Kiran Upadhyay Column: ನೇತಾಜಿಯನ್ನೇ ಮಣಿಸಿದ್ದ ರಾಜಮಣಿ!
‘ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಲಾಯಿತು’ ಎಂಬುದು ಅಂದಿನ ಸುದ್ದಿಯಾಗಿತ್ತು. ಆ ಸುದ್ದಿ ಕೇಳಿದ ರಾಜಮಣಿ ಎಂಬ ನಾಲ್ಕು ವರ್ಷದ ಬಾಲೆಯ ಮನಸ್ಸಿನಲ್ಲಿ ಅಂದು ಸಾಕಷ್ಟು ಪ್ರಶ್ನೆಗಳು ಮೂಡಿದ್ದವು. ಭಗತ್ ಸಿಂಗ್ ಯಾರು? ಗಲ್ಲು ಶಿಕ್ಷೆ ಎಂದರೆ ಏನು? ಅವರನ್ನು ಯಾರು, ಯಾಕೆ ಗಲ್ಲಿಗೆ ಏರಿಸಿದರು? ಈ ಪ್ರಶ್ನೆಗಳಿಗೆ ತಂದೆಯಿಂದ ಉತ್ತರ ತಿಳಿದುಕೊಳ್ಳುತ್ತಿರುವ ಹೊತ್ತಿನಲ್ಲಿ, ಗಲ್ಲಿಗೇರಿದ್ದ ಭಗತ್ ಸಿಂಗ್ ರಾಜಮಣಿಯ ಅಂತರಾಳ ವನ್ನು ಆವರಿಸಿಕೊಂಡುಬಿಟ್ಟಿದ್ದರು.
-
ವಿದೇಶವಾಸಿ
ಅಂದು, ರೇಡಿಯೋದಲ್ಲಿ ಒಂದು ಸುದ್ದಿ ಪ್ರಸಾರವಾಗುತ್ತಿತ್ತು. ಅದು ಭಾರತದಿಂದ ಪ್ರಸಾರ ವಾಗುತ್ತಿದ್ದ ಸುದ್ದಿಯಾಗಿತ್ತು. ಅದೇ ಸುದ್ದಿ ಅಂದಿನ ಬರ್ಮಾ ದೇಶದಲ್ಲೂ ಪ್ರಸಾರವಾಗುತ್ತಿತ್ತು. ಬರ್ಮಾದ ರಂಗೂನ್ ನಗರದಲ್ಲಿರುವ ಮನೆಯೊಂದರಲ್ಲಿ ಆ ಸುದ್ದಿ ಕೇಳಿದ ಮನೆಮಂದಿಯೆಲ್ಲ ದಿಗ್ಭ್ರಾಂತರಾಗಿದ್ದರು. ಖುಷಿಯ ವಾತಾವರಣವಿದ್ದ ಮನೆಯನ್ನು ಇದ್ದಕ್ಕಿದ್ದಂತೆ ಸೂತಕದ ಛಾಯೆ ಆವರಿಸಿಕೊಂಡಿತ್ತು. ಅದೇ ಮನೆಯಲ್ಲಿ ನಾಲ್ಕು ವರ್ಷದ ಹೆಣ್ಣು ಮಗುವೊಂದು ಆಟವಾಡಿಕೊಂಡಿತ್ತು.
ಅಂದು ಪ್ರಸಾರವಾದ ಆಘಾತಕಾರಿ ಸುದ್ದಿಯನ್ನು ಆ ಪುಟ್ಟ ಕಿವಿಗಳೂ ಕೇಳಿಸಿಕೊಂಡಿದ್ದವು, ಮನೆಯ ವಾತಾವರಣ ಇದ್ದಕ್ಕಿದ್ದಂತೆ ಬದಲಾದ ದ್ದನ್ನು ಆ ಪುಟ್ಟ ಕಣ್ಣುಗಳು ಕಂಡಿದ್ದವು. ಆ ಸುದ್ದಿ ಮಗುವಿನಲ್ಲಿ ಯಾವ ಪರಿಪ್ರಮಾಣದಲ್ಲಿ ಪ್ರಭಾವ ಬೀರಿತು ಎಂದರೆ, ಮುಂದೊಂದು ದಿನ ಭಾರತದ ಹೊಸ ಇತಿಹಾಸಕ್ಕೆ ಅದು ನಾಂದಿಯಾಯಿತು.
‘ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಲಾಯಿತು’ ಎಂಬುದು ಅಂದಿನ ಸುದ್ದಿಯಾಗಿತ್ತು. ಆ ಸುದ್ದಿ ಕೇಳಿದ ರಾಜಮಣಿ ಎಂಬ ನಾಲ್ಕು ವರ್ಷದ ಬಾಲೆಯ ಮನಸ್ಸಿನಲ್ಲಿ ಅಂದು ಸಾಕಷ್ಟು ಪ್ರಶ್ನೆಗಳು ಮೂಡಿದ್ದವು. ಭಗತ್ ಸಿಂಗ್ ಯಾರು? ಗಲ್ಲು ಶಿಕ್ಷೆ ಎಂದರೆ ಏನು? ಅವರನ್ನು ಯಾರು, ಯಾಕೆ ಗಲ್ಲಿಗೆ ಏರಿಸಿದರು? ಈ ಪ್ರಶ್ನೆಗಳಿಗೆ ತಂದೆಯಿಂದ ಉತ್ತರ ತಿಳಿದುಕೊಳ್ಳುತ್ತಿರುವ ಹೊತ್ತಿನಲ್ಲಿ, ಗಲ್ಲಿಗೇರಿದ್ದ ಭಗತ್ ಸಿಂಗ್ ರಾಜಮಣಿಯ ಅಂತರಾಳ ವನ್ನು ಆವರಿಸಿಕೊಂಡುಬಿಟ್ಟಿದ್ದರು.
ರಾಜಮಣಿ ಭಗತ್‌ರನ್ನು ಆರಾಧಿಸತೊಡಗಿದಳು. ತಾನೂ ಭಗತ್ ಸಿಂಗ್‌ರಂತೆಯೇ ಆಗಬೇಕು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಬೇಕು, ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಬೇಕು ಎಂಬ ಬಯಕೆ ಉತ್ಕಟವಾಯಿತು. ಅಂದು ಭಗತ್‌ಗೆ ಗಲ್ಲು ಶಿಕ್ಷೆ ವಿಧಿಸಿದ್ದನ್ನು ನೇತಾಜಿ ಸುಭಾಶ್ಚಂದ್ರ ಬೋಸ್ ರಷ್ಟು ಕಟುವಾಗಿ ಬೇರೆ ಯಾರೂ ಟೀಕಿಸಿರಲಿಲ್ಲ. ಆದ್ದರಿಂದ ರಾಜಮಣಿಗೆ ನೇತಾಜಿಯೂ ಇಷ್ಟವಾಗತೊಡಗಿದರು.
ಇದನ್ನೂ ಓದಿ: Kiran Upadhyay Column: ಲಾರ್ಡ್ಸ್ ಎಂಬ ಕ್ರಿಕೆಟ್ ಕಾಶಿ
ನೇತಾಜಿಯ ಭಾಷಣ ಕೇಳುವುದು, ಪತ್ರಿಕೆಯಲ್ಲಿ ಬರುತ್ತಿದ್ದ ಅವರ ಚಿತ್ರಗಳನ್ನು, ಲೇಖನಗಳನ್ನು ಸಂಗ್ರಹಿಸುವುದು ಅವಳ ನಿತ್ಯದ ಕೆಲಸವಾಯಿತು. ಇದಾಗಿ ಸುಮಾರು ನಾಲ್ಕು ಐದು ವರ್ಷ ಕಳೆದರೂ ಭಗತ್ ಮಾತ್ರ ರಾಜಮಣಿಯ ಮನದಿಂದ ದೂರವಾಗಲಿಲ್ಲ. ರಾಜಮಣಿ ಮನೆಯಲ್ಲಿದ್ದ ಪಿಸ್ತೂಲನ್ನು ಕೈಗೆತ್ತಿಕೊಂಡಳು. ಹಿತ್ತಲಿನಲ್ಲಿ ಪಿಸ್ತೂಲು ಚಲಾಯಿಸುವ ಅಭ್ಯಾಸವನ್ನೂ ಮಾಡತೊಡಗಿದಳು.
ಹೀಗೆ ಅಭ್ಯಾಸ ಮಾಡುತ್ತಿರುವಾಗ ಒಂದು ದಿನ ಮೋಹನ್‌ದಾಸ್ ಕರಮಚಂದ್ ಗಾಂಽ ಅವಳ ಮನೆಗೆ ಬಂದರು. ರಾಜಮಣಿ ಗುಂಡು ಹಾರಿಸುವ ಅಭ್ಯಾಸ ಮಾಡುತ್ತಿರುವುದನ್ನು ನೋಡಿದರು. ‘ಹಿಂಸೆಯ ದಾರಿ ಒಳ್ಳೆಯದಲ್ಲ’ ಎಂದು ರಾಜಮಣಿಗೆ ಹೇಳಿದರು. ಆದರೆ ಅವರ ಮಾತು ರಾಜಮಣಿ ಯ ಮನಸ್ಸಿನಲ್ಲಿ ಯಾವುದೇ ಪ್ರಭಾವ ಬೀರಲಿಲ್ಲ. ‘ಹಿಂಸೆ ಒಳ್ಳೆಯದಲ್ಲ ಎಂದಾದರೆ, ಬ್ರಿಟಿಷರು ಭಾರತೀಯರಿಗೆ ಯಾಕೆ ಹಿಂಸೆ ಕೊಡುತ್ತಿದ್ದಾರೆ? ಅವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಬೇಕು’ ಅಂದುಕೊಂಡಳು. ಗಾಂಧೀಜಿ ಹೋದ ನಂತರ ಪುನಃ ಅಭ್ಯಾಸ ಆರಂಭಿಸಿದಳು.
ಬರ್ಮಾ ದೇಶದಲ್ಲಿರುವ ಪುಟ್ಟ ಬಾಲಕಿಗೂ, ಭಾರತಕ್ಕೂ ಏನು ಸಂಬಂಧ? ಅವಳೇಕೆ ಭಾರತದ ಪರ ಹೋರಾಡಬೇಕು? ಅಲ್ಲಿ ಗಾಂಧಿ ಏಕೆ ಬಂದರು? ಏಕೆಂದರೆ, ಆ ಕಾಲದಲ್ಲಿ ಬರ್ಮಾ ಮತ್ತು ಭಾರತದ ನಡುವೆ ಒಳ್ಳೆಯ ಬಾಂಧವ್ಯವಿತ್ತು. ಭಾರತದಿಂದ ಬರ್ಮಾಕ್ಕೆ ಅನೇಕ ಭಾರತೀಯರು ಕೆಲಸಕ್ಕೆ, ವ್ಯಾಪಾರಕ್ಕೆ ಹೋಗುತ್ತಿದ್ದರು. ಅವರೆಲ್ಲರೂ ಭಾರತಕ್ಕೆ ಸ್ವಾತಂತ್ರ್ಯ ಬಯಸುತ್ತಿದ್ದರು. ಹಾಗೆ ಹೋದವರಲ್ಲಿ ರಾಜಮಣಿಯ ತಂದೆಯೂ ಒಬ್ಬರಾಗಿದ್ದರು.
ಮೂಲತಃ ತಮಿಳುನಾಡಿನವ ರಾಗಿದ್ದ ಅವರು ಬರ್ಮಾದಲ್ಲಿ ಚಿನ್ನದ ಗಣಿಯ ಮಾಲೀಕರಾಗಿದ್ದರು. ಭಾರತದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಕ್ಕೆ ಧನ ಸಹಾಯ ಮಾಡುತ್ತಿದ್ದರು. ಅವರಿಗೆ ಗಾಂಧೀಜಿಯೊಂದಿಗೆ ಸ್ನೇಹವಿತ್ತು. ಗಾಂಧೀಜಿ ಆಗಾಗ ಅವರ ಮನೆಗೆ ಬಂದು ಹೋಗುತ್ತಿದ್ದರು. ಆದರೆ ರಾಜಮಣಿಗೆ ಗಾಂಧೀಜಿಗಿಂತಲೂ ನೇತಾಜಿ ಹೆಚ್ಚು ಇಷ್ಟವಾಗಿದ್ದರು.
ರಾಜಮಣಿಯ ಸಹಪಾಠಿಗಳಲ್ಲಿ, ಅವಳ ವಯಸ್ಸಿನ ಇತರ ಮಕ್ಕಳಲ್ಲಿ ಹೆಚ್ಚಿನವರು ನೇತಾಜಿಯನ್ನು ಮೆಚ್ಚಿಕೊಂಡಿದ್ದರು. ಅವರ ವಿಚಾರ, ಮಾತು, ‘ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ’ ಎಂಬ ಘೋಷವಾಕ್ಯ, ಇತ್ಯಾದಿಗಳಿಗೆ ಮಾರುಹೋದ ಅಂದಿನ ಯುವ ಜನಾಂಗ ದಲ್ಲಿ ರಾಜಮಣಿಯೂ ಒಬ್ಬಳಾಗಿದ್ದಳು. ರಾಜಮಣಿ ಬಹುಷಃ ಇತರರಿಗಿಂತ ಒಂದು ಬೊಗಸೆ ಹೆಚ್ಚೇ ನೇತಾಜಿಯ ಅಭಿಮಾನಿಯಾಗಿದ್ದಳು. ಅವರನ್ನು ಕಾಣಬೇಕು, ಅವರೊಂದಿಗೆ ಮಾತಾಡಬೇಕು, ತಾನೂ ಅವರ ಸೇನೆಯನ್ನು ಸೇರಿಕೊಳ್ಳಬೇಕು ಎಂದು ಪ್ರತಿನಿತ್ಯ ಕನಸು ತುಂಬಿಸಿಕೊಳ್ಳುತ್ತಿದ್ದಳು.
ಹೀಗಿರುವಾಗ ಒಂದು ದಿನ ‘ನೇತಾಜಿ ತಮ್ಮ ಸೇನೆಗೆ ದೇಣಿಗೆ ಒಟ್ಟು ಮಾಡುವುದಕ್ಕೆ ರಂಗೂನಿಗೆ ಬರುತ್ತಿದ್ದಾರೆ’ ಎಂಬ ವಿಷಯ ರಾಜಮಣಿಗೆ ತಿಳಿಯಿತು. ಅವಳು ದೇಣಿಗೆ ಒಟ್ಟು ಮಾಡಲು ನಿಗದಿ ಯಾದ ಸ್ಥಳಕ್ಕೆ ಹೋಗಿ ನೇತಾಜಿಯನ್ನು ಕಂಡಳು. ಅಂದು ತನ್ನಲ್ಲಿದ್ದ ಬಂಗಾರ, ಬೆಳ್ಳಿ, ವಜ್ರದ ಎಲ್ಲ ಬೆಲೆಬಾಳುವ ಒಡವೆಗಳನ್ನೂ ನೇತಾಜಿಗೆ ಕೊಟ್ಟು ಬಂದಳು. ಹೇಳಿ-ಕೇಳಿ ಬಂಗಾರದ ಗಣಿ ನಡೆಸುವ ಶ್ರೀಮಂತರ ಮಗಳಾಗಿದ್ದದ್ದರಿಂದ ಒಡವೆಗೆ ಕೊರತೆಯೇ ಇರಲಿಲ್ಲ. ಆದರೆ ಸಣ್ಣ ಪ್ರಾಯದ ಹೆಣ್ಣುಮಗಳಿಂದ ಅಷ್ಟು ಒಡವೆಗಳನ್ನು ಪಡೆಯುವಾಗ ಒಮ್ಮೆ ನೇತಾಜಿಯವರ ಕೈ ನಡುಗಿತ್ತು.
ಅಂದು ಸಾಯಂಕಾಲ ರಾಜಮಣಿ ಮನೆಗೆ ಬಂದಾಗ ಅಚ್ಚರಿ ಕಾದಿತ್ತು. ರಾಜಮಣಿ ಕೊಟ್ಟ ಒಡವೆ ಗಳನ್ನು ಹಿಂತಿರುಗಿಸಲು ನೇತಾಜಿ ಅವಳ ಮನೆಗೆ ಬಂದಿದ್ದರು. ಕೋಪಗೊಂಡ ರಾಜಮಣಿ, ‘ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಕರೆಕೊಟ್ಟ ನೀವು ನನ್ನ ಒಡವೆ ಯನ್ನು ಸ್ವೀಕರಿಸದೇ ಇರುವುದು ಎಷ್ಟು ಸರಿ? ನನ್ನಂಥವರು ಈ ಆಂದೋಲನದಲ್ಲಿ ಭಾಗಿಯಾಗ ಬಾರದೇ?’ ಎಂದು ಪ್ರಶ್ನಿಸಿದಳು.
‘ನನ್ನನ್ನು ನಿಮ್ಮ ಆಜಾದ್ ಹಿಂದ್ ಆರ್ಮಿಗೆ ಸೇರಿಸಿಕೊಂಡರೆ ಒಡವೆಗಳನ್ನು ಹಿಂದೆ ಪಡೆಯುತ್ತೇನೆ’ ಎಂದು ಖಡಾಖಡಿ ಹೇಳಿದಳು. ಸೇನೆಗೆ ಸೇರಿಕೊಳ್ಳಲು ಅವಳ ವಯಸ್ಸು ಸಣ್ಣದು ಎಂದು ನೇತಾಜಿ ಎಷ್ಟು ತಿಳಿಹೇಳಿದರೂ ಅವಳು ಕೇಳಲಿಲ್ಲ. ಬಹಳ ದಿನಗಳಿಂದ ಮನದಲ್ಲಿ ಹುದುಗಿದ್ದ ಬಯಕೆ ಯನ್ನು ಈಡೇರಿಸಿಕೊಳ್ಳದೇ, ನೇತಾಜಿಯನ್ನು ತನ್ನ ಮನೆಯಿಂದ ಕಳಿಸಿಕೊಡಬಾರದು ಎಂದು ರಾಜಮಣಿ ಶಪಥ ಮಾಡಿದಂತಿತ್ತು. ಬ್ರಿಟಿಷರಿಗೇ ಮಣಿಯದಿದ್ದ ನೇತಾಜಿ ಅಂದು ರಾಜಮಣಿಗೆ ಮಣಿದಿದ್ದರು. ಅಥವಾ ಯಾರಿಗೂ ಮಣಿಯದಿದ್ದ ನೇತಾಜಿಯನ್ನು ಅಂದು ರಾಜಮಣಿ ಮಣಿಸಿದ್ದಳು.
ನೇತಾಜಿ ರಾಜಮಣಿಗೆ ‘ಸರಸ್ವತಿ’ ಎಂದು ನಾಮಕರಣ ಮಾಡಿ, ಅಜಾದ್ ಹಿಂದ್ ಸೇನೆ ಅಥವಾ ಐಎನ್‌ಎ (ಇಂಡಿಯನ್ ನ್ಯಾಷನಲ್ ಆರ್ಮಿ)ಯ ಗಾಯಾಳುಗಳ ಆರೈಕೆ ಮಾಡುವ ದಾದಿಯ ಕೆಲಸಕ್ಕೆ ಸೇರಿಸಿ ಕೊಂಡರು. ಒಂದು ಕಡೆ ನೇತಾಜಿಯವರೊಂದಿಗೆ ಸೇರಿಕೊಂಡ, ಜತೆಗೆ ಹೊಸ ಕೆಲಸ ಕಲಿಯುತ್ತಿದ್ದ ಖುಷಿ ಇತ್ತಾದರೂ, ರಾಜಮಣಿಗೆ ಆ ಕೆಲಸದಲ್ಲಿ ಸಂಪೂರ್ಣ ಸಂತೋಷವಿರಲಿಲ್ಲ. ತಾನು ಇನ್ನೂ ಹೆಚ್ಚಿನದ್ದನ್ನು ಕೊಡಬೇಕು, ಸೇನೆಯ ಭಾಗವೇ ಆಗಬೇಕು ಎಂಬ ತುಡಿತ ಅವಳಲ್ಲಿತ್ತು.
ಒಮ್ಮೆ ಐಎನ್‌ಎಯ ಸೈನಿಕನೊಬ್ಬ ಬ್ರಿಟಿಷ್ ಸೈನಿಕನೊಂದಿಗೆ ಕದ್ದು ಮಾತನಾಡಿದ್ದನ್ನೂ, ಹಣ ಪಡೆದಿದ್ದನ್ನೂ ರಾಜಮಣಿ ನೋಡಿದಳು. ಆತ ಬ್ರಿಟಿಷರ ಗೂಢಚಾರಿಯಾಗಿ ಕೆಲಸ ಮಾಡುತ್ತಿzನೆ ಎನ್ನುವುದು ಅವಳಿಗೆ ಅರ್ಥವಾಯಿತು. ಈ ವಿಷಯ ವನ್ನು ರಾಜಮಣಿ ನೇತಾಜಿಗೆ ತಿಳಿಸಿದಳು. ಅವಳ ಮಾತು ಸತ್ಯ ಎಂದು ತಿಳಿಯಿತು. ಇದರಿಂದ ಪ್ರಭಾವಿತರಾದ ನೇತಾಜಿ ಅವಳನ್ನು ಆಜಾದ್ ಹಿಂದ್‌ನ ಮಹಿಳಾ ಪಡೆಗೆ ಸೇರಿಸಿಕೊಂಡರು. ಅಂದು ಆಕೆಯ ಕನಸು ನಿಜವಾಗಿಯೂ ನನಸಾಗಿತ್ತು. ಒಬ್ಬ ಸೇನಾನಿಗೆ ಬೇಕಾದ ಎಲ್ಲ ತರಬೇತಿಯನ್ನೂ ರಾಜಮಣಿ ಪಡೆದಳು. ಸೇನೆಯ ಝಾನ್ಸಿ ರಾಣಿ ತುಕಡಿಗೆ ರಾಜಮಣಿ ಸೇರಿಕೊಂಡಳು.
ಒಂದು ದಿನ ರಾಜಮಣಿಯ ಬಳಿಗೆ ಬಂದ ನೇತಾಜಿ, ಬ್ರಿಟಿಷ್ ಪಾಳಯದಲ್ಲಿ ಗೂಢಚಾರಿಣಿಯ ಕೆಲಸ ಮಾಡಬೇಕು ಎಂದು ಹೇಳಿದರು. ಆ ಕೆಲಸಕ್ಕೆ ಸೇನೆಯಲ್ಲಿದ್ದ ದುರ್ಗಾ ಎಂಬ ಇನ್ನೊಬ್ಬ ಮಹಿಳೆಯನ್ನೂ ಸೇರಿಸಿದರು. ರಾಜಮಣಿ ಮತ್ತು ದುರ್ಗಾ ಇಬ್ಬರೂ ಇದಕ್ಕೆ ಒಪ್ಪಿದರು. ಇಬ್ಬರ ತಲೆಕೂದಲನ್ನೂ ಕತ್ತರಿಸಿ, ಅಂಗಿ, ಪ್ಯಾಂಟು ತೊಡಿಸಿ, ಇಬ್ಬರನ್ನೂ ಗಂಡು ಮಕ್ಕಳಂತೆ ತಯಾರಿಸ ಲಾಯಿತು. ಅಂದು ರಾಜಮಣಿ ತನ್ನ ಹೆಸರನ್ನು ‘ಮಣಿ’ ಎಂದು ಬದಲಿಸಿಕೊಂಡಳು.
ರಂಗೂನಿನಿಂದ ಸುಮಾರು ಏಳುನೂರು ಕಿಲೋಮೀಟರ್ ದೂರದಲ್ಲಿರುವ ಬ್ರಿಟಿಷ್ ಕ್ಯಾಂಪಿನಲ್ಲಿ ಇಬ್ಬರೂ ಕಚೇರಿಯ ಕರ್ಮಚಾರಿಗಳಾಗಿ ಕೆಲಸಕ್ಕೆ ಸೇರಿಕೊಂಡರು. ಮೇಲ್ನೋಟಕ್ಕೆ ಬ್ರಿಟಿಷ್ ಅಧಿಕಾರಿಗಳಿಗೆ ನೀರು, ಚಹಾ ಇತ್ಯಾದಿ ಪಾನೀಯಗಳನ್ನು, ಕಡತಗಳನ್ನು ತಂದುಕೊಡುವುದು ಅವರಿಬ್ಬರ ಕೆಲಸವಾಗಿತ್ತಾ ದರೂ, ಅಲ್ಲಿ ನಡೆಯುವ ಬ್ರಿಟಿಷ್ ಅಽಕಾರಿಗಳ ಮಾತುಕತೆ ಆಲಿಸು ವುದು, ಅದನ್ನು ಆಜಾದ್ ಹಿಂದ್ ಸೇನೆಗೆ ರವಾನಿಸುವುದು ಅವರ ಪ್ರಮುಖ ಕೆಲಸವಾಗಿತ್ತು.
ಇಬ್ಬರೂ ಈ ಕೆಲಸ ಮಾಡುತ್ತಿದ್ದು ಒಂದು ವರ್ಷವಾಗಿತ್ತು. ಒಂದು ದಿನ ಮಣಿಯ ಜತೆಗಿದ್ದ ದುರ್ಗಾ ಬ್ರಿಟಿಷರ ಕೈಗೆ ಸಿಕ್ಕಿಬಿದ್ದಳು. ದುರ್ಗಾಳನ್ನು ಬಂಧಿಸಿದ ಬ್ರಿಟಿಷರು ಜೈಲಿನಲ್ಲಿ ಇಟ್ಟಿದ್ದರು. ಅವಳನ್ನು ಬಿಡಿಸಲು ರಾಜಮಣಿ ಪಣತೊಟ್ಟಳು. ಜೈಲಿನ ಸ್ವಚ್ಛತಾ ಸಿಬ್ಬಂದಿಗಳಾಗಿ ಕೆಲಸ ಮಾಡುತ್ತಿದ್ದ ಬರ್ಮಾ ಜನರ ಉಡುಗೆ ತೊಟ್ಟು ರಾಜಮಣಿ ಜೈಲು ಪ್ರವೇಶಿಸಿದಳು. ತಲೆ ಕೂದಲಿಗೆ ಹಾಕುವ ಹೇರ್‌ಪಿನ್‌ನಿಂದ ದುರ್ಗಾ ಇದ್ದ ಕೊಠಡಿಯ ಬೀಗ ತೆಗೆದು, ದುರ್ಗಾಳನ್ನು ಹೊರಗೆ ತಂದಳು.
ಇಬ್ಬರೂ ಸಿಕ್ಕಿ ಬೀಳುವ ಆತಂಕದಲ್ಲಿದ್ದರು. ಆ ಆತಂಕದಲ್ಲಿ ಜೈಲಿನಿಂದ ಹೊರಗೆ ಓಡುತ್ತಿರುವಾಗ ಬ್ರಿಟಿಷ್ ಕಾವಲುಗಾರನ ಕಣ್ಣಿಗೆ ಬಿದ್ದರು. ಆತ ಹಾರಿಸಿದ ಗುಂಡು ರಾಜಮಣಿಯ ಕಾಲಿನ ಒಳಗೆ ಹೊಕ್ಕಿತು. ಕಾಲಿನಿಂದ ರಕ್ತ ಧಾರಾಕಾರವಾಗಿ ಸುರಿಯಿತ್ತು. ಆದರೆ ಯಾವುದೇ ಕಾರಣಕ್ಕೂ ನಿಲ್ಲು ವಂತಿರಲಿಲ್ಲ. ಇದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿಕೊಂಡು ಓಡಿ, ಜೈಲಿನ ಆವರಣದಿಂದ ಹೊರಗೆ ಬಂದು, ಇಬ್ಬರೂ ಒಂದು ಮರ ಹತ್ತಿ ಕುಳಿತರು. ಕೆಳಗೆ ಬ್ರಿಟಿಷ್ ಸೈನಿಕರು ಅವರನ್ನು ಹುಡುಕುತ್ತಿದ್ದ ಕಾರಣ ಮೂರು ದಿನ ಇಬ್ಬರೂ ಮರದ ಮೇಲೆಯೇ ಇದ್ದರು. ನಾಲ್ಕನೆಯ ದಿನ ಧೈರ್ಯ ಮಾಡಿ ಕೆಳಗೆ ಇಳಿಯೋಣ ಎಂದರೆ ರಾಜಮಣಿಯ ಕಾಲಿನಲ್ಲಿ ಸತ್ವವೇ ಇರಲಿಲ್ಲ. ನೋವು, ಹಸಿವು, ಬಾಯಾರಿಕೆಯಿಂದ ತಲೆ ಸುತ್ತುತ್ತಿತ್ತು. ಇಬ್ಬರೂ ನಿತ್ರಾಣರಾಗಿದ್ದರು.
ಇದ್ದದ್ದರಲ್ಲಿ ದುರ್ಗಾಳೇ ಸ್ವಲ್ಪ ಗಟ್ಟಿಯಾಗಿದ್ದಳು. ಅವಳ ಸಹಾಯದಿಂದ ರಾಜಮಣಿ ಮರದಿಂದ ಕೆಳಗೆ ಇಳಿದಳು. ಸ್ವಲ್ಪ ದೂರ ನಡೆದು ಇಬ್ಬರೂ ವಾಹನಕ್ಕಾಗಿ ಕಾದರು. ದಾರಿಯಲ್ಲಿ ಬಂದು ಹೋಗುವ ಎಲ್ಲ ವಾಹನಗಳನ್ನೂ ನಂಬುವಂತಿರಲಿಲ್ಲ. ಅಂತೂ ಭರವಸೆಯ ವಾಹನವೊಂದನ್ನು ಏರಿ, ಎಂಟು ಗಂಟೆ ಪ್ರಯಾಣ ಮಾಡಿದ ನಂತರ, ಇಬ್ಬರೂ ರಂಗೂನ್‌ನಲ್ಲಿರುವ ಆಜಾದ್ ಹಿಂದ್ ಕ್ಯಾಂಪ್ ತಲುಪಿದರು. ನೇತಾಜಿಯೂ ಸೇರಿದಂತೆ, ಕ್ಯಾಂಪ್‌ನಲ್ಲಿದ್ದವರಿಗೆ ದುರ್ಗಾ ಜೈಲಿನಲ್ಲಿದ್ದದ್ದು, ರಾಜಮಣಿ ಅವಳನ್ನು ಬಿಡಿಸಿಕೊಂಡು ಓಡುತ್ತಿರುವಾಗ ಕಾಲಿಗೆ ಗುಂಡು ಬಿದ್ದದ್ದು, ಎಲ್ಲ ವಿಷಯ ತಿಳಿದಿತ್ತು.
ಅವರೆಲ್ಲ ರಾಜಮಣಿ ಮತ್ತು ದುರ್ಗಾ ಬದುಕಿ ಉಳಿದಿಲ್ಲ ಎಂದೇ ಭಾವಿಸಿದ್ದರು. ಆ ಅನುಮಾನ ಗಳನ್ನೆಲ್ಲ ಹುಸಿಗೊಳಿಸಿ, ಹದಿನಾರು-ಹದಿನೇಳು ವರ್ಷದ ಇಬ್ಬರೂ ಬಾಲಕಿಯರು ಬದುಕಿ ಬಂದಿದ್ದರು. ಆ ಕಾಲದಲ್ಲಿ ಅವರಿಗೆ ಪಾರಿತೋಷಕ ಕೊಡುವವರು ಯಾರೂ ಇರಲಿಲ್ಲ. ಆದರೆ ನೇತಾಜಿ ಇಬ್ಬರಿಗೂ ಒಂದು ಪ್ರಶಂಸಭರಿತ ಪತ್ರವನ್ನು ಕಳಿಸಿಕೊಟ್ಟಿದ್ದರು. ಇಬ್ಬರಿಗೂ ಅದು ಯಾವುದೇ ಪಾರಿತೋಷಕಕ್ಕಿಂತಲೂ ಮಿಗಿಲಾಗಿತ್ತು.
ಇದಾಗಿ ಒಂದು ವರ್ಷದ ಅವಧಿಯಲ್ಲಿ ನೇತಾಜಿ ಅಪಘಾತವೊಂದರಲ್ಲಿ ಮರಣ ಹೊಂದಿದರು ಎಂದು ಸುದ್ದಿಯಾಯಿತು. ಅದಾಗಿ ಎರಡು ವರ್ಷಕ್ಕೆ ಭಾರತಕ್ಕೆ ಸ್ವಾತಂತ್ರ್ಯವೂ ಬಂತು. ಭಾರತಕ್ಕೆ ಬಂದು ನೆಲೆನಿಂತ ಭಾರತದ ಮೊದಲ ಮಹಿಳಾ ಗೂಢಚಾರಿಣಿ ತಮ್ಮ ಕೊನೆಯ ದಿನಗಳನ್ನು ಹೆಚ್ಚು ಸುದ್ದಿಯಿಲ್ಲದೇ, ಆಡಂಬರವಿಲ್ಲದೇ, ಪ್ರಚಾರವೂ ಇಲ್ಲದೇ, ಚೆನ್ನೆ ನಲ್ಲಿ ಕಳೆದರು. ಅವರಿಗೆ ಸಿಗಬೇಕಾಗಿದ್ದ ಗೌರವ ಸಿಕ್ಕಿತ್ತೇ ಎಂದರೆ ಖಂಡಿತ ಇಲ್ಲ. ಅದನ್ನು ಅವರು ಬಯಸಿಯೂ ಇರಲಿಲ್ಲ.
ಇಂದು,
ನಾಲ್ಕು ವಾರದ ಹಿಂದೆ ‘ಅಲ್ಫಾ’ಎಂಬ ಒಂದು ಹಿಂದಿ ಚಲನಚಿತ್ರ ಬಿಡುಗಡೆಯಾಗಿದೆ. ಅನಿಲ್ ಕಪೂರ್, ಬಾಬ್ಬಿ ಡಿಯೋಲ, ಹೃತಿಕ್ ರೋಶನ್‌ನಂತಹ ಘಟಾನುಘಟಿಗಳು ಅಭಿನಯಿಸಿದ ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ಶರವರಿ ಭಾರತದ ಗೂಢಚಾರಿಣಿಯರಾಗಿ ಅಭಿನಯಿಸಿದ್ದಾರೆ. ಹೊಡೆದಾಟ, ಬಡಿದಾಟ, ಮಾಮೂಲಿ ಒಂದಷ್ಟು ಹಾಡು, ಕುಣಿತದ ಜತೆಗೆ ಬಿಕಿನಿಯನ್ನೂ ತೊಟ್ಟಿದ್ದಾರೆ. ಭಾರತದಲ್ಲಿ ಯಾವುದೇ ಗೂಢಚಾರಿಣಿ ಈ ರೀತಿ ಮಾಡಿದ ದಾಖಲೆಯಿಲ್ಲ, ಬಿಡಿ. ಭಾರತದಲ್ಲಿ ಗೂಢಚಾರಿಣಿಯರ ನಿಜವಾದ, ಮೈನವಿರೇಳಿಸುವ ಕಥೆಗಳಿರುವಾಗ ಅದನ್ನೆಲ್ಲ ಬಿಟ್ಟು ಇಂಥ ಕಾಲ್ಪನಿಕ ಕಥೆಗಳಿಗೆ ಬಾಲಿವುಡ್ ಯಾಕೆ ಜೋತುಬೀಳುತ್ತದೆಯೋ ಗೊತ್ತಿಲ್ಲ.
ಅದಕ್ಕಿಂತಲೂ ಹೆಚ್ಚಾಗಿ, ಅಲಾ ಸಿನಿಮಾ ಮಕಾಡೆ ಮಲಗಿ, ಮಣ್ಣು ಮುಕ್ಕಿದಾಗ ಕೆಲವರು ಹೇಳಿದ್ದೇ ನೆಂದರೆ, ಭಾರತದ ಪ್ರೇಕ್ಷಕರು ಹೆಣ್ಣು ಮಕ್ಕಳನ್ನು ಇಂಥ ಪಾತ್ರಗಳಲ್ಲಿ ನೋಡಲು ಬಯಸುವುದಿಲ್ಲ, ಅಳುವ ಅಥವಾ ಮರ ಸುತ್ತುವ ಪಾತ್ರಗಳಲ್ಲಿ ಮಾತ್ರ ಅವರನ್ನು ನೋಡಲು ಇಷ್ಟಪಡುತ್ತಾರೆ, ಹೆಣ್ಣು ಮಕ್ಕಳೇ ಪ್ರಧಾನ ಪಾತ್ರದಲ್ಲಿರುವ, ಅವರ ಸುತ್ತ ಸುತ್ತುವ ಕಥೆಯ ಸಿನಿಮಾಗಳು ಯಶಸ್ವಿಯಾಗುವುದಿಲ್ಲ, ಇತ್ಯಾದಿ, ಇತ್ಯಾದಿ. ಆದರೆ ಅವರು ಮರೆತಂತಿದೆ, ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಭಾರತದ ಮೊದಲ ಸಿನಿಮಾ ಯಾವುದು ಗೊತ್ತೇ? ಹೆಣ್ಣಿನ ಸುತ್ತ ಸುತ್ತುವ, ಹೆಣ್ಣೇ ಪ್ರಧಾನಪಾತ್ರದಲ್ಲಿರುವ ‘ಮದರ್ ಇಂಡಿಯಾ’.
ಇರಲಿ, ಅಂದು ಸರಸ್ವತಿ ರಾಜಮಣಿ ಆದಿಯಾಗಿ ದುರ್ಗಾ, ನೀರಾ ಆರ್ಯಾ, ನೂರ್ ಇನಾಯತ್ ಖಾನ್ ಸೇರಿದಂತೆ ಮೊನ್ನೆ ಮೊನ್ನೆ ನಡೆದ ಭಾರತದ ಆಪರೇಷನ್ ಸಿಂದೂರದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಕರ್ನಲ್ ಸೋಫಿಯಾ ಖುರೇಶಿಯಂತಹ ಮಹಿಳಾ ಸೇನಾನಿಗಳು ಇಂದಿಗೂ ಭಾರತೀಯರ ಮನದ ಗೂಡಿನಲ್ಲಿ ಉಳಿದುಕೊಂಡಿದ್ದಾರೆ. ಅಂತಹ ಸೇನಾನಿಗಳ ಕುರಿತು ಇನ್ನೂ ಗೌರವ ಇಟ್ಟುಕೊಂಡಿzರೆ, ಅಂಥವರನ್ನು ಆದರಿಸುತ್ತಾರೆಯೇ ಹೊರತು ಅಲಾ ಸಿನಿಮಾದಲ್ಲಿ ಬರುವ ಕಾಲ್ಪನಿಕ ಪಾತ್ರವನ್ನಲ್ಲ. ಇದನ್ನು ಬಾಲಿವುಡ್ ಅರ್ಥ ಮಾಡಿಕೊಂಡರೆ ಒಳ್ಳೆಯದು.
ಎಷ್ಟು ಜನ ಅಲಾ ಸಿನಿಮಾ ನೋಡಿದ್ದಾರೆ ಎಂದು ಗೊತ್ತಿಲ್ಲ, ಪ್ರತಿಯೊಬ್ಬನೂ ಈ ಸಿನಿಮಾ ನೋಡಬೇಕು. ಸಿನಿಮಾ ಹೇಗಿರಬೇಕು ಎಂದು ತಿಳಿದುಕೊಳ್ಳಲು ಅಲ್ಲ, ಸಿನಿಮಾ ಹೇಗೆ ಇರಬಾರದು ಎಂದು ತಿಳಿದುಕೊಳ್ಳಲು! ಎಲ್ಲಿಯ ರಾಜಮಣಿ, ಎಲ್ಲಿಯ ಬಾಲಿವುಡ್ ನಾರಿಮಣಿ... ಛೀ!