Keshava Prasad B Column: ಎನ್‌ಜಿಒಗಳ ನಿಧಿಯ ಮೂಲ-ಬಳಕೆ ಮೇಲೆ ನಿಗಾ ಏಕೆ ?
ಮೇಧಾ ಪಾಟ್ಕರ್ ನೇತೃತ್ವದ ‘ನರ್ಮದಾ ಬಚಾವೊ ಆಂದೋಲನ’ ಮತ್ತು ನಾನಾ ಎನ್ʼಜಿಒಗಳು ಇದರ ವಿರುದ್ಧ ತೀವ್ರ ಹೋರಾಟ ನಡೆಸಿದವು. ಈ ಆಂದೋಲನಕ್ಕೆ ಸ್ಥಳೀಯ ನಿರಾಶ್ರಿತರ ಕಾಳಜಿ ಯ ಮುಖವಿದ್ದರೂ, ಇದರ ಹಿಂದೆ ಅಂತಾರಾಷ್ಟ್ರೀಯ ಎನ್‌ಜಿಒಗಳ ಜಾಲವಿತ್ತು. ಅಮೆರಿಕ ಮತ್ತು ಯುರೋಪ್‌ನ ಕೆಲವು ಪ್ರತಿಷ್ಠಿತ -ಫೌಂಡೇಶನ್ʼಗಳು ಹಾಗೂ ಸಂಸ್ಥೆಗಳಿಂದ ದೊಡ್ಡ ಪ್ರಮಾಣ ದಲ್ಲಿ ವಿದೇಶಿ ನಿಧಿ ಹರಿದು ಬರುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದವು.
-
ಮನಿ ಮೈಂಡೆಡ್
ಭಾರತದಲ್ಲಿ ಹಲವು ಎನ್‌ಜಿಒಗಳು ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ ಉಲ್ಲಂಘಿಸಿ, ವಿದೇಶಿ ಹಣ ದುರುಪಯೋಗಪಡಿಸಿಕೊಂಡಿರುವ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಚಟುವಟಿಕೆ ಗಳಲ್ಲಿ ಭಾಗಿಯಾಗಿರುವ ಪ್ರಕರಣಗಳು ತನಿಖಾ ಸಂಸ್ಥೆಗಳಿಂದ ಪತ್ತೆಯಾಗಿವೆ. ಕೆಲವು ಎನ್‌ಜಿಒಗಳು ವಿದೇಶಿ ನಿಧಿ ಬಳಸಿ ಮತಾಂತರ ಚಟುವಟಿಕೆಗಳಲ್ಲಿ ತೊಡಗಿವೆ ಎಂಬ ಆರೋಪ ಇದೆ.
ಭಾರತದ ಆಂತರಿಕ ಭದ್ರತೆ, ಸಾರ್ವಭೌಮತ್ವಕ್ಕೆ ವಿದೇಶಿ ಮೂಲದ ಹಣ ಬಳಕೆಯಾಗದಂತೆ ತಡೆಯುವುದು ಸಮಕಾಲೀನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ತಿದ್ದುಪಡಿ ಕಾಯಿದೆಯೊಂದು ಸುದ್ದಿಯಲ್ಲಿದೆ. ಇದಕ್ಕೂ ಮುನ್ನ ಇತಿಹಾಸದ ಕೆಲ ಪುಟಗಳನ್ನು ಅವಲೋಕಿಸೋಣ. ನೋಡಿ, ನರ್ಮದಾ ನದಿಯ ಮೇಲೆ ನಿರ್ಮಿಸಲಾದ ಸರ್ದಾರ್ ಸರೋವರ್ ಅಣೆಕಟ್ಟೆ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ವಿವಾದಗಳು ಮತ್ತು ಅಡಚಣೆಗಳನ್ನು ಎದುರಿಸಿದ ಮಹತ್ವಾಕಾಂಕ್ಷೆಯ ಯೋಜನೆ.
ಮೇಧಾ ಪಾಟ್ಕರ್ ನೇತೃತ್ವದ ‘ನರ್ಮದಾ ಬಚಾವೊ ಆಂದೋಲನ’ ಮತ್ತು ನಾನಾ ಎನ್ʼಜಿಒಗಳು ಇದರ ವಿರುದ್ಧ ತೀವ್ರ ಹೋರಾಟ ನಡೆಸಿದವು. ಈ ಆಂದೋಲನಕ್ಕೆ ಸ್ಥಳೀಯ ನಿರಾಶ್ರಿತರ ಕಾಳಜಿ ಯ ಮುಖವಿದ್ದರೂ, ಇದರ ಹಿಂದೆ ಅಂತಾರಾಷ್ಟ್ರೀಯ ಎನ್‌ಜಿಒಗಳ ಜಾಲವಿತ್ತು. ಅಮೆರಿಕ ಮತ್ತು ಯುರೋಪ್‌ನ ಕೆಲವು ಪ್ರತಿಷ್ಠಿತ -ಫೌಂಡೇಶನ್ʼಗಳು ಹಾಗೂ ಸಂಸ್ಥೆಗಳಿಂದ ದೊಡ್ಡ ಪ್ರಮಾಣ ದಲ್ಲಿ ವಿದೇಶಿ ನಿಧಿ ಹರಿದು ಬರುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದವು.
ಅಣೆಕಟ್ಟೆಯ ಎತ್ತರವನ್ನು ಹೆಚ್ಚಿಸದಂತೆ ತಡೆಯಲು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟಗಳು, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಬುಡಕಟ್ಟು ಜನಾಂಗದವರ ಸ್ಥಳಾಂತರದ ಹೆಸರಿನಲ್ಲಿ ನಿರಂತರ ಪ್ರತಿಭಟನೆಗಳನ್ನು ನಡೆಸಿ, ಯೋಜನೆಯನ್ನು ದಶಕಗಳ ಕಾಲ ವಿಳಂಬ ಗೊಳಿಸುವಲ್ಲಿ ಎನ್‌ಜಿಒಗಳು ಪ್ರಮುಖ ಪಾತ್ರ ವಹಿಸಿದವು.
ಗುಜರಾತ್‌ನ ಮುಖ್ಯಮಂತ್ರಿಯಾಗಿ ಮತ್ತು ನಂತರ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಈ ಎಲ್ಲ ಅಡೆತಡೆಗಳನ್ನು ರಾಜಕೀಯ ಹಾಗೂ ಕಾನೂನಾತ್ಮಕವಾಗಿ ಎದುರಿಸಿದರು. ನರ್ಮದಾ ಯೋಜನೆ ‘ಗುಜರಾತ್‌ನ ಜೀವನಾಡಿ’ ಎಂದು ಸಾರಿದರು. ಅಂತಿಮವಾಗಿ 2000ನೇ ಇಸವಿಯಲ್ಲಿ ಸುಪ್ರೀಂ ಕೋರ್ಟ್ ಅಣೆಕಟ್ಟು ನಿರ್ಮಾಣದ ಪರವಾಗಿ ತೀರ್ಪು ನೀಡಿ, ನಿರಾಶ್ರಿತರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವ ಸೂಚನೆಯೊಂದಿಗೆ, ಕಾಮಗಾರಿಯನ್ನು ಮುಂದುವರಿಸಲು ಅನುಮತಿ ನೀಡಿತು.
ಇದನ್ನೂ ಓದಿ: Keshava Prasad B Column: ಬ್ರಿಟನ್ ಜತೆ ಭಾರತ ಒಪ್ಪಂದ, ಮೊದಲ ದಿನವೇ ರಫ್ತು ಸಾವಿರ ಟನ್!
ಎನ್‌ಜಿಒಗಳ ಒತ್ತಡಕ್ಕೆ ಮಣಿದು ವಿಶ್ವ ಬ್ಯಾಂಕ್ ತನ್ನ ಹಣಕಾಸು ನೆರವನ್ನು ವಾಪಸ್ ಪಡೆದಾಗ, ನಾವು ವಿದೇಶಿ ಹಣವಿಲ್ಲದೆ, ನಮ್ಮದೇ ಜನರ ಶಕ್ತಿ ಮತ್ತು ರಾಜ್ಯದ ಬಜೆಟ್‌ನಿಂದ ಡ್ಯಾಮ್ ಕಟ್ಟಿ ತೋರಿಸುತ್ತೇವೆ ಎಂದು ನರೇಂದ್ರ ಮೋದಿ ಘೋಷಿಸಿದರು. ಪ್ರಧಾನಿಯಾದ ಬಳಿಕ ಸರ್ದಾರ್ ಸರೋವರ್ ಅಣೆಕಟ್ಟೆ ಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಮೂಲಕ, ಎನ್‌ಜಿಒಗಳ ಎಲ್ಲಾ ವಿರೋಧ ಗಳನ್ನು ಮೆಟ್ಟಿನಿಂತು ಐತಿಹಾಸಿಕ ವಿಜಯ ಸಾಧಿಸಿದರು.
ಇದರಿಂದಾಗಿ ಗುಜರಾತಿನ ಸೌರಾಷ್ಟ್ರ, ಕಚ್ ಹಾಗೂ ರಾಜಸ್ಥಾನದ ಅರೆ-ಮರುಭೂಮಿ ಪ್ರದೇಶಗಳ ಸಾವಿರಾರು ಹಳ್ಳಿಗಳು ಮತ್ತು ನಗರಗಳಿಗೆ ಕುಡಿಯುವ ನೀರು ಲಭ್ಯವಾಗಿದೆ. ಇದು ಆ ಭಾಗದ ಮಹಿಳೆಯರು ನೀರಿಗಾಗಿ ಮೈಲುಗಟ್ಟಲೆ ನಡೆಯುತ್ತಿದ್ದ ಬವಣೆಯನ್ನು ತಪ್ಪಿಸಿದೆ. ಲಕ್ಷಾಂತರ ಹೆಕ್ಟೇರ್ ಒಣಭೂಮಿಗೆ ಕಾಲುವೆಗಳ ಮೂಲಕ ನೀರು ಹರಿಯುತ್ತಿದೆ. ಇದರಿಂದ ಕೃಷಿ ಉತ್ಪಾದನೆ ಗಣನೀಯವಾಗಿ ಹೆಚ್ಚಾಗಿದ್ದು, ರೈತರ ಆರ್ಥಿಕ ಸ್ಥಿತಿ ಸುಧಾರಿಸಿದೆ.
ಉತ್ಪಾದನೆಯಾಗುವ ಜಲವಿದ್ಯುತ್ ಅನ್ನು ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ಹಂಚಿ ಕೊಳ್ಳುತ್ತಿವೆ. ಬಿಹಾರದ ಪಾಟ್ನಾದಲ್ಲಿ ಸಾಮಾನ್ಯ ಹಿನ್ನೆಲೆಯಿಂದ ಬಂದ ಅನಿಲ್ ಅಗ್ರವಾಲ್, ಕಠಿಣ ಪರಿಶ್ರಮದಿಂದ ಮುಂಬಯಿನಲ್ಲಿ ವ್ಯಾಪಾರ ಆರಂಭಿಸಿ, ಇಂದು ಜಾಗತಿಕ ಮಟ್ಟದಲ್ಲಿ ‘ವೇದಾಂತ ರಿಸೋರ್ಸಸ್’ ಎಂಬ ಬೃಹತ್ ಲೋಹ ಮತ್ತು ಗಣಿಗಾರಿಕೆ ಉದ್ದಿಮೆಯ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ಈ ಸಂಸ್ಥೆಯು ತಾಮ್ರ, ಸತು, ಅಲ್ಯೂಮಿನಿಯಂ, ತೈಲ ಮತ್ತು ಗ್ಯಾಸ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.
ದೇಶದಲ್ಲಿ ಈ ಲೋಹಗಳ ಆಮದು ಪ್ರಮಾಣವನ್ನು ಕಡಿಮೆ ಮಾಡಿ, ದೇಶೀಯ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂಬುದು ಇವರ ಆಶಯವಾಗಿತ್ತು. ಈ ನಿಟ್ಟಿನಲ್ಲಿ ತಮಿಳುನಾಡಿನ ತೂತ್ತುಕುಡಿ ಯಲ್ಲಿ ‘ಸ್ಟರ್ಲೈಟ್ ಕಾಪರ್’ ಎಂಬ ಕಾರ್ಖಾನೆಯನ್ನು ಕಟ್ಟಿದರು. ಭಾರತದ ಒಟ್ಟು ತಾಮ್ರದ ಬೇಡಿಕೆಯ ಗಣನೀಯ ಭಾಗವನ್ನು ಪೂರೈಸುತ್ತಿತ್ತು. ದುರದೃಷ್ಟವಶಾತ್ ಸ್ಥಳೀಯರನ್ನು ಎತ್ತಿಕಟ್ಟಿದ ಎನ್‌ಜಿಒಗಳು ಎಬ್ಬಿಸಿದ ದಾಂಧಲೆ ಅಷ್ಟಿಷ್ಟಲ್ಲ. 2018ರಲ್ಲಿ ಈ ಘಟಕದ ವಿಸ್ತರಣೆ ಯನ್ನು ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಗೋಲಿಬಾರ್ ನಡೆದು 13 ಜನರು ಮೃತಪಟ್ಟರು.
ತಮಿಳುನಾಡು ಸರಕಾರದ ಆದೇಶದ ಮೇರೆಗೆ ಈ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲಾ ಯಿತು. ಈ ಪ್ರತಿಭಟನೆಗಳು ರಾಜಕೀಯ ಪ್ರೇರಿತ, ಎನ್‌ಜಿಒ ನೇತೃತ್ವದ ಸಂಚು ಎಂದು ಅನಿಲ್ ಅಗ್ರವಾಲ್ ಹಲವು ಬಾರಿ ಹೇಳಿದ್ದಾರೆ. ‘ದ ಅದರ್ ಮೀಡಿಯಾ’ ಎಂಬ ಎನ್‌ಜಿಒ ವಿರುದ್ಧ ಕೇಂದ್ರ ಗೃಹ ಸಚಿವಾಲಯವು ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ ಉಲ್ಲಂಘನೆ ಆರೋಪದ ಮೇಲೆ ತನಿಖೆ ನಡೆಸಿತ್ತು.
ವೇದಾಂತ ಗ್ರೂಪ್‌ನ ಸ್ಟರ್ಲೈಟ್ ಕಾಪರ್ ಕಾರ್ಖಾನೆಯ ವಿರುದ್ಧ ಸ್ಥಳೀಯವಾಗಿ ನಡೆದ ಉಗ್ರ ಪ್ರತಿಭಟನೆಗಳು ಹಾಗೂ ಆಂದೋಲನಗಳನ್ನು ಸಂಘಟಿಸಲು ಈ ಸಂಸ್ಥೆಯು ಹಣ ದುರುಪಯೋಗ ಪಡಿಸಿಕೊಂಡಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಸಂಸತ್ತಿನಲ್ಲಿ ಸರಕಾರ ನೀಡಿದ ಮಾಹಿತಿಯ ಪ್ರಕಾರ, ಈ ಎನ್‌ಜಿಒ 2019ರಿಂದ 2022ರ ನಡುವಿನ ಅವಧಿಯಲ್ಲಿ ಕೋಟ್ಯಂತರ ರೂಪಾಯಿಗಳ ದೇಣಿಗೆಯನ್ನು ಪಡೆದುಕೊಂಡಿತ್ತು. ಇದರ ಅಧಿಕೃತ ಉದ್ದೇಶ ‘ಶೈಕ್ಷಣಿಕ ಮತ್ತು ಸಾಮಾಜಿಕ’ ಎಂದು ನಮೂದಿಸಲ್ಪಟ್ಟಿದ್ದರೂ, ಆ ಹಣವನ್ನು ಜನರನ್ನು ಪ್ರಚೋದಿಸಲು ಮತ್ತು ಸಾಮೂಹಿಕ ಪ್ರತಿಭಟನೆಗಳನ್ನು ಆಯೋಜಿಸಲು ಬಳಸಲಾಗಿದೆ ಎಂಬ ದೂರುಗಳು ದಾಖಲಾಗಿದ್ದವು.
ಎನ್‌ಜಿಒಗಳು ಪರಿಸರ ಜಾಗೃತಿ ಅಥವಾ ಸಾಮಾಜಿಕ ಕಳಕಳಿಯ ಹೆಸರಿನಲ್ಲಿ ಬೇರೆ ರಾಷ್ಟ್ರಗಳಿಂದ ಹಣ ಪಡೆದು, ಭಾರತದ ಪ್ರಮುಖ ಕೈಗಾರಿಕಾ ಹಾಗೂ ಅಭಿವೃದ್ಧಿ ಯೋಜನೆಗಳ ವಿರುದ್ಧ ಸ್ಥಳೀಯರನ್ನು ಎತ್ತಿಕಟ್ಟುವುದು ಮತ್ತು ಆ ಮೂಲಕ ದೇಶದ ಆರ್ಥಿಕ ಭದ್ರತೆಗೆ ಅಸ್ಥಿರತೆ ತರಲು ಹೇಗೆ ಸಂಚು ಹೂಡುತ್ತವೆ? ಎಂಬ ಪ್ರಶ್ನೆಯ ಚರ್ಚೆ ನಡೆಯುವಾಗ ಇಂಥ ನಿದರ್ಶನಗಳು ನೆನಪಾಗು ವುದು ಸ್ವಾಭಾವಿಕ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ನಿರಶನ ಮುಷ್ಕರ ಹೂಡಿರುವ ಲಡಾಕ್ ಮೂಲದ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್‌ಚುಕ್ ಅವರ ‘ಸೆಕ್ಮೋಲ್’ (SECMOL - Students' Educational and Cultural Movement of Ladakh) ಎನ್‌ಜಿಒ ದ ಪರವಾನಗಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿರುವುದು ನಿಮಗೆಲ್ಲ ಗೊತ್ತಿದೆ.
2021-22ನೇ ಸಾಲಿನಲ್ಲಿ ಸೋನಮ್ ವಾಂಗ್ಚುಕ್ ಅವರು ಎಫ್ಸಿಆರ್‌ಎ ಖಾತೆಗೆ ನಿಬಂಧನೆಗಳನ್ನು ಮೀರಿ 3.5 ಲಕ್ಷ ರೂ.ಗಳನ್ನು ಜಮೆ ಮಾಡಿದ್ದರು ಎಂದು ಗೃಹ ಸಚಿವಾಲಯ ತಿಳಿಸಿದೆ. ವಲಸೆ, ಹವಾಮಾನ ಬದಲಾವಣೆ, ಆಹಾರ ಭದ್ರತೆ ಮತ್ತು ಸಾರ್ವಭೌಮತ್ವ ಮುಂತಾದ ವಿಷಯಗಳ ಕುರಿತು ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ಯುವಜನರಲ್ಲಿ ಜಾಗೃತಿ ಮೂಡಿಸಲು ಸ್ವೀಡನ್‌ನ ದಾನಿಯೊಬ್ಬರಿಂದ ಪಡೆದ ಹಣ ಸರಕಾರದ ಪರಿಶೀಲನೆಗೆ ಒಳಪಟ್ಟಿತು. ಎನ್‌ಜಿಒದ ಉದ್ದೇಶಗಳು ಶೈಕ್ಷಣಿಕವಾಗಿದ್ದರೂ, ‘ಸಾರ್ವಭೌಮತ್ವ’ದಂತಹ ಸೂಕ್ಷ ವಿಷಯಗಳ ಅಧ್ಯಯನಕ್ಕೆ ವಿದೇಶಿ ದೇಣಿಗೆಯನ್ನು ಸ್ವೀಕರಿಸಿರುವುದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಗೃಹ ಸಚಿವಾಲಯ ಹೇಳಿತ್ತು.
ಅಮ್ನೆಸ್ಟಿ ಇಂಟರ್ನ್ಯಾಶನಲ್ ಇಂಡಿಯಾ ಎಂಬ ಎನ್‌ಜಿಒ, ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಕನ್ಸಲ್ಟೆನ್ಸಿ ಶುಲ್ಕದ ಸೋಗಿನಲ್ಲಿ ಕೋಟ್ಯಂತರ ರುಪಾಯಿ ಪಡೆದ ಆರೋಪ ಎದುರಿಸುತ್ತಿದೆ. ಭಾರತದ ಆರ್ಥಿಕ ಹಿತಾಸಕ್ತಿ ಹಾಗೂ ಅಭಿವೃದ್ಧಿ ಯೋಜನೆಗಳ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದ ಗ್ರೀನ್ ಪೀಸ್ ಇಂಡಿಯಾದ ನೋಂದಣಿಯನ್ನು ಸರಕಾರ ರದ್ದುಪಡಿಸಿತ್ತು. ಕಾನೂನು ಅನುಸರಣೆಗಳಲ್ಲಿ ಲೋಪ ಹಾಗೂ ಚೀನಾ ಸರಕಾರದೊಂದಿಗೆ ನಂಟಿರುವ ಸಂಸ್ಥೆಗಳಿಂದ ದೇಣಿಗೆ ಪಡೆದಿರುವ ವಿಚಾರದಲ್ಲಿ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯ ಕಾರಣದಿಂದ ಈ ಫೌಂಡೇಶನ್‌ನ ಎಫ್ʼಸಿಆರ್‌ಎ ಲೈಸೆನ್ಸ್ ಅನ್ನು ತಡೆಹಿಡಿಯಲಾಗಿದೆ. ಹೀಗೆ ಭಾರತದಲ್ಲಿ ಹಲವು ಎನ್‌ಜಿಒಗಳು (ಸ್ವಯಂಸೇವಾ ಸಂಸ್ಥೆಗಳು) ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ ( FCRA ) ಉಲ್ಲಂಘಿಸಿ, ವಿದೇಶಿ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಲವಾರು ಪ್ರಕರಣಗಳು ತನಿಖಾ ಸಂಸ್ಥೆಗಳಿಂದ ಪತ್ತೆಯಾಗಿವೆ.
ಕೆಲವು ಎನ್ʼಜಿಒಗಳು ವಿದೇಶಿ ನಿಧಿಯನ್ನು ಬಳಸಿ ವ್ಯವಸ್ಥಿತವಾಗಿ ಮತಾಂತರ ಚಟುವಟಿಕೆಗಳಲ್ಲಿ ತೊಡಗಿವೆ ಎಂಬ ಗಂಭೀರ ಆರೋಪಗಳು ಹಲವು ವರ್ಷಗಳಿಂದ ಕೇಳಿಬಂದಿವೆ. ಆದ್ದರಿಂದ ಎಫ್ʼಸಿಆರ್‌ಎ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ಕೇಂದ್ರ ಸರಕಾರ, ಎನ್‌ಜಿಒಗಳು ತಮ್ಮ ಚಟುವಟಿಕೆಗಳಿಗೆ ವಿದೇಶದಿಂದ ಬರುವ ಹಣವನ್ನು ಯಾವುದೇ ಕಾರಣಕ್ಕೂ ಮತಾಂತರಕ್ಕೆ ಬಳಸುವಂತಿಲ್ಲ ಎಂದು ಸ್ಪಷ್ಟವಾಗಿ ನಿಷೇಧಿಸಿದೆ.
2019 ಮತ್ತು 2022ರ ನಡುವೆ, 13,500ಕ್ಕೂ ಹೆಚ್ಚು ಸಂಸ್ಥೆಗಳು 55,741 ಕೋಟಿ ವಿದೇಶಿ ಕೊಡುಗೆ ಗಳನ್ನು ಪಡೆದಿವೆ. ನಿಧಿಯು ಪಾರದರ್ಶಕವಾಗಿ, ಭಾರತೀಯ ಕಾನೂನಿಗೆ ಬದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ದೇಶದ ಹಿತಾಸಕ್ತಿಗಳಿಗೆ ಧಕ್ಕೆ ತರುವ ರೀತಿಯಲ್ಲಿ ದುರುಪಯೋಗ ವಾಗದಂತೆ ನೋಡಿಕೊಳ್ಳಲು 2026ರ ಎಫ್ಸಿಆರ್‌ಎ ಮಸೂದೆಯು ಉತ್ತರದಾಯಿತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಎಫ್ʼಸಿಆರ್‌ಎ ನೋಂದಣಿಯನ್ನು ರದ್ದುಗೊಳಿಸಿದಾಗ, ವಾಪಸ್ ಪಡೆದಾಗ ಅಥವಾ ಅವಧಿ ಮುಗಿದಾಗ ವಿದೇಶಿ ಅನುದಾನದ ಆಸ್ತಿಗಳ ತಾತ್ಕಾಲಿಕ ವಶಕ್ಕೆ ಈ ವಿಧೇಯಕದ ಅಡಿಯಲ್ಲಿ ಪ್ರತ್ಯೇಕ ಪ್ರಾಧಿಕಾರವನ್ನು ರಚಿಸಲಾಗುವುದು. ಇದರಿಂದಾಗಿ, ಅಧಿಕಾರಿಗಳು ಕ್ರಮ ಕೈಗೊಳ್ಳುವ ಮುನ್ನ ಕೆಲವು ಎನ್‌ಜಿಒಗಳು ಆಸ್ತಿಯನ್ನು ವರ್ಗಾಯಿಸಲು ಅಥವಾ ವಿಲೇವಾರಿ ಮಾಡಲು ಆಸ್ಪದ ಉಂಟಾಗುವುದಿಲ್ಲ.
ಎನ್‌ಜಿಒದ ಪರವಾನಗಿಯು ಅವಧಿ ಮೀರಿದರೆ ಅಥವಾ ರದ್ದಾದರೆ, ವಿದೇಶಿ ಕೊಡುಗೆಗಳಿಂದ ಸೃಷ್ಟಿಯಾದ ಆಸ್ತಿಗಳ ತಾತ್ಕಾಲಿಕ ಸ್ವಾಧೀನವನ್ನು ಈ ಪ್ರಾಧಿಕಾರ ಪಡೆದುಕೊಳ್ಳಲಿದೆ. ಹಾಗೂ ಎನ್‌ಜಿಒ ಹೊಸ ನೋಂದಣಿಯನ್ನು ಪಡೆಯಲು ವಿಫಲವಾದರೆ, ಈ ಸ್ವಾಧೀನವು ಶಾಶ್ವತವಾಗ ಬಹುದು. ಎಫ್ʼಸಿಆರ್‌ಎ ನೋಂದಣಿ ಅವಧಿ ಮುಗಿದಿರುವುದನ್ನು ರದ್ದುಗೊಂಡಂತೆ ಪರಿಗಣಿಸುವ ಮೂಲಕ ದೀರ್ಘಕಾಲದ ಅವಧಿ ಮುಗಿದರೂ ಇಟ್ಟುಕೊಳ್ಳುವ ಲೋಪದೋಷವನ್ನು ಈ ವಿಧೇಯಕವು ಸರಿಪಡಿಸುತ್ತದೆ. ಇದು ಸಂಸ್ಥೆಗಳು ವಿದೇಶಿ ಅನುದಾನದ ಆಸ್ತಿಗಳನ್ನು ಅನಿರ್ದಿಷ್ಟಾವಧಿಗೆ ಉಳಿಸಿಕೊಳ್ಳುವುದನ್ನು ಅಥವಾ ಬಳಸುವುದನ್ನು ತಡೆಯುತ್ತದೆ.
ಅಲ್ಲದೆ, ವಿದೇಶಿ ನಿಧಿಯ ಬಳಕೆಗೆ ಪ್ರಮುಖ ಪದಾಧಿಕಾರಿಗಳನ್ನು ವೈಯಕ್ತಿಕವಾಗಿ ಹೊಣೆಗಾರ ರನ್ನಾಗಿ ಮಾಡುತ್ತದೆ. ಇದು ಕಾನೂನಿಗೆ ಅನುಸಾರವಾಗಿ ಹೆಚ್ಚಿನ ಜವಾಬ್ದಾರಿ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ. ಧಾರ್ಮಿಕ ಶಿಕ್ಷಣ, ಪ್ರವಚನಗಳು, ಆಧ್ಯಾತ್ಮಿಕ ಶಿಬಿರಗಳು ಮತ್ತು ಸ್ಥಳೀಯ ನಂಬಿಕೆಗಳ ಸಂರಕ್ಷಣೆಯಂತಹ ಚಟುವಟಿಕೆಗಳಿಗೆ ನಿಧಿಯನ್ನು ನೀಡುವುದಕ್ಕೆ ಅಡ್ಡಿಯಿಲ್ಲ. ಆದರೆ ಮತಾಂತರಗಳಿಗೆ ವಿದೇಶಿ ಹಣವನ್ನು ಬಳಸುವುದನ್ನು ನಿಷೇಧಿಸುತ್ತದೆ. ಎನ್‌ಜಿಒಗಳು ಈಗ ತಮ್ಮ ಎಫ್ʼಸಿಆರ್‌ಎ ಪ್ರಮಾಣಪತ್ರದಲ್ಲಿ ತಮ್ಮ ಚಟುವಟಿಕೆಗಳ ನಿಖರವಾದ ಉದ್ದೇಶ ಮತ್ತು ಭೌಗೋಳಿಕ ಪ್ರದೇಶವನ್ನು ನಿರ್ದಿಷ್ಟಪಡಿಸಬೇಕು. ವಿದೇಶಿ ನಿಧಿಯನ್ನು ದುರ್ಬಳಕೆ ಮಾಡಿಕೊಂಡರೆ, ದುರ್ಬಳಕೆ ಮಾಡಿಕೊಂಡ ಮೊತ್ತದ ಶೇ. 30ರವರೆಗೆ ದಂಡ ವಿಧಿಸಲಾಗುತ್ತದೆ.
ಎಫ್ʼಸಿಆರ್‌ಎ ತಿದ್ದುಪಡಿ ಕಾಯಿದೆ ಪ್ರಕಾರ, ಭಾರತದಲ್ಲಿ ವಿದೇಶಿ ದೇಣಿಗೆ ಪಡೆಯುವ ಪ್ರತಿಯೊಂದು ಎನ್‌ಜಿಒ ಅಥವಾ ಸಂಸ್ಥೆಯು ಕಡ್ಡಾಯವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದಿಲ್ಲಿಯ ಮುಖ್ಯ ಶಾಖೆಯಲ್ಲಿ ನಿರ್ದಿಷ್ಟಪಡಿಸಿದ ಎಫ್ʼಸಿಆರ್‌ಎ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ವಿದೇಶದಿಂದ ಬರುವ ಯಾವುದೇ ದೇಣಿಗೆಯು ಮೊದಲು ನೇರವಾಗಿ ದೆಹಲಿಯ ಈ ಎಸ್‌ಬಿಐ ಮುಖ್ಯ ಶಾಖೆಗೆ ಬಂದು ಜಮೆಯಾಗುತ್ತದೆ. ಇದರ ಮುಖ್ಯ ಉದ್ದೇಶವೆಂದರೆ, ದೇಶಕ್ಕೆ ಬರುವ ಪ್ರತಿಯೊಂದು ವಿದೇಶಿ ಹಣದ ಮೂಲವನ್ನು ಕೇಂದ್ರ ಸರಕಾರದ ಏಜೆನ್ಸಿಗಳು ಒಂದೇ ಕೇಂದ್ರದ ಮೂಲಕ ಸುಲಭವಾಗಿ ಪತ್ತೆ ಹಚ್ಚಲು ಮತ್ತು ಮೇಲ್ವಿಚಾರಣೆ ಮಾಡಲು ಸಾಧ್ಯವಾಗು ತ್ತದೆ. ಇದನ್ನು ಬೇಡ ಎನ್ನಲು ಸಾಧ್ಯವೇ ?