ಸಹೋದರಿಯನ್ನು ವರಿಸಲು ನಿರಾಕರಿಸಿದ ಮೈದುನನ ಖಾಸಗಿ ಅಂಗ ಕತ್ತರಿಸಿದ ಮಹಿಳೆ; ಅತ್ತಿಗೆಯ ಸೇಡಿನ ಕಿಚ್ಚಿಗೆ ಯುವಕನ ನರಳಾಟ
ತನ್ನ ಸಹೋದರಿಯನ್ನು ಮದುವೆಯಾಗಲು ನಿರಾಕರಿಸಿದ ಪತಿಯ ಸಹೋದರನ ಖಾಸಗಿ ಅಂಗವನ್ನೇ ಮಹಿಳೆಯೊಬ್ಬಳು ಕತ್ತರಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಗಂಭೀರ ಗಾಯಗೊಂಡಿರುವ ಯುವಕ ಯೋಗೇಶ್‌ನನ್ನು ಆರಂಭದಲ್ಲಿ ಆಗ್ರಾದ ಎಸ್.ಎಸ್. ಮೆಡಿಕಲ್ ಕಾಲೇಜಿಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಇದೀಗ ದಿಲ್ಲಿಯ ಏಮ್ಸ್‌ಗೆ ದಾಖಲಿಸಲಾಗಿದೆ.

ಎಐ ಚಿತ್ರ -

ಲಖನೌ, ಅ. 21: ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ತನ್ನ ಸಹೋದರಿಯನ್ನು ಮದುವೆಯಾಗಲು ನಿರಾಕರಿಸಿದ ಪತಿಯ ಸಹೋದರನ ಖಾಸಗಿ ಅಂಗವನ್ನೇ ಮಹಿಳೆಯೊಬ್ಬಳು ಕತ್ತರಿಸಿದ್ದಾಳೆ. ಆಗ್ರಾದ ಬರ್ಹಾನ್‌ನಲ್ಲಿ ಈ ಘಟನೆ ನಡೆದಿದೆ (UP Shocker). ಗಂಭೀರ ಗಾಯಗೊಂಡಿರುವ ಯುವಕ ಯೋಗೇಶ್‌ನನ್ನು ಆರಂಭದಲ್ಲಿ ಆಗ್ರಾದ ಎಸ್.ಎಸ್. ಮೆಡಿಕಲ್ ಕಾಲೇಜಿಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಇದೀಗ ದಿಲ್ಲಿಯ ಏಮ್ಸ್‌ಗೆ (AIIMS Delhi) ದಾಖಲಿಸಲಾಗಿದೆ. ಈಗಲೂ ಆತನ ಸ್ಥಿತಿ ಚಿಂತಾಜನಕವಾಗಿ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಉತ್ತರಾಖಂಡ ಹಲ್‌ದ್ವಾನಿಯಲ್ಲಿ ಎಂಜಿನಿಯರ್ ಆಗಿರುವ ಯೋಗೇಶ್ ದೀಪಾವಳಿ ರಜೆಯ ಹಿನ್ನೆಲೆಯಲ್ಲಿ ಬರ್ಹಾನ್‌ನ ಖೇಡಿ ಅದು ಗ್ರಾಮದಲ್ಲಿರುವ ತನ್ನ ಮನೆಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಆರೋಪಿಯನ್ನು ಯೋಗೇಶ್‌ನ ಸಹೋದರ ರಾಜ್ ಬಹದ್ದೂರ್ ಪತ್ನಿ ಅರ್ಚನಾ ಎಂದು ಗುರುತಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Physical abuse: ಹಾಸ್ಟೆಲ್ ಒಳ ನುಗ್ಗಿ ಮಲಗಿದ್ದ ಟೆಕ್ಕಿಯ ಮೇಲೆ ಲಾರಿ ಚಾಲಕನಿಂದ ಲೈಂಗಿಕ ದೌರ್ಜನ್ಯ
ಘಟನೆಯ ವಿವರ
ʼʼಅರ್ಚನಾ ತನ್ನ ಸಹೋದರಿಯನ್ನು ಯೋಗೇಶ್‌ನೊಂದಿಗೆ ಮದುವೆ ಮಾಡಿಸಬೇಕು ಎಂದುಕೊಂಡಿದ್ದಳು. ಆದರೆ ಇತ್ತೀಚೆಗೆ ಯೋಗೇಶ್‌ನ ವಿವಾಹ ಬೇರೊಬ್ಬ ಯುವತಿಯೊಂದಿಗೆ ನಿಶ್ಚಯವಾಗಿತ್ತು. ನವೆಂಬರ್‌ನಲ್ಲಿ ಮದುವೆಯ ದಿನಾಂಕವೂ ನಿಗದಿಯಾಗಿತ್ತು. ಇದರಿಂದ ಅಸಮಾಧಾನಗೊಂಡ ಅರ್ಚನಾ ಈ ಕೃತ್ಯ ಎಸಗಿದ್ದಾಳೆ. ಸೋಮವಾರ (ಅಕ್ಟೋಬರ್ 20) ರಾತ್ರಿ ದೀಪಾವಳಿ ಪೂಜೆ ಮುಗಿದ ಬಳಿಕ ಮಾತನಾಡಲು ಯೋಗೇಶ್‌ನನ್ನು ತನ್ನ ರೂಮ್‌ಗೆ ಕರೆದು ಹರಿತವಾದ ಚಾಕುವಿನಿಂದ ದಾಳಿ ನಡೆಸಿದ್ದಾಳೆʼʼ ಎಂದು ಮನೆಯವರು ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದು ನೋವಿನಿಂದ ನರಳಾಡುತ್ತಿದ್ದ ಯೋಗೇಶ್‌ನನ್ನು ಗಮನಿಸಿದ ಮನೆಯವರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರು. ಈ ವೇಳೆಗಾಗಲೇ ಸಾಕಷ್ಟು ರಕ್ತಸ್ರಾವವಾಗಿತ್ತು. ಅದಾದ ಬಳಿಕ ರಾಜ್ ಬಹದ್ದೂರ್ ತನ್ನ ಪತ್ನಿ ಅರ್ಚನಾ ಮತ್ತು ಮೂವರು ಮಕ್ಕಳನ್ನು ಆಕೆಯ ತವರಿಗೆ ಕಳುಹಿಸಿದ್ದಾನೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಪ್ರಯಾಗ್‌ರಾಜ್‌ನಲ್ಲೂ ಇಂತಹದ್ದೇ ಘಟನೆ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲೂ ಇಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ತನ್ನ ತಂಗಿಯನ್ನು ಪ್ರೀತಿಸಿ ಬಳಿಕ ವಿವಾಹವಾಗಲು ನಿರಾಕರಿಸಿದ ಪತಿಯ ತಮ್ಮನ ಖಾಸಗಿ ಆಂಗವನ್ನು ಅಕ್ಟೋಬರ್ 16ರಂದು ಮಹಿಳೆಯೊಬ್ಬಳು ಕತ್ತರಿಸಿದ್ದಾಳೆ. ಗಾಯಗೊಂಡ ಯುವಕನನ್ನು 20 ವರ್ಷದ ಉಮೇಶ್ ಕುಮಾರ್ ಮತ್ತು ಆರೋಪಿಯನ್ನು ಆತನ ಅತ್ತಿಗೆ ಮಂಜು ಎಂದು ಗುರುತಿಸಲಾಗಿದೆ. ಪ್ರಯಾಗ್‌ರಾಜ್‌ನ ಮಲ್ಖಾನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ಆತ ಎಸ್.ಆರ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಂಜು ತಲೆ ಮರೆಸಿಕೊಂಡಿದ್ದಾಳೆ.
ಕೆಲವು ವರ್ಷಗಳ ಹಿಂದೆ ಉಮೇಶ್‌ನ ಸಹೋದರ ಉದಯ್‌ನ ವಿವಾಹ ಮಂಜು ಜತೆ ನೆರವೇರಿತ್ತು. ಆಕೆಯ ಸಹೋದರಿಯೊಂದಿಗೆ ಉಮೇಶ್ ಓಡಾಡಿಕೊಂಡಿದ್ದ. ಇಬ್ಬರು 3 ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಉದಯ್ ಆಕೆಯನ್ನು ವರಿಸಲು ನಿರಾಕರಿಸಿ ಬೇರೊಬ್ಬ ಯುವತಿಯನ್ನು ಮದುವೆಯಾಗಲು ಸಿದ್ಧತೆಯಲ್ಲಿ ತೊಡಗಿದ್ದ. ಇದರಿಂದ ಮಂಜು ಸಹೋದರಿ ಖಿನ್ನತೆಗೆ ಜಾರಿದ್ದಳು. ಹೀಗಾಗಿ ಮಂಜು ಸೇಡು ತೀರಿಸಿಕೊಳ್ಳಲು ನಿರ್ಧರಿಸಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಉಮೇಶ್‌ನ ಕೋಣೆಗೆ ನುಗ್ಗಿ ಚೂರಿಯಿಂದ ಉಮೇಶ್‌ನ ಖಾಸಗಿ ಅಂಗಕ್ಕೆ ಚುಚ್ಚಿ ಪರಾರಿಯಾಗಿದ್ದಳು.