ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rakkasapuradol Review: ಪ್ರೇಕ್ಷಕರನ್ನು ಆಪ್ತಗೊಳಿಸುವ ಬಿಗಿಯಾದ ನಿರೂಪಣೆ; ರಾಜ್‌ ಬಿ ಶೆಟ್ಟಿ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್‌ಗಳ ಮೆರವಣಿಗೆ!

Rakkasapuradol Review And Rating: ಯಾವುದೇ ಅಪರಾಧ ನಡೆಯದ ರಕ್ಕಸಪುರಕ್ಕೆ ವರ್ಗವಾಗಿ ಬರುವ ಕುಡುಕ ಪೊಲೀಸ್ ಅಧಿಕಾರಿ ಶಿವ (ರಾಜ್ ಬಿ ಶೆಟ್ಟಿ), ಅಲ್ಲಿ ಹೆಣ್ಣುಮಕ್ಕಳ ಸರಣಿ ಹತ್ಯೆ ಶುರುವಾದಾಗ ಹೇಗೆ ಎಚ್ಚೆತ್ತುಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಥೆ.

ರಕ್ಕಸಪುರದೋಳ್‌ ವಿಮರ್ಶೆ: ರಾಜ್‌ ಬಿ ಶೆಟ್ಟಿಯ ಸಿನಿಮಾದ ರೇಟಿಂಗ್‌ ಎಷ್ಟು?

-

Avinash GR
Avinash GR Feb 6, 2026 1:59 PM

ರಾಜ್‌ ಬಿ ಶೆಟ್ಟಿ ಈವರೆಗೂ ಕಾಮಿಡಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ, ವಿಲನ್‌ ಆಗಿಯೂ ಮಿಂಚಿದ್ದಾರೆ. ಈ ಬಾರಿ ರಕ್ಕಸಪುರದೋಳ್‌ ಸಿನಿಮಾಕ್ಕಾಗಿ ಅವರು ಪೊಲೀಸ್‌ ಅಧಿಕಾರಿ ಆಗಿದ್ದಾರೆ. ಹೌದು, ರಾಜ್‌ ಬಿ ಶೆಟ್ಟಿ ಅಭಿನಯದ ರಕ್ಕಸಪುರದೋಳ್‌ ಚಿತ್ರ ತೆರೆಕಂಡಿದೆ. ಟ್ರೇಲರ್‌ನಿಂದಲೇ ಗಮನಸೆಳೆದಿದ್ದ ಈ ಸಿನಿಮಾವನ್ನು ರವಿ ಸಾರಂಗ ನಿರ್ದೇಶಿಸಿದ್ದಾರೆ. ಇದು ಇವರ ಮೊದಲ ಪ್ರಯತ್ನ. ಹಾಗಾದರೆ, ಸಿನಿಮಾ ಹೇಗಿದೆ? ಮುಂದೆ ಓದಿ.

ʻರಕ್ಕಸಪುರದೋಳ್‌ʼ ಚಿತ್ರದ ಕಥೆ ಏನು?

ಅದು ರಕ್ಕಸಪುರ ಅನ್ನೋ ಊರು. ಅಂದ್ರೆ ರಾಕ್ಷಸನ ಊರು ಅಂತ ಅರ್ಥ. ಆದರೆ ಆ ಊರಿನಲ್ಲಿ ಒಂದೇ ಒಂದು ಕ್ರೈಮು ನಡೆಯೋಲ್ಲ. ಪೊಲೀಸ್ ಸ್ಟೇಷನ್‌ ಇದ್ದರೂ, ಅಲ್ಲಿ ಪೊಲೀಸರಿಗೆ ಕೆಲಸವೇನೂ ಇಲ್ಲ. ಹೀಗೆ ಕ್ರೈಮ್‌ಗಳೇ ನಡೆಯದ ಊರಿಗೆ ವರ್ಗವಾಗಿ ಬರುವ ಅಧಿಕಾರಿ ಶಿವ (ರಾಜ್‌ ಬಿ ಶೆಟ್ಟಿ). ಆತನಿಗೂ ಕೆಲಸ ಮಾಡಬೇಕೆನ್ನುವ ಉಮೇದು ಏನೂ ಇರೋದಿಲ್ಲ. ಹೊಂಟೆ ತುಂಬಾ ಸಾರಾಯಿ ಕುಡಿಯೋದು, ಹೆಂಡ್ತಿಯಿಂದ ಬೈಯಿಸಿಕೊಳ್ಳುವುದು ಅವನಿಗೆ ನೆಮ್ಮದಿ ನೀಡುತ್ತದೆ. ಹೀಗೆ ಯಾವಾಗಲೂ ನಶೆಯಲ್ಲಿ ಇರುವ ಶಿವನಿಗೆ ನಶೆ ಎಲ್ಲಾ ಇಳಿದು, ಮೈಯೆಲ್ಲಾ ಕಣ್ಣಾಗಿ ಇರುವಂತಹ ಪರಿಸ್ಥಿತಿ ರಕ್ಕಸಪುರದಲ್ಲಿ ಉದ್ಭವಿಸುತ್ತದೆ. ಆ ಊರಿನ ಹೆಣ್ಮಕ್ಕಳು ಸಾಲು ಸಾಲಾಗಿ ಸಮಾಧಿ ಸೇರುತ್ತಿದ್ದರೆ, ಇತ್ತ ಶಿವನಿಗೆ ಟೆನ್ಷನ್‌ಗೆ ಜಾಸ್ತಿ ಆಗುತ್ತ ಹೋಗುತ್ತದೆ. ಹೀಗೆ ದಿಢೀರ್‌ ಅಂತ ರಕ್ಕಸಪುರಕ್ಕೆ ಎಂಟ್ರಿಯಾದ ಆ ರಾಕ್ಷಸ ಯಾರು ಅನ್ನೋದೇ ಕುತೂಹಲ. ಆ ರಾಕ್ಷಸನ ಬೇಟೆಯಾಡುವುದಕ್ಕೆ ಶಿವ ಏನೆಲ್ಲಾ ತಂತ್ರಗಳನ್ನ ಉಪಯೋಗಿಸುತ್ತಾನೆ ಎಂಬುದೇ ಇಲ್ಲ ಕುತೂಹಲಕರ!

Raj B Shetty: ರಾಜ್ ಬಿ ಶೆಟ್ಟಿ ‘ರಕ್ಕಸಪುರದೋಳ್’ ಟೀಸರ್ ಔಟ್‌! ರಿಲೀಸ್‌ ಡೇಟ್‌ ಕೂಡ ಅನೌನ್ಸ್‌

ಗಮನಸೆಳೆಯುವ ನಿರ್ದೇಶನ ಮತ್ತು ಬರವಣಿಗೆ

ರವಿ ಸಾರಂಗ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದರೂ, ಬಹಳ ಅಚ್ಚುಕಟ್ಟಾಗಿ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಆರಂಭದಲ್ಲಿ ಸಿಂಪಲ್‌ ಆಗಿಯೇ ಶುರುವಾಗುವ ಸಿನಿಮಾ, ಕೆಲವೇ ನಿಮಿಷಗಳಲ್ಲಿ ತನ್ನ ಬಿಗಿಯಾದ ನಿರೂಪಣೆಯಿಂದ ಪ್ರೇಕ್ಷಕರನ್ನ ತನ್ನತ್ತ ಸೆಳೆದುಕೊಳ್ಳುತ್ತದೆ. ಮೊದಲರ್ಧ ಸರಾಗವಾಗಿ ಮುಗಿಯುವ ʻರಕ್ಕಸಪುರದೋಳ್‌ʼ ಸಿನಿಮಾವು, ದ್ವಿತೀಯಾರ್ಧದಲ್ಲಿ, ಅದರಲ್ಲೂ ಕಡೆಯ 30 ನಿಮಿಷಗಳಲ್ಲಿ ಸಾಲು ಸಾಲು ಟ್ವಿಸ್ಟ್‌ಗಳಿಂದ ತುಂಬಿದೆ. ಕೊನೆಕೊನೆಗೆ ಸೀಟಿನ ತುದಿಗೆ ಕುಳಿತೇ ಪ್ರೇಕ್ಷಕ ಸಿನಿಮಾ ನೋಡಬೇಕು. ಅಷ್ಟರಮಟ್ಟಿಗೆ ರವಿ ಸಾರಂಗ ಚಿತ್ರಕಥೆಯನ್ನು ಬರೆದುಕೊಂಡಿದ್ದಾರೆ.

Raj B Shetty: 'ಕರಾವಳಿ’ ಚಿತ್ರದಲ್ಲಿ 'ಮಾವೀರ'ನಾಗಿ ವಿಭಿನ್ನ ಲುಕ್‌ನಲ್ಲಿ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ!

ಕೊಲೆ ಮಾಡುತ್ತಿರುವವರು ಯಾರು, ಯಾರು ಎಂದು ಹಲವರ ಮೇಲೆ ಅನುಮಾನ ಮೂಡುವಂತೆ ಮಾಡಿ, ಕ್ಲೈಮ್ಯಾಕ್ಸ್‌ನಲ್ಲಿ ಯಾರೂ ನಿರೀಕ್ಷೆ ಮಾಡದ ಟ್ವಿಸ್ಟ್‌ ನೀಡುವ ರವಿ ಸಾರಂಗ, ಖಳನ ಪಾತ್ರಕ್ಕೆ ಉತ್ತಮ ಕಲಾವಿದನ ಆಯ್ಕೆ ಮಾಡಿದ್ದಾರೆ. ಅದು ಇಡೀ ಚಿತ್ರದ ಗೆಲುವಿಗೆ ಬಹಳ ಸಹಕಾರಿಯಾಗಿದೆ. ಇಲ್ಲಿ ಹೀರೋ ಮತ್ತು ಖಳನಿಗೆ ಒಂದೇ ಮಾದರಿಯ ಸಮಸ್ಯೆ ಇರುತ್ತದೆ. ಆದರೆ, ಅದು ಒಬ್ಬರಿಗೆ ಪಾಸಿಟಿವ್‌ ಆಗಿದ್ದರೆ, ಮತ್ತೊಬ್ಬರಿಗೆ ನೆಗೆಟಿವ್‌ ಆಗಿರುತ್ತದೆ. ಅದು ಹೇಗೆ ಎಂಬುದೇ ಇಲ್ಲಿ ಮತ್ತೊಂದು ಟ್ವಿಸ್ಟ್.‌

ಇನ್ನು, ರವಿ ಸಾರಂಗ ಅವರಿಗೆ ಉತ್ತಮವಾಗಿ ಸಾಥ್‌ ನೀಡಿರುವುದು ಛಾಯಾಗ್ರಾಹಕ ವಿಲಿಯಂ ಡೇವಿಡ್. ಹಾರರ್‌ ಥ್ರಿಲ್ಲರ್‌ ಅನುಭವ ನೀಡುವುದಕ್ಕೆ ವಿಲಿಯಂ ಡೇವಿಡ್ ಕ್ಯಾಮೆರಾ ಆಂಗಲ್‌ಗಳು ಸಹಕಾರಿಯಾಗಿವೆ. ಅರ್ಜುನ್‌ ಜನ್ಯ ನೀಡಿದ ಹಿನ್ನಲೆ ಸಂಗೀತ ಇನ್ನಷ್ಟು ಉತ್ತಮವಾಗಿದೆ. ಸಿನಿಮಾ ಉತ್ತಮವಾಗಿ ಮೂಡಿಬರಲು ಶ್ರಮಿಸಿರುವ ನಿರ್ಮಾಪಕ ರವಿ ವರ್ಮ, ಸಾಹಸ ಸನ್ನಿವೇಶಗಳನ್ನು ಕೂಡ ಚನ್ನಾಗಿ ಸಂಯೋಜಿಸಿದ್ದಾರೆ. ಪೊಲೀಸ್‌ ಕಾನ್‌ಸ್ಟೇಬಲ್‌ ಪಾತ್ರಧಾರಿಗಳ ಕಾಮಿಡಿ ಖುಷಿ ನೀಡುತ್ತದೆ.

ರಾಜ್‌ ಬಿ ಶೆಟ್ಟಿಗೆ ಹೊಸ ಮಾದರಿಯ ಪಾತ್ರ

ನಟ ರಾಜ್‌ ಬಿ ಶೆಟ್ಟಿಗೆ ಈ ಸಿನಿಮಾದಲ್ಲಿ ಹೊಸ ಮಾದರಿಯ ಪಾತ್ರವಿದೆ. ಒಂದಷ್ಟು ಮಾನಸಿಕ ಸಮಸ್ಯೆಗಳಿಂದ, ಸದಾ ನಶೆಯಲ್ಲಿ ಇರುವ ಪೊಲೀಸ್‌ ಅಧಿಕಾರಿಯಾಗಿ ಮಿಂಚಿರುವ ರಾಜ್‌ಗೆ ಪೊಲೀಸ್‌ ಅಧಿಕಾರಿ ಪಾತ್ರ ಒಗ್ಗಿದೆ. ನಾಯಕಿ ಸ್ವಾತಿಷ್ಟ ಕೃಷ್ಣನ್‌ಗೆ ಜಾಸ್ತಿ ಸ್ಕ್ರೀನ್‌ ಸ್ಪೇಸ್‌ ಇಲ್ಲವಾದರೂ, ಚಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅನಿರುದ್ಧ್‌ ಭಟ್‌ಗೆ ಈ ಸಿನಿಮಾದಿಂದ ಇನ್ನಷ್ಟು ಹೊಸ ಅವಕಾಶಗಳು ಸಿಗುವುದು ಖಚಿತ. ಬಿ. ಸುರೇಶ, ಗೋಪಾಲ್‌ ಕೃಷ್ಣ ದೇಶಪಾಂಡೆ, ಅರ್ಚನಾ ಕೊಟ್ಟಿಗೆ, ಜಹಾಂಗೀರ್‌ ಎಲ್ಲರಿಗೂ ಬಹಳ ಉತ್ತಮವಾದ ಪಾತ್ರಗಳೇ ಸಿಕ್ಕಿವೆ ಮತ್ತು ಕಥೆಯಲ್ಲೂ ಬಹಳ ಪ್ರಾಮುಖ್ಯತೆಯನ್ನು ಹೊಂದಿವೆ. ಒಟ್ಟಾರೆಯಾಗಿ, ಕನ್ನಡದಲ್ಲೊಂದು ಹೊಸ ಸಸ್ಪೆನ್ಸ್‌ ಥ್ರಿಲ್ಲರ್‌ ಮಾದರಿಯ ಸಿನಿಮಾ ನೋಡಬೇಕು ಎಂದುಕೊಂಡವರಿಗೆ ಕೆಲ ಸಣ್ಣಪುಟ್ಟ ನ್ಯೂನ್ಯತೆಗಳ ನಡುವೆಯೂ ʻರಕ್ಕಸಪುರದೋಳ್‌ʼ ಸಿನಿಮಾ ನಿರಾಸೆ ಮಾಡುವುದಿಲ್ಲ.

Movie: ರಕ್ಕಸಪುರದೋಳ್

Release Date: ಫೆಬ್ರವರಿ 6, 2026

Language: ಕನ್ನಡ

Genre: ಸಸ್ಪೆನ್ಸ್‌, ಥ್ರಿಲ್ಲರ್‌, ಡ್ರಾಮಾ

Director: ರವಿ ಸಾರಂಗ

Cast: ‌ರಾಜ್‌ ಬಿ ಶೆಟ್ಟಿ, ಸ್ವಾತಿಷ್ಟ ಕೃಷ್ಣನ್, ಅರ್ಚನಾ ಕೊಟ್ಟಿಗೆ, ಬಿ. ಸುರೇಶ, ಜಹಾಂಗೀರ್‌, ಅನಿರುದ್ಧ್‌ ಭಟ್‌

Duration: 127 Minutes

Rating: 4/5