಗೊಂಡರು. ಜೆಪಿ ರಾಷ್ಟ್ರಪತಿ ಯಾಗಿದ್ದರೆ, ದೇಶದ ಸ್ಥಿತಿ ಬದಲಾಗುತ್ತಿತ್ತೋ ಇಲ್ಲವೋ ಹೇಳಲು ಅಸಾಧ್ಯ. ಬಹುಶಃ ತಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ ಜೆಪಿ ರಾಷ್ಟ್ರಪತಿಯಾಗಲು ಹಿಂದೆ ಸರಿದರು.

ಜೆಪಿ ಅಂಥ ಪ್ರಮುಖ ಹುದ್ದೆಯನ್ನು ತಿರಸ್ಕರಿಸಿದ್ದರು ಎಂಬ ವಿಷಯವೇ ಇಂದು ನಂಬಲು ಕಷ್ಟ ಎನಿಸುವ ವಿದ್ಯಮಾನ. ಅದಾಗಿ ಎರಡು ವರ್ಷಗಳಲ್ಲಿ, 8.10.1979ರಂದು ಜೆಪಿ ನಿಧನರಾದರು. ನಂತರ, ಜನತಾಪಕ್ಷದಲ್ಲಿನ ಒಗ್ಗಟ್ಟು ಕುಸಿಯಿತು; ಜೆಪಿಯವರಂಥ ಹಿರಿಯರ ಮಾರ್ಗದರ್ಶನದ ಕೊರತೆಯೋ ಏನೋ, ಜನತಾ ಪಕ್ಷದ ನಾಯಕರು ಗಳಲ್ಲಿ ಒಳಜಗಳಗಳು ತಾರಕಕ್ಕೇರಿದವು.

ಜನತಾ ಪಕ್ಷವು ಪೂರ್ಣಾವಧಿಯ ತನಕ (ಐದು ವರ್ಷ) ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ದೇಶದ ಮೊದಲ ಕಾಂಗ್ರೆಸ್ಸೇತರ ಸರಕಾರವು ಕುಸಿದುಬಿತ್ತು. 1980ರ ಜನವರಿ 14ರಂದು ಕಾಂಗ್ರೆಸ್‌ನ ಇಂದಿರಾ ಪುನಃ ಪ್ರಧಾನಮಂತ್ರಿಯಾದರು. 1977ರಲ್ಲಿ ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವಲ್ಲಿ ಜೆಪಿಯವರ ಕೊಡುಗೆ ಅಪಾರ. 21 ತಿಂಗಳುಗಳ ಆ ಹೋರಾ ಟದ ನೇತೃತ್ವ ವಹಿಸಿದ್ದ ಜೆಪಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಮರಳಿ ದೊರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಜತೆಗೆ, ಅವರು ಅಧಿಕಾರಕ್ಕಾಗಿ ಎಂದೂ ಆಸೆ ಪಡಲಿಲ್ಲ. ಜನಸಾಮಾನ್ಯರ ಹಿತ ಮತ್ತು ಸರ್ವೋದ ಯಕ್ಕಾಗಿ ಹಪಹಪಿಸಿ, ಹೋರಾಟದ ನೇತೃತ್ವವನ್ನು ವಹಿಸಿ, ಅದಕ್ಕಾಗಿ ತಮ್ಮ ಆರೋಗ್ಯ ವನ್ನು ಕೆಡಿಸಿಕೊಂಡರು. ಅದೇ ಅವರ ಸಾವಿಗೂ ಕಾರಣವಾಯಿತು.

1999ರಲ್ಲಿ ಅವರಿಗೆ ಮರಣೋತ್ತರ ‘ಭಾರತರತ್ನ’ ಪ್ರಶಸ್ತಿಯನ್ನು ಘೋಷಿಸಲಾಯಿತು. ಜೆಪಿಯವರ ಸಂಪೂರ್ಣ ಕ್ರಾಂತಿಯ ಪರಿಕಲ್ಪನೆ ಇಂದಿಗೂ ಒಂದು ಆದರ್ಶವಾಗಿಯೇ ಉಳಿದಿದೆ.