ಇರಾನ್ ಯುದ್ಧದ ಮಧ್ಯೆ ದಾರಿ ತಪ್ಪಿಸುವ ಪೋಸ್ಟ್: ಯುಎಇಯಲ್ಲಿ 19 ಮಂದಿ ಭಾರತೀಯರ ಬಂಧನ
Indians Arrested in UAE: ಮಧ್ಯಪ್ರಾಚ್ಯ ಸಂಘರ್ಷದ ಮಧ್ಯೆ ದಾರಿತಪ್ಪಿಸುವ, ಕಟ್ಟುಕಥೆ ಹೊಂದಿರುವ ವಿಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ 19 ಮಂದಿ ಭಾರತೀಯರನ್ನು ಬಂಧಿಸಿದೆ. ಒಟ್ಟು 35 ಮಂದಿಯನ್ನು ಈ ಸಂಬಂಧ ವಶಕ್ಕೆ ಪಡೆಯಲಾಗಿದೆ.
ಸಾಂದರ್ಭಿಕ ಚಿತ್ರ -
ದುಬೈ, ಮಾ. 16: ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ಇರಾನ್‍ನೊಂದಿಗೆ ಯುದ್ಧ (Iran War) ಮಾಡುತ್ತಿದೆ. ಈ ಸಂಘರ್ಷವು ಗಲ್ಫ್ ದೇಶಗಳಿಗೂ ತಟ್ಟಿದೆ. ಈ ಮಧ್ಯೆ, ಜನರನ್ನು ದಾರಿ ತಪ್ಪಿಸುವ, ಕಟ್ಟುಕಥೆ ಹೊಂದಿರುವ ವಿಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (United Arab Emirates) 35 ಮಂದಿಯನ್ನು ಬಂಧಿಸಿದೆ. ಬಂಧಿತರಲ್ಲಿ 19 ಮಂದಿ ಭಾರತೀಯರೂ ಸೇರಿದ್ದಾರೆ.
ಅಧಿಕಾರಿಗಳು ಪದೇ ಪದೆ ಎಚ್ಚರಿಕೆಗಳನ್ನು ನೀಡಿದ್ದು, ದಾಳಿಯ ಸ್ಥಳಗಳನ್ನು ಚಿತ್ರೀಕರಿಸಬೇಡಿ, ದೃಶ್ಯಗಳನ್ನು ಹಂಚಿಕೊಳ್ಳಬೇಡಿ ಅಥವಾ ಪರಿಶೀಲಿಸದ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.
ಮಾರ್ಚ್ 15ರಂದು, ಯುಎಇ ಅಟಾರ್ನಿ ಜನರಲ್ ಡಾ. ಹಮದ್ ಸೈಫ್ ಅಲ್ ಶಮ್ಸಿ ವಿವಿಧ ರಾಷ್ಟ್ರಗಳ 25 ಮಂದಿಯನ್ನು ಬಂಧಿಸಲು ಆದೇಶಿಸಿದರು ಮತ್ತು ಅವರ ವಿರುದ್ಧ ತ್ವರಿತ ವಿಚಾರಣೆ ನಡೆಸುವಂತೆ ಸೂಚಿಸಿದರು.
ಬೆಂಜಮಿನ್ ನೆತನ್ಯಾಹು ಬದುಕಿದ್ದಾರೆ; ಇಸ್ರೇಲ್ ಪ್ರಧಾನಿ ಹಂಚಿಕೊಂಡ ವಿಡಿಯೊ ಮೂಲಕ ಸಿಕ್ತು ಪುರಾವೆ
ಇತ್ತೀಚಿನ ಪಟ್ಟಿಯಲ್ಲಿ 17 ಭಾರತೀಯರು ಸೇರಿದಂತೆ ವಿವಿಧ ರಾಷ್ಟ್ರೀಯತೆ ಹೊಂದಿರುವ 25 ವ್ಯಕ್ತಿಗಳ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಅವರನ್ನು ಶನಿವಾರ ಗುರುತಿಸಿ ಬಂಧಿಸಲು ಆದೇಶಿಸಲಾಗಿದೆ.
ಸಾರ್ವಜನಿಕ ಅವ್ಯವಸ್ಥೆಯನ್ನು ಪ್ರಚೋದಿಸುವ ಮತ್ತು ಒಟ್ಟಾರೆ ಸ್ಥಿರತೆಯನ್ನು ಹಾಳು ಮಾಡುವ ಉದ್ದೇಶದಿಂದ ಕಲ್ಪಿತ ಮಾಹಿತಿ ಮತ್ತು ಕೃತಕ ವಿಷಯಗಳ ಹರಡುವಿಕೆಯನ್ನು ನಿಲ್ಲಿಸುವ ಗುರಿಯನ್ನು ಹೊಂದಿರುವ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಕಟ್ಟುನಿಟ್ಟಿನ ಮೇಲ್ವಿಚಾರಣೆಯನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಮ್ಸಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತನಿಖೆ ಹಾಗೂ ಎಲೆಕ್ಟ್ರಾನಿಕ್ ನಿಗಾವಹಿಸುವಿಕೆಯ ವೇಳೆ ಆರೋಪಿಗಳು ಮೂರು ಗುಂಪುಗಳಾಗಿ ವಿಭಜಿಸಿಕೊಂಡು ವಿವಿಧ ಕೃತ್ಯಗಳನ್ನು ನಡೆಸಿರುವುದು ಪತ್ತೆಯಾಗಿದೆ ಎಂದು ತಿಳಿಸಿದೆ. ಇವುಗಳಲ್ಲಿ ಪ್ರಸ್ತುತ ಘಟನೆಗಳಿಗೆ ಸಂಬಂಧಿಸಿದ ನಿಜವಾದ ವಿಡಿಯೊಗಳನ್ನು ಪ್ರಕಟಿಸುವುದು, ಕೃತಕ ಬುದ್ಧಿಮತ್ತೆ (AI) ಬಳಸಿ ಕೃತಕ ವಿಡಿಯೊಗಳನ್ನು ಸೃಷ್ಟಿಸುವುದು ಹಾಗೂ ಸೈನಿಕ ಆಕ್ರಮಣ ನಡೆಸುತ್ತಿರುವ ಒಂದು ದೇಶವನ್ನು ಪ್ರಚಾರ ಮಾಡುವುದು, ಅದರ ನಾಯಕತ್ವ ಮತ್ತು ಮಿಲಿಟರಿ ಕ್ರಮಗಳನ್ನು ಉತ್ತೇಜಿಸುವುದು ಸೇರಿದೆ.
ದುಬೈ, ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ: ಕೇಳಿಬಂತು ಭಾರಿ ಸ್ಫೋಟದ ಸದ್ದು
ಆರೋಪಿಗಳ ಮೊದಲ ಗುಂಪು, ದೇಶದ ವಾಯುಪ್ರದೇಶದ ಮೂಲಕ ಹಾದುಹೋಗುವ ಅಥವಾ ತಡೆಹಿಡಿಯಲ್ಪಟ್ಟ ಕ್ಷಿಪಣಿಗಳನ್ನು ತೋರಿಸುವ ನಿಜವಾದ ವಿಡಿಯೊ ತುಣುಕುಗಳನ್ನು ಹಂಚಿಕೊಂಡು ಪ್ರಸಾರ ಮಾಡಿದೆ ಎಂದು ಆರೋಪಿಸಲಾಗಿದೆ. ಜತೆಗೆ ಉಂಟಾದ ಹಾನಿಯನ್ನು ಸಹ ಬಹಿರಂಗಪಡಿಸಿದೆ ಎಂದು ಯುಎಇ ಅಧಿಕೃತ ಸುದ್ದಿ ಸಂಸ್ಥೆ ವಾಮ್ ತಿಳಿಸಿದೆ.
ಅವರು ಈ ಘಟನೆಗಳನ್ನು ವೀಕ್ಷಿಸುತ್ತಿರುವ ಜನರ ಗುಂಪುಗಳನ್ನು ಸಹ ರೆಕಾರ್ಡ್ ಮಾಡಿದ್ದಾರೆ. ಈ ಗುಂಪಿನಲ್ಲಿ ಐವರು ಭಾರತೀಯರು, ಒಬ್ಬ ಪಾಕಿಸ್ತಾನಿ, ಒಬ್ಬ ನೇಪಾಳಿ, ಇಬ್ಬರು ಫಿಲಿಪೈನ್ ಮತ್ತು ಒಬ್ಬ ಈಜಿಪ್ಟಿನವರು ಸೇರಿದ್ದಾರೆ. ಇಂಥವು ಕಾನೂನಿನ ಅಡಿಯಲ್ಲಿ ಅಪರಾಧಗಳಾಗಿವೆ. ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ ಮತ್ತು 1,00,000 ದಿರ್ಹಮ್ ದಂಡಕ್ಕೆ ಕಾರಣವಾಗಬಹುದು ಎಂದು ವರದಿ ತಿಳಿಸಿದೆ.