Kiran Upadhyay Column: ಸಂದೇಶ ಕೊಡುತ್ತ ಸಂದೇಶವೇ ಆದರು
ನಾವು ಅವರೊಂದಿಗೆ ಆತ್ಮೀಯರಾಗ ದಿದ್ದರೂ, ಅವರಿಂದ ಪ್ರಭಾವಿತರಾಗುತ್ತೇವೆ, ಅವರನ್ನು ಇಷ್ಟಪಡಲು ಆರಂಭಿಸುತ್ತೇವೆ. ನನ್ನ ಮತ್ತು ಶ್ರೀಧರ ಭಟ್ ಕಾಸರಕೋಡರ ಸಂಬಂಧ ಅಂಥದ್ದು. ಮುಂದೊಂದು ದಿನ ನಾವು ಆತ್ಮೀಯರಾಗುತ್ತಿದ್ದೆವೋ ಏನೋ, ಆದರೆ ಅವರು ಕಾಲನಲ್ಲಿ ಲೀನವಾಗಿ ಆ ಅವಕಾಶವನ್ನು ನನಗೆ ತಪ್ಪಿಸಿದ್ದಾರೆ. ಆ ಕಾರಣಕ್ಕಾಗಿ ಅವರ ಕುರಿತು ಸಂತಾಪದ ಜತೆಗೆ ಸಾತ್ವಿಕ ಸಿಟ್ಟೂ ಇದೆ.
-
ವಿದೇಶವಾಸಿ
ಕೆಲವು ವ್ಯಕ್ತಿಗಳು ಆತ್ಮೀಯರಾಗಬೇಕಾದರೆ ಒಂದಷ್ಟು ಬಾರಿ ಭೇಟಿಯಾಗಬೇಕಾಗುತ್ತದೆ, ಹಲವು ಮಾತುಕತೆಗಳು, ಪರಸ್ಪರ ವಿಚಾರ ವಿನಿಮಯ, ಹೊಂದಾಣಿಕೆ ಇತ್ಯಾದಿಗಳು ನಡೆಯಬೇಕಾಗುತ್ತದೆ. ಇನ್ನು ಕೆಲವರೊಂದಿಗೆ ಮೊದಲ ಭೇಟಿಯಿಂದಲೇ ಆತ್ಮೀಯತೆ ಬೆಳೆದುಬಿಡುತ್ತದೆ. ಅವರ ನಡತೆ, ಗುಣ, ವ್ಯವಹಾರ, ಯಾವುದೋ ಒಂದು ನಮ್ಮನ್ನು ಸೆಳೆದುಬಿಡುತ್ತದೆ. ಇವೆರಡರ ಹೊರತಾಗಿ ಇನ್ನೊಂದಿದೆ, ಆರಂಭದಲ್ಲಿ ಅವರ ಮಾತು, ವಿಚಾರ, ಕಲೆ ಯಾವುದರಿಂದಲೂ ಅವರು ನಮ್ಮ ಮೇಲೆ ಪ್ರಭಾವ ಬೀರುವುದಿಲ್ಲ. ಆದರೆ ಒಂದು ಮುಖತಃ ಭೇಟಿ ಅಥವಾ ಒಂದು ಸಂದರ್ಭ ಅವರ ಕುರಿತಾಗಿ ನಾವು ಇಟ್ಟುಕೊಂಡಿದ್ದ ಅಭಿಪ್ರಾಯ ಬದಲಾಗುವಂತೆ ಮಾಡುತ್ತದೆ.
ನಾವು ಅವರೊಂದಿಗೆ ಆತ್ಮೀಯರಾಗ ದಿದ್ದರೂ, ಅವರಿಂದ ಪ್ರಭಾವಿತರಾಗುತ್ತೇವೆ, ಅವರನ್ನು ಇಷ್ಟಪಡಲು ಆರಂಭಿಸುತ್ತೇವೆ. ನನ್ನ ಮತ್ತು ಶ್ರೀಧರ ಭಟ್ ಕಾಸರಕೋಡರ ಸಂಬಂಧ ಅಂಥದ್ದು. ಮುಂದೊಂದು ದಿನ ನಾವು ಆತ್ಮೀಯರಾಗುತ್ತಿದ್ದೆವೋ ಏನೋ, ಆದರೆ ಅವರು ಕಾಲನಲ್ಲಿ ಲೀನವಾಗಿ ಆ ಅವಕಾಶವನ್ನು ನನಗೆ ತಪ್ಪಿಸಿದ್ದಾರೆ. ಆ ಕಾರಣಕ್ಕಾಗಿ ಅವರ ಕುರಿತು ಸಂತಾಪದ ಜತೆಗೆ ಸಾತ್ವಿಕ ಸಿಟ್ಟೂ ಇದೆ.
ಸುಮಾರು ಮೂವತ್ತೈದು ವರ್ಷದ ಹಿಂದೆ ಬಡಗು ತಿಟ್ಟಿನ ಯಕ್ಷಗಾನದ ರಂಗ ಪ್ರವೇಶ ಮಾಡಿದ ವರು ಶ್ರೀಧರ ಕಾಸರಕೋಡು. ಆಗ ನಾಟ್ಯದಲ್ಲಿ ಹೆಜ್ಜೆ ಚುರುಕಾಗಿತ್ತು ಎನ್ನುವುದನ್ನು ಬಿಟ್ಟರೆ, ಯಕ್ಷಗಾನಕ್ಕೆ ಬೇಕಾದ ಶರೀರ, ಶಾರೀರ ಎರಡೂ ಅವರಲ್ಲಿ ಇಲ್ಲ ಎನ್ನುವುದು ನನ್ನನ್ನೂ ಸೇರಿದಂತೆ ಬಹುಜನರ ಅಭಿಪ್ರಾಯವಾಗಿತ್ತು. ಅವರು ಯಕ್ಷಗಾನ ಕ್ಷೇತ್ರಕ್ಕೆ ಬಂದು ಮೊದಲ ಹತ್ತು ವರ್ಷ ನಾನು ಅವರನ್ನು ಅಷ್ಟೊಂದು ಇಷ್ಟಪಟ್ಟಿರಲಿಲ್ಲ ಎನ್ನುವುದು ಸತ್ಯ. ಅಥವಾ ಅವರ ಕುರಿತಾಗಿ ಸಣ್ಣ ಅಪೇಕ್ಷೆಯಾಗಲಿ, ಆಸಕ್ತಿಯಾಗಲಿ ಇರಲಿಲ್ಲ. ಅವರು ರಂಗದಲ್ಲಿ ಏನೇ ಮಾಡಿದರೂ, ಅದರಲ್ಲಿ ತಪ್ಪು ಹುಡುಕಲು ನನ್ನೊಳಗಿರುವ (ಅಪ್ರಬುದ್ಧ!?) ವಿಮರ್ಶಕ ಜಾಗೃತನಾಗುತ್ತಿದ್ದ. ಆರಂಭದ ವರ್ಷಗಳಲ್ಲಿ, ‘ಅವರು ತೀರಾ ಬಾಲಿಷವಾಗಿ ಮಾತನಾಡುತ್ತಾರೆ,’ ‘ಅವರ ಮಾತಿನಲ್ಲಿ ಅಧಿಕಪ್ರಸಂಗತನ ಹೆಚ್ಚು’ ಎಂದು ಕೆಲವು ಯಕ್ಷಗಾನ ಕಲಾವಿದರಲ್ಲಿ, ಆಯೋಜಕರಲ್ಲಿ ನಾನೇ ಹೇಳಿದ್ದಿದೆ.
ಇದನ್ನೂ ಓದಿ: Kiran Upadhyay Column: ನೇತಾಜಿಯನ್ನೇ ಮಣಿಸಿದ್ದ ರಾಜಮಣಿ!
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಶಿರಸಿಯಲ್ಲಿ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ಆಯೋಜಿಸಿದ್ದೆ. ಸುಬ್ರಹ್ಮಣ್ಯ ಚಿಟ್ಟಾಣಿಯವರು ಅದರ ಉಸ್ತುವಾರಿ ವಹಿಸಿಕೊಳ್ಳುವುದು ಎಂದು ನಿಘಂಟಾಯಿತು. ದಾರುಕನ ಪಾತ್ರಕ್ಕೆ ಅವರು ಶ್ರೀಧರ ಕಾಸರಕೋಡರ ಹೆಸರು ಸೂಚಿಸಿದರು. ನನಗೆ ಅಪ್ಪೂಟು ಮನಸ್ಸಿರಲಿಲ್ಲ. ಸುಮಾರು ಚರ್ಚೆಯ ನಂತರ, ‘ಕಾಸರಕೋಡು ಅಧಿಕಪ್ರಸಂಗದ ಮಾತಾಡದಿದ್ದರೆ ಆಗಬಹುದು’ ಎಂದೆ. ಆ ಜವಾಬ್ದಾರಿಯನ್ನು ತಾನು ತೆಗೆದುಕೊಳ್ಳುವುದಾಗಿ ಚಿಟ್ಟಾಣಿ ಹೇಳಿದರು.
ಅವರು ಕಾಸರಕೋಡರಿಗೆ ಹೇಳಲು ಮರೆತಿದ್ದರೋ, ಅಥವಾ ಅವರು ಕಾಸರಕೋಡರಿಗೆ ಹೇಳಿಯೂ ಕಾಸರಕೋಡರೇ ಮರೆತಿದ್ದರೋ ಗೊತ್ತಿಲ್ಲ, ದಾರುಕನ ಪಾತ್ರದ ಪ್ರವೇಶವಾಗಿ ಕೆಲವೇ ನಿಮಿಷಗಳಲ್ಲಿ ಕಾಸರಕೋಡರು ಚೌಕಟ್ಟನ್ನು ಸ್ವಲ್ಪ ಮೀರಿ ಮಾತನಾಡಿದಂತೆ ಅನ್ನಿಸಿತು. ಕೂಡಲೇ ಸುಬ್ರಹ್ಮಣ್ಯ ಚಿಟ್ಟಾಣಿ ಕಾಸರಕೋಡರಿಗೆ ಸನ್ನೆ ಮಾಡಿದರು. ಅದನ್ನು ಗ್ರಹಿಸಿದ ಕಾಸರಕೋಡರು ಮಿತಿಯನ್ನು ದಾಟಿ ಹೋಗಲಿಲ್ಲ. ದಾರುಕನ ಪಾತ್ರ ಅಚ್ಚುಕಟ್ಟಾಗಿ ಮುಗಿಯಿತು. ಅದಾಗಿ ಸುಮಾರು ಐದು-ಆರು ವರ್ಷ ನಾನು ಕಾಸರಕೋಡರ ವೇಷ ನೋಡುವ ಅವಕಾಶ ಸಿಗಲಿಲ್ಲ. ಆದರೆ, ನಂತರ ನಾನು ಭೇಟಿಯಾದ ಕಾಸರಕೋಡರು ಬೇರೆಯವರೇ ಆಗಿದ್ದರು.
ಅಂದು ನಾನು ಕಾಸರಕೋಡರನ್ನು ಭೇಟಿಯಾದದ್ದು ಚೌಕಿ ಮನೆಯಲ್ಲಿ. ಅವರು ವೇಷಕ್ಕೆ ಕುಳಿತು ಕೊಳ್ಳಲು ಇನ್ನೂ ಸಮಯವಿತ್ತು. ಅಂದಿನ ಆಟದಲ್ಲಿ ಸಾಕಷ್ಟು ಯುವ ಕಲಾವಿದರಿದ್ದರು. ಸ್ವಾಭಾವಿಕ ಚೌಕಿ ಮನೆಯ ಮಾತುಕತೆ, ಪದ್ಯದ ಆಯ್ಕೆ, ಸನ್ನಿವೇಶ ಸೃಷ್ಟಿ ಇತ್ಯಾದಿಗಳ ಕುರಿತಾಗಿ ಚರ್ಚೆ ನಡೆಯುತ್ತಿತ್ತು. ಅಂದು ಕಾಸರಕೋಡು ಯುವ ಕಲಾವಿದರಿಗೆ ನೀಡಿದ ಸಲಹೆ ನನ್ನ ಕಿವಿಯಲ್ಲಿ ಇಂದಿಗೂ ಮಾರ್ದನಿಸುತ್ತಿದೆ.
ಅಂದು ಕಾಸರಕೋಡರು ಚೌಕಿ ಮನೆಯಲ್ಲಿ ‘ನೀವೆಲ್ಲ ವೇಷ ಮಾಡುತ್ತಿದ್ದೀರಿ. ನಿಮ್ಮಲ್ಲಿ ಕೆಲವರು ಜನಪ್ರಿಯತೆಯನ್ನೂ ಗಳಿಸಿದ್ದೀರಿ, ನಾನು ಹೇಳಿದರೆ ಒಬ್ಬ ಹಾಸ್ಯದ ಪಾತ್ರ ಮಾಡುವವ ನಮಗೆ ಹೇಳುತ್ತಿzನೆ ಎಂದು ನಿಮಗೆ ಅನ್ನಿಸಬಹುದು, ನೀವೆಲ್ಲ ಬರೀ ವೇಷ ಮಾಡಿದರೆ ಸಾಲದು, ಪಾತ್ರ ಮಾಡಬೇಕು’ ಎಂದರು. ಆಗ ಅಲ್ಲಿದ್ದ ಯುವ ಕಲಾವಿದರೊಬ್ಬರು ‘ಶ್ರೀಧರಣ್ಣ, ವೇಷ ಮತ್ತು ಪಾತ್ರದ ನಡುವಿನ ವ್ಯತ್ಯಾಸವೇನು?’ ಎಂದು ಕೇಳಿದರು. ಆಗ ‘ವೇಷ ಯಾರು ಬೇಕಾದರೂ ಮಾಡಬಹುದು, ಕುಣಿತ ಕಲಿತ ಯಾರಾದರೂ ರಂಗದಲ್ಲಿ ಒಂದಷ್ಟು ಕುಣಿಯಬಹುದು. ಅಷ್ಟೇ ಸಾಲುವುದಿಲ್ಲ.
ಯಕ್ಷಗಾನದಲ್ಲಿ ಬಹಳಷ್ಟು ವೇಷಗಳು ನೋಡಲು ಒಂದೇ ರೀತಿಯಾಗಿ ಕಾಣಿಸುತ್ತವೆ. ಆದರೆ ಬಾಯಿ ಬಿಟ್ಟರೆ ಮಾತ್ರ ಅದು ಯಾವ ಪಾತ್ರ ಎಂದು ತಿಳಿಯುತ್ತದೆ. ಉದಾಹರಣೆಗೆ, ಕೌರವ, ಅರ್ಜುನ, ಕಾರ್ತವೀರ್ಯಾರ್ಜುನ, ಇತ್ಯಾದಿ ವೇಷದಲ್ಲಿ ಬಹಳಷ್ಟು ಸಾಮ್ಯ ಇದೆ. ಅದೇ ಅಂಗಿ, ಅದೇ ಕಿರೀಟ, ಅದೇ ಮೀಸೆ, ವಗೈರೆ, ವಗೈರೆ. ಹೆಚ್ಚು ಎಂದರೆ ಹಣೆಯ ಮೇಲೆ ಹಾಕುವ ನಾಮ ಮತ್ತು ಮುಖದ ಮೇಲಿನ ಮುದ್ರೆಯಿಂದ ಕೆಲವು ಪಾತ್ರಗಳನ್ನು ಊಹಿಸುವಂತೆ ಮಾಡಬಹುದು. ಆದರೆ ನಿಜವಾದ ಪಾತ್ರದ ಪರಿಚಯ ಆಗುವುದು ಮಾತಿನಿಂದ.
ವೇಷ ಹಾಕಿಕೊಂಡು ಬಂದವನ ಮಾತಿನ ಶೈಲಿ, ಓಘ, ಏರಿಳಿತ, ಇವೆಲ್ಲ ಪಾತ್ರವನ್ನು ತುಂಬಿ ಕೊಡುತ್ತವೆ. ಅದರೊಂದಿಗೆ ಪ್ರತಿಯೊಂದು ಪಾತ್ರವೂ ಒಂದು ಸಂದೇಶವನ್ನು ಕೊಟ್ಟು ಹೋದರೆ ಆ ಪಾತ್ರ ಪರಿಪೂರ್ಣವಾಗುತ್ತದೆ. ಒಂದು ಕಥಾಭಾಗದಲ್ಲಿ ಕುಣಿತ, ಹಾಸ್ಯ ಎಲ್ಲವೂ ಬೇಕು. ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಸಂದೇಶ ಬೇಕು. ಹೇಗೆ ಪ್ರತಿಯೊಂದು ಕಥೆಯಲ್ಲಿಯೂ ಸಂದೇಶ ವಿರುತ್ತದೆಯೋ, ಹಾಗೆಯೇ ಪ್ರತಿಯೊಂದು ಪಾತ್ರದಲ್ಲಿಯೂ ಸಂದೇಶವಿರುತ್ತದೆ.
ಕೆಲವರು ಯಕ್ಷಗಾನದಲ್ಲಿ ಬಂದು ಹೋಗುವ ಹಾಸ್ಯ ಪಾತ್ರಗಳು ಕೇವಲ ಮನರಂಜನೆಗಾಗಿ ಎಂದು ತಿಳಿದಿದ್ದಾರೆ. ಖಂಡಿತವಾಗಿಯೂ ಹಾಗಲ್ಲ. ಹಾಸ್ಯ ಪಾತ್ರ ಮಾಡುವ ಹಾಸ್ಯಗಾರನೇ ಆದರೂ ಒಂದು ಸಂದೇಶವನ್ನು ಕೊಟ್ಟು ಹೋಗಬೇಕು. ಪಾತ್ರ ಮುಗಿಸಿ ಚೌಕಿ ಮನೆಗೆ ಹೋಗುವುದರೊಳಗೆ ಒಂದು ಸಂದೇಶ ಕೊಟ್ಟು ಹೋದರೆ ಮಾತ್ರ ಆತ ಸಮರ್ಥ ಹಾಸ್ಯಗಾರ ಎಂದು ಕರೆಸಿಕೊಳ್ಳುತ್ತಾನೆ. ಅದಕ್ಕೆ ಸಿದ್ಧತೆ ಬೇಕು. ಆ ಸಿದ್ಧತೆಗೆ ತಕ್ಕ ಅಧ್ಯಯನ ಬೇಕು’ ಎಂದು ಶ್ರೀಧರ ಭಟ್ಟರು ಸುಮಾರು ಹತ್ತು-ಹದಿನೈದು ನಿಮಿಷ ವಿಸ್ತಾರವಾಗಿ ವಿವರಿಸಿದರು. ಅಂದು ಮೊದಲ ಬಾರಿ ನಾನು ಅವರಿಂದ ಪ್ರಭಾವಿತನಾಗಿದ್ದೆ. ಅದೂ ಚೌಕಿಮನೆಯಲ್ಲಿ!
ಅಲ್ಲಿಂದ ಮುಂದೆ ಸಾಕಷ್ಟು ವರ್ಷ ಅವರ ಪಾತ್ರಗಳನ್ನು ರಂಗದಲ್ಲಿ ಪ್ರತ್ಯಕ್ಷವಾಗಿಯೂ ಯೂಟ್ಯೂಬ್‌ಗಳಲ್ಲಿಯೂ ಸಾವಿರಾರು ಸಲ ನೋಡಿದ್ದೇನೆ. ನಾನು ಕೆಲವು ವರ್ಷಗಳ ಹಿಂದೆ ಕಂಡಿದ್ದ ಕಾಸರಕೋಡು ಇವರೇ ಹೌದೇ ಅನ್ನುವಷ್ಟರ ಮಟ್ಟಿಗೆ ಅವರು ಬದಲಾಗಿದ್ದರು. ಅವರ ಪಾತ್ರಗಳನ್ನು ಯಕ್ಷಗಾನದ ಅಭಿಮಾನಿಗಳೆಲ್ಲರೂ ನೋಡಿರುತ್ತಾರೆ, ಮಾತುಗಳನ್ನು ಕೇಳಿರುತ್ತಾರೆ ಎನ್ನುವುದು ನನ್ನ ನಂಬಿಕೆಯಾದ್ದ ರಿಂದ, ಅದರ ಕುರಿತು ಇಲ್ಲಿ ಹೆಚ್ಚೇನೂ ಹೇಳುವುದಿಲ್ಲ.
ದಿನ ಕಳೆದಂತೆ ನಾನು ಅವರ ದೊಡ್ಡ ಅಭಿಮಾನಿಯಾಗಿ ಬದಲಾದೆ. ನನ್ನ ಬಳಿ ಯಾರಾದರೂ ಹಾಸ್ಯಕ್ಕೆ ಒಳ್ಳೆಯ ಹೆಸರು ಸೂಚಿಸಿ ಎಂದು ಕೇಳಿದರೆ ನನ್ನ ಬಾಯಲ್ಲಿ ಮೊದಲು ಬರುವ ಹೆಸರು ಕಾಸರಕೋಡರದ್ದಾಗಿರುತ್ತಿತ್ತು. ಅವರನ್ನು ಬಹ್ರೈನ್, ದುಬೈನಂತಹ ವಿದೇಶಗಳಿಗೂ ಪರಿಚಯಿಸ ಬೇಕು ಎನ್ನುವ ಬಯಕೆಯೂ ಬಲವಾಗಿತ್ತು.
ಎಲ್ಲಿಯವರೆಗೆ ಎಂದರೆ, ಅವರ ಕೆಲವು ಹಾಸ್ಯದ ಭಾಗಗಳನ್ನು ಆಯ್ದು ಅದನ್ನು ಅಕ್ಷರ ರೂಪಕ್ಕೆ ತರಬೇಕು ಎನ್ನುವಲ್ಲಿಯವರೆಗೆ ನಾನು ಪ್ರಭಾವಿತನಾಗಿದ್ದೆ. ಹಾಗಂತ ಆಗಲೂ, ನನಗೂ ಅವರಿಗೂ ಪರಿಚಯವಿತ್ತೇ ವಿನಃ ನಾವಿಬ್ಬರೂ ಆತ್ಮೀಯರಾಗಿರಲಿಲ್ಲ. ದೀರ್ಘ ಕಾಲ ಒಬ್ಬರ ಅಭಿಮಾನಿ ಯಾಗಿರುವುದಕ್ಕೆ ಆತ್ಮೀಯರೇ ಆಗಿರಬೇಕೆಂದೇನೂ ಇಲ್ಲ ಎನ್ನುವುದಕ್ಕೆ ನನ್ನ ಮತ್ತು ಕಾಸರಕೋಡರ ಸಂಬಂಧವೇ ಸಾಕ್ಷಿ. ಮುಂದೊಂದು ದಿನ ಆತ್ಮೀಯರಾಗುತ್ತಿದ್ದೆವೋ ಏನೋ, ಅವರು ಅವಕಾಶ ಕೊಡಲಿಲ್ಲ.
ಕಾಸರಕೋಡರು ಹಾಸ್ಯಗಾರರಾಗಿ ಆ ಮಟ್ಟಕ್ಕೆ ಬೆಳೆಯಲು ಕಾರಣ ಅವರಲ್ಲಿರುವ ಪ್ರತ್ಯುತ್ಪನ್ನ ಮತಿತ್ವ ಮತ್ತು ಯಕ್ಷಗಾನದ ಕುರಿತಾಗಿಯೇ ಇದ್ದ ಚಿಂತನೆ. ಸಾಮಾನ್ಯ ಹಾಸ್ಯದ ಪರಿಧಿಯನ್ನು ಮೀರಿ ಅವರು ಆಲೋಚಿಸಿತ್ತಿದ್ದರು, ಮಥಿಸುತ್ತಿದ್ದರು, ಹಾಸ್ಯದಲ್ಲಿ ಹೊಸತನವನ್ನು ನೀಡುವಲ್ಲಿ ಸಫಲರಾಗಿದ್ದರು. ಆ ಕಾರಣಕ್ಕಾಗಿ ಅವರ ಶೂರ್ಪನಖಿ ಕಲ್ಯಾಣದ ವಿದ್ಯುಜ್ಜಿಹ್ವ, ಚಿತ್ರಾಕ್ಷಿ ಕಲ್ಯಾಣದ ಅಜ್ಜಿ, ಚಂದ್ರಾವಳಿ ವಿಲಾಸದ ಅಜ್ಜಿ, ನಂದಗೋಪ, ಭೂಕೈಲಾಸದ ಗಣಪತಿ ಭಟ್ಟ, ಹೀಗೆ ಸಾಕಷ್ಟು ಪಾತ್ರಗಳು ಇತರರಿಗಿಂತ ಭಿನ್ನವಾಗಿರುತ್ತಿದ್ದವು. ಪೌರಾಣಿಕ ಪಾತ್ರಗಳೊಂದಿಗೆ, ನೂತನ ಪ್ರಸಂಗದಲ್ಲಿ ಬರುವ ಪಾತ್ರಗಳಿಗೂ ಅವರು ಸೈ ಎನ್ನಿಸಿಕೊಂಡಿದ್ದರು.
ಅವರು ರಂಗದಲ್ಲಿ ಬಳಸುತ್ತಿದ್ದ ಕೊಂಕಣಿ ಭಾಷೆಯಾಗಲಿ, ಇತ್ತೀಚಿನ ದಿನಬಳಕೆಯ ಪದಗಳಾಗಲಿ, ಒಂದು ಕ್ಷಣಕ್ಕೆ ‘ಅರೆ, ಇದೇನು ಹೇಳಿದರು?’ ಎಂದು ನಮಗೆ ನಾವೇ ಪ್ರಶ್ನೆ ಕೇಳಿಕೊಳ್ಳುವುದರ ಒಳಗೆ, ಅದಕ್ಕೆ ಹೊಂದಿಕೊಳ್ಳುವ ಉತ್ತರವನ್ನೋ, ಸಮಜಾಯಿಶಿಯನ್ನೋ ಹೇಳುತ್ತಿದ್ದರು. ತಾನು ಹೇಳಿದ್ದನ್ನು ಸಮರ್ಥಿಸಿಕೊಳ್ಳುವ ಚಾಕಚಕ್ಯತೆ ಅವರಲ್ಲಿತ್ತು.
ಈ ಸಂದರ್ಭದಲ್ಲಿ ನನಗೆ ನೆನಪಾಗುತ್ತಿರುವುದು, ಒಂದು ಯಕ್ಷಗಾನದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವರದ್ದು ರಕ್ಕಸ ರಾಜನ ಪಾತ್ರ, ಶ್ರೀಧರ ಕಾಸರಕೋಡರದ್ದು ದೂತನ ಹಾಸ್ಯ ಪಾತ್ರ. ಅವರಿಬ್ಬರ ನಡುವಿನ ಸಂಭಾಷಣೆ ಹೇಗಿತ್ತು ನೋಡಿ. ಚಿಟ್ಟಾಣಿ ಹೇಳುತ್ತಾರೆ, ‘ಜೀವನದಲ್ಲಿ ಲಯ ಮುಖ್ಯ, ಅದನ್ನು ಬಿಡಬಾರದು.’ ಅದಕ್ಕೆ ಕಾಸರಕೋಡು ಹೇಳುತ್ತಾರೆ, ‘ಲಯ ಇಲ್ಲದಿದ್ದರೆ ನೀವು ನನ್ನನ್ನು ಇಷ್ಟು ದಿನ ಇಟ್ಟುಕೊಳ್ಳುತ್ತಿದ್ದಿರೇ? ಬಹಳಷ್ಟು ಜನ ನನ್ನ ಲಯ ತಪ್ಪಿಸಬೇಕು ಎಂದು ಪ್ರಯತ್ನಪಟ್ಟರು. ಆದರೂ ನಾನು ಅದನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದೇನೆ. ಅದಕ್ಕೆ ನನಗೆ ನೀವೇ ಆದರ್ಶ.
ನಿಮ್ಮ ಗುಣಗಳಲ್ಲಿ ಉಳಿದದ್ದನ್ನು ಕಲಿಯಲು ಆಗಲಿಲ್ಲ, ಕಲಿತರೂ ಉಳಿಸಿಕೊಳ್ಳಲು ಆಗಲಿಲ್ಲ, ಅದರಿಂದ ಗಳಿಸಿಕೊಳ್ಳಲೂ ಆಗಲಿಲ್ಲ.’ ಚಿಟ್ಟಾಣಿ ಹೇಳುತ್ತಾರೆ, ‘ನಿನ್ನ ಮಾತಿನ ಅರ್ಥ ಆಗಲಿಲ್ಲ.’ ಕಾಸರಕೋಡರು ಹೇಳುತ್ತಾರೆ, ‘ನೀವು ಕಣ್ಣು ಬಿಟ್ಟರೆ ಸಾಕು, ಜನ ‘ಹೋ...’ ಎಂದು ಉದ್ಘರಿಸುತ್ತಾರೆ, ನಾವು ಜನರಿಂದ ‘ಹೋ...’ ಎನ್ನಿಸಿಕೊಳ್ಳಬೇಕಾದರೆ ಪ್ರಾಣವನ್ನೇ ಬಿಡಬೇಕು.’ ಆ ಸಂದರ್ಭದಲ್ಲಿ ಕಾಸರಗೋಡರ ಈ ಮಾತು ಹಾಸ್ಯವಾಗಿತ್ತು. ಇಂದು ಅದೇ ಮಾತು ಬಹಳ ಕರ್ಕಶವೂ, ಜೀವನದ ಕಟುಸತ್ಯವೂ ಆಗಿ ಕೇಳುತ್ತಿದೆ. ಆದರೆ, ಕಾಸರಕೋಡು ಕೂಡ ಪ್ರಾಣ ಬಿಡುವುದಕ್ಕೂ ಮೊದಲೇ ತಮ್ಮ ಹಾಸ್ಯದಿಂದ ಜನಪ್ರಿಯರಾಗಿದ್ದರು, ‘ಹೋ...’ ಅನ್ನಿಸಿಕೊಳ್ಳುತ್ತಿದ್ದರು ಎನ್ನುವುದೂ ಸತ್ಯವೇ. ಹಾಗಾದರೆ ಅವರು ಕೊನೆಯ ಕಾಲದಲ್ಲಿ ಲಯ ತಪ್ಪಿದರೇ? ಅವರೇ ತಪ್ಪಿದರೇ ಅಥವಾ ಯಾರಾದರೂ ತಪ್ಪಿಸಿದರೇ?
ಈಗ ನಿಜವಾಗಿಯೂ ಕಾಡುತ್ತಿರುವ ಪ್ರಶ್ನೆ ಎಂದರೆ, ಶ್ರೀಧರ ಕಾಸರಕೋಡರ ಈ ಅಕಾಲ ಮೃತ್ಯು ನ್ಯಾಯ ಯುತವಾದದ್ದೇ? ಈ ಸಾವಿಗೆ ಯಾರು ಹೊಣೆ? ಅವರು ತಮ್ಮ ಆರೋಗ್ಯದ ಕುರಿತಾಗಿ ಕಾಳಜಿ ತೆಗೆದುಕೊಳ್ಳ ಬಹುದಿತ್ತಲ್ಲವೇ? ತಮ್ಮ ಆರೋಗ್ಯವನ್ನೂ, ಬದುಕನ್ನೂ ಗಂಭೀರವಾಗಿ ಪರಿಗಣಿಸದೇ, ಹಾಸ್ಯವಾಗಿ ತೆಗೆದುಕೊಂಡರೇ?
ಕೆಲವು ವರ್ಷಗಳ ಹಿಂದೆ ಕಣ್ಣಿಮನೆ ಗಣಪತಿ ಭಟ್ ಅವರ ಮರಣವೂ ಯಕ್ಷಗಾನದ ಅಭಿಮಾನಿ ಗಳನ್ನು ಹೀಗೆಯೇ ಕಾಡಿದ್ದವು. ಈಗ ಶ್ರೀಧರ ಭಟ್ಟ ಕಾಸರಕೋಡರ ಮರಣವೂ ಅದೇ ರೀತಿ ಕಾಡುತ್ತಿದೆ. ಈ ರೀತಿಯ ಸಾವುಗಳು ಖಂಡಿತ ಸ್ವೀಕಾರಾರ್ಹವಲ್ಲ. ಇದು ಯಕ್ಷಗಾನದ ಅಭಿಮಾನಿ ಗಳನ್ನು ಮೋಸ ಮಾಡುವ ಸಾವು. ಇಲ್ಲವಾದರೆ ಪ್ರತಿನಿತ್ಯ ರಂಗದಲ್ಲಿ ಬೆವರು ಸುರಿಸುವ ಕಲಾವಿದನಿಗೆ, ಐವತ್ತೆರಡರ ವಯಸ್ಸು ಮರಣದ ವಯಸ್ಸಲ್ಲ. ಹಾಗಾದರೆ ಕಣ್ಣಿಮನೆಯವರ ಮರಣದಿಂದ ಯಾರೂ ಪಾಠ ಕಲಿಯಲಿಲ್ಲವೇ? ಈಗ ಶ್ರೀಧರ ಭಟ್ಟರ ಅಗಲುವಿಕೆಯಿಂದಾದರೂ ಪಾಠ ಕಲಿಯುತ್ತಾರೆಯೇ? ಕಲಾವಿದರು, ಅದರಲ್ಲೂ ಯಕ್ಷಗಾನ ಕಲಾವಿದರ ಬದುಕು ಸುಗಮವಲ್ಲ.
ರಾತ್ರಿ ನಿದ್ದೆಯಿಲ್ಲ, ಹೊತ್ತಿಗೆ ಸರಿಯಾಗಿ ಊಟ-ತಿಂಡಿಯಿಲ್ಲ, ಒಂದು ಕಡೆ ಆಟ ಕುಣಿದ ಸುಸ್ತು, ಇನ್ನೊಂದು ಕಡೆ ಪ್ರಯಾಣದ ಸುಸ್ತು, ಹೀಗೆಲ್ಲ ಇರುವಾಗ, ಆರೋಗ್ಯವನ್ನೂ ಅಲಕ್ಷಿಸಿದರೆ, ಯಾವ ದೇವರು ಕಾಪಾಡುತ್ತಾರೆ? ಇನ್ನಾದರೂ ಕಲಾವಿದರು ಪಾಠ ಕಲಿಯುತ್ತಾರೆಯೇ? ಇಂತಹ ಮರಣ ವನ್ನು ಸಮರ್ಥಿಸಿಕೊಳ್ಳುವುದಾದರೂ ಹೇಗೆ? ಪ್ರತಿ ಸಲವೂ ಒಬ್ಬ ಕಲಾವಿದನನ್ನು ಹೊಗಳಿ ಬರೆಯಬಾರದು ಎನ್ನುವ ಕಾರಣಕ್ಕೆ ಇಂತಹ ಮರಣ ಸಂಭವಿಸುತ್ತದೆಯೇ? ಈ ಕಾಲಘಟ್ಟದಲ್ಲಿ ತಮ್ಮ ಆರೋಗ್ಯದ ಕುರಿತಾಗಿ ಕೆಲವು ಪ್ರಶ್ನೆಗಳನ್ನು ಕಲಾವಿದರು ಕೇಳಿಕೊಳ್ಳಲೇಬೇಕು. ಆ ಪ್ರಶ್ನೆಗಳಿಗೆ ಅವರೇ ಉತ್ತರಿಸಬೇಕು.
ಶ್ರೀಧರ ಭಟ್ಟ ಕಾಸರಕೋಡು ಅವರು ಯುವ ಕಲಾವಿದರಿಗೆ ರಂಗಸ್ಥಳದಲ್ಲಿ ಪಾತ್ರಗಳನ್ನು ಹೇಗೆ ನಿರ್ವಹಿಸ ಬೇಕು, ಪ್ರೇಕ್ಷಕರಿಗೆ ಹೇಗೆ ಸಂದೇಶ ಕೊಡಬೇಕು ಎಂದು ಹೇಳುತ್ತಾ, ಇಂದು ನಿತ್ಯ ಬದುಕಿನ ಕುರಿತಾಗಿಯೂ ಸಂದೇಶ ಕೊಟ್ಟು, ಅವರೇ ಒಂದು ಸಂದೇಶವಾಗಿ ಹೋಗಿದ್ದಾರೆ. ಈಗ ಇದ್ದವರು ಅರ್ಥ ಮಾಡಿಕೊಡರೆ, ಅದು ಕಾಸರಕೋಡರಿಗೆ ಸಲ್ಲಿಸುವ ನಿಜ ಶ್ರದ್ಧಾಂಜಲಿ. ಸತ್ತಾಗ ಎರಡು ಹನಿ ಕಣ್ಣೀರು, ಹನ್ನೆರಡು ದಿನದ ಶೋಕ, ಹತ್ತು ಸಾಲಿನ ಸಂತಾಪ, ಎಲ್ಲರೂ ಮಾಡುವಂಥದ್ದು. ಅದರ ಜತೆಗೆ, ಅವರ ಮರಣದಿಂದ ಪಾಠ ಕಲಿತರೆ ಅದು ಕಾಸರಕೋಡರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ. ಈ ರೀತಿಯ ಮರಣ ಕಾಸರಕೋಡರದ್ದೇ ಕೊನೆಯದಾಗಲಿ.
ಓಮ್ ಶಾಂತಿ.