ಜಿಮ್‌ನಿಂದ ಹೊರ ಬರುತ್ತಿದ್ದ ಗಾಯಕ ಅಂಕಿತ್ ಬಲ್ಯಾನ್ ಮೇಲೆ ಗುಂಡಿನ ಮಳೆಗೆರೆದು ಹತ್ಯೆ; ಬೈಕ್‌ನಲ್ಲಿ ಪರಾರಿಯಾದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರಿಂದ ಕಾರ್ಯಾಚರಣೆ
Ankit Balyan Shot Dead: ಯುಟ್ಯೂಬರ್ ಮತ್ತು ಹರಿಯಾಣ್ವಿ ಗಾಯಕ ಅಂಕಿತ್ ಬಲ್ಯಾನ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ಇದನ್ನು ಜಾಟ್ ಸಮುದಾಯದ ಮೇಲಿನ ದಾಳಿ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಯುಟ್ಯೂಬರ್ ಅಂಕಿತ್ ಬಲ್ಯಾನ್ ಮತ್ತು ಹತೈಗೈದ ದುಷ್ಕರ್ಮಿಗಳು -
ಲಖನೌ, ಆ. 27: ಯುಟ್ಯೂಬರ್ ಮತ್ತು ಹರಿಯಾಣ್ವಿ ಗಾಯಕ ಅಂಕಿತ್ ಬಲ್ಯಾನ್ (Ankit Balyan) ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಜಿಮ್‌ನ ಹೊರಗೆ ನಡೆದಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಆಘಾತ ವ್ಯಕ್ತವಡಿಸಿದ್ದು, ಬಲ್ಯಾನ್ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಶೂನ್ಯಕ್ಕೆ ಇಳಿದಿದೆ ಎಂದು ಹೇಳಿದ್ದು, ರಾಜಕೀಯ ವೈರತ್ವದ ಶಂಕೆ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನು ಜಾಟ್ ಸಮುದಾಯದ ಮೇಲಿನ ದಾಳಿ ಎಂದು ಅಖಿಲೇಶ್ ಯಾದವ್ ಕರೆದಿದ್ದಾರೆ. ಬಲ್ಯಾನ್ ಜಿಮ್‌ನಿಂದ ಹೊರಬರುತ್ತಿದ್ದಾಗ ದಾಳಿ ಮಾಡಲಾಗಿದೆ. ಕೊತ್ವಾಲಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮುಂಬರುವ ಸ್ಥಳೀಯಾಡಳಿತ ಚುನಾವಣೆಯಲ್ಲಿ ಬಲ್ಯಾನ್ ಸ್ಪರ್ಧಿಸಲು ಮುಂದಾಗಿದ್ದಾರೆ ಎಂಬ ಊಹಾಪೋಹಗಳು ಹರಡಿದ್ದವು. ಆದರೆ ಅಧಿಕಾರಿಗಳು ಅಥವಾ ಅವರ ಸಹಚರರಿಂದ ಅದರ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿರಲಿಲ್ಲ. ಅದು ಅವರ ಹತ್ಯೆಗೆ ಕಾರಣವಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
“ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಶೂನ್ಯಕ್ಕೆ ಇಳಿದಿದೆ. ಜನಪ್ರಿಯ ಗಾಯಕ ಅಂಕಿತ್ ಬಲ್ಯಾನ್ ಅವರನ್ನು ಶಾಮ್ಲಿಯಲ್ಲಿ 18 ಸುತ್ತು ಗುಂಡು ಹಾರಿಸುವ ಮೂಲಕ ಕ್ರೂರವಾಗಿ ಹತ್ಯೆ ಮಾಡಲಾಗಿದ್ದು, ಈ ಪ್ರದೇಶದಾದ್ಯಂತ ಭಯವನ್ನು ಸೃಷ್ಟಿಸಿದೆ” ಎಂದು ಅಖಿಲೇಶ್ ಯಾದವ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಭಾರಿ ಮಳೆ: ಮನೆ, ಗೋಡೆ ಕುಸಿದು 9 ಮಂದಿ ದುರ್ಮರಣ
ಬಲ್ಯಾನ್ ಅವರ ತಾಯಿ ಮಗನ ಮೃತದೇಹವನ್ನು ಮಡಿಲಲ್ಲಿಟ್ಟುಕೊಂಡು ರಸ್ತೆಯಲ್ಲಿ ರೋದಿಸುತ್ತಿರುವ ದೃಶ್ಯ ಹೃದಯ ವಿದ್ರಾವಕವಾಗಿದೆ ಎಂದ ಯಾದವ್, ದಾಳಿಕೋರರನ್ನು ತಕ್ಷಣ ಬಂಧಿಸುವಂತೆ ಜಾಟ್ ಸಮುದಾಯವು ಬೇಡಿಕೆ ಇಟ್ಟಿದೆ ಎಂದು ಹೇಳಿದ್ದಾರೆ. “ಉತ್ತರ ಪ್ರದೇಶದ ಇಡೀ ಜಾಟ್ ಸಮುದಾಯವು ಕೋಪಗೊಂಡಿದೆ. ಇದನ್ನು ತಮ್ಮ ಮೇಲಿನ ದಾಳಿ ಎಂದು ಪರಿಗಣಿಸುತ್ತದೆ” ಎಂದು ಅವರು ತಿಳಿಸಿದ್ದಾರೆ. ರಾಜಕೀಯ ದ್ವೇಷದ ದೃಷ್ಟಿಕೋನದಿಂದ ಕೊಲೆಯನ್ನು ತನಿಖೆ ಮಾಡಬೇಕೆಂದು ಯಾದವ್ ಆಗ್ರಹಿಸಿದ್ದಾರೆ.
ಇನ್ನು ಗುಂಡಿನ ದಾಳಿಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ.ಪಿ. ಸಿಂಗ್ ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ದಾಳಿಕೋರರು ಎರಡು ಬೈಕ್‌ಗಳಲ್ಲಿ ಬಂದು ಬಲ್ಯಾನ್ ಮೇಲೆ ಹಲವು ಸುತ್ತು ಗುಂಡು ಹಾರಿಸಿದರು. ಪರಿಣಾಮ ಅವರು ಸ್ಥಳದಲ್ಲೇ ಸಾವಿಗೀಡಾದರು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರರನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಬಲ್ಯಾನ್, 3.66 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಯುಟ್ಯೂಬರ್ ಕೂಡ ಹೌದು.