ಆನೆಗಳ ಬಳಕೆ ನಿಲ್ಲಿಸಿ
ಆನೆ ಶಾಂತಿಯನ್ನೂ ಕಾಡಿನ ಮೌನವನ್ನೂ ನಿಧಾನಗತಿಯನ್ನೂ ಇಷ್ಟಪಡುವ ಪ್ರಾಣಿ. ಅದನ್ನು ನಾಡಿಗೆ ತಂದು, ಭಾರ ಹೊರಿಸಿ, ನಾಟಾ ಎಳೆಸಿ, ದೇವಸ್ಥಾನಗಳಲ್ಲಿ ಚಾಮರ ಬೀಸಲು ನಿಲ್ಲಿಸಿ, ಗಣ್ಯರು ಬರುವಾಗ ಸೊಂಡಿಲೆತ್ತಿ ನಮಸ್ಕಾರ ಮಾಡಲು ಒತ್ತಾಯಿಸಿ, ಅದರ ಮರ್ಯಾದೆಯನ್ನು ಕಳೆದುಬಿಟ್ಟಿದ್ದೇವೆ.
-
ಶಿವಮೊಗ್ಗದಲ್ಲಿ ವಿಜಯ ದಶಮಿಯಂದು ನಡೆದ ದಸರಾ ಮಹೋತ್ಸವ ಮೆರವಣಿಗೆಯಲ್ಲಿ, ಅಂಬಾರಿ ಹೊತ್ತ ಆನೆ ಯದ್ವಾತದ್ವಾ ಓದಿ ದಾಂಧಲೆ ಸೃಷ್ಟಿಸಿದೆ. ಅಂಬಾರಿಯನ್ನು ಕೆಳಕ್ಕೆ ಕೆಡವಿದೆ, ವಾಹನಗಳನ್ನು ಹಾಳುಗೆಡಹಿದೆ. ಪುಣ್ಯವಶಾತ್, ಕಾಲ್ತುಳಿತವಾಗಲೀ ಜೀವಹಾನಿ ಯಾಗಲೀ ಸಂಭವಿಸಿಲ್ಲ. ಮೈಸೂರಿನ ದಸರಾ ಉತ್ಸವದ ಜಾಗತಿಕ ಪ್ರಖ್ಯಾತಿ, ಆನೆಗಳ ಅಂಬಾರಿ ಮೆರವಣಿಗೆ ವೈಭವದಿಂದ ಪ್ರೇರಿತರಾಗಿ, ಇದೀಗ ಜಿಲ್ಲಾ ಕೇಂದ್ರಗಳಲ್ಲೂ ಊರೂರುಗಳಲ್ಲೂ ದಸರೆಗೆ ಆನೆಗಳ ಬಳಕೆ ಶುರುವಾಗಿದೆ. ಅದರ ದುಷ್ಪರಿಣಾಮವೇ ಈ ಅನಾಹುತ.
ಈ ಹಿಂದೆಯೂ ಶಿವಮೊಗ್ಗದಲ್ಲಿ ಆನೆ ಬಳಕೆಯಿಂದ ಆತಂಕ ಸೃಷ್ಟಿಯಾಗಿದೆ. ಇದಕ್ಕೇನೂ ಬಹಳ ವರ್ಷಗಳ ಇತಿಹಾಸವಿಲ್ಲ. ಇದು ಶುರುವಾದ ವರ್ಷವೇ ಆನೆ ಆತಂಕ ಸೃಷ್ಟಿಸಿತ್ತು. ಹಿಂದೊಮ್ಮೆ ಗರ್ಭಿಣಿ ಆನೆಯನ್ನು ಬಳಸಿ, ಅದು ಮೆರವಣಿಗೆ ಮಧ್ಯೆಯೇ ಮರಿಗೆ ಜನ್ಮ ನೀಡಿದ ಘಟನೆ ನಡೆದಿತ್ತು. ಜನಜಂಗುಳಿ, ಪಟಾಕಿ ಸದ್ದು, ಅಂಬಾರಿ ಹೊರುವುದಕ್ಕಾಗಿ ಭಾರ ಹೊರಿಸುವ ಕಸರತ್ತು, ತಾಲೀಮು, ಸಾವಿರಾರು ಮಂದಿಯ ನಡುವೆ ಅಂಬಾರಿ ಹೊತ್ತು ಸಾಗಲು ಅಗತ್ಯವಾದ ತಾಳ್ಮೆ ಕಾಪಾಡಿಕೊಳ್ಳುವುದು ಇವೆಲ್ಲವೂ ಆನೆಗೆ ಬಹಳ ಒತ್ತಡಯುಕ್ತವಾದ ಸಂಗತಿಗಳು.
ಇದನ್ನೂ ಓದಿ: Gururaj Gantihole Column: ಬೊಕ್ಕಸಕ್ಕೆ 45000 ಕೋಟಿ ರೂ ಅಬಕಾರಿ ಗುರಿ, ಅನ್ನದಾತನಿಗೆ 50 ರು..ಭಿಕ್ಷೆ !
ಆನೆ ಶಾಂತಿಯನ್ನೂ ಕಾಡಿನ ಮೌನವನ್ನೂ ನಿಧಾನಗತಿಯನ್ನೂ ಇಷ್ಟಪಡುವ ಪ್ರಾಣಿ. ಅದನ್ನು ನಾಡಿಗೆ ತಂದು, ಭಾರ ಹೊರಿಸಿ, ನಾಟಾ ಎಳೆಸಿ, ದೇವಸ್ಥಾನಗಳಲ್ಲಿ ಚಾಮರ ಬೀಸಲು ನಿಲ್ಲಿಸಿ, ಗಣ್ಯರು ಬರುವಾಗ ಸೊಂಡಿಲೆತ್ತಿ ನಮಸ್ಕಾರ ಮಾಡಲು ಒತ್ತಾಯಿಸಿ, ಅದರ ಮರ್ಯಾದೆಯನ್ನು ಕಳೆದುಬಿಟ್ಟಿದ್ದೇವೆ.
ಭಕ್ತಾದಿಗಳು ಎಸೆಯುವ ಚಿಲ್ಲರೆ ಹೆಕ್ಕಿ ಮಾವುತನಿಗೆ ಕೊಡುವ ಆನೆಯನ್ನು ನೋಡಿದರೆ ಅಯ್ಯೋ ಅನಿಸುತ್ತದೆ. ಸಾಕಿದ ಆನೆಗಳ ಪಾಡು ನಾಯಿಗಿಂತ ಹೀನಾಯವಾಗಿದೆ. ಇನ್ನಾದರೂ ನಾವು ಆನೆಗಳನ್ನು ಕ್ಷುಲ್ಲಕ ಜೀವಿಗಳಂತೆ ನೋಡುವುದನ್ನು ನಿಲ್ಲಿಸಬೇಕು. ಶಿವಮೊಗ್ಗದಲ್ಲಿ ನಡೆದ ಘಟನೆಯಲ್ಲಿ ಆನೆಯದೇನೂ ತಪ್ಪಿಲ್ಲ. ತನಿಖೆ ನಡೆದು, ಆನೆಯನ್ನು ಬಳಸಿದವರು, ಅದಕ್ಕೆ ಅನುಮತಿ ನೀಡಿದವರು, ದಸರಾ ಸಮಿತಿ, ಮಹಾನಗರ ಪಾಲಿಕೆ- ಇವರೆಲ್ಲರ ತಲೆದಂಡ ಆಗಬೇಕು. ಮೈಸೂರಿನಲ್ಲಿ ಕೂಡ, ಟನ್ಗಟ್ಟಲೆ ಭಾರವಾದ ಅಂಬಾರಿಯ ಆನೆ ಮೇಲಿನ ಮೆರವಣಿಗೆಯ ಮರುಪರಿಶೀಲನೆ ಒಳ್ಳೆಯದು.
ಕೇರಳದಲ್ಲಿ ದೇವಾಲಯಗಳಲ್ಲಿ, ಉತ್ಸವಗಳಲ್ಲಿ ವ್ಯಾಪಕವಾಗಿ ಆನೆಗಳ ಬಳಕೆಯಿದೆ. ಆದರೆ ಅಲ್ಲಿ ಅವುಗಳಿಂದಾಗುವ ಅನಾಹುತಗಳೂ ಹೆಚ್ಚಿವೆ, ಜೀವಹಾನಿಯೂ ಆಗಿವೆ. ಹಲವು ಅಧ್ಯಯನಗಳು, ಅಂಥ ಸಾಕಾನೆಗಳ ಮಾನಸಿಕ ಸ್ಥಿತಿಗತಿಯ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಅಂಥ ಸ್ಥಿತಿ ನಮ್ಮಲ್ಲಿ ಬರುವುದು ಬೇಡ.