Roopa Gururaj Column: ವಿಕ್ರಮ ಬೇತಾಳ: ಯಶಕೇತುವಿನ ಸ್ನೇಹ ಮತ್ತು ಪ್ರಜ್ಞಾಸಾಗರನ ಕರ್ತವ್ಯ ಪ್ರಜ್ಞೆ
ಶೋಭಾವತಿಯ ರಾಜ ಯಶಃಕೇತುವಿಗೆ ಆಡಳಿತಕ್ಕಿಂತ ಹೆಚ್ಚಾಗಿ ಪ್ರಕೃತಿಯ ಸೌಂದರ್ಯ, ಕಲೆ ಮತ್ತು ಸಾಹಸಗಳ ಆಸಕ್ತಿ. ಅಂತೆಯೇ ರಾಜ್ಯದ ಸಮಗ್ರ ಭಾರವನ್ನು ನಿಷ್ಠಾವಂತ ಮಂತ್ರಿ ಪ್ರಜ್ಞಾಸಾಗರನೇ ಹೊತ್ತು, ಪ್ರಜೆಗಳಿಗೆ ಯಾವುದೇ ಕೊರತೆಯಾಗದಂತೆ ದಕ್ಷತೆಯಿಂದ ಮುನ್ನಡೆಸುತ್ತಿದ್ದನು. ಒಮ್ಮೆ ರಾಜನು ಬೇಟೆಗೆಂದು ತೆರಳಿದಾಗ, ಸುಂದರ ಸರೋವರದ ದಂಡೆಯ ಮೇಲೆ ಮೃಗಾಂಕವತಿ ಎಂಬ ಅಪ್ರತಿಮ ಕನ್ಯೆಯನ್ನು ಕಂಡು ಮೋಹಗೊಳ್ಳುತ್ತಾನೆ.
-
ಒಂದೊಳ್ಳೆ ಮಾತು
ಸ್ನೇಹ ಮತ್ತು ಕರ್ತವ್ಯದ ನಡುವೆ ಘರ್ಷಣೆ ಉಂಟಾದಾಗ ಮನುಷ್ಯನ ವ್ಯಕ್ತಿತ್ವದ ನೈಜ ಉದಾತ್ತತೆ ಅನಾವರಣಗೊಳ್ಳು ತ್ತದೆ. ‘ಕಥಾಸರಿತ್ಸಾಗರ’ದ ಬೇತಾಳ ಪಂಚ ವಿಂಶತಿಯ ಆರನೆಯ ಕಥೆಯು ರಾಜ ಯಶಃ ಕೇತು ಹಾಗೂ ಆತನ ಜಾಣ ಮಂತ್ರಿ ಪ್ರಜ್ಞೆ ಸಾಗರನ ನಡುವಿನ ಅಪೂರ್ವ ಸ್ನೇಹ, ರಾಜ್ಯದ ಹೊಣೆಗಾರಿಕೆ ಮತ್ತು ನಿಸ್ವಾರ್ಥ ತ್ಯಾಗದ ಮಹತ್ವವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತದೆ.
ಶೋಭಾವತಿಯ ರಾಜ ಯಶಃಕೇತುವಿಗೆ ಆಡಳಿತಕ್ಕಿಂತ ಹೆಚ್ಚಾಗಿ ಪ್ರಕೃತಿಯ ಸೌಂದರ್ಯ, ಕಲೆ ಮತ್ತು ಸಾಹಸಗಳ ಆಸಕ್ತಿ. ಅಂತೆಯೇ ರಾಜ್ಯದ ಸಮಗ್ರ ಭಾರವನ್ನು ನಿಷ್ಠಾವಂತ ಮಂತ್ರಿ ಪ್ರಜ್ಞಾಸಾಗರನೇ ಹೊತ್ತು, ಪ್ರಜೆಗಳಿಗೆ ಯಾವುದೇ ಕೊರತೆಯಾಗದಂತೆ ದಕ್ಷತೆಯಿಂದ ಮುನ್ನಡೆಸು ತ್ತಿದ್ದನು. ಒಮ್ಮೆ ರಾಜನು ಬೇಟೆಗೆಂದು ತೆರಳಿದಾಗ, ಸುಂದರ ಸರೋವರದ ದಂಡೆಯ ಮೇಲೆ ಮೃಗಾಂಕವತಿ ಎಂಬ ಅಪ್ರತಿಮ ಕನ್ಯೆಯನ್ನು ಕಂಡು ಮೋಹಗೊಳ್ಳುತ್ತಾನೆ.
ಆಕೆಯ ವಿರಹದಲ್ಲಿ ರಾಜನು ಊಟ-ನಿದ್ರೆ ಬಿಟ್ಟು ಕೃಶನಾಗತೊಡಗಿದಾಗ, ಮಂತ್ರಿ ಪ್ರಜ್ಞಾಸಾಗರನು ತನ್ನ ಜಾಣ್ಮೆಯಿಂದ ಆಕೆಯ ಕುಲ-ಗೋತ್ರಗಳನ್ನು ಪತ್ತೆಹಚ್ಚಿ, ರಾಜನಿಗೆ ಆಕೆಯೊಂದಿಗೆ ವಿವಾಹ ವಾಗುವಂತೆ ಮಾಡುತ್ತಾನೆ. ರಾಜನು ಮೃಗಾಂಕವತಿಯ ಪ್ರೇಮಪಾಶದಲ್ಲಿ ಸಂಪೂರ್ಣ ವಾಗಿ ಮುಳುಗಿ ಹೋಗಿ, ರಾಜ ಧರ್ಮವನ್ನು ಮರೆತು ಅಂತಃಪುರದ ಕಾಲ ಕಳೆಯತೊಡಗಿದನು.
ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ: ಮದನಸುಂದರಿಗೆ ಎದುರಾದ ಧರ್ಮಸಂಕಟ
ಇತ್ತ ಮಂತ್ರಿಯೇ ರಾಜ್ಯದ ಸಮಗ್ರ ಆಡಳಿತವನ್ನು ಮುನ್ನಡೆಸುತ್ತಿದ್ದರೂ, ಜನರಲ್ಲಿ ರಾಜನು ಜವಾಬ್ದಾರಿ ಯನ್ನು ತ್ಯಜಿಸಿದ್ದಾನೆ, ಮಂತ್ರಿಯೇ ಸರ್ವಾಧಿಕಾರಿಯಾಗುತ್ತಿದ್ದಾನೆ ಎಂಬ ಅಪಸ್ವರಗಳು ಕೇಳಿಬರತೊಡಗಿದವು. ಇದನ್ನು ಅರಿತ ಮಂತ್ರಿ ಪ್ರeಸಾಗರನು ತೀವ್ರವಾಗಿ ನೊಂದನು. ತನ್ನ ಮೇಲಿನ ಅಪವಾದಕ್ಕಿಂತಲೂ, ರಾಜನ ಕೀರ್ತಿಗೆ ಕುಂದು ಬರುತ್ತಿರುವುದು ಆತನನ್ನು ಕಳವಳ ಗೊಳಿಸಿತು.
ರಾಜನನ್ನು ಎಚ್ಚರಿಸಿ ಆತನಿಗೆ ರಾಜಧರ್ಮದ ಹೊಣೆಗಾರಿಕೆಯನ್ನು ನೆನಪಿಸಲು, ಮಂತ್ರಿಯು ತಾನೇ ಸ್ವತಃ ಎಲ್ಲವನ್ನೂ ತ್ಯಜಿಸಿ ಸನ್ಯಾಸಿಯ ವೇಷ ಧರಿಸಿ ದೂರದ ಅರಣ್ಯಕ್ಕೆ ತೆರಳಲು ನಿರ್ಧರಿಸಿ ದನು. ಮಂತ್ರಿಯ ಈ ನಿರ್ಧಾರ ತಿಳಿದ ರಾಜನಿಗೆ ತಕ್ಷಣವೇ ಜ್ಞಾನೋದಯವಾಯಿತು.
ನನ್ನ ಪ್ರಾಣಮಿತ್ರ, ರಾಜ್ಯದ ನಿಜವಾದ ರಕ್ಷಕನಿಲ್ಲದ ಈ ಅಧಿಕಾರ, ಭೋಗ ನನಗೆ ಬೇಡ; ಆತ ಕಾಡಿಗೆ ಹೋದರೆ ನಾನೂ ಸಿಂಹಾಸನ ತ್ಯಜಿಸಿ ಆತನ ಜೊತೆಗೇ ಕಾಡಿಗೆ ಬರುತ್ತೇನೆ ಎಂದು ರಾಜನು ಎಲ್ಲ ವೈಭವವನ್ನು ತೊರೆದು ಮಿತ್ರನ ಬೆನ್ನ ಹಿಂದೆ ಹೊರಡಲು ಸಿದ್ಧನಾದನು. ರಾಜನ ಆ ನಿಷ್ಕಲ್ಮಶ ಸ್ನೇಹ ಮತ್ತು ಪಶ್ಚಾತ್ತಾಪವನ್ನು ಕಂಡ ಮಂತ್ರಿಯು, ರಾಜಾ, ನಿನ್ನ ಕೀರ್ತಿಯನ್ನು ಕಾಪಾಡುವುದೇ ನನ್ನ ಪರಮ ಗುರಿಯಾಗಿತ್ತು.
ನೀನು ಎಚ್ಚೆತ್ತುಕೊಂಡ ಮೇಲೆ ನಾನು ಕಾಡಿಗೆ ಹೋಗುವ ಅಗತ್ಯವಿಲ್ಲ ಎಂದು ಮರಳಿ ಬಂದು ಆಡಳಿತದಲ್ಲಿ ಜೊತೆಯಾದನು. ಕಥೆಯನ್ನು ಮುಗಿಸಿದ ಬೇತಾಳನು ವಿಕ್ರ ಮಾದಿತ್ಯನಿಗೆ ಪ್ರಶ್ನೆ ಯೊಡ್ಡುತ್ತಾನೆ: ಹೇ ರಾಜಾ, ಈ ಇಬ್ಬರಲ್ಲಿ ಯಾರು ಹೆಚ್ಚು ಉದಾತ್ತರು? ರಾಜನೋ ಅಥವಾ ಮಂತ್ರಿಯೋ? ವಿಕ್ರಮಾದಿತ್ಯನು ಆಳವಾದ ವಿವೇಕದಿಂದ ಉತ್ತರಿಸುತ್ತಾನೆ: ಮಂತ್ರಿಯ ಉದಾತ್ತತೆಯೇ ಎಲ್ಲಕ್ಕಿಂತ ಶ್ರೇಷ್ಠವಾದುದು!
ರಾಜನಿಗೆ ಸಿಂಹಾಸನ, ಸಂಪತ್ತು, ಪ್ರೇಮ ಎಲ್ಲವೂ ಇತ್ತು; ಆದರೆ ಮಂತ್ರಿಗೆ ಇದ್ದದ್ದು ಕೇವಲ ಕರ್ತವ್ಯ ಮತ್ತು ರಾಜನ ಮೇಲಿನ ನಿಸ್ವಾರ್ಥ ನಿಷ್ಠೆ ಮಾತ್ರ. ರಾಜನ ಕೀರ್ತಿಯನ್ನು ಉಳಿಸಲು ತನ್ನ ಅಧಿಕಾರ, ಸ್ಥಾನಮಾನ ಹಾಗೂ ಬದುಕನ್ನೇ ತ್ಯಾಗ ಮಾಡಲು ಸಿದ್ಧನಾದ ಮಂತ್ರಿಯ ನಿಸ್ವಾರ್ಥತೆಗೆ ಸಾಟಿಯಿಲ್ಲ.
ರಾಜನು ಮಿತ್ರನ ಮೇಲಿನ ಪ್ರೇಮದಿಂದ ತ್ಯಾಗಕ್ಕೆ ಮುಂದಾದರೆ, ಮಂತ್ರಿಯು ರಾಜಧರ್ಮ ಮತ್ತು ಸ್ನೇಹವೆರಡನ್ನೂ ಕಾಪಾಡಲು ತನ್ನನ್ನೇ ಬಲಿ ಕೊಡಲು ಸಿದ್ಧನಾಗಿದ್ದ. ನಿಜವಾದ ಸ್ನೇಹವೆಂದರೆ ಕೇವಲ ಮುಖಸ್ತುತಿ ಮಾಡುವುದಲ್ಲ; ಆಪ್ತರು ತಪ್ಪು ದಾರಿಯಲ್ಲಿ ಸಾಗುತ್ತಿzಗ ಸ್ವಾರ್ಥವಿಲ್ಲದೆ ಅವರನ್ನು ಎಚ್ಚರಿಸು ವುದು.
ಹಲವು ಬಾರಿ ನಮ್ಮ ಏಳಿಗೆಗಾಗಿ, ಸಂಸ್ಥೆಯ ಅಥವಾ ಕುಟುಂಬದ ಹಿತಕ್ಕಾಗಿ ತೆರೆಮರೆಯಲ್ಲಿ ಶ್ರಮಿಸುವ ನಿಸ್ವಾರ್ಥ ವ್ಯಕ್ತಿಗಳಿರು ತ್ತಾರೆ. ಅವರ ಮೌಲ್ಯವನ್ನು ನಾವು ಆಡಂಬರದ ಸುಖದಲ್ಲಿ ಮರೆತುಬಿಡಬಾರದು. ಅಧಿಕಾರ, ಯಶಸ್ಸು ಸಿಕ್ಕಾಗ ಕರ್ತವ್ಯವನ್ನು ಮರೆತು ಸುಖಾಸೀನರಾಗದೆ, ನಮ್ಮ ಜೊತೆಗಿರುವ ನೈಜ ಹಿತೈಷಿಗಳನ್ನು ಗೌರವಿಸಬೇಕು.
ಇನ್ನೊಬ್ಬರ ಒಳಿತಿಗಾಗಿ ತಮ್ಮ ಸ್ವಂತ ಹಿತಾಸಕ್ತಿಯನ್ನು ಬದಿಗಿ ಡುವ ನಿಷ್ಠಾವಂತ ಮನಸ್ಥಿತಿ ಶ್ರೇಷ್ಠವಾದದ್ದು. ಇಂತಹದ್ದನ್ನ ನಾವು ಕೂಡ ಬೆಳೆಸಿಕೊಂಡು, ನಮ್ಮ ಸುತ್ತಲಿರುವವರಲ್ಲಿ ಅದನ್ನು ಗುರುತಿಸಿ ಗೌರವಿಸಬೇಕು.