ದಳಪತಿ ಗೆಲುವಿಗೆ ರಾಹುಲ್ ಗಾಂಧಿ ಅಭಿನಂದನೆ; ಟಿವಿಕೆ ಜೊತೆ ಸೇರಲು ಡಿಎಂಕೆಯೊಂದಿಗಿನ ಮೈತ್ರಿ ಮುರಿಯುತ್ತಾ ಕಾಂಗ್ರೆಸ್?
ಭಾರಿ ಗದ್ದಲದ ನಡುವೆ ಅಧಿಕಾರದ ಗದ್ದುಗೆ ಏರಲು ಈಗ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕ ದಳಪತಿ ವಿಜಯ್ ಅವರಿಗೆ ಬಹುಮತದ ಸವಾಲು ಎದುರಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಭಾಶಯ ಸಂದೇಶಗಳನ್ನು ಅವರಿಗೆ ಕಳುಹಿಸಿದ್ದು, ಕಾಂಗ್ರೆಸ್ ಮತ್ತು ಟಿವಿಕೆ ಮೈತ್ರಿ ಮಾಡಿಕೊಳ್ಳುತ್ತದೆ ಎನ್ನಲಾಗುತ್ತಿದೆ.
ಸಂಗ್ರಹ ಚಿತ್ರ -
ಚೆನ್ನೈ: ತಮಿಳುನಾಡಿನ (tamilnadu) ವಿಧಾನ ಸಭಾ ಚುನಾವಣೆಯಲ್ಲಿ (assembly election) ಭರ್ಜರಿ ಗೆಲುವು ಸಾಧಿಸಿರುವ ನಟ ವಿಜಯ್ ದಳಪತಿ (Thalapathy Vijay) ಅವರ ಪಕ್ಷಕ್ಕೆ ಸರ್ಕಾರ ರಚನೆಗೆ ಬಹುಮತದ ಸವಾಲು ಎದುರಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕ (congress leader) ರಾಹುಲ್ ಗಾಂಧಿ (rahul gandhi) ಅವರು ವಿಜಯ್ ಜೊತೆ ಮಾತನಾಡಿ ಶುಭ ಹಾರೈಸಿರುವುದಾಗಿ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎನ್ನುವ ಊಹಾಪೋಹಗಳ ನಡುವೆಯೇ ರಾಹುಲ್ ಗಾಂಧಿ ಅವರ ಅಭಿನಂದನಾ ಸಂದೇಶ ವಿಜಯ್ ಅವರನ್ನು ತಲುಪಿದೆ.
ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದು ಭರ್ಜರಿ ಗೆಲುವು ಸಾಧಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಗೆಲುವಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸೋಮವಾರ ನಟ ವಿಜಯ್ ಅವರನ್ನು ಅಭಿನಂದಿಸಿದರು. ಅಲ್ಲದೇ ತಮಿಳುನಾಡು ವಿಜಯ್ ಅವರ ಪಕ್ಷವನ್ನು ಬೆಂಬಲಿಸುವುದು ಯುವಕರ ಹೆಚ್ಚುತ್ತಿರುವ ಧ್ವನಿಯ ಪ್ರತಿಬಿಂಬವಾಗಿದೆ ಎಂದು ಹೇಳಿದರು.
ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಈ ಕುರಿತು ಹೇಳಿಕೊಂಡಿದ್ದು, ನಾನು ತಿರು ವಿಜಯ್ ಅವರೊಂದಿಗೆ ಮಾತನಾಡಿದ್ದೇನೆ. ಟಿವಿಕೆಯ ಅದ್ಭುತ ಫಲಿತಾಂಶಕ್ಕಾಗಿ ಅವರನ್ನು ಅಭಿನಂದಿಸಿದ್ದೇನೆ. ಈ ಜನಾದೇಶವು ಯುವಜನರ ಹೆಚ್ಚುತ್ತಿರುವ ಧ್ವನಿಯನ್ನು ಪ್ರತಿಬಿಂಬಿಸುತ್ತದೆ. ಅದನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಭಿಯಾನಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ತಮಿಳುನಾಡು ಮತ್ತು ಪುದುಚೇರಿಯ ಜನರನ್ನು ರಕ್ಷಿಸಲು ಬದ್ಧವಾಗಿದೆ. ಅದಕ್ಕಾಗಿ ತನ್ನ ಸೇವೆಯನ್ನು ಮುಂದುವರಿಸುವುದಾಗಿ ಪುನರುಚ್ಚರಿಸುತ್ತೇನೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಅಭಿನಂದನಾ ಸಂದೇಶ ಬಂದ ಮೇಲೆ ತಮಿಳುನಾಡಿನಲ್ಲಿ ಟಿವಿಕೆ ಪಕ್ಷದ ಸರ್ಕಾರ ರಚನೆಗೆ ಕಾಂಗ್ರೆಸ್ ಸಹಾಯ ಮಾಡಬಹುದು ಎನ್ನಲಾಗುತ್ತಿದೆ. ಟಿವಿಕೆ ಪಕ್ಷವು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ ಪಕ್ಷ ಬಹುಮತದ ಗಡಿ ದಾಟಲು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಇತರ ಪಕ್ಷಗಳೊಂದಿಗೆ ಟಿವಿಕೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದ ಟಿವಿಕೆ ನಾಯಕ ವಿಜಯ್ ಅವರು ತಿರುಚಿರಾಪಳ್ಳಿ (ಪೂರ್ವ) ಮತ್ತು ಪೆರಂಬೂರು ಎರಡೂ ಸ್ಥಾನಗಳಲ್ಲಿ ಗೆದಿದ್ದು, ಅವರ ಪಕ್ಷ ಒಟ್ಟು 108 ಸ್ಥಾನಗಳನ್ನು ಗೆದ್ದಿದೆ. 234 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ 118 ಬಹುಮತ ಬೇಕಾಗಿದ್ದು, ಟಿವಿಕೆಗೆ ಇನ್ನು 10 ಸ್ಥಾನಗಳ ಬೆಂಬಲದ ಅಗತ್ಯವಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿ ಮಾಡಿಕೊಂಡರೂ ಎರಡೂ ಪಕ್ಷಗಳು ಒಟ್ಟು 64 ಸ್ಥಾನಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ. ಇದರಲ್ಲಿ ಕಾಂಗ್ರೆಸ್ ಪಾಲು ಕೇವಲ ಐದು.
ಬಂಗಾಳದಲ್ಲಿ ಸರ್ಕಾರ ರಚಿಸಲು ಬಿಜೆಪಿ ಸಜ್ಜು; ಮುಖ್ಯಮಂತ್ರಿ ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ?
ಟಿವಿಕೆ ಆಡಳಿತ ನಡೆಸುವ ನಿರ್ಧಾರ ಮಾಡಿದರೆ ನಟ ವಿಜಯ್ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಟಿವಿಕೆಯು ಸರ್ಕಾರ ರಚನೆಗೆ ಸಣ್ಣ ಪಕ್ಷಗಳ ಬೆಂಬಲ ಪಡೆಯಬಹುದು ಅಥವಾ ಡಿಎಂಕೆ ಮತ್ತು ಟಿವಿಕೆ ಜೊತೆ ಸೇರಲೂ ಬಹುದು. ಒಂದು ವೇಳೆ ಟಿವಿಕೆಯನ್ನು ಕಾಂಗ್ರೆಸ್ ಬೆಂಬಲಿಸಲು ಬಯಸಿದರೆ ಅದು ಡಿಎಂಕೆ ಮೈತ್ರಿಕೂಟವನ್ನು ಕೈಬಿಡುವ ಯೋಜನೆ ಕೂಡ ಹೊಂದಿದೆ. ಒಟ್ಟಿನಲ್ಲಿ ಈಗ ತಮಿಳುನಾಡು ರಾಜಕೀಯ ಸಾಕಷ್ಟು ಅಚ್ಚರಿಯ ಘಟನೆಗಳಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.