Self Harming: ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಶವ ಪತ್ತೆ; ಪತಿ ವಿರುದ್ಧ ಕೊಲೆ ಆರೋಪ ಮಾಡಿದ ಕುಟುಂಬಸ್ಥರು
ಹುಬ್ಬಳ್ಳಿಯ ನಂದಾಗೋಕುಲ ಬಡಾವಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆಯ ಶವ ಪತ್ತೆಯಾಗಿದ್ದು, ಇದು ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕಳೆದ 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಜಯಶ್ರೀ (31) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ


ಹುಬ್ಬಳ್ಳಿ: ಹುಬ್ಬಳ್ಳಿಯ ನಂದಾಗೋಕುಲ ಬಡಾವಣೆಯಲ್ಲಿ ನೇಣು ಬಿಗಿದ (Self Harming) ಸ್ಥಿತಿಯಲ್ಲಿ ನವವಿವಾಹಿತೆಯ ಶವ ಪತ್ತೆಯಾಗಿದ್ದು, ಇದು ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕಳೆದ 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಜಯಶ್ರೀ (31) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಜಯಶ್ರೀ ಮೇ. 21 ರಂದು ಶಿವಾನಂದ್ ಜೊತೆಗೆ ಮದುವೆಯಾಗಿತ್ತು. ಶಿವಾನಂದ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಜಯಶ್ರೀ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಮದುವೆ ಬಳಿಕ ಶಿವಾನಂದ ಪ್ರೀತಿಸಿದ್ದ ಯುವತಿ, ಜಯಶ್ರೀಗೆ ತಮ್ಮ ಪ್ರೇಮದ ವಿಚಾರ ಹೇಳಿದ್ದಳಂತೆ. ಅಲ್ಲದೇ 13 ವರ್ಷದ ಪ್ರೀತಿಯನ್ನು ಮುಚ್ಚಿಟ್ಟು ನಿನ್ನನ್ನು ಮದುವೆಯಾಗಿದ್ದಾನೆ ಎಂದು ತಿಳಿಸಿದ್ದಳಂತೆ. ಇದರಿಂದ ಜಯಶ್ರೀ ಹಾಗೂ ಶಿವಾನಂದ ದಂಪತಿ ನಡುವೆ ಜೋರು ಜಗಳವಾಗಿದೆ. ನಿನ್ನೆ ರಾತ್ರಿ ಕೂಡ ಗಂಡ-ಹೆಂಡತಿ ನಡುವೆ ಗಲಾಟೆಯಾಗಿದೆ. ಈಗ ಜಯಶ್ರೀ ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮದುವೆ ಬಳಿಕ ಶಿವಾನಂದ ಜಯಶ್ರಿಗೆ ಮಾನಸಿಕವಾಗಿ ಕಿರುಕುಳ, ಹಿಂಸೆ ನೀಡುತ್ತಿದ್ದ. ಈಗ ತಮ್ಮ ಮಗಳನ್ನು ಕೊಲೆಗೈದು ನೇಣು ಬಿಗಿದಿದ್ದಾಗಿ ಜಯಶ್ರೀ ಪೋಷಕರು ದೂರಿದ್ದಾರೆ. ಹುಬ್ಬಳ್ಳಿ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ: Murder Case: ಬಾಯ್‌ಫ್ರೆಂಡ್ ಜೊತೆ ಲವ್ವಿ-ಡವ್ವಿ; ಗಂಡನನ್ನೇ ಕೊಲೆ ಮಾಡಿಸಿ ತಪ್ಪಿಸಿಕೊಂಡಿದ್ದಾಕೆ 2 ತಿಂಗಳ ಬಳಿಕ ಅರೆಸ್ಟ್
ಪತಿ ಅಕ್ರಮ ಸಂಬಂಧಕ್ಕೆ ಪತ್ನಿ ಬಲಿ
ಮದುವೆಯಾದರೂ ಬೇರೆ ಯುವತಿಯೊಂದಿಗೆ ಪತಿ ಸಲುಗೆಯಿಂದ ಇದ್ದಿದ್ದಕ್ಕೆ ಮನನೊಂದು ಮದುವೆಯಾದ ನಾಲ್ಕೇ ತಿಂಗಳಿಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾದ (Sira) ಜ್ಯೋತಿನಗರದಲ್ಲಿ ನಡೆದಿದೆ. ಪೃಥ್ವಿರಾಣಿ (20) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಶಿರಾ ತಾಲೂಕಿನ ಬುಕಾಪಟ್ಟದ ಪೃಥ್ವಿರಾಣಿ ಅದೇ ತಾಲೂಕಿನ ಪಕ್ಕದ ಊರಾದ ಕಿಲಾರ್ಧಹಳ್ಳಿಯ ಜೈಮಾರುತಿ ನಾಯಕ್ ಎಂಬಾತನನ್ನು ವಿವಾಹವಾಗಿದ್ದರು. ಮದುವೆಯ ಬಳಿಕ ಶಿರಾ ಟೌನ್‌ನ ಜ್ಯೋತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದ್ರೆ ನನ್ನ ಪ್ರೀತಿಸಿ ಬೇರೊಬ್ಬಳ ಮದುವೆಯಾಗಿದ್ದೀಯಾ ಎಂದು ಜೈಮಾರುತಿಗೆ ಬೇರೊಂದು ಯುವತಿ ಬೆದರಿಕೆ ಹಾಕುತ್ತಿದ್ದಳು. ಬೆದರಿಕೆ ಹಾಕಿದ ಯುವತಿ ಬಗ್ಗೆ ಪೃಥ್ವಿರಾಣಿ ಪತಿಯನ್ನು ಪ್ರಶ್ನಿಸಿದ್ದಳು. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ಏರ್ಪಟ್ಟಿತ್ತು. ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.