ಟಿ20 ವಿಶ್ವಕಪ್ ಹಿನ್ನೋಟ; ಇದುವರೆಗಿನ ದಾಖಲೆ ಪಟ್ಟಿ ಇಲ್ಲಿದೆ
T20 World Cup 2026: ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ ದಾಖಲೆ ಶ್ರೀಲಂಕಾ ಹೆಸರಿನಲ್ಲಿದೆ. ಸೆಪ್ಟೆಂಬರ್ 14 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಕೀನ್ಯಾ ವಿರುದ್ಧ ನಡೆದ 2007 ರ ಟಿ20 ವಿಶ್ವಕಪ್ ಗ್ರೂಪ್ ಸಿ ಪಂದ್ಯದಲ್ಲಿ ಶ್ರೀಲಂಕಾ 20 ಓವರ್‌ಗಳಲ್ಲಿ 260/6 ರನ್ ಗಳಿಸಿತ್ತು.
T20 World Cup Record holders -
ನವದೆಹಲಿ, ಫೆ.4: ಐಸಿಸಿ ಟಿ20 ವಿಶ್ವಕಪ್‌ಗೆ ಇನ್ನು ಕೇವಲ 3 ದಿನಗಳು ಬಾಕಿ ಇದೆ. ಫೆ.7ರಂದು ಭಾರತದ 5 ಹಾಗೂ ಶ್ರೀಲಂಕಾದ 2 ನಗರಗಳಲ್ಲಿ ಪಂದ್ಯಗಳು ಆರಂಭಗೊಳ್ಳಲಿವೆ. ಈ ಬಾರಿ ಟೂರ್ನಿಯಲ್ಲಿ ದಾಖಲೆಯ 20 ತಂಡಗಳು ಪ್ರಶಸ್ತಿಗಾಗ ಸೆಣಸಾಟ ನಡೆಸಲಿದೆ. ಟೂರ್ನಿ ಆರಂಭಕ್ಕೂ ಮುನ್ನ ಈ ಹಿಂದಿನ ಆವೃತ್ತಿಯ ದಾಖಲೆಗಳ ಹಿನ್ನೋಟದ ವರದಿ ಇಲ್ಲಿದೆ.
ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ ದಾಖಲೆ ಶ್ರೀಲಂಕಾ ಹೆಸರಿನಲ್ಲಿದೆ. ಸೆಪ್ಟೆಂಬರ್ 14 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಕೀನ್ಯಾ ವಿರುದ್ಧ ನಡೆದ 2007 ರ ಟಿ20 ವಿಶ್ವಕಪ್ ಗ್ರೂಪ್ ಸಿ ಪಂದ್ಯದಲ್ಲಿ ಶ್ರೀಲಂಕಾ 20 ಓವರ್‌ಗಳಲ್ಲಿ 260/6 ರನ್ ಗಳಿಸಿತು. ಈ ದಾಖಲೆ 19 ವರ್ಷಗಳಿಂದಲೂ ಹೀಗೆ ಇದೆ ಆದರೆ ಈ ವರ್ಷ ಕನಿಷ್ಠ ಒಂದು ತಂಡವಾದರೂ ಈ ಮೊತ್ತವನ್ನು ಮೀರುವ ಸಾಧ್ಯತೆ ಹೆಚ್ಚಿದೆ.
ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಗೆಲುವುಗಳು
ಒಂದೇ ಆವೃತ್ತಿಯಲ್ಲಿ ಅತ ಹೆಚ್ಚು ಗೆಲುವು ಸಾಧಿಸಿದ ದಾಖಲೆ ಭಾರತದ ಹೆಸರಿನಲ್ಲಿದೆ. 2024 ರಲ್ಲಿ 100% ಗೆಲುವಿನ ದಾಖಲೆಯೊಂದಿಗೆ T20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ, ಭಾರತ ಆಡಿದ ಎಲ್ಲಾ ಎಂಟು ಪಂದ್ಯಗಳನ್ನು ಗೆದ್ದಿದೆ. ಇದು T20 ವಿಶ್ವಕಪ್‌ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಗೆಲುವುಗಳ ದಾಖಲೆಯಾಗಿದೆ. ಆದರೆ ಈ ಬಾರಿ, ಭಾರತ ಅಥವಾ ಭಾಗವಹಿಸುವ ಇತರ 19 ತಂಡಗಳಲ್ಲಿ ಯಾವುದಾದರೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲಾ ಒಂಬತ್ತು ಪಂದ್ಯಗಳನ್ನು ಗೆದ್ದು ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಬಹುದು.
ಅತಿ ಹೆಚ್ಚು ರನ್‌ಗಳು
ಐಸಿಸಿ ಪುರುಷರ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ಭಾರತ ಪರ 35 ಪಂದ್ಯಗಳಲ್ಲಿ ಅವರು 1292 ರನ್‌ಗಳನ್ನು ಗಳಿಸಿದ್ದಾರೆ. ಇಂಗ್ಲೆಂಡ್‌ನ ಜೋಸ್ ಬಟ್ಲರ್ 1013 ರನ್‌ಗಳನ್ನು ಗಳಿಸಿದ್ದಾರೆ ಮತ್ತು ಮುಂಬರುವ ಟೂರ್ನಿಯಲ್ಲಿ ಅವರು 280 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾದರೆ, ಕೊಹ್ಲಿಯ ದಾಖಲೆ ಮುರಿಯಬಹುದು.
ಅತ್ಯಧಿಕ ವೈಯಕ್ತಿಕ ಸ್ಕೋರ್
ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲೆ ಬ್ರೆಂಡನ್ ಮೆಕಲಮ್ ಹೆಸರಿನಲ್ಲಿದೆ. 2012 ಟಿ20 ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 58 ಎಸೆತಗಳಲ್ಲಿ 123 ರನ್ ಗಳಿಸಿದ್ದರು. ಕಳೆದ 16 ವರ್ಷಗಳಲ್ಲಿ ಮೆಕಲಮ್ ಅವರ ದಾಖಲೆಯನ್ನು ಯಾರೂ ಮೀರಿಲ್ಲ.
ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳು
ಟಿ20 ವಿಶ್ವಕಪ್‌ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಲ್ಲಿದೆ. ಅವರು 319 ರನ್‌ಗಳನ್ನು ಬಾರಿಸಿದ್ದಾರೆ. 2026 ರ ಆವೃತ್ತಿಯಲ್ಲಿ ಒಬ್ಬ ಆಟಗಾರ ಗರಿಷ್ಠ ಒಂಬತ್ತು ಪಂದ್ಯಗಳನ್ನು ಆಡಬಹುದಾದ್ದರಿಂದ, ಈ ದಾಖಲೆ ಮುರಿಯುವ ಅವಕಾಶವಿದೆ.
ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು
2024 ರ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಪರ ನಿಕೋಲಸ್ ಪೂರನ್ 17 ಸಿಕ್ಸರ್‌ಗಳನ್ನು ಬಾರಿಸಿದ್ದರು. ಸದ್ಯ ಇದು ದಾಖಲೆಯಾಗಿ ಉಳಿದಿದೆ. ಆದರೆ ಈ ಬಾರಿ ಸ್ಫೋಟಕ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ, ಫಿಲ್ ಸಾಲ್ಟ್, ಕ್ವಿಂಟನ್ ಡಿ ಕಾಕ್, ಟಿಮ್ ಡೇವಿಡ್, ಹಾರ್ದಿಕ್ ಪಾಂಡ್ಯ ಮತ್ತು ಫಿನ್ ಅಲೆನ್ ಸೇರಿದಂತೆ ಅನೇಕ ಆಟಗಾರರು ಇರುವ ಕಾರಣ ಈ ದಾಖಲೆ ಮುರಿಯುವ ಸಾಧ್ಯತೆ ಇದೆ.
ಭಾರತ ವಿರುದ್ಧ ಪಾಕ್ ಪಂದ್ಯ ಬಹಿಷ್ಕರಿಸಿದ್ದಕ್ಕೆ ಕೋಚ್ ಗೌತಮ್ ಗಂಭೀರ್ ಪ್ರತಿಕ್ರಿಯೆ
ಅತಿ ಹೆಚ್ಚು ವಿಕೆಟ್‌ಗಳು
ಪುರುಷರ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅವರ ಹೆಸರಿನಲ್ಲಿದೆ. 2007 ರಿಂದ 2024 ರವರೆಗೆ ಬಾಂಗ್ಲಾದೇಶ ಪರ 43 ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಶಕೀಬ್ 50 ವಿಕೆಟ್ ಕೆಡವಿದ್ದಾರೆ.
ಹೆಚ್ಚಿನ ಔಟ್‌ಗಳು(ವಿಕೆಟ್ ಕೀಪರ್)
33 ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಭಾರತದ ಪರ ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿ 32 ಔಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ಇದು ದಾಖಲೆಯಾಗಿದೆ. ಆದರೆ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ವಿಕೆಟ್‌ಗಳ ಹಿಂದೆ 30 ಔಟ್‌ಗಳನ್ನು ಮಾಡಿದ್ದಾರೆ. ಈ ಬಾರಿ ಅವರಿಗೆ ಧೋನಿ ಅವರ ದಾಖಲೆಯನ್ನು ಮೀರುವ ಅವಕಾಶವಿದೆ.
ಹೆಚ್ಚಿನ ಕ್ಯಾಚ್‌ಗಳು (ಫೀಲ್ಡರ್ ಆಗಿ)
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ದಾಖಲೆ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಹೆಸರಿನಲ್ಲಿದೆ. ಅವರು ಈ ವರೆಗೆ 25 ಕ್ಯಾಚ್ ಹಿಡಿದ್ದಾರೆ. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ 21 ಕ್ಯಾಚ್ ಹಿಡಿದು ಎರಡನೇ ಸ್ಥಾನದಲ್ಲಿದ್ದಾರೆ. ಉಭಯ ಆಟಗಾರರು ಈ ಬಾರಿಯೂ ಆಡುತ್ತಿರುವ ಕಾರಣ ಅಗ್ರಸ್ಥಾನಕ್ಕೆ ಪೈಪೋಟಿ ಖಚಿತ.