ಮರ್ಸಿಡಿಸ್ ಕಾರ್ ವೇಗವಾಗಿ ಚಲಾಯಿಸಿ ಸ್ಕೂಟರ್ಗೆ ಡಿಕ್ಕಿ ಹೊಡೆದ ನ್ಯಾಯಾಧೀಶರ ಅಪ್ರಾಪ್ತ ಪುತ್ರ: ಸವಾರ ಸಾವು, ಭುಗಿಲೆದ್ದ ಆಕ್ರೋಶ
Road Accident: ನ್ಯಾಯಾಧೀಶರ 17 ವರ್ಷದ ಬಾಲಕನೊಬ್ಬ ತನ್ನ ಮರ್ಸಿಡಿಸ್ ಬೆಂಜ್ ಕಾರನ್ನು ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟಿರುವ ಘಟನೆ ಕೇರಳಂನ ಕೊಚ್ಚಿಯಲ್ಲಿ ನಡೆದಿದೆ. 17 ವರ್ಷದ ಬಾಲಕ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮಗನಾಗಿದ್ದು, ಕಾರ್ ನ್ಯಾಯಾಧೀಶರ ಹೆಸರಿನಲ್ಲಿ ನೋಂದಾಯಿಸಲಾಗಿದೆ.
ಸಾಂದರ್ಭಿಕ ಚಿತ್ರ -
ತಿರುವನಂತಪುರಂ, ಅ. 26: ನ್ಯಾಯಾಧೀಶರ 17 ವರ್ಷದ ಬಾಲಕನೊಬ್ಬ ತನ್ನ ಮರ್ಸಿಡಿಸ್ ಬೆಂಜ್ ಕಾರನ್ನು ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದು (Accident), ಮಧ್ಯ ವಯಸ್ಕ ಸವಾರ ಮೃತಪಟ್ಟಿದ್ದಾರೆ. ಈ ಘಟನೆ ಕೇರಳಂನ ಕೊಚ್ಚಿಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಗೃಹ ಸಚಿವ ರಮೇಶ್ ಚೆನ್ನಿತ್ತಲ ಭರವಸೆ ನೀಡಿದ್ದಾರೆ. ಮೃತರನ್ನು ಜಯಬಾಲಕೃಷ್ಣನ್ (55) ಎಂದು ಗುರುತಿಸಲಾಗಿದ್ದು, ಅವರು ಕೊಚ್ಚಿಯ ಚಿತ್ತೋರ್ ಪ್ರದೇಶದಲ್ಲಿ ಬೀದಿಬದಿ ಆಹಾರ ಬಂಡಿ ಹೊಂದಿದ್ದರು.
17 ವರ್ಷದ ಬಾಲಕ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮಗನಾಗಿದ್ದು, ಕಾರ್ ನ್ಯಾಯಾಧೀಶರ ಹೆಸರಿನಲ್ಲಿ ನೋಂದಣಿಯಾಗಿದೆ. ಘಟನೆಯ ನಂತರ ಪೊಲೀಸರು ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿ ಬಾಲ ನ್ಯಾಯ ಮಂಡಳಿಯ (ಜೆಜೆಬಿ) ಮುಂದೆ ಹಾಜರುಪಡಿಸಿದ ನಂತರ, ಬಾಲ ನ್ಯಾಯ ಕಾಯ್ದೆಯ ನಿಬಂಧನೆಗಳ ಪ್ರಕಾರ ಆತನನ್ನು ಬಿಡುಗಡೆ ಮಾಡಲಾಯಿತು. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಕಾರನ್ನು ನೋಂದಾಯಿಸಿರುವ ಬಾಲಕನ ತಂದೆಯ ಮೇಲೆ ಪ್ರಕರಣ ದಾಖಲಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಜಯಬಾಲಕೃಷ್ಣನ್ ತಮ್ಮ ಆಹಾರ ಬಂಡಿಯನ್ನು ಮುಚ್ಚಿ ಬೆಳಗಿನ ಜಾವ 2.30ರ ಸುಮಾರಿಗೆ ಮನೆಗೆ ಹಿಂತಿರುಗುತ್ತಿದ್ದಾಗ ಚೆರನಲ್ಲೂರಿನಲ್ಲಿ ಹಿಂದಿನಿಂದ ಬಂದ ಕಾರು ಅವರ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. ಜಯಬಾಲಕೃಷ್ಣನ್ ವಾಹನ ಚಲಾಯಿಸುವಾಗ ಯಾವಾಗಲೂ ಜಾಗರೂಕರಾಗಿರುತ್ತಾರೆ ಎಂದು ಅವರ ಕುಟುಂಬ ಹೇಳಿದೆ.
ಹಿಟ್ ಅಂಡ್ ರನ್ಗೆ 60 ವರ್ಷದ ವೃದ್ಧ ಬಲಿ: ಮಗಳ ಮನೆಗೆ ತೆರಳಿ ಮರಳುವಾಗ ಅಪಘಾತ
ಜಯಬಾಲಕೃಷ್ಣನ್ ದ್ವಿಚಕ್ರ ವಾಹನವನ್ನು ನಿಧಾನಗತಿಯಲ್ಲಿ ಓಡಿಸುತ್ತಾರೆ. ಯಾವುದೇ ಅಪಘಾತವನ್ನುಂಟು ಮಾಡುವುದಿಲ್ಲ. ಅಪಘಾತದ ಸ್ಥಳವನ್ನು ನಾವು ನೋಡಿದಾಗ, ಕಾರ್ ಅತಿ ವೇಗದಲ್ಲಿ ಬಂದು ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ ಎಂಬುದು ತಿಳಿಯುತ್ತದೆ. ಜಯಬಾಲಕೃಷ್ಣನ್ ನೂರು ಮೀಟರ್ ದೂರಕ್ಕೆ ಎಸೆಯಲ್ಪಟ್ಟರು. ಅವರಿಗೆ ತೀವ್ರ ಗಾಯಗಳಾಗಿದ್ದವು. ಪರಿಣಾಮ ಸ್ಥಳದಲ್ಲೇ ಮೃತಪಟ್ಟರು ಎಂದು ಕುಟುಂಬ ಹೇಳಿದೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 106ರ ಅಡಿಯಲ್ಲಿ ಅಪ್ರಾಪ್ತನ ವಿರುದ್ಧ ನಿರ್ಲಕ್ಷ್ಯದ ಕೃತ್ಯದಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಚೆರನಲ್ಲೂರು ವೃತ್ತ ನಿರೀಕ್ಷಕ ಶ್ಯಾಮ್ ಕುಮಾರ್ ತಿಳಿಸಿದ್ದಾರೆ.
ಆರೋಪಿಯ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದೆ. ಆತನ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಕಳುಹಿಸಲಾಗುವುದು. ಪ್ರಾಥಮಿಕವಾಗಿ, ಅಪಘಾತದ ಸಮಯದಲ್ಲಿ ಅವನು ಮದ್ಯದ ಅಮಲಿನಲ್ಲಿ ಇರಲಿಲ್ಲ. ಆ ಸಮಯದಲ್ಲಿ ಅವನು ಕಾರಿನಲ್ಲಿ ಒಬ್ಬಂಟಿಯಾಗಿದ್ದನು ಎಂದು ಶ್ಯಾಮ್ ಕುಮಾರ್ ಹೇಳಿದರು.