Keshava Prasad B Column: ಟ್ರಂಪ್, ಭಾರತ ಈಗ ಬಡರಾಷ್ಟ್ರವಲ್ಲ, ಯಾರಿಗೂ ಮಂಡಿಯೂರಲ್ಲ !
ಈಗ ‘ಬಡವನ ಸಿಟ್ಟು ದವಡೆಗೆ ಮೂಲ’ ಎಂಬಂತೆ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮುನಿಸಿ ಕೊಂಡರೆ, ಅದನ್ನು ಎದುರಿಸಲು ಭಾರತಕ್ಕೆ ಸಾಧ್ಯವೇ? ಎಂಬ ಪ್ರಶ್ನೆಯಿದೆ. ಯುರೋಪಿನ ರಾಷ್ಟ್ರಗಳೆಲ್ಲ ಟ್ರಂಪ್ ಎದುರು ಕಮಕ್ ಕಿಮಕ್ ಎನ್ನುತ್ತಿಲ್ಲ. ಚೀನಾ ಕ್ಯಾರೇ ಎನ್ನುತ್ತಿಲ್ಲ. ಆದರೆ ಭಾರತವೂ ಮಂಡಿಯೂರಿಲ್ಲ. ಅದು ಸಾಧ್ಯವೂ ಇಲ್ಲ.


ಮನಿ ಮೈಂಡೆಡ್
ಯುರೋಪಿನ ರಾಷ್ಟ್ರಗಳೆಲ್ಲ ಟ್ರಂಪ್ ಎದುರು ಕಮಕ್ ಕಿಮಕ್ ಎನ್ನುತ್ತಿಲ್ಲ. ಚೀನಾ ಕ್ಯಾರೇ ಎನ್ನುತ್ತಿಲ್ಲ. ಆದರೆ ಭಾರತವೂ ಮಂಡಿಯೂರಿಲ್ಲ. ಅದು ಸಾಧ್ಯವೂ ಇಲ್ಲ. ಇದೇ ವರ್ಷ ಫೆಬ್ರವರಿಯಲ್ಲಿ ವಾಷಿಂಗ್ಟನ್ ನಲ್ಲಿ ನೀಡಿದ ಜಂಟಿ ಹೇಳಿಕೆಯಲ್ಲಿ, ಭಾರತ-ಅಮೆರಿಕ ಜಾಗತಿಕ ವ್ಯೂಹಾತ್ಮಕ ಪಾಲುದಾರಿಕೆಯನ್ನು ಹೊಂದಿರುವ ರಾಷ್ಟ್ರವೆಂದು ಟ್ರಂಪ್ ಒಪ್ಪಿ ಕೊಂಡಿದ್ದರು. ಅವರೇ ಈಗ ಉಲ್ಟಾ ಹೊಡೆದಿದ್ದಾರೆ.
“ಭಾರತವು ರಷ್ಯಾದಿಂದ ಡಿಸ್ಕೌಂಟ್ ದರದಲ್ಲಿ ಕಚ್ಚಾತೈಲವನ್ನು ಕೇವಲ ಖರೀದಿಸುತ್ತಿಲ್ಲ, ಅದನ್ನು ಪೆಟ್ರೋಲ್, ಡೀಸೆಲ್ ಆಗಿ ಸಂಸ್ಕರಿಸಿ, ಬೇರೆ ದೇಶಗಳಿಗೆ ಮಾರಾಟ ಮಾಡುವ ಮೂಲಕ ಭರ್ಜರಿ ಲಾಭ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಇದೆ. ಇದಕ್ಕೆ ನೀವೇನು ಹೇಳುತ್ತೀರಿ?" ಎಂದು ವಿದೇಶಾಂಗ ಸಚಿವ ಜೈ ಶಂಕರ್ ಅವರನ್ನು ಸಂದರ್ಶಕರೊಬ್ಬರು ಇತ್ತೀಚೆಗೆ ಪ್ರಶ್ನಿಸಿದರು.
ಆಗ ಮುಗುಳ್ನಕ್ಕ ಸಚಿವ ಜೈ ಶಂಕರ್, “ನೋಡಿ, ಅಮೆರಿಕದ ವ್ಯಾಪಾರ-ಸ್ನೇಹಿ ಸರಕಾರದ ಪರ ಮಾತನಾಡುವವರು, ಬೇರೆಯವರು ಮಾಡುವ ಬಿಸಿನೆಸ್ ಬಗ್ಗೆ ದೂಷಿಸುವುದು ಹಾಸ್ಯಾಸ್ಪದ. ನಿಜಕ್ಕೂ ವಿಚಿತ್ರ. ನೀವು ಭಾರತದಿಂದ ತೈಲ ಅಥವಾ ಸಂಸ್ಕರಿತ ತೈಲವನ್ನು ಖರೀದಿಸದಿದ್ದರೆ ಬೇಡ ಬಿಡಿ, ಯಾರೂ ಬಲವಂತ ಮಾಡುತ್ತಿಲ್ಲ. ಯುರೋಪ್ ಖರೀದಿಸುತ್ತಿದೆ, ಅಮೆರಿಕ ಪಡೆಯುತ್ತಿದೆ, ಬೇರೆ ದೇಶಗಳೂ ಕೊಳ್ಳುತ್ತಿವೆ, ನಿಮಗೆ ಬೇಡವಾಗಿದ್ದರೆ ಬಿಟ್ಟು ಬಿಡಿ" ಎಂದಿದ್ದರು!
ಅಮೆರಿಕಕ್ಕೂ ಭಾರತದಿಂದ ಪೆಟ್ರೋಲ್-ಡೀಸೆಲ್ ಮಾರಾಟವಾಗುತ್ತಿದೆಯಾ? ಅಂತ ನೀವು ಕೇಳಬಹುದು! ಅದು ನಿಜ. ಭಾರತದಿಂದ ರಿಲಯನ್ಸ್ ಇಂಡಸ್ಟ್ರೀಸ್, ಬಿಪಿ, ಎಕ್ಸೋನ್ ಮೊಬಿಲ್, ಗ್ಲೆನ್‌ಕೋರ್ ಮೊದಲಾದ ಕಂಪನಿಗಳು ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ಸಂಸ್ಕರಿತ ತೈಲವನ್ನು ಮಾರಾಟ ಮಾಡುತ್ತವೆ, ಇರಲಿ.
ಇದನ್ನೂ ಓದಿ: Keshava Prasad B Column: ಕೋಳಿ ಅಂಕವೇ ಆದರೂ, ದುಡ್ಡು ಇಟ್ಟರೆ ಜೂಜಾಟವೇ !
“ಭಾರತ-ಅಮೆರಿಕ ನಡುವಿನ ಸಂಬಂಧಗಳಲ್ಲಿ ಒಂದಷ್ಟು ವ್ಯತ್ಯಾಸವಾಗಿದೆ. ಮೊದಲಿನಿಂದಲೂ ಹಲವಾರು ಸಂದರ್ಭಗಳಲ್ಲಿ ವಿವಾದಗಳು ಉಂಟಾಗಿತ್ತು. ದೊಡ್ಡ ರಾಷ್ಟ್ರಗಳಿಗೆ ಹಲವಾರು ಸಂಬಂಧಗಳು ಇರುತ್ತವೆ. ಆಗ ವಿವಾದಗಳು ಉಂಟಾಗುವುದೂ ಸ್ವಾಭಾವಿಕ. ಟ್ರಂಪ್ ಅವರು ವಿದೇಶಗಳ ಜತೆಗೇ ಇರಬಹುದು, ತಮ್ಮದೇ ದೇಶದ ಜತೆಗೆ ಇರಬಹುದು, ನಡೆದುಕೊಳ್ಳುವ ರೀತಿಯೇ ಅಸಾಂಪ್ರದಾಯಿಕ, ವಿಲಕ್ಷಣ.
ವ್ಯಾಪಾರದ ವಿಷಯದಲ್ಲಿ ಭಾರತ-ಅಮೆರಿಕದ ಮಧ್ಯೆ ಭಿನ್ನಾಭಿಪ್ರಾಯ ಇದೆ. ರೈತರು ಮತ್ತು ಸಣ್ಣ ಉತ್ಪಾದಕರ ಹಿತಾಸಕ್ತಿ ವಿಷಯದಲ್ಲಿ ನಮ್ಮದೇ ನಿಲುವು ನಮಗಿದೆ. ಎರಡನೇ ವಿವಾದ ತೈಲಕ್ಕೆ ಸಂಬಂಧಿಸಿದ್ದು. ಭಾರತವು ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಆರ್ಥಿಕ ಸಂಪನ್ಮೂಲವನ್ನು ಪುಟಿನ್ ಬೊಕ್ಕಸಕ್ಕೆ ನೀಡುತ್ತಿದೆ ಎಂಬ ವಾದವಿದೆ. ಆದರೆ ರಷ್ಯಾದಿಂದ ಭಾರತ ಒಂದೇ ತೈಲ ಖರೀದಿಸುತ್ತಿಲ್ಲ.
ಚೀನಾ ಅತ್ಯಧಿಕ ಕಚ್ಚಾ ತೈಲವನ್ನು ರಷ್ಯಾದಿಂದ ಪಡೆಯುತ್ತಿದೆ. ಯುರೋಪ್ ಅತಿ ಹೆಚ್ಚು ಎಲ್ಎನ್‌ಜಿಯನ್ನು ಆಮದು ಮಾಡಿಕೊಳ್ಳುತ್ತಿದೆ. ರಷ್ಯಾ ಜತೆಗೆ ಯುರೋಪ್ ಮಾಡುತ್ತಿರುವ ವ್ಯವಹಾರವು ಭಾರತವು ರಷ್ಯಾದಿಂದ ಖರೀದಿಸುತ್ತಿರುವ ಕಚ್ಚಾ ತೈಲ ಬಿಸಿನೆಸ್‌ಗಿಂತ ದೊಡ್ಡದು. ಆದ್ದರಿಂದ ಭಾರತವನ್ನೇ ಟಾರ್ಗೆಟ್ ಮಾಡುತ್ತಿರುವುದೇಕೆ?" ಎಂದು ಖಡಕ್ಕಾಗಿ ವಿವರಿಸುತ್ತಾರೆ ಜೈ ಶಂಕರ್.

ಇದೇ ಕಾರಣಕ್ಕಾಗಿ ಟ್ರಂಪ್ ಅವರನ್ನು ಮೋದಿ ಕ್ಯಾರೇ ಎನ್ನುತ್ತಿಲ್ಲ. “ಭಾರತ ತನ್ನ ಹಿತಾಸಕ್ತಿಗೆ ಪೂರಕವಾಗಿರುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದೆ. ಭಾರತ ಮತ್ತು ಅಮೆರಿಕ ಎರಡೂ ದೊಡ್ಡ ರಾಷ್ಟ್ರಗಳು. ಮಾತುಕತೆಯ ಬಾಗಿಲು ಇನ್ನೂ ಮುಚ್ಚಿಲ್ಲ. ಆದರೆ ಕೆಲವು ತೊಡಕುಗಳು ಇವೆ. ಅವುಗಳನ್ನು ಪರಿಹರಿಸಿಕೊಳ್ಳಬೇಕಿದೆ" ಎಂದು ಜೈ ಶಂಕರ್ ಮತ್ತೊಂದು ಬದಿಯನ್ನೂ ತೋರಿಸಿದ್ದಾರೆ.
ಇದೊಂಥರಾ “ಸ್ನೇಹಕ್ಕೂ ಸೈ, ಸಮರಕ್ಕೂ ಸೈ" ಎಂಬ ದಿಟ್ಟ ನಿಲುವು. ಅಂದ ಹಾಗೆ, ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಬಹುತೇಕ ಉತ್ಪನ್ನಗಳಿಗೆ ಸುಂಕವನ್ನು 50 ಪರ್ಸೆಂಟಿಗೆ ಏರಿಸುವ ಮೂಲಕ, ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂಬ ಭ್ರಮೆಯನ್ನಾದರೂ ಡೊನಾಲ್ಡ್ ಟ್ರಂಪ್ ಇದ್ದರೆ, ಭಾರತದ ಇತಿಹಾಸವನ್ನೊಮ್ಮೆ ತಕ್ಷಣ ಓದಿಕೊಳ್ಳುವುದು ಅಥವಾ ಬಲ್ಲವರಿಂದ ಟ್ಯೂಷನ್ ಪಡೆಯುವುದು ಉತ್ತಮ.
ಅಮೆರಿಕ ಹುಟ್ಟಿಕೊಳ್ಳುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಭಾರತವು ಹತ್ತಾರು ದೇಶಗಳ ಜತೆಗೆ ಒಂದಿಂದು ಮಾರ್ಗದಲ್ಲಿ ವ್ಯವಹಾರಗಳನ್ನು ನಡೆಸುತ್ತಿತ್ತು! ಮೌರ್ಯ ಮತ್ತು ಗುಪ್ತ ವಂಶದ ಸಾಮ್ರಾಜ್ಯಗಳು ಕೂಡ ವಿದೇಶಗಳ ಜತೆಗೆ ವ್ಯಾಪಾರ, ವಾಣಿಜ್ಯ ಸಂಪರ್ಕಗಳನ್ನು ಯಶಸ್ವಿಯಾಗಿ ನಡೆಸಿದ್ದವು.
ವಿಜ್ಞಾನ, ತಂತ್ರಜ್ಞಾನ, ಕಲೆ, ಸಂಸ್ಕೃತಿಯ ವಿಚಾರದಲ್ಲಿ ಇಲ್ಲಿ ಪವಾಡ ಸದೃಶ ಬೆಳವಣಿಗೆಗಳು ಹಿಂದೆಯೇ ನಡೆದಿದ್ದವು. 17ನೇ ಶತಮಾನದಲ್ಲಿ ಬ್ರಿಟಿಷರ ಆಕ್ರಮಣವಾಗುವ ತನಕವೂ ಭಾರತವು ವಿಶ್ವದ ಸಂಪದ್ಭರಿತ ರಾಷ್ಟ್ರವಾಗಿತ್ತು. ಮಧ್ಯ ಏಷ್ಯಾ, ಯುರೋಪ್ ಜತೆಗೆ ವ್ಯವಹಾರ ನಡೆಸುತ್ತಿತ್ತು. ಕಾಳು ಮೆಣಸು, ಶುಂಠಿ, ಹತ್ತಿ, ರೇಷ್ಮೆ ಬಟ್ಟೆಗಳು, ಅಮೂಲ್ಯ ಶಿಲೆಗಳು ರಫ್ತಾಗುತ್ತಿದ್ದವು.
ಈಜಿಪ್ಟ್, ಅರೇಬಿಯಾ, ಚೀನಾ, ಜಪಾನ್, ಪರ್ಷಿಯಾ (ಈಗಿನ ಇರಾನ್), ರೋಮ್ ಸಾಮ್ರಾಜ್ಯದ ಜತೆಗೆ ಭಾರತ ಮುಕ್ತ ವ್ಯಾಪಾರ ನಡೆಸುತ್ತಿತ್ತು. ಚೀನಾ ಮೂಲಕ ಸಿಲ್ಕ್ ರೂಟ್‌ನಲ್ಲಿ ಮೆಡಿಟರೇನಿ ಯನ್ ಜಗತ್ತಿನ ತನಕ ವ್ಯಾಪಾರದ ಲಿಂಕ್ ಏರ್ಪಟ್ಟಿತ್ತು. ಭಾರತವೂ ಈ ಪ್ರಾಚೀನ ನೆಟ್‌ವರ್ಕ್‌ನಲ್ಲಿ ಸಕ್ರಿಯವಾಗಿತ್ತು. ಈ ನೆಲದ ಶಕ್ತಿಯೇ ಅಂಥದ್ದು. ಇತಿಹಾಸ ಮರುಕಳಿಸುತ್ತದೆ ಎಂಬ ಮಾತು ಭಾರತದ ಮಟ್ಟಿಗೆ ಮತ್ತೆ ನಿಜವಾಗುವ ಸಮಯ ಬಂದಿದೆ.
ಇದೆಲ್ಲ ಚರಿತ್ರೆಯ ಮಾತಾಯಿತು. ಈಗ ‘ಬಡವನ ಸಿಟ್ಟು ದವಡೆಗೆ ಮೂಲ’ ಎಂಬಂತೆ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮುನಿಸಿಕೊಂಡರೆ, ಅದನ್ನು ಎದುರಿಸಲು ಭಾರತಕ್ಕೆ ಸಾಧ್ಯವೇ? ಎಂಬ ಪ್ರಶ್ನೆಯಿದೆ. ಯುರೋಪಿನ ರಾಷ್ಟ್ರಗಳೆಲ್ಲ ಟ್ರಂಪ್ ಎದುರು ಕಮಕ್ ಕಿಮಕ್ ಎನ್ನುತ್ತಿಲ್ಲ. ಚೀನಾ ಕ್ಯಾರೇ ಎನ್ನುತ್ತಿಲ್ಲ. ಆದರೆ ಭಾರತವೂ ಮಂಡಿಯೂರಿಲ್ಲ. ಅದು ಸಾಧ್ಯವೂ ಇಲ್ಲ. ಇದೇ ವರ್ಷ ಫೆಬ್ರವರಿಯಲ್ಲಿ ವಾಷಿಂಗ್ಟನ್‌ನಲ್ಲಿ ನೀಡಿದ ಜಂಟಿ ಹೇಳಿಕೆಯಲ್ಲಿ, ಭಾರತ-ಅಮೆರಿಕ ಜಾಗತಿಕ ವ್ಯೂಹಾತ್ಮಕ ಪಾಲುದಾರಿಕೆಯನ್ನು ಹೊಂದಿರುವ ರಾಷ್ಟ್ರವೆಂದು ಟ್ರಂಪ್ ಒಪ್ಪಿಕೊಂಡಿದ್ದರು.
ಅವರೇ ಈಗ ಉಲ್ಟಾ ಹೊಡೆದಿದ್ದಾರೆ. ಟ್ರಂಪ್ ಅವರು ಏಕಪಕ್ಷೀಯವಾಗಿ 50 ಪರ್ಸೆಂಟ್ ಸುಂಕ ಜಡಿದಿದ್ದಾರೆ. ಇದಕ್ಕೆ ಅವರು ಕೊಡುವ ಎರಡು ಪ್ರಮುಖ ಕಾರಣ ಯಾವುದು ಎಂದರೆ, ಭಾರತವು ಅಮೆರಿಕದ ಉತ್ಪನ್ನಗಳಿಗೆ ಭಾರಿ ಟ್ಯಾಕ್ಸ್ ಹಾಕುತ್ತಿದೆ. ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ಬಿಡುತ್ತಿಲ್ಲ ಎಂಬುದು.
ಎರಡನೆಯ ಕಾರಣ ರಷ್ಯಾದಿಂದ ಹೆಚ್ಚು ತೈಲವನ್ನು ಖರೀದಿಸುತ್ತಿದ್ದು, ಇದರಿಂದಾಗಿ ಉಕ್ರೇನ್ ಯುದ್ಧದಲ್ಲಿ ರಷ್ಯಾಕ್ಕೆ ಹಣಕಾಸು ಪೂರೈಕೆಯಾಗುತ್ತಿದೆ ಎಂಬುದು. ಈ ಎರಡೂ ಆರೋಪಗಳು ಅತ್ಯಂತ ಬಾಲಿಶ. ಈ ವ್ಯಕ್ತಿ ಹೇಳಿದಂತೆ ಭಾರತವು ರಷ್ಯಾದಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸಬೇಕೆ? ದೇಶದ ಕೋಟ್ಯಂತರ ರೈತರು, ಗೋಪಾಲಕರಿಗೆ, ಡೇರಿ ಉದ್ದಿಮೆಗೆ, ಸಣ್ಣ ಕಸುಬುದಾರರಿಗೆ ಆಘಾತಕಾರಿಯಾಗುವಂತೆ, ಅಮೆರಿಕನ್ ಡೇರಿ ಕಂಪನಿಗಳಿಗೆ ಇಲ್ಲಿನ ಮಾರುಕಟ್ಟೆ ಪ್ರವೇಶಕ್ಕೆ ಬಾಗಿಲು ತೆರೆಯಬೇಕೆ? ಟ್ರಂಪ್ ರ ಇಂಥ ಖತರ್ನಾಕ್ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕೆ? ಆದ್ದರಿಂದ ವ್ಯಕ್ತಿಗತವಾಗಿ ನನಗೆ ತೊಂದರೆಯಾದರೂ, ಟ್ರಂಪ್ ಬೇಡಿಕೆಯನ್ನು ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನಿರಾಕರಿಸಿದ್ದಾರೆ.
ಟಾರಿಫ್ ಅಸ್ತ್ರದ ಮೂಲಕ ಭಾರತವನ್ನು ಮೆತ್ತಗಾಗಿಸಬಹುದು ಎಂಬ ಟ್ರಂಪ್ ಕನಸು ಈಗ ನುಚ್ಚು ನೂರಾಗಿದೆ. ಆದ್ದರಿಂದಲೇ ಮೋದಿಯನ್ನು “ವೆರಿ ಟೆರಿಫಿಕ್ ಮ್ಯಾನ್" ಎಂದೇ ಟ್ರಂಪ್ ಕರೆಯುತ್ತಿದ್ದಾರೆ. “ಟ್ರಂಪ್ ಬೆದರಿಕೆಗೆ ಸೊಪ್ಪು ಹಾಕಲು ಇದೇನೂ 1757 ಅಲ್ಲ, 2025 (1757ರಲ್ಲಿ ಬ್ರಿಟಿಷ್ ಈ ಇಂಡಿಯಾ ಕಂಪನಿಯು ಪ್ಲಾಸಿ ಕದನದಲ್ಲಿ ಬಂಗಾಳದ ನವಾಬನನ್ನು ಸೋಲಿಸುವ ಮೂಲಕ ಭಾರತದ ನೆಲದ ಮೇಲೆ ಆಕ್ರಮಣವನ್ನು ಆರಂಭಿಸಿತ್ತು).
ಭಾರತ ಈಗ ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿದೆ. ಜಗತ್ತಿನ ಅತಿ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ, ಮೂರನೇ ಅತಿ ದೊಡ್ಡ ಮಿಲಿಟರಿ ಪಡೆಯಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಭಾರತವು ಯಾರ ಹಂಗಿನಲ್ಲೂ ಇಲ್ಲ. ಇದು ಹೆಮ್ಮೆಯ ಪ್ರಾಚೀನ ನಾಗರಿಕತೆ. ಅಭಿವೃದ್ಧಿ ಹೊಂದಿದ ದೇಶವಾಗುವ ಮಹತ್ವಾಕಾಂಕ್ಷೆಯನ್ನು ಎದುರು ನೋಡುತ್ತಿದೆ. ಭಾರತವು ಸಾಮ್ರಾಜ್ಯ ಶಾಹಿ ವಿಸ್ತರಣೆಯಲ್ಲಿ ನಂಬಿಕೆ ಹೊಂದಿಲ್ಲ.
ಬೇರೆ ದೇಶದ ಪ್ರಜಾಸತ್ತೆಯಗಲಿ, ಆಂತರಿಕ ವ್ಯವಹಾರಗಳಲ್ಲಾಗಲಿ ಮಧ್ಯಪ್ರವೇಶಿಸುವುದಿಲ್ಲ. ಟೆರರಿಸ್ಟ್ ಸಂಘಟನೆಗಳಿಗೆ ಫಂಡ್ ಕೊಡುವುದಿಲ್ಲ. ನಾವು ಘನತೆ, ಗೌರವ, ನೈತಿಕತೆ ಮತ್ತು ಉದಾತ್ತ ಮೌಲ್ಯಗಳನ್ನು ಒಳಗೊಂಡಿರುವ ದೇಶ" ಎಂದು ಆರ್ನಬ್ ಗೋಸ್ವಾಮಿಯವರು ತಮ್ಮದೇ ಸ್ಟೈಲ್ ನಲ್ಲಿ ವರ್ಣಿಸುವಾಗ ಯಾರಿಗಾ ದರೂ ರೋಮಾಂಚನವಾಗದಿರದು.
ಹಾಗಾದರೆ ಈಗ ಭಾರತವು ಟ್ರಂಪ್ ಅವರ 50 ಪರ್ಸೆಂಟ್ ಟಾರಿಫ್ ಅನ್ನು ಹೇಗೆ ಎದುರಿಸಲಿದೆ? ಮೊದಲಿಗೆ ಎಷ್ಟು ಮೌಲ್ಯದ ರಫ್ತಿಗೆ ನೋಡೋಣ. ತೊಂದರೆ ಆಗಲಿದೆ ಎಂಬುದನ್ನು ಭಾರತವು ಅಮೆರಿಕಕ್ಕೆ ರಫ್ತು ಮಾಡುವ 48.2 ಶತಕೋಟಿ ಡಾಲರ್ ಉತ್ಪನ್ನಗಳಿಗೆ ಸವಾಲು ಎದುರಾಗಿದೆ. ರುಪಾಯಿ ಲೆಕ್ಕದಲ್ಲಿ ಅಂದಾಜು 4 ಲಕ್ಷದ 20 ಸಾವಿರ ಕೋಟಿ ರುಪಾಯಿಗಳು.
ಇದೇನೂ ಜೀರ್ಣಿಸಿಕೊಳ್ಳಲಾಗದ ಮೊತ್ತವೇನಲ್ಲ. ಆದರೆ ಜವಳಿ, ಸೀಗಡಿ, ಚರ್ಮದ ಉತ್ಪನ್ನಗಳು, ಜ್ಯುವೆಲ್ಲರಿ, ಕೆಮಿಕಲ್ಸ್, ಆಟೋಮೊಬೈಲ್ ಬಿಡಿಭಾಗಗಳು, ಕಾರ್ಪೆಟ್ ಗಳು, ಫುಟ್‌ವೇರ್, ಮಷಿನರಿ ಈ ಕ್ಷೇತ್ರಗಳಿಗೆ ಹೆಚ್ಚು ಹೊಡೆತ ಬೀಳುತ್ತವೆ. ಇವುಗಳಲ್ಲಿ ಹೆಚ್ಚಿನವುಗಳು ಕಾರ್ಮಿಕ ಕೇಂದ್ರಿತ ವಾಗಿವೆ. ಆದ್ದರಿಂದ ಈ ಸೆಕ್ಟರ್‌ಗಳಲ್ಲಿ ಲಕ್ಷಾಂತರ ಕಾರ್ಮಿಕರಿಗೆ ತೊಂದರೆಯಾಗದಂತೆ ನೋಡಿ ಕೊಳ್ಳಬೇಕಾದ ಜವಾಬ್ದಾರಿ ಸರಕಾರಗಳ ಮೇಲಿದೆ.
ಉದಾಹರಣೆಗೆ ನಮ್ಮ ನೆರೆಯ ರಾಜ್ಯ ತಮಿಳುನಾಡಿನ ತಿರುಪ್ಪೂರ್ ಎಂದರೆ ಟೆಕ್ಸ್‌ಟೈಲ್ಸ್ ಉದ್ದಿಮೆಗೆ, ಗಾರ್ಮೆಂಟ್ ರಫ್ತಿಗೆ ಲೋಕವಿಖ್ಯಾತಿ ಪಡೆದಿದೆ. ಭಾರತದ ಸೀಗಡಿ ರಫ್ತಿನಲ್ಲಿ 40 ಪರ್ಸೆಂಟ್‌ನಷ್ಟು ಅಮೆರಿಕಕ್ಕೆ ಹೋಗುತ್ತಿದೆ. ಈ ರೀತಿಯ ಸವಾಲುಗಳಿದ್ದರೂ, ತಾತ್ಕಾಲಿಕವಷ್ಟೇ. ಇದಕ್ಕೆ ಪರ್ಯಾಯ ಮಾರ್ಗಗಳೂ ಇವೆ ಎನ್ನುತ್ತಾರೆ ತಜ್ಞರು. ಏನದು ಪರ್ಯಾಯ? ಚೀನಾ, ಆಸ್ಟ್ರೇಲಿಯಾ, ರಷ್ಯಾ, ವಿಯೆಟ್ನಾಂ, ಯುರೋಪ್, ಯುಎಇ, ಬ್ರಿಟನ್ ಜತೆಗೆ ವ್ಯಾಪಾರಗಳನ್ನು ಹೆಚ್ಚಿಸಬಹುದು.
ಭಾರತದ ರಫ್ತನ್ನು ವೈವಿಧ್ಯಗೊಳಿಸಲು, ಸ್ವದೇಶಿ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸಲು ಟ್ರಂಪ್ ಟಾರಿಫ್ ಅವಕಾಶ ಸೃಷ್ಟಿಸಿದೆ. ಒಂದು ಕಡೆ ರಫ್ತಿಗೆ ಹೊಸ ಮಾರುಕಟ್ಟೆಗಳನ್ನು ಕಂಡುಕೊಳ್ಳುವುದು ಒಂದು ಭಾಗ. ಭಾರತದ ದೇಶೀಯ ಮಾರುಕಟ್ಟೆಯ ಗಾತ್ರ ಅಗಾಧ, ಅದನ್ನೇ ದೇಶೀಯ ಕಂಪನಿಗಳು ಬಳಸಿಕೊಳ್ಳುವುದು ನಿರ್ಣಾಯಕವಾಗಲಿದೆ.
ಏಕೆಂದರೆ ದಿಢೀರ್ ಹೊಸ ವಿದೇಶಿ ಮಾರುಕಟ್ಟೆಗೆ ರಫ್ತು ಮಾಡುವುದು ಎಂದರೆ ಸುಲಭವಲ್ಲ. ಅಲ್ಲೂ ತೀವ್ರ ಸ್ಪರ್ಧೆ ಇರುತ್ತದೆ. ಆದ್ದರಿಂದ ದೇಶೀಯ ಮಾರುಕಟ್ಟೆಯಲ್ಲೂ ಕಂಪನಿಗಳು ತೊಡಗಿಸಿಕೊಳ್ಳಬೇಕು. ಇಲ್ಲಿ ಮತ್ತೊಂದು ಅಂಶವೂ ಇದೆ. ಟಾರಿಫ್ ವಾರ್‌ನಿಂದ ಅಮೆರಿಕದಲ್ಲೂ ಅನೇಕ ವಸ್ತುಗಳ ಬೆಲೆಗಳು ಏರಿಕೆಯಾಗಲಿವೆ.
ಹಣದುಬ್ಬರ ಹೆಚ್ಚಲಿದೆ. ಅದನ್ನು ನಿಯಂತ್ರಿಸಲು ಅಲ್ಲಿಯೂ ಉತ್ಪಾದನೆಯನ್ನು ದಿಢೀರ್ ಹೆಚ್ಚಿಸುವುದು ಸುಲಭವೇನೂ ಅಲ್ಲ. ಆಗ ಟಾರಿಫ್ ಸುಂಕ ತೀವ್ರತೆಯನ್ನು ಕಳೆದುಕೊಳ್ಳಬಹುದು. ಆದರೆ ಒಂದಂತೂ ನಿಜ, ಭಾರತವು ರಫ್ತಿಗೆ ಅಮೆರಿಕವೊಂದನ್ನೇ ಹೆಚ್ಚು ಅವಲಂಬಿಸುವಂತಿಲ್ಲ.