Prakash Shesharaghavachar Column: ಈ ಹನ್ನೊಂದು ವರ್ಷದಲ್ಲಿ ನೀವು ಸಾಧಿಸಿದ್ದೇನು ಸ್ವಾಮೀ ?
ಒಂದಿಷ್ಟು ಫ್ಲ್ಯಾಷ್‌ಬ್ಯಾಕ್ ಕಡೆಗೆ ಗಮನಹರಿಸೋಣ. ಕೇಂದ್ರದಲ್ಲಿ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ತರುವಾಯ 2014ರಲ್ಲಿ ಅಧಿಕಾರವನ್ನು ಕಳೆದುಕೊಂಡ ಕಾಂಗ್ರೆಸ್ ಪಕ್ಷವು, ಅಧಿಕೃತ ವಿರೋಧ ಪಕ್ಷ ಎನಿಸಿಕೊಳ್ಳುವುದಕ್ಕೆ ಅಗತ್ಯವಿದ್ದ ಸೀಟುಗಳನ್ನೂ ಗೆದ್ದಿರಲಿಲ್ಲ. ಆ ಪಕ್ಷದ ಆತ್ಮ ಸ್ಥೈರ್ಯ ಉಡುಗಿ ಹೋಗಿತ್ತು, ಸೋಲಿನ ಆಘಾತದಿಂದಾಗಿ ಅದಕ್ಕೆ ಮಂಕು ಕವಿದಿತ್ತು


ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ಸರಕಾರ ಅಧಿಕಾರಕ್ಕೆ ಬಂದು 11 ವರ್ಷ ಪೂರೈಸಿರುವುದು ನಿಮಗೆಲ್ಲಾ ಗೊತ್ತಿರುವ ಸಂಗತಿಯೇ. ಆದರೆ, ವಿರೋಧ ಪಕ್ಷವಾದ ಕಾಂಗ್ರೆಸ್, ಮೋದಿಯವರ ಕಡೆಗೆ ಬೆರಳು ಮಾಡಿ ತೋರಿಸಿ ಉಲ್ಲೇಖಿಸಿರುವ ಅವರ ಬಹುದೊಡ್ಡ ವೈಫಲ್ಯವೆಂದರೆ- ‘ಮೋದಿಯವರು ಕಳೆದ 11 ವರ್ಷದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ಮಾಡಿಲ್ಲ’ ಎಂಬುದು!
ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಂಥ ಯಾವುದೇ ಗಂಭೀರ ಸಮಸ್ಯೆಗಳನ್ನು ಪಟ್ಟಿ ಮಾಡಲು ದೇಶದ ಪ್ರಮುಖ ವಿರೋಧ ಪಕ್ಷಕ್ಕೆ ಆಗಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ವರ್ಷ ಕಳೆಯುತ್ತಿದ್ದಂತೆ, ಆಡಳಿತಾರೂಢ ಸರಕಾರದ ಮೌಲ್ಯಮಾಪನವನ್ನು ಮಾಡುವಂತೆಯೇ, ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿರುವವರ ಹೊಣೆಗಾರಿಕೆಯ ಬಗ್ಗೆಯೂ ಮೌಲ್ಯಮಾಪನ ಮಾಡುವುದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅತ್ಯವಶ್ಯಕವಾಗಿದೆ.
ಮೋದಿ ಸರಕಾರವು 11 ವರ್ಷವನ್ನು ಪೂರೈಸಿದಾಗ, ಅದರ ವೈಫಲ್ಯಗಳ ಬಗ್ಗೆ ವಿರೋಧ ಪಕ್ಷವು ತರಾಟೆಗೆ ತೆಗೆದುಕೊಳ್ಳುತ್ತದೆ ಎಂಬುದನ್ನು ಜನರು ನಿರೀಕ್ಷಿಸಿರುವಾಗ, ‘ಪ್ರಧಾನ ಮಂತ್ರಿಗಳು ಕಳೆದ 11 ವರ್ಷದಲ್ಲಿ ಪತ್ರಿಕಾಗೋಷ್ಠಿಯನ್ನೇ ಮಾಡಿಲ್ಲ’ ಎಂಬುದು ಅದು ಪಟ್ಟಿ ಮಾಡಿದ ಪ್ರಮುಖ‘ ವೈಫಲ್ಯ’ವಾದರೆ, ಅದು ಕಾಂಗ್ರೆಸ್ ಪಕ್ಷವು ಜನರ ನಾಡಿಮಿಡಿತದಿಂದ ಬಹುದೂರ ಇರುವುದರ ದ್ಯೋತಕ ಎನ್ನಬಹುದು.
ಇದನ್ನೂ ಓದಿ: Prakash Shesharaghavachar Column: ಇದು ಆತ್ಮನಿರ್ಭರತೆಗೆ ದಕ್ಕಿದ ಅದ್ಭುತ ಯಶಸ್ಸು
ಒಂದಿಷ್ಟು ಫ್ಲ್ಯಾಷ್‌ಬ್ಯಾಕ್ ಕಡೆಗೆ ಗಮನಹರಿಸೋಣ. ಕೇಂದ್ರದಲ್ಲಿ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ತರುವಾಯ 2014ರಲ್ಲಿ ಅಧಿಕಾರವನ್ನು ಕಳೆದುಕೊಂಡ ಕಾಂಗ್ರೆಸ್ ಪಕ್ಷವು, ಅಧಿಕೃತ ವಿರೋಧ ಪಕ್ಷ ಎನಿಸಿಕೊಳ್ಳುವುದಕ್ಕೆ ಅಗತ್ಯವಿದ್ದ ಸೀಟುಗಳನ್ನೂ ಗೆದ್ದಿರಲಿಲ್ಲ. ಆ ಪಕ್ಷದ ಆತ್ಮ ಸ್ಥೈರ್ಯ ಉಡುಗಿಹೋಗಿತ್ತು, ಸೋಲಿನ ಆಘಾತದಿಂದಾಗಿ ಅದಕ್ಕೆ ಮಂಕು ಕವಿದಿತ್ತು. ತೃಣಮೂಲ ಕಾಂಗ್ರೆಸ್, ಬಿಜೆಡಿ, ಡಿಎಂಕೆ, ಬಿಆರ್‌ಎಸ್‌ನಂಥ ಪ್ರಾದೇಶಿಕ ಪಕ್ಷಗಳು ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿ ಕೊಂಡಿದ್ದವು.
2009ರಲ್ಲಿ ಯುಪಿಎ ಮೈತ್ರಿಕೂಟವು ಎರಡನೆಯ ಬಾರಿ ಅಧಿಕಾರಕ್ಕೆ ಬಂದಾಗ, ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿಯವರು ಕೇಂದ್ರದಲ್ಲಿ ಸಚಿವರಾಗಿ ಆಡಳಿತದ ಅನುಭವವನ್ನು ದಕ್ಕಿಸಿ ಕೊಳ್ಳಬೇಕಿತ್ತು. ಆದರೆ, ‘ಒಂದೋ ಪ್ರಧಾನಿಯಾಗುವೆ, ಇಲ್ಲವೆಂದರೆ ಯಾವುದೂ ಬೇಡ’ ಎಂಬ ಧೋರಣೆಯಿಂದಾಗಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರ ಸಂಪುಟವನ್ನು ಸೇರಲಿಲ್ಲ. ಹೀಗಾಗಿ ಆಡಳಿತದ ಒಳಸುಳಿಗಳನ್ನು ಅರಿಯುವಂಥ ಸುವರ್ಣಾವಕಾಶವನ್ನು ಅವರು ಕಳೆದು ಕೊಂಡರು.
2014ರಲ್ಲಿ ಯುಪಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತರಾಗಿದ್ದ ರಾಹುಲರು, ಚುನಾವಣೆಯ ನಂತರ ಲೋಕಸಭೆಯ ಕಾಂಗ್ರೆಸ್ ಸಂಸದೀಯ ಗುಂಪಿನ ನಾಯಕತ್ವವನ್ನು ವಹಿಸಿ ಕೊಳ್ಳಬೇಕಿತ್ತು. ಆದರೆ ಮತ್ತೆ ಆ ಅವಕಾಶವನ್ನು ತಿರಸ್ಕರಿಸಿ, ಅದನ್ನು ಮಲ್ಲಿಕಾರ್ಜುನ ಖರ್ಗೆಯ ವರಿಗೆ ನೀಡಿದರು. ಪ್ರಸ್ತುತ ಬಿಜೆಪಿಯು ‘ಸಮ್ಮಿಶ್ರ ಸರಕಾರ’ದ ಹಂಗಿನಿಂದ ಹೊರಬಂದು ಏಕಾಂಗಿ ಯಾಗಿ ಬಹುಮತ ಪಡೆದಿರುವಾಗ, ಮೋದಿಯವರ ಆಡಳಿತವನ್ನು ಒರೆಗೆ ಹಚ್ಚಲು ವಿಶೇಷ ಪರಿಶ್ರಮವಿರುವ ವಿಪಕ್ಷ ನಾಯಕನ ಅಗತ್ಯವಿತ್ತು.
ಇಂಥ ಸೂಕ್ಷ್ಮ ಘಟ್ಟದಲ್ಲಿ ಕಾಂಗ್ರೆಸ್ ತನ್ನ ಲಯವನ್ನು ಕಂಡುಕೊಳ್ಳಬೇಕಿತ್ತು. ಆದರೆ ಕಾಂಗ್ರೆಸ್ ಪಕ್ಷದಲ್ಲಾಗಲೀ, ಅದರ ನಾಯಕರಲ್ಲಾಗಲೀ ಇಂಥ ಕಾರ್ಯಕ್ಷಮತೆಯೇ ಕಂಡುಬರುತ್ತಿಲ್ಲ. ಅಂಥ ದೊಂದು ವಿಶ್ವಾಸಾರ್ಹ ನಡೆಯನ್ನು ಪಕ್ಷವು ಇಡುತ್ತಿರುವ ಬಗ್ಗೆ ಜನರಿಗೆ ಭರವಸೆಯೇ ಮೂಡು ತ್ತಿಲ್ಲ.
ಹೀಗಾಗಿ, ಕಾಂಗ್ರೆಸ್ ಪಕ್ಷವು ಹೊರಿಸುತ್ತಿರುವ ಜೊಳ್ಳು ಆರೋಪಗಳು ಮೋದಿಯವರ ಸರಕಾರ ವನ್ನು ಅಲುಗಾಡಿಸುವಲ್ಲಿ ಸೋತಿವೆ. ‘ಹೊರದೇಶದಲ್ಲಿರುವ ಕಪ್ಪುಹಣವನ್ನು ವಾಪಸ್ ತಂದು ಎಲ್ಲರ ಖಾತೆಗೆ 15 ಲಕ್ಷ ರುಪಾಯಿಯನ್ನು ಹಾಕಲಾಗುವುದು ಎಂದು ನೀಡಿದ್ದ ವಾಗ್ದಾನವನ್ನು ಮೋದಿಯವರು ಈಡೇರಿಸಿಲ್ಲ’ ಎಂಬುದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸತತ 11 ವರ್ಷದಿಂದ ಮಾಡುತ್ತಲೇ ಇರುವ ಆರೋಪ.
‘ಇದೊಂದು ಬುಡವಿಲ್ಲದ ಆರೋಪ’ ಎಂದು ಸರಕಾರವು ತಳ್ಳಿಹಾಕಿದಾಗ, ಕಾಂಗ್ರೆಸ್ ಪಕ್ಷವು ತಾನು ಮಾಡಿದ್ದ ಆರೋಪವನ್ನು ಸಮರ್ಥಿಸಿಕೊಳ್ಳಲು ಅಗತ್ಯ ದಾಖಲೆಯನ್ನು ಬಿಡುಗಡೆ ಮಾಡಬೇಕಿತ್ತು, ತನ್ಮೂಲಕ ಸರಕಾರವನ್ನು ಮುಜುಗರಕ್ಕೆ ಸಿಲುಕಿಸಬೇಕಿತ್ತು. ಆದರೆ ಈ ದಿನದವರೆಗೂ ಅದನ್ನು ಸಾಬೀತುಪಡಿಸುವ ದಾಖಲೆಯನ್ನು ನೀಡುವಲ್ಲಿ ಅದು ವಿಫಲವಾಗಿದೆ.
ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿನ ‘ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ ಲಾಗುವುದು’ ಎಂಬ ಆಶ್ವಾಸನೆಯು ಆಶ್ವಾಸನೆಯಾಗಿಯೇ ಉಳಿದಿದೆ ಎಂದು ಕಳೆದ 11 ವರ್ಷದಿಂದ ಆರೋಪ ಮಾಡುವುದಕ್ಕೆ ಮಾತ್ರವೇ ಕಾಂಗ್ರೆಸ್‌ನ ಚಟುವಟಿಕೆ ಸೀಮಿತವಾಗಿದೆ. ಕಳೆದ 11 ವರ್ಷ ದಲ್ಲಿ ಈ ಪಕ್ಷವು, ‘ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಿ’ ಎಂದು ಆಗ್ರಹಿಸಿ ದೇಶವ್ಯಾಪಿ ಹೋರಾಟ ಕೈಗೊಳ್ಳಲಿಲ್ಲ,
ರಾಹುಲರಾಗಲೀ, ಮಲ್ಲಿಕಾರ್ಜುನ ಖರ್ಗೆಯವರಾಗಲೀ ನಿರುದ್ಯೋಗಿಗಳ ಪರವಾಗಿ ಬೀದಿಗಿಳಿ ಯಲಿಲ್ಲ, ಧರಣಿಗೆ ಕೂರಲಿಲ್ಲ. ಇವರೆಲ್ಲರ ಹೋರಾಟವು ಪತ್ರಿಕಾ ಹೇಳಿಕೆಗೆ, ಅಬ್ಬರದ ಭಾಷಣಕ್ಕೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸುವುದಕ್ಕೆ ಸೀಮಿತವಾಗಿದೆ. ಬೆಲೆಯೇರಿಕೆಯ ಬಗ್ಗೆ ಪ್ರಸ್ತಾಪಿಸುತ್ತಿರುವ ಕಾಂಗ್ರೆಸ್‌ನ ಆರ್ಭಟವೂ ಮಾತಿಗಷ್ಟೇ ಸೀಮಿತವಾಗಿದ್ದು, ಬೆಲೆಯೇರಿಕೆಯ ವಿರುದ್ಧ ಜನಾಂದೋಲನವನ್ನು ರೂಪಿಸಲು ಅದು ವಿಫಲವಾಗಿದೆ.
ತನ್ನ ಹೋರಾಟದ ಮೂಲಕ ಸರಕಾರಕ್ಕೆ ಬಿಸಿಮುಟ್ಟಿಸಿ, ಜನರ ಬವಣೆಗೆ ಸ್ಪಂದಿಸುವಂತೆ ಮಾಡುವ ಅವಕಾಶವನ್ನೇಕೆ ಕಾಂಗ್ರೆಸ್ ಬಳಸಿಕೊಳ್ಳುತ್ತಿಲ್ಲ? ಎಂಬುದಿಲ್ಲಿ ಪ್ರಶ್ನೆಯಾಗಿದೆ. ಮೋದಿ ಸರಕಾರವು 2015ರಲ್ಲಿ ರಫೆಲ್ ಯುದ್ಧವಿಮಾನದ ಖರೀದಿಗೆಂದು ಫ್ರೆಂಚ್ ಸರಕಾರ ದೊಂದಿಗೆ ಒಪ್ಪಂದ ಮಾಡಿ ಕೊಂಡಾಗ ರಾಹುಲರು, “ರಫೆಲ್ ಖರೀದಿಯಲ್ಲಿ ಬಹುದೊಡ್ಡ ಭ್ರಷ್ಟಾಚಾರವಾಗಿದೆ" ಎಂಬ ಗಂಭೀರ ಆರೋಪವನ್ನು ಪ್ರಧಾನಿಯ ವಿರುದ್ಧವೇ ಮಾಡಿದರು.
“ಚೌಕಿದಾರ್ ಚೋರ್ ಹೈ" ಎಂದು ಪ್ರಧಾನಿಗೆ ಹಣೆಪಟ್ಟಿ ಕಟ್ಟಿದರು. ಅಚ್ಚರಿಯ ಸಂಗತಿಯೆಂದರೆ, ಇದನ್ನು ಸಮರ್ಥಿಸುವ ಯಾವುದೇ ದಾಖಲೆ ನೀಡಲು, ಹಣದ ಮೂಲದ ಕುರಿತಾಗಿ ತಿಳಿಸಲು ಅವರು ಅಸಮರ್ಥರಾದರು. ರಫೆಲ್ ಪ್ರಕರಣ ಸುಪ್ರೀಂಕೋರ್ಟ್ ಅಂಗಳ ತಲುಪಿ, ಸರಕಾರದ ಮೇಲಿನ ಭ್ರಷ್ಟಾಚಾರದ ಆರೋಪ ಸುಳ್ಳೆಂದು ಸಾಬೀತಾಯಿತು.
‘ಚೌಕಿದಾರ್ ಚೋರ್ ಹೈ’ ಘೋಷಣೆಯಿಂದಾಗಿ ರಾಹುಲ್ ಕೂಡ ಕ್ಷಮೆ ಕೋರಬೇಕಾಗಿ ಬಂತು. ಬೋಫೋರ್ಸ್ ಫಿರಂಗಿ ಖರೀದಿಗೆ ಸಂಬಂಧಿಸಿ ತಮ್ಮ ತಂದೆ ರಾಜೀವ್ ಗಾಂಧಿಯವರ ಮೇಲೆ ಮಾಡಲಾಗಿದ್ದ ಆರೋಪಕ್ಕೆ ಪ್ರತಿಯಾಗಿ, ‘ರಫೆಲ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ಆರೋಪಿಸಿದ ರಾಹುಲರು, ಅದನ್ನು ಸಾಬೀತುಪಡಿಸಲು ಸಾಧ್ಯವಾಗದೆ ಹೀಗೆ ಮುಜುಗರಕ್ಕೆ ಒಳಗಾದರು.
ಇನ್ನು, ಅಧಿಕ ಮುಖಬೆಲೆಯ ನೋಟುಗಳ ರದ್ದತಿಯಾದಾಗ ‘ಇದರಿಂದಾಗಿ ಸಣ್ಣ ಉದ್ದಿಮೆಗಳು ಬಾಗಿಲು ಹಾಕಿದವು’ ಎಂದು ಆರೋಪಿಸಿದ ರಾಹುಲರು, ಅಂಥ ಉದ್ದಿಮೆಗಳ ಮಾಲೀಕರು ಮತ್ತು ನೌಕರರ ಜತೆ ರಸ್ತೆಗಿಳಿದು ನ್ಯಾಯಕ್ಕಾಗಿ ಸರಕಾರವನ್ನು ಆಗ್ರಹಿಸಬೇಕಿತ್ತು; ಆದರೆ ಅವರು ಕೇವಲ ಆರೋಪಿಸಿದರೇ ಹೊರತು, ಅದನ್ನು ರುಜುವಾತುಪಡಿಸುವ ಕಷ್ಟವನ್ನು ತೆಗೆದುಕೊಳ್ಳಲೇ ಇಲ್ಲ.
“ಕೇಂದ್ರ ಸರಕಾರವು ಪೆಗಾಸಸ್ ತಂತ್ರಾಂಶದ ಮೂಲಕ ತನ್ನ ವಿರೋಧಿಗಳ ಮೊಬೈಲ್ ಫೋನ್ ಹ್ಯಾಕ್ ಮಾಡಿ ಅವರ ಮೇಲೆ ಕಣ್ಗಾವಲಿಟ್ಟಿದೆ" ಎಂದು ಗಂಭೀರವಾಗಿ ಆರೋಪಿಸಿದ ರಾಹುಲರು, ಅದರ ಸಮರ್ಥನೆಗೆಂದು ಮತ್ತು ಸತ್ಯಾಸತ್ಯತೆಯ ಪರಿಶೀಲನೆಗೆಂದು ತನಿಖಾ ತಂಡಕ್ಕೆ ತಮ್ಮ ಮೊಬೈಲ್ ಫೋನನ್ನು ನೀಡಲಿಲ್ಲ!
‘ಜಿಎಸ್‌ಟಿ’ ಪದ್ಧತಿಯನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಲೇವಡಿ ಮಾಡಿದ ರಾಹುಲರು, ತಮ್ಮ ಪಕ್ಷದ ಸರಕಾರವಿದ್ದಾಗ ಜಾರಿಯಲ್ಲಿದ್ದ ತೆರಿಗೆ ಪ್ರಮಾಣ ಮತ್ತು ಜಿಎಸ್‌ಟಿ ಪ್ರಮಾಣವನ್ನು ಹೋಲಿಸಿ ತಮ್ಮ ಆರೋಪವನ್ನು ಸಾಬೀತುಪಡಿಸಲು ಮುಂದಾಗಲಿಲ್ಲ. ಆರಂಭದಲ್ಲಿ, ಚುನಾವಣೆ ಯಲ್ಲಿ ತಾನು ಸೋತಾಗಲೆಲ್ಲಾ ‘ಇದಕ್ಕೆ ಇವಿಎಂ ಕಾರಣ’ ಎಂದು ತಗಾದೆ ತೆಗೆಯುತ್ತಿದ್ದ ಕಾಂಗ್ರೆಸ್, ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸೋತ ತರುವಾಯ, ‘ಮತದಾ ರರ ಪಟ್ಟಿ ದೋಷಯುಕ್ತವಾಗಿದೆ,
ಹೀಗಾಗಿ ಬಿಜೆಪಿಯು ಅಕ್ರಮವಾಗಿ ಗೆಲ್ಲುತ್ತಿದೆ’ ಎಂದು ಹೊಸ ವರಸೆ ತೆಗೆದು ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸಿತು. ಆದರೆ ಈ ಆರೋಪಗಳನ್ನು ಸಾಬೀತುಮಾಡುವಂಥ ಸಾಕ್ಷ್ಯಾಧಾರಗಳನ್ನು ಅದು ನೀಡಲಿಲ್ಲ. ‘ಲೋಕಸಭೆಯಲ್ಲಿ ಮಾತಾಡಲು ಅಡ್ಡಿಪಡಿಸುತ್ತಿದ್ದಾರೆ’ ಎಂದು ಆರೋಪಿಸಿದ ರಾಹುಲರು, 2025-26ರ ಮುಂಗಡ ಪತ್ರದ ಕುರಿತಾಗಿ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಲಿಲ್ಲ. ಅವರು ಅದರಲ್ಲಿ ಭಾಗವಹಿಸುವ ಮೂಲಕ ಆರ್ಥಿಕ ಸಂಕಷ್ಟ, ಬೆಲೆಯೇರಿಕೆಯಂಥ ವಿಷಯಗಳ ಬಗ್ಗೆ ಬೆಳಕು ಚೆಲ್ಲಬಹುದಾಗಿತ್ತು.
ಅವಕಾಶ ದೊರೆತಾಗ ಮೌನಕ್ಕೆ ಶರಣಾಗಿ ತದನಂತರ ಆರೋಪಿಸುವ ರಾಹುಲರ ಪರಿಪಾಠಗಳ ಪಟ್ಟಿಗೆ ಇದೊಂದು ಸೇರ್ಪಡೆಯಾಗಿದೆ. ಕಳೆದೆರಡು ವರ್ಷಗಳಿಂದ ಮಣಿಪುರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇರುವುದು ಗೊತ್ತಿರುವ ಸಂಗತಿಯೇ. ‘ಪ್ರಧಾನಿಯವರು ಮಣಿಪುರಕ್ಕೆ ಭೇಟಿ ನೀಡಿಲ್ಲ’ ಎಂದು ದಿನನಿತ್ಯ ಆರೋಪಿಸಿದ ಕಾಂಗ್ರೆಸ್, ಒಂದು ವಿಪಕ್ಷವಾಗಿದ್ದುಕೊಂಡು ‘ಮಣಿಪುರದ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಿ’ ಎಂದು ಬೀದಿಗಿಳಿದು ಹೋರಾಟ ಮಾಡಿದ್ದಿಲ್ಲ.
ಇನ್ನು, ವಕ್ಫ್ ಕಾಯಿದೆಯ ತಿದ್ದುಪಡಿ ವಿರೋಧಿಸಿದ ಕಾಂಗ್ರೆಸ್, ಅದರ ವಿರುದ್ಧ ಚಳವಳಿ ಮಾಡಲು ಭಯಬಿದ್ದಿದ್ದೇಕೋ ಗೊತ್ತಾಗುತ್ತಿಲ್ಲ. ವಿಪರ್ಯಾಸವೆಂದರೆ, ತಿದ್ದುಪಡಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆದಾಗ ರಾಹುಲ್ ಗಾಂಧಿಯವರು ಅದರಲ್ಲಿ ಭಾಗವಹಿಸಲೇ ಇಲ್ಲ ಮತ್ತು ಮತದಾನ ನಡೆದಾಗ ಅವರ ಸೋದರಿ ಪ್ರಿಯಾಂಕಾ ವಾದ್ರಾ ಅವರು ಸದನದಲ್ಲೇ ಇರಲಿಲ್ಲ!
ಮೋದಿಯವರನ್ನು ಮಣಿಸುವ ಎಲ್ಲ ತಂತ್ರಗಾರಿಕೆಗಳೂ ವಿಫಲವಾದಾಗ ಇವರೆಲ್ಲಾ ಜಾತಿಯನ್ನು ತಮ್ಮ ಹೊಸ ಅಸವನ್ನಾಗಿ ಮಾಡಿಕೊಂಡರು. ಜಾತಿಗಣತಿಯು ಇವರ ಬೇಡಿಕೆಗಳಲ್ಲಿ ಒಂದಾಗಿತ್ತು. ಇದೀಗ ಮೋದಿ ಸರಕಾರವು 2026-27ರ ರಾಷ್ಟ್ರವ್ಯಾಪಿ ಜನಗಣತಿಯಲ್ಲಿ ಜಾತಿಯ ವಿವರವನ್ನು ಪಡೆಯಲು ನಿರ್ಧರಿಸಿ, ಇವರ ಬಹುದೊಡ್ಡ ಅಸ್ತ್ರವನ್ನು ನಿಸ್ಸಾರಗೊಳಿಸಿದೆ!
ಪ್ರಧಾನಿ ಮೋದಿಯವರನ್ನು ಪ್ರತಿ ಹೆಜ್ಜೆಯಲ್ಲಿಯೂ ವಿರೋಧಿಸುವ ಒಂದಂಶದ ಕಾರ್ಯಕ್ರಮ ವನ್ನು ಬಿಟ್ಟರೆ ವಿರೋಧ ಪಕ್ಷಗಳಿಗೆ ಬೇರೇನೂ ಮಾಡಲಾಗಿಲ್ಲ. ಮೋದಿಗೆ ತಾವು ಪರ್ಯಾಯ ಎಂದು ಬಿಂಬಿಸಿಕೊಳ್ಳಲು ಕಳೆದ 11 ವರ್ಷಗಳಿಂದ ಹರಸಾಹಸ ಪಡುತ್ತಿರುವ ರಾಹುಲ್ ಗಾಂಧಿ ಯವರು, ತಮ್ಮ ವಿಚಾರ, ಕಾರ್ಯಕ್ರಮ ಮತ್ತು ಹೋರಾಟದ ಮೂಲಕ ತಮ್ಮ ವರ್ಚಸ್ಸು ಬೆಳೆಸಿ ಕೊಳ್ಳುವಲ್ಲಿ ಸೋತಿರುವುದು ಸ್ಪಷ್ಟವಾಗಿದೆ.
(ಲೇಖಕರು ಬಿಜೆಪಿಯ ವಕ್ತಾರರು)