ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬದಲಾವಣೆ ಗಾಳಿಯಲ್ಲಿ ಹೊಸ ಪಾಠ

ಕೇರಳದಲ್ಲಿ ಮೂರು ಅವಧಿಯಿಂದ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವ ದ ಎಡರಂಗದ ಎಲ್‌ಡಿಎಫ್ ಪಕ್ಷದಿಂದ ಅಧಿಕಾರ ಕಸಿದು ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಗದ್ದುಗೆ ಏರುತ್ತಿದೆ. ಕೇರಳದಲ್ಲೂ ಬಿಜೆಪಿ ಮೊದಲ ಬಾರಿಗೆ ಮೂರು ಸ್ಥಾನ ಗೆದ್ದಿದೆ. ಈ ನಾಲ್ಕು ರಾಜ್ಯಗಳ ಫಲಿತಾಂಶ, ದೇಶ ಬದಲಾವಣೆಯತ್ತ ವಾಲುತ್ತಿರುವುದಕ್ಕೆ ಉದಾಹರಣೆ.

ಬದಲಾವಣೆ ಗಾಳಿಯಲ್ಲಿ ಹೊಸ ಪಾಠ

-

Profile
Ashok Nayak May 5, 2026 10:20 AM

ಶೋಭಾ ಮಳವಳ್ಳಿ‌

ಪ್ರತಿ ಚುನಾವಣೆಯೂ ರಾಜಕೀಯ ಪಕ್ಷಗಳಿಗೆ, ಜನವಿರೋಧಿ ರಾಜಕಾರಣಿಗಳು, ಸರಕಾರ ಗಳಿಗೆ ಪಾಠ ಕಲಿಸುತ್ತಲೇ ಇರುತ್ತದೆ. ಆದರೆ ಈ ಆಡಳಿತ ಪಕ್ಷ ಪರಾಜಯ ಕಂಡ ಮೂರು ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ ಒಂದೇ ಅಲ್ಲ ದೇಶದ ಭದ್ರತೆ, ಹಿಂದೂಗಳ ನಿರ್ಲಕ್ಷ್ಯ, ಕುಟುಂಬ ರಾಜಕಾರಣದ ಬಗ್ಗೆ ಹೇವರಿಕೆ ಎಲ್ಲವೂ ಫಲಿತಾಂಶವಾಗಿ ಹೊರಹೊಮ್ಮಿದೆ. ಮೌನವಾಗಿದ್ದ ಮತದಾರರ ಲೆಕ್ಕಾಚಾರ ಗ್ರಹಿಸುವಲ್ಲಿ ವಿಫಲವಾದ ಟಿಎಂಸಿ, ಡಿಎಂಕೆ ಮತ್ತು ಎಲ್‌ಡಿಎಫ್ ಸೋಲಿಗೆ ಕೊರಳೊಡ್ಡುವಂತಾಗಿದೆ.

ದೇಶದ ಇತಿಹಾಸದ ಮೊದಲ ಬಾರಿಗೆ ಎಡಪಕ್ಷಗಳಿಗೆ ಸೋಲುಣಿಸಿದ್ದಾನೆ ಮತದಾರ. ಒಣ ಸಿದ್ಧಾಂತ, ಪಾಳೇಗಾರಿಕೆ ಕುಟುಂಬ ರಾಜಕಾರಣ, ಅಧಿಕಾರದ ಬಲ, ತೋಳ್ಬಲ, ದರ್ಪ, ಧರ್ಮದ ಧ್ರುವೀಕರಣ ಎಲ್ಲವನ್ನು ಒಂದೇ ಏಟಿಗೆ ಒರೆಸಿ ಹಾಕಿದ್ದಾನೆ. ಮತದಾರ.

ಇದಕ್ಕೆ ಇಂದಿನ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶವೇ ನಿಚ್ಚಳ ಉದಾಹರಣೆ. ಆಡಳಿತ ವಿರೋಧಿ ಅಲೆಯ ಹೊಡೆತಕ್ಕೆ ಸಿಕ್ಕಿ ಪಶ್ಚಿಮ ಬಂಗಾಳ ಧೂಳೀಪಟವಾದರೆ, ತಮಿಳು ನಾಡಿನಲ್ಲಿ ಕರುಣಾನಿಧಿ ಕುಟುಂಬ ರಾಜಕಾರಣದ ಬೇರು ಕುಸಿದು ಬಿದ್ದಿದೆ. ಅತ್ತ ಪುದುಚೇರಿಯಲ್ಲಿ ಎನ್ ಡಿಎ ಮೈತ್ರಿ ಕೂಟ ಮತ್ತೆ ಅಧಿಕಾರ ಹಿಡಿಯುವತ್ತ ದಾಪುಗಾಲಿಟ್ಟಿದೆ.

ಕೇರಳದಲ್ಲಿ ಮೂರು ಅವಧಿಯಿಂದ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗದ ಎಲ್‌ಡಿಎಫ್ ಪಕ್ಷದಿಂದ ಅಧಿಕಾರ ಕಸಿದು ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಗದ್ದುಗೆ ಏರುತ್ತಿದೆ. ಕೇರಳದಲ್ಲೂ ಬಿಜೆಪಿ ಮೊದಲ ಬಾರಿಗೆ ಮೂರು ಸ್ಥಾನ ಗೆದ್ದಿದೆ. ಈ ನಾಲ್ಕು ರಾಜ್ಯಗಳ ಫಲಿತಾಂಶ, ದೇಶ ಬದಲಾವಣೆಯತ್ತ ವಾಲುತ್ತಿರುವುದಕ್ಕೆ ಉದಾಹರಣೆ.

ದೀದಿ ಅಬ್ಬರ ಅಂತ್ಯ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸವೇ ನೆನಪಿಟ್ಟುಕೊಳ್ಳುವಂಥ ಹೊಸ ಕ್ರಾಂತಿಗೆ ಬಿಜೆಪಿ ಮುನ್ನುಡಿ ಬರೆದಿದೆ. 34 ವರ್ಷಗಳ ಎಡಪಂಥೀಯ ಆಡಳಿತವನ್ನು ಅಂತ್ಯ ಗೊಳಿಸಿದ್ದಲ್ಲದೇ, ‘ನಾ ಮಾಟೇ ಶಾಸನ’ ಎಂಬಂಥ ಸಿಎಂ ಮಮತಾ ಬ್ಯಾನರ್ಜಿಯ 15 ವರ್ಷಗಳ ಸುದೀರ್ಘ ಆಡಳಿತವೂ ಕೊನೆಗೊಂಡಿದೆ.

ಇದನ್ನೂ ಓದಿ: Assembly Election Result 2026: ಕೇರಳಂನಲ್ಲಿ ಇತಿಹಾಸ ಬರೆದ ಬಿಜೆಪಿ; ಇದೇ ಮೊದಲ ಬಾರಿಗೆ ಮೂರು ಕ್ಷೇತ್ರಗಳಲ್ಲಿ ಜಯಭೇರಿ

ಮಾಂ, ಮಾತೃಭೂಮಿ, ಔರ್ ಲೋಗ್’ ಎನ್ನುತ್ತಲೇ ಬಂಗಾಳವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಪರಿವರ್ತನೆಯ ಗಾಳಿ ಬಲವಾಗಿಯೇ ಬೀಸಿದೆ.

ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗದ್ದುಗೆ ಏರುತ್ತಿದೆ. ಭ್ರಷ್ಟಾಚಾರದ ಆರೋಪಗಳನ್ನು ನಿರಾಕರಿಸುತ್ತಲೇ ಇದ್ದದ್ದು ಮಮತಾ ಬ್ಯಾನರ್ಜಿಗೆ ದುಬಾರಿಯಾಯಿತು. ಶಿಕ್ಷಕರ ನೇಮಕಾತಿ ಹಗರಣ ಮತ್ತು ಆರ್.ಜಿ ಕರ್ ಮೆಡಿ ಕಲ್ ಕಾಲೇಜಿನ ಅತ್ಯಾಚಾರ ಪ್ರಕರಣ ನಿಭಾಯಿ ಸಿದ ರೀತಿ ಬಂಗಾಳದ ಜನರನ್ನು ಕೆರಳಿಸಿತ್ತು.

ಕೈಗಾರಿಕಾ ವಿರೋಧಿ ನೀತಿಗಳು, ಹೆಚ್ಚುತ್ತಿರುವ ನಿರುದ್ಯೋಗ, ಮುಖ್ಯವಾಗಿ ಬಾಂಗ್ಲಾ ಅಕ್ರಮ ವಲಸಿಗರ ಹಿತ ಕಾಯುವ ನೀತಿಗಳು, ಯುವಜನತೆಯನ್ನು ಭಯಭೀತಗೊಳಿಸಿತ್ತು. ಅಷ್ಟೇ ಅಲ್ಲ, ಮಮತಾ ಬ್ಯಾನರ್ಜಿಯ ವೋಟ್ ಬ್ಯಾಂಕ್ ಆಗಿದ್ದ ಮಹಿಳಾ ಮತದಾರರೂ ಸಹ ಕೈಕೊಟ್ಟಿದ್ದಾರೆ.

ಮತಾ ಬ್ಯಾನರ್ಜಿಯ ‘ಲಕ್ಷ್ಮಿ ಭಂಡಾರ್’ ಯೋಜನೆಗೆ ಪ್ರತಿಯಾಗಿ ಬಿಜೆಪಿ ಘೋಷಿಸಿದ ಮಹಿಳೆಯ ರಿಗೆ ಮಾಸಿಕ 3000 ರು. ಮತ್ತು ಉಚಿತ ಬಸ್ ಪ್ರಯಾಣದ ಭರವಸೆ ಮಹಿಳೆಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎಸ್‌ಸಿ/ ಎಸ್‌ಟಿ ಮತ್ತು ಮತುಮಾ ಸಮುದಾಯಗಳೂ ಈ ಬಾರಿ ಮಮತಾ ಅವರನ್ನು ಕೈ ಬಿಟ್ಟು ಕಮಲ ಹಿಡಿದಿರುವುದು ಅಚ್ಚರಿಯೇನಲ್ಲ.

ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲೂ ಬಿಜೆಪಿಯೇ ಮುನ್ನಡೆ ಸಾಧಿಸಿದ್ದು ನೋಡಿದರೆ, ದಲಿತ ಮತ್ತು ಅಲ್ಪಸಂಖ್ಯಾತರೂ ದೀದಿಯ ಅಬ್ಬರಕ್ಕೆ ರೋಸಿ ಹೋಗಿದ್ದರು ಎಂದೇ ವ್ಯಾಖ್ಯಾನಿಸಲಾಗಿದೆ. ಇದೆಲ್ಲಕ್ಕಿಂತ ಬಹುಮುಖ್ಯವಾಗಿದ್ದು ಎಸ್‌ಐಆರ್ ಪ್ರಕ್ರಿಯೆ. ಚುನಾವಣಾ ಆಯೋಗ, ಮತದಾರರ ಪಟ್ಟಿಯಿಂದ ಸುಮಾರು 91 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರ ಹೆಸರುಗಳನ್ನು ತೆಗೆದು ಹಾಕಿದ್ದು ಬಿಜೆಪಿಗೆ ಪ್ಲಸ್ ಆದರೆ ದೀದಿಗೆ ಒಳ ಏಟು ಕೊಟ್ಟಿದೆ. ಬಿಜೆಪಿ ಜತೆಗಿನ ನಿರಂತರ ಸಂಘರ್ಷ, ಸತತ ಸಮರ ಸಾರಿದರೂ, ಮತದಾರರ ಮನಗೆಲ್ಲುವಲ್ಲಿ ಮಮತಾ ಸೋತಿzರೆ ಅನ್ನೋದು ಸ್ಪಷ್ಟ.

ತಮಿಳುನಾಡಲ್ಲಿ ಜೆನ್ ಜೀ ಕ್ರಾಂತಿ..: ತಮಿಳುನಾಡಿನ ಫಲಿತಾಂಶ ಇಡೀ ದೇಶವನ್ನೇ ದಕ್ಷಿಣದತ್ತ ತಿರುಗಿ ನೋಡುವಂತೆ ಮಾಡಿದೆ. ಡಿಎಂಕೆ ಪಕ್ಷದ ಪತನ, ದ್ರಾವಿಡ ಸಿದ್ಧಾಂತಿಗಳಿಗೆ ಮುಖಭಂಗ ಉಂಟು ಮಾಡಿದೆ. ತಮಿಳುನಾಡು ಸಿಎಂ ಸ್ಟಾಲಿನ್ ಕುಟುಂಬ ರಾಜಕಾರಣ, ಪಕ್ಷದ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿ, ಮಗ ಉದಯನಿಧಿ ಸ್ಟಾಲಿನ್ ಗೆ ಡಿಸಿಎಂ ಪಟ್ಟ ಕಟ್ಟಿದಾ ಗಲೇ, ಡಿಎಂಕೆ ಪತನ ಆರಂಭವಾಗಿತ್ತು.

ತಮಿಳುನಾಡಿನ ಮಾಧ್ಯಮಗಳನ್ನು ಕೈಗೊಂಬೆಯಾಗಿಸಿಕೊಂಡಿದ್ದ ಸ್ಟಾಲಿನ್, ಆಡಳಿತ ವಿರೋಧಿ ಯ ಅಲೆ ಏಳದಂತೆ ಎಚ್ಚರಿಕೆ ವಹಿಸಿದ್ದರು. ಆದರೆ, ಸ್ಟಾಲಿನ್ ಸರಕಾರದ ಹಿಂದೂ ವಿರೋಧಿ ನೀತಿಗಳು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಹಿಂದೂ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸುತ್ತಾ, ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ಬಂದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನು ತೊಡೆದುಹಾಕಬೇಕು ಎನ್ನುವಷ್ಟರ ಮಟ್ಟಿಗೆ ಮುಂದುವರಿದಿದ್ದ. ಇದಕ್ಕೆಲ್ಲ ತುಪ್ಪ ಸುರಿಯುವಂತೆ ಮಾಡಿದ್ದು, ಮುರುಗನ್ ದೇವಸ್ಥಾನದ ಕಾರ್ತಿಕ ದೀಪ ವಿವಾದ.

ತಿರುಪಾರಂಕುಂದ್ರಂ (ಮಧುರೈ ಹತ್ತಿರ) ಮುರುಗನ್ ದೇವಸ್ಥಾನದ ಬೆಟ್ಟದ ಮೇಲೆ ದೀಪ ಹಚ್ಚಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದರೂ ಡಿಎಂಕೆ ಸರಕಾರ ಕಾನೂನು ನೆಪವೊಡ್ಡಿ ತಡೆ ಹಿಡಿಯಿತು. ಇದು ಹಿಂದೂಗಳ ಸಿಟ್ಟಿಗೆ ಕಾರಣವಾಯಿತು. ಸ್ಟಾಲಿನ್ ಸರಕಾರದ ಹಿಂದೂ ವಿರೋಧಿ ನೀತಿಗಳಿಂದ ಬೇಸತ್ತ ತಮಿಳರ ಪಾಲಿಗೆ ಆಶಾಕಿರಣ ಅನಿಸಿದ್ದು ದಳಪತಿ ವಿಜಯ.

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಕಟ್ಟಿದ ವಿಜಯ್ ಪರ ಅಭಿಮಾನಿಗಳ ಬೆಂಬಲದ ದೊಡ್ಡ ಅಲೆ ಎದ್ದಾಗ ವಿಚಲಿತಗೊಂಡ ಡಿಎಂಕೆ, ವಿಜಯ್ ಗೆ ಇನ್ನಿಲ್ಲದ ಕಾಟ ಕೊಟ್ಟಿತ್ತು. ‘ಜನನಾಯಗನ್’ ಚಿತ್ರಕ್ಕೆ ತಡೆಯೊಡ್ಡಿದ್ದು, ಕರೂರು ಕಾಲ್ತುಳಿತದ ವಿಚಾರಣೆಗಳು ವಿಜಯ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು. ಇದರಿಂದ ಡಿಎಂಕೆ ವಿರುದ್ಧ ಜೆನ್ ಜೀ ತಿರುಗಿಬಿದ್ದಿತ್ತು.

ಸಮೀಕ್ಷೆಗಳಲ್ಲಿ ಮೂರನೇ ಸ್ಥಾನದಲ್ಲಿದ್ದ ಟಿವಿಕೆಯ ವಿಜಯ, ಈಗ್ ತಮಿಳುನಾಡಿನಲ್ಲಿ ಎಬ್ಬಿಸಿದ ಸುನಾಮಿಗೆ ಸ್ಟಾಲಿನ್ ನೇತೃತ್ವದ ಡಿಎಂಕೆ ಕೊಚ್ಚಿ ಹೋಗಿದೆ. ತಮಿಳರು ಸಿನಿಮಾ ಪ್ರಿಯರು ಎಂಬುದು ಮತ್ತೊಮ್ಮೆ ಸಾಬೀತಾದರೂ, ವಿಜಯ್ ರಾಜಕೀಯ ನಡೆಯಲ್ಲೂ ತಂತ್ರಗಾರಿಕೆ ಇತ್ತು.

ಬಿಜೆಪಿಯ ಮೈತ್ರಿ ಪ್ರಸ್ತಾಪ ತಿರಸ್ಕರಿಸಿ ಎಲ್ಲ 234 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಲೆಕ್ಕಾಚಾರದಲ್ಲಿ ವಿಜಯ್ ಗೆದ್ದಿದ್ದಾರೆ. ಅತ್ತ ಎಐಎಡಿಎಂಕೆ ಮತ್ತು ಬಿಜೆಪಿ ಮಿತ್ರಪಕ್ಷದ ಸಾಧನೆ ಯೂ, ಡಿಎಂಕೆಗೆ ನುಗ್ಗಲಾರದ ತುತ್ತಾಗಿದೆ. ಕೊನೆ ಕ್ಷಣದಲ್ಲಿ ಎಐಡಿಎಂಕೆಗೆ ಕೈಕೊಟ್ಟು ಡಿಎಂಕೆ ಸೇರಿದ ನಾಯಕರೂ ಕೈಕೈ ಹಿಚುಕಿ ಕೊಳ್ಳುವಂತಾಗಿದೆ..

ಅಸ್ಸಾಂನಲ್ಲಿ ಅಭಿವೃದ್ಧಿ ಮತ್ತು ಹಿಂದುತ್ವ.!!: ಅಸ್ಸಾಂನಲ್ಲಿ ಬಿಜೆಪಿ ಗೆಲುವಿಗೆ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ವರ್ಚಸ್ಸು, ಆಡಳಿತದಲ್ಲಿ ಬಿಗಿ ಹಿಡಿತವೇ ಕಾರಣ. ಹಿಂದುತ್ವದ ಫೈರ್‌ ಬ್ರಾಂಡ್ ಆಗಿ, ಅಸ್ಸಾಂ ಹಿಂದೂಗಳ ಭರವಸೆಯ ನಾಯಕ ಎನಿಸಿರುವ ಹೇಮಂತ್ ಬಿಸ್ವಾ ಸೋಲಿಸುವುದು ಇನ್ನು ಕನಸಿನ ಮಾತು ಎನಿಸುವಂತೆ ಮಾಡಿದೆ ಈ ಚುನಾವಣೆ.

ಅಭಿವೃದ್ಧಿ ಜತೆ ಜತೆಗೆ ಹಿಂದುತ್ವದ ವಿಚಾರಗಳನ್ನು ಪ್ರತಿಪಾದಿಸುತ್ತಾ, ಹಿಂದೂಗಳ ರಕ್ಷಣೆ, ಧಾರ್ಮಿಕ ಕೇಂದ್ರಗಳ ಸಂರಕ್ಷಣೆ, ಮತಗಳ ಧ್ರುವೀಕರಣಕ್ಕೆ ಕಾರಣವಾಯಿತು. ಮುಖ್ಯವಾಗಿ ದಶಕಗಳಿಂದ ನಡೆಯುತ್ತಿದ್ದ ಬೋಡೋಲ್ಯಾಂಡ್ ಮತ್ತು ಉಲ್ಪಾ ಬಂಡುಕೋರರೊಂದಿಗೆ ಶಾಂತಿ ಒಪ್ಪಂದ, ಗಡಿ ವಿವಾದಗಳ ಇತ್ಯರ್ಥ ಜನರ ವಿಶ್ವಾಸ ಹೆಚ್ಚಲು ಕಾರಣವಾಯಿತು.

ಉದ್ಯೋಗ ಸೃಷ್ಟಿಯ ಭರವಸೆಯೂ ಜೆನ್ ಜೀ ಸೆಳೆಯಿತು. ಇದೆಲ್ಲದರ ಜತೆಗೆ, ಬಿಜೆಪಿಗೆ ಪ್ರಬಲ್ ವಿರೋಧ ಪಕ್ಷದ ಭಯವೇ ಇಲ್ಲದಂತಾಗಿತ್ತು. ವಿರೋಧ್ ಪಕ್ಷದಲ್ಲಿನ ನಾಯಕತ್ವ ಕೊರತೆ, ಎನ್ ಡಿಎ ಗೆಲುವಿನ ಹಾದಿ ಸರಾಗಗೊಳಿಸಿತು.

ಪುದುಚೇರಿಯಲ್ಲಿ ನಡೆಯದ ಡಿಎಂಕೆ ಆಟ..!: ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿದೆ. ಎನ್‌ಡಿಎ ಮೈತ್ರಿಗೆ 17 ಸ್ಥಾನ ದಕ್ಕಿದ್ದು ಮತ್ತೆ ಅಧಿಕಾರಕ್ಕೇರಿದೆ. ಪುದುಚೇರಿಯಲ್ಲೂ ಅಧಿಕಾರ ಹಿಡಿಯುವ ಕಾಂಗ್ರೆಸ್, ಡಿಎಂಕೆ ಮೈತ್ರಿಗೆ ತೀವ್ರ ಹಿನ್ನಡೆಯಾಗಿದೆ. ಎಐಎನ್ ಆರ್‌ಸಿ, ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಕೂಟಕ್ಕೆ ಎಸ್. ರಂಗಸ್ವಾಮಿ ನಾಯಕತ್ವವೇ ಗಟ್ಟಿ. ಹಿಂದುತ್ವ, ಅಭಿವೃದ್ಧಿ, ಜನಪರ ಯೋಜನೆಗಳು ಎನ್‌ಡಿಎ ಕೈ ಹಿಡಿದಿವೆ. ಈ ನಾಲ್ಕು ರಾಜ್ಯಗಳಲ್ಲಿ ಆಡಳಿತ ವಿರೋಧಿ ಜತೆಗೆ ಸಿದ್ಧಾಂತದ ತಾಕಲಾಟವೂ ಸೇರಿತ್ತು.

ಫಲಿತಾಂಶದ ನಿರ್ಣಾಯಕ ಎನಿಸಿರುವ ಮಹಿಳೆಯರು ಮತ್ತು ಜೆನ್‌ಜೀ ಸಿದ್ಧಾಂತ, ಆದ್ಯತೆಗಳು ಮತ್ತು ನಿರೀಕ್ಷೆಗಳನ್ನು ಬಹುತೇಕ ಪಕ್ಷಗಳು ನಿರ್ಲಕ್ಷಿಸಿಕೊಂಡೇ ಬಂದಿವೆ. ಧರ್ಮ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಪ್ರಜಾಪ್ರಭುತ್ವ, ಸಂವಿಧಾನ ಏನೇ ಮಾತನಾ ಡಿದರೂ ಧರ್ಮವೇ ರಾಜಕಾರಣವನ್ನು ನಿಯಂತ್ರಿಸುತ್ತದೆ. ಈ ದೇಶದ ಮಣ್ಣಿನಲ್ಲಿರುವ್ ಧರ್ಮದ ಬಗೆಗಿನ ಭಾವನಾ ತ್ಮಕತೆಯನ್ನು ಬದಲಿಸಲು ಸದ್ಯಕ್ಕಂತೂ ಸಾಧ್ಯವಿಲ್ಲ. ಅದಕ್ಕೆ ಈ ಫಲಿತಾಂಶವೇ ಸಾಕ್ಷಿ.

ಕೇರಳದಲ್ಲಿ ಎಡಪಂಥೀಯರಿಗೆ ಶಾಕ್!

ಚುನಾವಣೆ ಫಲಿತಾಂಶವು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗದ ಮೈತ್ರಿಕೂಟಕ್ಕೆ ಭಾರಿ ಆಘಾತ ನೀಡಿದೆ. ಆಡಳಿತ ವಿರೋಧಿ ಅಲೆಯಲ್ಲಿ ಎಲ್‌ಡಿಎಫ್ ಕೊಚ್ಚಿ ಹೋಗಿದೆ. ಉದ್ಯೋಗಾವಕಾಶಗಳಿಲ್ಲದೇ ನಲುಗಿದ ಯುವ ಸಮೂಹ, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ʼಗೆ ಜೈ ಎಂದಿದೆ. ಹತ್ತು ವರ್ಷದ ಎಲ್‌ಡಿಎಫ್ ಆಡಳಿತದ ನಂತರ ಕೇರಳ ಜನರು, ಈ ಬಾರಿ‌ ಬದಲಾವಣೆಗೆ ಮತ ಹಾಕಿದ್ದಾರೆ. ಈ ಬಾರಿಯೂ ಬಿಜೆಪಿಯ ಅಧಿಕಾರದ ಕನಸು ನನಸಾಗ ದಿದ್ದರೂ, ಪಕ್ಷದ ನೆಲಮಟ್ಟದ ಬೇರುಗಟ್ಟಿಯಾಗುತ್ತಿದೆ.

ಮತ್ತೊಂದು ಗಮನಾರ್ಹ ವಿಷಯ, ಎಲ್‌ಡಿಎಫ್‌ʼಗೆ ಬಂಡಾಯ ನಾಯಕರೇ ಪೆಟ್ಟು ಕೊಟ್ಟಿರು ವುದು. ಕಾಂಗ್ರೆಸ್ ನೇತೃತ್ವದಲ್ಲಿ ಯುಡಿಎಫ್ ಬೆಂಬಲ ಪಡೆದ ಹಿರಿಯ ನಾಯಕ ಸುಧಾಕರನ್ ಸೇರಿ ಹಲವು‌ ನಾಯಕರು ಪಿಣ ರಾಯಿ ವಿಜಯ್ ವಿರುದ್ಧ ಬಂಡೆದ್ದು ಕಣಕ್ಕಿಳಿದಿದ್ದು, ಎಲ್‌ಡಿಎಫ್‌ʼಗೆ ಬಿಸಿತುಪ್ಪವೇ ಆಯ್ತು.