ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಾವು, ಏಣಿ ಆಟಕ್ಕೆ ಸಿಕ್ಕ ಸಮರ್ಥ್‌ ಗೆಲುವು

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ 63,870 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದಾರೆ. ಈ ಮೂಲಕ ದಾವಣಗೆರೆ ದಕ್ಷಿಣ ಮತ್ತೊಮ್ಮೆ ಕಾಂಗ್ರೆಸ್ ಭದ್ರ ಕೋಟೆ ಎಂದು ಸಾಬೀತಾಗಿದೆ. ಆದರೆ, ಕಳೆದ ಬಾರಿ 1700 ಮಾತ್ರ ಮತ ಪಡೆದಿದ್ದ ಎಸ್‌ಡಿಪಿಐ ಅಭ್ಯರ್ಥಿ ಈ ಬಾರಿ ಬರೋಬ್ಬರಿ 18,975 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತಲುಪಿದೆ. ಈ ಮೂಲಕ ಕಾಂಗ್ರೆಸ್ ಗೆಲುವಿನ ಅಂತರ ಕಡಿಮೆಗೊಳ್ಳಲು ಕಾರಣರಾಗಿದ್ದಾರೆ.

ಹಾವು, ಏಣಿ ಆಟಕ್ಕೆ ಸಿಕ್ಕ ಸಮರ್ಥ್‌ ಗೆಲುವು

-

Profile
Ashok Nayak May 5, 2026 7:57 PM

ಗಣೇಶ್ ಕಮ್ಲಾಪುರ ದಾವಣಗೆರೆ

ದಕ್ಷಿಣಾಧಿಪತಿಯಾಗಿ ಸಮರ್ಥ್ ಶಾಮನೂರು

‘ಕೈ’ ಬಿಡದ ಮತದಾರ ಪ್ರಭು

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಕದನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು 69,578 ಮತ ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿಯ ವಿರುದ್ಧ 5708 ಮತಗಳ ಅಂತರದ ಗೆಲವು ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ 63,870 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದಾರೆ. ಈ ಮೂಲಕ ದಾವಣಗೆರೆ ದಕ್ಷಿಣ ಮತ್ತೊಮ್ಮೆ ಕಾಂಗ್ರೆಸ್ ಭದ್ರ ಕೋಟೆ ಎಂದು ಸಾಬೀತಾಗಿದೆ. ಆದರೆ, ಕಳೆದ ಬಾರಿ 1700 ಮಾತ್ರ ಮತ ಪಡೆದಿದ್ದ ಎಸ್‌ಡಿಪಿಐ ಅಭ್ಯರ್ಥಿ ಈ ಬಾರಿ ಬರೋಬ್ಬರಿ 18,975 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತಲುಪಿದೆ. ಈ ಮೂಲಕ ಕಾಂಗ್ರೆಸ್ ಗೆಲುವಿನ ಅಂತರ ಕಡಿಮೆಗೊಳ್ಳಲು ಕಾರಣರಾಗಿದ್ದಾರೆ. ನಗರದ ಹಳೇ ಪಿಬಿ ರಸ್ತೆಯ ಡಿಆರ್ ಆರ್ ಶಾಲೆಯಲ್ಲಿ ನಡೆದ ಮತ ಎಣಿಕೆಯಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಅಂತಿಮ ಸುತ್ತಿನ ಮತ ಎಣಿಕೆ ಕಾರ್ಯ ಮುಗಿದ ಬಳಿಕ ಅಧಿಕೃತವಾಗಿ ಫಲಿತಾಂಶವನ್ನು ಚುನಾವಣಾಧಿಕಾರಿ ಘೋಷಣೆ ಮಾಡಿದರು.

ತಗ್ಗಿದ ಅಂತರ: 2023ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಅವರು 27888 ಅಂತರದ ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಮಣಿಸಿದ್ದರು. ಆದರೆ, ಈ ಬಾರಿ ಮುಸ್ಲಿಂರ ಟಿಕೆಟ್ ಬೇಡಿಕೆ, ಕುಟುಂಬ ರಾಜಕಾರಣ ಮತ್ತಿತರ ಕಾರಣಗಳ ನಡುವೆಯೂ ಅವರ ಮೊಮ್ಮಗ ಸಮರ್ಥ್ ಕೇವಲ 5708 ಮತ ಪಡೆಯುವ ಮೂಲಕ ಗೆಲುವು ಕಂಡಿದ್ದಾರೆ.

ಬ್ಯಾಲೆಟ್ ಪೇಪರ್ ಎಣಿಕೆ: 21 ಸುತ್ತುಗಳಿದ್ದ ಎಣಿಕೆ ಕಾರ್ಯ ಮುಗಿಯುವ ವೇಳೆಗೆ 19 ಸುತ್ತಿನಲ್ಲಿ ಅಜಾದ್ ನಗರ, ಬಾಷಾನಗರ ಬೂತ್‌ಗಳ ಮೂರು ಇವಿಎಂ ಯಂತ್ರಗಳು ತಾಂತ್ರಿಕ ಕಾರಣದಿಂದ ಓಪನ್ ಆಗದೆ 1626 ಮತಗಳ ಎಣಿಕೆ ಸ್ಥಗಿತಗೊಂಡಿತ್ತು. ನಂತರ, ವಿವಿ ಪ್ಯಾಟ್‌ನಲ್ಲಿನ ಬ್ಯಾಲೆಟ್ ಪೇಪರ್ ಎಣಿಕೆ ನಡೆಯಿತು.

ಇದನ್ನೂ ಓದಿ: Raghava Sharma Nidle Column: ದೀದಿಗೆ ಗುಡ್‌ಬೈ , ಮೋದಿಗೆ ಹಾಯ್ ಹಾಯ್..!

ಕೈ ಕೊಟ್ಟ ಸ್ಟ್ರಾಂಗ್ ರೂಂ ಬೀಗದ ಕೈ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ನಗರದ ಡಿಆರ್ ಆರ್ ಶಾಲೆಯಲ್ಲಿ ಸೋಮವಾರ ನಡೆದಿದ್ದು, ಬೆಳ್ಳಂಬೆಳಗ್ಗೆ ಸ್ಟ್ರಾಂಗ್ ರೂಂ ಒಪನ್ ಮಾಡಲು ಹೋದಾಗ ಮತ ಯಂತ್ರಗಳು ಇರುವ ರೂಮ್ ನಂಬರ್ 1, 2, 3ರ ಬೀಗದ ಕೀ ಸಿಗದೇ ಬಾಗಿಲು ತೆರೆಯಲು ಹರಸಾಹಸ ಮಾಡಲಾಯಿತು.

7.36 ಗಂಟೆಯಿಂದ 7.46ರ ವರೆಗೆ ಕೀ ಗೊಂಚಲು ತಡಕಾಡಿದರೂ ರೂಂ ನಂಬರ್ 1ರ ಬೀಗದ ಕೀ ಸಿಗಲೇ ಇಲ್ಲ. ಪ್ರತಿಯೊಂದು ಸ್ಟ್ರಾಂಗ್ ರೂಂಗೂ ಎರಡೆರೆಡು ಅತ್ಯಾಧುನಿಕ ಬೀಗಗಳನ್ನೇ ಹಾಕಲಾಗಿತ್ತು. ಡಬಲ್ ಲಾಕರ್ ಬೀಗ ಸಹ ಅವುಗಳಿಗೆ ಅಳಡಿಸಲಾಗಿತ್ತು. ಆದರೆ, ಚುನಾವಣಾ ಧಿಕಾರಿ ಬಳಿ ಇದ್ದ ಕೀಗಳಿಂದ ಬೀಗಗಳನ್ನು ತೆಗೆಯಲಾಗದೇ ಅನಿವಾರ್ಯವಾಗಿ ಎರಡು ಸ್ಟ್ರಾಂಗ್ ರೂಂಗಳ ಬೀಗ ಮುರಿದು, ಕೊನೆಗೆ ಸುತ್ತಿಗೆ ಬಳಸಿ ಬಾಗಿಲು ತೆಗೆಯಲಾಯಿತು.

ಇನ್ನೂ, ಕೊನೆಯ 19 ಸುತ್ತಿನಲ್ಲಿ ಅಜಾದ್ ನಗರ, ಬಾಷಾನಗರ ಬೂತ್‌ಗಳ ಮೂರು ಇವಿಎಂ ಯಂತ್ರಗಳು ಓಪನ್ ಆಗದೆ 1626 ಮತಗಳ ಎಣಿಕೆ ಸ್ಥಗಿತಗೊಂಡಿತ್ತು. ಈಗ ವಿವಿ ಪ್ಯಾಟ್‌ನಲ್ಲಿನ ಬ್ಯಾಲೆಟ್ ಪೇಪರ್ ಎಣಿಕೆ ನಡೆಯಿತು. ಈ ಎಣಿಕೆ ಕಾರ್ಯ ಪೂರ್ಣಗೊಂಡ ನಂತರ ಸಮರ್ಥ್ ಅವರ ಗೆಲುವು ಘೋಷಿಸಲಾಯಿತು.

ಶಾಮನೂರು ಕುಟುಂಬದ ೩ನೇ ತಲೆಮಾರು ವಿಧಾನಸಭೆಗೆ

ಈ ಗೆಲುವು ಶಾಮನೂರು ಕುಟುಂಬಕ್ಕೆ ಅತ್ಯಂತ ಪ್ರತಿಷ್ಠಯ ಪ್ರಶ್ನೆ ಆಗಿತ್ತು. ದಶಕಗಳ ಕಾಲ ದಾವಣಗೆರೆಯ ರಾಜಕಾರಣದ ಸಾರಥ್ಯ ವಹಿಸಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನ ಮುಂದೆ ಯಾರು ಎಂಬ ಪ್ರಶ್ನೆ ಸೃಷ್ಟಿಸಿತ್ತು. ಅದನ್ನು ತುಂಬಲು ಕಣಕ್ಕಿಳಿದಿದ್ದ ಮೊಮ್ಮಗ ಸಮರ್ಥ್ ಶಾಮನೂರು, ಅಜ್ಜ ಮತ್ತು ತಂದೆಯವರ ರಾಜಕೀಯ ಪರಂಪರೆ ಯಶಸ್ವಿಯಾಗಿ ಮುಂದು ವರಿಸಿದ್ದಾರೆ. ಇದು ನಮ್ಮ ಅಜ್ಜ ಈ ಕ್ಷೇತ್ರದ ಜನತೆಗೆ ನೀಡಿದ ಸೇವೆಗೆ ಮತ್ತು ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕೆಲಸಗಳಿಗೆ ಸಿಕ್ಕ ಜಯ ಎಂದು ಸಮರ್ಥ್ ಹರ್ಷ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, ದಾವಣಗೆರೆ ದಕ್ಷಿಣ ಕ್ಷೇತ್ರ ಮತ್ತೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದ್ದು, ಸಮರ್ಥ್ ಶಾಮನೂರು ಅಸೆಂಬ್ಲಿ ಪ್ರವೇಶದ ಹಾದಿ ಸುಗಮವಾಗಿದೆ.

ಕಾಂಗ್ರೆಸ್‌ಗೆ ಅಡ್ಡಗಾಲು ಹಾಕಿದ ಪಕ್ಷೇತರರು!

ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್‌ಗಾಗಿ ಪಟ್ಟು ಹಿಡಿದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಸ್‌ಡಿಪಿಐಐ ಸೇರಿ ಹಲವು ಮುಸ್ಲಿಂ ಪಕ್ಷೇತರ ಅಭ್ಯರ್ಥಿಗಳು 22 ಸಾವಿರಕ್ಕೂ ಅಧಿಕ ಮತ ಪಡೆದು ಕಾಂಗ್ರೆಸ್‌ಗೆ ಹೆಚ್ಚಿನ ಲೀಡ್ ತಪ್ಪಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಆರಂಭದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ನ ಹಿರಿಯ ಮುಖಂಡ ಸಾಧಿಕ್ ಪೈಲ್ವಾನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ನಂತರ ಕಣದಿಂದ ನಿವೃತ್ತಿ ಹೊಂದಿದ್ದರೂ ಅವರಿಗೆ 47 ಮತಗಳು ಬಂದಿವೆ.

ಎಸ್‌ಡಿಪಿಐನ ಅಪ್ಸರ್ ಕೊಡ್ಲಿಪೇಟೆ ಅವರು ಬರೋಬ್ಬರಿ 18975 ಮತ ಪಡೆದಿದ್ದಾರೆ. ಇನ್ನು, ಪಕ್ಷೇತರರಾಗಿ ಸ್ಪರ್ಧಿಸಿದ್ದ ಖಾದರ್ ಅದಿಲ್ ಭಾಷಾ ರೈತ ಸಂಘಟನೆಗಳ ಬೆಂಬಲ ಪಡೆದು ಅಬ್ಬರದ ಪ್ರಚಾರ ನಡೆಸಿದ್ದರು. ಅವರೂ 1082 ಮತ ಪಡೆದಿದ್ದಾರೆ. ನಂತರ, ಸೈಯದ್ ರಿಜಾಯ್ 1186 ಮತ ಪಡೆದಿದ್ದಾರೆ.