ಗಂಡನನ್ನು ಕೊಂದು, ದೇಹ ಕತ್ತರಿಸಿ, ಕರುಳು ಹೊರತೆಗೆದ ಪತ್ನಿ; ಮನೆ ಮಾಲೀಕನಿಗೆ ಕಂಡ ಭೀಕರ ದೃಶ್ಯವೇನು?
Murder Case: ಹರಿಯಾಣದ ಕುರುಕ್ಷೇತ್ರದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಂದು, ಹೊಟ್ಟೆ ಸೀಳಿ ಕರುಳನ್ನು ಹೊರತೆಗೆದು ಚೀಲಕ್ಕೆ ತುಂಬುತ್ತಿದ್ದಾಗ ಮನೆ ಮಾಲೀಕನ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಬಳಿಕ ಟೆರೆಸ್‌ನಿಂದ ಹಾರಿದ್ದಾರೆ.
ಗಂಡನನ್ನು ಕೊಂದ ಮಹಿಳೆ -
ಚಂಡೀಗಢ: ಹರಿಯಾಣದ (Haryana) ಕುರುಕ್ಷೇತ್ರದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಂದು, ಹೊಟ್ಟೆ ಸೀಳಿ (Murder Case) ಕರುಳನ್ನು ಹೊರತೆಗೆದು ಚೀಲಕ್ಕೆ ತುಂಬುತ್ತಿದ್ದಾಗ ಮನೆ ಮಾಲೀಕನ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಮೃತ ವ್ಯಕ್ತಿಯನ್ನು ರಾಜೇಶ್ ಎಂದು ಗುರುತಿಸಲಾಗಿದ್ದು, ಪತ್ನಿ ವಿಮಲಾ ದೇವಿಯೊಂದಿಗೆ ಕುರುಕ್ಷೇತ್ರದ ಪೆಹೋವಾ ರಸ್ತೆಯಲ್ಲಿರುವ ರಾಜ್ ಪ್ಯಾಲೇಸ್ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಗಲಾಟೆ ಕೇಳಿ ಟೆರೇಸ್‌ಗೆ ಬಂದ ಮನೆ ಮಾಲೀಕ ರಿಂಕು ಈ ಭೀಕರ ದೃಶ್ಯವನ್ನು ನೋಡಿದಾಗ, ಗಾಬರಿಗೊಂಡ ಆರೋಪಿ ಟೆರೇಸ್‌ನಿಂದ ಕೆಳಗೆ ಜಿಗಿದು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮನೆ ಮಾಲೀಕ ಘಟನೆ ನಡೆದ ಸ್ಥಳಕ್ಕೆ ಬಂದಾಗ ರಾಜೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದ, ಹೊಟ್ಟೆಗೆ ತೀವ್ರ ಗಾಯಗಳಾಗಿದ್ದವು. ಅಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಧಂಪುರ ಗ್ರಾಮದ ಮೂಲದ ರಾಜೇಶ್, ತನ್ನ ಪತ್ನಿಯೊಂದಿಗೆ ಕುರುಕ್ಷೇತ್ರದಲ್ಲಿ ಸುಮಾರು ಒಂದು ವರ್ಷದಿಂದ ವಾಸಿಸುತ್ತಿದ್ದರು. ಅವರು ಪೆಹೋವಾ ರಸ್ತೆಯಲ್ಲಿರುವ ನೀರು ವ್ಯಾಪಾರ ಕಂಪನಿಯಲ್ಲಿ ಸರಬರಾಜು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಆಘಾತಕಾರಿ ಅಂಶ ಹೊರ ಬಿದ್ದಿದ್ದು, ಜೇಶ್‌ನ ಹೊಟ್ಟೆಯನ್ನು ಸುಮಾರು 35 ಸೆಂಟಿಮೀಟರ್‌ಗಳಷ್ಟು ಉದ್ದಕ್ಕೆ ಹರಿತವಾದ ಆಯುಧದಿಂದ ಸೀಳಿ ಕರುಳನ್ನು ಸಂಪೂರ್ಣವಾಗಿ ಹೊರತೆಗೆಯಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ರಾಜೇಶ್‌ನ ಯಕೃತ್ತಿನ ಬಹುಪಾಲು ಭಾಗ ಹಾಗೂ ಬಲ ಮೂತ್ರಪಿಂಡ ಕಾಣೆಯಾಗಿದೆ. ಅಪರಾಧ ನಡೆದ ಸ್ಥಳದಿಂದ ಪೊಲೀಸರು ರಕ್ತಸಿಕ್ತ ಮೂರು ಬೇರೆ ಬೇರೆ ಗಾತ್ರದ ಹರಿತವಾದ ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ.
ದಂಪತಿಗೆ ಹಲವು ವರ್ಷಗಳಾದರೂ ಮಕ್ಕಳಿರಲಿಲ್ಲ. ವಿಮಲಾ ದೇವಿ ಸಾಂಪ್ರದಾಯಿಕ ಚಿಕಿತ್ಸೆ, ಮಾಟಮಂತ್ರ ಮತ್ತು ಭೂತೋಚ್ಚಾಟನೆ ಪದ್ಧತಿಗಳಲ್ಲಿ ತೊಡಗಿಸಿಕೊಂಡಿದ್ದಳು ಹಾಗೂ ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಮಹಿಳೆಯ ಹೇಳಿಕೆ, ವಿಧಿವಿಜ್ಞಾನ ಸಾಕ್ಷ್ಯಗಳು ಮತ್ತು ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.