11 ವರ್ಷಗಳ ಹಿಂದೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕೇರಳ ಶಿಕ್ಷಕನ ಬಂಧನ; ಅಪರಾಧಿ ಪತ್ತೆಯಾಗಿದ್ದೇ ರೋಚಕ
Kerala Teacher Arrested: 11 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೇರಳ ನ್ಯಾಯಾಲಯವೊಂದು ಅಪರಾಧಿ ಶಿಕ್ಷಕನಿಗೆ 18 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2013ರಲ್ಲಿ ಬಾಲಕಿ 5ನೇ ತರಗತಿಯಲ್ಲಿ ಓದುತ್ತಿದ್ದಾಗ ಆತನಿಂದ ಟ್ಯೂಷನ್ ತೆಗೆದುಕೊಳ್ಳುತ್ತಿದ್ದಳು.
ಸಾಂದರ್ಭಿಕ ಚಿತ್ರ -
ತಿರುವನಂತಪುರಂ, ಮಾ. 6: 11 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಗೆ ಪಾಠ ಮಾಡುತ್ತಿದ್ದ ವೇಳೆ ಲೈಂಗಿಕ ದೌರ್ಜನ್ಯ (physical assault on minor) ಎಸಗಿದ ಆರೋಪದ ಮೇಲೆ ಕೇರಳದ ನ್ಯಾಯಾಲಯವೊಂದು (Kerala Court) ಅಪರಾಧಿ ಶಿಕ್ಷಕನಿಗೆ 18 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಘಟನೆ 2024ರಲ್ಲಿ ಸಂತ್ರಸ್ತೆ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದಾಗ ಅಪರಾಧಿಯನ್ನು ಹೋಲುವ ವ್ಯಕ್ತಿಯನ್ನು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ತಿರುವನಂತಪುರಂ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಅಂಜು ಮೀರಾ ಬಿರ್ಲಾ 57 ವರ್ಷದ ವ್ಯಕ್ತಿಗೆ ಐಪಿಸಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಒಟ್ಟು 18 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ) ಆರ್.ಎಸ್. ವಿಜಯ್ ಮೋಹನ್ ತಿಳಿಸಿದ್ದಾರೆ.
ಶಿಕ್ಷೆಯನ್ನು ಒಂದೇ ಸಮಯದಲ್ಲಿ ಅನುಭವಿಸಬೇಕಿರುವುದರಿಂದ ಮತ್ತು ಗರಿಷ್ಠ ಶಿಕ್ಷೆ 5 ವರ್ಷಗಳಾಗಿರುವುದರಿಂದ ಅಪರಾಧಿ 5 ವರ್ಷಗಳ ಕಾಲ ಮಾತ್ರ ಜೈಲಿನಲ್ಲಿ ಇರಬೇಕಾಗುತ್ತದೆ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಪರೀಕ್ಷೆ ಬರೆಯಲು ಬಂದ 16 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದಳು
ನ್ಯಾಯಾಲಯವು ಆರೋಪಿಗೆ 35,000 ರುಪಾಯಿ ದಂಡವನ್ನೂ ವಿಧಿಸಿದೆ. ಜತೆಗೆ ಸಂತ್ರಸ್ತೆ ಅನುಭವಿಸಿದ ಮಾನಸಿಕ ಯಾತನೆಯನ್ನು ಗಮನದಲ್ಲಿಟ್ಟು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಆಕೆಗೆ ಪರಿಹಾರ ನೀಡುವಂತೆ ನಿರ್ದೇಶಿಸಿದೆ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕರು ತಿಳಿಸಿದ್ದಾರೆ.
2013ರಲ್ಲಿ ಬಾಲಕಿ 5ನೇ ತರಗತಿಯಲ್ಲಿ ಓದುತ್ತಿದ್ದಾಗ, ಈ ಕಾಮುಕ ಶಿಕ್ಷಕನಿಂದ ಟ್ಯೂಷನ್ ತೆಗೆದುಕೊಳ್ಳುತ್ತಿದ್ದಳು. ಈ ವೇಳೆ ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪ್ರಾಸಿಕ್ಯೂಟರ್ ಹೇಳಿದ್ದಾರೆ. ಜನವರಿ 2014ರವರೆಗೆ ಹಲವು ಬಾರಿ ಲೈಂಗಿಕ ದೌರ್ಜನ್ಯಗಳು ನಡೆದಿವೆ. ಬಾಲಕಿ 6ನೇ ತರಗತಿಯಲ್ಲಿದ್ದಾಗ ಅವನ ಬಳಿಗೆ ಹೋಗುವುದನ್ನು ನಿಲ್ಲಿಸಿದಳು ಎಂದು ಎಸ್‌ಪಿಪಿ ತಿಳಿಸಿದ್ದಾರೆ. ಆದರೆ ಟ್ಯೂಷನ್ ಶಿಕ್ಷಕ ಬೆದರಿಕೆ ಹಾಕಿದ್ದರಿಂದ ಸಂತ್ರಸ್ತೆ ತನ್ನ ಮೇಲಾದ ದೌರ್ಜನ್ಯವನ್ನು ಎಲ್ಲೂ ಬಹಿರಂಗಪಡಿಸಿರಲಿಲ್ಲ. ಆಕೆ ಮಾನಸಿಕ ಯಾತನೆಯಿಂದ ಬಳಲುತ್ತಿದ್ದಳು ಎಂದು ಎಸ್‌ಪಿಪಿ ಹೇಳಿದರು.
ಇದರಿಂದಾಗಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ಒಂದು ವರ್ಷದ ಅಧ್ಯಯನವೂ ನಷ್ಟವಾಯಿತು ಎಂದು ಪ್ರಾಸಿಕ್ಯೂಟರ್ ಹೇಳಿದರು. ದ್ವಿತೀಯ ಪಿಯುಸಿ ಮುಗಿಸಿದ ನಂತರವೂ ಆಕೆಯ ಹಿಂದಿನ ಘಟನೆಯಿಂದಾಗಿ ಆಕೆ ಅತಿಯಾದ ಭಯ, ಒಂಟಿತನ ಮತ್ತು ಪ್ಯಾನಿಕ್ ಡಿಸಾರ್ಡರ್‌ನಿಂದ ಬಳಲುತ್ತಿದ್ದಳು. ಕುಟುಂಬವು ಆಕೆಯನ್ನು ಮನಶ್ಶಾಸ್ತ್ರಜ್ಞರ ಬಳಿ ತೋರಿಸಿದರು ಎಂದು ಎಸ್‌ಪಿಪಿ ಹೇಳಿದರು.
ಮಲ್ಲಿಕಾರ್ಜುನ ಮುತ್ಯಾ ಪ್ರಕರಣಕ್ಕೆ ಸಂಬಂಧಿಸಿದ ಪೋಟೊ, ವಿಡಿಯೊ ಹಂಚಿಕೊಂಡ್ರೆ ಕಾನೂನು ಕ್ರಮ
ಕೋವಿಡ್-19 ಸಮಯವಾಗಿದ್ದರಿಂದ ಆನ್‌ಲೈನ್‌ನಲ್ಲಿ ಚಿಕಿತ್ಸೆ ಪಡೆದಳು. ಆಕೆಯ ತಾಯಿಯ ಬಳಿಯೂ ಏನನ್ನೂ ಬಹಿರಂಗಪಡಿಸಿರಲಿಲ್ಲ. ಮನಶ್ಶಾಸ್ತ್ರಜ್ಞರು ಹೇಳಿದ ಔಷಧ ತೆಗೆದುಕೊಂಡ ನಂತರ, ಆಕೆಯ ಅನಾರೋಗ್ಯವು ಸುಧಾರಿಸಿತು. ನಂತರ ಆಕೆಗೆ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಸಿಕ್ಕಿತು. ಅವಳು ಹಾಸ್ಟೆಲ್‌ನಲ್ಲಿ ಉಳಿಯಲು ಪ್ರಾರಂಭಿಸಿದಳು ಎಂದು ಪ್ರಾಸಿಕ್ಯೂಟರ್ ಹೇಳಿದರು.
2024ರಲ್ಲಿ ಅವಳು ತನ್ನ ಟ್ಯೂಷನ್ ಟೀಚರ್ ಅನ್ನು ಹೋಲುವ ವ್ಯಕ್ತಿಯನ್ನು ನೋಡಿ ಮಾನಸಿಕವಾಗಿ ಅಸ್ವಸ್ಥಳಾದಳು. ಮನೆಯವರು ವೈದ್ಯರನ್ನು ಸಂಪರ್ಕಿಸಿದರು. ಆಗ ಹಿಂದಿನ ಘಟನೆ ಬೆಳಕಿಗೆ ಬಂದಿತು ಎಂದು ಪ್ರಾಸಿಕ್ಯೂಟರ್ ವಿವರಿಸಿದ್ದಾರೆ. ಬಳಿಕ ವೈದ್ಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆಪರಾದಿಯನ್ನು ಬಂಧಿಸಿದರು.