Fraud case: 139 ಕಿರುತೆರೆ ನಟ-ನಟಿಯರಿಗೆ ಸೈಟ್ ಕೊಡಿಸುವುದಾಗಿ ವಂಚನೆ; ಬಿಲ್ಡರ್ ಸೇರಿ ಐವರ ವಿರುದ್ಧ ಎಫ್ಐಆರ್
Sandalwood News: ನಕಲಿ ಲೇಔಟ್ ಪ್ಲ್ಯಾನ್ ಹಾಗೂ ದಾಖಲಾತಿ ಸೃಷ್ಟಿಸಿ ವಂಚನೆ ಮಾಡಿದ್ದು, ಬರೋಬ್ಬರಿ 1.6 ಕೋಟಿ ಹಣ ವಂಚಿಸಲಾಗಿದೆ ಎಂದು ದೂರು ಸಲ್ಲಿಕೆಯಾಗಿದೆ. ಭಾವನ ಬೆಳೆಗೆರೆ, ಶರತ್ ಚಂದ್ರ, ರಾಹುಲ್ ಸೇರಿ 139 ಜನರಿಗೆ ವಂಚನೆ ಆರೋಪ ಕೇಳಿಬಂದಿದೆ.

ಸಾಂದರ್ಭಿಕ ಚಿತ್ರ -

ಬೆಂಗಳೂರು: ಕಿರುತೆರೆ ನಟ- ನಟಿಯರಿಗೆ ಸೈಟ್ ಕೊಡಿಸುವುದಾಗಿ ವಂಚನೆ (Fraud case) ಆರೋಪದಲ್ಲಿ ಬಿಲ್ಡರ್ ಸೇರಿದಂತೆ ಐವರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸದಸ್ಯರಿಗೆ ಮೋಸ ಮಾಡಲಾಗಿದ್ದು, ಹಣ ಪಡೆದು ಸೈಟ್ ನೀಡದೆ ವಂಚನೆ ಆರೋಪ ಕೇಳಿಬಂದಿದೆ.
ಸುಮಾರು 139 ಕಿರುತೆರೆ ನಟ-ನಟಿಯರಿಗೆ ವಂಚನೆ ಮಾಡಲಾಗಿದ್ದು, ಈ ಸಂಬಂಧ ಅಸೋಸಿಯೇಷನ್ ಸದಸ್ಯೆ ಭಾವನ ಬೆಳಗೆರೆ ಅವರು ಬಿಲ್ಡರ್ ಭಗೀರಥ, ಸಂಜೀವ್ ತಗಡೂರು, ಗುರುಪ್ರಸಾದ್, ರವೀಂದ್ರ, ಉಮಾಕಾಂತ್ ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ.
ಕೆಟಿವಿಎದಲ್ಲಿ ಸೈಟ್ ಕಮಿಟಿ ಮೆಂಬರ್ ಆಗಿದ್ದ ಸಂಜೀವ್ ತಗಡೂರು, 2015ರಲ್ಲಿ ಸದಸ್ಯರಿಗೆ ಸೈಟ್ ಕೊಡುಸುವುದಾಗಿ ಬಿಲ್ಡರ್ ಜತೆಗೆ ವ್ಯವಹಾರ ನಡೆಸಿದ್ದಾರೆ. ಬಳಿಕ ಸದಸ್ಯರಿಂದ ಲಕ್ಷ ಲಕ್ಷ ಹಣ ಪಡೆದು, ಆರ್ ಆರ್ ನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸೈಟ್ ಶುದ್ಧ ಕ್ರಮ ಮಾಡಿಕೊಟ್ಟಿದ್ದರು. ತಾವರೆಕೆರೆ ಬಳಿ ಸೈಟ್ ನೀಡುವುದಾಗಿ ಭರವಸೆ ನೀಡಿದ್ದರು.
ಬಳಿಕ ಖಾತೆ ಮಾಡಿಸಲು ಆರೋಪಿಗಳು ಮೀನಮೇಷ ಎಣಿಸಿದ್ದಾರೆ. ಖುದ್ದಾಗಿ ಖಾತೆ ಮಾಡಿಸಲು ತೆರಳಿದ ವೇಳೆ ವಂಚನೆ ಬೆಳಕಿಗೆ ಬಂದಿದೆ. ನಕಲಿ ಲೇಔಟ್ ಪ್ಲ್ಯಾನ್ ಹಾಗೂ ದಾಖಲಾತಿ ಸೃಷ್ಟಿಸಿ ವಂಚನೆ ಮಾಡಿದ್ದು, ಬರೋಬ್ಬರಿ 1.6 ಕೋಟಿ ಹಣ ವಂಚಿಸಲಾಗಿದೆ ಎಂದು ದೂರು ಸಲ್ಲಿಕೆಯಾಗಿದೆ. ಭಾವನ ಬೆಳೆಗೆರೆ, ಶರತ್ ಚಂದ್ರ, ರಾಹುಲ್ ಸೇರಿ 139 ಜನರಿಗೆ ವಂಚನೆ ಆರೋಪ ಕೇಳಿಬಂದಿದೆ.
ಈ ಸುದ್ದಿಯನ್ನೂ ಓದಿ | Fraud case: ಬೆಂಗಳೂರಿನಲ್ಲಿ ಲೀಸ್ ನೆಪದಲ್ಲಿ ಕೋಟ್ಯಂತರ ರೂಪಾಯಿ ವಂಚನೆ, ಆರೋಪಿ ನಾಪತ್ತೆ