ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟೈಗರ್‌ ಶ್ರಾಫ್‌ ಮೇಲೆ ದಾಳಿ ನಡೆಸಿದ ಆರೋಪಿ ಪಿಸ್ತೂಲ್, ಬ್ಯಾಗ್ ಹಿಡಿದು ಹೊಟೇಲ್‌ನಿಂದ ಹೊರಬಂದ ವಿಡಿಯೊ ವೈರಲ್‌

Tiger Shroff Firing Case: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲಿನ ಗುಂಡಿನ ದಾಳಿ ನಡೆಸಿದ ಆರೋಪಿಗಳಲ್ಲಿ ಒಬ್ಬ ತಾನು ತಂಗಿದ್ದ ಹೋಟೆಲ್‌ನಿಂದ ಹೊರಟು ಹೋಗುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಈ ವಿಡಿಯೊ ಹೊರಬಂದಿದೆ.

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಟ್ವಿಸ್ಟ್

ಟೈಗರ್‌ ಶ್ರಾಫ್‌ ಮತ್ತು ದಾಳಿ ನಡೆಸಿದ ಆರೋಪಿ -

Priyanka P
Priyanka P Oct 22, 2026 6:39 PM

ಮುಂಬೈ, ಅ. 22: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಅವರ ಮೇಲಿನ ಗುಂಡಿನ ದಾಳಿ ಪ್ರಕರಣದ ವಿಚಾರಣ ಎತೀವ್ರಗೊಂಡಿದ್ದು, ಒಂದೊಂದೇ ಮಾಹಿತಿ ಹೊರ ಬೀಳುತ್ತಿದೆ. ಆರೋಪಿಗಳ ಪೈಕಿ ಓರ್ವ ದಾಳಿ ನಡೆಸಲು ತಾನು ತಂಗಿದ್ದ ಹೊಟೇಲ್‌ನಿಂದ ಹೊರಟು ಹೋಗುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಕ್ಟೋಬರ್ 18ರ ದೃಶ್ಯಾವಳಿಯಲ್ಲಿ ಆರೋಪಿಯು ಸಂಜೆ 4.12ರ ಸುಮಾರಿಗೆ ಪಿಸ್ತೂಲುಗಳನ್ನು ಹೊಂದಿರುವ ಬ್ಯಾಗ್ ಹಿಡಿದು ಹೊಟೇಲ್‌ನಿಂದ ಹೊರಡುವುದನ್ನು ವಿಡಿಯೊದಲ್ಲಿ ನೋಡಬಹುದು. ನಂತರ ಇತರ ಇಬ್ಬರು ಆರೋಪಿಗಳೊಂದಿಗೆ ಸಂಜೆ 4.13ಕ್ಕೆ ಬೈಕ್‌ನಲ್ಲಿ ಹೊರಟಿದ್ದಾನೆ.

ಮುಂಬೈಯ ಜುಹು ಪ್ರದೇಶದಲ್ಲಿ ಶ್ರಾಫ್ ಅವರ ಕಾರಿನ ಮೇಲೆ ನಡೆದ ದಾಳಿಗೆ ಬಳಸಲಾದ ಬಂದೂಕುಗಳನ್ನು ಸಾಗಿಸಿದ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಈ ವಿಡಿಯೊ ಹೊರಬಂದಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಅನಿಲ್ ಪಂಡಿತ್ ಆದೇಶದ ಮೇರೆಗೆ ಗುಂಡು ಹಾರಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಶಂಕಿತರು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಪಂಜಾಬ್‌ನ ಅಮೃತಸರಕ್ಕೆ ಪ್ರಯಾಣಿಸಿದ್ದರು. ಇಬ್ಬರು ಮಹಿಳೆಯರು ರೈಲಿನ ಮೂಲಕ ಬಂದೂಕುಗಳನ್ನು ಮುಂಬೈಗೆ ಸಾಗಿಸಿ ದಾಳಿಕೋರರಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ. ಮುಂಬೈ ಅಪರಾಧ ವಿಭಾಗದ ಸುಲಿಗೆ ನಿಗ್ರಹ ಘಟಕವು ಈ ಪ್ರಕರಣದ ತನಿಖೆ ನಡೆಸುತ್ತಿದೆ.

ಇಲ್ಲಿದೆ ವಿಡಿಯೊ:



ದೆಹಲಿಯಲ್ಲಿ ನಾಲ್ವರು ಆರೋಪಿಗಳ ಬಂಧನ

ಗುಂಡಿನ ದಾಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅವರಲ್ಲಿ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ರಾಧಾ (23) ಮತ್ತು ಅಜಮ್‌ಗಢ ಜಿಲ್ಲೆಯ ಬಬಿತಾ (23) ಎಂಬ ಇಬ್ಬರು ಮಹಿಳೆಯರು ಸೇರಿದ್ದಾರೆ. ಅವರ ಜತೆ ಬಂಧಿಸಲಾದ ಇಬ್ಬರು ವ್ಯಕ್ತಿಗಳನ್ನು ಕುನಾಲ್ (21) ಮತ್ತು ಸುಮಿತ್ (19) ಎಂದು ಗುರುತಿಸಲಾಗಿದೆ.

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿಗೂ ಮುನ್ನ ಶೂಟಿಂಗ್ ಅಭ್ಯಾಸ ಮಾಡಿದ್ದ ಆರೋಪಿಗಳು

ಅಕ್ಟೋಬರ್‌ 20ರಂದು ನವದೆಹಲಿ ರೈಲು ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಸೇರಿ ಈ ನಾಲ್ವರನ್ನು ಬಂಧಿಸಲಾಗಿದೆ. ಗುಂಡು ಹಾರಿಸಿದವರಿಗೆ ಲಾಜಿಸ್ಟಿಕಲ್ ಬೆಂಬಲ ನೀಡಲು ಮುಂಬೈಯಲ್ಲಿ ತಂಗಿದ್ದ ಎನ್ನಲಾದ ಮತ್ತೊಬ್ಬ ಆರೋಪಿಯನ್ನು ಸಹ ಬಂಧಿಸಲಾಗಿದೆ.

ವರದಿಯ ಪ್ರಕಾರ, ದೆಹಲಿ ಪೊಲೀಸರು ಬಂಧಿಸಿದ್ದ ನಾಲ್ವರು ಆರೋಪಿಗಳನ್ನು ಗುರುವಾರ ಮುಂಬೈಯ ಸುಲಿಗೆ ನಿಗ್ರಹ ಘಟಕಕ್ಕೆ ಕರೆತರಲಾಗಿದೆ. ಇಬ್ಬರು ಮಹಿಳೆಯರನ್ನು ಆಜಾದ್ ಮೈದಾನ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎನ್ನಲಾಗಿದೆ.

ನಂತರ ಮುಂಬೈ ಪೊಲೀಸರು ಗುಂಡಿನ ದಾಳಿಗೆ ಸಂಬಂಧಿಸಿದಂತೆ ಹರಿಯಾಣದಿಂದ ಏಳು ಜನರನ್ನು ಬಂಧಿಸಿದ್ದಾರೆ. ಇನ್ನೂ 10 ಮಂದಿಯ ಸೆರೆ ಪೊಲೀಸರು ಬಲೆ ಬೀಸಿದ್ದಾರೆ. ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಸುಳಿವುಗಳು, ಹೆಚ್ಚುವರಿ ಶಂಕಿತರನ್ನು ಗುರುತಿಸಲು ಮತ್ತು ಬಂಧಿಸಲು ಸಹಾಯ ಮಾಡಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು, ಮುಂಬೈ ಪೊಲೀಸರು ಬುಧವಾರ ಮುಂಬೈಯ ನ್ಯಾಯಾಲಯದ ಮುಂದೆ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಹಾಜರುಪಡಿಸಿದರು. ಆರೋಪಿಗಳನ್ನು ರಾಜಸ್ಥಾನದ ಕೋಟಾದಿಂದ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಮೂವರು ಆರೋಪಿಗಳನ್ನು ಅಕ್ಟೋಬರ್ 31ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.