ಮಾರುಕಟ್ಟೆಯಲ್ಲಿ ಭತ್ತ ಪೂರೈಕೆ ಕುಸಿತ: 100 ರುಪಾಯಿ ಗಡಿದಾಟಿದ ಕೆಜಿ ಅಕ್ಕಿ ಬೆಲೆ
ರಾಜ್ಯದಲ್ಲಿ ಹೆಚ್ಚು ಬಳಕೆಯಲ್ಲಿರುವ ಸೋನಾ ಮಸೂರಿ ಅಕ್ಕಿಯ ಚಿಲ್ಲರೆ ಬೆಲೆ ಕಳೆದ ಎರಡು ತಿಂಗಳಲ್ಲಿ ಕೆ.ಜಿ.ಗೆ ಸುಮಾರು 20 ರು. ಹೆಚ್ಚಳವಾಗಿದೆ. ಪ್ರಸ್ತುತ ಹಳೆಯ ಸೋನಾ ಮಸೂರಿ ಅಕ್ಕಿ ಕೆ.ಜಿ.ಗೆ 82ರಿಂದ 98 ರು.ವರೆಗೆ ಮಾರಾಟವಾಗುತ್ತಿದೆ. ಜೀರಿಗೆ ಅಕ್ಕಿಯ ಬೆಲೆ 90ರಿಂದ 115 ರು.ವರೆಗೆ ತಲುಪಿದ್ದರೆ, ಬುಲೆಟ್ ಅಕ್ಕಿ ಕೆ.ಜಿ.ಗೆ ಸುಮಾರು 95 ರು. ಇದೆ. ವಾಣಿಜ್ಯ ದೃಷ್ಟಿಯಿಂದ ಪ್ರಮುಖ ವಾಗಿರುವ ಹಲವು ಅಕ್ಕಿ ತಳಿಗಳ ಬೆಲೆ ಕೆ.ಜಿ.ಗೆ 20ರಿಂದ 30 ರು.ವರೆಗೆ ಏರಿಕೆಯಾಗಿದೆ.
-
ಬೆಂಗಳೂರು: ಕರ್ನಾಟಕದಲ್ಲಿ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶೀಘ್ರದ ಕೆಲವು ತಳಿಗಳ ಬೆಲೆ ಕೆ.ಜಿ.ಗೆ 100 ರು. ದಾಟುವ ಸಾಧ್ಯತೆಯಿದೆ. ಮುಂಗಾರು ಮಳೆ ಕೊರತೆ, ಭತ್ತದ ಬೆಳೆಗೆ ನೀರು ತಡವಾಗಿ ಬಿಡುಗಡೆಯಾಗಿರುವುದು ಹಾಗೂ ಮಾರುಕಟ್ಟೆಯಲ್ಲಿ ಭತ್ತದ ಪೂರೈಕೆ ಕುಸಿದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ವ್ಯಾಪಾರಿಗಳು ಮತ್ತು ಅಕ್ಕಿ ಗಿರಣಿ ಮಾಲೀಕರು ತಿಳಿಸಿದ್ದಾರೆ.
ರಾಜ್ಯದಲ್ಲಿ ಹೆಚ್ಚು ಬಳಕೆಯಲ್ಲಿರುವ ಸೋನಾ ಮಸೂರಿ ಅಕ್ಕಿಯ ಚಿಲ್ಲರೆ ಬೆಲೆ ಕಳೆದ ಎರಡು ತಿಂಗಳಲ್ಲಿ ಕೆ.ಜಿ.ಗೆ ಸುಮಾರು 20 ರು. ಹೆಚ್ಚಳವಾಗಿದೆ. ಪ್ರಸ್ತುತ ಹಳೆಯ ಸೋನಾ ಮಸೂರಿ ಅಕ್ಕಿ ಕೆ.ಜಿ.ಗೆ 82ರಿಂದ 98 ರು.ವರೆಗೆ ಮಾರಾಟವಾಗುತ್ತಿದೆ. ಜೀರಿಗೆ ಅಕ್ಕಿಯ ಬೆಲೆ 90ರಿಂದ 115 ರು.ವರೆಗೆ ತಲುಪಿದ್ದರೆ, ಬುಲೆಟ್ ಅಕ್ಕಿ ಕೆ.ಜಿ.ಗೆ ಸುಮಾರು 95 ರು. ಇದೆ. ವಾಣಿಜ್ಯ ದೃಷ್ಟಿಯಿಂದ ಪ್ರಮುಖ ವಾಗಿರುವ ಹಲವು ಅಕ್ಕಿ ತಳಿಗಳ ಬೆಲೆ ಕೆ.ಜಿ.ಗೆ 20ರಿಂದ 30 ರು.ವರೆಗೆ ಏರಿಕೆಯಾಗಿದೆ.
ಇದನ್ನೂ ಓದಿ:Basmati rice exports fall: ಬಾಸುಮತಿ ಅಕ್ಕಿ ರಫ್ತು ಕುಸಿತ, ಬೆಲೆ ಇಳಿಕೆ
ಭತ್ತದ ಬೆಲೆ ಗಗನಕ್ಕೇರಿಕೆ: ಕಳೆದ ಮುಂಗಾರು ಹಂಗಾಮಿನಲ್ಲಿ 75 ಕೆ.ಜಿ. ಭತ್ತದ ಚೀಲಕ್ಕೆ 1800 ರಿಂದ 2700 ರು.ವರೆಗೆ ಬೆಲೆ ಇತ್ತು. ಆದರೆ, ಈ ಬಾರಿ ಅದೇ ಪ್ರಮಾಣದ ಭತ್ತಕ್ಕೆ 3400ರಿಂದ 4000 ರು. ಪಾವತಿಸಬೇಕಾಗಿದೆ. ಹೆಚ್ಚಿನ ಬೆಲೆ ನೀಡಲು ಸಿದ್ಧವಿದ್ದರೂ ಮಾರುಕಟ್ಟೆಯಲ್ಲಿ ಸಾಕಷ್ಟು ಭತ್ತ ಲಭ್ಯವಿಲ್ಲ . ತಮ್ಮ 56 ವರ್ಷಗಳ ಗಿರಣಿ ಉದ್ಯಮದ ಅನುಭವದಲ್ಲಿ ಕೇವಲ ಎರಡು ತಿಂಗಳಲ್ಲಿ ಪ್ರತಿ ಕ್ವಿಂಟಾಲ್ ಭತ್ತದ ಬೆಲೆ 2000 ರು. ಏರಿಕೆಯಾಗಿರುವುದನ್ನು ಕಂಡಿಲ್ಲ.
ತುಂಗಭದ್ರಾ ನೀರನ್ನು ಎರಡನೇ ಬೆಳೆಗೆ ಬಿಡುಗಡೆ ಮಾಡದಿರುವ ನಿರ್ಧಾರದಿಂದ ಭತ್ತದ ಉತ್ಪಾದನೆ ಮತ್ತಷ್ಟು ಕುಸಿಯುವ ಆತಂಕವಿದೆ. ಇದರಿಂದ ಅಕ್ಕಿಯ ಬೆಲೆ ಪ್ರತಿ ಕ್ವಿಂಟಾಲ್ಗೆ 10 ಸಾವಿರ ರು. ದಾಟುವ ಸಾಧ್ಯತೆಯಿದೆ ಎಂದು ಎಂದು ಕರ್ನಾಟಕ ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಅಕ್ಕಿ ಬೆಲೆ ಏರಿಕೆಯಲ್ಲಿ ಕರ್ನಾಟಕ ದೇಶದ ಮೊದಲ ಸ್ಥಾನ ಕೇಂದ್ರ ಸರಕಾರದ ಗ್ರಾಹಕ ವ್ಯವಹಾರ ಗಳ ಇಲಾಖೆಯ ಬೆಲೆ ಮೇಲ್ವಿಚಾರಣಾ ವಿಭಾಗದ ಅಂಕಿಅಂಶಗಳ ಪ್ರಕಾರ, ಕಳೆದ ನಾಲ್ಕು ತಿಂಗಳಲ್ಲಿ ಚಿಲ್ಲರೆ ಅಕ್ಕಿ ಬೆಲೆ ಏರಿಕೆಯಲ್ಲಿ ಕರ್ನಾಟಕ ದೇಶದ ಮೊದಲ ಸ್ಥಾನದಲ್ಲಿದೆ. ಜೂನ್ನಲ್ಲಿ ಕೆ.ಜಿ.ಗೆ ಸರಾಸರಿ 52.11 ರು. ಇದ್ದ ಬೆಲೆ ಅಕ್ಟೋಬರ್ನಲ್ಲಿ 67.86 ರು.ಗೆ ಏರಿಕೆಯಾಗಿದೆ. ಇದು ಸುಮಾರು ಶೇ. 30ರಷ್ಟು ಹೆಚ್ಚಳವಾಗಿದೆ.
ಕೃಷಿ ಇಲಾಖೆಯ ಮೂಲಗಳ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುಂಗಾರು ಹಂಗಾಮಿನಲ್ಲಿ ವಿವಿಧ ಮಾರುಕಟ್ಟೆಗಳಿಗೆ ಭತ್ತದ ಆವಕ ಶೇ. 10ರಿಂದ 40 ರವರೆಗೆ ಕುಸಿದಿದೆ. ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಕೇವಲ 4.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.
![]()
ಅಕ್ಕಿ ಬೆಲೆ ಏರಿಕೆಯಾಗುತ್ತಿದ್ದರೂ ದೇಶದಲ್ಲಿ ಅಕ್ಕಿಯ ಕೊರತೆಯಿಲ್ಲ. ಭಾರತೀಯ ಆಹಾರ ನಿಗಮ ಮುಂದಿನ 18ರಿಂದ 20 ತಿಂಗಳ ದೇಶದ ಅಗತ್ಯ ಪೂರೈಸುವಷ್ಟು ಅಕ್ಕಿಯನ್ನು ದಾಸ್ತಾನು ಮಾಡಿಕೊಂಡಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 81.35 ಕೋಟಿಗೂ ಹೆಚ್ಚು ಅರ್ಹ ಫಲಾನುಭವಿ ಗಳಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. ಅಗತ್ಯವಿದ್ದರೆ ರಾಜ್ಯಗಳಿಗೆ ರಿಯಾಯಿತಿ ದರದಲ್ಲಿ ಹೆಚ್ಚುವರಿ ಅಕ್ಕಿ ಒದಗಿಸಲು ಕೇಂದ್ರ ಸರಕಾರ ಸಿದ್ಧವಿದೆ.
-ಪ್ರಲ್ಹಾದ್ ಜೋಶಿ, ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ