ಐಸಿಸಿ ಮಹಿಳಾ ಒಡಿಐ ಬ್ಯಾಟರ್ಸ್ ಶ್ರೇಯಾಂಕದಲ್ಲಿ ಸ್ಮೃತಿ ಮಂಧಾನಾಗೆ ಅಗ್ರ ಸ್ಥಾನ!
ಭಾರತ ಮಹಿಳಾ ಕ್ರಿಕೆಟ್ ತಂಡದ ಉಪ ನಾಯಕಿ ಸ್ಮೃತಿ ಮಂಧಾನಾ ಅವರು ಐಸಿಸಿ ಮಹಿಳಾ ಏಕದಿನ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ. ಇಂಗ್ಲೆಂಡ್ ನಾಯಕಿ ನ್ಯಾಟ್ ಸೀವರ್ ಬ್ರಂಟ್ ಅವರಿಗಿಂತ ಮಂಧಾನಾ 83 ಪಾಯಿಂಟ್ಸ್ ಹೆಚ್ಚು ಹೊಂದಿದ್ದಾರೆ.

ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಸ್ಮೃತಿ ಮಂಧಾನಾಗೆ ಅಗ್ರ ಸ್ಥಾನ. -

ನವದೆಹಲಿ: ಭಾರತ ಮಹಿಳಾ ತಂಡದ ಉಪ ನಾಯಕಿ ಸ್ಮೃತಿ ಮಂಧಾನಾ (Smriti Mandhana) ಅವರು ಐಸಿಸಿ ಮಹಿಳೆಯದ ಒಡಿಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ (ICC women ODI Ranking) ಅಗ್ರ ಸ್ಥಾನದಲ್ಲಿ ಉಳಿಯುವ ಮೂಲಕ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ. ಇವರು ಇಂಗ್ಲೆಂಡ್ ನಾಯಕಿ ನ್ಯಾಟ್ ಸೀವರ್ ಬ್ರಂಟ್ (Sciver-Brunt) ಅವರಿಗಿಂತಲೂ 83 ರೇಟಿಂಗ್ ಪಾಯಿಂಟ್ಸ್ ಅಧಿಕ ಹೊಂದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಸ್ಮೃತಿ, ಭಾರತ ತಂಡದಲ್ಲಿ ಅತ್ಯಂತ ಸ್ಥಿರ ಪ್ರದರ್ಶನವನ್ನು ತೋರುವ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸ್ಮೃತಿ ಮಂಧಾನಾ ಸತತ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ. ಇಂದೋರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಕೊನೆಯ ಪಂದ್ಯದಲ್ಲಿ 88 ರನ್‌ಗಳ ಇನಿಂಗ್ಸ್ ಆಡಿದ್ದರು. ಆದರೂ ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ಕೇವಲ 4 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದ ಒತ್ತಡದ ಸನ್ನಿವೇಶದಲ್ಲಿ ಎಡಗೈ ಬ್ಯಾಟರ್ ತಮ್ಮ ಆಟದ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸೆಣಿಯಲ್ಲಿ ಅಸಾಧಾರಣ ಪ್ರದರ್ಶನವನ್ನು ತೋರಿದ್ದರು. ಇದರ ಫಲವಾಗಿ ಅವರು ಸೆಪ್ಟಂಬರ್ ತಿಂಗಳ ಆಟಗಾರ್ತಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
Alyssa Healy: ಇಂಗ್ಲೆಂಡ್ ವಿರುದ್ಧದ ಪಂದ್ಯದಿಂದ ಆಸ್ಟ್ರೇಲಿಯಾ ನಾಯಕಿ ಅಲಿಸಾ ಹೀಲಿ ಔಟ್
ಮೂರನೇ ಸ್ಥಾನಕ್ಕೆ ಅಲಿಸಾ ಹೀಲಿ
ಇತರ ಬ್ಯಾಟರ್‌ಗಳ ಸುಧಾರಣೆಯನ್ನು ನೋಡುವುದಾದರೆ, ಆಸ್ಟ್ರೇಲಿಯಾ ನಾಯಕಿ ಅಲಿಸಾ ಹೀಲಿ ವಿಶ್ವಕಪ್ ಟೂರ್ನಿಯಲ್ಲಿ ಸತತ ಶತಕಗಳನ್ನು ಬಾರಿಸಿದ ಬಳಿಕ ಒಂದು ಸ್ಥಾನ ಏರಿಕೆಯಾಗಿ ಒಟ್ಟಾರೆ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದ ಟಾಜ್ಮಿನ್ ಬ್ರಿಟ್ಸ್ ಬ್ಯಾಟಿಂಗ್‌ನಲ್ಲಿ ಸ್ಥಿರ ಕೊಡುಗೆಗಳಿಂದಾಗಿ ಒಂಬತ್ತನೇ ಸ್ಥಾನಕ್ಕೆ ಏರಿದ್ದಾರೆ.
ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೂರು ಸ್ಥಾನಗಳಲ್ಲಿ ಏರಿಕೆ ಕಂಡು 15ನೇ ಶ್ರೇಯಾಂಕಕ್ಕೆ ಬಂದಿದ್ದಾರೆ. ಆಸ್ಟ್ರೇಲಿಯಾ ಓಪನರ್ ಫೋಬ್ ಲಿಚ್‌ಫೀಲ್ಡ್ ಅವರು ಐದು ಸ್ಥಾನಗಳಲ್ಲಿ ಏರಿಕೆ ಕಂಡು 17ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಇಂಗ್ಲೆಂಡ್ ಹಿರಿಯ ಬ್ಯಾಟರ್ ಹೀದರ್ ನೈಟ್, ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ಆಧಾರದ ಮೇಲೆ 17ನೇ ಸ್ಥಾನಗಳಲ್ಲಿ ಏರಿಕೆ ಕಂಡು, 18ನೇ ಶ್ರೇಯಾಂಕವನ್ನು ಅಲಂಕರಿಸಿದ್ದಾರೆ.
Women's World Cup 2025: ಇಂಗ್ಲೆಂಡ್ ಎದುರಿನ ಸೋಲಿಗೆ ನಾನೇ ಕಾರಣ; ಸ್ಮೃತಿ ಮಂಧಾನ
ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟ ದೀಪ್ತಿ ಶರ್ಮಾ
ಬೌಲಿಂಗ್ ಶ್ರೇಯಾಂಕದಲ್ಲಿಯೂ ಮಹತ್ವದ ಬದಲಾವಣೆಗಳಾಗಿವೆ. ಭಾರತದ ಆಫ್ ಸ್ಪಿನ್ನರ್ ದೀಪ್ತಿ ಶರ್ಮಾ ಅವರು ಮೂರು ಸ್ಥಾನಗಳಲ್ಲಿ ಏರಿಕೆ ಕಂಡು, ಒಟ್ಟಾರೆ ಬೌಲರ್‌ಗಳ ಶ್ರೇಯಾಂಕದಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ 2025ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅವರು ಆಡಿದ 5 ಪಂದ್ಯಗಳಿಂದ 13 ವಿಕೆಟ್‌ಗಳನ್ನು ಕಬಳಿಸಿದ್ದರು. ಇಂಗ್ಲೆಂಡ್ ಎಡಗೈ ಸ್ಪಿನ್ನರ್ ಸೋಫಿಯಾ ಎಕ್ಲೆಸ್ಟೋನ್ ಅವರು ಬೌಲರ್‌ಗಳ ಪಟ್ಟಿಯಲ್ಲಿಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಆಸ್ಟ್ರೇಲಿಯಾದ ಸ್ಪಿನ್ನರ್ ಅಲಾನಾ ಕಿಂಗ್ ಎರಡು ಸ್ಥಾನಗಳಲ್ಲಿ ಏರಿಕೆ ಕಂಡು ಏಳನೇ ಶ್ರೇಯಾಂಕಕ್ಕೆ ಬಂದಿದ್ದಾರೆ. ಪಾಕಿಸ್ತಾನದ ನಶ್ರಾ ಸುಂಧು, ಸಾದಿಯಾ ಇಕ್ಬಾಲ್ ಮತ್ತು ಫಾತಿಮಾ ಸನಾ ಎಲ್ಲರೂ ಗಮನಾರ್ಹ ಏರಿಕೆ ಕಂಡು ಕ್ರಮವಾಗಿ 11ನೇ, 14 ಮತ್ತು 24ನೇ ಸ್ಥಾನಗಳನ್ನು ಅಲಂಕರಿಸಿದ್ದಾರೆ.