Ganesh Bhat Column: ಅಮೇರಿಕನ್ನರಲ್ಲಿ ಹೆಚ್ಚುತ್ತಿರುವ ಭಾರತೀಯ ದ್ವೇಷ ಎಷ್ಟು ಸಾಧು?
ಅಲೆಗ್ಸಾಂಡ್ರಾಸ್ ದಾಳಿ ಮಾಡಲು ಉದ್ದೇಶಿಸಿದ ಸಂದರ್ಭದಲ್ಲಿ ಭಾರತ ಮೂಲದ ಅಮೇರಿಕಾದ ಜನಪ್ರತಿನಿಧಿ ರಾಜಾ ಕೃಷ್ಣಮೂರ್ತಿ ಹಾಗೂ ಅವರ ಮನೆಯವರು ದೇವಸ್ಥಾನದೊಳಗಿದ್ದರು. ಆತನ ರೈಫಲ್ ಕೈಕೊಡದೇ ಇರುತ್ತಿದ್ದರೆ ದೇವಸ್ಥಾನದಲ್ಲಾಗುತ್ತಿದ್ದ ಸಾವುನೋವುಗಳನ್ನು ಊಹಿಸಲು ಕೂಡಾ ಸಾಧ್ಯವಾಗುತ್ತಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಅಮೇರಿಕಾದಲ್ಲಿ ಭಾರತೀಯರ ಮೇಲೆ ಹೆಚ್ಚುತ್ತಿರುವ ಅಸಹನೆಗೆ ಈ ಪ್ರಕರಣವು ಸಾಕ್ಷಿಯಾಗಿದೆ.
-
ಕಡಲಾಚೆ
- ಗಣೇಶ್ ಭಟ್
ಇತ್ತೀಚೆಗೆ ಅಮೇರಿಕದ ಇಲಿನಾಯ್ ರಾಜ್ಯದ ಅರೋರಾ ಎಂಬ ಪ್ರದೇಶದಲ್ಲಿರುವ ವೆಂಕಟೇಶ್ವರ ಸ್ವಾಮಿ (ಬಾಲಾಜಿ) ದೇವಸ್ಥಾನಕ್ಕೆ ಅಲೆಗ್ಸಾಂಡ್ರಾಸ್ ಪಾಪೊರಕಿಸ್ ಹೆಸರಿನ 19 ವರ್ಷದ ಬಿಳಿಯ ಯುವಕನು ರೈಫಲ್ ಮತ್ತು ಆಯುಧಗಳೊಡನೆ ನುಗ್ಗಿ ಸಿಕ್ಕ ಸಿಕ್ಕ ಭಾರತೀಯರ ಮೇಲೆ ಗುಂಡು ಹಾರಿಸಿ ಕೊಲ್ಲಲು ಉದ್ದೇಶಿಸಿದ್ದ ಘಟನೆ ವಿಶ್ವದ ಗಮನವನ್ನು ಸೆಳೆದಿತ್ತು. ಅದೃಷ್ಟವಶಾತ್ ಆತನ ರೈಫಲ್ ಕೈಕೊಟ್ಟ ಕಾರಣ ಆತನಿಗೆ ಅಲ್ಲಿ ಯಾರ ಮೇಲೂ ಗುಂಡು ಹಾರಿಸಲು ಸಾಧ್ಯವಾಗದೇ ಹಿಂದಿರುಗಿದ್ದ.
ಯುವಕ ತನ್ನ ಸಹೋದ್ಯೋಗಿಗೆ ಈ ಕುರಿತು ಸಂದೇಶವನ್ನು ಮೊಬೈಲ್ ಮೂಲಕ ಕಳುಹಿಸಿದ್ದ. ಆ ಸಹೋದ್ಯೋಗಿ ಈ ಕುರಿತು ಪೊಲೀಸರಿಗೆ ಮಾಹಿತಿ ಕೊಟ್ಟ ಕಾರಣ ಪೊಲೀಸರು ಅಲೆಗ್ಸಾಂಡ್ರಾಸ್ ಪಾಪೊರಕಿಸ್ನ ಮನೆಗೆ ದಾಳಿ ಮಾಡಿ ಆತನನ್ನು ಬಂಧಿಸಿದರು. ಆತನ ಮನೆಯನ್ನು ಪೊಲೀಸರು ಶೋಧಿಸಿದಾಗ ಒಂದು ರೈಫಲ್, ತುಂಬಿದ ಮ್ಯಾಗಝಿನ್, ನೂರಾರು ಸುತ್ತು ಮದ್ದು ಗುಂಡುಗಳು, ಯುದ್ಧತಂತ್ರದ ಉಪಕರಣಗಳು ಮತ್ತು ಶ್ವೇತವರ್ಣ ಪ್ರಾಬಲ್ಯವಾದ, ನಾಜಿ ಮತ್ತು ಭಾರತ ವಿರೋಧಿ ದ್ವೇಷ ಭಾಷಣವನ್ನು ಒಳಗೊಂಡ ‘ವೈ ಐ ಫೈಟ್’ ಹೆಸರಿನ ಪ್ರಣಾಳಿಕೆ ಲಭಿಸಿತ್ತು.
ಅಲೆಗ್ಸಾಂಡ್ರಾಸ್ ದಾಳಿ ಮಾಡಲು ಉದ್ದೇಶಿಸಿದ ಸಂದರ್ಭದಲ್ಲಿ ಭಾರತ ಮೂಲದ ಅಮೇರಿಕಾದ ಜನಪ್ರತಿನಿಧಿ ರಾಜಾ ಕೃಷ್ಣಮೂರ್ತಿ ಹಾಗೂ ಅವರ ಮನೆಯವರು ದೇವಸ್ಥಾನದೊಳಗಿದ್ದರು. ಆತನ ರೈಫಲ್ ಕೈಕೊಡದೇ ಇರುತ್ತಿದ್ದರೆ ದೇವಸ್ಥಾನದಲ್ಲಾಗುತ್ತಿದ್ದ ಸಾವುನೋವುಗಳನ್ನು ಊಹಿಸಲು ಕೂಡಾ ಸಾಧ್ಯವಾಗುತ್ತಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಅಮೇರಿಕಾದಲ್ಲಿ ಭಾರತೀಯರ ಮೇಲೆ ಹೆಚ್ಚುತ್ತಿರುವ ಅಸಹನೆಗೆ ಈ ಪ್ರಕರಣವು ಸಾಕ್ಷಿಯಾಗಿದೆ.
ಇದನ್ನೂ ಓದಿ: Ganesh Bhat Column: ಮಾತುಗಳು ತೂಕವನ್ನು ಪಡೆಯುವುದು ಹೇಗೆ ?
ಅಮೇರಿಕದಲ್ಲಿ ರಾಜಕೀಯ ನಾಯಕರ ಜನಾಂಗೀಯ ದ್ವೇಷ ಭಾಷಣ, ತಾರತಮ್ಯ ಹಾಗೂ ಹಿಂಸೆಗಳಿಗೆ ಭಾರತೀಯರು ಹಾಗೂ ಭಾರತೀಯ ಮೂಲದ ಅಮೆರಿಕನ್ನರು ಬಲಿಯಾಗುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಭಾರತೀಯರ ಮೇಲಿನ ದ್ವೇಷ ಹೆಚ್ಚಾಗುತ್ತಿದೆ. 2023 ಹಾಗೂ 2024ರ ನಡುವಿನ ಅವಧಿಯಲ್ಲಿ ದಕ್ಷಿಣ ಏಷಿಯನ್ನರನ್ನು ಗುರಿಯಾಗಿಸಿದ ವರ್ಣದ್ವೇಷ ಪ್ರಕರಣಗಳು 109% ಹೆಚ್ಚಾಗಿದೆ ಎಂದು ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ ಹೆಸರಿನ ಸಂಸ್ಥೆಯು ನಡೆಸಿದ ಇಂಡಿಯನ್ ಅಮೇರಿಕನ್ ಆಟಿಟ್ಯೂಡ್ 2026 ಸರ್ವೆಯು ಹೇಳುತ್ತದೆ. ಈ ಸರ್ವೆಯಲ್ಲಿ ಭಾಗವಹಿಸಿದ್ದ 50% ಭಾರತೀಯರು ವೈಯಕ್ತಿಕವಾಗಿ ತಾರತಮ್ಯ ಅನುಭವಿಸಿದ್ದುದಾಗಿ ತಿಳಿಸಿದ್ದರು.
ಇವರಲ್ಲಿ 36% ಜನರು ವರ್ಣ ದ್ವೇಷವನ್ನು ಎದುರಿಸಿದ್ದರೆ, 21% ಜನರು ಭಾರತೀಯ ಮೂಲದ ಕಾರಣದಿಂದಾಗಿ ತಾರತಮ್ಯವನ್ನು ಎದುರಿಸಿದ್ದರು. 31% ಭಾರತೀಯ ಮೂಲದ ಅಮೆರಿಕನ್ನರು ಡಿಜಿಟಲ್ ಕಿರುಕುಳದ ಭಯದಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಮೇರಿಕಾದ ರಾಜಕೀಯ ವಿಷಯಗಳನ್ನು ಚರ್ಚಿಸಲು ಬಯಸುವುದಿಲ್ಲ ಎಂದೂ ಸರ್ವೆಯು ಹೇಳಿದೆ.
ಭಾರತೀಯರು ಅಮೆರಿಕನ್ನರ ಉದ್ಯೋಗಗಳನ್ನು ಕಸಿಯುತ್ತಿದ್ದಾರೆ ಎನ್ನುವ ಭಾವನೆಯನ್ನು ಅಲ್ಲಿನ ಜನರಲ್ಲಿ ಮೂಡಿಸುವ ಕೆಲಸವನ್ನು ಅಲ್ಲಿನ ರಾಜಕೀಯ ಪಕ್ಷಗಳು ಮಾಡುತ್ತಿವೆ. ಅತೀ ನುರಿತ ತಂತ್ರಜ್ಞರಿಗೆ ಕೊಡಲಾಗುವ ಹೆಚ್-1 ಬಿ ವೀಸಾ ಕುರಿತಂತೆ ಅಲ್ಲಿ ಬಿರುಸಿನ ಚರ್ಚೆಗಳು ನಡೆಯುತ್ತಿರುತ್ತವೆ. ಭಾರತೀಯ ತಂತ್ರಜ್ಞರಿಗೆ ಹೆಚ್-1 ಬಿ ವೀಸಾವನ್ನು ಕೊಡುವ ಮೂಲಕ ಅಮೆರಿಕನ್ನರ ಉದ್ಯೋಗಾವಕಾಶಕ್ಕೆ ಕುತ್ತು ತರಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಡೊನಾಲ್ಡ್ ಟ್ರಂಪಿನ ಎರಡನೆಯ ಅಧಿಕಾರದ ಅವಧಿಯಲ್ಲಿ ಭಾರತೀಯರ ಮೇಲಿನ ದ್ವೇಷ ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ.
ಏಳು ಲಕ್ಷಕ್ಕಿಂತಲೂ ಹೆಚ್ಚು ಸಂಖ್ಯೆಯ ಭಾರತೀಯರು ಅಮೇರಿಕಾದಲ್ಲಿ ಯಾವುದೇ ದಾಖಲೆ ಗಳಿಲ್ಲದೆ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಬಿಬಿಸಿ ಮೊದಲಾದ ಮಾಧ್ಯಮಗಳು ಮಾಡಿದ ವರದಿಯನ್ನು ನೆಪವಾಗಿಸಿ ಬಿಳಿ ಚರ್ಮದವರೇ ನೈಸರ್ಗಿಕವಾಗಿ ಶ್ರೇಷ್ಠರು ಎಂಬ ಭಾವನೆಯುಳ್ಳ ಅಲ್ಲಿನ ಶ್ವೇತವರ್ಣ ಪ್ರಾಬಲ್ಯವಾದಿಗಳು ಭಾರತೀಯರನ್ನು ತಮ್ಮ ದಾಳಿಯ ಗುರಿಯಾಗಿಸಿದರು.
ಸ್ವತಃ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಸಾಮಾಜಿಕ ಮಾಧ್ಯಮವಾದ ‘ಟ್ರುತ್’ನಲ್ಲಿ ಮೈಖೇಲ್ ಸ್ಯಾವೇಜ್ ಎಂಬ ಬಲಪಂಥೀಯ, ಭಾರತ ಹಾಗೂ ಚೀನಾದ ವಲಸಿಗರ ಬಗ್ಗೆ ಹೆಲ್ ಹೋಲ್ಸ್ (ನರಕದ ಕೂಪಗಳು) ಹಾಗೂ ಗ್ಯಾಂಗ್ಸ್ಟರ್ಸ್ ವಿತ್ ಲ್ಯಾಪ್ಟ್ಯಾ (ಲ್ಯಾಪ್ಟಾಪ್ ಹಿಡಿದ ರೌಡಿಗಳು)’ ಎಂದು ನೀಡಿದ ಕೀಳುಮಟ್ಟದ ಹೇಳಿಕೆಯನ್ನು ಹಂಚಿಕೊಂಡಿದ್ದಂತೂ ಬೆಂಕಿಗೆ ತುಪ್ಪವನ್ನು ಸುರಿದಂತಾಯಿತು.
ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಅಂತೂ ಒಂದು ಹೆಜ್ಜೆ ಮುಂದು ಹೋಗಿ ಭಾರತೀಯ ಹೆಚ್- 1ಬಿ ವೀಸಾದಾರರನ್ನು ಒಪ್ಪಂದದ ವಿದೇಶೀ ಕಾರ್ಮಿಕರು ಎಂದು ಕರೆದಿದ್ದಾರೆ (ಜೆ.ಡಿ ವ್ಯಾನ್ಸ್ ಅವರ ಪತ್ನಿ ಉಷಾ ಭಾರತೀಯ ಮೂಲದವರು!). ಡೊನಾಲ್ಡ್ ಟ್ರಂಪ್ ಸರಕಾರವು ‘ಮೇಕ್ ಅಮೇರಿಕ ಗ್ರೇಟ್ ಅಗೈನ್ (ಮಗಾ)’ ಕಾರ್ಯಕ್ರಮದಡಿಯಲ್ಲಿ ಅಮೇರಿಕಾದ ತಂತ್ರಜ್ಞರಿಗೆ ಹೆಚ್ಚು ಉದ್ಯೋಗ ಗಳನ್ನು ಒದಗಿಸುವ ಉದ್ದೇಶದಿಂದ ಭಾರತೀಯ ಪರಿಣಿತ ತಂತ್ರಜ್ಞರಿಗೆ ಕೊಡಮಾಡುವ ಹೆಚ್-1ಬಿ ವೀಸಾದ ಮೇಲೆ ಕಠಿಣ ನಿಯಮಗಳನ್ನು ಹೇರಿದೆ.
ಕಠಿಣ ನಿರ್ಬಂಧಗಳ ಪರಿಣಾಮವಾಗಿ ಭಾರತದ ಪ್ರಮುಖ ಐಟಿ ಕಂಪೆನಿಗಳ ಹೆಚ್-1ಬಿ ವೀಸಾಗಳ ನೋಂದಣಿ ಭಾರೀ ಕುಸಿತವನ್ನು ಕಂಡಿದೆ.
ಭಾರತೀಯರು ಹಾಗು ಭಾರತೀಯ ಅಮೆರಿಕನ್ನರ ಮೇಲೆ ಅಮೆರಿಕವು ಯಾವುದೇ ರೀತಿಯ ಭೇದ ಭಾವವನ್ನು ತೋರಿಸುವಂತೆಯೇ ಇಲ್ಲ. ಅಪಾರ ಪರಿಶ್ರಮಿಗಳು ಹಾಗೂ ಬುದ್ಧಿವಂತ, ವಿದ್ಯಾವಂತ ಭಾರತೀಯ ಸಮುದಾಯವು ಅಮೇರಿಕದ ಆರ್ಥಿಕತೆಗೆ ತನ್ನದೇ ಆದ ಗಣನೀಯ ಕೊಡುಗೆಯನ್ನು ಕೊಟ್ಟಿದೆ.
ಭಾರತೀಯ ಅಮೆರಿಕನ್ನರು ಅಮೆರಿಕಕ್ಕೆ ಭಾರವಾಗಿ ಬದುಕುತ್ತಿಲ್ಲ. 2026ರಲ್ಲಿ ಡೊನಾಲ್ಡ್ ಟ್ರಂಪ್ ವಿವಿಧ ದೇಶಗಳ ವಲಸಿಗರು ಅಮೇರಿಕಾದಲ್ಲಿ ಪಡೆಯುತ್ತಿರುವ ಜನಕಲ್ಯಾಣ ಸೌಲಭ್ಯಗಳ ಪ್ರಮಾಣದ ಪಟ್ಟಿಯನ್ನು ಪ್ರಕಟಿಸಿದ್ದರು. ಈ ಪಟ್ಟಿಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ಭೂತಾನಿ ಗರಲ್ಲಿ 48.4% ಮಂದಿ, ಬಾಂಗ್ಲಾದೇಶಿಗರಲ್ಲಿ 44.8% ಮಂದಿ, ಪಾಕಿಸ್ತಾನಿಯರಲ್ಲಿ 40.2% ಮಂದಿ, ನೇಪಾಳಿಗರಲ್ಲಿ 34.8% ಮಂದಿ, ಚೀನಿಯರಲ್ಲಿ 32.9% ಮಂದಿ ಸರಕಾರದ ಆರ್ಥಿಕ ನೆರವಿನೊಂದಿಗೆ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ ಎಂಬ ಅಂಕಿ ಅಂಶ ಇದೆ.
ಭಾರತೀಯರೆ ಹೆಮ್ಮೆಪಡಬಹುದಾದ ವಿಷಯವೇನೆಂದರೆ ಈ ಪಟ್ಟಿಯಲ್ಲಿ ಅನಿವಾಸಿ ಭಾರತೀಯರ ಹೆಸರು ಇರಲಿಲ್ಲ. ಏಕೆಂದರೆ ಅಮೇರಿಕದ ಎರಡನೆಯ ಅತೀ ದೊಡ್ಡ ವಲಸಿಗ ಸಮುದಾಯವಾದ ಭಾರತೀಯರು ಅಮೇರಿಕದ ಸರಕಾರೀ ಆರ್ಥಿಕ ನೆರವಿನ ಹಂಗಿನಲ್ಲಿ ಜೀವಿಸುತ್ತಿಲ್ಲ.
ಅಮೇರಿಕದಲ್ಲಿರುವ ಅನಿವಾಸೀ ಭಾರತೀಯರ ಪ್ರಮಾಣ ಅಲ್ಲಿನ ಜನಸಂಖ್ಯೆಯ 1.5 % ಮಾತ್ರ (ಸುಮಾರು 52 ಲಕ್ಷ ಮಂದಿ) ಆದರೂ ಅವರು ಅಮೇರಿಕದ ಆರ್ಥಿಕತೆಗೆ, ತಂತ್ರಜ್ಞಾನ ಅಭಿವೃದ್ಧಿಗೆ, ಅರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಹಾಗೂ ನೀಡುತ್ತಿರುವ ಕೊಡುಗೆ ಅನುಪಮವಾದುದು. ಒಟ್ಟು ಜನಸಂಖ್ಯೆಯ ಕೇವಲ 1.5%ರಷ್ಟಿದ್ದರೂ ಭಾರತೀಯ ಮೂಲದ ಅಮೆರಿಕನ್ನರು ಅಮೇರಿಕದ ಆದಾಯ ತೆರಿಗೆಯ ಸುಮಾರು 6% (300 ಬಿಲಿಯನ್ ಡಾಲರ್) ಕೊಡುಗೆಯನ್ನು ನೀಡುತ್ತಿದ್ದಾರೆ.
ಭಾರತೀಯ ಮೂಲದ ಔದ್ಯೋಗಿಕ ವಲಯದ ನಾಯಕರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ 1.2 ಕೋಟಿ ಉದ್ಯೋಗಗಳನ್ನು ಅಲ್ಲಿ ಸೃಷ್ಟಿ ಮಾಡಿದ್ದಾರೆ. ಅಮೇರಿಕಾದ ಹೋಟೆಲ್ಗಳಲ್ಲಿ 60% ಹೋಟೆಲ್ಗಳ ಮಾಲಕತ್ವವನ್ನು ಭಾರತೀಯ ಮೂಲದ ಮಂದಿ ಹೊಂದಿದ್ದಾರೆ. ಈ ಹೋಟೆಲ್ ಗಳು ಅಮೆರಿಕಕ್ಕೆ ಸುಮಾರು 700 ಬಿಲಿಯನ್ ಡಾಲರ್ಗಳ ಆದಾಯವನ್ನು ತಂದುಕೊಡುತ್ತಿವೆ ಹಾಗೂ 40 ಲಕ್ಷ ಮಂದಿಗೆ ಉದ್ಯೋಗ ಕೊಟ್ಟಿವೆ.
ಜಾಗತಿಕ ಫಾರ್ಚ್ಯೂನ್ 500 ಉದ್ಯಮಗಳಲ್ಲಿ 16 ಉದ್ಯಮಗಳನ್ನು ಭಾರತೀಯ ಅಮೇರಿಕನ್ನರು ಮುನ್ನಡೆಸುತ್ತಿದ್ದಾರೆ. ಇವರಲ್ಲಿ ಮೈಕ್ರೋಸಾಫ್ಟ್ʼನ ಮುಖ್ಯಸ್ಥರಾದ ಸತ್ಯ ನಾಡೆಲ್ಲ, ಆಲ್ಫಾಬೆಟ್ ಹಾಗು ಗೂಗಲ್ನ ಮುಖ್ಯಸ್ಥರಾದ ಸುಂದರ್ ಪಿಚೈ, ಅಡೋಬ್ನ ಮುಖ್ಯಸ್ಥರಾದ ಶಂತನು ನಾರಾಯಣ್, ಐಬಿಎಂನ ಅರ್ವಿಂದ್ ಕೃಷ್ಣ, ಫೆಡೆಕ್ಸ್ʼನ ರಾಜ್ ಸುಬ್ರಮಣಿಯಂ, ಅರಿಸ್ಟಾ ನೆಟ್ವರ್ಕ್ನ ಜಯಶ್ರೀ ಉಳ್ಳಾಲ, ಫಾಲೋ ಆಲ್ಟೊ ನೆಟ್ವರ್ಕ್ʼನ ನಿಕೇಶ್ ಅರೋರಾ, ಮೈಕ್ರಾನ್ ಟೆಕ್ನಾಲಜಿಯ ಸಂಜಯ್ ಮೆಹರೋತ್ರ, ಫ್ಲೆಕ್ಸ್ʼನ ರೇವತೀ ಅದ್ವೈತಿ, ನೊವಾರ್ಟಿಸ್ನ ವಸಂತ್ ನರಸಿಂಹನ್, ಕಾಗ್ನಿಜೆಂಟ್ನ ರವಿಕುಮಾರ್ ಎಸ್, ಯೂಟ್ಯೂಬ್ನ ನೀಲ್ ಮೋಹನ್ ಮೊದಲಾದವರು ಇದ್ದಾರೆ.
ಇದಲ್ಲದೆ ಜಾಗತಿಕ ಫಾರ್ಚ್ಯೂನ್ 500 ಉದ್ಯಮಗಳಲ್ಲಿ 30% ಉದ್ಯಮಗಳ ಚೀಫ್ ಫೈನಾನ್ಸ್ ಆಫೀಸರ್ (ಸಿಎಫ್ʼಓ) ಗಳಂತಹ ಹಿರಿಯ ನಾಯಕತ್ವ ಹುದ್ದೆಗಳನ್ನು ಭಾರತೀಯ ಅಮೆರಿಕನ್ನರು ನಿರ್ವಹಿಸುತ್ತಿದ್ದಾರೆ. ಭಾರತೀಯ ಅಮೆರಿಕನ್ನರು ಮುನ್ನಡೆಸುತ್ತಿರುವ ಜಾಗತಿಕ ಫಾರ್ಚ್ಯೂನ್ 500 ಉದ್ಯಮಗಳು ಅಮೇರಿಕಕ್ಕೆ ಸರಿ ಸುಮಾರು ಒಂದು ಟ್ರಿಲಿಯನ್ ಡಾಲರ್ಗಳಷ್ಟು ಆದಾಯವನ್ನು ತರುತ್ತಿವೆ.
ಅಮೆರಿಕದಲ್ಲಿ ಆರಂಭವಾಗುತ್ತಿರುವ ನವೋದ್ಯಮಗಳು ಹಾಗೂ ಯುನಿಕಾರ್ನ್ ಸ್ಟಾರ್ಟಪ್ (ಒಂದು ಬಿಲಿಯ ಡಾಲರ್ಗಿಂತ ಹೆಚ್ಚು ಮೌಲ್ಯದ ನವೋದ್ಯಮ) ಗಳಲ್ಲೂ ಭಾರತೀಯರೇ ಮುಂದಿದ್ದಾರೆ. ಅಮೇರಿಕದಲ್ಲಿ 72 ಯುನಿಕಾರ್ನ್ ಸ್ಟಾರ್ಟಪ್ಗಳನ್ನು ಭಾರತೀಯ ಮೂಲದ ಯುವೋದ್ಯಮಿಗಳು ಆರಂಭಿಸಿದ್ದಾರೆ. ಅಮೇರಿಕದ 11% ಯುನಿಕಾರ್ನ್ ಸ್ಟಾರ್ಟಪ್ಗಳನ್ನೂ ಭಾರತೀಯರು ಸ್ಥಾಪಿಸಿದ್ದಾರೆ. ಇವುಗಳ ಮೌಲ್ಯ ಸರಿಸುಮಾರು 195 ಬಿಲಿಯನ್ ಡಾಲರ್ಗಳು.
ವಿಜ್ಞಾನ, ತಂತ್ರಜ್ಞಾನ ಹಾಗು ಸಂಶೋಧನಾ ಕ್ಷೇತ್ರಗಳಲ್ಲಿ ಅಮೆರಿಕಕ್ಕೆ ಭಾರತೀಯರು ಕೊಡುತ್ತಿರುವ ಕೊಡುಗೆ ಅನನ್ಯವಾದುದು. ಅಮೇರಿಕಾದ 10% ಪೇಟೆಂಟ್ಗಳನ್ನೂ ಅನಿವಾಸೀ ಭಾರತೀಯರು ಹೊಂದಿದ್ದಾರೆ ಹಾಗೂ ಅಲ್ಲಿ ಪ್ರಕಟವಾಗುತ್ತಿರುವ ವೈಜ್ಞಾನಿಕ ಸಂಶೋಧನಾ ಪೇಪರ್ಗಳಲ್ಲಿ 13% ಪೇಪರ್ಗಳನ್ನು ಪ್ರಕಟಿಸುತ್ತಿರುವುದು ಭಾರತೀಯ ಅಮೆರಿಕನ್ನರೇ.
ಅಮೇರಿಕದ ವೈದ್ಯಕೀಯ ಕ್ಷೇತ್ರಕ್ಕೂ ಭಾರತೀಯರ ಕೊಡುಗೆ ಬಹಳ ದೊಡ್ಡದಿದೆ. ಅಲ್ಲಿನ 10% ವೈದ್ಯರು ಭಾರತೀಯರು. ಸುಮಾರು 75000 ಭಾರತೀಯ ಮೂಲದ ವೈದ್ಯರು ಅಮೇರಿಕಾದ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.
ಅಮೆರಿಕಕ್ಕೆ ಇಷ್ಟೆ ಕೊಡುಗೆಗಳನ್ನು ನೀಡುತ್ತಿರುವ ಭಾರತೀಯರನ್ನು ಅಮೆರಿಕವು ತುಚ್ಛವಾಗಿ ನಡೆಸಿಕೊಂಡರೆ ಇತಿಹಾಸವು ಆ ದೇಶವನ್ನು ಎಂದಿಗೂ ಕ್ಷಮಿಸದು. ಭಾರತೀಯ ಅಮೆರಿಕನ್ನರು ಭಾರತದ ಪಾಲಿಗೆ ಮಹತ್ವವುಳ್ಳವರಾಗಿದ್ದಾರೆ. ಅವರು ಭಾರತದ ಆರ್ಥಿಕ ಬೆಳವಣಿಗೆ, ತಂತ್ರಜ್ಞಾನ ವರ್ಗಾವಣೆ, ಜಾಗತಿಕ ರಾಜತಾಂತ್ರಿಕತೆ ಮತ್ತು ಸಾಂಸ್ಕೃತಿಕ ಪ್ರಭಾವದ ವಿಷಯದಲ್ಲಿ ಒಂದು ಕಾರ್ಯತಂತ್ರದ ಸೇತುವೆಯ ಹಾಗೆ ಕಾರ್ಯನಿರ್ವಹಿಸುತ್ತಾರೆ.
ಅಮೇರಿಕದ ವಿದೇಶಾಂಗ ವ್ಯವಹಾರಗಳ ಜವಾಬ್ದಾರಿಯನ್ನು ಹೊತ್ತಿರುವ ಸೆಕ್ರೆಟರಿ ಆಫ್ ಸ್ಟೇಟ್ ಮಾರ್ಕೊ ರುಬಿಯೋ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಮೇರಿಕದಲ್ಲಿ ಹೆಚ್ಚುತ್ತಿರುವ ಭಾರತೀಯ ವಿರೋಧಿ ಹೇಳಿಕೆಗಳು ಹಾಗು ಆನ್ಲೈನ್ ದ್ವೇಷಗಳ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ‘ಎಲ್ಲ ದೇಶಗಳಲ್ಲಿ ಇರುವಂತೆಯೇ ಅಮೆರಿಕದಲ್ಲೂ ಕೆಲವು ಮೂರ್ಖರಿದ್ದಾರೆ.
ಅವರು ಮಾಡುತ್ತಿರುವ ದಡ್ಡತನದ ಕಾಮೆಂಟ್ಗಳನ್ನು ಇಡೀ ಅಮೇರಿಕಾದ ಅಭಿಪ್ರಾಯದಂತೆ ಪರಿಗಣಿಸಬಾರದು’ ಎಂದು ಹೇಳಿ, ‘ಅಮೆರಿಕವು ವಲಸಿಗರಿಂದ ನಿರ್ಮಾಣವಾದ, ವಲಸಿಗರಿಗೆ ಸ್ವಾಗತಾರ್ಹವಾದ ದೇಶವಾಗಿದ್ದು, ಭಾರತೀಯ ಮೂಲದ ಜನರು ಅಮೇರಿಕಾದ ಅಭಿವೃದ್ಧಿಗೆ ನೀಡಿದ ಕೊಡುಗೆ ಮಹತ್ತರವಾದುದು’ ಎಂದು ಹೊಗಳಿದ್ದಾರೆ. ಆದರೆ ಅಮೆರಿಕಕ್ಕೆ ಮರಳಿದ ನಂತರ ಮಾರ್ಕೊ ರುಬಿಯೋ ತಮ್ಮ ಮಾತುಗಳನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಷ್ಟೇ.