ವಾಮಾಚಾರದ ವೇಳೆ ದುರಂತ; ಭೂತ ಬಿಡಿಸಲು ಹೋಗಿ ಮಗಳನ್ನೇ ಕೊಂದ ತಾಯಿ
ಮಗಳ ಮೇಲೆ ಬಂದಿದ್ದ ದೆವ್ವವನ್ನು ಬಿಡಿಸಲು ಯತ್ನಿಸಿದ ತಾಯಿ ಆಕೆಯ ಜೀವವನ್ನೇ ತೆಗೆದ ಹೃದಯವಿದ್ರಾವಕ ಘಟನೆ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ಮಗಳ ಸಾವಿಗೆ ಕಾರಣಳಾದ ಲಿ ಎಂಬ ಮಹಿಳೆಗೆ ಶೆನ್‌ಝೆನ್ ನಗರದ ಶೆನ್‌ಝೆನ್ ಮುನ್ಸಿಪಲ್ ಪೀಪಲ್ಸ್ ಪ್ರೊಕ್ಯೂರೇಟರೇಟ್ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ವರದಿಗಳ ಪ್ರಕಾರ, ಲಿ ಮತ್ತು ಆಕೆಯ ಇಬ್ಬರು ಪುತ್ರಿಯರು ಟೆಲಿಪಥಿ ಹಾಗೂ ಔಷಧೋಪಚಾರಕ್ಕೆ ಸಂಬಂಧಿಸಿದ ಕೆಲವು ಮೂಢನಂಬಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ದೆವ್ವಗಳು ತಮ್ಮನ್ನು ಹಿಂಬಾಲಿಸುತ್ತಿವೆ ಹಾಗೂ ತಮ್ಮ ಆತ್ಮಗಳಿಗೆ ಅಪಾಯವಿದೆ ಎಂಬ ಭ್ರಮೆಯೇ ಈ ದುರ್ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ -
ಬೀಜಿಂಗ್, ಡಿ. 31: ತಾಯಿಯೊಬ್ಬಳು ಮಗಳ ಮೇಲಿನ ಭೂತ ಬಿಡಿಸಲು ಹೋಗಿ ಆಕೆಯ ಪ್ರಾಣವನ್ನೇ ತೆಗೆದಿರುವ ಭಯಾನಕ ಘಟನೆ ಚೀನಾದ (China) ಗುವಾಂಗ್‌ಡಾಂಗ್ (Guangdong) ಪ್ರಾಂತ್ಯದಲ್ಲಿ ಬೆಳಕಿಗೆ ಬಂದಿದೆ. ಕಿರಿಯ ಮಗಳ ಸಾವಿಗೆ ಕಾರಣಳಾದ ಲಿ ಎಂಬ ಮಹಿಳೆಗೆ ಶೆನ್‌ಝೆನ್ (Shenzhen) ನಗರದ ನ್ಯಾಯಾಲಯವಾದ ಶೆನ್‌ಝೆನ್ ಮುನ್ಸಿಪಲ್ ಪೀಪಲ್ಸ್ ಪ್ರೊಕ್ಯೂರೇಟರೇಟ್ (Shenzhen Municipal People) ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ವರದಿಗಳ ಪ್ರಕಾರ, ಲಿ ಮತ್ತು ಆಕೆಯ ಇಬ್ಬರು ಪುತ್ರಿಯರು ಟೆಲಿಪಥಿ (Telepathy) ಮತ್ತು ಔಷಧೋಪಚಾರ (Medication) ಸೇರಿದಂತೆ ಕೆಲವು ಮೂಢನಂಬಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ದೆವ್ವಗಳು ತಮ್ಮನ್ನು ಹಿಂಬಾಲಿಸುತ್ತಿವೆ ಮತ್ತು ತಮ್ಮ ಆತ್ಮಗಳಿಗೆ ಅಪಾಯವಿದೆ ಎಂದು ಅವರು ನಂಬಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಿರಿಯ ಮಗಳು ತನ್ನ ಮೇಲೆ ಭೂತದ ಪ್ರವೇಶವಾಗಿದೆ ಎಂದು ಹೇಳಿ, ಅದನ್ನು ದೂರವಾಗಿಸಲು ಸಹಾಯ ಮಾಡುವಂತೆ ತಾಯಿ ಮತ್ತು ಅಕ್ಕನನ್ನು ಕೇಳಿಕೊಂಡಿದ್ದಳು. ಮಗಳ ಮೇಲಿನ ಭೂತವನ್ನು ಬಲವಂತವಾಗಿ ಹೊರಹಾಕುವ ಪ್ರಯತ್ನದಲ್ಲಿ, ತಾಯಿ ಮತ್ತು ಅಕ್ಕ ಕೈಗೊಂಡ ಅಪಾಯಕಾರಿ ಕ್ರಮಗಳನ್ನು ಕೈಗೊಂಡಿದ್ದರಿಂದ, ಕಿರಿಯ ಮಗಳಿಗೆ ಗಂಭೀರ ಹಾನಿಯಾಗಿದೆ.
"ಮಮತಾ ಆಳ್ವಿಕೆಯಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ"; ದೌರ್ಜನ್ಯದ ವಿಡಿಯೋ ಹಂಚಿಕೊಂಡು ಬಿಜೆಪಿ ಆಕ್ರೋಶ
ಭೂತ ದೂರಾಗಿಸಲು ಹೋಗಿ ಮಗಳ ದುರಂತ ಅಂತ್ಯ: ತಾಯಿ ಜೈಲು
ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ (South China Morning Post) ವರದಿ ಪ್ರಕಾರ, ಭೂತ ಬಿಡಿಸಲು ಅಪಾಯಕಾರಿ ವಿಧಿ ವಿಧಾನಗಳನ್ನು ಕೈಗೊಂಡ ವೇಳೆ ಕಿರಿಯ ಮಗಳು ಆರಂಭದಲ್ಲಿ ಅದು ಕೆಲಸ ಮಾಡುತ್ತಿದೆ ಎಂದು ಹೇಳಿ ಮುಂದುವರಿಸಲು ಹೇಳಿದ್ದಾಳೆ. ಮಗಳಿಗೆ ಸಹಾಯ ಮಾಡುತ್ತಿದ್ದೇವೆ ಎಂಬ ನಂಬಿಕೆಯಲ್ಲಿ ತಾಯಿ ಮತ್ತು ಅಕ್ಕ ಆ ಕ್ರಮವನ್ನು ಮುಂದುವರಿಸಿದ್ದಾರೆ. ಆದರೆ ಮರುದಿನ ಬೆಳಗ್ಗೆ, ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಸ್ಥಳಕ್ಕಾಗಮಿಸಿ ಪರಿಶೀಲಿಸಿದ ವೈದ್ಯರು, ಆಕೆ ಈಗಾಗಲೇ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ. ಪ್ರಕರಣದ ಪರಿಶೀಲನೆ ನಡೆಸಿದ, ನ್ಯಾಯಾಲಯವು ಯುವತಿಯ ಸಾವಿಗೆ ತಾಯಿಯ ನಿರ್ಲಕ್ಷ್ಯವೇ ಕಾರಣ ಎಂದು ತೀರ್ಮಾನಿಸಿ ನಾಲ್ಕು ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.
ಭೂತ ಬಿಡಿಸಲು ಹೋಗಿ ಮತ್ತೊಂದು ಹತ್ಯೆ
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ, ‘ಚರ್ಚ್ ಆಫ್ ಆಲ್‌ಮೈಟಿ ಗಾಡ್’ ಎಂಬ ಪಂಥಕ್ಕೆ ಸಂಬಂಧಿಸಿದ ಶು ಫಾಂಗ್ ಎಂಬ ಮಹಿಳೆಗೆ ನಕಲಿ ಭೂತ ಓಡಿಸುವ ವಿಧಿ ಕೈಗೊಂಡು ಯುವತಿಯೊಬ್ಬಳ ಸಾವಿಗೆ ಕಾರಣಳಾಗಿದ್ದಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬಲಿಯಾದ ಯುವತಿಯು, ಶು ಮಗಳ ಸಹಪಾಠಿಯಾಗಿದ್ದು, ಮಾನಸಿಕ ಆರೋಗ್ಯದ ಚಿಕಿತ್ಸೆಗಾಗಿ ಶು ಮನೆಗೆ ಬಂದಿದ್ದಳು. ನಂತರ ಶುಗೆ ಆ ಯುವತಿಯಲ್ಲಿ ದುಷ್ಟಾತ್ಮ ಪ್ರವೇಶವಾಗಿದೆ ಎಂಬ ಭ್ರಮೆ ಉಂಟಾಗಿದೆ.
ಶು ಫಾಂಗ್ ಮಗಳು ಮತ್ತು ಮಗನೊಂದಿಗೆ ಸೇರಿ ಹಿಂಸಾತ್ಮಕ ವಿಧಿವಿಧಾನಗಳನ್ನು ಕೈಗೊಂಡಿದ್ದು, ಇದರಿಂದ ಯುವತಿಯ ಸಾವು ಸಂಭವಿಸಿದೆ. ಜಿಯಾಂಗ್ಸು ಪ್ರಾಂತ್ಯದ ನ್ಯಾಯಾಲಯವು ಶು ದೋಷಿ ಎಂದು ತೀರ್ಪು ನೀಡಿದ್ದು, ಬಲಿಯಾದವರ ಕುಟುಂಬಕ್ಕೆ 22,990 ಯುವಾನ್ (ಸುಮಾರು 2 ಲಕ್ಷ ರುಪಾಯಿ) ಪರಿಹಾರ ಪಾವತಿಸಲು ಆದೇಶಿಸಿತ್ತು.