ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ–ಅಮೆರಿಕ ಸಂಬಂಧದಲ್ಲಿ ಬಿರುಕು? ಡೊನಾಲ್ಡ್‌ ಟ್ರಂಪ್ ನೀತಿಗಳಿಂದ ಹೆಚ್ಚಿದ ಉದ್ವಿಗ್ನತೆ

ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಮರಳಿದ ಬಳಿಕ ಭಾರತ–ಅಮೆರಿಕ ಸಂಬಂಧಗಳು ಹಲವು ವಿಷಯಗಳಲ್ಲಿ ಸವಾಲುಗಳನ್ನು ಎದುರಿಸುತ್ತಿವೆ. ಹೆಚ್ಚುವರಿ ಸುಂಕ, ವಲಸೆ ನೀತಿ, ಪಾಕಿಸ್ತಾನದೊಂದಿಗಿನ ಅಮೆರಿಕದ ಭಾಂದವ್ಯ ಹಾಗೂ ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳು ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿವೆ. ಇದರಿಂದ ಭಾರತ–ಅಮೆರಿಕ ಬಾಂಧವ್ಯದ ಭವಿಷ್ಯದ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ.

ಭಾರತ–ಅಮೆರಿಕ ಬಾಂಧವ್ಯದಲ್ಲಿ ಬಿರುಕು?

ನರೇಂದ್ರ ಮೋದಿ - ಡೊನಾಲ್ಡ್‌ ಟ್ರಂಪ್ (ಸಂಗ್ರಹ ಚಿತ್ರ) -

Profile
Sushmitha Jain Jun 17, 2026 6:49 PM

ನವದೆಹಲಿ, ಜೂ. 18: ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump)16 ತಿಂಗಳ ಬಳಿಕ ಮುಖಾಮುಖಿಯಾಗಿದ್ದು, ಇಬ್ಬರ ಭೇಟಿಯು ರಾಜತಾಂತ್ರಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಹಲವು ಬಾರಿ ಕಂಡುಬಂದಿದ್ದ ಆತ್ಮೀಯ ಅಪ್ಪುಗೆ (Bear Hug) ಈ ಬಾರಿ ಕಾಣಿಸದಿರುವುದು ಹಾಗೂ ಕೇವಲ ಔಪಚಾರಿಕ ಹಸ್ತಲಾಘವಕ್ಕೆ ಸೀಮಿತವಾಗಿರುವುದು ಭಾರತ–ಅಮೆರಿಕ ಸಂಬಂಧಗಳ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಗುಂಪು ಛಾಯಾಚಿತ್ರದ ವೇಳೆ ಕೂಡ ಇಬ್ಬರು ನಾಯಕರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿರುವುದು ಅಥವಾ ಕಣ್ಣಿನ ಸಂಪರ್ಕ ಸಾಧಿಸಿರುವುದು ಕಂಡುಬಂದಿಲ್ಲ. ಇದರಿಂದ ಉಭಯ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಒತ್ತಡ ಉಂಟಾಗಿರುವ ಸೂಚನೆಗಳು ವ್ಯಕ್ತವಾಗಿವೆ.

‘ನಂಬಿಕೆಯ ಕೊರತೆ’ ಬಗ್ಗೆ ಮೋದಿ ಸಂದೇಶ

ಜಿ7 ಸಭೆಯಲ್ಲಿ ಟ್ರಂಪ್ ಪಕ್ಕದಲ್ಲೇ ಕುಳಿತಿದ್ದ ಪ್ರಧಾನಿ ಮೋದಿ, ಜಾಗತಿಕ ಮಟ್ಟದಲ್ಲಿ "ಸಂಪನ್ಮೂಲಗಳ ಕೊರತೆ ಇಲ್ಲ, ಆದರೆ ನಂಬಿಕೆಯ ಕೊರತೆ ಇದೆ" ಎಂದು ಹೇಳುವ ಮೂಲಕ ಪರೋಕ್ಷ ಸಂದೇಶ ರವಾನಿಸಿದರು. "ಇಂದಿನ ಜಗತ್ತು ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿಲ್ಲ. ಅದು ನಂಬಿಕೆಯ ಕೊರತೆಯಿಂದ ಬಳಲುತ್ತಿದೆ. ನಮ್ಮ ಸಹಭಾಗಿತ್ವದ ಭವಿಷ್ಯ ಈ ನಂಬಿಕೆಯನ್ನು ಮರುಸ್ಥಾಪಿಸುವುದರ ಮೇಲೆ ಅವಲಂಬಿತವಾಗಿದೆ" ಎಂದು ಮೋದಿ ಹೇಳಿದರು.

ಇದರ ಜತೆಗೆ, ಅಮೆರಿಕ–ಇರಾನ್ ಸಂಘರ್ಷದಿಂದ ಭಾರತೀಯ ನಾವಿಕರು ಮೃತಪಟ್ಟಿರುವುದನ್ನು ಉಲ್ಲೇಖಿಸಿದ ಅವರು, ಸಮುದ್ರ ಮಾರ್ಗಗಳ ಸುರಕ್ಷತೆ ಹಾಗೂ ನಾವಿಕರ ಜೀವ ರಕ್ಷಣೆಯ ಮಹತ್ವವನ್ನು ಒತ್ತಿಹೇಳಿದರು.

ಫ್ರಾನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ-ಡೊನಾಲ್ಡ್‌ ಟ್ರಂಪ್‌ ಶೇಕ್‌ ಹ್ಯಾಂಡ್‌; ಈ ಬಾರಿ ಅಪ್ಪುಗೆ ಮಿಸ್ಸಿಂಗ್‌

ಭಾರತ–ಅಮೆರಿಕ ಸಂಬಂಧದಲ್ಲಿ ಏಕೆ ಉದ್ವಿಗ್ನತೆ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಮರಳಿದ ಬಳಿಕ ಭಾರತ–ಅಮೆರಿಕ ಸಂಬಂಧಗಳು ಹಲವು ಪ್ರಮುಖ ವಿಷಯಗಳಲ್ಲಿ ಸವಾಲುಗಳನ್ನು ಎದುರಿಸುತ್ತಿವೆ. ಭಾರತದ ಕೆಲವು ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವುದು ವ್ಯಾಪಾರ ಸಂಬಂಧಗಳಿಗೆ ಹೊಡೆತ ನೀಡಿದರೆ, ಪಾಕಿಸ್ತಾನದೊಂದಿಗೆ ಟ್ರಂಪ್ ಆಡಳಿತದ ಹೆಚ್ಚುತ್ತಿರುವ ಭಾಂದವ್ಯ ನವದೆಹಲಿಯ ಕಳವಳಕ್ಕೆ ಕಾರಣವಾಗಿದೆ. ಇದೇ ವೇಳೆ, ಅಮೆರಿಕದ ಕಠಿಣ ವಲಸೆ ನೀತಿಗಳಿಂದ ಭಾರತೀಯ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ತೊಂದರೆ ಉಂಟಾಗಿದ್ದು, ಉಭಯ ರಾಷ್ಟ್ರಗಳ ನಡುವಿನ ಅಸಮಾಧಾನವನ್ನು ಹೆಚ್ಚಿಸಿದೆ. ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ಭಾರತವನ್ನು ಟ್ರಂಪ್ ಹಲವು ಬಾರಿ ಟೀಕಿಸಿದ್ದು, ಭಾರತದ ಆರ್ಥಿಕತೆಯ ಕುರಿತ ಅವರ ಕೆಲವು ವಿವಾದಾತ್ಮಕ ಹೇಳಿಕೆಗಳೂ ಚರ್ಚೆಗೆ ಗ್ರಾಸವಾಗಿವೆ. ಈ ಎಲ್ಲ ಬೆಳವಣಿಗೆಗಳು ಭಾರತ–ಅಮೆರಿಕ ಸಂಬಂಧಗಳಲ್ಲಿ ಉದ್ವಿಗ್ನತೆಯ ವಾತಾವರಣವನ್ನು ಸೃಷ್ಟಿಸಿವೆ.

ರಕ್ಷಣಾ ಸಹಕಾರಕ್ಕೂ ಹಿನ್ನಡೆ

ಭಾರತದ ತೇಜಸ್ Mk1A ಯುದ್ಧವಿಮಾನಗಳಿಗೆ ಅಗತ್ಯವಿರುವ ಎಂಜಿನ್ ಪೂರೈಕೆಯಲ್ಲಿ ಅಮೆರಿಕದ GE ಕಂಪನಿಯಿಂದ ಉಂಟಾದ ವಿಳಂಬ ಕೂಡ ಉಭಯ ರಾಷ್ಟ್ರಗಳ ನಡುವಿನ ಪ್ರಮುಖ ಭಿನ್ನಾಭಿಪ್ರಾಯಗಳಲ್ಲಿ ಒಂದಾಗಿದೆ. ಇದರ ಜತೆಗೆ ಅಮೆರಿಕ ತನ್ನ ಪ್ರಮುಖ ಸೇನಾ ಕಮಾಂಡ್‌ನ ಹೆಸರಿನಿಂದ "ಇಂಡೋ" ಪದವನ್ನು ತೆಗೆದುಹಾಕಿರುವುದು ಹಾಗೂ ಪಿಒಕೆ (POK) ಅನ್ನು ಪಾಕಿಸ್ತಾನದ ಭಾಗವಾಗಿ ತೋರಿಸಿರುವ ನಕ್ಷೆ ವಿವಾದಕ್ಕೂ ಕಾರಣವಾಗಿದೆ.

ಹಳೆಯ ಸ್ನೇಹ ಮರಳುತ್ತಾ?

ಈ ಎಲ್ಲ ಬೆಳವಣಿಗೆಗಳ ನಡುವೆಯೂ, ಮೋದಿ ಮತ್ತು ಟ್ರಂಪ್ ನಡುವಿನ ಮೊದಲ ದ್ವಿಪಕ್ಷೀಯ ಸಭೆ ಇಂದು ನಡೆಯಲಿದ್ದು, ವ್ಯಾಪಾರ ಒಪ್ಪಂದ, ರಕ್ಷಣಾ ಸಹಕಾರ ಮತ್ತು ದ್ವಿಪಕ್ಷೀಯ ಸಂಬಂಧಗಳ ಭವಿಷ್ಯದ ಕುರಿತು ಮಹತ್ವದ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಭಾರತದ ಅತಿ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿದ ಪ್ರಧಾನಿಯಾಗಿ ದಾಖಲೆ ಬರೆದ ಹಿನ್ನೆಲೆಯಲ್ಲಿ ಟ್ರಂಪ್ ಅಭಿನಂದನೆ ಸಲ್ಲಿಸಿ, "ಅವರು ಒಬ್ಬ ಶ್ರೇಷ್ಠ ನಾಯಕ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದರು.

ಹೀಗಾಗಿ, ಇಂದಿನ ಮೋದಿ–ಟ್ರಂಪ್ ಸಭೆ ಉಭಯ ನಾಯಕರ ವೈಯಕ್ತಿಕ ಸ್ನೇಹ ಮತ್ತೆ ಭಾರತ–ಅಮೆರಿಕ ಸಂಬಂಧಗಳಿಗೆ ಹೊಸ ಚೈತನ್ಯ ನೀಡುತ್ತದೆಯೇ ಎಂಬುದನ್ನು ನಿರ್ಧರಿಸುವ ಪ್ರಮುಖ ಘಟ್ಟವಾಗಿ ಪರಿಗಣಿಸಲಾಗಿದೆ.