ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ರೆಸಿಗ್ನೇಷನ್ ಸಿಂಡ್ರೋಮ್ ಎಂದರೇನು ?

ನೀವು ‘ರೆಸಿಗ್ನೇಷನ್ ಸಿಂಡ್ರೋಮ್’ ಬಗ್ಗೆ ಕೇಳಿದ್ದೀರಾ? ಇದು ವೈದ್ಯಕೀಯ ಜಗತ್ತನ್ನು ಬೆರಗು ಗೊಳಿಸಿದ ಮತ್ತು ಕಳವಳಕ್ಕೀಡು ಮಾಡಿದ ಒಂದು ವಿಶಿಷ್ಟ ಮಾನಸಿಕ ಸ್ಥಿತಿ. ಇದು ಮುಖ್ಯವಾಗಿ ನಿರಾಶ್ರಿತ ಮಕ್ಕಳಲ್ಲಿ ಕಂಡುಬರುವ ಒಂದು ನಿಗೂಢ ಕಾಯಿಲೆಯಾಗಿದೆ. ಹಾಗೆ ನೋಡಿದರೆ, ಇದು ಒಂದು ತೀವ್ರ ಸ್ವರೂಪದ ’ಡಿಪ್ರೆಸಿವ್ ಸ್ಟೂಪರ್’ (Depressive Stupor) ಸ್ಥಿತಿ.

Vishweshwar Bhat Column: ರೆಸಿಗ್ನೇಷನ್ ಸಿಂಡ್ರೋಮ್ ಎಂದರೇನು ?

-

ಸಂಪಾದಕರ ಸದ್ಯಶೋಧನೆ

ನೀವು ‘ರೆಸಿಗ್ನೇಷನ್ ಸಿಂಡ್ರೋಮ್’ ಬಗ್ಗೆ ಕೇಳಿದ್ದೀರಾ? ಇದು ವೈದ್ಯಕೀಯ ಜಗತ್ತನ್ನು ಬೆರಗು ಗೊಳಿಸಿದ ಮತ್ತು ಕಳವಳಕ್ಕೀಡು ಮಾಡಿದ ಒಂದು ವಿಶಿಷ್ಟ ಮಾನಸಿಕ ಸ್ಥಿತಿ. ಇದು ಮುಖ್ಯವಾಗಿ ನಿರಾಶ್ರಿತ ಮಕ್ಕಳಲ್ಲಿ ಕಂಡುಬರುವ ಒಂದು ನಿಗೂಢ ಕಾಯಿಲೆಯಾಗಿದೆ. ಹಾಗೆ ನೋಡಿದರೆ, ಇದು ಒಂದು ತೀವ್ರ ಸ್ವರೂಪದ ’ಡಿಪ್ರೆಸಿವ್ ಸ್ಟೂಪರ್’ (Depressive Stupor) ಸ್ಥಿತಿ.

ಇಲ್ಲಿ ಮಕ್ಕಳು ಹೊರಗಿನ ಪ್ರಪಂಚದಿಂದ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಳ್ಳುತ್ತಾರೆ. ಅವರು ಮಾತನಾಡುವುದನ್ನು ನಿಲ್ಲಿಸುತ್ತಾರೆ, ಆಹಾರ ಸೇವಿಸುವುದಿಲ್ಲ, ಕಣ್ಣು ತೆರೆಯುವುದಿಲ್ಲ ಮತ್ತು ದೈಹಿಕವಾಗಿ ಯಾವುದೇ ಚಲನೆ ತೋರುವುದಿಲ್ಲ. ನೋಡಲು ಅವರು ‘ಕೋಮಾ’ ಸ್ಥಿತಿಯಲ್ಲಿರು ವಂತೆ ಅಥವಾ ‘ಜೀವಂತ ಶವ’ಗಳಂತೆ ಕಾಣುತ್ತಾರೆ. ಆದರೆ, ವೈದ್ಯಕೀಯ ಪರೀಕ್ಷೆಗಳಲ್ಲಿ ಅವರ ಮಿದುಳು ಅಥವಾ ದೇಹದಲ್ಲಿ ಯಾವುದೇ ದೈಹಿಕ ಹಾನಿ ಕಂಡುಬರುವುದಿಲ್ಲ. ಈ ವಿಚಿತ್ರ ಸ್ಥಿತಿಯು ಮೊದಲ ಬಾರಿಗೆ ಸ್ವೀಡನ್ ದೇಶದಲ್ಲಿ 1990ರ ದಶಕದ ಉತ್ತರಾರ್ಧದಲ್ಲಿ ವರದಿಯಾಯಿತು.

ವಿಶೇಷವೆಂದರೆ, ಇದು ಹೆಚ್ಚಾಗಿ ಸೋವಿಯತ್ ಒಕ್ಕೂಟದಿಂದ ಅಥವಾ ಯುಗೊಸ್ಲಾವಿಯಾದಂಥ ದೇಶಗಳಿಂದ ಸ್ವೀಡನ್‌ಗೆ ಆಶ್ರಯ ಅರಸಿ ಬಂದ ನಿರಾಶ್ರಿತರ ಮಕ್ಕಳಲ್ಲಿ ಮಾತ್ರ ಕಂಡುಬಂದಿದೆ. 2003ರಿಂದ 2005ರ ಅವಧಿಯಲ್ಲಿ ಸ್ವೀಡನ್ನಲ್ಲಿ ನೂರಾರು ಇಂಥ ಪ್ರಕರಣಗಳು ದಾಖಲಾದವು. ಈ ಸಿಂಡ್ರೋಮ್ ದಿಢೀರನೆ ಬರುವುದಿಲ್ಲ. ಇದು ಹಂತಹಂತವಾಗಿ ಬೆಳೆಯುತ್ತದೆ.

ಇದನ್ನೂ ಓದಿ: Vishweshwar Bhat Column: ಉಗ್ರರು ಹೀಗೇಕೆ ಮಾಡುತ್ತಾರೆ ?

ಮಗುವು ಖಿನ್ನತೆಗೆ ಒಳಗಾಗುವುದು, ಆಟವಾಡುವುದನ್ನು ನಿಲ್ಲಿಸುವುದು ಮತ್ತು ಇತರರೊಂದಿಗೆ ಬೆರೆಯದೆ ಒಂಟಿಯಾಗಿರುವುದು ಇದರ ಲಕ್ಷಣಗಳು. ಹಸಿವು ಕಡಿಮೆಯಾಗುವುದು, ಮಾತು ನಿಲ್ಲಿಸು ವುದು ಮತ್ತು ಸ್ಕೂಲಿಗೆ ಹೋಗಲು ನಿರಾಕರಿಸುವುದು ಸಹ ಇತರ ಲಕ್ಷಣಗಳೇ. ಮಗು ಹಾಸಿಗೆ ಹಿಡಿಯುತ್ತದೆ. ಕಣ್ಣುಗಳನ್ನು ಬಿಡುವುದಿಲ್ಲ.

ನೋವು ನೀಡಿದರೂ ಪ್ರತಿಕ್ರಿಯಿಸುವುದಿಲ್ಲ. ಮಲ-ಮೂತ್ರ ವಿಸರ್ಜನೆಯ ಮೇಲೆಯೂ ಹತೋಟಿ ಇರುವುದಿಲ್ಲ. ಈ ಹಂತದಲ್ಲಿ ಮಕ್ಕಳಿಗೆ ಟ್ಯೂಬ್ ಮೂಲಕ ಆಹಾರ ನೀಡಬೇಕಾಗುತ್ತದೆ. ಇದಕ್ಕೆ ಕಾರಣವೇನು? ವೈದ್ಯರು ಮತ್ತು ಮನೋವಿಜ್ಞಾನಿಗಳು ಇದರ ಹಿಂದೆ ಕೇವಲ ದೈಹಿಕ ಕಾರಣ ಗಳಲ್ಲದೇ, ಆಳವಾದ ಮಾನಸಿಕ ಮತ್ತು ಸಾಮಾಜಿಕ ಕಾರಣಗಳಿವೆ ಎಂದು ನಂಬುತ್ತಾರೆ. ಈ ಮಕ್ಕಳು ತಮ್ಮ ತಾಯ್ನಾಡಿನಲ್ಲಿ ಯುದ್ಧ, ಹಿಂಸೆ ಅಥವಾ ಕಿರುಕುಳವನ್ನು ನೋಡಿರುತ್ತಾರೆ.

ಹೊಸ ದೇಶಕ್ಕೆ ಬಂದಾಗಲೂ ಅಲ್ಲಿ ಆಶ್ರಯ ಸಿಗುತ್ತದೋ ಇಲ್ಲವೋ ಎಂಬ ಅನಿಶ್ಚಿತತೆ ಕಾಡುತ್ತದೆ. ಸರಕಾರವು ಅವರ ಆಶ್ರಯದ ಅರ್ಜಿಯನ್ನು ತಿರಸ್ಕರಿಸಿದಾಗ ಅಥವಾ ಅವರ ಕುಟುಂಬವನ್ನು ದೇಶದಿಂದ ಹೊರಹಾಕುವ ಆತಂಕ ಎದುರಾದಾಗ, ಮಗುವು ‘ಬದುಕುವುದರಲ್ಲಿ ಅರ್ಥವಿಲ್ಲ’ ಎಂಬ ತೀರ್ಮಾನಕ್ಕೆ ಬಂದು ಪ್ರಜ್ಞಾಪೂರ್ವಕವಾಗಿ ಪ್ರಪಂಚದಿಂದ ಹಿಂದೆ ಸರಿಯುತ್ತದೆ.

ಪೋಷಕರ ಆತಂಕವು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಮಕ್ಕಳು ತಮ್ಮ ಕುಟುಂಬದ ಅಸ್ತಿತ್ವಕ್ಕೆ ಅಪಾಯವಿದೆ ಎಂದು ಅರಿತಾಗ, ಈ ಸ್ಥಿತಿಗೆ ಜಾರುತ್ತಾರೆ. ಇದು ಸ್ವೀಡನ್ನಿನಲ್ಲಿ ಹೆಚ್ಚಾಗಿ ಕಂಡುಬರುವುದರಿಂದ, ಇದನ್ನು ಒಂದು ‘ಸಾಂಸ್ಕೃತಿಕವಾಗಿ ರೂಪುಗೊಂಡ ಮಾನಸಿಕ ಸ್ಥಿತಿ’ ಎಂದೂ ಕರೆಯುತ್ತಾರೆ. ಈ ಕಾಯಿಲೆಗೆ ಯಾವುದೇ ಮಾತ್ರೆ ಅಥವಾ ಶಸ್ತ್ರಚಿಕಿತ್ಸೆ ಮದ್ದಲ್ಲ.

ಬದಲಾಗಿ, ‘ಸುರಕ್ಷತೆಯ ಭಾವನೆ’ ನೀಡುವುದೇ ಏಕೈಕ ಚಿಕಿತ್ಸೆ. ಸ್ವೀಡನ್ನಿನಲ್ಲಿ ಕಂಡುಬಂದಂತೆ, ಯಾವಾಗ ಆ ಮಗುವಿನ ಕುಟುಂಬಕ್ಕೆ ಆ ದೇಶದಲ್ಲಿ ನೆಲೆಸಲು ಶಾಶ್ವತ ಅನುಮತಿ ಸಿಗುತ್ತದೆಯೋ, ಅಂದಿನಿಂದ ಮಗು ನಿಧಾನವಾಗಿ ಚೇತರಿಸಿಕೊಳ್ಳಲು ಆರಂಭಿಸುತ್ತದೆ.

ಪೋಷಕರು ಮಗುವಿನೊಂದಿಗೆ ನಿರಂತರವಾಗಿ ಮಾತನಾಡುವುದು, ಅವರ ಕೈಗಳನ್ನು ಸವರುವುದು ಮತ್ತು ಭರವಸೆ ನೀಡುವುದನ್ನು ಮುಂದುವರಿಸಬೇಕು. ಈ ಸ್ಥಿತಿಯಿಂದ ಹೊರಬರಲು ಕೆಲವು ವಾರಗಳಿಂದ ಹಿಡಿದು ವರ್ಷಗಳೇ ಬೇಕಾಗಬಹುದು. ಮಗು ಮೊದಲು ಕಣ್ಣು ತೆರೆಯುತ್ತದೆ, ನಂತರ ಒಂದು ಹನಿ ನೀರು ಕುಡಿಯುತ್ತದೆ, ಬೆರಳುಗಳನ್ನು ಅಡಿಸುತ್ತದೆ - ಹೀಗೆ ಸುದೀರ್ಘ ಪ್ರಕ್ರಿಯೆಯ ಮೂಲಕ ಸಹಜ ಸ್ಥಿತಿಗೆ ಮರಳುತ್ತದೆ. ರೆಸಿಗ್ನೇಷನ್ ಸಿಂಡ್ರೋಮ್ ಮಾನವ ಹಕ್ಕುಗಳ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ನಿರಾಶ್ರಿತರ ಮೇಲಿನ ಕಟ್ಟುನಿಟ್ಟಾದ ಕಾನೂನುಗಳು ಮಕ್ಕಳ ಮನಸ್ಸಿನ ಮೇಲೆ ಎಷ್ಟು ಆಳವಾದ ಗಾಯವನ್ನು ಮಾಡುತ್ತವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.