ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇಶವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರು ಹತ್ಯಾಕಾಂಡ; ಮನೆಯವರೆಲ್ಲ ಪ್ರವಾಸ ತೆರಳಿದ್ದಾಗಿ ಬುರುಡೆ ಬಿಟ್ಟ ಪಾಪಿ ಸಿಕ್ಕಿಬಿದ್ದಿದ್ದೇ ರೋಚಕ

Bengaluru Murder: ಬೆಂಗಳೂರು ಕ್ಯಾಬ್‌ ಡ್ರೈವರ್‌ ಇಂದುಶೇಖರ್‌ ಸುಮಾರು 20 ದಿನಗಳಲ್ಲಿ 7 ಮಂದಿ ಕುಟುಂಬ ಸದಸ್ಯರನ್ನು ಕೊಲೆ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಆತನನ್ನು ಪೊಲೀಸರು ಬಂದಿದ್ದು, ಆತ ಸಿಕ್ಕಿಬಿದ್ದಿದ್ದು ಹೇಗೆ ಎನ್ನುವ ವಿವರ ಇಲ್ಲಿದೆ.

7 ಮಂದಿಯನ್ನು ಹತ್ಯೆ ಮಾಡಿದ ಬೆಂಗಳೂರಿನ ಡ್ರೈವರ್‌ ಸಿಕ್ಕಿಬಿದ್ದಿದ್ದು ಹೇಗೆ?

-

Ramesh Ballamoole
Ramesh Ballamoole Nov 6, 2026 3:38 PM

ಬೆಂಗಳೂರು, ನ. 6: ದೇಶವೇ ಬೆಚ್ಚಿ ಬೀಳುವಂತಹ ಅತೀ ಘೋರ ಕ್ರೈಂ ಬೆಂಗಳೂರಿನಲ್ಲಿ ನಡೆದಿದೆ. ಕ್ಯಾಬ್‌ ಡ್ರೈವರ್‌ ಇಂದುಶೇಖರ್‌ ಸುಮಾರು 20 ದಿನಗಳಲ್ಲಿ 7 ಮಂದಿ ಕುಟುಂಬ ಸದಸ್ಯರನ್ನು ಕೊಲೆ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ (Bengaluru Murder). ಮರ್ಡರ್‌ ಮಿಸ್ಟ್ರಿ ಸಿನಿಮಾವನ್ನೂ ಮೀರಿಸುವಂತೆ ಪಕ್ಕಾ ಪ್ಲ್ಯಾನ್‌ ಮಾಡಿ ರುಬ್ಬುಗುಂಡಿನಿಂದ ಕೊಲೆ ಮಾಡಿ ಹೆಣವನ್ನು ಕಾರಿನಲ್ಲಿ ಸಾಗಿಸಿ ವಿವಿಧ ಕಡೆ ಎಸೆದು ಏನೂ ನಡೆದೇ ಇಲ್ಲವೆನ್ನುವಂತಿದ್ದ ಈತನನ್ನು ಕೊನೆಗೂ ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಮನೆಯವರೆಲ್ಲ ನಾಪತ್ತೆಯಾಗಿರುವ ಬಗ್ಗೆ ಸಂಬಂಧಿಕರು ಪ್ರಶ್ನಿಸಿದಾಗ ಪ್ರವಾಸ ಹೋಗಿದ್ದಾಗಿ ಕಥೆ ಕಟ್ಟಿದ್ದ ಈ ಪಾಪಿ ಸಿಕ್ಕಿಬಿದ್ದಿದ್ದೇ ರೋಚಕ.

ಪತ್ನಿ, ಅತ್ತೆ, ಇಬ್ಬರು ಭಾವ-ಮೈದುನರು, ಅವರ ಪತ್ನಿಯರು ಸೊಸೆಯಂದಿರು ಹಾಗೂ ಕೇವಲ 7 ವರ್ಷದ ಮುಗ್ಧ ಕಂದಮ್ಮನನ್ನು ಇಂದುಶೇಖರ್‌ ಕ್ರೂರವಾಗಿ ಹತ್ಯೆಗೈದಿದ್ದಾನೆ. ಹೆಣಗಳನ್ನು ಚೀಲದಲ್ಲಿ ತುಂಬಿ, ಕಾರಿನಲ್ಲಿಟ್ಟುಕೊಂಡು ಕರ್ನಾಟಕದಿಂದ ತಮಿಳುನಾಡಿನ ಗಡಿಯವರೆಗೂ ಬೆಟ್ಟ-ಗುಡ್ಡಗಳಲ್ಲಿ ಎಸೆದು ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀರಾಮಪುರದ ರೂಪವತಿ, ಆಕೆಯ ಮಗಳು ಸುನೀತಾ (ಇಂದುಶೇಖರ್‌ನ ಪತ್ನಿ), ಪುತ್ರರಾದ ಶಿವಕುಮಾರ್ ಮತ್ತು ಶಂಕರ್, ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿ ಹಾಗೂ 7 ವರ್ಷದ ಮೊಮ್ಮಗ ಪುನೀತ್ ಮೃತಪಟ್ಟ ದುರ್ದೈವಿಗಳು. ಸುಮಾರು 20 ವರ್ಷಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದ ಇಂದುಶೇಖರ್, ಪತ್ನಿ ತನ್ನ ತವರು ಮನೆಯವರೊಂದಿಗಿನ ಸಂಬಂಧವನ್ನು ಮುಂದುವರಿಸಿದ್ದಕ್ಕೆ ಅಸಮಾಧಾನ ಹೊಂದಿದ್ದ ಎನ್ನಲಾಗಿದೆ.

ಬೆಂಗಳೂರು ಹತ್ಯಾಕಾಂಡ; ಮಗಳ ಬ್ರೈನ್ ವಾಶ್ ಮಾಡಿ ಕೃತ್ಯಕ್ಕೆ ಬಳಸಿಕೊಂಡಿದ್ದ ತಂದೆ!

20 ವರ್ಷಗಳ ಸಂಸಾರ ಛಿದ್ರ ಛಿದ್ರ

ಶ್ರೀರಾಮಪುರದ ನಿವಾಸಿ ಸುನೀತಾ ಜತೆ ಇಂದುಶೇಖರ್‌ಗೆ 20 ವರ್ಷಗಳ ಹಿಂದೆ ಮದುವೆಯಾಗಿತ್ತು. ಪತ್ನಿ ಸದಾ ತವರು ಮನೆಯವರ ಸಂಪರ್ಕದಲ್ಲಿದ್ದಾಳೆ, ಅವರೇ ತನ್ನ ಸಂಸಾರಕ್ಕೆ ಅಡ್ಡಿ ಎಂದು ಆತ ಭಾವಿಸಿದ್ದು, ಮುಂದೆ ಕೌಟುಂಬಿಕ ಕಲಹವಾಗಿ ಬದಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಮನೆಯವರ ಮೇಲೆ ದ್ವೇಷ ಕಾರುತ್ತಿದ್ದ ಆತ ಇಡೀ ಕುಟುಂಬದ ಸರ್ವನಾಶಕ್ಕೆ ಕೊಲೆ ಪ್ಲ್ಯಾನ್‌ ಮಾಡಿದ್ದ.

ಮೊದಲ ಮರ್ಡರ್‌

ಹೀಗೆ ಮರ್ಡರ್‌ ಪ್ಲ್ಯಾನ್‌ ಮಾಡಿದ ಆತನಿಗೆ ಸಂಚಿಗೆ ಮೊದಲು ಬಲಿಯಾಗಿದ್ದ ಪತ್ನಿ ಸುನೀತಾ. ಅಕ್ಟೋಬರ್ 16ರಂದು ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿಯ ಕಟ್ಟಡವೊಂದರರಲ್ಲಿ ಸುನೀತಾಳನ್ನು ಹತ್ಯೆ ಮಾಡಿದ್ದ. ಆಕೆಯ ಮುಖಕ್ಕೆ ರುಬ್ಬುಗುಂಡಿನಿಂದ ಜಜ್ಜಿ ಪ್ರಾಣ ತೆಗೆದಿದ್ದ. ಬಳಿಕ ಹೆಣವನ್ನು ನಂದಿಬೆಟ್ಟದ ಬಳಿ ಎಸೆದು ಏನೂ ಆಗೇ ಇಲ್ಲ ಎನ್ನುವಂತೆ ವಾಪಾಸಾಗಿದ್ದ. ಅಕ್ಕಪಕ್ಕದವರಿಗೆ "ಪತ್ನಿ ಫ್ರೆಂಡ್ಸ್ ಜತೆ ಟ್ರಿಪ್ ಹೋಗಿದ್ದಾಳೆ" ಎಂದು ನಂಬಿಸಿದ್ದ.

ಎಣ್ಣೆ ಪಾರ್ಟಿಯ ನೆಪ ಒಡ್ಡಿ ಬಾಮೈದ ಶಿವಕುಮಾರ್ ಅವರನ್ನು ಕರೆದು ಅದೇ ರುಬ್ಬುಗುಂಡಿನಿಂದ ಕೊಂದಿದ್ದ. ಬಳಿಕ 15 ದಿನ ನೆಮ್ಮದಿಯಾಗಿ ಯಾತ್ರೆ ಮುಗಿಸಿಕೊಂಡು ಬರೋಣ ಎಂದು ಉಳಿದವರನ್ನು ಪುಸಲಾಯಿಸಿ ಮನೆಗೆ ಬಂದವರಿಗೆ ಟೀ, ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟು ಅತ್ತೆ ರೂಪವತಿ, ಬಾಮೈದ ಶಂಕರ್, ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿಯನ್ನೂ ಹತೈಗೈದಿದ್ದ. ಕೇವಲ 7 ವರ್ಷದ ಪುನೀತ್ (ಶಂಕರ್ ಮಗ)ನನ್ನೂ ಕೊಂದು ಹಾಕಿದ್ದ. ಪ್ರತಿ ಕೊಲೆಯ ನಂತರವೂ ರಕ್ತಸಿಕ್ತ ನೆಲ ಮತ್ತು ರುಬ್ಬಯಗುಂಡನ್ನು ಸ್ವಚ್ಛವಾಗಿ ತೊಳೆದಿಡುತ್ತಿದ್ದ.

ಪ್ರದೀಪ್‌ ಪೂಜಾರಿ ಆತ್ಮಹತ್ಯೆ: ಮಧ್ಯ ಪ್ರದೇಶದಲ್ಲಿ ಇಬ್ಬರ ಬಂಧನ

ಸಿಕ್ಕಿಬಿದ್ದಿದ್ದು ಹೇಗೆ?

ಒಂದೇ ಕುಟುಂಬದ 7 ಮಂದಿ ನಾಪತ್ತೆಯಾಗಿದ್ದು ಸಂಬಂಧಕರಿಗೆ ಅನುಮಾನ ಮೂಡಿಸಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಎಲ್ಲರೂ ಪ್ರವಾಸ ಹೋಗಿದ್ದಾಗಿ ತಿಳಿಸಿದ್ದ. ಇದು ಪ್ರಕರಣಕ್ಕೆ ತಿರುವು ನೀಡಿತು. ಕೊನೆಗೆ ನಳಿನಿ ಮತ್ತು ದಿವ್ಯಾ ನಾಪತ್ತೆಯಾಗಿದ್ದಾರೆ ಎಂದು ತಾಯಂದಿರು ಶ್ರೀರಾಮಪುರ ಠಾಣೆಗೆ ಮಿಸ್ಸಿಂಗ್ ದೂರು ನೀಡಿದಾಗ ಅಲರ್ಟ್ ಆದ ಪೊಲೀಸರು ಎಲ್ಲರ ಮೊಬೈಲ್ ಟ್ರೇಸ್ ಮಾಡಿದಾಗ, ಕನ್ಯಾಕುಮಾರಿ ಯಾತ್ರೆಯಲ್ಲಿದ್ದಾರೆ ಎನ್ನಲಾದ ಎಲ್ಲರ ಮೊಬೈಲ್‌ಗಳೂ ಬೆಂಗಳೂರಿನ ಸುತ್ತಮುತ್ತಲಿನ ಒಂದೇ ಲೊಕೇಶನ್‌ನಲ್ಲಿ ಆಕ್ಟಿವ್ ಆಗಿರುವುದು ಪತ್ತೆಯಾಯಿತು.

ಅನುಮಾನಗೊಂಡ ಪೊಲೀಸರು ಇಂದುಶೇಖರ್‌ನನ್ನು ವಶಕ್ಕೆ ಪಡೆದು ಬೆಂಡೆತ್ತಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಸದ್ಯ ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.