ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Election Results 2025: 27 ವರ್ಷಗಳ ಬಿಜೆಪಿಯ ವನವಾಸ ಅಂತ್ಯ; ಪ್ರಚಂಡ ಗೆಲುವಿಗೆ ಕಾರ್ಯಕರ್ತರ ಸಂಭ್ರಮಾಚರಣೆ

ಫೆ. 5ರಂದು ನಡೆದ ಹೊಸದಿಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬಹುತೇಕ ಅಂತ್ಯಗೊಂಡಿದ್ದು, ಬಿಜೆಪಿ ಅಧಿಕಾರಕ್ಕೆ ಮರಳಿದೆ. ಸುಮಾರು 27 ವರ್ಷಗಳ ಬಳಿಕ ಕೇಸರಿ ಪಡೆ ರಾಷ್ಟ್ರ ರಾಜಧಾನಿಯಲ್ಲಿ ಗದ್ದುಗೆಗೆ ಏರಿದ್ದು, ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ದಿಲ್ಲಿಯಲ್ಲಿ ಪ್ರಚಂಡ ಗೆಲುವು; ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

Profile Ramesh B Feb 8, 2025 4:40 PM

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ (Delhi Election Result 2025) ಪ್ರಕಟವಾಗುತ್ತಿದ್ದು, ಸ್ಪಷ್ಟ ಬಹುಮತ ಪಡೆದ ಬಿಜೆಪಿ (BJP) ಬರೋಬ್ಬರಿ 27 ವರ್ಷಗಳ ಬಳಿಕ ಅಧಿಕಾರಕ್ಕೆ ಮರಳಿದೆ. 70 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 47 ಕಡೆಗಳಲ್ಲಿ ಗೆಲುವು ಸಾಧಿದ್ದು, ಆಪ್‌ (AAP) 23 ಸೀಟ್‌ಗೆ ಸೀಮಿತವಾಗಿದೆ. ಕಾಂಗ್ರೆಸ್‌ (Congress) ಸತತ 3ನೇ ಬಾರಿ ಸೊನ್ನೆ ಸುತ್ತಿದ್ದು, ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಡ್ರಮ್ಸ್‌, ಡೋಲು ಬಾರಿಸುತ್ತ ಬಿಜೆಪಿ ಕಚೇರಿ ಎದುರು ಡ್ಯಾನ್ಸ್‌ ಮಾಡುತ್ತಿದ್ದಾರೆ. ʼʼಜೈ ಶ್ರೀರಾಮʼʼ ಘೋಷವಾಕ್ಯ ಮುಗಿಲು ಮುಟ್ಟಿದೆ.

ಶನಿವಾರ (ಫೆ. 8) ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಬೆಳಗ್ಗೆ 10 ಗಂಟೆಗೆ ಕಾರ್ಯಕರ್ತರು ಬಿಜೆಪಿ ಕಚೇರಿಯ ಹೊರಗೆ ಜಮಾಯಿಸಿ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡರು. ತಾವರೆ ಚಿಹ್ನೆ ಹೊಂದಿರುವ ಧ್ವಜ ಹಿಡಿದ ಕಾರ್ಯಕರ್ತರ ಜಯಘೋಷ ಎಲ್ಲೆಡೆ ಅನುರಣಿಸಿದೆ.



ಸಂಸದ, ಹಿರಿಯ ನಾಯಕ ಹರ್ಷ ಮಲ್ಹೋತ್ರಾ ಅವರು ಬಿಜೆಪಿ ಕಚೇರಿಗೆ ಆಗಮಿಸಿ ಕಾರ್ಯಕರ್ತರೊಂದಿಗೆ ಗೆಲುವನ್ನು ಸಂಭ್ರಮಿಸಿದ್ದಾರೆ. ʼʼದಿಲ್ಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನುವ ಆತ್ಮವಿಶ್ವಾಸ ನಮಗೆ ಮೊದಲಿನಿಂದಲೇ ಇತ್ತು. ಇದರ ಸಂಪೂರ್ಣ ಶ್ರೇಯಸ್ಸು ಪ್ರಧಾನಿ ಮೋದಿ ಮತ್ತು ಅವರ ಯೋಜನೆಗಳಿಗೆ ಸಲ್ಲುತ್ತದೆ. ಜತೆಗೆ ಪಕ್ಷವನ್ನು ಗೆಲ್ಲಲು ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರಿಗೆ ಕ್ರೆಡಿಟ್ ಸಲ್ಲುತ್ತದೆ. ತಂಡದ ಕೆಲಸ ಮತ್ತು ಕಠಿಣ ಪರಿಶ್ರಮವು ಫಲ ನೀಡುತ್ತದೆ ಎನ್ನುವುದಕ್ಕೆ ಈ ಗೆಲುವು ಸಾಕ್ಷಿʼʼ ಎಂದು ಅವರು ತಿಳಿಸಿದ್ದಾರೆ.

ಆಮ್‌ ಆದ್ಮಿ ಪಾರ್ಟಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಸಚ್‌ದೇವ, ʼʼಜನರ ಬಳಿಗೆ ತೆರಳುತ್ತೇನೆ. ಜನರು ಒಪ್ಪಿಗೆ ನೀಡಿದ ಬಳಿಕವಷ್ಟೇ ನಾನು ಮುಖ್ಯಮಂತ್ರಿ ಪಟ್ಟಕ್ಕೆ ಏರುತ್ತೇನೆ ಎಂದು ಕೇಜ್ರಿವಾಲ್‌ ಹೇಳಿದ್ದರು. ಆದರೆ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿದ ಅವರನ್ನು ಮತದಾರರು ತಿರಸ್ಕರಿಸಿದ್ದಾರೆʼʼ ಎಂದು ಅಭಿಪ್ರಾಯಪಟ್ಟಿದ್ದಾರೆ. ʼʼಸುಮಾರು 27 ವರ್ಷಗಳ ಬಿಜೆಪಿಯ ವನವಾಸ ದಿಲ್ಲಿಯಲ್ಲಿ ಮುಕ್ತಾಯವಾಗಿದೆʼʼ ಎಂದೂ ಅವರು ಈ ಗೆಲುವನ್ನು ಬಣ್ಣಿಸಿದ್ದಾರೆ.



ಪಟಾಕಿ ಸಿಡಿಸಿ, ಸಿಹಿ ಹಂಚಿ, ಬೈಕ್‌ ರ‍್ಯಾಲಿ ನಡೆಸಿ ಕಾರ್ಯಕರ್ತರು ತಮ್ಮ ಗೆಲುವನ್ನು ಸಂಭ್ರಮಿಸಿದ್ದಾರೆ. ʼʼ10 ವರ್ಷಗಳ ಕಾಲ ಆಪ್‌ ತಮ್ಮನ್ನು ದೋಚಿದೆ ಎನ್ನುವ ಸತ್ಯವನ್ನು ದಿಲ್ಲಿಯ ಜನರು ಈಗ ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ನಗರದ ಅಭಿವೃದ್ದಿಗಾಗಿ ಶ್ರಮಿಸುವ ಬಿಜೆಪಿಗೆ ಮತ ಚಲಾಯಿಸಿದ್ದಾರೆʼʼ ಎಂದು ಹರ್ಷ ಮಲ್ಹೋತ್ರಾ ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: Aravind Kejriwal: ಜನಾದೇಶವನ್ನು ಒಪ್ಪಿಕೊಳ್ಳುತ್ತೇನೆ- ಅರವಿಂದ ಕೇಜ್ರಿವಾಲ್ ಫಸ್ಟ್‌ ರಿಯಾಕ್ಷನ್‌

ಬಿಜೆಪಿ ನಾಯಕರಾದ ಪ್ರವೀಣ್‌ ಶಂಕರ್‌ ಕಪೂರ್‌, ಪಾಂಡ ಅವರೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಪ್ರಧಾನಿ ಮೋದಿ ಅವರ ಕಾರ್ಯದಲ್ಲಿ ನಂಬಿಕೆ ಇಟ್ಟು ಮತದಾರರು ಹಕ್ಕು ಚಲಾಯಿಸಿದ್ದು, ಅವರ ನಂಬಿಕೆ ಚ್ಯುತಿ ತರದಂತೆ ಕಾರ್ಯ ನಿರ್ವಹಿಸುವುದಾಗಿ ಮುಖಂಡರು ಭರವಸೆ ನೀಡಿದ್ದಾರೆ.