ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಅಮೆರಿಕ ಅಧ್ಯಕ್ಷರು ಯಾವ ಮೇಲ್ಪಂಕ್ತಿ ಹಾಕಿಕೊಡುತ್ತಾರೆ ?

ಟ್ರಂಪ್ ಮೆಕ್ ಡೊನಾಲ್ಡ್ ಬರ್ಗರ್ ಮೇಲಿನ ಪ್ರೀತಿ ಕೇವಲ ಸಾಂದರ್ಭಿಕವಲ್ಲ, ಬದಲಿಗೆ ಅದು ಅವರ ದೈನಂದಿನ ಅಭ್ಯಾಸವೇ ಆಗಿ ಹೋಗಿದೆ. ಅವರ ಮಾಜಿ ಆಪ್ತರು ಮತ್ತು ಚುನಾವಣಾ ಪ್ರಚಾರದ ಸಿಬ್ಬಂದಿ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಅವರ ಒಂದು ಬಾರಿಯ ಊಟದಲ್ಲಿ ಎರಡು ಬಿಗ್ ಮ್ಯಾಕ್ ಬರ್ಗರ್‌ಗಳು, ಎರಡು ಫಿಲೆಟ್-ಓ-ಫಿಶ್ ಬರ್ಗರ್‌ಗಳು ಮತ್ತು ದೊಡ್ಡ ಗಾತ್ರದ ಚಾಕೊಲೇಟ್ ಶೇಕ್ ಇರುತ್ತದಂತೆ.

ಅಮೆರಿಕ ಅಧ್ಯಕ್ಷರು ಯಾವ ಮೇಲ್ಪಂಕ್ತಿ ಹಾಕಿಕೊಡುತ್ತಾರೆ ?

-

ನೂರೆಂಟು ವಿಶ್ವ

ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೀವನಶೈಲಿ ಮತ್ತು ಆಹಾರ ಪದ್ಧತಿ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ವಿಶ್ವದ ಅತ್ಯಂತ ಪ್ರಭಾವ ಶಾಲಿ ದೇಶದ ನಾಯಕನೊಬ್ಬ ಅತ್ಯುನ್ನತ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಬಿಟ್ಟು, ಬೀದಿ ಬದಿಯ ಫಾಸ್ಟ್ ಫುಡ್ ಮಳಿಗೆಗಳ ತಿಂಡಿಗಳಿಗೆ ಮಾರುಹೋದರೆ ಏನು ಮಾಡೋದು?

‘ಜಂಕ್ ಫುಡ್ ತಿನ್ನಬೇಡಿ, ತಿಂದರೆ ಆರೋಗ್ಯ ಹಾಳಾಗುತ್ತದೆ’ ಎಂದು ಮಕ್ಕಳಿಗೆ ಪಾಲಕರು ಗದರುವುದು ಸಾಮಾನ್ಯ. ಆದರೆ ಅಮೆರಿಕದ ಅಧ್ಯಕ್ಷನೇ ಎರಡೂ ಹೊತ್ತು ಜಂಕ್ ಫುಡ್ ತಿಂದರೆ ಏನು ಮಾಡೋದು? ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೀವನಶೈಲಿ ಮತ್ತು ಆಹಾರ ಪದ್ಧತಿ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ‌

ವಿಶ್ವದ ಅತ್ಯಂತ ಪ್ರಭಾವಶಾಲಿ ದೇಶದ ನಾಯಕನೊಬ್ಬ ಅತ್ಯುನ್ನತ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಬಿಟ್ಟು, ಬೀದಿಬದಿಯ ಫಾಸ್ಟ್ ಫುಡ್ ಮಳಿಗೆಗಳ ತಿಂಡಿಗಳಿಗೆ ಮಾರುಹೋದರೆ ಏನು ಮಾಡೋದು? ಮೆಕ್ ಡೊನಾಲ್ಡ್ ಬರ್ಗರ್, ಕುರುಕುಲು ಫ್ರೆಂಚ್‌ ಪ್ರೈಸ್ ಮತ್ತು ಡಯಟ್ ಕೋಕ್ ಮೇಲಿನ ಅವರ ಅತಿಯಾದ ಪ್ರೀತಿ ಅವರ ಸಾರ್ವಜನಿಕ ವ್ಯಕ್ತಿತ್ವದ ಒಂದು ವಿಶಿಷ್ಟ ಭಾಗವಾಗಿರು ವುದು ಬೇರೆಯವರಿಗೆ ನುಂಗಲಾರದ ತುತ್ತಾಗಿದೆ.

ಟ್ರಂಪ್ ಮೆಕ್ ಡೊನಾಲ್ಡ್ ಬರ್ಗರ್ ಮೇಲಿನ ಪ್ರೀತಿ ಕೇವಲ ಸಾಂದರ್ಭಿಕವಲ್ಲ, ಬದಲಿಗೆ ಅದು ಅವರ ದೈನಂದಿನ ಅಭ್ಯಾಸವೇ ಆಗಿ ಹೋಗಿದೆ. ಅವರ ಮಾಜಿ ಆಪ್ತರು ಮತ್ತು ಚುನಾವಣಾ ಪ್ರಚಾರದ ಸಿಬ್ಬಂದಿ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಅವರ ಒಂದು ಬಾರಿಯ ಊಟದಲ್ಲಿ ಎರಡು ಬಿಗ್ ಮ್ಯಾಕ್ ಬರ್ಗರ್‌ಗಳು, ಎರಡು ಫಿಲೆಟ್-ಓ-ಫಿಶ್ ಬರ್ಗರ್‌ಗಳು ಮತ್ತು ದೊಡ್ಡ ಗಾತ್ರದ ಚಾಕೊಲೇಟ್ ಶೇಕ್ ಇರುತ್ತದಂತೆ.

ಇದನ್ನೂ ಓದಿ: Vishweshwar Bhat Column: ಕಲಾವಿದರ ಗೌರವಕ್ಕಾಗಿ ಒಂದು ಚೌಕ

ಜತೆಗೆ, ದಿನವಿಡೀ ಹನ್ನೆರಡಕ್ಕೂ ಹೆಚ್ಚು ಡಯಟ್ ಕೋಕ್ ಕ್ಯಾನ್‌ಗಳನ್ನು ಕುಡಿಯುತ್ತಾರಂತೆ. ಅವರ ಈ ಹವ್ಯಾಸವು ಶ್ವೇತಭವನದ ಒಳಗೆ ಮತ್ತು ಹೊರಗೆ ಹಲವು ಬಾರಿ ಹಾಸ್ಯ ಹಾಗೂ ಆತಂಕಕ್ಕೆ ಕಾರಣವಾಗಿದೆ. ತಮಾಷೆ ಅಂದ್ರೆ, ಈ ವಿಚಿತ್ರ ಆಹಾರ ಪ್ರೀತಿಗೆ ಟ್ರಂಪ್ ನೀಡುವ ವಿವರಣೆಯೂ ಅಷ್ಟೇ ವಿಶಿಷ್ಟವಾಗಿದೆ. ಟ್ರಂಪ್ ಮೂಲತಃ ಸ್ವಚ್ಛತೆಗೆ ಅತಿಯಾದ ಮಹತ್ವ ಕೊಡುವ ವ್ಯಕ್ತಿ.

ದೊಡ್ಡ ಹೋಟೆಲ್‌ಗಳು ಅಥವಾ ಅಪರಿಚಿತ ಅಡುಗೆಮನೆಗಳಲ್ಲಿ ಆಹಾರ ತಯಾರಿಸುವಾಗ ನೈರ್ಮಲ್ಯ ಪಾಲನೆಯಾಗುತ್ತದೆಯೋ ಇಲ್ಲವೋ ಎಂಬ ಅನುಮಾನ ಅವರಿಗೆ ಸದಾ ಇರುತ್ತದಂತೆ. ಆದರೆ ಮೆಕ್ ಡೊನಾಲ್ಡ್ ಬರ್ಗರ್‌ನಂಥ ಬೃಹತ್ ಜಾಗತಿಕ ಬ್ರ್ಯಾಂಡ್‌ಗಳು ಆಹಾರ ತಯಾರಿಕೆ ಯಲ್ಲಿ ಕಟ್ಟು ನಿಟ್ಟಾದ ಗುಣಮಟ್ಟ ಮತ್ತು ಸ್ವಚ್ಛತಾ ಮಾನದಂಡಗಳನ್ನು ಪಾಲಿಸುತ್ತವೆ ಎಂಬುದು ಅವರ ಅಚಲ ನಂಬಿಕೆ. ಎಲ್ಲಿಗೆ ಹೋದರೂ ಒಂದೇ ರೀತಿಯ ರುಚಿ ಮತ್ತು ನೈರ್ಮಲ್ಯ ಸಿಗುತ್ತದೆ ಎಂಬ ಕಾರಣಕ್ಕೆ ಅವರು ಫಾಸ್ಟ್ ಫುಡ್‌ಗೆ ಮೊದಲ ಆದ್ಯತೆ ನೀಡುತ್ತಾರಂತೆ.

ಶ್ವೇತಭವನದ ಭವ್ಯ ಇತಿಹಾಸದಲ್ಲಿ ಅತ್ಯುನ್ನತ ಬಾಣಸಿಗರಿಂದ ತಯಾರಾಗುವ ಸಾಂಪ್ರದಾಯಿಕ ಹಾಗೂ ರಾಜಮನೆತನದ ಶೈಲಿಯ ಭೋಜನಗಳಿಗೆ ದಶಕಗಳ ಇತಿಹಾಸವಿದೆ. ಆದರೆ ಟ್ರಂಪ್ ಅಧಿಕಾರದಲ್ಲಿದ್ದಾಗ ಈ ಸಂಪ್ರದಾಯವನ್ನೇ ಬುಡಮೇಲು ಮಾಡಿದ್ದಾರೆ. 2019ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದ ಕಾಲೇಜು ಫುಟ್ಬಾಲ್ ತಂಡಕ್ಕೆ ವೈಟ್‌ಹೌಸ್‌ನಲ್ಲಿ ಆತಿಥ್ಯ ನೀಡಿದಾಗ, ಬೆಳ್ಳಿ ತಟ್ಟೆಗಳಲ್ಲಿ ಸಾವಿರಾರು ಮೆಕ್ ಡೊನಾಲ್ಡ್ ಬರ್ಗರ್ ಕಿಂಗ್ ಮತ್ತು ವೆಂಡೀಸ್ ಬರ್ಗರ್‌ಗಳನ್ನು ರಾಶಿ ಹಾಕಿ ಬಡಿಸಿದ್ದರು. ಈ ದೃಶ್ಯವು ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿ ರಾಜತಾಂತ್ರಿಕ ಶಿಷ್ಟಾಚಾರದ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು. ಆದರೆ ಇಂಥ ಆಹಾರ ಪದ್ಧತಿ ಸಾರ್ವಜನಿಕ ವಲಯದಲ್ಲಿ ಮತ್ತು ವೈದ್ಯಕೀಯ ಜಗತ್ತಿನಲ್ಲಿ ತೀವ್ರ ಟೀಕೆಗೆ ಗುರಿಯಾಯಿತು.

D Trump

ಅಮೆರಿಕದಲ್ಲಿ ಸ್ಥೂಲಕಾಯ, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ರಾಷ್ಟ್ರೀಯ ಆರೋಗ್ಯ ಸಮಸ್ಯೆಯಾಗಿರುವಾಗ, ದೇಶದ ಅಧ್ಯಕ್ಷರೇ ಅತಿಯಾದ ಕೊಬ್ಬು ಮತ್ತು ಸಕ್ಕರೆಯುಕ್ತ ಜಂಕ್ ಫುಡ್ ಪ್ರಚಾರಕರಂತೆ, ಅದರ ರಾಯಭಾರಿಯಂತೆ ಕಾಣುವುದು ತಪ್ಪು ಸಂದೇಶ ರವಾನಿಸು ತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ದೇಶದ ನಾಗರಿಕರಿಗೆ ಆರೋಗ್ಯಕರ ಜೀವನಶೈಲಿಯನ್ನು ಬೋಧಿಸಬೇಕಾದ ನಾಯಕನೇ ಅನಾರೋಗ್ಯಕರ ಆಹಾರವನ್ನು ಬಹಿರಂಗವಾಗಿ ಸಂಭ್ರಮಿಸುವುದು ಯುವಜನತೆಯ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂಬುದು ವಿಮರ್ಶಕರ ವಾದ. ಇದಕ್ಕೆ ವ್ಯತಿರಿಕ್ತವಾಗಿ, ರಾಜಕೀಯ ವಿಶ್ಲೇಷಕರು ಟ್ರಂಪ್ ಅವರ ಈ ಆಹಾರ ಪದ್ಧತಿಯಲ್ಲಿ ಒಂದು ಚಾಣಾಕ್ಷ ಸಾರ್ವಜನಿಕ ಸಂಪರ್ಕ ತಂತ್ರವನ್ನು ಗುರುತಿಸುತ್ತಾರೆ.

ಅಮೆರಿಕದ ಸಾಮಾನ್ಯ ಶ್ರಮಿಕ ವರ್ಗವು ಪ್ರತಿದಿನ ಇಂಥ ಕಡಿಮೆ ವೆಚ್ಚದ, ತ್ವರಿತ ಆಹಾರಗಳನ್ನೇ ಅವಲಂಬಿಸಿದೆ. ದುಬಾರಿ ಸಾವಯವ ತರಕಾರಿಗಳು ಮತ್ತು ಸೂಕ್ಷ ಪಾಶ್ಚಿಮಾತ್ಯ ಭಕ್ಷ ಗಳನ್ನು ತಿನ್ನುವ ಗಣ್ಯ ರಾಜಕಾರಣಿಗಳಿಗೆ ಹೋಲಿಸಿದರೆ, ಸಾಮಾನ್ಯ ಜನರು ತಿನ್ನುವ ಬರ್ಗರ್ ಸೇವಿಸುವ ಮೂಲಕ ಟ್ರಂಪ್ ತಾವೊಬ್ಬ ‘ಜನಸಾಮಾನ್ಯರ ವ್ಯಕ್ತಿ’ ಎಂದು ಬಿಂಬಿಸಿಕೊಳ್ಳಲು ಯಶಸ್ವಿ ಯಾದರು. ಇದು ಅವರ ಬೆಂಬಲಿಗರನ್ನು ಭಾವನಾತ್ಮಕವಾಗಿ ಇನ್ನಷ್ಟು ಹತ್ತಿರವಾಗಿಸಿತು.

ಅಮೆರಿಕದ ಸಾಂಸ್ಕೃತಿಕ ರಾಜಕೀಯದಲ್ಲಿ ಆಹಾರವೂ ಒಂದು ಶಕ್ತಿಯುತ ಅಸ್ತ್ರ. ವಿರೋಧಿ ನಾಯಕರು ಸಾಮಾನ್ಯವಾಗಿ ಆರೋಗ್ಯಕರ, ಪರಿಸರಸ್ನೇಹಿ ಮತ್ತು ಸಾವಯವ ಆಹಾರಕ್ಕೆ ಒತ್ತು ನೀಡುವುದನ್ನು ‘ಶ್ರೀಮಂತ ಗಣ್ಯರ ಕಪಟತನ’ ಎಂದು ಟ್ರಂಪ್ ಪಾಳಯ ಬಿಂಬಿಸಿತು. ಬದಲಿಗೆ, ಸಾಂಪ್ರದಾಯಿಕ ಅಮೆರಿಕನ್ ಕೈಗಾರಿಕಾ ಉತ್ಪನ್ನವಾದ ತ್ವರಿತ ಆಹಾರವನ್ನು ಸೇವಿಸುವುದು ದೇಶೀಯ ಕಂಪನಿಗಳನ್ನು ಮತ್ತು ಸಾಮಾನ್ಯ ಅಮೆರಿಕನ್ ಸಂಸ್ಕೃತಿಯನ್ನು ಬೆಂಬಲಿಸಿದಂತೆ ಎಂಬ ವಾದವನ್ನು ಅವರ ಬೆಂಬಲಿಗರು ಮುಂಚೂಣಿಗೆ ತಂದರು.

ಹೀಗಾಗಿ, ಅವರ ಬರ್ಗರ್ ಪ್ರೀತಿ ಕೇವಲ ಊಟವಾಗಿ ಉಳಿಯದೇ ರಾಜಕೀಯ ನಿಲುವಾಗಿ ಮಾರ್ಪ ಟ್ಟಿತು. ಟ್ರಂಪ್ ಅವರ ಅಧಿಕೃತ ವೈದ್ಯಕೀಯ ಪರೀಕ್ಷಾ ವರದಿಗಳು ಸಹ ಹಲವು ಬಾರಿ ಸಾರ್ವಜನಿಕ ವಾಗಿ ಚರ್ಚೆಯಾಗಿವೆ. ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ತೂಕವಿದ್ದರೂ, ಇಳಿವಯಸ್ಸಿನಲ್ಲೂ ಅವರು ದಿನಕ್ಕೆ ಹಲವು ಗಂಟೆಗಳ ಕಾಲ ಸಕ್ರಿಯವಾಗಿ ಕೆಲಸ ಮಾಡುವುದು ಮತ್ತು ನಿರಂತರ ಪ್ರಚಾರ ರ್ಯಾಲಿಗಳಲ್ಲಿ ಭಾಗವಹಿಸುವುದು ಅವರ ದೈಹಿಕ ಸಾಮರ್ಥ್ಯದ ಬಗ್ಗೆ ಚರ್ಚೆ ಹುಟ್ಟು ಹಾಕಿತು. ಕೆಲವರು ಇದನ್ನು ಅವರ ಅಸಾಧಾರಣ ವಂಶವಾಹಿ ಶಕ್ತಿ ಎಂದು ಬಣ್ಣಿಸಿದರೆ, ಇನ್ನು ಕೆಲವರು ಇಂಥ ಜಂಕ್ ಫುಡ್ ಸೇವನೆಯು ದೀರ್ಘಾವಧಿಯಲ್ಲಿ ಹೃದಯ ಮತ್ತು ರಕ್ತನಾಳಗಳ ಆರೋಗ್ಯಕ್ಕೆ ಗಂಭೀರ ಅಪಾಯ ತರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಯ ಆಹಾರದ ಹಕ್ಕು ಸಂಪೂರ್ಣ ವೈಯಕ್ತಿಕವಾದದ್ದು. ಆದರೆ ಆ ವ್ಯಕ್ತಿ ಜಗತ್ತಿನ ಅತ್ಯುನ್ನತ ಹುದ್ದೆಯಲ್ಲಿದ್ದಾಗ, ಅವರ ಪ್ರತಿಯೊಂದು ಸಣ್ಣ ನಡೆವಳಿಕೆ ಯೂ ಸಾರ್ವಜನಿಕ ವಿಮರ್ಶೆಯ ಕನ್ನಡಿಯ ಮುಂದೆ ನಿಲ್ಲಲೇಬೇಕಾಗುತ್ತದೆ. ಟ್ರಂಪ್ ಅವರ ಜಂಕ್ ಫುಡ್ ಪ್ರೇಮವು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ವಿಮರ್ಶೆಗೆ ಒಳಗಾದರೂ, ರಾಜಕೀಯ ಸಂವಹನದ ದೃಷ್ಟಿಯಿಂದ ಅದು ಅವರ ಜನಪ್ರಿಯತೆಯನ್ನು ಹಿಡಿದಿಟ್ಟುಕೊಳ್ಳುವ ಅಸಾಮಾನ್ಯ ಸಾಧನವಾಗಿ ಉಳಿದುಕೊಂಡಿರುವುದು ಆಧುನಿಕ ರಾಜಕೀಯದ ಒಂದು ಸ್ವಾರಸ್ಯಕರ ಅಂಶವಾಗಿದೆ.

ಅಮೆರಿಕದ ಅಧ್ಯಕ್ಷರ ಅಧಿಕೃತ ಕಚೇರಿಯಾದ ‘ಓವಲ್ ಆಫೀಸ್’ ಜಾಗತಿಕ ನಿರ್ಧಾರಗಳನ್ನು ತೆಗೆದು ಕೊಳ್ಳುವ ಅತ್ಯಂತ ಗಂಭೀರ ಸ್ಥಳ. ಅಲ್ಲಿನ ಪ್ರಸಿದ್ಧ ‘ರೆಸಲ್ಯೂಟ್ ಡೆ’ ಮೇಲೆ ಅನೇಕ ದಶಕಗಳಿಂದ ಅಧ್ಯಕ್ಷರು ರಾಷ್ಟ್ರದ ಹಿತದೃಷ್ಟಿಯ ತುರ್ತು ಕರೆಗಳನ್ನು ನಿರ್ವಹಿಸಲು ಸಾಧನಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ, ಈ ಮೇಜಿನ ಮೇಲಿದ್ದ ಒಂದು ಸಣ್ಣ ಮರದ ಪೆಟ್ಟಿಗೆ ಮತ್ತು ಅದರಲ್ಲಿದ್ದ ಕೆಂಪು ಬಟನ್ ಜಗತ್ತಿನಾದ್ಯಂತ ಭಾರೀ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿತ್ತು. ಈ ಮರದ ಪೆಟ್ಟಿಗೆಯು ಐತಿಹಾಸಿಕವಾಗಿ ಅಧ್ಯಕ್ಷರಿಗೆ ತಮ್ಮ ಸಿಬ್ಬಂದಿ ಅಥವಾ ಭದ್ರತಾ ಸಿಬ್ಬಂದಿಯನ್ನು ತುರ್ತಾಗಿ ಕರೆಯಲು ಇದ್ದ ಒಂದು ಸಂವಹನ ವ್ಯವಸ್ಥೆ. ಆದರೆ ಟ್ರಂಪ್ ಅದನ್ನು ಸಂಪೂರ್ಣವಾಗಿ ತಮ್ಮ ನೆಚ್ಚಿನ ಪಾನೀಯವಾದ ‘ಡಯಟ್ ಕೋಕ್’ ತರಿಸಿಕೊಳ್ಳುವ ಸಾಧನವಾಗಿ ಬದಲಾಯಿಸಿಕೊಂಡಿದ್ದರು.

ಟ್ರಂಪ್ ಆ ಕೆಂಪು ಗುಂಡಿಯನ್ನು ಒತ್ತಿದ ಕೆಲವೇ ಕ್ಷಣಗಳಲ್ಲಿ, ಶ್ವೇತಭವನದ ಬಟ್ಲರ್ ಬೆಳ್ಳಿಯ ತಟ್ಟೆಯಲ್ಲಿ ತಣ್ಣನೆಯ ಡಯಟ್ ಕೋಕ್ ಅನ್ನು ಗೌರವಪೂರ್ವಕವಾಗಿ ತಂದು ಅಧ್ಯಕ್ಷರ ಮೇಜಿನ ಮೇಲೆ ಇಡುತ್ತಿದ್ದರು. ಟ್ರಂಪ್ ಅವರ ಈ ಅಭ್ಯಾಸವನ್ನು ಶ್ವೇತಭವನಕ್ಕೆ ಭೇಟಿ ನೀಡಿದ ಅಂತಾ ರಾಷ್ಟ್ರೀಯ ಪತ್ರಕರ್ತರು ಮೊದಲ ಬಾರಿಗೆ ಜಗತ್ತಿಗೆ ಬಹಿರಂಗಪಡಿಸಿದರು.

ಪತ್ರಕರ್ತರೊಂದಿಗೆ ಗಂಭೀರ ಸಂದರ್ಶನ ನಡೆಯುತ್ತಿರುವ ನಡುವೆಯೇ ಟ್ರಂಪ್ ಹಠಾತ್ತಾಗಿ ಆ ಕೆಂಪು ಗುಂಡಿಯನ್ನು ಒತ್ತುತ್ತಿದ್ದರು. ಮೊದಲ ಬಾರಿಗೆ ಇದನ್ನು ನೋಡಿದ ಅತಿಥಿಗಳು, ಅಧ್ಯಕ್ಷರು ಯಾವುದೋ ಮಿಲಿಟರಿ ಆದೇಶ ನೀಡುತ್ತಿದ್ದಾರೆಯೇ ಅಥವಾ ಅಣ್ವಸ್ತ್ರ ದಾಳಿಗೆ ಸಂಬಂಧಿಸಿದ ಬಟನ್ ಒತ್ತುತ್ತಿದ್ದಾರೆಯೇ ಎಂದು ಕ್ಷಣಕಾಲ ಗಾಬರಿಯಾಗುತ್ತಿದ್ದರು.

ಆದರೆ ಬಟ್ಲರ್ ತಂಪು ಪಾನೀಯ ತಂದುಕೊಟ್ಟಾಗ ಆಶ್ಚರ್ಯ ಮತ್ತು ನಗು ಎರಡೂ ಒಟ್ಟಿಗೆ ಮೂಡಿತು. ಸಂದರ್ಶಕರನ್ನು ಅಚ್ಚರಿಗೊಳಿಸಲು ಟ್ರಂಪ್ ಅವರೇ ಸ್ವತಃ ಈ ಬಟನ್ ಒತ್ತಿ ತಮಾಷೆ ಮಾಡುತ್ತಿದ್ದರು. ದಿನವೊಂದಕ್ಕೆ ಸುಮಾರು ಹನ್ನೆರಡಕ್ಕೂ ಹೆಚ್ಚು ಡಯಟ್ ಕೋಕ್ ಕ್ಯಾನ್‌ಗಳನ್ನು ಸೇವಿಸುವ ಅಭ್ಯಾಸ ವಿದ್ದ ಟ್ರಂಪ್‌ಗೆ, ಕೆಲಸದ ನಡುವೆ ಸಮಯ ವ್ಯರ್ಥವಾಗದಂತೆ ಪಾನೀಯ ಪಡೆಯಲು ಈ ವ್ಯವಸ್ಥೆ ಬಹಳ ಅನುಕೂಲಕರವಾಗಿತ್ತು.

ವಿಶ್ವದ ಅತ್ಯಂತ ಶಕ್ತಿಶಾಲಿ ಹುದ್ದೆಯಲ್ಲಿದ್ದರೂ, ತಮ್ಮ ನೆಚ್ಚಿನ ಅಭ್ಯಾಸಗಳನ್ನು ಆಡಳಿತ ಶೈಲಿಯ ಜತೆಯ ಮುಂದುವರಿಸಿದ ಟ್ರಂಪ್ ಅವರ ಈ ಕೆಂಪು ಬಟನ್ ಪ್ರಸಂಗವು ಶ್ವೇತಭವನದ ಇತಿಹಾಸ ದಲ್ಲಿ ಒಂದು ವಿಶಿಷ್ಟ ಮತ್ತು ಸ್ವಾರಸ್ಯಕರ ಅಧ್ಯಾಯವಾಗಿ ದಾಖಲಾಗಿದೆ. ಫಾಸ್ಟ್ ಫುಡ್ ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಮುಖ್ಯ ಕಾರಣವೆಂದರೆ ಅವರಲ್ಲಿ ನೆಲೆಯೂರಿರುವ ಭಯ. ಅಪರಿಚಿತ ಹೋಟೆಲ್‌ಗಳಲ್ಲಿ ಯಾರಾದರೂ ತಮಗೆ ಆಹಾರದಲ್ಲಿ ವಿಷ ಬೆರೆಸಬಹುದು ಎಂಬ ಆತಂಕ. ಆದರೆ ಮೆಕ್ ಡೊನಾಲ್ಡ್; ನಲ್ಲಿ ಮೊದಲೇ ಯಾರಿಗೆ ಯಾವ ಬರ್ಗರ್ ಹೋಗುತ್ತದೆ ಎಂದು ಯಾರಿಗೂ ತಿಳಿಯದಿರುವುದರಿಂದ, ಅದು ಸಂಪೂರ್ಣ ಸುರಕ್ಷಿತ ಎಂಬುದು ಅವರ ನಂಬಿಕೆ. ‌

ಟ್ರಂಪ್ ಮಾಂಸದ ತಿನಿಸುಗಳನ್ನು (ಸ್ಟೀಕ್) ಅತಿಯಾಗಿ ಬೇಯಿಸಿ, ಕಲ್ಲಿದ್ದಲಿನಂತೆ ಕಪ್ಪಾಗಿ, ಗಟ್ಟಿಯಾದ ಮೇಲೆ ಟೊಮೆಟೊ ಕೆಚಪ್ ಹಾಕಿ ತಿನ್ನುತ್ತಾರೆ. ಉನ್ನತ ಬಾಣಸಿಗರ ಪ್ರಕಾರ, ಉತ್ತಮ ಗುಣಮಟ್ಟದ ಮಾಂಸಕ್ಕೆ ಕೆಚಪ್ ಹಾಕಿ ತಿನ್ನುವುದು ಆಹಾರ ಸಂಸ್ಕೃತಿಗೆ ಮಾಡುವ ಅಪಮಾನ ವಂತೆ. ಆದರೆ ಟ್ರಂಪ್ ಅದಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ. ಪಿಜ್ಜಾ ತಿನ್ನುವಾಗಲೂ ಅವರು ಅದರ ಮೇಲ್ಭಾಗದ ಚೀಸ್ ಮತ್ತು ಟಾಪಿಂಗ್ಸ್‌ಗಳನ್ನು ಮಾತ್ರ ಫೋರ್ಕ್‌ನಿಂದ ತಿಂದು, ಹಿಟ್ಟಿನ ಗಟ್ಟಿಯಾದ ಹೊರ ಅಂಚನ್ನು (ಇoಠಿ) ಹಾಗೆಯೇ ಬಿಟ್ಟುಬಿಡುತ್ತಾರೆ.

ಇದೂ ಸಹ ಕೊಬ್ಬಿನ ಅಂಶ ಅಧಿಕವಾಗಲು ಕಾರಣ. ಟ್ರಂಪ್ ಅವರ ಈ ವಿಚಿತ್ರ ಆಹಾರ ಅಭ್ಯಾಸದ ಬಗ್ಗೆ ಪತ್ರಕರ್ತರೊಬ್ಬರು ಕೇಳಿದಾಗ, ‘ನನ್ನ ನಾಲಗೆ, ನನ್ನ ರುಚಿ, ನನ್ನ ಇಷ್ಟ, ನಿಮಗೇನು ಕಷ್ಟ?’ ಎಂದು ಸಮರ್ಥಿಸಿಕೊಂಡಿದ್ದರು. ಟ್ರಂಪ್ ಈ ಧೋರಣೆ ಪಾಲಕರಿಗೆ ಸಮಸ್ಯೆಯಾಗಿದೆ. ‘ಬರ್ಗರ್ ಮತ್ತು ಕೋಕ್ ವಿಷವಾಗಿದ್ದಿದ್ದರೆ, ಟ್ರಂಪ್ ಅವನ್ನು ಸೇವಿಸುತ್ತಿರಲಿಲ್ಲ. ಅಷ್ಟಕ್ಕೂ ಅವುಗಳ ಸೇವನೆ ಯಿಂದ ಅವರಿಗೆ ಏನೂ ಆಗಿಲ್ಲವಲ್ಲ’ ಎಂಬುದು ಮಕ್ಕಳ ವಾದ.

ಮಕ್ಕಳು ಸಾಮಾನ್ಯವಾಗಿ ತಮಗಿಷ್ಟವಾದ ವಿಷಯಗಳಿಗೆ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳನ್ನು ಅಥವಾ ಪ್ರಭಾವಿ ನಾಯಕರನ್ನು ನಿದರ್ಶನವಾಗಿ ಮುಂದಿಡುತ್ತಾರೆ. ಅಮೆರಿಕದ ಅಧ್ಯಕ್ಷರಂಥ ಅತ್ಯುನ್ನತ ಸ್ಥಾನದಲ್ಲಿರುವವರೇ ಬರ್ಗರ್, ಫ್ರೆಂಚ್ ಫ್ರೈಸ್ ತಿಂದು ಡಯಟ್ ಕೋಕ್ ಕುಡಿಯುವುದನ್ನು ನೋಡಿದಾಗ, ಮಕ್ಕಳು ಸ್ವಾಭಾವಿಕವಾಗಿಯೇ ‘ಅಷ್ಟು ದೊಡ್ಡ ನಾಯಕರೇ ತಿನ್ನುವಾಗ ನಾವೇಕೆ ತಿನ್ನಬಾರದು?’ ಎಂದು ಪೋಷಕರನ್ನು ಪ್ರಶ್ನಿಸುವುದು ಸಹಜ.

ಇಂಥ ಸಂದರ್ಭಗಳಲ್ಲಿ ಪೋಷಕರು ಕಟುವಾಗಿ ವಿರೋಧಿಸುವ ಬದಲು, ಮಕ್ಕಳಿಗೆ ವಾಸ್ತವವನ್ನು ಅರ್ಥಮಾಡಿಸಬೇಕಾಗುತ್ತದೆ. ರಾತ್ರಿ ಕೇವಲ ನಾಲ್ಕೈದು ಗಂಟೆಗಳ ಕಾಲ ಮಾತ್ರ ನಿದ್ರಿಸುವ ಟ್ರಂಪ್, ಮುಂಜಾನೆ ಮತ್ತು ತಡರಾತ್ರಿಯಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. ತಮ್ಮ ಅಧಿಕೃತ ನಿರ್ಧಾರಗಳು, ಸಚಿವರ ವಜಾ ಅಥವಾ ಎದುರಾಳಿಗಳ ಮೇಲಿನ ಟೀಕೆಗಳನ್ನು ನೇರವಾಗಿ ಪೋಸ್ಟ್‌ಗಳ ಮೂಲಕವೇ ಪ್ರಕಟಿಸಿ ಜಗತ್ತನ್ನೇ ಬೆಚ್ಚಿಬೀಳಿಸುತ್ತಾರೆ.

ಕೀಟಾಣುಗಳೆಂದರೆ ಅವರಿಗೆ ಅತಿಯಾದ ಭಯ. ಇತರರೊಂದಿಗೆ ಹಸ್ತಲಾಘವ ಮಾಡಲು ಹಿಂಜರಿ ಯುವ ಅವರು, ಲಿಫ್ಟ್ ಬಟನ್ ಮುಟ್ಟಲೂ ಇಷ್ಟಪಡುವುದಿಲ್ಲ. ಜತೆಗೆ, ಮನುಷ್ಯನ ದೇಹವು ಕರಗದ ಬ್ಯಾಟರಿಯಂತಿದ್ದು, ವ್ಯಾಯಾಮ ಮಾಡಿದರೆ ಶಕ್ತಿ ಬೇಗ ಮುಗಿದುಹೋಗುತ್ತದೆ ಎಂಬ ವಿಚಿತ್ರ ಸಿದ್ಧಾಂತವನ್ನು ಅವರು ನಂಬುತ್ತಾರಂತೆ.

ರಾಜತಾಂತ್ರಿಕ ಸಭೆಗಳಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಮುರಿದು, ಜಾಗತಿಕ ನಾಯಕರನ್ನು ಅವರ ಬೆನ್ನಹಿಂದೆಯೇ ವಿಚಿತ್ರ ಅಡ್ಡಹೆಸರುಗಳಿಂದ ಕರೆಯುವುದು ಮತ್ತು ಸಾರ್ವಜನಿಕವಾಗಿ ರೇಗಿಸುವುದು ಅವರ ಸಾಮಾನ್ಯ ನಡೆವಳಿಕೆ. ಹಾಗಾದರೆ ಅಮೆರಿಕ ಅಧ್ಯಕ್ಷರು ಯಾವ ಮೇಲ್ಪಂಕ್ತಿ ಯನ್ನು ಹಾಕಿಕೊಡುತ್ತಿದ್ದಾರೆ?