ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Additional Tariff: ಮುಂದುವರಿದ ಟ್ರಂಪ್‌ ಸುಂಕ ಸಮರ; ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ಟಾರಿಫ್‌ ವಿಧಿಸಿದ ಅಮೆರಿಕ

Donald Trump: ರಷ್ಯಾದಿಂದ ತೈಲ ಖರೀದಿಸುವುದನ್ನೇ ನೆಪ ಮಾಡಿಕೊಂಡು ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸುಂಕ ಸಮರ ಆರಂಭಿಸಿದ್ದಾರೆ. ಇದೀಗ ಅವರು ಹೆಚ್ಚುವರಿಯಾಗಿ ಶೇ. 25ರಷ್ಟು ಸುಂಕ ಹೇರಿದ್ದಾರೆ. ಆ ಮೂಲಕ ಭಾರತದ ಮೇಲೆ ಒಟ್ಟು ಶೇ. 50ರಷ್ಟು ಟಾರಿಫ್‌ ವಿಧಿಸಿದಂತಾಗಿದೆ.

ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ಟಾರಿಫ್‌ ವಿಧಿಸಿದ ಅಮೆರಿಕ

ಸಾಂದರ್ಭಿಕ ಚಿತ್ರ.

Ramesh B Ramesh B Aug 6, 2025 8:33 PM

ದೆಹಲಿ: ರಷ್ಯಾದಿಂದ ತೈಲ ಖರೀದಿಸುವುದನ್ನೇ ನೆಪ ಮಾಡಿಕೊಂಡು ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಸುಂಕ ಸಮರ ಆರಂಭಿಸಿದ್ದಾರೆ. ಈಗಾಗಲೇ ಭಾರತದ ಸರಕುಗಳ ಮೇಲೆ ಶೇ. 25ರಷ್ಟು ಟಾರಿಫ್‌ ವಿಧಿಸಿದ್ದ ಅವರು ಇದೀಗ ಹೆಚ್ಚುವರಿಯಾಗಿ ಶೇ. 25ರಷ್ಟು ಸುಂಕ ಹೇರಿದ್ದಾರೆ (Additional Tariff). ಆ ಮೂಲಕ ಭಾರತದ ಮೇಲೆ ಒಟ್ಟು ಶೇ. 50ರಷ್ಟು ಸುಂಕ ವಿಧಿಸಿದಂತಾಗಿದೆ. ಆಗಸ್ಟ್ 27ರಿಂದ ಜಾರಿಗೆ ಬರಲಿರುವ ಈ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ ಎಂದು ವರದಿ ತಿಳಿಸಿದೆ.

ಜುಲೈ 30ರಂದು ಟ್ರಂಪ್ ಆಗಸ್ಟ್ 1ರಿಂದ ಭಾರತೀಯ ಸರಕುಗಳ ಮೇಲೆ ಮೇಲೆ ಶೇ. 25ರಷ್ಟು ಸುಂಕ ಮತ್ತು ಹೆಚ್ಚುವರಿ ದಂಡ ವಿಧಿಸಲಾಗುವುದು ಎಂದು ಘೋಷಿಸಿದ್ದರು. ಭಾರತ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದಕ್ಕೆ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದರು. ಅದಾದ ಬಳಿಕ ಮತ್ತೆ ಭಾರತದ ವಿರುದ್ಧ ಸುಂಕ ಹೆಚ್ಚಿಸುವುದಾಗಿ ಎಚ್ಚರಿಕೆ ನೀಡಿದ್ದರು. ಅದರಂತೆ ಬುಧವಾರ (ಆಗಸ್ಟ್‌ 6) ಹೆಚ್ಚುವರಿ ಶೇ. 25 ಸುಂಕವನ್ನು ಘೋಷಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: Donald Trump: ಭಾರತದ ಸರಕುಗಳ ಮೇಲಿನ ಸುಂಕ ಮತ್ತಷ್ಟು ಹೆಚ್ಚಿಸುವುದಾಗಿ ಘೋಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ, ವ್ಯಾಪಾರ ಕಾನೂನುಗಳ ವಿಷಯಗಳನ್ನು ಉಲ್ಲೇಖಿಸಿ ಟ್ರಂಪ್ ಈ ಆದೇಶ ಹೊರಡಿಸಿದ್ದಾರೆ. ರಷ್ಯಾದಿಂದ ಭಾರತದ ತೈಲ ಆಮದು ಅಮೆರಿಕಕ್ಕೆ ಬೆದರಿಕೆ ಒಡ್ಡುತ್ತದೆ ಎಂದು ಅವರು ಹೇಳಿದ್ದಾರೆ.

ಆದೇಶದ ಪ್ರಕಾರ, ಸುಂಕವು ಸಹಿ ಮಾಡಿದ 21 ದಿನಗಳ ನಂತರ ಜಾರಿಗೆ ಬರಲಿದೆ. ಈಗಾಗಲೇ ಸಾಗಣೆಯಾಗಿರುವ ಸರಕುಗಳನ್ನು ಹೊರತುಪಡಿಸಿ ಉಳಿದ ಎಲ್ಲ ಭಾರತೀಯ ಉತ್ಪನ್ನಗಳಿಗೆ ಇದು ಅನ್ವಯಿಸುತ್ತದೆ. "ಭಾರತ ಸರ್ಕಾರವು ಪ್ರಸ್ತುತ ನೇರವಾಗಿ ಅಥವಾ ಪರೋಕ್ಷವಾಗಿ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆʼʼ ಎಂದು ಆದೇಶದಲ್ಲಿ ತಿಳಿಸಲಾಗಿದೆ. ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಪರಿಹರಿಸಲು ಸುಂಕ ಅಗತ್ಯ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಅತೀ ಹೆಚ್ಚು ಟಾರಿಫ್‌ ಹೊಂದಿರುವ ದೇಶಗಳು

ಟಾರಿಫ್‌ ಪಟ್ಟಿ

ದೇಶ ಟಾರಿಫ್‌
ಭಾರತ 50%
ಬ್ರೆಝಿಲ್‌ 50%
ಸಿರಿಯಾ 41%
ಲಾವೋಸ್ 40%
ಮ್ಯಾನ್ಮಾರ್‌ 40%
ಸ್ವಿಟ್ಜರ್‌ಲ್ಯಾಂಡ್‌ 39%
ಕೆನಡಾ 35%
ಸೆರ್ಬಿಯಾ 35%
ಇರಾಕ್‌ 35%
ಚೀನಾ 30%
ಪಾಕಿಸ್ತಾನ 19%

ಬೆದರಿಕೆ ಹಾಕಿದ್ದ ಟ್ರಂಪ್‌

ಡೊನಾಲ್ಡ್‌ ಟ್ರಂಪ್‌ ಸುಂಕ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವುದಾಗಿ ಸೋಮವಾರ (ಆಗಸ್ಟ್‌ 4) ಘೋಷಿಸಿದ್ದರು. ರಷ್ಯಾದಿಂದ ಭಾರತ ಅಪಾರ ಪ್ರಮಾಣದಲ್ಲಿ ತೈಲ ಖರೀದಿಸುತ್ತಿರುವ ಈ ಹಿನ್ನೆಲೆಯಲ್ಲಿ ಸುಂಕ ಪ್ರಮಾಣವನ್ನು ಹೆಚ್ಚಿಸುವುದಾಗಿ ಅವರು ತಿಳಿಸಿದ್ದರು. ಸಾಮಾಜಿಕ ಮಾಧ್ಯಮ ವೇದಿಕೆ ಟ್ರುಥ್‌ ಸೋಶಿಯಲ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದ ಅವರು, ಭಾರತ ರಷ್ಯಾದಿಂದ ಬೃಹತ್‌ ಪ್ರಮಾಣದಲ್ಲಿ ತೈಲ ಖರೀದಿಸಿ ಓಪನ್‌ ಮಾರ್ಕೆಟ್‌ನಲ್ಲಿ ಅಧಿಕ ಲಾಭಕ್ಕೆ ಮಾರುತ್ತಿದೆ ಎಂದು ಹೇಳಿದ್ದರು.

"ಭಾರತವು ಬೃಹತ್ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುತ್ತಿದೆ. ಅಲ್ಲದೆ ಖರೀದಿಸಿದ ಹೆಚ್ಚಿನ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ರಷ್ಯಾದ ಯುದ್ಧ ಯಂತ್ರದಿಂದ ಉಕ್ರೇನ್‌ನಲ್ಲಿ ಎಷ್ಟು ಜನರು ಕೊಲ್ಲಲ್ಪಡುತ್ತಿದ್ದಾರೆ ಎಂಬುದು ಭಾರತಕ್ಕೆ ಮುಖ್ಯವಲ್ಲ. ಈ ಕಾರಣದಿಂದಾಗಿ ಭಾರತದ ಮೇಲೆ ವಿಧಿಸುವ ಸುಂಕವನ್ನು ನಾನು ಗಣನೀಯವಾಗಿ ಹೆಚ್ಚಿಸುತ್ತೇನೆʼʼ ಎಂದು ಅವರು ಬರೆದುಕೊಂಡಿದ್ದರು.

ಭಾರತ-ರಷ್ಯಾ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವ ಟ್ರಂಪ್ ಇತ್ತೀಚೆಗೆ, ದೆಹಲಿ ಮತ್ತು ಮಾಸ್ಕೋ ನಡುವೆ ಎಷ್ಟೇ ವ್ಯವಹಾರ ನಡೆದರು ಅದರ ಬಗ್ಗೆ ಚಿಂತಿಸುವುದಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲೇ ಸಸುಂಕ ಹೆಚ್ಚಿಸಿದ್ದು, ಭಾರತ ಹೇಗೆ ಪ್ರತಿಕ್ರಿಯಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.