Hotel Raid: ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ; 2 ಗೃಹ ಬಳಕೆ ಸಿಲಿಂಡರ್‌ಗಳ ಜಪ್ತಿ
ಪಟ್ಟಣದ ಓವನ್ ಬೇಕರಿ ಪಕ್ಕದಲ್ಲಿ ಇರುವ ಕಬಾಬ್ ಅಂಗಡಿ ಹಾಗೂ ಎಗ್ ರೈಸ್ ಸೆಂಟರ್ ಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬದಲಿಗೆ ಡೊಮೆಸ್ಟಿಕ್ (ಗೃಹಬಳಕೆ) ಸಿಲಿಂಡರ್ ಗಳನ್ನು ಬಳಸಲಾಗುತ್ತಿದೆ ಎಂಬ ಬಾಗೇಪಲ್ಲಿ ತಹಶಿಲ್ದಾರ್ ಮನೀಷಾ ಎನ್ ಪತ್ರಿ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ
-
ಬಾಗೇಪಲ್ಲಿ: ವಾಣಿಜ್ಯ ಉದ್ದೇಶಗಳಿಗಾಗಿ ನಿಯಮಬಾಹಿರವಾಗಿ ಗೃಹಬಳಕೆಯ ಸಿಲಿಂಡರ್(Domestic cylinder)ಗಳನ್ನು ಬಳಸುತ್ತಿದ್ದ ಪಟ್ಟಣದ ಹೋಟೆಲ್‌ಗಳ ಮೇಲೆ ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಶುಕ್ರವಾರ ಜಂಟಿ ದಾಳಿ ಒಟ್ಟು 2 ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಓವನ್ ಬೇಕರಿ ಪಕ್ಕದಲ್ಲಿ ಇರುವ ಕಬಾಬ್ ಅಂಗಡಿ ಹಾಗೂ ಎಗ್ ರೈಸ್ ಸೆಂಟರ್ ಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬದಲಿಗೆ ಡೊಮೆಸ್ಟಿಕ್ (ಗೃಹಬಳಕೆ) ಸಿಲಿಂಡರ್ ಗಳನ್ನು ಬಳಸಲಾಗುತ್ತಿದೆ ಎಂಬ ಬಾಗೇಪಲ್ಲಿ ತಹಶಿಲ್ದಾರ್ ಮನೀಷಾ ಎನ್ ಪತ್ರಿ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಹೇಳಿದರು.
ಶುಕ್ರವಾರ ಸಂಜೆ 4 ಗಂಟೆಯ ಸುಮಾರಿಗೆ ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಪುರಸಭೆ ಆರೋಗ್ಯ ಹಾಗೂ ಪರಿಸರ ನಿರೀಕ್ಷಕಿ ಉಷಾ ನೇತೃತ್ವದ ತಂಡವು ಅಂಗಡಿ ತಪಾಸಣೆ ನಡೆಸಿತು. ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಗೃಹಬಳಕೆಯ ಸಿಲಿಂಡರ್ ಬಳಸುತ್ತಿರುವುದು ಪತ್ತೆಯಾದ ತಕ್ಷಣ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದರು.\
ಇದನ್ನೂ ಓದಿ: LPG Gas Cylinder Shortage: ಎಲ್‌ಪಿಜಿ ಸಿಲಿಂಡರ್ ಸಮಸ್ಯೆ ಬಗ್ಗೆ ದೂರು ಸಲ್ಲಿಕೆಗೆ ಆಹಾರ ಇಲಾಖೆಯಿಂದ ಸಹಾಯವಾಣಿ ಆರಂಭ
ತದನಂತರ ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ಮಾತನಾಡಿ, ಸಾಮಾನ್ಯ ಜನರಿಗೆ ಮೀಸಲಿರುವ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಕಾನೂನುಬಾಹಿರ. ಇಂತಹ ದುರುಪಯೋಗವನ್ನು ತಡೆಯಲು ಪಟ್ಟಣದಲ್ಲಿ ನಿರಂತರ ವಾಗಿ ತಪಾಸಣಾ ಕಾರ್ಯಚರಣೆ ಮುಂದುವರಿಯಲಿದೆ,” ಎಂದು ತಿಳಿಸಿದರು.
“ಮಾರುಕಟ್ಟೆಯಲ್ಲಿ ವಾಣಿಜ್ಯ ಸಿಲಿಂಡರ್(Commercial cylinder)ಗಳ ತಾತ್ಕಾಲಿಕ ಕೊರತೆಯನ್ನು ನೆಪ ಮಾಡಿಕೊಂಡು ಹೋಟೆಲ್ ಮಾಲೀಕರು ಸಾರ್ವಜನಿಕರ ಬಳಕೆಯ ಸಿಲಿಂಡರ್‌ಗಳನ್ನು ಬಳಸುವಂತಿಲ್ಲ. ಇದರಿಂದಾಗಿ ಸಾಮಾನ್ಯ ಮನೆಗಳಿಗೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸ ಲಾಗುವುದು,” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆ ಸಹಾಯಕ ನಾಗರಾಜು, ಪೊಲೀಸ್ ಸಿಬ್ಬಂದಿಗಳಾದ ಲಕ್ಷ್ಮಿಪತಿ, ಕೃಷ್ಣಪ್ಪ ಹಾಜರಿದ್ದರು.