Shivamogga Accident: ಶಿವಮೊಗ್ಗದಲ್ಲಿ ಭೀಕರ ಅಪಘಾತ; ಮದುವೆಯಾದ ಒಂದೂವರೆ ತಿಂಗಳಲ್ಲೇ ನವದಂಪತಿ ದುರ್ಮರಣ!
ಶಿವಮೊಗ್ಗ ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಕೇವಲ 45 ದಿನಗಳ ಹಿಂದಷ್ಟೇ ಹೊಸ ಜೀವನ ಆರಂಭಿಸಿತ್ತು. ಮದುವೆಯಾಗಿ ಹೊಸ ಬದುಕಿನ ಕನಸು ಕಂಡಿದ್ದ ಜೋಡಿಯ ದುರಂತ ಅಂತ್ಯ ಎಲ್ಲರ ಮನಕಲಕುವಂತಿದೆ.
-
Prabhakara R
Nov 22, 2026 9:49 PM
ಶಿವಮೊಗ್ಗ: ಮದುವೆಯಾದ ಒಂದೂವರೆ ತಿಂಗಳಲ್ಲೇ ನವದಂಪತಿ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ (Shivamogga Accident) ಶಿವಮೊಗ್ಗದ ಸಾಗರ ರಸ್ತೆ ಬಳಿಯ ರಿಂಗ್ರೋಡ್ನಲ್ಲಿ ನಡೆದಿದೆ. ಶರಾವತಿ ನಗರದ ನಿವಾಸಿ ಕಿರಣ್ ಜಿ. (28) ಹಾಗೂ ಸೌಮ್ಯಾ (22) ಮೃತರು.
ಕಿರಣ್ ಅವರು ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ಶರಾವತಿ ನಗರದ ಮನೆಯಿಂದ ಸೌಮ್ಯಾ ಅವರ ತವರು ಮನೆ ಗೋವಿಂದಪುರಕ್ಕೆ ಬೈಕ್ನಲ್ಲಿ ತೆರಳುತ್ತಿದ್ದಾಗ, ರಿಂಗ್ರೋಡ್ನಲ್ಲಿ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮದುವೆಯ ಸಂಭ್ರಮದಲ್ಲಿದ್ದ ಎರಡೂ ಕುಟುಂಬಗಳಲ್ಲಿ ಸಾವಿನ ಸುದ್ದಿ ಆಘಾತ ಉಂಟುಮಾಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತುಂಗಾನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.