ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr T N Vasudevamurthy Column: ದಸರಾ ಉದ್ಘಾಟನೆಗೆ ಮಾನದಂಡವೇನು ?

ಖ್ಯಾತ ಕನ್ನಡ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪನವರು ಹಿಂದೂ ಸಂಪ್ರದಾಯಕ್ಕೆ ಹೊರಗಿನ ವರಲ್ಲದಿದ್ದರೂ, ತಾವು ದೇವರನ್ನು ನಂಬುವುದಿಲ್ಲವಾದ ಕಾರಣ ದೀಪ ಬೆಳಗುವುದಿಲ್ಲ ಎಂದಿದ್ದರು. ಇಂಥ ಬುದ್ಧಿಜೀವಿ ದಸರಾ ಉದ್ಘಾಟಿಸಿದಾಗಲೂ ಯಾರೂ ಅಪಸ್ವರವನ್ನು ಎತ್ತಲಿಲ್ಲ. ಮುಸ್ಲಿಮರಾದ ನಿಸಾರ್ ಅಹಮದ್ ಈ ಹಿಂದೆ ದಸರಾ ಉದ್ಘಾಟಿಸಿದಾಗಲಂತೂ ಇವರು ಓರ್ವ ಮುಸ್ಲಿಂ ಲೇಖಕ ಎಂಬ ಆಲೋಚನೆ ಯಾರೊಬ್ಬರಿಗೂ ಹೊಳೆದಿರಲಿಲ್ಲ. ಈಗ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಕ ರೆಂದು ಘೋಷಿಸಿದ ಮೇಲೆ ಕೆಲವರಿಗೆ ಸಮಸ್ಯೆಯಾಗುತ್ತಿರುವುದು ವಿಚಿತ್ರವಾಗಿದೆ!

ದಸರಾ ಉದ್ಘಾಟನೆಗೆ ಮಾನದಂಡವೇನು ?

Ashok Nayak Ashok Nayak Aug 26, 2025 7:03 AM

ಯಕ್ಷ ಪ್ರಶ್ನೆ

ಡಾ.ಟಿ.ಎನ್.ವಾಸುದೇವಮೂರ್ತಿ

ಸಾಹಿತಿ ಬರಗೂರು ರಾಮಚಂದ್ರಪ್ಪನವರು ಹಿಂದೂ ಸಂಪ್ರದಾಯಕ್ಕೆ ಹೊರಗಿನವರಲ್ಲ ದಿದ್ದರೂ, ತಾವು ದೇವರನ್ನು ನಂಬುವುದಿಲ್ಲವಾದ ಕಾರಣ ದೀಪ ಬೆಳಗುವುದಿಲ್ಲ ಎಂದಿ ದ್ದರು. ಆಗ ಅಪಸ್ವರ ಹೊಮ್ಮಲಿಲ್ಲ. ನಿಸಾರ್ ಅಹಮದ್ ಅವರು ದಸರಾ ಉದ್ಘಾಟಿಸಿ ದಾಗಲೂ ಇವರೊಬ್ಬ ಮುಸ್ಲಿಂ ಲೇಖಕ ಎಂದು ಯಾರೂ ಆಲೋಚಿಸಿರಲಿಲ್ಲ. ಈಗ ಬಾನು ಮುಷ್ತಾಕ್‌ರನ್ನು ದಸರಾ ಉದ್ಘಾಟಕರೆಂದು ಘೋಷಿಸಿದ್ದಕ್ಕೆ ಕೆಲವರಿಗೆ ಸಮಸ್ಯೆ ಯಾಗುತ್ತಿರುವುದೇಕೆ?!

ರಾಜ್ಯ ಸರಕಾರವು ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರನ್ನು ನಾಡಹಬ್ಬ ದಸರಾ ಉದ್ಘಾಟನೆಗೆ ಅಧಿಕೃತವಾಗಿ ಆಹ್ವಾನಿಸಿದ ಮೇಲೆ ನಿರೀಕ್ಷಿತವೆಂಬಂತೆ ಈ ಕ್ರಮದ ಬಗ್ಗೆ ಅಪಸ್ವರ ಎದ್ದಿದೆ. “ಏಕದೈವ, ಏಕಧರ್ಮ, ಏಕಪ್ರವಾದಿಯನ್ನು ಒಪ್ಪುವ, ಇಸ್ಲಾಂ ಧರ್ಮವನ್ನು ಪಾಲಿಸುವ ಅವರು ಚಾಮುಂಡೇಶ್ವರಿಯನ್ನು ದೇವರೆಂದು ಒಪ್ಪುವರೇ?" ಎಂದು ಬಿಜೆಪಿ ನಾಯಕರು ಕೇಳಲಾರಂಭಿಸಿದ್ದಾರೆ.

ಆದರೆ ಅವರು ನಿಜವಾಗಿಯೂ ತಮ್ಮ ಧರ್ಮವನ್ನು ಪಾಲಿಸುತ್ತಿರುವರೇ? ಒಂದು ವೇಳೆ ಪಾಲಿಸುತ್ತಿದ್ದರೆ ಉದ್ಘಾಟನೆಗೆ ಪರವಾನಗಿ ಪಡೆಯಲು ಈ ಪ್ರತಿರೋಧಿಗಳಿಗೆ ಸಮ್ಮತವೆನಿಸುವಂಥ ಸಮಜಾಯಿಷಿ ನೀಡುವರೇ ಎಂಬಿತ್ಯಾದಿ ಪ್ರಶ್ನೆಗಳು ಅವರಿಗೇ ಬಿಟ್ಟದ್ದು. ಆದರೆ ಒಂದಂತೂ ನಿಜ, ಹೀಗೆಲ್ಲ ಸಮಜಾಯಿಷಿ ನೀಡಬೇಕೆಂದು ಆಗ್ರಹಿಸುವುದು ಭಾರತೀಯರಿಗಂತೂ ಸಭ್ಯತನವಲ್ಲ.

ಏಕೆಂದರೆ, ಮೊದಲಿಗೆ, ಭರತಖಂಡದಲ್ಲಿ ಧರ್ಮವೆಂಬುದಿಲ್ಲ. ಇನಿದ್ದರೂ ಹಲವು ದರ್ಶನಗಳಿವೆ, ಹಲವು ಪಂಥ, ಸಂಪ್ರದಾಯಗಳಿವೆ. ಈ ಹಲವು ಪಂಥ ಸಂಪ್ರದಾಯಗಳು ತಮ್ಮ ತಮ್ಮ ಹಲವು ಕೊಳು-ಕೊಡುಗೆಗಳನ್ನು ನೀಡುತ್ತ ಇಲ್ಲಿ ಬೆಳೆದು ಬಂದಿವೆ. ಉದಾಹರಣೆಗೆ, ಅದ್ವೈತ ವೇದಾಂತದ ಆಚಾರ್ಯರಾದ ಆದಿಶಂಕರರು ಶಿವನ ಸ್ತೋತ್ರ, ಉಪಾಸನೆಗಳಲ್ಲದೇ ವಿಷ್ಣು, ಗಣಪತಿ, ದುರ್ಗೆ, ಮುಂತಾದ ಹಲವು ದೇವ-ದೇವಿಯರ ಸ್ತೋತ್ರಗಳನ್ನು ರಚಿಸಿದರು, ಉಪಾಸನಾ ಕ್ರಮವನ್ನು ರೂಪಿಸಿಕೊಟ್ಟರು.

ಇದನ್ನೂ ಓದಿ: Dr T N Vasudevamurthy Column: ಬದಲಾವಣೆಯ ಮಾತಾಡುವವರು ನೈಜ ಬದಲಾವಣೆ ತರಲು ತಲ್ಲಣಿಸುತ್ತಾರೆ

ಈ ಹಿಂದೂ ನೆಲದಲ್ಲಿ ಯೆಹೂದಿ, ಇಸ್ಲಾಂ, ಕ್ರಿಶ್ಚಿಯಾನಿಟಿಗಳೂ ಸಾಂಸ್ಕೃತಿಕವಾಗಿ ಪ್ರತ್ಯೇಕ ಧರ್ಮಗಳೆನಿಸದೇ ಪ್ರತ್ಯೇಕ ಸಂಪ್ರದಾಯಗಳೆಂದೇ ಪರಿಗಣಿತವಾಗುತ್ತವೆ. ಭವಿಷ್ಯ ಪುರಾಣದಲ್ಲಿ ಯೇಸುವನ್ನು ಮ್ಲೇಚ್ಛ ಸಂಪ್ರದಾಯದವನೆಂದು ವರ್ಣಿಸಲಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಇಲ್ಲಿ ಪ್ರಾರಂಭದಿಂದಲೂ ಚಾಮುಂಡೇಶ್ವರಿಯನ್ನು ಪೂಜಿಸುತ್ತಿದ್ದವರು ಶಾಕ್ತ ಪಂಥದವರು. ಆದರೆ ಕರ್ನಾಟಕ ಸಾಮ್ರಾಜ್ಯದಲ್ಲಿ ದಸರಾ ಉತ್ಸವವನ್ನು ನಾಡಹಬ್ಬದ ಮಟ್ಟಕ್ಕೇರಿಸಿದವರು ವಿಜಯನಗರದ ಸಾಮ್ರಾಟರು. ಅವರು ವೈಷ್ಣವರಾಗಿದ್ದರು. ಶಾಕ್ತ ಪಂಥದ ಆರಾಧನೆಯನ್ನು ವೈಷ್ಣವರು ಮುಂದುವರಿಸಿಕೊಂಡು ಹೋಗುವುದು ಸರಿ ಎನ್ನುವುದಾದರೆ, ಚಾಮುಂಡೇಶ್ವರಿಯ ಆರಾಧನೆಗೆ ಮುಸ್ಲಿಂ ಸಂಪ್ರದಾಯದವರು ಚಾಲನೆ ನೀಡಿದರೆ ಹೇಗೆ ಅಪಚಾರ ವಾಗುತ್ತದೆ? ದಸರಾ ಅತ್ಯಂತ ಪರಿಶುದ್ಧವಾದ ಧಾರ್ಮಿಕ ಹಬ್ಬವೇ ಆದರೂ ಇದು ಸರಕಾರಿ ಪ್ರಾಯೋಜಿತ ‘ನಾಡಹಬ್ಬ’ವಾದ ದಿನದಿಂದಲೂ ಇದಕ್ಕೆ ಧಾರ್ಮಿಕತೆಗಿಂತಲೂ ಹೆಚ್ಚಾಗಿ ರಾಜಕಾರಣದ, ಸಾಂಸ್ಕೃತಿಕ ರಾಜಕಾರಣದ ಸೂತಕ ತಗುಲಿದೆ.

ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಂದಾದ ‘ಸೌಂದರ್ಯ ಲಹರಿ’ಯು ಶಕ್ತಿದೇವತೆಯಾದ ಚಾಮುಂಡೇಶ್ವರಿಯ ಔದಾರ್ಯವನ್ನು ಹೀಗೆ ಪರಿಚಯಿಸುತ್ತದೆ: “ಬೆಂಕಿಯ ಕಿಡಿಗಳನ್ನು ಉಗುಳುವ ಶಿವನ ಮೂರನೆಯ ಕಣ್ಣು ಪಾಪಕರವಾದ ಲೋಕವನ್ನು ಸುಟ್ಟು ಬೂದಿ ಮಾಡುತ್ತದೆ. ಶಿವನ ಅರ್ಧಾಂಗಿಯಾದ ಶಕ್ತಿಗೂ ಮೂರನೆಯ ಕಣ್ಣಿದೆ. ಆದರೆ ಭವತಾರಿಣಿಯ ಆ ಮೂರನೆಯ ಕಣ್ಣು ಕರುಣೆಯ ಬೆಳಕನ್ನು ಹೊರಸೂಸಿ ಲೋಕವನ್ನು ಪಾಪಗಳಿಂದ ಮುಕ್ತಗೊಳಿಸಿ ಪೋಷಿಸುತ್ತದೆಯೇ ವಿನಾ ಲೋಕವನ್ನು ವಿನಾಶ ಮಾಡುವುದಿಲ್ಲ" (48). ಭವತಾರಿಣಿಯ ಆರಾಧಕರಾದ ಶ್ರೀ ರಾಮಕೃಷ್ಣರು ಸೂಫಿ, ಕ್ರಿಶ್ಚಿಯನ್, ಸಖೀ ಪಂಥಗಳ ಸಾಧನೆಯಲ್ಲಿ ಆಸಕ್ತಿ ತಳೆದರೆ ಅದು ಅಪಚಾರವಾಗುವುದಿಲ್ಲ ಎಂದ ಮೇಲೆ ಬಾನು ಮುಷ್ತಾಕ್ ದಸರಾ ಹಬ್ಬವನ್ನು ಉದ್ಘಾಟಿಸುವುದು ಖಂಡಿತವಾಗಿಯೂ ಅಪಚಾರವಲ್ಲ.

Bhanu M -R

ಭಾರತೀಯ ವಿವೇಕವಂತೂ ಇಂಥ ಪ್ರತಿರೋಧವನ್ನು ಸರ್ವಥಾ ಬೆಂಬಲಿಸುವುದಿಲ್ಲ. ಈ ಹಿಂದೆ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರು ಅಸ್ಪೃಶ್ಯತೆಯನ್ನು ಹೋಗಲಾಡಿ ಸುವ ಉದ್ದೇಶದಿಂದ ದಲಿತ ಕೇರಿಗಳಿಗೆ ಭೇಟಿ ನೀಡುತ್ತಿದ್ದರು, ದಲಿತರಿಂದ ಪಾದಪೂಜೆ ಸ್ವೀಕರಿಸು ತ್ತಿದ್ದರು. ಸ್ವಾಮೀಜಿಯವರ ಈ ಕಾರ್ಯವಿಧಾನದ ಬಗ್ಗೆ ಪ್ರಗತಿಪರರಿಗೆ ಆಕ್ಷೇಪವಿದ್ದರೂ ಅವರ ಮೂಲ ಆಶಯವನ್ನು ಮತ್ತು ಪ್ರಾಮಾಣಿಕತೆಯನ್ನು ಯಾವ ಪ್ರಗತಿಪರರೂ ಅನುಮಾನಿಸು ತ್ತಿರಲಿಲ್ಲ.

ಇಂಥ ಪೇಜಾವರ ಶ್ರೀಗಳನ್ನು ಕುರಿತು “ದಲಿತರ ಕೇರಿಗೆ ಬಂದು ಅವರು ನೀಡುವ, ಕುರಿಯ ರಕ್ತದಿಂದ ತಯಾರಿಸಲಾದ ಖಾದ್ಯವನ್ನು ಸ್ವೀಕರಿಸುವರೇ?" ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅಭಿರುಚಿಹೀನ ಮಾತುಗಳಲ್ಲಿ ಲೇವಡಿ ಮಾಡಿದ್ದರು. ಇಂಥ ಅಗೌರವಯುತ ಮಾತು ಗಳನ್ನಾಡಿದವರು ದಸರಾವನ್ನು ಉದ್ಘಾಟಿಸಿದಾಗ ಬಾನು ಮುಷ್ತಾಕ್‌ರನ್ನು ವಿರೋಧಿಸುವವರಿಗೆ ಸಮಸ್ಯೆಯಾಗಲಿಲ್ಲ.

ಖ್ಯಾತ ಕನ್ನಡ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪನವರು ಹಿಂದೂ ಸಂಪ್ರದಾಯಕ್ಕೆ ಹೊರಗಿನವರಲ್ಲದಿದ್ದರೂ, ತಾವು ದೇವರನ್ನು ನಂಬುವುದಿಲ್ಲವಾದ ಕಾರಣ ದೀಪ ಬೆಳಗುವುದಿಲ್ಲ ಎಂದಿದ್ದರು. ಇಂಥ ಬುದ್ಧಿಜೀವಿ ದಸರಾ ಉದ್ಘಾಟಿಸಿದಾಗಲೂ ಯಾರೂ ಅಪಸ್ವರವನ್ನು ಎತ್ತಲಿಲ್ಲ. ಮುಸ್ಲಿಮರಾದ ನಿಸಾರ್ ಅಹಮದ್ ಈ ಹಿಂದೆ ದಸರಾ ಉದ್ಘಾಟಿಸಿದಾಗಲಂತೂ ಇವರು ಓರ್ವ ಮುಸ್ಲಿಂ ಲೇಖಕ ಎಂಬ ಆಲೋಚನೆ ಯಾರೊಬ್ಬರಿಗೂ ಹೊಳೆದಿರಲಿಲ್ಲ. ಈಗ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಕರೆಂದು ಘೋಷಿಸಿದ ಮೇಲೆ ಕೆಲವರಿಗೆ ಸಮಸ್ಯೆಯಾಗುತ್ತಿರುವುದು ವಿಚಿತ್ರವಾಗಿದೆ!

ಹಿಂದೂಗಳ ವಿರೋಧದ ಕಾರಣವನ್ನೂ ಪರಿಶೀಲಿಸಬೇಕಾಗುತ್ತದೆ. ತಾವು ಗೌರವಿಸುವ ಯಾವುದೇ ಸಂಗತಿಯನ್ನು ದೈವತ್ವದ ನೆಲೆಗೇರಿಸುವುದು ಭಾರತೀಯರ ಸ್ವಭಾವವಾಗಿದೆ. ಕನ್ನಡ ಭಾಷೆಯನ್ನು ತಾಯಿ ಭುವನೇಶ್ವರಿಗೆ ಹೋಲಿಸುವುದು, ಕನ್ನಡ ಭಾಷೆಗೆ, ಅದರ ಬಾವುಟಕ್ಕೆ ಅರಿಶಿನ ಕುಂಕುಮಗಳ ಪವಿತ್ರ ಸಂಕೇತವನ್ನು ಅನ್ವಯಿಸುವುದು ಅನಾದಿಕಾಲದಿಂದಲೂ ಶ್ರದ್ಧೆಯ ವಿಷಯವಾಗಿದೆಯೇ ವಿನಾ ಅನ್ಯಕೋಮನ್ನು ಪ್ರತ್ಯೇಕಭಾವದಿಂದ ಕಾಣುವ ಉದ್ದೇಶ ಖಂಡಿತವಾಗಿ ಈ ಶ್ರದ್ಧೆಯ ಹಿಂದಿರಲಿಲ್ಲ.

ಬಹುಸಂಖ್ಯಾತರ ಇಂಥ ಶ್ರದ್ಧೆಯನ್ನು ಬಾನು ಮುಷ್ತಾಕರು, ‘ಮುಸ್ಲಿಮರನ್ನು ಮುಖ್ಯವಾಹಿನಿ ಯಿಂದ ದೂರವಿಡುವ ಹುನ್ನಾರವಾಗಿದೆ’ ಎಂದು ಸಾರ್ವಜನಿಕ ವೇದಿಕೆಯಲ್ಲಿ ವ್ಯಾಖ್ಯಾನಿಸಿದ್ದು (2023ರಲ್ಲಿ ನಡೆದ ಜನಸಾಹಿತ್ಯ ಗೋಷ್ಠಿಯ ಉದ್ಘಾಟನಾ ಭಾಷಣದಲ್ಲಿ) ಪ್ರಾಯಶಃ ಬಹು ಸಂಖ್ಯಾತರ ಈ ಪ್ರತಿರೋಧಕ್ಕೆ ಕಾರಣವಿರಬಹುದು. ಇದಲ್ಲದೇ ದತ್ತಪೀಠದ ವಿವಾದದಲ್ಲಿಯೂ ಇವರು ಹಿಂದೂ ವಿರೋಧಿ ಬಣದೊಂದಿಗೆ ಗುರುತಿಸಿಕೊಂಡಿದ್ದರು.

ಪ್ರಸ್ತುತ ವಿವಾದಕ್ಕೆ ಪ್ರಾಯಶಃ ಬಾನು ಮುಷ್ತಾಕ್ ಅವರ ಬಂಡಾಯದ ಧೋರಣೆ ಕಾರಣ ವೆನಿಸುತ್ತದೆ. ನಿಸಾರ್ ಅಹಮದ್, ಇಬ್ರಾಹಿಂ ಸುತಾರ್, ಅಬ್ದುಲ್ ಕಲಾಂ ಮುಂತಾದವರು ಅನ್ಯಧರ್ಮೀಯರ ಭಾವನೆಗಳಿಗೆ ಎಂದೂ ಧಕ್ಕೆಯಾಗುವಂಥ ಮಾತುಗಳನ್ನಾಡಿದವರಲ್ಲ. ಆದರೆ ಬಾನು ಮುಷ್ತಾಕ್ ಅವರು ಬಂಡಾಯ ಸಾಹಿತ್ಯ ಚಳವಳಿಯ ಹಿನ್ನೆಲೆಯವರಾಗಿದ್ದಾರೆ.

ಹಿಂದೂ, ಇಸ್ಲಾಂ, ಕ್ರಿಶ್ಚಿಯಾನಿಟಿ ಎಂಬ ಭೇದವಿಲ್ಲದಂತೆ ಎಲ್ಲ ಧರ್ಮಗಳ ಮೂಲಭೂತ ವಾದವನ್ನೂ ಪ್ರಶ್ನಿಸುತ್ತ ಬಂದವರಾಗಿzರೆ. ಸ್ವತಃ ಮುಸ್ಲಿಂ ಆದರೂ ಎಂದೂ ಬುರ್ಖಾ ತೊಡದ ಈ ಮಹಿಳೆ ಇಸ್ಲಾಮಿನ ಮೌಢ್ಯಗಳನ್ನು ಸಹ ತೀಕ್ಷ್ಣವಾಗಿ ವಿಮರ್ಶಿಸುತ್ತಾ ಬಂದವರು. ಮುಸ್ಲಿಂ ಮಹಿಳೆಯರಿಗೂ ಮಸೀದಿಗಳೊಳಗೆ ಪ್ರವೇಶ ಸಿಗಬೇಕೆಂದು ನ್ಯಾಯಾಲಯದಲ್ಲಿ ಹೋರಾಟ ಮಾಡಿ ದವರು. ತತ್ಪರಿಣಾಮವಾಗಿ ಮೌಲ್ವಿಗಳಿಂದ ಫತ್ವಾಗೆ (ಬಹಿಷ್ಕಾರಕ್ಕೆ) ಗುರಿಯಾಗಿ ಹಲವು ಬಗೆಯ ವೈಯಕ್ತಿಕ ಅವಮಾನ, ಕೌಟುಂಬಿಕ ಕಷ್ಟಕೋಟಲೆ ಹಾಗೂ ಪ್ರಾಣಾಂತಕವಾದ ಗಂಡಾಂತರ ಎದುರಿಸಿದವರು.

ಹೀಗೆ ಫತ್ವಾಗೆ ಗುರಿಯಾಗಿದ್ದ ಬಾನು ಮುಷ್ತಾಕ್ ಅವರ ನಿಲುವಿಗೆ ಹಾಸನದ ಕೆಲವು ಮುಸ್ಲಿಮೇತರ ಸಂಘಟನೆಗಳು ಸ್ಪಂದಿಸಿದ್ದುಂಟು. ಮೌಲ್ವಿಗಳು -ತ್ವಾ ಹಿಂಪಡೆದುಕೊಳ್ಳುವವರೆಗೂ ನಾವು ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುತ್ತೇವೆ ಎಂದು ಘೋಷಿಸಿ ಇವರನ್ನು ಬೆಂಬಲಿಸಿದ್ದುಂಟು. ಆದರೆ ಬಾನು ಮುಷ್ತಾಕ್ ಎಂದೂ ಕೋಮು ವೈಷಮ್ಯ ಹರಡಿ ಸ್ವಹಿತಾಸಕ್ತಿಯ ಬೇಳೆ ಬೇಯಿಸಿಕೊಂಡವ ರಲ್ಲ.

ಇನ್ನೆಲ್ಲಿ ಈ ಮುಸ್ಲಿಮೇತರ ಸಂಗಡಿಗರ ಬೆಂಬಲ ಕೋಮುಗಲಭೆಗೆ ತಿರುಗುವುದೋ ಎಂದು ಆತಂಕ ಗೊಂಡಿದ್ದ ಬಾನು ಇವರ ಬೆಂಬಲವನ್ನು ಸೌಜನ್ಯದಿಂದಲೇ ನಿರಾಕರಿಸಿದ್ದರು. ಇಂಥ ಬಾನು ಮುಷ್ತಾಕ್ ಯಾವುದೇ ಸಮುದಾಯದೊಳಗೆ ಹೆಮ್ಮೆಯನ್ನು, ಸ್ವಾಭಿಮಾನವನ್ನು ಉಕ್ಕಿಸಬಲ್ಲ ಅಪರೂಪದ ಲೇಖಕಿಯಾಗಿದ್ದಾರೆ.

ಇಂಥವರು ದಸರೆಯನ್ನು ಉದ್ಘಾಟಿಸಿದರೆ ಯಾರಿಗೇನೇ ಅಸಹನೆಯುಂಟಾದರೂ ಮಾತೃಹೃದಯಿ ಯಾದ ಭವತಾರಿಣಿಯ ಕೃಪಾಕಟಾಕ್ಷವಂತೂ ಖಂಡಿತವಾಗಿ ಆಕೆಯ ಮೇಲಿರುತ್ತದೆ. ಆದರೆ ಇಂಥ ಪ್ರಗತಿಪರ ಬಂಡಾಯಜೀವಿ, ಕನ್ನಡಾಂಬೆಯಾದ ಭುವನೇಶ್ವರಿಯು, ಕಾಶ್ಮೀರ ಪುರವಾಸಿನಿಯಾದ ಶಾರದಾಂಬೆಯು ಮಂದಾಸನದ ಮೇಲೆ ಅರಿಶಿನ-ಕುಂಕುಮಗಳಿಂದ ಅಲಂಕೃತವಾಗಿ ಆಸೀನ ವಾಗುವುದನ್ನು ಒಪ್ಪುವುದು ಅಸಂಗತವೆನಿಸುತ್ತದೆ.

ನಾಡು-ನುಡಿ-ನೆಲ-ಜಲಗಳಿಗೆ ಧಾರ್ಮಿಕ ಲಾಂಛನವನ್ನು, ಸಗುಣ ಸಾಕಾರ ರೂಪ ನೀಡುವುದನ್ನು ಆಕ್ಷೇಪಿಸುವ ಬುದ್ಧಿಜೀವಿಗಳು ಸಗುಣ ಸಾಕಾರ ರೂಪಿಯಾದ ತಾಯಿ ಚಾಮುಂಡೇಶ್ವರಿಯನ್ನು ಆರಾಧಿಸುವುದಕ್ಕೆ ತಾತ್ವಿಕ ಸಮರ್ಥನೆಯನ್ನು ಕಂಡುಕೊಳ್ಳಬೇಕಾಗುತ್ತದೆ. ಅಂಥದೊಂದು ಸಮರ್ಥನೆ ಇದ್ದಲ್ಲಿ ಅದನ್ನು ನಾಡಿನ ಆಸ್ತಿಕ ಜನರಿಗೆ ಮನವರಿಕೆ ಮಾಡಿಸುವ ಹೊಣೆಗಾರಿಕೆ ಹೊರಬೇಕಾಗುತ್ತದೆ.

ಇಲ್ಲವಾದಲ್ಲಿ ದೇವರು, ಧರ್ಮ, ಸಂಪ್ರದಾಯಗಳನ್ನು ನಂಬದ ಬಂಡಾಯ ಸಾಹಿತ್ಯ ಚಳವಳಿಯ ಹಿನ್ನೆಲೆಯ ಒಬ್ಬ ಲೇಖಕಿ ದಸರೆಯಂಥ ಧಾರ್ಮಿಕ ಆಚರಣೆಯ ಉದ್ಘಾಟನೆಗೆ ಮುಂದಾಗುತ್ತಿರು ವುದು ಕುಚೋದ್ಯವೆನಿಸುತ್ತದೆ, ಅವರು ಕೀರ್ತಿಶನಿಯ ಉಪಟಳಕ್ಕೇನಾದರೂ ಈಡಾದರೇ ಎಂದು ಅನುಮಾನಿಸುವಂತಾಗುತ್ತದೆ.

(ಲೇಖಕರು ಸಹ-ಪ್ರಾಧ್ಯಾಪಕರು, ಆದಿಚುಂಚನಗಿರಿ ವಿಶ್ವವಿದ್ಯಾಲಯ)