ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದ ನಾಲ್ವರು ಮಕ್ಕಳ ಮೃತದೇಹ; ತಾಯಿ ನಾಪತ್ತೆ: ದೇಶವನ್ನೇ ಬೆಚ್ಚಿಬೀಳಿಸಿದ ನಿಗೂಢ ಪ್ರಕರಣ
Uttar Pradesh Horror: ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ನಿಗೂಢ ಪ್ರಕರಣವೊಂದು ನಡೆದಿದ್ದು, ಮನೆಯೊಳಗೆ ನಾಲ್ವರು ಮಕ್ಕಳ ಮೃತದೇಹ ಪತ್ತೆಯಾಗಿದೆ. ಮಕ್ಕಳ ತಾಯಿ ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಮೃತ ಮಕ್ಕಳನ್ನು ಶಫಿಕ್ (14), ಸೌದ್ (10), ಉಮರ್ (8) ಮತ್ತು ಸಾದಿಯಾ (7) ಎಂದು ಗುರುತಿಸಲಾಗಿದೆ.
ಸಾಂದರ್ಭಿಕ ಚಿತ್ರ -
ಲಖನೌ, ಮೇ 2: ಅವರು ಬಾಳಿ ಬದುಕಬೇಕಾಗಿದ್ದ ಕಂದಮ್ಮಗಳು. ಮನೆ ತುಂಬ ಓಡಾಡಿಕೊಂಡು, ಭವಿಷ್ಯದ ಹೊಂಗನಸು ಹೊತ್ತುಕೊಂಡವರು. ಆದರೆ ಇದ್ದಕ್ಕಿದ್ದಂತೆ ಮನೆಯೊಳಗೆ ರಕ್ತದ ಮಡುವಿನಲ್ಲಿ ನಿಶ್ಚೇತನರಾಗಿ ಬಿದ್ದಿರುವುದು ಕಂಡು ಒಂದು ಕ್ಷಣ ಸ್ಥಳೀಯರ ಕಣ್ಣಾಲಿಗಳೇ ತುಂಬಿ ಬಂದವು. ಇದು ಉತ್ತರ ಪ್ರದೇಶದ ಅಂಬೇಡ್ಕರ್ ಜಿಲ್ಲೆಯ ಮನೆಯೊಂದರಲ್ಲಿ ಕಂಡು ಬಂದ ದಾರುಣ ದೃಶ್ಯ (Uttar Pradesh Horror). ಒಂದೇ ಮನೆಯ ನಾಲ್ವರು ಮಕ್ಕಳ ಮೃತದೇಹ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ತಾಯಿ ನಾಪತ್ತೆಯಾಗಿದ್ದಾರೆ (Crime News). ಸದ್ಯ ಈ ಘಟನೆ ಬೆಳಕಿಗೆ ಬಂದು ದೇಶವೇ ಬೆಚ್ಚಿ ಬಿದ್ದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಂಬೇಡ್ಕರ್ ನಗರ ಜಿಲ್ಲೆಯ ಅಕ್ಬರ್‌ಪುರ ಪೊಲೀಸ್ ಠಾಣೆಯ ಮಿರ್ನಾಪುರ ಪ್ರದೇಶದಲ್ಲಿ ಮೇ 2ರ ಅಪರಾಹ್ನ ಸುಮಾರು 3 ಗಂಟೆ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ. ಬೆಳಗ್ಗೆಯಿಂದ ಮನೆ ಕದ ತೆರೆಯದ ಹಿನ್ನೆಲೆಯಲ್ಲಿ ನೆರೆ-ಹೊರೆಯವರು ಪರಿಶೀಲಿಸಿದಾಗ ಮಕ್ಕಳ ಮೃತದೇಹ ಕಂಡುಬಂದಿದ್ದು, ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಅಂಬೇಡ್ಕರ್ ನಗರ ನಿಗೂಢ ಪ್ರಕರಣ ಕುರಿತು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ:
#WATCH | Ambedkar Nagar, Uttar Pradesh | SP Prachi Singh says, “The police received information on 2 May at 3:40 pm about a woman of Muradabad Mohalla, who had allegedly murdered her four children and fled the scene… The woman, who has been identified as Gasia Khatun, had four… pic.twitter.com/ndQzYA88GU
— ANI (@ANI) May 2, 2026
ಬೆಚ್ಚಿಬಿದ್ದ ಸ್ಥಳೀಯರು
ಮಾಹಿತಿ ಪಡೆದ ತಕ್ಷಣ ಪೊಲೀಸರು ಧಾವಿಸಿದ್ದು, ಮನೆಯ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಬೆಡ್ ಮೇಲೆ ರಕ್ತದ ಮಡುವಿನಲ್ಲಿ ಮುಳುಗಿರುವ ನಾಲ್ವರು ಮಕ್ಕಳ ಮೃತದೇಹ ಕಂಡು ಬಂದಿದೆ. ಮಾತ್ರವಲ್ಲ ಮಕ್ಕಳ ತಾಯಿ ನಿಗೂಢವಾಗಿ ನಾಪತ್ತೆಯಾಗಿದ್ದು ಪ್ರಕರಣವನ್ನು ಮತ್ತಷ್ಟು ಜಟಿಲಗೊಳಿಸಿದೆ. ʼʼಮೃತ ಮಕ್ಕಳನ್ನು ಶಫಿಕ್ (14), ಸೌದ್ (10), ಉಮರ್ (8) ಮತ್ತು ಸಾದಿಯಾ (7) ಎಂದು ಗುರುತಿಸಲಾಗಿದೆ. ಇವರು ಸೌದಿ ಅರೇಬಿಯಾದಲ್ಲಿ ಹಲವು ವರ್ಷಗಳಿಂದ ಉದ್ಯೋಗದಲ್ಲಿರುವ ನಿಯಾಝ್ ಅವರ ಮಕ್ಕಳು. ಸದ್ಯ ಮಕ್ಕಳ ತಾಯಿ ನಾಝಿಯಾ ಖಾಟೂನ್ (37) ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆʼʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮಕ್ಕಳನ್ನು ಕೊಂದು ನಾಝಿಯಾ ಖಾಟೂನ್ ನಾಪತ್ತೆಯಾಗಿದ್ದಾ ಅಥವಾ ಅವರನ್ನು ಅಪಹರಿಸಲಾಗಿದೆಯಾ ಎನ್ನುವ ಅನುಮಾನ ಮೂಡಿದೆ.
30 ವರ್ಷದ ಜಡ್ಜ್ ಆತ್ಮಹತ್ಯೆಗೆ ಶರಣು; ಕಾರ್ಯದೊತ್ತಡ, ವೈಯಕ್ತಿಕ ಕಾರಣ-ಜೀವ ಕಳೆದುಕೊಂಡಿದ್ದೇಕೆ?
ಪೊಲೀಸರು ಹೇಳಿದ್ದೇನು?
ಅಯೋಧ್ಯಾ ವಲಯದ ಉಪ ಮಹಾನಿರ್ದೇಶಕ ಸೋಮೆನ್ ಬರ್ಮಾ ಮಾತನಾಡಿ, "ಮನೆಯೊಂದರಲ್ಲಿ 4 ಮಕ್ಕಳ ಶವ ಬಿದ್ದಿದೆ ಎಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಮಗೆ ಮಾಹಿತಿ ಸಿಕ್ಕಿತು. ಪೊಲೀಸ್ ತಂಡಗಳು ತಕ್ಷಣ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದವು" ಎಂದು ಹೇಳಿದ್ದಾರೆ. ಮನೆಯ ಮುಖ್ಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು ಮತ್ತು ಮಕ್ಕಳನ್ನು ಇಟ್ಟಿಗೆಯಿಂದ ಹೊಡೆದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದ್ದು, ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಪುರಾವೆ ಸಂಗ್ರಹಿಸಲಾಗುತ್ತಿದೆ.
"ಮಕ್ಕಳ ತಾಯಿ ನಾಪತ್ತೆಯಾಗಿದ್ದಾರೆ. ಅವರನ್ನು ಅಪಹರಿಸಲಾಗಿದೆಯೇ ಅಥವಾ ಅವರ ನಾಪತ್ತೆಗೆ ಬೇರೆ ಯಾವುದಾದರೂ ಸಾಧ್ಯತೆ ಇದೆಯೇ ಎನ್ನುವುದನ್ನು ಪರಿಶೀಲಿಸುತ್ತಿದ್ದೇವೆ" ಎಂದು ಬರ್ಮಾ ಹೇಳಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಪ್ರಕರಣ ಭೇದಿಸಲು ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.