ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Monkey Massacre: ಹುಲಿ ಹತ್ಯೆ ಬಳಿಕ ಗುಂಡ್ಲುಪೇಟೆಯಲ್ಲಿ 20ಕ್ಕೂ ಅಧಿಕ ಕೋತಿಗಳ ಮಾರಣಹೋಮ

Monkey Massacre: ದಾರಿಹೋಕರು ಚೀಲವನ್ನು ಬಿಚ್ಚಿ ನೋಡಿದ ವೇಳೆ 20ಕ್ಕೂ ಅಧಿಕ ಕೋತಿಗಳ ಕಳೇಬರಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ವಿಷಪ್ರಾಶನ ಮಾಡಿರುವ, ಇಲ್ಲವೇ ಹೊಡೆದು ಕೊಂದಿರುವ ಶಂಕೆ ವ್ಯಕ್ತವಾಗಿದೆ. ಕೋತಿಗಳ ಮೃತದೇಹಗಳು ಸಿಕ್ಕ ಪ್ರದೇಶ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದ ವ್ಯಾಪ್ತಿಗೆ ಬರುತ್ತದೆ.

ಹುಲಿ ಹತ್ಯೆ ಬಳಿಕ ಗುಂಡ್ಲುಪೇಟೆಯಲ್ಲಿ 20ಕ್ಕೂ ಅಧಿಕ ಕೋತಿಗಳ ಮಾರಣಹೋಮ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Jul 2, 2025 12:16 PM

ಚಾಮರಾಜನಗರ : ಇತ್ತೀಚಿಗೆ ಅಷ್ಟೇ ಚಾಮರಾಜನಗರ (Chamarajanagar) ಜಿಲ್ಲೆಯ ಮಲೆ ಮಹದೇಶ್ವರ (Male Mahadeshwara hills) ವನ್ಯಧಾಮದಲ್ಲಿ 5 ಹುಲಿಗಳಿಗೆ ವಿಷ ಉಣಿಸಿ (Tiger killings) ಕೊಂದ ಬರ್ಬರ ಘಟನೆ ನಡೆದಿತ್ತು. ಈ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೊಂದು ಅಂಥ ಕೃತ್ಯ ನಡೆದಿದೆ. ಗುಂಡ್ಲುಪೇಟೆ (Gundlupete) ತಾಲೂಕಿನ ಕಂದೇಗಾಲ ಸಮೀಪ ಕೋತಿಗಳ ಮಾರಣಹೋಮ (Monkey Massacre) ನಡೆಸಲಾಗಿದೆ. ಕಂದೇಗಾಲ – ಕೊಡಸೋಗೆ ರಸ್ತೆಯಲ್ಲಿ ದುಷ್ಕರ್ಮಿಗಳು ಎರಡು ಚೀಲಗಳಲ್ಲಿ ಕೋತಿಗಳ ಮೃತದೇಹಗಳನ್ನು ಕಟ್ಟಿಟ್ಟು ಅಮಾನುಷವಾಗಿ ಬಿಸಾಡಿ ಹೋಗಿದ್ದಾರೆ‌.

ದಾರಿಹೋಕರು ಚೀಲವನ್ನು ಬಿಚ್ಚಿ ನೋಡಿದ ವೇಳೆ 20ಕ್ಕೂ ಅಧಿಕ ಕೋತಿಗಳ ಕಳೇಬರಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ವಿಷಪ್ರಾಶನ ಮಾಡಿರುವ, ಇಲ್ಲವೇ ಹೊಡೆದು ಕೊಂದಿರುವ ಶಂಕೆ ವ್ಯಕ್ತವಾಗಿದೆ. ಕೋತಿಗಳ ಮೃತದೇಹಗಳು ಸಿಕ್ಕ ಪ್ರದೇಶ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದ ವ್ಯಾಪ್ತಿಗೆ ಬರುತ್ತದೆ. ಮಾಹಿತಿ ತಿಳಿದು ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವರದಿ ಬಂದ ನಂತರವಷ್ಟೇ ಕೋತಿಗಳ ಸಾವಿಗೆ ಏನು ಕಾರಣ ಎನ್ನುವುದು ತಿಳಿದುಬರಲಿದೆ.

ಈ ಪ್ರದೇಶದಲ್ಲಿ ಕೋತಿಗಳ ಸಂಖ್ಯೆಯೂ ವ್ಯಾಪಕವಾಗಿದೆ. ಸುತ್ತಮುತ್ತಲಿನ ರೈತರ ಬೆಳೆಗಳನ್ನು ಇವು ಸಾಕಷ್ಟು ಪ್ರಮಾಣದಲ್ಲಿ ಹಾಳು ಮಾಡುತ್ತಿರುವುದರಿಂದ, ಸಿಟ್ಟಿಗೆದ್ದ ಕೆಲವು ರೈತರು ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದೂ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Tigers death: ಹುಲಿಗಳ ಸಾವು, ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ