ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Mohan Vishwa Column: ಬ್ರಿಟಿಷರ ಪಕ್ಷದಿಂದ ಆರ್‌ʼಎಸ್‌ʼಎಸ್‌ ಬಗ್ಗೆ ಪ್ರಶ್ನೆ

ಆರ್‌ಎಸ್‌ಎಸ್ ವ್ಯಕ್ತಿಗಳ ಸ್ವಯಂಪ್ರೇರಿತ ಸಂಘವಾಗಿದ್ದು, ಪ್ರಸ್ತುತ ಭಾರತೀಯ ಕಾನೂನುಗಳ ಅಡಿಯಲ್ಲಿ ಅದು ನೋಂದಣಿಗೆ ಬದ್ಧವಾಗಿಲ್ಲ. ಇಲ್ಲಿ ಉದ್ಭವಿಸುವ ಪ್ರಮುಖ ಪ್ರಶ್ನೆಯೆಂದರೆ, ಕಾಂಗ್ರೆಸ್ ಈ ವಿಚಾರವನ್ನು ಈಗ ಏಕೆ ಪ್ರಸ್ತಾಪಿಸುತ್ತಿದೆ? ಸ್ವಾತಂತ್ರ್ಯಾನಂತರ ದಶಕಗಳ ಕಾಲ ದೇಶವನ್ನು ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರಗಳು ಆರ್‌ಎಸ್‌ಎಸ್‌ಗೆ ನೋಂದಣಿ ಕಡ್ಡಾಯ ಗೊಳಿಸುವ ಯಾವುದೇ ಕಾನೂನು ತರಲಿಲ್ಲ.

ಬ್ರಿಟಿಷರ ಪಕ್ಷದಿಂದ ಆರ್‌ʼಎಸ್‌ʼಎಸ್‌ ಬಗ್ಗೆ ಪ್ರಶ್ನೆ

-

ವೀಕೆಂಡ್‌ ವಿತ್‌ ಮೋಹನ್

ಆರ್‌ಎಸ್‌ಎಸ್ ನೋಂದಣಿ ಕುರಿತಾಗಿ ಕಾಂಗ್ರೆಸ್ ನಾಯಕರು ಮತ್ತೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ದೇಶದ ಅತಿ ದೊಡ್ಡ ಸ್ವಯಂಸೇವಾ ಸಂಘಟನೆಗಳಲ್ಲಿ ಒಂದಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನೋಂದಾಯಿಸಿಕೊಳ್ಳುವಂತೆ ಒತ್ತಾಯಿಸುತ್ತಿರುವ ಚರ್ಚೆಯ ಹಿಂದೆ ರಾಜಕೀಯ ಉದ್ದೇಶವಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಭಾರತೀಯ ಸಂವಿಧಾನದ ಅನುಚ್ಛೇದ 19(1)(ಸಿ) ನಾಗರಿಕರಿಗೆ ಸಂಘಟನೆಗಳನ್ನು ರಚಿಸುವ ಮೂಲಭೂತ ಹಕ್ಕನ್ನು ನೀಡುತ್ತದೆ. ಭಾರತೀಯ ಕಾನೂನಿನ ಪ್ರಕಾರ ಪ್ರತಿಯೊಂದು ಸ್ವಯಂ ಪ್ರೇರಿತ ಸಂಘಟನೆಗೂ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕೆಂಬ ನಿಯಮವಿಲ್ಲ. ಯಾವುದೇ ಸಂಘಟನೆ ತನ್ನ ಹೆಸರಿನಲ್ಲಿ ಆಸ್ತಿ ಹೊಂದಲು, ಸರಕಾರಿ ಅನುದಾನ ಪಡೆಯಲು ಅಥವಾ ಪ್ರತ್ಯೇಕ ಕಾನೂನುಬದ್ಧ ಘಟಕವಾಗಿ ಕಾರ್ಯನಿರ್ವಹಿಸಲು ಬಯಸಿದಾಗ ಮಾತ್ರ ನೋಂದಣಿ ಅಗತ್ಯ ವಾಗುತ್ತದೆ.

ಆರ್‌ಎಸ್‌ಎಸ್ ವ್ಯಕ್ತಿಗಳ ಸ್ವಯಂಪ್ರೇರಿತ ಸಂಘವಾಗಿದ್ದು, ಪ್ರಸ್ತುತ ಭಾರತೀಯ ಕಾನೂನುಗಳ ಅಡಿಯಲ್ಲಿ ಅದು ನೋಂದಣಿಗೆ ಬದ್ಧವಾಗಿಲ್ಲ. ಇಲ್ಲಿ ಉದ್ಭವಿಸುವ ಪ್ರಮುಖ ಪ್ರಶ್ನೆಯೆಂದರೆ, ಕಾಂಗ್ರೆಸ್ ಈ ವಿಚಾರವನ್ನು ಈಗ ಏಕೆ ಪ್ರಸ್ತಾಪಿಸುತ್ತಿದೆ? ಸ್ವಾತಂತ್ರ್ಯಾನಂತರ ದಶಕಗಳ ಕಾಲ ದೇಶವನ್ನು ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರಗಳು ಆರ್‌ಎಸ್‌ಎಸ್‌ಗೆ ನೋಂದಣಿ ಕಡ್ಡಾಯ ಗೊಳಿಸುವ ಯಾವುದೇ ಕಾನೂನು ತರಲಿಲ್ಲ.

ಅಷ್ಟು ವರ್ಷಗಳ ಕಾಲ ಯಾವುದೇ ಕಾನೂನು ತಿದ್ದುಪಡಿ ಮಾಡದ ಕಾಂಗ್ರೆಸ್, ಇಂದು ಅಧಿಕಾರ ದಿಂದ ದೂರವಾದ ನಂತರ ಅದೇ ವಿಚಾರವನ್ನು ದೊಡ್ಡ ಸಮಸ್ಯೆಯಾಗಿ ಬಿಂಬಿಸುತ್ತಿರು ವುದು ರಾಜಕೀಯ ದ್ವಂದ್ವವನ್ನು ತೋರಿಸುತ್ತದೆ. ಆರ್‌ಎಸ್‌ಎಸ್ ಕುರಿತು ಮಾತನಾಡುವ ಕಾಂಗ್ರೆಸ್ಸಿನ ನಾಯಕರು, ಕಾಂಗ್ರೆಸ್ ಸಂಸ್ಥಾಪಕ ಒಬ್ಬ ಬ್ರಿಟಿಷ್ ಅಧಿಕಾರಿ ಎನ್ನುವುದರ ಬಗ್ಗೆ ಯಾಕೆ ಮಾತನಾ ಡುವುದಿಲ್ಲ? ಕಾಂಗ್ರೆಸ್ ಸಂಸ್ಥಾಪಕ ‘ಹೂಮ್’, ಬ್ರಿಟಿಷ್ ಅಧಿಕಾರಾವಧಿಯಲ್ಲಿ ಇಂಪೀರಿಯಲ್ ಸಿವಿಲ್ ಸರ್ವಿಸ್ ಅಧಿಕಾರಿಯಾಗಿದ್ದ. ಈತನಿಗೂ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೂ ಎಳ್ಳಷ್ಟೂ ಸಂಬಂಧವಿಲ್ಲ.

ಇದನ್ನೂ ಓದಿ: Mohan Vishwa Column: 1991ರ ಆರ್ಥಿಕ ದುರಂತಕ್ಕೆ ಹೊಣೆ ಯಾರು ?

ಹೂಮ್ 1849ರಿಂದ 1867ರ ನಡುವೆ ಬಂಗಾಳದ ಎಟ್ವಾ ಜಿಲ್ಲೆಯ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ. ತನ್ನ ಆಡಳಿತಾವಧಿಯಲ್ಲಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಕಣ್ಣಾರೆ ಕಂಡಿದ್ದ. ಈತನು ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಯು ಆಳವಾಗಿ ಬೇರೂರುತ್ತಿರುವುದನ್ನು ಕಂಡು ದಂಗಾಗಿ ಹೋಗಿದ್ದ.

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚಿಗೆ ಹೆದರಿದ ಬ್ರಿಟಿಷರಿಗೆ, ಕಿಚ್ಚನ್ನು ಆರಿಸುವ ತಂತ್ರಗಾರಿಕೆಯೊಂದು ಬೇಕಿತ್ತು. ಆಗ ಹುಟ್ಟಿಕೊಂಡದ್ದು ಕಾಂಗ್ರೆಸ್. ಅದರ ಸಾರಥಿಯೊಬ್ಬನನ್ನು ಬ್ರಿಟಿಷ್ ಆಡಳಿತದಿಂದ ತಂದು ಕೂರಿಸಿದರೆ ತಮಗೆ ಯಾವ ತೊಂದರೆಯಾಗುವುದಿಲ್ಲವೆಂಬ ಸತ್ಯ ಗೊತ್ತಿತ್ತು.

ಹೂಮ್ ಸಲಹೆಯಂತೆ ಆಡಳಿತಾತ್ಮಕ ವಿಚಾರಗಳಲ್ಲಿ ಸುಧಾರಣೆಯನ್ನು ತರುವ ಕೆಲಸಗಳನ್ನು ಕಾಂಗ್ರೆಸ್ ಮಾಡಿತು. ‘ಇಂಪೀರಿಯಲ್ ಸಿವಿಲ್ ಸರ್ವಿಸ್’ ಜಾಗದಲ್ಲಿ ‘ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವಿಸ್’ (ಐಎಎಸ್) ಜಾರಿಗೆ ತಂದರು. ಲಂಡನಿಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆಯಬೇಕಿದ್ದ ಕಾನೂನನ್ನು ತಿದ್ದುಪಡಿ ಮಾಡಿ ಭಾರತದಲ್ಲಿ ಪದವಿ ಪಡೆಯುವಂತೆ ಮಾಡಿದರು.

1885ರಲ್ಲಿ ನಮಗೆ ಸ್ವಾತಂತ್ರ್ಯ ಮೊದಲು ಬೇಕಿತ್ತೋ ಅಥವಾ ಆಡಳಿತಾತ್ಮಕ ಸುಧಾರಣೆಗಳು ಬೇಕಿತ್ತೋ? ಮೊದಲಿಗೆ ಸ್ವಾತಂತ್ರ್ಯದ ವಿಚಾರವಾಗಿ ಹೋರಾಟ ಮಾಡಬೇಕಿದ್ದ ಸಂಘಟನೆ ಬೇರೆ ಕೆಲಸವನ್ನು ಮಾಡಿತ್ತು. ಬ್ರಿಟಿಷರಿಗೆ 1857ರಲ್ಲಿ ಹಚ್ಚಿದ್ದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಆರಬೇಕಿತ್ತು. ಆ ಕೆಲಸವನ್ನು ಜನರಿಗೆ ಒಳ್ಳೆಯ ರೀತಿಯಲ್ಲಿ ಕಾಣುವ ರೀತಿಯಲ್ಲಿ ಕಾಂಗ್ರೆಸ್ ಮೂಲಕ ಮಾಡಿ ಮುಗಿಸಿದ್ದರು.

ಶಾಂತಿಯೆಂಬ ನೆಪವೊಡ್ಡಿ ದೇಶದಲ್ಲಿ ನಡೆಯಬೇಕಿದ್ದ ಹಲವಾರು ಕ್ರಾಂತಿಗಳನ್ನು ಹತ್ತಿಕ್ಕಲಾ ಯಿತು. ಕ್ರಾಂತಿಕಾರರನ್ನು ಬಂಧಿಸುತ್ತಿದ್ದರೂ ಖಂಡನೆಗಳು ಕೇಳಿ ಬರಲಿಲ್ಲ. ಇತ್ತ ಭಾರತದಲ್ಲಿ ಕಾಂಗ್ರೆಸ್ಸಿನ ಜೊತೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತ ಬ್ರಿಟಿಷರು ಸದ್ದಿಲ್ಲದೆ ಮುಂದೆ ಸಾಗುತ್ತಿದ್ದರು.

ಕಾಂಗ್ರೆಸ್ ಪ್ರಾರಂಭವಾದ 45 ವರ್ಷಗಳ ನಂತರ ಸುಭಾಷ್ ಚಂದ್ರ ಬೋಸ್ ಕಾಂಗ್ರೆಸ್ ಸೇರಿ ಕೊಂಡರು. ಕಾಲ ಕ್ರಮೇಣ ಅವರ ಕ್ರಾಂತಿಕಾರಿಯ ಮಾರ್ಗವನ್ನು ಒಪ್ಪದಿದ್ದಾಗ ಪಕ್ಷವನ್ನು ಬಿಡಬೇಕಾಯಿತು. ನಂತರದ ದಿನಗಳಲ್ಲಿ ಸುಭಾಷ್ ಚಂದ್ರ ಬೋಸರು ಯಾರ ಕಣ್ಣಿಗೂ ಕಾಣದೆ ಸೈನ್ಯವನ್ನು ಕಟ್ಟಿ ಬ್ರಿಟಿಷರಿಗೆ ಹೆದರಿಸಿದ್ದರು. ಅವರ ಹೆದರಿಕೆಯಿಂದ ಬ್ರಿಟಿಷರು ಭಾರತ ಬಿಟ್ಟು ತೊಲಗಿದ್ದರು.

ಬ್ರಿಟಿಷರು ಹೂಮ ಮೂಲಕ ಕಾಂಗ್ರೆಸ್ ಸ್ಥಾಪಿಸಿ ತಮ್ಮ ಕೆಲಸಗಳನ್ನು ಹಂಚಿಕೊಳ್ಳುವಲ್ಲಿ ಯಶಸ್ವಿ ಯಾಗಿದ್ದರು. ತಮ್ಮ ಆಡಳಿತದಲ್ಲಿ ನಡೆಯುತ್ತಿದ್ದ ಕೆಲಸಗಳನ್ನು ಒಪ್ಪಿ ಮುಂದುವರೆಸಲು ಒಂದು ಸಂಘಟನೆಯು ಬ್ರಿಟಿಷರಿಗೆ ಬೇಕಿತ್ತು. ಕಣ್ಣಿಗೆ ಕಾಣದ ಹಾಗೆ ಕಾಂಗ್ರೆಸ್ಸನ್ನು ತಮ್ಮ ತಾಳಕ್ಕೆ ಕುಣಿಯುವ ಕೆಲಸಕ್ಕಾಗಿ ಬಳಸಿಕೊಳ್ಳಲಾಯಿತು.

ಬ್ರಿಟಿಷರಿಗೆ ತಮ್ಮ ವಸಾಹತನ್ನು ಜಗತ್ತಿನಾದ್ಯಂತ ವಿಸ್ತರಿಸಲು ಯುದ್ಧ ಮಾಡಬೇಕಿತ್ತು, ಯುದ್ಧಕ್ಕೆ ಬೇಕಾದಂತಹ ಸೈನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾರತದಲ್ಲಿದ್ದರು. ಇವೆಲ್ಲದರ ದೂರಾ ಲೋಚನೆಯಿಂದ ಬ್ರಿಟಿಷರು ಹೂಮ್'ನನ್ನು ಕಾಂಗ್ರೆಸ್ ಪಕ್ಷದ ಸ್ಥಾಪಕನಾಗಿಸಲು ಒಪ್ಪಿಕೊಂಡಿ ದ್ದರು. ನಾವು ನೀವೆಲ್ಲರೂ ಅಂದುಕೊಂಡಂತೆ ಕೇವಲ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಲಿಲ್ಲ.

ದಕ್ಷಿಣ ಆಫ್ರಿಕಾ, ಟಿಬೆಟ್, ಮಧ್ಯ ಪ್ರಾಚ್ಯ, ಚೀನಾ, ದಕ್ಷಿಣ ಏಷ್ಯಾಗಳಲ್ಲಿನ ದೇಶಗಳ ವಿರುದ್ಧ ಯುದ್ಧ ಮಾಡಲು ಸೈನಿಕರನ್ನು ನೇಮಕ ಮಾಡುವುದರಲ್ಲಿ ಬ್ರಿಟಿಷರು ಯಶಸ್ವಿಯಾಗಿದ್ದರು. ಕಾಂಗ್ರೆಸ್ ಪಕ್ಷವನ್ನು 1885ರಲ್ಲಿ ಹೂಮ್‌ನ ಮೂಲಕ ಸ್ಥಾಪನೆ ಮಾಡದೆ ಹೋಗಿದ್ದರೆ, 1857ರ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚಿನಿಂದ ಭಾರತೀಯರು ಹೊರ ಬರುತ್ತಿರಲಿಲ್ಲ. ಅವರ ತಾಳಕ್ಕೆ ಕುಣಿಯುವ ಸಂಘಟನೆಯೊಂದಿದ್ದರೆ ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯದ ಮಾತುಗಳು ಕೇಳಿ ಬಂದಾಗ ಮಾತುಕತೆ ನಡೆಸಲು ಅನುಕೂಲವಾಗುತ್ತದೆ ಎಂಬುದು ಬ್ರಿಟಿಷರಿಗೆ ತಿಳಿದಿತ್ತು.

ಹಾಗಾಗಿ ಹಲವಾರು ರಾಜಕೀಯ ಪಕ್ಷಗಳನ್ನು ಬೆಳೆಯಲು ಬಿಡಲಿಲ್ಲ, ಬ್ರಿಟಿಷರಿಗೆ ತಾವು ಹೇಳಿದಂತೆ ಕೇಳುವ ಸಂಘಟನೆಯೊಂದಿರಬೇಕಾದರೆ ಸುಭಾಷ್ ಚಂದ್ರ ಬೋಸ್ ಅವರ ಅಜಾದ್ ಹಿಂದ್ ಫೌಜನ್ನು ವಿರೋಧಿಸುವುದು ಸುಲಭವಾಯಿತು. ಅಹಿಂಸೆಯ ಮಾರ್ಗವನ್ನು ಬಳಸುತ್ತೇನೆಂದು ಹೇಳಿ ಬೋಸರನ್ನು ಎದುರು ಹಾಕಿಕೊಂಡಿತ್ತು ಕಾಂಗ್ರೆಸ್.

ಭಗತ್ ಸಿಂಗ್, ಚಂದ್ರಶೇಖರ ಆಜಾದರಿಗೆ ಕಾಂಗ್ರೆಸ್ ಪಕ್ಷದ ಸಹಾಯ ದೊರೆಯಲಿಲ್ಲ, ಇವರ ಸಹಕಾರ ದೊರೆಯಾದ ಕಾರಣ ಅನ್ಯಾಯವಾಗಿ ಇಬ್ಬರು ಕ್ರಾಂತಿಕಾರಿ ಯುವಕರನ್ನು ಸ್ವಾತಂತ್ರ್ಯ ಕ್ಕಾಗಿ ಬಲಿ ಪಡೆಯಬೇಕಾಯಿತು. ಸದ್ದಿಲ್ಲದೆ ಬ್ರಿಟಿಷರು ಒಂದು ಸಂಘಟನೆಯ ಮೂಲಕ ತಮ್ಮ ಕೆಲಸಗಳನ್ನು ಮಾಡುತ್ತಿದ್ದರು. ನಮ್ಮ ಕಿವಿಗೆ ಬಿದ್ದಿರುವ ಹೆಸರುಗಳು ಕೇವಲ ಎರಡಿರಬಹುದು, ಕಿವಿಗೆ ಬೀಳದೇ ಇರುವ ಸಾವಿರಾರು ಕ್ರಾಂತಿಕಾರಿಗಳು ತಮ್ಮ ಜೀವದಾನ ಮಾಡಿದ್ದರು.

ದಕ್ಷಿಣ ಭಾರತದಲ್ಲಿಯೂ ಹಲವಾರು ಕ್ರಾಂತಿಕಾರಿ ಯುವಕರು ಸದ್ದಿಲ್ಲದೆ ಪ್ರಾಣ ತ್ಯಾಗ ಮಾಡಿ ಯಾಗಿತ್ತು. 200 ವರ್ಷಗಳ ಕಾಲ ನಮ್ಮನ್ನು ಲೂಟಿ ಮಾಡಿದ ಬ್ರಿಟಿಷರು 1947ರಲ್ಲಿ ದೇಶ ಬಿಟ್ಟು ಓಡಿ ಹೋಗುವಾಗ ಒಬ್ಬರೂ ಸಹ ಸದ್ದನ್ನು ಮಾಡಲಿಲ್ಲ, ಅವರು ಹತ್ತಿದ ವಿಮಾನಗಳಿಗೆ ಕಲ್ಲು ಹೊಡೆಯಲಿಲ್ಲ, ಅವರು ತುಂಬಿಕೊಂಡು ಹೋದ ಹಡಗುಗಳಿಗೆ ಬೆಂಕಿ ಹಚ್ಚಲಿಲ್ಲ.

1916ರಲ್ಲಿ ಲಾಲಾ ಲಜಪತ್ ರಾಯ್ ತಮ್ಮ ‘ಯಂಗ್ ಇಂಡಿಯಾ’ನಲ್ಲಿ ‘ಕಾಂಗ್ರೆಸ್ ಬ್ರಿಟಿಷರ ಸೇಫ್ಟಿ ವಾಲ್ವ್’ ಎಂದು ಕರೆದಿದ್ದರು. ಕಾಂಗ್ರೆಸ್ ಬ್ರಿಟಿಷರಿಗೆ ರಕ್ಷಾ ಕವಚದಂತೆ ವರ್ತಿಸುತ್ತಿದೆ, ಬ್ರಿಟಿಷರ ವಿರುದ್ಧ ಏಳಬಹುದಾದ ದಂಗೆಯನ್ನು ಹತ್ತಿಕ್ಕಲು ಹೂಮ್ ಮೂಲಕ ಕಾಂಗ್ರೆಸ್ ಸ್ಥಾಪಿಸಲಾಯಿ‌ ತೆಂದು ಹೇಳಿದ್ದರು.

ಬ್ರಿಟಿಷ್ ಸಾಮ್ರಾಜ್ಯ, ಕಾಂಗ್ರೆಸ್ಸಿನ ಮೂಲ ಉದ್ದೇಶ, ರಾಜಕೀಯ ಪಕ್ಷದ ಮೂಲಕ ಸ್ವಾತಂತ್ರ್ಯ ಪಡೆಯುವ ಕಾಂಗ್ರೆಸ್ಸಿನ ಉದ್ದೇಶವು ಎಂದಿಗೂ ಮೂಲವಾಗಿರಲಿಲ್ಲವೆಂಬುದನ್ನು ಲಾಲಾ ಲಜಪತ್ ರಾಯ್ ಸ್ಪಷ್ಟವಾಗಿ ಹೇಳಿದ್ದರು. ಕಾಂಗ್ರೆಸ್ ತನ್ನ ಇತಿಹಾಸವನ್ನು ಪರಾಮರ್ಶಿಸಬೇಕಾಗಿದೆ.

ಬ್ರಿಟಿಷ್ ಅಧಿಕಾರಿಯಿಂದ ಸ್ಥಾಪಿತವಾದ ಪಕ್ಷ, ತುರ್ತು ಪರಿಸ್ಥಿತಿಯ ಸಮಯದಲ್ಲಿ ನಾಗರಿಕ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಿದ ಆರೋಪಗಳನ್ನು ಎದುರಿಸಿದ ಪಕ್ಷ, ಇಂದು ಸಂಘಟನೆಗಳ ಸ್ವಾತಂತ್ರ್ಯ ಮತ್ತು ಪಾರದರ್ಶಕತೆಯ ಬಗ್ಗೆ ಪಾಠ ಹೇಳಲು ಮುಂದಾಗಿರುವುದು ವಿರೋಧಾಭಾಸ ವಾಗಿದೆ. ಹಲವು ದಶಕಗಳ ಆಡಳಿತಾವಧಿಯಲ್ಲಿ ರಾಜಕೀಯ ಪಕ್ಷಗಳ ನಿಧಿ ಸಂಗ್ರಹಣೆ, ಆಂತರಿಕ ಪ್ರಜಾಪ್ರಭುತ್ವ ಮತ್ತು ಆಡಳಿತ ಪಾರದರ್ಶಕತೆ ಕುರಿತ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ವಿಫಲವಾದ ಕಾಂಗ್ರೆಸ್, ಈಗ ಆರ್‌ಎಸ್‌ಎಸ್ ವಿರುದ್ಧ ಆಯ್ದ ಪ್ರಶ್ನೆಗಳನ್ನು ಎತ್ತುತ್ತಿರುವುದು ರಾಜಕೀಯ ಉದ್ದೇಶದಿಂದ ಪ್ರೇರಿತವಾಗಿದೆ.

ಆರ್‌ಎಸ್‌ಎಸ್‌ನೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವುದು ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ, ಕಾನೂನುಬದ್ಧವಾಗಿ ಕಡ್ಡಾಯವಲ್ಲದ ವಿಷಯವನ್ನು ರಾಜಕೀಯ ವಿವಾದವನ್ನಾಗಿ ಮಾಡುವುದರಿಂದ ಸಾರ್ವಜನಿಕ ಚರ್ಚೆಯ ಗುಣಮಟ್ಟ ಕುಸಿಯುತ್ತದೆ. ಯಾವುದೇ ಸಂಘಟನೆಯ ವಿರುದ್ಧ ಆರೋಪ ಮಾಡುವ ಮೊದಲು, ಅದರ ಬಗ್ಗೆ ಇರುವ ಕಾನೂನುಸ್ಥಿತಿ ಮತ್ತು ಸಂವಿಧಾ ನಾತ್ಮಕ ಹಕ್ಕುಗಳನ್ನು ಗೌರವಿಸುವುದು ಅಗತ್ಯ. ಆರ್‌ಎಸ್‌ಎಸ್ ನೋಂದಣಿ ಕುರಿತ ಚರ್ಚೆ ಅಂತಿಮವಾಗಿ ಒಂದು ಸರಳ ಪ್ರಶ್ನೆಯತ್ತ ಕರೆದೊಯ್ಯುತ್ತದೆ.

ಕಾನೂನಿನಲ್ಲಿ ಇಲ್ಲದ ಕಡ್ಡಾಯವನ್ನು ಕಾಂಗ್ರೆಸ್ ಏಕೆ ಬೇಡುತ್ತಿದೆ? ನಿಜವಾಗಿಯೂ ನೋಂದಣಿ ಅಗತ್ಯವೆಂದು ಕಾಂಗ್ರೆಸ್ ನಂಬಿದ್ದರೆ, ತನ್ನ ದೀರ್ಘ ಆಡಳಿತಾವಧಿಯಲ್ಲಿ ಅದಕ್ಕಾಗಿ ಕಾನೂನು ಏಕೆ ತರಲಿಲ್ಲ? ಈ ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೂ, ಆರ್‌ಎಸ್‌ಎಸ್ ವಿರುದ್ಧದ ಈ ಅಭಿಯಾನವನ್ನು ರಾಜಕೀಯ ತಂತ್ರವೆಂದು ನೋಡುವವರ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ.