BIFFes 2026: ʻಮಹಿಳಾ ಪ್ರಧಾನ ಸಿನಿಮಾಗಳೆಲ್ಲವೂ, ಮಹಿಳಾ ಪರ ಸಿನಿಮಾಗಳಾಗಿರುವುದಿಲ್ಲʼ ಎಂದ ಲೇಖಕಿ ಸಂಧ್ಯಾರಾಣಿ
BIFFes 2026: ಲೇಖಕಿ ಸಂಧ್ಯಾರಾಣಿ ಅವರು ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳನ್ನು ಮಹಿಳಾ ಪ್ರಧಾನವೇ ಹೊರತು ಮಹಿಳಾ ಪರವಲ್ಲ ಎಂದು ವಿಮರ್ಶಿಸಿದ್ದಾರೆ. 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಿರ್ದೇಶಕ ಸಿದ್ಧಲಿಂಗಯ್ಯ ಅವರ 'ಹೇಮಾವತಿ' ಚಿತ್ರದ ಕುರಿತು ನಡೆದ ಚರ್ಚೆಯಲ್ಲಿ ಈ ಅಭಿಪ್ರಾಯವನ್ನು ಅವರು ತಿಳಿಸಿದ್ದಾರೆ.
-
"ಮಹಿಳಾ ಪ್ರಧಾನ ಚಲನಚಿತ್ರಗಳಿಗೂ, ಮಹಿಳಾ ಪರ ಚಲನಚಿತ್ರಗಳಿಗೂ ವ್ಯತ್ಯಾಸವಿದೆ. ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು ಮಹಿಳಾ ಪರ ಚಿತ್ರಗಳಿಗಿಂತ, ಮಹಿಳಾ ಪ್ರಧಾನ ಚಿತ್ರಗಳಾಗಿದ್ದವು" ಎಂದು ಲೇಖಕಿ ಮತ್ತು ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ ಅವರು ಅಭಿಪ್ರಾಯಪಟ್ಟಿದ್ದಾರೆ. 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ಸಿದ್ಧಲಿಂಗಯ್ಯ ನಿರ್ದೇಶನದ ʻಹೇಮಾವತಿʼ ಚಿತ್ರದ ಕುರಿತ ಸಂವಾದದಲ್ಲಿ ಅವರು ಭಾಗವಹಿಸಿ, ಮಾತನಾಡಿದರು.
"ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು ಮಹಿಳಾ ಪ್ರಧಾನ ಚಿತ್ರಗಳಾಗಿದ್ದವೇ ಹೊರತು, ಮಹಿಳಾ ಪರ ಚಿತ್ರಗಳಾಗಿರಲಿಲ್ಲ. ಅವರ ಚಿತ್ರಗಳ ಮಹಿಳಾ ಪಾತ್ರಗಳು ಗಂಡು ಬಯಸುವ ಪಾತ್ರಗಳಾಗಿದ್ದವು. ಚಿತ್ರದ ನಾಯಕಿಯು ʻಈ ಶತಮಾನದ ಮಾದರಿ ಹೆಣ್ಣು …ʼ ಎಂದು ಹಾಡುತ್ತಾ, ಹಾಡಿನ ಕೊನೆಯಲ್ಲಿ ತನ್ನ ಪರ್ಸ್ ಕಳೆದುಕೊಳ್ಳುತ್ತಾಳೆ. ಅದನ್ನು ಹುಡುಕಿಕೊಂಡು ತರುವುದು ಗಂಡಸರು. ಪುಟ್ಟಣ್ಣನವರು ತಮ್ಮ ಎಲ್ಲಾ ಚಿತ್ರಗಳಲ್ಲಿ ಮಹಿಳೆ ಸನಾತನ ಸಂಸ್ಕೃತಿ ಹೇಳಿದ ರೀತಿ ಇದ್ದರೆ, ಜಯ ಎಂದು ಪ್ರತಿಪಾದಿಸಿದ್ದಾರೆ. ಹಾಗಾಗಿ, ಮಹಿಳಾ ಪ್ರಧಾನ ಚಿತ್ರಗಳೆಲ್ಲಾ ಮಹಿಳಾ ಪರ ಚಿತ್ರಗಳಾಗಿರುವುದಿಲ್ಲ" ಎಂದು ಸಂಧ್ಯಾರಾಣಿ ಹೇಳಿದರು.
ಸಿದ್ಧಲಿಂಗಯ್ಯ ಅವರ ವಿಭಿನ್ನ ಸಿನಿಮಾ
ಸಂವಾದದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಚ. ಹ. ರಘುನಾಥ, "ಸಿದ್ಧಲಿಂಗಯ್ಯ ಅವರ ಚಿತ್ರಗಳಲ್ಲೇ ವಿಭಿನ್ನವಾದ ಚಿತ್ರವೆಂದರೆ ಅದು ʻಹೇಮಾವತಿʼ. ಈ ಚಿತ್ರ ಮಾಡುವ ಮೊದಲು ಅವರು ಅಷ್ಟರಲ್ಲಾಗಲೇ ʻಬಂಗಾರದ ಮನುಷ್ಯʼ ಮತ್ತು ʻಭೂತಯ್ಯನ ಮಗ ಅಯ್ಯುʼ ಎಂಬ ಎರಡು ಸಿನಿಮಾಗಳನ್ನು ನೀಡಿದ್ದರು. ಆನಂತರ ಅವರು ʻಹೇಮಾವತಿʼ ಮೂಲಕ ಹೊಸ ಸಾಹಸ ಮಾಡುವುದರ ಜೊತೆಗೆ ಹೊಸ ಸವಾಲು ಸ್ವೀಕರಿಸಿದರು" ಎಂದು ಹೇಳಿದರು.
ಸೆನ್ಸಾರ್ ಸೇರಿದಂತೆ ಸಾಕಷ್ಟು ಸವಾಲು ಇರುತ್ತಿತ್ತು
"ಹೇಮಾವತಿ ಸಿನಿಮಾದಲ್ಲಿ ರಾಮಾಯಣವನ್ನು ಅವರು ನೇರವಾಗಿ ತರದಿದ್ದರೂ, ಅದರ ಛಾಯೆ ಇತ್ತು. ಇದು ಯಾವುದೋ ಒಂದು ಊರಿನ ಕಥೆಯಾಗದೆ, ದೇಶದ ಯಾವುದೇ ಮೂಲೆಗೆ ಬೇಕಾದರೂ ಸಲ್ಲುವಂತಹ ಕಥೆಯಾಗಿತ್ತು. ಚಿತ್ರದ ಕಥೆ ಸ್ವಾತಂತ್ರ್ಯಪೂರ್ವದ್ದಾಗಿದ್ದರೂ, ಈಗಲೂ ಸಲ್ಲುವಂತಿದೆ. ರಾಮಾಯಣದಲ್ಲಿ ಸೀತೆ ಅಗ್ನಿಪರೀಕ್ಷೆ ಎದುರಿಸಿದರೆ, ಇಲ್ಲಿ ಹೇಮಾವತಿ ಮತ್ತು ಚೆನ್ನಿ ಎಂಬ ಎರಡು ಪಾತ್ರಗಳು ಬೇರೆಬೇರೆಯದೇ ರೀತಿಯಲ್ಲಿ ಅಗ್ನಿದಿವ್ಯಕ್ಕೆ ಒಳಗಾಗುತ್ತಾರೆ. ಈ ಚಿತ್ರ ಈಗ ತಯಾರಾಗಿದ್ದರೆ ಬಿಡುಗಡೆ ಕಷ್ಟವಾಗಿರುತ್ತಿತ್ತು. ಸಿದ್ಧಲಿಂಗಯ್ಯನವರು ಇನ್ನೊಂದು ಸಿನಿಮಾ ಮಾಡುವುದು ಕಷ್ಟವಾಗಿರುತ್ತಿತ್ತು. ಸೆನ್ಸಾರ್ ಸೇರಿದಂತೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಿತ್ತು" ಎಂದು ಚ. ಹ. ರಘುನಾಥ ಹೇಳಿದರು.
"ಕಿರುತೆರೆಯಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಧಾರಾವಾಹಿಗಳು ಬರುತ್ತಿವೆ. ಆದರೆ, ಈ ಧಾರಾವಾಹಿಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವುದೇ ಹೆಣ್ಣು. ಶೋಷಣೆ ವಿರುದ್ಧ ಧ್ವನಿ ಎತ್ತಿದರೆ ಅವರನ್ನು ಬೇರೆಯದೇ ರೀತಿಯಲ್ಲಿ ನೋಡುತ್ತಾರೆ. ಗಂಡಸರ ಎದುರು ನಿಂತು ಮಾತಾಡಿದರೆ, ಅವರಿಗೆ ಗಂಡುಬೀರಿ ಎಂಬ ಹಣೆಪಟ್ಟಿ ಬೀಳುತ್ತದೆ. ಆಕೆ ಮೊದಲು ತನ್ನ ಕುಟುಂಬವನ್ನು ಜಯಿಸಬೇಕು, ನಂತರ ಸಮಾಜವನ್ನು ಜಯಸಿಬೇಕು" ಎಂದು ಪತ್ರಕರ್ತೆ ಮಾನಸಾ ಚಂದ್ರಿಕಾ ಹೇಳಿದರು. ಈ ಸಂವಾದವನ್ನು ಹಿರಿಯ ಪತ್ರಕರ್ತೆ ಭಾರತಿ ಹೆಗಡೆ ನಡೆಸಿಕೊಟ್ಟರು.