ಪತ್ನಿ, ಇಬ್ಬರು ಅರ್ಚಕರ ಮೇಲೆ ಗುಂಡು ಹಾರಿಸಿ, ಮೂವರು ಮಕ್ಕಳನ್ನು ಒತ್ತೆಯಾಳುಗಳನ್ನಾಗಿರಿಸಿದ್ದ ವ್ಯಕ್ತಿ ಎನ್‌ಕೌಂಟರ್‌ನಲ್ಲಿ ಸಾವು
Crime news: ತನ್ನ ಪತ್ನಿಗೆ ಗುಂಡು ಹಾರಿಸಿ, ಇಬ್ಬರು ಅರ್ಚಕರ ಮೇಲೆ ಗುಂಡಿನ ದಾಳಿ ನಡೆಸಿ, ಮೂವರು ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ವ್ಯಕ್ತಿಯೊಬ್ಬ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾನೆ. ಬಲಿಯಾದ ವ್ಯಕ್ತಿಯ ಪತ್ನಿ ಬಬಿತಾ ಸಿಂಗ್ ಅವರು ಇಬ್ಬರು ಪುರೋಹಿತರಾದ ಮಹೇಂದ್ರ ಪಾಠಕ್ ಮತ್ತು ಅಖಿಲೇಶ್ ಮಿಶ್ರಾ ಅವರೊಂದಿಗೆ ಧಾರ್ಮಿಕ ಆಚರಣೆಯಲ್ಲಿ ತೊಡಗಿರುವುದನ್ನು ನೋಡಿ ಸಿಟ್ಟಾದರು.
ಪತ್ನಿ, ಅರ್ಚಕರ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿ ಎನ್‌ಕೌಂಟರ್‌ನಲ್ಲಿ ಸಾವು -
ಲಖನೌ, ಸೆ. 23: ಪತ್ನಿಗೆ ಗುಂಡು ಹಾರಿಸಿ, ಇಬ್ಬರು ಅರ್ಚಕರ ಮೇಲೆ ಗುಂಡಿನ ದಾಳಿ ನಡೆಸಿ, ಮೂವರು ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ವ್ಯಕ್ತಿಯೊಬ್ಬ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾನೆ (Crime news). ಆ ಮೂಲಕ ಆ ಪ್ರದೇಶದಲ್ಲಿ ಕೆಲಹೊತ್ತು ಮೂಡಿದ್ದ ಉದ್ವಿಗ್ನ ವಾತಾವರಣ ತಿಳಿಯಾಗಿದೆ. ಉತ್ತರ ಪ್ರದೇಶದ (Uttar Pradesh) ಆಜಂಗಢದಲ್ಲಿ ಈ ಘಟನೆ ನಡೆದಿದೆ. ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯ ವೇಳೆ ಆ ವ್ಯಕ್ತಿ ತನ್ನ ಮಗನಿಗೂ ಗುಂಡು ಹಾರಿಸಿದ್ದಾನೆ. ಗಾಯಗೊಂಡಿದ್ದ ವ್ಯಕ್ತಿ ಮತ್ತು ಆತನ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ (ಸೆಪ್ಟೆಂಬರ್ 22) ಸಂಜೆ ಅರವಿಂದ್ ಸಿಂಗ್ ಮನೆಗೆ ಹಿಂದಿರುಗಿದಾಗ ಪತ್ನಿ ಬಬಿತಾ ಸಿಂಗ್ (32) ಇಬ್ಬರು ಪುರೋಹಿತರಾದ ಮಹೇಂದ್ರ ಪಾಠಕ್ (60) ಮತ್ತು ಅಖಿಲೇಶ್ ಮಿಶ್ರಾ (50) ಅವರೊಂದಿಗೆ ಧಾರ್ಮಿಕ ಆಚರಣೆಯಲ್ಲಿ ತೊಡಗಿರುವುದನ್ನು ನೋಡಿ ಸಿಟ್ಟಿಗೆದ್ದ. ಈ ವೇಳೆ ಮಾತಿನ ಚಕಮಕಿ ನಡೆಯಿತು. ಕೋಪದ ಭರದಲ್ಲಿ, ಅರವಿಂದ್ ತನ್ನ ಪರವಾನಗಿ ಪಡೆದ ಬಂದೂಕನ್ನು ಹೊರತೆಗೆದು ಮೊದಲು ತನ್ನ ಪತ್ನಿಗೆ ಗುಂಡು ಹಾರಿಸಿದ್ದಾನೆ. ನಂತರ ಇಬ್ಬರು ಪುರೋಹಿತರಿಗೆ ಗುಂಡು ಹಾರಿಸಿದ್ದಾನೆ. ಬಳಿಕ ಆತ ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಹೋಗಿ ಒಂದು ಕೋಣೆಯಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದಾನೆ.
ವಾರಣಾಸಿ ಸಿ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADG) ನವೀನ್ ಅರೋರಾ ಅವರ ಪ್ರಕಾರ, ಪೊಲೀಸರು ಆರಂಭದಲ್ಲಿ ಸಂಯಮದಿಂದ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದರು. ಆರೋಪಿ ಅರವಿಂದ್ ಮನೆಯೊಳಗಿಂದ ಹೊರಗೆ ಬರಲು ನಿರಾಕರಿಸಿ, ಬೆಳಗ್ಗೆಯವರೆಗೆ ಕಾಯಿಸಿದ್ದ. ಆದರೆ, ಅರವಿಂದ್ ಮನೆಯೊಳಗಿನಿಂದಲೇ ಗುಂಡಿನ ದಾಳಿ ನಡೆಸಿದ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ಇದರಿಂದಾಗಿ ಬೇರೆ ದಾರಿ ಇಲ್ಲದೆ, ಕೊನೆಯ ಪ್ರಯತ್ನವಾಗಿ ಪೊಲೀಸ್ ತಂಡ ಮನೆಯೊಳಗೆ ಪ್ರವೇಶಿಸಬೇಕಾಯಿತು ಎಂದು ಅರೋರಾ ತಿಳಿಸಿದ್ದಾರೆ.
“ಏಳು ಗಂಟೆಗಳ ಕಾಲ ಮುತ್ತಿಗೆ ಹಾಕಿದರೂ, ಆರೋಪಿ ಮನೆಯಿಂದ ಹೊರಗೆ ಬರಲು ನಿರಾಕರಿಸಿ, ಬೆಳಗ್ಗೆಯವರೆಗೆ ಕಾಯುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ. ಕೊನೆಗೆ, ಆರೋಪಿ ಅರವಿಂದ್ ಮನೆಯೊಳಗಿಂದಲೇ ಗುಂಡಿನ ದಾಳಿ ನಡೆಸಿದಾಗ, ಎಸ್‌ಎಸ್‌ಪಿ ಹಾಗೂ ವಿಶೇಷ ಕಾರ್ಯಾಚರಣೆ ಪಡೆಯ ತಂಡದ ಮೂವರು ಅಥವಾ ನಾಲ್ವರು ಸದಸ್ಯರು ಅನಿವಾರ್ಯವಾಗಿ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಬೇಕಾಯಿತು. ಇದು ಕೊನೆಯ ಆಯ್ಕೆಯಾಗಿತ್ತು” ಎಂದು ಅರೋರಾ ತಿಳಿಸಿದ್ದಾರೆ.
“ನಾವು ಸ್ಟನ್ ಗ್ರೆನೇಡ್‌ಗಳು ಮತ್ತು ಅಶ್ರುವಾಯು ಬಳಸಿದ್ದೇವೆ. ಎಸ್‌ಎಸ್‌ಪಿ ಸೇರಿ ಪೊಲೀಸ್ ತಂಡದ ಸದಸ್ಯರು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಅವರ ಮೇಲೂ ಗುಂಡಿನ ದಾಳಿ ನಡೆಯಿತು. ಇದರಿಂದಾಗಿ ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಬೇಕಾಯಿತು” ಎಂದು ಅವರು ಹೇಳಿದ್ದಾರೆ.
ಪೊಲೀಸರು ಮೂವರು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾದರು. ಒಬ್ಬ ಬಾಲಕ ಗುಂಡೇಟಿನಿಂದ ಗಾಯಗೊಂಡಿದ್ದು, ಆವರಣವನ್ನು ಪ್ರವೇಶಿಸಿದ ನಂತರವೇ ಈ ಸತ್ಯ ಬೆಳಕಿಗೆ ಬಂದಿತು. ಇಬ್ಬರು ಬಾಲಕಿಯರು ಆಘಾತದ ಸ್ಥಿತಿಯಲ್ಲಿದ್ದು, ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ ಎಂದು ಅರೋರಾ ಹೇಳಿದರು.
ಚಿಕಿತ್ಸೆ ವೇಳೆ ಅರವಿಂದ್ ಮತ್ತು ಅವರ ಮಗ ಗುಂಡೇಟಿನ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ ಎಂದು ಅಜಮ್‌ಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನಿಲ್ ಕುಮಾರ್ ತಿಳಿಸಿದ್ದಾರೆ.