ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯೋಗಿ ನಾಡಲ್ಲಿ ಮತ್ತೊಂದು ಮಹತ್ವದ ಕಾರ್ಯಾಚರಣೆ: ನಾಲ್ವರು ಮಕ್ಕಳು, ಮಹಿಳೆ ಹತ್ಯೆ ಮಾಡಿದ ಪಾಪಿ ಪೊಲೀಸ್ ಗುಂಡೇಟಿಗೆ ಬಲಿ

Crime News: ನಾಲ್ವರು ಮಕ್ಕಳು ಹಾಗೂ ಅವರ ತಾಯಿಯನ್ನು ಕೊಂದಿದ್ದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಆರೋಪಿಯು ಪೊಲೀಸರ ಕಾರ್ಯಾಚರಣೆಯಲ್ಲಿ ಗುಂಡೇಟಿಗೆ ಬಲಿಯಾಗಿದ್ದಾನೆ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಐವರನ್ನು ಹತ್ಯೆ ಮಾಡಿದ್ದ ದುಷ್ಕರ್ಮಿ ಪೊಲೀಸ್ ಗುಂಡೇಟಿಗೆ ಬಲಿ

ಸಾಂದರ್ಭಿಕ ಚಿತ್ರ -

Priyanka P
Priyanka P May 4, 2026 1:48 PM

ಲಖನೌ, ಮೇ 4: ನಾಲ್ವರು ಮಕ್ಕಳು ಹಾಗೂ ಅವರ ತಾಯಿಯನ್ನು ಕೊಂದಿದ್ದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಆರೋಪಿಯು ಪೊಲೀಸರ ಕಾರ್ಯಾಚರಣೆಯಲ್ಲಿ ಗುಂಡಿಗೆ ಬಲಿಯಾಗಿದ್ದಾನೆ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ (Uttar Pradesh) ಅಂಬೇಡ್ಕರ್ ನಗರದಲ್ಲಿ ಘಟನೆ ನಡೆದಿದೆ (Crime News).

ಎರಡು ದಿನಗಳ ಹಿಂದೆ ಜಿಲ್ಲೆಯಲ್ಲಿ ಆಘಾತಕಾರಿ ಅಲೆಗಳನ್ನು ಎಬ್ಬಿಸಿದ ಈ ಭೀಕರ ಹತ್ಯೆ ಪ್ರಕರಣದಲ್ಲಿ ಆರೋಪಿ ಆಮಿರ್ ಪ್ರಮುಖ ಶಂಕಿತನಾಗಿದ್ದ. ಆಸ್ತಿಯ ಮೇಲಿನ ಅತಿಯಾದ ವ್ಯಾಮೋಹ ಮತ್ತು ದುರಾಸೆಯೇ ಈ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಭಾನುವಾರ-ಸೋಮವಾರದ (ಮೇ 3-4) ಮಧ್ಯರಾತ್ರಿ ಈ ಎನ್‌ಕೌಂಟರ್ ನಡೆದಿದೆ ಎಂದು ಅಂಬೇಡ್ಕರ್ ನಗರ ಎಸ್‌ಪಿ ಪ್ರಾಚಿ ಸಿಂಗ್ ತಿಳಿಸಿದ್ದಾರೆ.

ಆಮಿರ್‌ ಅಂಬೇಡ್ಕರ್ ನಗರ ಜಿಲ್ಲೆಯಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ಬಂಧಿಸಿದರು. ಶರಣಾಗಲು ಕೇಳಿದಾಗ ಆತ ಪೊಲೀಸರ ಮೇಲೆಯೇ ಗುಂಡು ಹಾರಿಸಿದ. ಪ್ರತಿದಾಳಿಯಲ್ಲಿ ಆರೋಪಿಗೆ ಮಾರಣಾಂತಿಕ ಗಾಯವಾಗಿ ಬಳಿಕ ಅಸುನೀಗಿದ ಎಂದ ಮೂಲಗಳು ತಿಳಿಸಿವೆ. ಎನ್‌ಕೌಂಟರ್‌ನಲ್ಲಿ ಇಬ್ಬರು ಪೊಲೀಸರು ಸಹ ಗಾಯಗೊಂಡರು.

ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದ ನಾಲ್ವರು ಮಕ್ಕಳ ಮೃತದೇಹ; ತಾಯಿ ನಾಪತ್ತೆ

ಐವರ ಕೊಲೆ ಪ್ರಕರಣ ಆರಂಭದಲ್ಲಿ ತನಿಖಾಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿತ್ತು. ಮೇ 2ರಂದು ನಾಲ್ವರು ಮಕ್ಕಳ ಶವಗಳು ಪತ್ತೆಯಾದಾಗ, ಆರಂಭದಲ್ಲಿ ಈ ಕೃತ್ಯದ ಹಿಂದೆ ತಾಯಿಯ ಕೈವಾಡವಿದೆ ಎಂದು ಶಂಕಿಸಲಾಗಿತ್ತು. ಆದರೆ ಒಂದು ದಿನದ ನಂತರ ಮಹಿಳೆಯ ಶವ ಚರಂಡಿಯಲ್ಲಿ ಪತ್ತೆಯಾದಾಗ ತನಿಖೆಯ ದಿಕ್ಕು ಬದಲಾಯಿತು.

ಸಂಪೂರ್ಣ ತನಿಖೆಯ ನಂತರ ಪೊಲೀಸರಿಗೆ ಆಮಿರ್‌ ಕೊಲೆ ಆರೋಪಿ ಎಂದು ತಿಳಿದುಬಂತು. ಆಮೀರ್ ಆ ಮಹಿಳೆಯನ್ನು ಮದುವೆಯಾಗಲು ಬಯಸಿದ್ದ. ಆಕೆಯ ಆಸ್ತಿಯನ್ನು ಕಸಿದುಕೊಳ್ಳುವ ಪ್ಲಾನ್ ಅವನದ್ದಾಗಿತ್ತು. ಆದರೆ, ಅವನಂದುಕೊಂಡಂತೆ ಆಗದಿದ್ದಾಗ, ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ. ಎನ್‌ಕೌಂಟರ್ ನಂತರ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪ್ರದೇಶದಲ್ಲಿ ದೊಡ್ಡ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಸಿಂಗ್ ಹೇಳಿದರು.