ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಕೂಟರ್ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ: 27 ವರ್ಷದ ಯುವಕನನ್ನು ಗುಂಡಿಟ್ಟು ಹತ್ಯೆಗೈದ ಸ್ನೇಹಿತರು

Amritsar Horror: ಪಂಜಾಬ್‌ನ ಅಮೃತಸರದಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಸ್ಕೂಟರ್ ಸರಿಸುವ ವಿಚಾರವಾಗಿ ನಡೆದ ಜಗಳದಲ್ಲಿ 27 ವರ್ಷದ ಅಮಿತ್ ಸಬರ್ವಾಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಸಹೋದರರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಬಂಧನಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಇತ್ತೀಚಿನ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಪಂಜಾಬ್‌ನ ಕಾನೂನು ಮತ್ತು ಸುವ್ಯವಸ್ಥೆ ಕುರಿತು ರಾಜಕೀಯ ವಾಗ್ವಾದ ತೀವ್ರಗೊಂಡಿದೆ.

ಸ್ಕೂಟರ್ ವಿಚಾರಕ್ಕೆ ಜಗಳ: ಯುವಕನ ಹತ್ಯೆ

ಮೃತ ಯುವಕ ಅಮಿತ್ ಸಬರ್ವಾಲ್ (ಸಂಗ್ರಹ ಚಿತ್ರ) -

Profile
Sushmitha Jain Oct 24, 2026 9:58 PM

ಚಂಡೀಗಢ, ಅ. 24: ಪಂಜಾಬ್‌ನ ಅಮೃತಸರದ ಆನಂದ್ ಅವೆನ್ಯೂ ಪ್ರದೇಶದಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು ಸರಿಸುವ ವಿಚಾರವಾಗಿ ನಡೆದ ಜಗಳದಲ್ಲಿ 27 ವರ್ಷದ ಯುವಕನನ್ನು ಗುಂಡಿಟ್ಟು ಸ್ನೇಹಿತರೇ ಹತ್ಯೆ ಮಾಡಿದ್ದಾರೆ (Amritsar Horror). ಶುಕ್ರವಾರ (ಅಕ್ಟೋಬರ್‌ 23) ರಾತ್ರಿ ಯುವಕನ ಮನೆಯ ಹೊರಗಡೆಯೇ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಪ್ರದೇಶದ ಮೂವರು ಸಹೋದರರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಮೃತ ಯುವಕನನ್ನು ಅಮಿತ್ ಸಬರ್ವಾಲ್ ಎಂದು ಗುರುತಿಸಲಾಗಿದೆ. ಅವರು ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಗಳನ್ನು ಅಭಿ ಶಾ, ಸನ್ನಿ ಶಾ ಮತ್ತು ರಿತಿಕ್ ಶಾ ಎಂದು ಗುರುತಿಸಲಾಗಿದೆ. ಗೇಟ್ ಹಕೀಮಾ ಪೊಲೀಸ್ ಠಾಣೆಯ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮೃತ ಅಮಿತ್ ಅವರ ತಂದೆಯ ಪ್ರಕಾರ, ಆರೋಪಿಗಳು ಅವರ ಮಗನ ಸ್ನೇಹಿತರಾಗಿದ್ದರು. ಅಮಿತ್‌ಗೆ ಯಾರೊಂದಿಗೂ ವೈಷಮ್ಯವಿರಲಿಲ್ಲ. ರಸ್ತೆಯಲ್ಲಿ ನಿಲ್ಲಿಸಿದ್ದ ಆಕ್ಟಿವಾ ಸ್ಕೂಟರ್ ಅನ್ನು ಸರಿಸುವ ವಿಚಾರವೇ ಜಗಳಕ್ಕೆ ಕಾರಣವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆರು ಸುತ್ತು ಗುಂಡಿನ ದಾಳಿ

ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿಕೊಂಡು ತಡರಾತ್ರಿ ಮನೆಗೆ ಮರಳಿದ್ದ ಅಮಿತ್, ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟರ್ ಅನ್ನು ಸರಿಸುವ ವಿಚಾರವಾಗಿ ಆರೋಪಿಗಳೊಂದಿಗೆ ವಾಗ್ವಾದ ನಡೆಸಿದ್ದರು ಎನ್ನಲಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಅಭಿ ಶಾ ದೇಶಿ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ರಾತ್ರಿ ಸುಮಾರು 11.30ರ ವೇಳೆಗೆ ಆರು ಸುತ್ತು ಗುಂಡು ಹಾರಿಸಲಾಗಿತ್ತು ಎಂದು ಅಮಿತ್ ಅವರ ತಂದೆ ಹೇಳಿದ್ದಾರೆ. ಈ ಪೈಕಿ ಎರಡು ಗುಂಡುಗಳು ತಲೆಗೆ, ತಲಾ ಒಂದು ಗುಂಡು ಸೊಂಟ ಮತ್ತು ಕಾಲಿಗೆ ತಗುಲಿತ್ತು ಎಂದು ಅವರು ತಿಳಿಸಿದ್ದಾರೆ.

ಮನೆಯೊಳಗಿದ್ದ ಕುಟುಂಬಸ್ಥರಿಗೆ ಪಟಾಕಿ ಸಿಡಿದಂತಹ ಶಬ್ದ ಕೇಳಿಸಿದೆ. ತಕ್ಷಣ ಹೊರಬಂದು ನೋಡಿದಾಗ ಅಮಿತ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಘಟನಾ ಪ್ರದೇಶದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಆರೋಪಿಗಳ ಬಂಧನಕ್ಕೆ ದಾಳಿ ನಡೆಸುತ್ತಿದ್ದಾರೆ.

ಎಎಪಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಬಿಟ್ಟು ಟೀಕೆ

ಈ ಘಟನೆಯ ಕುರಿತು ಬಿಜೆಪಿ ನಾಯಕ ರವನೀತ್ ಸಿಂಗ್ ಬಿಟ್ಟು ಪಂಜಾಬ್‌ನ ಆಮ್ ಆದ್ಮಿ ಪಕ್ಷd ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಈ ಘಟನೆ ಸಾಕ್ಷಿ ಎಂದು ಆರೋಪಿಸಿರುವ ಅವರು, ಮುಖ್ಯಮಂತ್ರಿ ಭಗವಂತ್ ಮಾನ್ ಗೃಹ ಸಚಿವರಾಗಿಯೂ ಜನರ ಸುರಕ್ಷತೆಯ ಹೊಣೆಗಾರಿಕೆಯನ್ನು ಯಾವಾಗ ವಹಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಜನರ ಜೀವ ರಕ್ಷಣೆಗೆ ಆದ್ಯತೆ ನೀಡಬೇಕು. ತಮ್ಮ ಮನೆಯ ಬಾಗಿಲಿನ ಹೊರಗಡೆಯೂ ಜನರಿಗೆ ಸುರಕ್ಷತೆ ಇಲ್ಲದಿರುವುದು ಆಡಳಿತದ ವೈಫಲ್ಯವನ್ನು ತೋರಿಸುತ್ತದೆ. ಆರೋಪಿಗಳನ್ನು ತಕ್ಷಣ ಬಂಧಿಸಿ, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಮಾನ ಇಂಧನ ತೆರಿಗೆ ಕಡಿತಗೊಳಿಸಿದ ತಮಿಳುನಾಡು, ಗೋವಾ ಸರ್ಕಾರಗಳಿಗೆ ಕೇಂದ್ರದ ಪ್ರಶಂಸೆ

ಅಮೃತಸರದಲ್ಲಿ ಹೆಚ್ಚುತ್ತಿರುವ ಗುಂಡಿನ ದಾಳಿ ಪ್ರಕರಣಗಳು

ಅಮೃತಸರದಲ್ಲಿ ನಡೆದ ಈ ಹತ್ಯೆಯು ಅಕ್ಟೋಬರ್ 3ರಂದು ನಡೆದ ಮತ್ತೊಂದು ಗುಂಡಿನ ದಾಳಿ ಪ್ರಕರಣದ ಬೆನ್ನಲ್ಲೇ ವರದಿಯಾಗಿದೆ. 29 ವರ್ಷದ ಖ್ಯಾತ ಪಂಜಾಬಿ ಮೇಕಪ್ ಕಲಾವಿದ ಹಾಗೂ ಸಾಮಾಜಿಕ ಜಾಲತಾಣ ಪ್ರಭಾವಿ ಮಧುಸೂದನ್ 'ಮ್ಯಾಡ್' ಸಂಧು ಅವರನ್ನು ಅಂದು ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಲೋಹರ್ಕಾ ರಸ್ತೆಯಲ್ಲಿರುವ ತಮ್ಮ ಸಲೂನ್ ಸಮೀಪದ ಕಾರ್ ವಾಶ್ ಕೇಂದ್ರದಲ್ಲಿ ಸಂಧು ಕಾಯುತ್ತಿದ್ದಾಗ, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹತ್ತಿರದಿಂದ ಹಲವು ಸುತ್ತು ಗುಂಡು ಹಾರಿಸಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಂಧು ಮೃತಪಟ್ಟಿದ್ದರು.

ಬಳಿಕ ಗೋಲ್ಡಿ ಧಿಲ್ಲೋನ್ ಗ್ಯಾಂಗ್‌ಗೆ ಸಂಬಂಧಿಸಿದೆ ಎನ್ನಲಾದ ಫೇಸ್‌ಬುಕ್ ಖಾತೆಯೊಂದು ಹತ್ಯೆಯ ಹೊಣೆ ಹೊತ್ತುಕೊಂಡಿತ್ತು. ಪ್ರಕರಣದ ತನಿಖೆ ನಡೆಸಿದ ಗುಜರಾತ್ ಪೊಲೀಸರು, ಆರೋಪಿತ ಶೂಟರ್ ಪರ್ಮಿಂದರ್ ಕಾಕಾ ಸೇರಿಬಗುಜರಾತ್‌ಗೆ ಪರಾರಿಯಾಗಿದ್ದ ಹಲವು ಆರೋಪಿಗಳನ್ನು ಬಂಧಿಸಿದ್ದರು.

ಇದಲ್ಲದೆ, ಮಾದಕವಸ್ತುಗಳ ಅಕ್ರಮ ಮಾರಾಟದ ವಿರುದ್ಧ ಧ್ವನಿ ಎತ್ತುತ್ತಿದ್ದ ಸಾಮಾಜಿಕ ಕಾರ್ಯಕರ್ತ ಪರ್ವಿಂದರ್ ಸಿಂಗ್ ಝೋಟಾ ಅವರನ್ನು ಮಾನ್ಸಾದಲ್ಲಿನ ಮೆಡಿಕಲ್ ಸ್ಟೋರ್ ಒಳಗೆ ಫೇಸ್‌ಬುಕ್ ಲೈವ್ ಪ್ರಸಾರದ ವೇಳೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ವಹಿಸಿಕೊಂಡಿದೆ.

ಇದಾದ ಬಳಿಕ ಬಟಾಲಾದಲ್ಲಿ 40 ವರ್ಷದ ಬಿಕ್ರಮ್‌ಜಿತ್ ಸಿಂಗ್ ಅವರ ಮೇಲೆಯೂ ಮಾರಕ ಹಲ್ಲೆ ನಡೆದಿತ್ತು. ಮಾದಕವಸ್ತು ಮಾರಾಟಗಾರರ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪಂಜಾಬ್‌ನಲ್ಲಿ ಅಕ್ಟೋಬರ್‌ನಲ್ಲಿ ಸರಣಿ ಹತ್ಯೆಗಳು ವರದಿಯಾಗುತ್ತಿದ್ದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಗತಿ ಕುರಿತು ಸಾರ್ವಜನಿಕರ ಆಕ್ರೋಶ ಹಾಗೂ ರಾಜಕೀಯ ವಾಗ್ವಾದಗಳು ಹೆಚ್ಚಾಗಿವೆ.