ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ: 65 ವರ್ಷದ ಅಪರಾಧಿಗೆ ಮರಣದಂಡನೆ; ಪ್ರಕರಣ ನಡೆದ 2 ತಿಂಗಳಿಗೆ ತೀರ್ಪು ಪ್ರಕರಣ
Crime News: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 65 ವರ್ಷದ ಆರೋಪಿಗೆ ಪುಣೆಯ ವಿಶೇಷ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ. ಮಹಾರಾಷ್ಟ್ರದ ಭೋರ್ ತಾಲೂಕಿನ ನಸ್ರಾಪುರ ಗ್ರಾಮದಲ್ಲಿ ಅತ್ಯಾಚಾರ ನಡೆದಿತ್ತು. ಅಪರಾಧದ ಸ್ವರೂಪ ಮತ್ತು ಸಂತ್ರಸ್ತೆಯ ವಯಸ್ಸನ್ನು ಪರಿಗಣಿಸಿ ನ್ಯಾಯಾಧೀಶರು ಈ ಶಿಕ್ಷೆ ಪ್ರಕಟಿಸಿದ್ದಾರೆ.
ಬಾಲಕಿಯ ಅತ್ಯಾಚಾರ, ಕೊಲೆ ಖಂಡಿಸಿ ನಸ್ರಾಪುರದಲ್ಲಿ ಪ್ರತಿಭಟನೆ ನಡೆಸಿದ್ದ ಸ್ಥಳೀಯರು -
ಮುಂಬೈ, ಜೂ. 29: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 65 ವರ್ಷದ ಅಪರಾಧಿಗೆ ಪುಣೆಯ ವಿಶೇಷ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ. ಮಹಾರಾಷ್ಟ್ರದ (Maharashtra) ಭೋರ್ ತಾಲೂಕಿನ ನಸ್ರಾಪುರ ಗ್ರಾಮದಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಅತ್ಯಚಾರ ನಡೆದಿತ್ತು (Crime News). 65 ವರ್ಷದ ಭೀಮರಾವ್ ಪ್ರಭಾಕರ್ ಕಾಂಬ್ಳೆಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಜೂನ್ 25ರಂದು ಕಾಂಬ್ಳೆ ತಪ್ಪಿತಸ್ಥನೆಂದು ಘೋಷಿಸಿದ ಕೆಲವು ದಿನಗಳ ನಂತರ, ವಿಶೇಷ ನ್ಯಾಯಾಧೀಶ ಎಸ್.ಆರ್. ಸಾಲುಂಕೆ ಸೋಮವಾರ (ಜೂನ್ 29) ಶಿಕ್ಷೆಯನ್ನು ಪ್ರಕಟಿಸಿದರು.
ಮೇ 1ರಂದು ನಸ್ರಾಪುರದಲ್ಲಿ ಅಪ್ರಾಪ್ತೆ ಮೇಲೆ ಭೀಮರಾವ್ ಪ್ರಭಾಕರ್ ಅತ್ಯಾಚಾರ ಎಸಗಿದ್ದ. ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಬಹು ನಿಬಂಧನೆಗಳ ಅಡಿಯಲ್ಲಿ ನ್ಯಾಯಾಲಯವು ಕಾಂಬ್ಳೆಯನ್ನು ದೋಷಿ ಎಂದು ತೀರ್ಪು ನೀಡಿದೆ.
ಪ್ರಾಸಿಕ್ಯೂಷನ್ ಭೀಮರಾವ್ ಪ್ರಭಾಕರ್ ವಿರುದ್ಧದ ಎಲ್ಲ ಆರೋಪಗಳನ್ನು ಸಾಬೀತುಪಡಿಸಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಅಪ್ರಾಪ್ತ ಬಾಲಕಿಯ ಅಪಹರಣ, ಹೋಟೆಲ್ ಮಾಲಕನಿಗೆ ಮಾರಾಟ, 30 ಮಂದಿಯಿಂದ 5 ದಿನ ನಿರಂತರ ಸಾಮೂಹಿಕ ಅತ್ಯಾಚಾರ
ಪ್ರಕರಣದ ವಿಚಾರಣೆ ಮೇ 21ರಂದು ಪ್ರಾರಂಭವಾಯಿತು. ಅಪರಾಧ ನಡೆದ ಎರಡು ತಿಂಗಳೊಳಗೆ ಪ್ರಕರಣ ಮುಕ್ತಾಯಗೊಂಡಿದೆ. ಇದು ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ವಿಲೇವಾರಿಯಾದ ಪ್ರಕರಣಗಳಲ್ಲಿ ಒಂದು. ಈ ಅವಧಿಯಲ್ಲಿ ನ್ಯಾಯಾಲಯವು ಪ್ರತಿದಿನ ವಿಚಾರಣೆಗಳನ್ನು ನಡೆಸಿತು. ವಿಚಾರಣೆಯ ಸೂಕ್ಷ್ಮ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯವು ವಿಚಾರಣೆಗಳನ್ನು ರಹಸ್ಯವಾಗಿ ನಡೆಸಿತು.
ವಿಶೇಷ ತನಿಖಾ ತಂಡದ ಪಾತ್ರ
ಪುಣೆ ಗ್ರಾಮಾಂತರ ಪೊಲೀಸರು ಈ ಪ್ರಕರಣಕ್ಕಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್‌ಸಿಂಗ್ ಗಿಲ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಿದ ಈ ತಂಡದಲ್ಲಿ ಆರು ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು. ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯಮಾಲಾ ಪವಾರ್ ಈ ತನಿಖೆಯ ನೇತೃತ್ವ ವಹಿಸಿದ್ದರು.
ಘಟನೆ ನಡೆದ 15 ದಿನಗಳ ಒಳಗಾಗಿ ಪೊಲೀಸರು 1,200 ಪುಟಗಳ ಚಾರ್ಜ್‌ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಸಿದ್ದರು. ಈ ಚಾರ್ಜ್‌ಶೀಟ್‌ನಲ್ಲಿ 55ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳು, ಸಂದರ್ಭೋಚಿತ ಸಾಕ್ಷ್ಯಗಳು ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಸೇರಿಸಲಾಗಿತ್ತು. ತನಿಖಾಧಿಕಾರಿಗಳು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳು, ವೈದ್ಯಕೀಯ ತಪಾಸಣಾ ವರದಿಗಳು, ವಿಧಿವಿಜ್ಞಾನ (ಫೋರೆನ್ಸಿಕ್) ವಿಶ್ಲೇಷಣೆ ಮತ್ತು ಸಾಕ್ಷಿಗಳ ಹೇಳಿಕೆಗಳ ಆಧಾರದಲ್ಲಿ ತನಿಖೆ ನಡೆಸಿದ್ದರು.
ಮೊಹರಂ ವೇಳೆ 15 ಸಾವಿರ ಜನರನ್ನು ಕೊಲ್ಲಲು ಪ್ಲಾನ್ ಮಾಡಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ
ವಿಶೇಷ ನ್ಯಾಯಾಲಯದ ಮುಂದೆ ಪ್ರಾಸಿಕ್ಯೂಷನ್ (ಸರ್ಕಾರಿ ವಕೀಲರು) ಹಲವು ವಾರಗಳ ಕಾಲ ವಿಶೇಷ ನ್ಯಾಯಾಲಯದ ಮುಂದೆ ತನ್ನ ವಾದವನ್ನು ಮಂಡಿಸಿದರು. ರಕ್ಷಣಾತ್ಮಕ ವಾದ ಮಂಡಿಸಿದ ಪ್ರತಿವಾದಿ ಪರ ವಕೀಲರು ಆರೋಪಗಳ ವಿರುದ್ಧ ವಾದಿಸಿದರು. ಆದರೆ ಕಾಂಬ್ಳೆಯನ್ನು ಅಪರಾಧಿ ಎಂದು ಘೋಷಿಸಲು ನ್ಯಾಯಾಲಯವು ಸಾಕ್ಷ್ಯಾಧಾರಗಳು ಸಾಕಷ್ಟಿವೆ ಎಂದು ಹೇಳಿತು.
ಜೂನ್ 25ರಂದು ಆತನನ್ನು ಅಪರಾಧಿ ಎಂದು ನಿರ್ಧರಿಸಿದ ನಂತರ, ನ್ಯಾಯಾಧೀಶರು ಶಿಕ್ಷೆಯ ಪ್ರಮಾಣದ ತೀರ್ಪನ್ನು ಕಾಯ್ದಿರಿಸಿದ್ದರು. ಇದೀಗ ಮರಣದಂಡನೆ ವಿಧಿಸಿ ಆದೇಶಿಸಿದ್ದಾರೆ. ಅಪರಾಧದ ಸ್ವರೂಪ ಮತ್ತು ಸಂತ್ರಸ್ತೆಯ ವಯಸ್ಸನ್ನು ಪರಿಗಣಿಸಿ ನ್ಯಾಯಾಧೀಶರು ಈ ಶಿಕ್ಷೆ ಪ್ರಕಟಿಸಿದ್ದಾರೆ.