ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟೆಕ್ ಹಿನ್ನೆಲೆ ಇಲ್ಲದವರಿಗೂ ಕಾಗ್ನಿಜೆಂಟ್‌ನಲ್ಲಿ ಉದ್ಯೋಗ, ಐಐಎಂ ಬೆಂಗಳೂರು ಸೇರಿ 58 ಸಂಸ್ಥೆಗಳ ಪದವೀಧರರ ನೇಮಕ

Cognizant: ಕಾಗ್ನಿಜೆಂಟ್ ಭಾರತದಲ್ಲಿ ತನ್ನ ಹೊಸ ಟ್ಯಾಲೆಂಟ್ ಆಕ್ಸಿಲರೇಟರ್ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮಕ್ಕಾಗಿ ದೇಶದ 37 ನಗರಗಳ 58 ಪ್ರತಿಷ್ಠಿತ ಬಿಸಿನೆಸ್ ಸ್ಕೂಲ್‌ಗಳಿಂದ ಹೊಸದಾಗಿ 489 ಪದವೀಧರರನ್ನು ನೇಮಕ ಮಾಡಿಕೊಂಡಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಟೆಕ್ ಹಿನ್ನೆಲೆ ಇಲ್ಲದವರಿಗೂ ಕಾಗ್ನಿಜೆಂಟ್‌ನಲ್ಲಿ ಉದ್ಯೋಗ

-

Profile
Siddalinga Swamy Aug 17, 2026 5:16 PM

ಬೆಂಗಳೂರು, ಆ.17: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ತಂತ್ರಜ್ಞಾನ ಸೇವೆ ಒದಗಿಸುವ ಜಾಗತಿಕ ಮಟ್ಟದ ಮುಂಚೂಣಿ ಸಂಸ್ಥೆ ಕಾಗ್ನಿಜೆಂಟ್ (Cognizant) ಭಾರತದಲ್ಲಿ ತನ್ನ ಹೊಸ ಟ್ಯಾಲೆಂಟ್ ಆಕ್ಸಿಲರೇಟರ್ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮಕ್ಕಾಗಿ ದೇಶದ 37 ನಗರಗಳ 58 ಪ್ರತಿಷ್ಠಿತ ಬಿಸಿನೆಸ್ ಸ್ಕೂಲ್‌ಗಳಿಂದ ಹೊಸದಾಗಿ 489 ಪದವೀಧರರನ್ನು ನೇಮಕ ಮಾಡಿಕೊಂಡಿದೆ. ಐಐಎಂ ಬೆಂಗಳೂರು, ಐಐಎಂ ಲಕ್ನೋ, ಐಐಎಂ ಕೋಳಿಕ್ಕೋಡ್‌, ಎಕ್ಸ್‌ಎಲ್‌ಆರ್‌ಐ, ಐಎಸ್‌ಬಿ ಹೈದರಾಬಾದ್‌ನಂತಹ ದೇಶದ ಅತ್ಯುನ್ನತ ಮ್ಯಾನೇಜ್ಮೆಂಟ್ ಸಂಸ್ಥೆಗಳಿಂದ ಈ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ, ನೇಮಕಗೊಂಡವರಲ್ಲಿ ಶೇ. 42ಕ್ಕೂ ಹೆಚ್ಚು ಮಂದಿ ಮಹಿಳೆಯರಾಗಿದ್ದಾರೆ.

ಏನಿದು 'ಟ್ಯಾಲೆಂಟ್ ಆಕ್ಸಿಲರೇಟರ್' ಕಾರ್ಯಕ್ರಮ?

ಇದು ಹೊಸದಾಗಿ ನೇಮಕಗೊಂಡ ಉದ್ಯೋಗಿಗಳಿಗೆ ನೀಡಲಾಗುವ 2 ವಾರಗಳ ತರಬೇತಿ ಕಾರ್ಯಕ್ರಮವಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಪುಣೆಯಲ್ಲಿರುವ ಕಾಗ್ನಿಜೆಂಟ್ ಕ್ಯಾಂಪಸ್‌ಗಳಲ್ಲಿ ಏಕಕಾಲದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಅವಧಿಯಲ್ಲಿ ಹೊಸ ಉದ್ಯೋಗಿಗಳಿಗೆ ಕಂಪನಿಯ ಮೌಲ್ಯಗಳು, ಸೇಲ್ಸ್ ಮತ್ತು ಮಾರ್ಕೆಟಿಂಗ್ ತರಬೇತಿ ನೀಡಲಾಗುತ್ತದೆ. ಜತೆಗೆ, ಕಾಗ್ನಿಜೆಂಟ್‌ನ ಹಿರಿಯ ನಾಯಕತ್ವ ತಂಡದೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶವೂ ಸಿಗಲಿದೆ.

ಟೆಕ್‌ ಹಿನ್ನೆಲೆ ಇಲ್ಲದವರಿಗೂ ಮಣೆ!

ಇಂದಿನ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಕೇವಲ ಇಂಜಿನಿಯರ್‌ಗಳು ಮಾತ್ರವಲ್ಲ, ವಿಭಿನ್ನ ಆಲೋಚನೆ ಮತ್ತು ಕೌಶಲ್ಯವುಳ್ಳವರ ಅಗತ್ಯವಿದೆ ಎಂಬುದನ್ನು ಕಾಗ್ನಿಜೆಂಟ್ ಮನಗಂಡಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ನೇಮಕಗೊಂಡವರ ಪೈಕಿ ಶೇ. 37ಕ್ಕೂ ಹೆಚ್ಚು ಮಂದಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ (ಸ್ಟೆಮ್‌) ಹಿನ್ನೆಲೆ ಇಲ್ಲದವರೂ ಇದ್ದಾರೆ. ಬದಲಾಗಿ ಸಮಾಜಶಾಸ್ತ್ರ, ಮನೋವಿಜ್ಞಾನ, ಇಂಡಸ್ಟ್ರಿಯಲ್ ಡಿಸೈನ್ ಮತ್ತು ಕಚೇರಿ ನಿರ್ವಹಣೆಯಂತಹ ನಾನ್ ಟೆಕ್ ವಿಭಾಗಗಳಲ್ಲಿ ವ್ಯಾಸಂಗ ಮಾಡಿದವರನ್ನು ಕಂಪನಿ ನೇಮಕ ಮಾಡಿಕೊಂಡಿದೆ.

ವೈವಿಧ್ಯತೆಯೇ ನಮ್ಮ ಬಲ

ಈ ಬಗ್ಗೆ ಮಾತನಾಡಿದ ಕಾಗ್ನಿಜೆಂಟ್ ಇಂಡಿಯಾದ ಸಿಎಂಡಿ ಮತ್ತು ಗ್ಲೋಬಲ್ ಆಪರೇಶನ್ಸ್ ಅಧ್ಯಕ್ಷ ರಾಜೇಶ್ ವಾರಿಯರ್, ʼಗ್ರಾಹಕರಿಗೆ ಮತ್ತು ಸಂಸ್ಥೆಗೆ ಉತ್ತಮ ಮೌಲ್ಯ ತಂದುಕೊಡಲು ವೈವಿಧ್ಯಮಯ ಚಿಂತನೆಗಳ ಅಗತ್ಯವಿದೆ. ನಮ್ಮ ಟ್ಯಾಲೆಂಟ್ ಆಕ್ಸಿಲರೇಟರ್ ಕಾರ್ಯಕ್ರಮವು ದೇಶದ ವಿವಿಧ ಭಾಗಗಳ ಪ್ರತಿಭೆಗಳನ್ನು ಒಂದೆಡೆ ಸೇರಿಸುತ್ತದೆ. ಎಐ ತಂತ್ರಜ್ಞಾನವನ್ನು ಬಳಸಿ ನೈಜ ಜಗತ್ತಿನ ವಾಣಿಜ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೊಸ ಉದ್ಯೋಗಿಗಳನ್ನು ಇದು ಸಜ್ಜುಗೊಳಿಸಲಿದೆʼ ಎಂದು ತಿಳಿಸಿದ್ದಾರೆ.

ಹೋಟೆಲ್, ಫ್ಲೈಟ್ ಆಯ್ತು, ಈಗ ಆನ್‌ಲೈನ್‌ನಲ್ಲೇ ಗೈಡ್ ಬುಕ್ಕಿಂಗ್‌!; ಪ್ರವಾಸೋದ್ಯಮ ಸಚಿವಾಲಯ - ಮೇಕ್ ಮೈ ಟ್ರಿಪ್ ಮಹತ್ವದ ಒಪ್ಪಂದ

ಎಐ ಯುಗಕ್ಕೆ ಕಾಗ್ನಿಜೆಂಟ್ ಸಿದ್ಧತೆ

ಎಐ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಕಾಗ್ನಿಜೆಂಟ್ ಬೃಹತ್ ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ 5,000 ಫ್ರಾಂಟಿಯರ್ ಸರ್ಟಿಫೈಡ್ ಇಂಜಿನಿಯರ್‌ಗಳು ಹಾಗೂ 10,000 ಬಿಸಿನೆಸ್ ಆಪರೇಟರ್‌ಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. ಇದು ಉದ್ಯಮಗಳಿಗೆ ಎಐ ತಂತ್ರಜ್ಞಾನವನ್ನು ಅಳೆಯಬಹುದಾದ ಆರ್ಥಿಕ ಲಾಭವಾಗಿ ಪರಿವರ್ತಿಸಲು ನೆರವಾಗಲಿದೆ.