ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೈಬರ್ ಕ್ರೈಮ್: ಬೆಂಗಳೂರಿನ 74 ವರ್ಷದ ಮಹಿಳೆಗೆ 24 ಕೋಟಿ ರೂ. ವಂಚನೆ

Cyber Crime: ಕರ್ನಾಟಕ ರಾಜ್ಯ ಸೈಬರ್ ಕಮಾಂಡ್ ಘಟಕವು ಬೆಂಗಳೂರಿನಲ್ಲಿ ಒಂದು ಪ್ರಮುಖ ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆ ಜಾಲವನ್ನು ಭೇದಿಸಿದೆ. ಕೇಂದ್ರ ತನಿಖಾ ಸಂಸ್ಥೆಗಳ ಹಿರಿಯ ಅಧಿಕಾರಿಗಳಂತೆ ನಟಿಸಿದ ವಂಚಕರು 74 ವರ್ಷದ ವೃದ್ಧೆಯೊಬ್ಬರಿಂದ ಸುಮಾರು 24 ಕೋಟಿ ರೂಪಾಯಿ ವಂಚಿಸಿದ್ದಾರೆ.

ಬೆಂಗಳೂರಿನ 74 ವರ್ಷದ ಮಹಿಳೆಗೆ 24 ಕೋಟಿ ರೂ. ವಂಚನೆ

ಸಾಂದರ್ಭಿಕ ಚಿತ್ರ -

Priyanka P
Priyanka P May 25, 2026 1:54 PM

ಬೆಂಗಳೂರು, ಮೇ 25: ಕರ್ನಾಟಕ ರಾಜ್ಯ ಸೈಬರ್ ಕಮಾಂಡ್ ಘಟಕವು ಬೆಂಗಳೂರಿನಲ್ಲಿ (Bengaluru) ಒಂದು ಪ್ರಮುಖ ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆ (Cyber Crime) ಜಾಲವನ್ನು ಭೇದಿಸಿದೆ. ಕೇಂದ್ರ ತನಿಖಾ ಸಂಸ್ಥೆಗಳ ಹಿರಿಯ ಅಧಿಕಾರಿಗಳಂತೆ ನಟಿಸಿದ ವಂಚಕರು 74 ವರ್ಷದ ವೃದ್ಧೆಯೊಬ್ಬರಿಂದ ಸುಮಾರು 24 ಕೋಟಿ ರೂಪಾಯಿ ವಂಚಿಸಿದ್ದಾರೆ. ಸೈಬರ್ ವಂಚಕರು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ (ED) ಉನ್ನತ ಅಧಿಕಾರಿಗಳಂತೆ ನಟಿಸಿ, ಬೆಂಗಳೂರಿನ ಲಕ್ಷ್ಮಿ ರಾಮಮೂರ್ತಿ ಎಂಬುವವರನ್ನು ನಕಲಿ ಡಿಜಿಟಲ್ ಅರೆಸ್ಟ್ ಕಾರ್ಯಾಚರಣೆಯ ಮೂಲಕ ಮಾನಸಿಕವಾಗಿ ಬಲೆಗೆ ಬೀಳಿಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು, ಸಂತ್ರಸ್ತೆಯನ್ನು ತನಿಖೆ ನಡೆಸುತ್ತಿರುವುದಾಗಿ ನಂಬಿಸಿ, ಆಕೆಯ ಐಸಿಐಸಿಐ ಬ್ಯಾಂಕ್ ಖಾತೆಯಿಂದ ಭಾರಿ ಮೊತ್ತದ ಹಣವನ್ನು ವರ್ಗಾಯಿಸುವಂತೆ ಕೇಳಿಕೊಂಡಿದ್ದಾರೆ. ಫೆಬ್ರವರಿ 10 ರಿಂದ ಏಪ್ರಿಲ್ 24 ರ ನಡುವೆ, ಸಂತ್ರಸ್ತೆ ದೇಶಾದ್ಯಂತ 10 ವಿವಿಧ ಬ್ಯಾಂಕ್‌ಗಳಲ್ಲಿರುವ 23 ಮ್ಯೂಲ್ ಬ್ಯಾಂಕ್ ಖಾತೆಗಳಿಗೆ 26 ಪ್ರತ್ಯೇಕ ವಹಿವಾಟುಗಳ ಮೂಲಕ ಸುಮಾರು 24 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ

ವಂಚಕರು ಮಹಿಳೆಯಿಂದ ಇನ್ನಷ್ಟು ಹಣ ದೋಚಲು ಯತ್ನಿಸುತ್ತಿದ್ದರು. ಏಪ್ರಿಲ್ 24ರಂದು ಮಹಿಳೆಯು ಆರೋಪಿಗಳಿಗೆ ಹೆಚ್ಚುವರಿ ಹಣ ವರ್ಗಾಯಿಸಲು 3 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಸಾಲ ಪಡೆಯುವ ಪ್ರಕ್ರಿಯೆಯಲ್ಲಿದ್ದರು ಎನ್ನಲಾಗಿದೆ.

ಸೈಬರ್ ಕ್ರೈಮ್ ಹೊಸ ತಂತ್ರ.. ಸೈಲೆಂಟ್ ಕಾಲ್ ಮೂಲಕವೂ ವಂಚಿಸ್ತಾರೆ ಎಚ್ಚರ

ಅನುಮಾನಾಸ್ಪದ ಚಟುವಟಿಕೆಯನ್ನು ಗ್ರಹಿಸಿದ ಐಸಿಐಸಿಐ ಬ್ಯಾಂಕ್ ಅಧಿಕಾರಿಗಳು ಕರ್ನಾಟಕ ಸೈಬರ್ ಘಟಕಕ್ಕೆ ಮಾಹಿತಿ ನೀಡಿದರು. ಸೈಬರ್ ತಂಡವು ತಕ್ಷಣ ಸ್ಥಳಕ್ಕೆ ಧಾವಿಸಿ ಸಂತ್ರಸ್ತೆಯನ್ನು ಕೌನ್ಸೆಲಿಂಗ್ ಮಾಡುವ ಮೂಲಕ ವಂಚಕರಿಗೆ 3 ಕೋಟಿ ರೂ. ವರ್ಗಾವಣೆಯಾಗುವುದನ್ನು ಯಶಸ್ವಿಯಾಗಿ ತಡೆಯಿತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಂತಾರಾಜ್ಯ ಸೈಬರ್ ವಂಚನೆ ಜಾಲದ ಬಗ್ಗೆ ದೊಡ್ಡ ಪ್ರಮಾಣದ ತನಿಖೆಯನ್ನು ಪ್ರಾರಂಭಿಸಿದರು.

ತನಿಖೆಯ ಭಾಗವಾಗಿ, ಸೈಬರ್ ಕಮಾಂಡ್ ಘಟಕವು ವಂಚನೆ ಮೂಲಕ ಬಂದ ಹಣವನ್ನು ವರ್ಗಾಯಿಸಿ ಅಕ್ರಮವಾಗಿ ಚಲಾವಣೆ ಮಾಡಲಾಗಿದ್ದ ಮೊದಲ ಹಂತದ ಮ್ಯೂಲ್ ಖಾತೆಗಳನ್ನು ಪತ್ತೆಹಚ್ಚಿತು. ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ ಸಹಾಯದಿಂದ, ವಂಚನೆಗೆ ಸಂಬಂಧಿಸಿದ ಅನೇಕ ಮ್ಯೂಲ್ ಖಾತೆಗಳನ್ನು ತನಿಖಾಧಿಕಾರಿಗಳು ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾದರು.

ಕಾರ್ಯಾಚರಣೆಯ ಸಮಯದಲ್ಲಿ 4 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಯಶಸ್ವಿಯಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾಯಾಲಯದ ಆದೇಶದ ಮೂಲಕ ಹೆಚ್ಚುವರಿಯಾಗಿ 1.46 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿಯವರೆಗೆ ವಿವಿಧ ರಾಜ್ಯಗಳ ಆರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಅಪರಾಧದಲ್ಲಿ ಬಳಸಲಾಗಿದೆ ಎನ್ನಲಾದ ಆರು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಷ್ಟ್ರವ್ಯಾಪಿ ಸೈಬರ್ ವಂಚನೆ ಕಾರ್ಯಾಚರಣೆಯ ಹಿಂದಿನ ಮಾಸ್ಟರ್‌ಮೈಂಡ್‌ಗಳನ್ನು ಗುರುತಿಸಲು ಮತ್ತು ಜಾಲದ ಇತರ ಸದಸ್ಯರನ್ನು ಪತ್ತೆಹಚ್ಚಲು ತನಿಖೆ ಮುಂದುವರೆದಿದೆ ಎಂದು ಕರ್ನಾಟಕ ರಾಜ್ಯ ಸೈಬರ್ ಕಮಾಂಡ್ ಘಟಕ ತಿಳಿಸಿದೆ.