Assault Case: ಮಲಗಿದ್ದ ತಂದೆ, ತಾಯಿ, ಅಕ್ಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿ!
ನಿನ್ನೆ ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ ಹರ್ಷ ಎಂಬ ವಿದ್ಯಾರ್ಥಿ ತನ್ನ ಪೋಷಕರ ಮೇಲೆಯೇ ಈ ಕೃತ್ಯ ಎಸಗಿದ್ದಾನೆ. ಚಾಕುವಿನಿಂದ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾನೆ. ಕಾರದ ಪುಡಿ ಎರಚಿ ಮಗನ ಕೃತ್ಯ ತಡೆಯಲು ಮುಂದಾದರೂ ಆತ ಹಲ್ಲೆ ಮಾಡುವುದನ್ನು ಬಿಡಲಿಲ್ಲ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಘಟನೆ (Bengaluru Crime News) ನಡೆದಿದ್ದು, ವಿದ್ಯಾರ್ಥಿಯೊಬ್ಬ (Student) ಮನೆಯಲ್ಲಿ ಮಲಗಿದ್ದ ತಂದೆ, ತಾಯಿ, ಅಕ್ಕನಿಗೆ ಯದ್ವಾತದ್ವಾ ಚಾಕುವಿನಿಂದ (Assault Case) ಇರಿದಿದ್ದಾನೆ. ಸೋಲದೇವಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇದರಹಳ್ಳಿಯಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಮಲಗಿದ್ದ ಅಕ್ಕ, ತಾಯಿ, ತಂದೆ ಮೇಲೆ ಮಗ ಇದ್ದಕ್ಕಿದ್ದಂತೆ ಚಾಕು ಹಿಡಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಮಗನ ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ.
ವಿನಾಯಕ ಲೇಔಟ್ ನಿವಾಸಿ ಕೃಷ್ಣಮೂರ್ತಿ (51) ಪಾರ್ವತಮ್ಮ (48) ನಯನಾ (24) ಹಲ್ಲೆಗೆ ಒಳಗಾದವರು. ಮೂವರಿಗೂ ಕೂಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ ಹರ್ಷ ಎಂಬ ವಿದ್ಯಾರ್ಥಿ ತನ್ನ ಪೋಷಕರ ಮೇಲೆಯೇ ಈ ಕೃತ್ಯ ಎಸಗಿದ್ದಾನೆ. ಚಾಕುವಿನಿಂದ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾನೆ. ಕಾರದ ಪುಡಿ ಎರಚಿ ಮಗನ ಕೃತ್ಯ ತಡೆಯಲು ಮುಂದಾದರೂ ಆತ ಹಲ್ಲೆ ಮಾಡುವುದನ್ನು ಬಿಡಲಿಲ್ಲ. ವಿಚಾರ ತಿಳಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಒಡೆದು ಮನೆಯವರನ್ನು ರಕ್ಷಿಸಿದ್ದಾರೆ. ಈತ ಮಾನಸಿಕ ಅಸ್ವಸ್ಥನೇ, ಕೌಟುಂಬಿಕ ಕಲಹದ ಕಾರಣದಿಂದ ಹೀಗೆ ಮಾಡಿದ್ದಾನೆಯೇ ಎಂಬುದು ತಿಳಿದು ಬರಬೇಕಿದೆ.
ಅಪಘಾತದ ವಿಚಾರಕ್ಕೆ ತಾಯಿ- ಮಗನ ಕತ್ತು ಹಿಸುಕಿ ಕೊಲೆ
ಬೆಳಗಾವಿ: ತಾಯಿ ಮತ್ತು ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದ ಗಾನಖೋಡಿಯ ಗದ್ದೆಯಲ್ಲಿ ನಡೆದಿದೆ. ನಂದಗಾಂವ ಗ್ರಾಮದ ತಾಯಿ ಚಂದ್ರವ್ವ ಅಪ್ಪಾರಾಯ ಇಚೇರಿ (65), ಮಗ ವಿಠಲ ಅಪ್ಪಾರಾಯ ಇಚೇರಿ (42) ಮೃತರು. ಪಕ್ಕದ ಹೊಲದವರು ಜಾನುವಾರುಗಳಿಗೆ ಮೇವು ತರಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಹಲವು ತಿಂಗಳ ಹಿಂದೆ ಚಂದ್ರವ್ವ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಪರಿಹಾರ ಹಾಗೂ ಆಸ್ಪತ್ರೆ ಖರ್ಚು ನೀಡಬೇಕು ಎಂದು ಕೋರ್ಟ್ ಮೆಟ್ಟಿಲು ಹತ್ತಿದ್ದರು. ಈ ಪ್ರಕರಣ ಹಿಂಪಡೆಯುವಂತೆ ಮಾತುಕತೆ ಕೂಡ ಆಗಿತ್ತು. ಹಣ ಕೊಡುವ ದಿನ ಸಮೀಪ ಬಂದಿದ್ದರಿಂದ ಶನಿವಾರ ರಾತ್ರಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳಕ್ಕೆ ಅಥಣಿ ಡಿವೆಎಸ್‌ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐಗಳಾದ ಕುಮಾರ ಹಾಡಕರ, ಗಿರಿಮಲ್ಲಪ್ಪ ಉಪ್ಪಾರ, ಶಿವಾನಂದ ಕಾರಜೋಳ, ತನಿಖಾ ಸಹಾಯಕರಾದ ಮಲ್ಲಯ್ಯ ಹಿರೇಮಠ, ಸುಭಾಷ ಬಬಲೇಶ್ವರ ಹಾಗೂ ಬೆರಳಚ್ಚು ಹಾಗೂ ಶ್ವಾನದಳದ ತಂಡ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Road Accident: ಮೆಟ್ರೋ ಕಾಮಗಾರಿ ವೇಳೆ ದುರಂತ, ಆಟೋ ಚಾಲಕ ಸಾವು